ಕೇರಳದ ಕಣ್ಣನ್ ಮೇಸ್ತ್ರಿ ಮತ್ತು ಕನ್ನಡದ ಪುಸ್ತಕ ಸಂತೆ!

Most read

ಸಾಹಿತ್ಯದ ಭಾಷೆಯ ಪ್ರೀತಿ ಇರುವುದು ಈ ಮುಂಚೆ ಪ್ರಶಸ್ತಿ ಪಡೆದವರನ್ನು ಆರಾಧಿಸುವುದರಲ್ಲಿ ಅಲ್ಲ. ಬದಲಾಗಿ ಅವರೂ ಸೇರಿ ಕನ್ನಡವನ್ನು ಓದುವುದರಲ್ಲಿ ಮತ್ತು ಭಾವಿಸುವುದರಲ್ಲಿ- ನರೇಂದ್ರ ರೈ ದೇರ್ಲ, ಸಾಹಿತಿಗಳು.

ಸುಮಾರು ವರ್ಷಗಳ ಹಿಂದಿನ ಮಾತು. ನಮ್ಮೂರ ಕಡೆ ಕೇರಳದ ಕಣ್ಣನ್ ಮೇಸ್ತ್ರಿ ಒಬ್ಬರು ದೇವಸ್ಥಾನವೊಂದರ ಸಾರಣೆ ಕೆಲಸಕ್ಕೆ ಬಂದಿದ್ದರು. ವಾರದಲ್ಲಿ ಒಂದು ದಿವಸ ಪುತ್ತೂರು ಪೇಟೆಗೆ ಹೋಗಿ ಮಲಯಾಳದ ಐದಾರು ಪತ್ರಿಕೆಗಳನ್ನು ಖರೀದಿಸಿ ತಂದು ಓದುತ್ತಿದ್ದರು. ಧಾರವಾಹಿ, ಕೃಷಿ, ಕುಟುಂಬ, ಸಂಸ್ಕೃತಿ ಸಂಬಂಧೀ ಆ  ಪತ್ರಿಕೆಗಳು ಕೇರಳದ ಕೊಟ್ಟಾಯಂ ಜಿಲ್ಲೆಯಿಂದ ಬಹುದೂರ ಇದ್ದ ಅವರ ಏಕಾಂತತೆಯನ್ನು ನೀಗುತ್ತಿದ್ದವು. 

 ಕೇರಳದ ನೆಲ ಚಿಕ್ಕದು. ಕೇರಳಿಗರು ಈ ಜಗತ್ತಿನ ಯಾವುದೇ ದೇಶಗಳಿಗೆ ಹೋಗಲಿ, ದುಬೈ ಮಸ್ಕತ್ ಕುವೈಟ್ ಯಾವುದೇ ಪ್ರದೇಶದಲ್ಲಿರಲಿ ತನ್ನ ಭಾಷೆಯ ಮಾತೃಭೂಮಿಯೋ ಮನೋರಮವೋ ಓದುವ ಮೂಲಕ ತನ್ನ ಊರಿನ ನೆಲದವರೊಂದಿಗೆ  ಒಂದು ಸಂಬಂಧವನ್ನು ಬೆಸೆಯುತ್ತಿದ್ದರು. ಬೇಡ ಬಿಡಿ, ನಮ್ಮ ಬೆಂಗಳೂರು ಮೈಸೂರು, ಗುಲ್ಬರ್ಗವೋ ಕೇರಳದವನೊಬ್ಬ ಇಲ್ಲಿ ಐಎಎಸ್ ಅಧಿಕಾರಿಯಾಗಿ  ಬೆಳಿಗ್ಗೆ ಅವನ ಟೇಬಲ್ ಮೇಲೆ ಅಟ್ಟಿ ಕೂರುವ, ಅದರಲ್ಲಿ ಇಂಗ್ಲಿಷ್ ಕನ್ನಡ ಪತ್ರಿಕೆಗಳೂ ಸೇರಿದ್ದರೆ ಅವನು ಮೊದಲು ಕೈ ಹಾಕುವುದು ಅಡಿಯಲ್ಲಿರುವ ಮನೋರಮ ಪತ್ರಿಕೆಗೆ! ಆ ಮೂಲಕ ಭಾಷಿಕವಾಗಿ ಆ ದೈನಿಕದೊಂದಿಗೆ ಆತ ತನ್ನ ಊರೊಟ್ಟಿಗೆ ಒಂದು ಭಾವನಾತ್ಮಕ ಸಂಬಂಧವನ್ನು ಬೆಳೆಸುತ್ತಿದ್ದ .

