ಕ್ವಾಂಟಮ್ ಮತ್ತು ಫೋಟೋನಿಕ್ಸ್, ನಿಖರ ಕೃಷಿ, ಜೈವಿಕ ವಿಜ್ಞಾನ, ಸೆಮಿಕಂಡಕ್ಟರ್ಗಳು ಹಾಗೂ ಏರೋಸ್ಪೇಸ್ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಆದ್ಯತೆ
ಬೆಂಗಳೂರು, ಅಕ್ಟೋಬರ್ 7, 2026
ಕರ್ನಾಟಕ ಸರ್ಕಾರ ಮತ್ತು ಅಮೆರಿಕದ ಮೊಂಟಾನಾ ರಾಜ್ಯವು ತಂತ್ರಜ್ಞಾನ, ಸಂಶೋಧನೆ, ನಾವೀನ್ಯತೆ ಹಾಗೂ ಮಾರುಕಟ್ಟೆ ಪ್ರವೇಶ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಯೋಗಕ್ಕಾಗಿ ಹಲವು ಆದ್ಯತಾ ಕ್ಷೇತ್ರಗಳನ್ನು ಗುರುತಿಸಿವೆ. ಕರ್ನಾಟಕ ಸರ್ಕಾರದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಮೊಂಟಾನಾ ರಾಜ್ಯದ ರಾಜ್ಯಪಾಲ ಗ್ರೆಗ್ ಜಿಯಾನ್ಫೋರ್ಟೆ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಹಾಗೂ ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್)ಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ಡಾ. ಅವಿನಾಶ್ ಮೆನನ್, ಐಎಎಸ್ ಅವರು ಉಪಸ್ಥಿತರಿದ್ದರು.
ಮೊಂಟಾನಾ ನಿಯೋಗದಲ್ಲಿ ರಾಜ್ಯಪಾಲ ಗ್ರೆಗ್ ಜಿಯಾನ್ಫೋರ್ಟೆ, ಪ್ರಥಮ ಮಹಿಳೆ ಸುಸನ್ ಜಿಯಾನ್ಫೋರ್ಟೆ, ಮೊಂಟಾನಾ ರಾಜ್ಯದ ಅಧಿಕಾರಿಗಳಾದ ಕೈಟ್ಲಿನ್ ಟಿಮ್ಕೆನ್ ಮತ್ತು ಅನ್ನಾ ಬ್ರೈಟ್ವೆಲ್, ಚೆನ್ನೈನ ಅಮೆರಿಕದ ಕಾನ್ಸುಲೇಟ್ನ ಅಮೆರಿಕದ ಕಾನ್ಸಲ್ ಜನರಲ್ ಮರಿಯಾನಾ ನೈಸುಲರ್, ಬೆಂಗಳೂರು/ಚೆನ್ನೈನ ಅಮೆರಿಕದ ಕಾನ್ಸುಲೇಟ್ನ ಯುಎಸ್ ಕಮರ್ಷಿಯಲ್ ಸರ್ವೀಸ್ನ ಪ್ರಧಾನ ವಾಣಿಜ್ಯ ಅಧಿಕಾರಿ ಕ್ಯಾರಿ ಅರುಣ್, ಅಂತಪ್ಪ ಬಡಿಗೇರ್, ಹಾಗೂ ಬೆಂಗಳೂರು/ಚೆನ್ನೈನ ಅಮೆರಿಕದ ಕಾನ್ಸುಲೇಟ್ನ ಯುಎಸ್ ಕಮರ್ಷಿಯಲ್ ಸರ್ವೀಸ್ನ ಹಿರಿಯ ವಾಣಿಜ್ಯ ತಜ್ಞೆ ಹಾಗೂ ನಿರ್ದೇಶಕರಾದ ಮಂಜುಶ್ರೀ ಫೂಕನ್ ಸೇರಿದಂತೆ ರಾಜ್ಯಪಾಲರ ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದರು.
