Thursday, May 23, 2024

ಬೆಂಗಳೂರಿನಲ್ಲಿ ಮೊದಲ ಪುಸ್ತಕ ಸಂತೆ ಸಂಭ್ರಮ: ವೀರಲೋಕದ ಹೊಸ ಸಾಹಸ

Most read

ಕನ್ನಡ ಪುಸ್ತಕಗಳನ್ನು ನೀವು ಪುಸ್ತಕದ ಅಂಗಡಿಯಲ್ಲಿ ಸಾಮಾನ್ಯವಾಗಿ ಖರೀದಿ ಮಾಡಿರುತ್ತೀರಿ. ಆದರೆ ಸಂತೆಯಲ್ಲಿ ಕನ್ನಡ ಸಾಹಿತ್ಯ ಪುಸ್ತಕವನ್ನು ಖರೀದಿಸಿದ್ದೀರಾ? ಸಂತೆಯಲ್ಲಿ ಪುಸ್ತಕವನ್ನು ಖರೀದಿಸಲು ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕದಿಂದ ಬೆಂಗಳೂರಿನಲ್ಲೊಂದು ಪುಸ್ತಕಸಂತೆ ನಡೆಯುತ್ತಿದೆ. ಇದೇ ತಿಂಗಳ (ಫೆಬ್ರವರಿ) 10 ಮತ್ತು 11 ತಾರೀಖಿನಂದು ಸ್ವಾಭಿಮಾನಿ ಉದ್ಯಾನವನ, ಎಚ್.ಎಸ್.ಆರ್ ಬಡಾವಣೆ, ಬೆಂಗಳೂರಿನಲ್ಲಿ ಪುಸ್ತಕ ಸಂತೆ ನಡೆಯಲು ಸಜ್ಜಾಗಿದೆ.

ಕನ್ನಡ ಭಾಷೆ, ನಾಡು ವಿಷಯ ಬಂದಾಗ ಕನ್ನಡಿಗರು ಎದೆಯುಬ್ಬಿಸಿ ನಡೆಯಬೇಕೆಂಬುದು ನಮ್ಮೆಲ್ಲರ ಆಸೆ. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಹೊರಡುವವರ ಸಂಖ್ಯೆ ಕಡಿಮೆ. ಅಂಥವರಲ್ಲಿ ಈಗ ಎದ್ದು ಕಾಣುತ್ತಿರುವವರು ಪ್ರೀತಿ ತೋರಿಸುವವರಲ್ಲಿ ವೀರಕಪುತ್ರ ಎಂ ಶ್ರೀನಿವಾಸ್. ಶ್ರೀನಿವಾಸ್ ಕನ್ನಡ ಸಾಹಿತ್ಯ, ಸಂಸ್ಕೃತಿಯ ಸೇವೆಗಾಗಿ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಈ ಕಾಲಘಟ್ಟದ ಉತ್ಸಾಹಿ ಕನ್ನಡ ಪರಿಚಾರಕ. ಪುಸ್ತಕ ಪ್ರೇಮಿಯಾಗಿರುವ ಶ್ರೀನಿವಾಸ್ ತಮ್ಮ ಕನಸಿನ ವೀರಲೋಕ ಎಂಬ ಪ್ರಕಾಶನವನ್ನು ತೆಗೆದು ಕನ್ನಡದ ಬರಹಗಾರರಿಗೆ ಮತ್ತು ಓದುಗರಿಗೆ ತಲುಪುವಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ್ದಾರೆ. ವೀರಲೋಕವು ಸಾಹಿತ್ಯ ವಲಯವನ್ನು ಹೊಸಹೊಸ ಅಚ್ಚರಿಗೆ ಕೆಡವುತ್ತಲೇ ಸುದ್ದಿ ಮಾಡುತ್ತಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಪುಟ್ಟ ಗ್ರಾಮದಿಂದ ಬಂದವರು ಶ್ರೀನಿವಾಸ್. ಬಾಲ್ಯದಲ್ಲಿ ಅವರಿಗೆ ಸಿಕ್ಕ ಗುರುಪರಂಪರೆ ಕನ್ನಡ ಸಾಹಿತ್ಯದೆಡೆಗೆ ಸೆಳೆದು ತಂದಿತು. ʼ ಕನ್ನಡ ಸಾಹಿತ್ಯ ಲೋಕದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಕೆಂಪಯ್ಯ, ನಾಗರಾಜ್ ಶಾಸ್ತ್ರೀ ಮತ್ತು ತಾಜ್ ಪಾಷ ಮೇಷ್ಟ್ರುಗಳು ಸ್ಫೂರ್ತಿʼ ಎಂದು ಅವರು ಹೇಳಿಕೊಳ್ಳುತ್ತಾರೆ.

ʼವೀರಲೋಕ ಬುಕ್ಸ್ʼ ಎಂಬ ಪ್ರಕಾಶನ ಆರಂಭವಾದ ಮೇಲೆ ಕನ್ನಡದ ಪುಸ್ತಕಗಳನ್ನು ಕನ್ನಡಿಗರಿಗೆ ತಲುಪಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಅದರಲ್ಲಿ ಹೊಟೆಲ್, ಮೆಡಿಕಲ್ ಸ್ಟೋರ್, ಪ್ರಾವಿಷನ್ ಸ್ಟೋರ್ ಗಳಲ್ಲಿ ಕನ್ನಡ ಸಾಹಿತ್ಯದ ಪುಸ್ತಕಗಳು ಸಿಗುವಂತೆ ಮಾಡಿದ್ದಾರೆ ಎನ್ನುವುದೇ ವಿಶೇಷ. ರಾಜ್ಯದಲ್ಲಿನ ಪ್ರತಿ ಓದುಗನನ್ನು ತಲುಪಲು ಕನ್ನಡ ಪುಸ್ತಕಗಳಿಗಾಗಿ ಕಾಲ್ ಸೆಂಟರ್ ಮತ್ತು ಫುಡ್ ಡೆಲವರಿ ಬಾಯ್ ರೀತಿಯಲ್ಲಿ ಬುಕ್ ಬಾಯ್ ಎಂಬ ಹೊಸ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಇವೆಲ್ಲವೂ ಶ್ರೀನಿವಾಸ್ ರವರ ಕನ್ನಡ ಪುಸ್ತಕದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.