 ಮಹಾರಾಷ್ಟ್ರ ಕೂಡ ಇದೇ ಎತ್ತರದ ಸಾಹಿತ್ಯ- ಭಾಷಾಭಿಮಾನವನ್ನು ಹೊಂದಿದ ಮತ್ತೊಂದು ರಾಜ್ಯ. ಅಲ್ಲಿ ನಡೆಯುವ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳಿಗೆ ವೇದಿಕೆಗೆ ಭಾಗಶ: ಪ್ರವೇಶ ಇಲ್ಲದಿದ್ದರೂ ಮುಖ್ಯಮಂತ್ರಿಯಾದಿಯಾಗಿ ಅನೇಕ ಸಚಿವರು, ಹಿರಿಯ ರಾಜಕಾರಣಿಗಳು ಸಭೆಯ ಮುಂಭಾಗದ ಸಾಲಿನಲ್ಲಿಯೋ ಅಥವಾ ನಡು ನಡುವೆಯೋ ಕೂತು ಇಡೀ ದಿನದ ಕಾರ್ಯಕ್ರಮವನ್ನು ಆಸ್ವಾದಿಸುವ ಆಸಕ್ತಿಯನ್ನು ಗಮನಿಸಬಹುದು. ಮಹಾರಾಷ್ಟ್ರದ ಸಾರಸ್ವತ ಬ್ಯಾಂಕಂತೂ ಇಂತಹ ಸಾಹಿತ್ಯ ಸಮಾರಂಭಗಳಿಗೆ ಗರಿಷ್ಠ ಮೊತ್ತದ ದೇಣಿಗೆ ನೀಡುತ್ತದೆ ಎಂಬ ವಿಚಾರವನ್ನು ನಾನು  ಕೇಳಿ ತಿಳಿದಿದ್ದೇನೆ.

ಪಕ್ಕದ ತಮಿಳುನಾಡು ಕೂಡ ಸಾಹಿತ್ಯ ಸಂಸ್ಕೃತಿ ಭಾಷೆಯನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದ ರಾಜ್ಯ. ಅಲ್ಲಿ ಅಧಿಕಾರಕ್ಕೆ ಬಂದ ಎಂಜಿಆರ್, ಕರುಣಾನಿಧಿ, ಜಯಲಲಿತ ಮೊದಲಾದವರೆಲ್ಲ ಭಾಷೆಯನ್ನು ಮೊದಲು ಪ್ರೀತಿಸಿ ಅಧಿಕಾರವನ್ನು ಎರಡನೆಯ ಆಯ್ಕೆ ಮಾಡಿಕೊಂಡವರು. ಎಂ ಜಿ ರಾಮಚಂದ್ರನ್, ಜಯಲಲಿತಾ ಮೊದಲಾದವರು ಚಲನಚಿತ್ರ ನಟರಾಗಿ ನಿರ್ದೇಶಕರಾಗಿ ಸಂಭಾಷಣಾಗಾರರಾಗಿ ಅದ್ವಿತೀಯ ಸಾಧನೆಯನ್ನು ಮಾಡಿದವರು. ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ರಾಜ್ಯಶಾಸ್ತ್ರದಲ್ಲಿ ಪದವಿ ಓದುತ್ತಿರುವಾಗ  ಬರೆದ ಉತ್ತರ ಪತ್ರಿಕೆ ಎಷ್ಟು ಗಂಭೀರವಾಗಿರುತ್ತಿತ್ತು ಎಂದರೆ ಅದನ್ನು ಈಗಲೂ ಅವರು ಓದಿದ ಸಂಸ್ಥೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರಂತೆ! ಅಂತ ರಾಜಕೀಯ ಮೇಧಾವಿ ಕರುಣಾನಿಧಿಯವರು. 