ಎರಡೂ ರಾಜ್ಯಗಳ ತಂತ್ರಜ್ಞಾನ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆಗಳ ನಡುವೆ ವ್ಯವಸ್ಥಿತ ಸಹಯೋಗದ ಚೌಕಟ್ಟನ್ನು ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ತಂತ್ರಜ್ಞಾನ, ಎಂಜಿನಿಯರಿಂಗ್, ಸ್ಟಾರ್ಟ್ಅಪ್ಗಳು, ಸೆಮಿಕಂಡಕ್ಟರ್ಗಳು ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕದ ಸಾಮರ್ಥ್ಯಗಳನ್ನು ಹಾಗೂ ಕ್ವಾಂಟಮ್ ತಂತ್ರಜ್ಞಾನ, ಫೋಟೋನಿಕ್ಸ್, ನಿಖರ ಕೃಷಿ, ಜೈವಿಕ ವಿಜ್ಞಾನ ಮತ್ತು ಸಂಶೋಧನಾ ಆಧಾರಿತ ನಾವೀನ್ಯತೆಯಲ್ಲಿ ಮೊಂಟಾನಾದ ವಿಶೇಷ ಪರಿಣತಿಯನ್ನು ಪರಸ್ಪರ ಜೋಡಿಸುವ ಕುರಿತು ಚರ್ಚಿಸಲಾಯಿತು.
ಕ್ವಾಂಟಮ್ ಮತ್ತು ಫೋಟೋನಿಕ್ಸ್, ನಿಖರ ಕೃಷಿ, ಜೈವಿಕ ವಿಜ್ಞಾನ ಮತ್ತು ಔಷಧೀಯ ಕ್ಷೇತ್ರ, ಸೆಮಿಕಂಡಕ್ಟರ್ ಮತ್ತು ಚಿಪ್ ವಿನ್ಯಾಸ ಹಾಗೂ ಏರೋಸ್ಪೇಸ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಸಹಯೋಗದ ಪ್ರಮುಖ ಕ್ಷೇತ್ರಗಳಾಗಿ ಎರಡೂ ಕಡೆಯವರು ಗುರುತಿಸಿದರು.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಬಲಿಷ್ಠ ತಂತ್ರಜ್ಞಾನ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆ ಹಾಗೂ ಸ್ಪಷ್ಟ ಫಲಿತಾಂಶಗಳನ್ನು ನೀಡಬಲ್ಲ ಅಂತರರಾಷ್ಟ್ರೀಯ ಸಹಭಾಗಿತ್ವಗಳ ಅವಕಾಶಗಳನ್ನು ಒತ್ತಿ ಹೇಳಿದರು.
“ಜಾಗತಿಕ ನಾವೀನ್ಯತಾ ಕೇಂದ್ರಗಳೊಂದಿಗೆ ಅರ್ಥಪೂರ್ಣ ಸಹಭಾಗಿತ್ವಗಳನ್ನು ನಿರ್ಮಿಸಲು ಕರ್ನಾಟಕವು ಬಲಿಷ್ಠ ತಂತ್ರಜ್ಞಾನ ಪರಿಸರ ವ್ಯವಸ್ಥೆ, ಪ್ರತಿಭೆ, ಸಂಶೋಧನಾ ಸಾಮರ್ಥ್ಯ ಹಾಗೂ ಉದ್ಯಮಶೀಲತೆಯ ಶಕ್ತಿಯನ್ನು ಹೊಂದಿದೆ. ಕ್ವಾಂಟಮ್, ಫೋಟೋನಿಕ್ಸ್, ನಿಖರ ಕೃಷಿ ಮತ್ತು ಜೈವಿಕ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ಮೊಂಟಾನಾ ವಿಶೇಷ ಪರಿಣತಿಯನ್ನು ಹೊಂದಿದೆ. ಈ ಎರಡೂ ಸಾಮರ್ಥ್ಯಗಳನ್ನು ಪರಸ್ಪರ ಜೋಡಿಸಿ, ಮಾತುಕತೆಗಳನ್ನು ಸಂಸ್ಥೆಗಳು, ಕಂಪನಿಗಳು, ಸ್ಟಾರ್ಟ್ಅಪ್ಗಳು ಮತ್ತು ಸಂಶೋಧಕರ ನಡುವಿನ ನಿರ್ದಿಷ್ಟ ಸಹಯೋಗಗಳಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದಿದೆ,” ಎಂದು ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದರು.
