ಸೋನು ನಿಗಮ್‌ ವಿರುದ್ಧ ನಾರಾಯಣಗೌಡರ ನೇತೃತ್ವದಲ್ಲಿ ಕರವೇ ಪ್ರತಿಭಟನೆ; ಸೋನಿಗೆ ನೋಟಿಸ್‌ ಜಾರಿ ಮಾಡಿದ ಪೊಲೀಸರು

Most read

ಬೆಂಗಳೂರು: ಕನ್ನಡ ಹಾಡನ್ನು ಹಾಡು ಎಂದು ಕೇಳಿದ್ದಕ್ಕೆ ಕನ್ನಡಿಗರನ್ನು ಪಹಲ್ಗಾಮ್‌ ದಾಳಿಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಪ್ರತಿಭಟನೆ ನಡೆಸಿತು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪಹಲ್ಗಾಮ್ ದಾಳಿಗೆ ಕನ್ನಡ ತಳುಕು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿ ಗಾಯಕ ಸೋನು ನಿಗಮ್ ವಿರುದ್ದ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಈಗಾಗಲೇ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಆಗಿದೆ. ಇದೀಗ ಸೋನು ನಿಗಮ್ ಅವರನ್ನ ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.

ಈ ಸಂಬಂಧ ಸೋನು ನಿಗಮ್ ವಿರುದ್ದ ಇಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಗೌಡರು, ಕನ್ನಡವನ್ನು ಭಯೊತ್ಪಾದನಾ ದಾಳಿಗೆ ಹೋಲಿಸಿದ್ದು ಅಕ್ಷಮ್ಯ ಅಪರಾಧ. ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ ಹಾಡುವುದಿಲ್ಲ ಎಂದು ಹೇಳಬಹುದಿತ್ತು. ಆದರೆ ಸೋನು ನಿಗಂ ಉದ್ದಟತನ ತೋರಿದ್ದಾರೆ. ಆತನನ್ನು ಶೀಘ್ರವೇ ಬಂಧಿಸಬೇಕು. ನಾಲ್ಕು ದಿನ ಜೈಲಿನಲ್ಲಿ ಇರಿಸಿದರೆ ಪರಿವರ್ತನೆ ಆಗಬಹುದು ಎಂದರು.

ಈಗಾಗಲೇ ಕರವೇ ಕಾರ್ಯಕರ್ತ ಧರ್ಮರಾಜ್ ಗೌಡ ಅವರು ಸೋನು ನಿಗಮ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಷ್ಟ್ರದ್ರೋಹದ ಆರೋಪದಡಿಯಲ್ಲಿ ದೂರು ದಾಖಲಾಗಿದೆ. ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಬಂಧಿಸಬೇಕು. ಆತನನ್ನು ನಾಲ್ಕು ದಿನ ಜೈಲಿಗೆ ಕಳಿಸಿದರೆ ಪರಿವರ್ತನೆ ಆಗುತ್ತದೆ. ರಾಜ್ಯ ಸರ್ಕಾರ ಮತ್ತು ಪೊಲೀಸರು ಯಾವುದೇ ರಿಯಾಯತಿ ನೀಡಬಾರದು ಎಂದು ನಾರಾಯಣಗೌಡ ಒತ್ತಾಯಿಸಿದರು.

ಸೋನು ನಿಗಮ್‌ಗೆ ಕನ್ನಡದಲ್ಲಿ ಅವಕಾಶ ನೀಡಬಾರದು. ಕನ್ನಡ ಕಲಾವಿದರು ಮತ್ತು ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಬೇಕು. ಯಾವ ಸಂಗೀತ ನಿರ್ದೇಶಕರೂ ಸೋನು ನಿಗಮ್‌ ನಿಂದ ಹಾಡಿಸಬಾರದು ಎಂದು ಒತ್ತಾಯಿಸಿದ್ದಾರೆ.

ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಸೋನು ನಿಗಮ್ ದುರ್ವರ್ತನೆ ಇದೇ ಮೊದಲೇನಲ್ಲ. ಹಿಂದಿಯಲ್ಲಿ ಒಂದು ಹಾಡಿಗೆ ಕೇವಲ 40 ಸಾವಿರ ರೂ. ಪಡೆಯುತ್ತಾರೆ. ಆದರೆ ಕನ್ನಡದಲ್ಲಿ ರೂ. 2 ಲಕ್ಷ ತೆಗೆದುಕೊಂಡು ಆಹಂಕಾರ ತೋರಿಸುತ್ತಾರೆ ಎಂದು ಕೆಲವು ನಿರ್ಮಾಪಕರು ನಮ್ಮಲ್ಲಿ ದೂರಿದ್ದಾರೆ ಎಂದರು.

ಸೋನುಗೆ ನೋಟಿಸ್‌ ಜಾರಿ:

ಕನ್ನಡ ಕಾರ್ಯಕರ್ತರಿಂದ ಪ್ರತಿಭಟನೆ ಹೆಚ್ಚುತ್ತಿದ್ದಂತೆ ಆವಲಹಳ್ಳಿ ಪೊಲೀಸರು ಸೋನು ನಿಗಮ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಸೋನು ನಿಗಮ್‌ಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಜಾರಿ ಮಾಡಿ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಇದಲ್ಲದೇ ಕಾರ್ಯಕ್ರಮದ ಆಯೋಜಕರಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಸೋನು ಯಾವ ಒಪ್ಪಂದದ ಅಡಿಯಲ್ಲಿ ಬಂದಿದ್ದರು, ಎಷ್ಟು ಗಂಟೆಗಳ ಕಾರ್ಯಕ್ರಮ, ಯಾರೆಲ್ಲ ಜೊತೆಯಲ್ಲಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

More articles

Latest article