ಆದರೆ ನಮ್ಮ ಕರ್ನಾಟಕದಲ್ಲಿ ಬೇರೆಯೇ ಸನ್ನಿವೇಶ ಇದೆ. ಅಥವಾ ಇತ್ತು. ಮೊಯ್ಲಿ, ರಾಮಕೃಷ್ಣ ಹೆಗಡೆ, ಜೆ ಎಚ್ ಪಟೇಲ್, ಎಂಪಿ ಪ್ರಕಾಶ್ ಮೊದಲಾದ ಒಂದಷ್ಟು ರಾಜಕಾರಣಿಗಳಿಗೆ ಸಾಹಿತ್ಯದ ಬಗ್ಗೆ ಒಳಗೊಳ್ಳುವಿಕೆ ಇತ್ತೇ ಹೊರತು ಉಳಿದ ರಾಜಕಾರಣಿಗಳು ಅಧಿಕಾರ ಗದ್ದುಗೆಯನ್ನೇ ಹೆಚ್ಚು ಮೋಹಿಸಿದವರು. ಸಾಹಿತ್ಯದ ಪ್ರಶ್ನೆಗಳು ಬಂದಾಗ ಈ ಮೇಲಿನ  ಯಾರಿಗೂ ಸಿಗದಷ್ಟು  ಜ್ಞಾನಪೀಠ ಪ್ರಶಸ್ತಿ ವಿಜೇತರ ಮುಖವಾಡಗಳನ್ನು ಮುಂದಿಟ್ಟು ನಮ್ಮಷ್ಟು ಧೀರ ಶೂರರು ಬೇರೆ  ಯಾರೊಬ್ಬರೂ ಇಲ್ಲ ಎಂದು ಹುಸಿ ಸಂಭ್ರಮಿಸುತ್ತೇವೆ. ಈ ಸಂಖ್ಯೆ ಕನ್ನಡದ ಮಾನ ಮರ್ಯಾದೆ ಎಂದು ಹಿಗ್ಗುತ್ತೇವೆ. ಆದರೆ ಸಾಹಿತ್ಯದ ಭಾಷೆಯ ಪ್ರೀತಿ ಇರುವುದು ಈ ಮುಂಚೆ ಪ್ರಶಸ್ತಿ ಪಡೆದವರನ್ನು ಆರಾಧಿಸುವುದರಲ್ಲಿ ಅಲ್ಲ. ಬದಲಾಗಿ ಅವರೂ ಸೇರಿ ಕನ್ನಡವನ್ನು ಓದುವುದರಲ್ಲಿ ಮತ್ತು ಭಾವಿಸುವುದರಲ್ಲಿ .

 ಕೇರಳ ತಮಿಳುನಾಡಿನ ಒಂದು ಸೊಗಸು ಏನೆಂದರೆ ಒಬ್ಬ ಸಾಮಾನ್ಯ ಆಟೋ ಚಾಲಕ ತನಗೆ ಬಾಡಿಗೆ ಇಲ್ಲದ ಹೊತ್ತಿನಲ್ಲಿ ಅದ್ಯಾವುದೋ ಪತ್ರಿಕೆ ಪುಸ್ತಕವನ್ನು ಓದುತ್ತಿರುವುದು. ತನ್ನ ತಲೆ ಮೇಲಿನ ಕಬ್ಬಿಣದ ಕಂಬಿಗೆ ಅದ್ಯಾವುದೋ ತಮಿಳು ಮಲಯಾಳಂ ಭಾಷೆಯ ಪತ್ರಿಕೆಗಳನ್ನು ಸಿಕ್ಕಿಸಿಕೊಂಡಿರುವುದನ್ನು ನಾನು ಎಷ್ಟೋ ಸಲ ಗಮನಿಸಿದ್ದೇನೆ. ತಮಿಳುನಾಡಿನ ಒಬ್ಬ ಲಾರಿ ಡ್ರೈವರು, ಗದ್ದೆಯಲ್ಲಿ ದುಡಿಯುವ ಕೃಷಿಕ, ಪ್ರೈಮರಿ ಸ್ಕೂಲಿನ ಟೀಚರು ಮಾತನಾಡುವಾಗಲೆಲ್ಲ ತಿರುಕ್ಕುರಳನ್ನು ಕೋಟ್ ಮಾಡುವುದನ್ನು ನಾನು ಕೇಳಿದ್ದೇನೆ. ಪೆರಿಯಾರ್ ಅಖಿಲನ್ ಜಯಕಾಂತನ್ ಇವರೆಲ್ಲ ಅವರ ನಾಲಗೆಯ ತುದಿಯಲ್ಲಿ ಇರುತ್ತಾರೆ. ಆದರೆ ಕನ್ನಡದ ಬೇಂದ್ರೆ ಕನ್ನಡದ ಕುವೆಂಪು ಕನ್ನಡದ ಪಂಪ ನಮ್ಮ ಜನರಿಗೆ ಎಷ್ಟು ಗೊತ್ತು ಎಂಬುದನ್ನು ನಾವು ನಮಗೆ ಪ್ರಶ್ನಿಸಿಕೊಳ್ಳಬೇಕು.