ಮೊಂಟಾನಾ ರಾಜ್ಯಪಾಲ ಗ್ರೆಗ್ ಜಿಯಾನ್ಫೋರ್ಟೆ ಅವರು ಭಾರತ ಮತ್ತು ಮೊಂಟಾನಾ ನಡುವಿನ ಸಾಮ್ಯತೆಗಳು ಹಾಗೂ ಭವಿಷ್ಯದ ಸಹಯೋಗದ ಅವಕಾಶಗಳ ಕುರಿತು ನಡೆದ ಚರ್ಚೆಯನ್ನು ಸ್ವಾಗತಿಸಿದರು.
“ಭಾರತ ಮತ್ತು ಮೊಂಟಾನಾ ನಡುವಿನ ಹಲವು ಸಾಮ್ಯತೆಗಳ ಕುರಿತು ಸಚಿವ ಖರ್ಗೆ ಅವರೊಂದಿಗೆ ಫಲಪ್ರದ ಸಭೆಯಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ಕ್ವಾಂಟಮ್, ಫೋಟೋನಿಕ್ಸ್, ಏರೋಸ್ಪೇಸ್, ನಿಖರ ಕೃಷಿ ಮತ್ತು ಜೈವಿಕ ವಿಜ್ಞಾನ ಕ್ಷೇತ್ರಗಳಲ್ಲಿ ಭವಿಷ್ಯದ ಸಹಯೋಗದ ಕುರಿತು ಚರ್ಚೆ ಆರಂಭಿಸಿದ್ದೇವೆ. ಕೃಷಿ ಆಧಾರಿತ ಬೇರುಗಳಿಂದ ಹೊರಬಂದು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೂಡಿಕೆಗಳನ್ನು ಅಳವಡಿಸಿಕೊಳ್ಳುತ್ತಿರುವ ಮೊಂಟಾನಾ ಆರ್ಥಿಕತೆಯು ವಿಸ್ತರಿಸುತ್ತಿದೆ. ಐತಿಹಾಸಿಕ ಸಹಭಾಗಿತ್ವಗಳಿಗೆ ದಾರಿ ಮಾಡಿಕೊಡುವ ಹಾಗೂ ಮೊಂಟಾನಾ ಜನರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ನಾವು ಬಲವಾಗಿ ಮುನ್ನಡೆಯುತ್ತಿದ್ದೇವೆ,” ಎಂದು ರಾಜ್ಯಪಾಲ ಗ್ರೆಗ್ ಜಿಯಾನ್ಫೋರ್ಟೆ ಹೇಳಿದರು.
ಪ್ರಮುಖ ಚರ್ಚಾ ಕ್ಷೇತ್ರಗಳು
ಕ್ವಾಂಟಮ್ ಮತ್ತು ಫೋಟೋನಿಕ್ಸ್
ಕರ್ನಾಟಕದ ಬೆಳೆಯುತ್ತಿರುವ ಕ್ವಾಂಟಮ್ ಪರಿಸರ ವ್ಯವಸ್ಥೆಯನ್ನು ಮೊಂಟಾನಾ ಸ್ಟೇಟ್ ಯೂನಿವರ್ಸಿಟಿಯ ಕ್ವಾಂಟಮ್ ಮತ್ತು ಫೋಟೋನಿಕ್ಸ್ ಸಾಮರ್ಥ್ಯಗಳೊಂದಿಗೆ ಸಂಪರ್ಕಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಕ್ವಾಂಟಮ್ ಶಿಕ್ಷಣ, ಸಂಶೋಧನೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಹಾರ್ಡ್ವೇರ್ ಕ್ಷೇತ್ರಗಳಲ್ಲಿ ಕರ್ನಾಟಕದ ಕಾರ್ಯಚಟುವಟಿಕೆಗಳನ್ನು ವಿವರಿಸಲಾಯಿತು. ಮೊಂಟಾನಾ ನಿಯೋಗವು ಮೊಂಟಾನಾ ಸ್ಟೇಟ್ ಯೂನಿವರ್ಸಿಟಿಯ ಕ್ಯೂಕೋರ್ (QCORE) ಪರಿಸರ ವ್ಯವಸ್ಥೆಯ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ ಹಾಗೂ ಸ್ಟಾರ್ಟ್ಅಪ್ಗಳ ಉತ್ತೇಜನದಲ್ಲಿ ವಹಿಸುತ್ತಿರುವ ಪಾತ್ರವನ್ನು ವಿವರಿಸಿತು.
