ಜಿಂದಾಲ್‌ಗೆ 3,667 ಎಕರೆ ಭೂಮಿ ನೀಡಲು ಸಚಿವ ಸಂಪುಟ ಒಪ್ಪಿಗೆ: ವಿರೋಧ ಪಕ್ಷದಲ್ಲಿದ್ದಾಗ ವಿರೋಧ, ಈಗ ಒಪ್ಪಿಗೆ!

Most read

ಬಳ್ಳಾರಿ ಬಳಿ JSW ಸ್ಟೀಲ್ ಲಿಮಿಟೆಡ್ (ಜಿಂದಾಲ್) ಕಂಪನಿಗೆ 2006 -07ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮಂಜೂರು ಮಾಡಿದ್ದ 3,667.31 ಎಕರೆ ಜಮೀನನ್ನು ಜಿಂದಾಲ್ ಕಂಪೆನಿಗೆ ಶುದ್ದ ಕ್ರಯ ಮಾಡಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.

ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಯಾವ ಪಕ್ಷದವರು ಅಧಿಕಾರಕ್ಕೆ ಬಂದರೂ ಜಿಂದಾಲ್ ಸಂಸ್ಥೆಗೆ ಈ ಜಮೀನು ಶುದ್ದಕ್ರಯ ಮಾಡಿಕೊಡಲು ಯತ್ನಿಸುವುದು ಹಾಗೂ ಇದಕ್ಕೆ ಆಗ ವಿರೋಧ ಸ್ಥಾನದಲ್ಲಿದ್ದ ಪಕ್ಷಗಳು ತೀವ್ರವಾಗಿ ವಿರೋಧಿಸಿರುವುದು ಕಾಣಬಹುದು. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ತನ್ನ ಹಳೆ ನಿಲುವು ಬದಲಿಸಿ ಜಿಂದಾಲ್‌ಗೆ ಜಮೀನು ನೀಡುವ ನಿರ್ಧಾರ ಮಾಡಿದೆ.

ಬಳ್ಳಾರಿ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕೊಪ್ಪ ಬಳಿಯ 2,000.58 ಎಕರೆ ಜಮೀನಿಗೆ ಪ್ರತಿ ಎಕರೆಗೆ 1,22,200 ರು. ಹಾಗೂ ತೋರಣಗಲ್ಲು, ಮುಸೇನಾಕನಹಳ್ಳಿ, ಯರಬನಹಳ್ಳಿ ಗ್ರಾಮಗಳ 1,666.73 ಎಕರೆ ಜಮೀನಿಗೆ ಪ್ರತಿ ಎಕರೆಗೆ 1,50,635 ರು.ಗಳಂತೆ ನಿಗದಿ ಮಾಡಿ ಶುದ್ದ ಕ್ರಯಕ್ಕೆ ನಿರ್ಧರಿಸಲಾಗಿದೆ.

2,000.88 ಎಕರೆ ಮತ್ತು 1,666 ಎಕರೆ ವಿಸ್ತೀರ್ಣದ ಎರಡು ಜಮೀನುಗಳನ್ನು ಖರೀದಿಸಲು ಜೆಎಸ್‌ಡಬ್ಲ್ಯು ಸ್ಟೀಲ್ ಕ್ರಮವಾಗಿ ಪ್ರತಿ ಎಕರೆಗೆ ಕೇವಲ 1.22 ಲಕ್ಷ ಮತ್ತು 1.50 ಲಕ್ಷ ರೂ. ನಿಗಧಿ 2019ರ ಕುಮಾರಸ್ವಾಮಿ ಅವಧಿಯಲ್ಲೇ ಸಿಎಂ ಆಗಿತ್ತು. ಆದರೆ ಇಂದು 2024ರಲ್ಲಿಯೂ ಸಹ ಅದೇ ಬೆಲೆಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ 2006ರ ಆ.3ರಂದು 2000.58 ಎಕರೆಯನ್ನು ಮಂಜೂರು ಮಾಡಲಾಗಿತ್ತು. 2007 ರಲ್ಲಿ ಮತ್ತೆ 1666.672 ಎರಕರೆಯನ್ನು 10 ವರ್ಷಗಳ ಗುತ್ತಿಗೆ ಅವಧಿಗೆ ಲೀಸ್ ಕಂ ಸೇಲ್ ಅಗ್ರಿಮೆಂಟ್ ಮಾಡಲಾಯಿತು. ಈ ಒಪ್ಪಂದದ ಪ್ರಕಾರ 2019ರ ಮೇ 27ರಂದು ಅಬ್ಬಲ್ಯೂಟ್ ಸೇಲ್ ಡೀಡ್ ದಿನಾಂಕವಾಗಿತ್ತು. ಅಂದಿನ ಸಿಎಂ ಕುಮಾರ ಸ್ವಾಮಿ ಜಿಂದಾಲ್ ಕಂಪೆನಿಗೆ 3677 ಎಕರೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿದ್ದರು. ಈ ನಡೆಯನ್ನು ಖಂಡಿಸಿ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅಹೋರಾತ್ರಿ ಧರಣಿ ಮಾಡಿದ್ದರ ಹಿನ್ನಲೆ ಇದನ್ನು ಕೈಬಿಡಲಾಯ್ತು.

ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದ ತಕ್ಷಣ ಸದ್ದಿಲ್ಲದೆ ಜಿಂದಾಲ್‌ಗೆ ಭೂಮಿ ನೀಡಲು ಮುಂದಾಗಿದ್ದರು. ಇದನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ವಿರೋಧಿಸಿತ್ತು. ಜತೆಗೆ ನ್ಯಾಯಾಲಯದಲ್ಲೂ ಈ ಬಗ್ಗೆ ಒಂದು ದೂರು ದಾಖಲಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಸಂಪುಟ ತೀರ್ಮಾನವನ್ನು ಹಿಂಪಡೆದಿತ್ತು.

More articles

Latest article