 ಈ ಬರಹ ಶುರು ಮಾಡುವಾಗ ನಾನು ಕಣ್ಣನ್ ಮೇಸ್ತ್ರಿಯ ಬಗ್ಗೆ ಉಲ್ಲೇಖಿಸಿದ್ದೆ. ಕೇರಳದ ಕೊಟ್ಟಾಯಂ ಜಿಲ್ಲೆಯಿಂದ ಪುತ್ತೂರಿಗೆ ಬಂದಿದ್ದ ಕಣ್ಣನ್ ಮೇಸ್ತ್ರಿ ನನ್ನಲ್ಲಿ ಒಂದು ಪ್ರಶ್ನೆ ಕೇಳಿದ್ದ. ಡಾ ಯು. ಆರ್ ಅನಂತಮೂರ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಬರುವ ಮುಂಚೆ ಹರಿಚರಿತೆಯನ್ನು ಬರೆದ ಪು.ತಿ.ನವರಿಗೆ ಆ ಪ್ರಶಸ್ತಿ ಬರಬೇಕಿತ್ತಲ್ಲ ಎಂದು. ಕೊಟ್ಟಾಯಂ ಜಿಲ್ಲೆಯ ಕಣ್ಣನ್ ಮೇಸ್ತ್ರಿ ಗೆ ನಮ್ಮ ಪು.ತಿ.ನ, ನಮ್ಮ ಅನಂತ ಮೂರ್ತಿ ಹೇಗೆ ಗೊತ್ತು ಎಂದು ಅಚ್ಚರಿಪಡುವ ಸಂದರ್ಭ ನನ್ನದಾಯಿತು. ಮೇಸ್ತ್ರಿ ಹೇಳಿದ” ಸರ್ ನಾನು ಕೊಟ್ಟಾಯಂ ಯೂನಿವರ್ಸಿಟಿಯಲ್ಲಿ ಮಲಯಾಳಂ ಲಿಟರೇಚರ್ ನಲ್ಲಿ ಎಂ. ಎ ಮಾಡುತ್ತಿರುವಾಗ ನಿಮ್ಮ ಅನಂತಮೂರ್ತಿ ನಮ್ಗೆ ವಿಸಿಯಾಗಿದ್ದರು. ಆವಾಗ ನಾನು ಅವರ ಕೃತಿ ಒಂದನ್ನು ಇಂಗ್ಲೀಷ್ ನಿಂದ ಮಲಯಾಳಂ ಭಾಷೆಗೆ ಅನುವಾದ ಮಾಡುವ ಪ್ರಯತ್ನ ಮಾಡಿದ್ದೆ. ಆವಾಗ ನನಗೆ ಅನಂತಮೂರ್ತಿ ಹತ್ತಿರವಾದರು. ಕೊನೆಗೆ ಕನ್ನಡದ ಕೆಲವೊಂದು ಸಾಹಿತಿಗಳನ್ನು ಪರಿಚಯಿಸಿಕೊಂಡೆ” ಎಂದರು ಕಣ್ಣನ್ ಮೇಸ್ತ್ರಿ .

 ಪ್ರಸ್ತುತ ಕನ್ನಡದಲ್ಲಿ ಒಂದು ಒಳ್ಳೆಯ ಬೆಳವಣಿಗೆ ಕಾಣಿಸುತ್ತಿದೆ. ಆದರೆ ಅದರ ಅಂತ:ರಾತ್ಮ ವನ್ನು ತಲುಪುವಲ್ಲಿ ನಾನಿನ್ನು ಸೋತಿದ್ದೇನೆ. ಇಲ್ಲಿ ಈಗ ಪ್ರತಿದಿನ 20 ರಿಂದ 26 ಪುಸ್ತಕಗಳು ಮುದ್ರಣವಾಗುತ್ತಿವೆ, ಬಿಡುಗಡೆಯಾಗುತ್ತಿವೆ ಎಂದು ಕೇಳಿದ್ದೇನೆ. ಇದು ಸತ್ಯವೇ ಆಗಿದ್ದರೆ ಕನ್ನಡದಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆ ಎಂದು ಅರ್ಥ.  ಇದರೊಟ್ಟಿಗೆ ಪ್ರಶ್ನಿಸಬೇಕಾದ ವಿಷಯ ಇಷ್ಟೊಂದು ಪುಸ್ತಕಗಳು ಮುದ್ರಣಗೊಂಡರೂ ಅವುಗಳ ಸಂಖ್ಯೆ ಮಾತ್ರ ಕೇವಲ 200 ರಿಂದ 300 ಪುಸ್ತಕಗಳಂತೆ. ಬರೀ 20, 30 ಪುಸ್ತಕಗಳನ್ನು ಮುದ್ರಿಸಿಕೊಡುವ ಹೊಸ ತಾಂತ್ರಿಕ ವ್ಯವಸ್ಥೆಯಲ್ಲಿ ಈ ಕಾರಣಕ್ಕೆ ಕನ್ನಡದಲ್ಲಿ ಪುಸ್ತಕ ಉದ್ಯಮ ಬೆಳೆಯುತ್ತಿದೆ ಎನ್ನಲಾಗದು.