ನಿಖರ ಕೃಷಿ
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು, ನೀರು ಮತ್ತು ಇತರ ಸಂಪನ್ಮೂಲಗಳ ಬಳಕೆಯನ್ನು ಉತ್ತಮಗೊಳಿಸಲು ಹಾಗೂ ಪರಿಸರ ಪರಿಸ್ಥಿತಿಗಳಿಗೆ ಸೂಕ್ತವಾದ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಲು ತಂತ್ರಜ್ಞಾನ ಬಳಕೆಯ ಕುರಿತು ಚರ್ಚಿಸಲಾಯಿತು.
ನೀರಿನ ಕೊರತೆಯಂತಹ ಸಮಾನ ಸವಾಲುಗಳನ್ನು ಎರಡೂ ಕಡೆಯವರು ಎದುರಿಸುತ್ತಿದ್ದು, ಈ ಕ್ಷೇತ್ರದಲ್ಲಿ ಸಂಶೋಧನಾ ಸಹಯೋಗಕ್ಕೆ ಉತ್ತಮ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.
ಜೈವಿಕ ವಿಜ್ಞಾನ ಮತ್ತು ಔಷಧೀಯ ಕ್ಷೇತ್ರ
ಜೈವಿಕ ವಿಜ್ಞಾನ, ಔಷಧೀಯ ಕ್ಷೇತ್ರ, ಕ್ಲಿನಿಕಲ್ ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರದ ನಾವೀನ್ಯತೆಗಳಲ್ಲಿ ಸಹಯೋಗದ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಮೊಂಟಾನಾ ತನ್ನ ರಾಜ್ಯ ಮಟ್ಟದ “ರೈಟ್ ಟು ಟ್ರೈ” ವ್ಯವಸ್ಥೆ ಹಾಗೂ ಕ್ಲಿನಿಕಲ್ ಸಂಶೋಧನೆ ಮತ್ತು ಪ್ರಾಯೋಗಿಕ ಚಿಕಿತ್ಸೆಗಳ ಲಭ್ಯತೆಗೆ ಹೊಸ ಮಾರ್ಗಗಳನ್ನು ಸೃಷ್ಟಿಸುವ ತನ್ನ ಪ್ರಯತ್ನಗಳನ್ನು ವಿವರಿಸಿತು.
ಕರ್ನಾಟಕವು ತನ್ನ ಬಲಿಷ್ಠ ಜೈವಿಕ ತಂತ್ರಜ್ಞಾನ ಮತ್ತು ಔಷಧೀಯ ಪರಿಸರ ವ್ಯವಸ್ಥೆ, ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ ಹಾಗೂ ಉದಯೋನ್ಮುಖ ಸಮುದ್ರ ಮತ್ತು ಬ್ಲೂ ಬಯೋಟೆಕ್ನಾಲಜಿ ಕ್ಷೇತ್ರದ ಕುರಿತು ಮಾಹಿತಿ ಹಂಚಿಕೊಂಡಿತು.
ಸೆಮಿಕಂಡಕ್ಟರ್ ಮತ್ತು ಚಿಪ್ ವಿನ್ಯಾಸ
ಸೆಮಿಕಂಡಕ್ಟರ್ಗಳು ಮತ್ತು ಚಿಪ್ ವಿನ್ಯಾಸವನ್ನು ಸಹಯೋಗದ ಮತ್ತೊಂದು ಪ್ರಮುಖ ಕ್ಷೇತ್ರವಾಗಿ ಗುರುತಿಸಲಾಯಿತು.
ಕರ್ನಾಟಕವು ತನ್ನ ಬಲಿಷ್ಠ ಚಿಪ್ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ವಿವರಿಸಿದರೆ, ಮೊಂಟಾನಾ ತನ್ನ ಸೆಮಿಕಂಡಕ್ಟರ್ ತಯಾರಿಕಾ ಉಪಕರಣಗಳ ಸಾಮರ್ಥ್ಯ ಹಾಗೂ ಕ್ವಾಂಟಮ್ ಮತ್ತು ಫೋಟೋನಿಕ್ಸ್ ಕ್ಷೇತ್ರಗಳಲ್ಲಿನ ಪರಿಣತಿಯನ್ನು ಪ್ರಸ್ತುತಪಡಿಸಿತು.