ನೀವೆಲ್ಲರು ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆ ಕೇಳಿರಬಹುದು. ಅಲ್ಲಿ ದೇಶದ ವಿವಿಧ ಕಡೆಯಿಂದ ಕಲಾವಿದರು ಬಂದಿರುತ್ತಾರೆ. ಹಲವು ರೀತಿಯ ಕಲಾಕೃತಿಗಳು ಮಾರಾಟಕ್ಕೆ ಮತ್ತು ಪ್ರದರ್ಶನಕ್ಕೆ ಇರುತ್ತವೆ. ಇದೇ ರೀತಿ ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕದ ನೇತೃತ್ವಲ್ಲಿ ಬೆಂಗಳೂರಿನಲ್ಲಿ ‘ಪುಸ್ತಕಸಂತೆ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡಿದ್ದಾರೆ.

ಈ ಪುಸ್ತಕಸಂತೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಸುವು ತುಂಬವ ಪ್ರಯತ್ನದಲ್ಲಿ ಶ್ರೀನಿವಾಸ್ ಮುಂದೆ ಬಂದಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಬೆಂಬಲವನ್ನು ಯಾಚಿಸಿದ್ದಾರೆ. ಕನ್ನಡ, ಕನ್ನಡ ಪುಸ್ತಕ, ಕನ್ನಡ ಸಾಹಿತ್ಯ ಯಾವಾಗಲೂ ಹಸಿರಾಗಿರುವಂತೆ ನಮ್ಮ ಹೆಜ್ಜೆಯ ಜೊತೆ ನೀವು ಸಹ ಜೊತೆಗೂಡಿ ಎಂದು ಕರೆಕೊಟ್ಟಿದ್ದಾರೆ.

ನೀವು, ನಿಮ್ಮ ಮಕ್ಕಳನ್ನ ಕರೆದುಕೊಂಡು ವಿದೇಶಕ್ಕೆ ಹೋಗಿರುತ್ತಿರಿ, ದೊಡ್ಡ ದೊಡ್ಡ ಪಾರ್ಟಿಗಳಿಗೆ ಪಾರ್ಕುಗಳಿಗೆ, ಪ್ರಾಣಿ ಸಂಗ್ರಹಾಲಯಗಳಿಗೆ ಹಾಗು ಮನರಂಜನೆ ಸಿಗುವ ಬಹುತೇಕ ಜಾಗಗಳಿಗೆ ಹೋಗಿರುತ್ತಿರಿ. ಆದರೆ ಎಂದಾದರೂ ʼಪುಸ್ತಕ ಸಂತೆಗೆʼ ಹೋಗಿದ್ದೀರ? ಎಂದು ಕೇಳುವ ಜೊತೆಗೆ ನಮ್ಮ ಎರಡು ದಿನದ ಪುಸ್ತಕ ಸಂತೆಗೆ ಒಮ್ಮೆ ಭೇಟಿ ನೀಡಿ ಎಂದು ಕರ್ನಾಟಕದ ಜನತೆಗೆ ಪ್ರೀತಿಯಿಂದ ಮುಕ್ತ ಆಹ್ವಾನವನ್ನು ನೀಡಿದ್ದಾರೆ.

ವೀರಲೋಕದ ಪುಸ್ತಕ ಸಂತೆಗೆ ಕನ್ನಡದ ಹೆಸರಾಂತ ಸಪ್ನ ಸೇರಿದಂತೆ 30ಕ್ಕೂ ಹೆಚ್ಚು ಪ್ರಕಾಶನಗಳು ಮುಂದೆ ಬಂದಿವೆ. ನಿಮ್ಮ ನೆಚ್ಚಿನ ಸಾಹಿತಿಯ ಎಲ್ಲ ಪುಸ್ತಕಗಳು ಸಿಗುತ್ತವೆ. ವಿಶೇಷವೆಂದರೆ ಮಕ್ಕಳಿಗಾಗಿ ಇರುವಂತಹ ಪುಸ್ತಕಗಳನ್ನು ಕಾಣಬಹುದಾಗಿದೆ. ಕನ್ನಡದ ಮೇಲೆ ಅಭಿಮಾನ ಇರುವವರು, ಪುಸ್ತಕ ಪ್ರೇಮಿಗಳು ಎಲ್ಲರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾಲದಲ್ಲಿ ಸತ್ತೇ ಹೋಗುತ್ತಿರುವ ಓದುವ ಸಂಸ್ಕೃತಿಯನ್ನು ಬೆಳೆಸಲು ಪರಿಶ್ರಮ ಪಡುತ್ತಿರುವ ವೀರಕಪುತ್ರ ಶ್ರೀನಿವಾಸ್ ಅಂಥವರ ಸಂಖ್ಯೆ ಸಾವಿರವಾಗಲಿ, ಲಕ್ಷವಾಗಲಿ ಎಂಬುದು ಕನ್ನಡ ಪ್ಲಾನೆಟ್ ಹಾರೈಕೆ..

– ಮನೋಜ್ ಆರ್ ಕಂಬಳಿ

More articles

Latest article