ಆದರೆ ಒಂದು ಖುಷಿ ಪಡಬೇಕಾದ ಸಂಗತಿ ಸಾಹಿತ್ಯಪರ ಸಂಘಟನೆಗಳು, ಪತ್ರಿಕೆಗಳು, ಸಾಹಿತ್ಯಾಸಕ್ತ ಸಂಸ್ಥೆಗಳು ಪುಸ್ತಕ-ಸಾಹಿತ್ಯ ಹಬ್ಬಗಳನ್ನು ನಡೆಸುತ್ತಿರುವುದು; ಬರಹಗಾರ ಮತ್ತು ಓದುಗರನ್ನು ಮುಖಾಮುಖಿಗೊಳಿಸುವುದು. ನಮ್ಮ ಸಾಹಿತ್ಯ ಸಮ್ಮೇಳನಗಳು ನಿಜವಾದ ಸಾಹಿತಿಗಳಿಲ್ಲದೆ ಜಾತ್ರೆಗಳಾಗುತ್ತಿರುವ ಸಂದರ್ಭದಲ್ಲಿ ನಿಜವಾದ ಓದುಗರನ್ನು ಮತ್ತು ಬರಹಗಾರರನ್ನು ಜೋಡಿಸುವ ಇಂತಹ ಕಾರ್ಯಕ್ರಮಗಳು ಕನ್ನಡದ ಪಾಲಿಗೆ ಗುರುತಿಸಿ ಗೌರವಿಸಬೇಕಾದ ಘನತೆಯ ಅಂಶಗಳೇ. 

ಸಂಪನ್ಮೂಲ ವ್ಯಕ್ತಿಗಳನ್ನಾಗಿ ಸಾಹಿತಿಗಳನ್ನು ಕರೆಯದೆ ಇದ್ದಾಗ ಅವರು ಸಾಹಿತ್ಯ ಸಮ್ಮೇಳನಗಳಿಗೆ ಕೋದುಕೊಳ್ಳದಿರುವ  ಸಂದರ್ಭದಲ್ಲಿ ಕನ್ನಡದ ಇಂತಹ ನಿಜದ ಜಾತ್ರೆಗಳು ಹೆಚ್ಚಾಗುತ್ತಿರುವುದು ಗಮನಿಯ ಅಂಶಗಳು. ಬೆಂಗಳೂರು ಮಂಗಳೂರು ಮೈಸೂರು ಲಿಟ್ ಫೆಸ್ಟಿವಲ್, ಬುಕ್ ಬ್ರಹ್ಮ, ಬಹುಮುಖಿ, ವಿಜಯ ಕರ್ನಾಟಕ, ಸ್ವಪ್ನ, ಅಂಕಿತ ಇದೀಗ ಎರಡನೇ ವರ್ಷದ ಪುಸ್ತಕ ಸಂತೆ ಆಯೋಜಿಸಿರುವ ವೀರಲೋಕ ಇವರೆಲ್ಲರನ್ನು ಈ ಸಂದರ್ಭದಲ್ಲಿ ಅಭಿನಂದಿಸಲೇಬೇಕು.

ನರೇಂದ್ರ ರೈ ದೇರ್ಲ

ಇದನ್ನು ಓದಿದ್ದೀರಾ? ಬೆಂಗಳೂರಿನಲ್ಲಿ ಮೊದಲ ಪುಸ್ತಕ ಸಂತೆ ಸಂಭ್ರಮ: ವೀರಲೋಕದ ಹೊಸ ಸಾಹಸ

More articles

Latest article