ಏರೋಸ್ಪೇಸ್, ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ
ಏರೋಸ್ಪೇಸ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಸ್ವಾಯತ್ತ ವ್ಯವಸ್ಥೆಗಳು, ಡ್ರೋನ್ಗಳು, ಸುಧಾರಿತ ವಸ್ತುಗಳು ಮತ್ತು ರಿಮೋಟ್ ಸೆನ್ಸಿಂಗ್ ಕ್ಷೇತ್ರಗಳ ಕುರಿತೂ ಚರ್ಚಿಸಲಾಯಿತು.
ಈ ಕ್ಷೇತ್ರಗಳಲ್ಲಿನ ಸ್ಟಾರ್ಟ್ಅಪ್ಗಳು ಮತ್ತು ತಂತ್ರಜ್ಞಾನ ಕಂಪನಿಗಳನ್ನು ಸಂಬಂಧಿತ ಸಂಶೋಧನೆ ಮತ್ತು ವಾಣಿಜ್ಯ ಪರಿಸರ ವ್ಯವಸ್ಥೆಗಳೊಂದಿಗೆ ಸಂಪರ್ಕಿಸುವ ಅವಕಾಶಗಳ ಕುರಿತು ಎರಡೂ ಕಡೆಯವರು ಚರ್ಚಿಸಿದರು.
ಸಹಯೋಗವನ್ನು ಮುಂದಕ್ಕೆ ಕೊಂಡೊಯ್ಯಲು ಕೇಂದ್ರೀಕೃತ ಪ್ರಯತ್ನ
ನಿರ್ದಿಷ್ಟ ಸಹಯೋಗದ ಕ್ಷೇತ್ರಗಳನ್ನು ಗುರುತಿಸುವುದು ಹಾಗೂ ಸಂಬಂಧಿತ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಸೆಂಟರ್ ಆಫ್ ಎಕ್ಸಲೆನ್ಸ್ಗಳು, ಸ್ಟಾರ್ಟ್ಅಪ್ಗಳು ಮತ್ತು ಕಂಪನಿಗಳನ್ನು ಗುರುತಿಸುವ ಕುರಿತು ಎರಡೂ ಕಡೆಯವರು ಚರ್ಚಿಸಿದರು.
ಬಹು ಕ್ಷೇತ್ರಗಳಲ್ಲಿ ವ್ಯಾಪಕ ಸಹಯೋಗಕ್ಕೆ ಮುಂದಾಗುವ ಬದಲು, ಆರಂಭದಲ್ಲಿ ಸೀಮಿತ ಸಂಖ್ಯೆಯ ಆದ್ಯತಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿ, ನಿರ್ದಿಷ್ಟ ಮತ್ತು ಕಾರ್ಯರೂಪಕ್ಕೆ ತರಬಹುದಾದ ಸಹಯೋಗದ ಅವಕಾಶಗಳನ್ನು ಅಭಿವೃದ್ಧಿಪಡಿಸುವುದು ಉದ್ದೇಶವಾಗಿದೆ.
ತಂತ್ರಜ್ಞಾನ ಸಹಭಾಗಿತ್ವ, ಸ್ಟಾರ್ಟ್ಅಪ್ ವಿನಿಮಯ, ಸಂಶೋಧನಾ ಸಹಯೋಗ, ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆ ಸಂಪರ್ಕಗಳನ್ನು ಒಳಗೊಂಡಂತೆ ಈ ಸಹಯೋಗವನ್ನು ಮುಂದುವರಿಸಲು ಗ್ಲೋಬಲ್ ಇನ್ನೋವೇಶನ್ ಅಲಯನ್ಸ್ (ಜಿಐಎ) ವೇದಿಕೆಯನ್ನು ಬಳಸಿಕೊಳ್ಳುವ ಕುರಿತು ಚರ್ಚಿಸಲಾಯಿತು.

