“ಕನ್ನಡತನ – ಕನ್ನಡ ಅಸ್ಮಿತೆಯ ಶತಮಾನದ ಚಿಂತನೆಗಳು “ ಕನ್ನಡ ನಾಡಿನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತೆರೆದಿಡುವುದರ ಜೊತೆಗೆ ಜನರ ನಾಡಿಮಿಡಿತವನ್ನು, ಸಾಂಸ್ಕೃತಿಕ ಚಾರಿತ್ರಿಕ ಸ್ಪಂದನವನ್ನು ಕನ್ನಡ ಅಸ್ಮಿತೆಯ ಸಂದರ್ಭದಲ್ಲಿ ಪರಿಚಯಿಸುತ್ತದೆ. ಜೊತೆಗೆ ಕನ್ನಡತನವನ್ನು ನಿತ್ಯದ ಬದುಕಿಗೆ ಮುಖಾಮುಖಿಯಾಗಿಸುತ್ತಾ ವರ್ತಮಾನದ ಸಂಘರ್ಷಗಳನ್ನು ಸ್ಥೂಲವಾಗಿ ಪರಿಚಯಿಸುವ ಮೂಲಕ ಒಂದು ಸಂಗ್ರಹ ಯೋಗ್ಯ ಕೃತಿಯಾಗಿದೆ – ದೇವಿಕಾ ನಾಗೇಶ್, ಲೇಖಕಿ, ಕಾರ್ಯಕರ್ತೆ.
ಲೋಹಿಯಾ ಹೇಳುವಂತೆ ಜಾತಿ, ಭಾಷೆ, ಧರ್ಮ ಮತ್ತು ಸ್ಥಳೀಯತೆ ಭಾರತೀಯ ಸಮಾಜದ ನಾಲ್ಕು ಮುಖ್ಯ ಮಹತ್ವದ ಚಾಲಕ ಶಕ್ತಿಗಳು. ಕನ್ನಡತನ ಎನ್ನುವುದೂ ಇಂದು ಕನ್ನಡ ನಾಡಿಗಷ್ಟೇ ಸೀಮಿತವಾಗಿರದೆ ನಾಡಿನ ನುಡಿ ಸಂಸ್ಕೃತಿ ಪ್ರಾದೇಶಿಕತೆ ಜನಜೀವನದ ಭಾಗವಾಗಿರುವುದು ನಾವು ಕಾಣುತ್ತಿದ್ದೇವೆ. ಡಾ. ಸರ್ಜಾಶಂಕರ ಹರಳಿಮಠ ಇವರ ಪಿ. ಎಚ್.ಡಿ ಪ್ರಬಂಧ ‘ಕನ್ನಡತನ’ ಕನ್ನಡ ಅಸ್ಮಿತೆಯ ಶತಮಾನದ ಚಿಂತನೆಗಳು, ಜಾಗತೀಕರಣದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗದಂತೆ ಕನ್ನಡತನ ತನ್ನ ಅಸ್ಮಿತೆಯನ್ನು ಕಟ್ಟಿಕೊಳ್ಳುವ ವಿವಿಧ ಮಾದರಿಗಳ ಒಟ್ಟಂದದ ಚಿತ್ರಣವನ್ನು ನೀಡುವ ಆಮೂಲಾಗ್ರವಾಗಿ ಅಧ್ಯಯನ ಮಾಡಿ ಬರೆದ ಗ್ರಂಥ.
ಡಾ. ಸರ್ಜಾಶಂಕರ್ ಹರಳಿಮಠ ಅವರ ವಿಶೇಷತೆ ಇರುವುದು ಅವರು ಲೇಖಕ, ಕಥೆಗಾರ ಅನ್ನುವುದಕ್ಕಿಂತಲೂ ಮುಖ್ಯವಾಗಿ ಬಹು ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದವರು, ಜನಪರ ಚಳವಳಿಗಳಲ್ಲಿ ಸ್ವತಃ ತೊಡಗಿಸಿಕೊಂಡವರು, ಹೀಗಾಗಿ ಕನ್ನಡತನ ಎನ್ನುವ ಅಸ್ಮಿತೆ ಯನ್ನು ತನ್ನ ವೈವಿಧ್ಯಮಯ ಅನುಭವ ಲೋಕಕ್ಕೆ ದಕ್ಕಿದಂತೆ ವಿಭಿನ್ನ ನೆಲೆಯಲ್ಲಿ ಗ್ರಹಿಸಿದವರು, ದೇಸಿ ಸಂಸ್ಕೃತಿ ಮಳಿಗೆ ಪ್ರಾರಂಭಿಸಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಇವರು ಶ್ರಮಿಸಿದವರು ಎಂಬುದರಲ್ಲಿ. ಇವರ ಅನುಭವ ಲೋಕವು ಕನ್ನಡತನದ ಅಸ್ಮಿತೆಯನ್ನು ಗುರುತಿಸಲು ಬರಿ ಗ್ರಂಥಾಲಯಗಳಿಗೆ ಎಡತಾಕಿದ್ದು ಮಾತ್ರವಲ್ಲ, ಸಮುದಾಯದ ನಡುವಿನ ಜನಸ್ಪಂದನದ ಮಾರ್ಗ ಸೂತ್ರ ಗಳನ್ನು ಇತಿಹಾಸ ವರ್ತಮಾನಗಳ ತಕ್ಕಡಿಯಲ್ಲಿಟ್ಟು ಬರೆದಂತಹವು.
ಕೀನ್ಯ ದ ಪ್ರಸಿದ್ಧ ಚಿಂತಕ ಗೂ ವಾಥಿ ಯಾಂಗೂ ಹೇಳುವಂತೆ ‘ಭಾಷೆ ಎಂದರೆ ಜನತೆ ಚರಿತ್ರೆಯಲ್ಲಿ ತಾವು ಪಡೆದ ಅನುಭವಗಳ ಪ್ರತಿ ಸಂಚಯ. ‘ಕನ್ನಡತನʼ ಎಂದರೆ ಒಂದು ವಸ್ತುವಲ್ಲ, ವ್ಯಕ್ತಿಯಲ್ಲ, ಇದು ಒಂದು ಸಾಮೂಹಿಕ ಚಿಂತನೆ. ಜನ ಜೀವನದಲ್ಲಿ ಆಡು ಭಾಷೆ ಮೂರ್ತವಾಗುತ್ತ ಸಾಗುವ ಈ ಪ್ರಕ್ರಿಯೆಯಲ್ಲಿ ಭಾವ ಕೋಶದ ಹೆಣಿಗೆ ಇರುತ್ತದೆ. ಇತಿಹಾಸದ ಪಲ್ಲಟಗಳು ಇರುತ್ತವೆ. ಆಡಳಿತ ಭಾಷೆಯಾಗಿ ಒಂದು ಭಾಷೆ ಬಳಸಲ್ಪಡಬೇಕೆಂದರೆ ಅದಕ್ಕೆ ರಾಜಾಶ್ರಯ ಬೇಕು. ಇಲ್ಲದೆ ಹೋದರೆ ಭಾಷೆ ಮಾತ್ರವಲ್ಲ ಆ ಭಾಷೆಯನ್ನು ಮಾತನಾಡುವ ಜನ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಉದಾಹರಣೆಗೆ ಪಾಕಿಸ್ತಾನದಲ್ಲಿ ಉರ್ದು ಭಾಷೆ ಆಡಳಿತ ಭಾಷೆಯಾದಾಗ ಬಂಗಾಳಿ ಮಾತನಾಡುವ ಜನ ನಿರ್ಲಕ್ಷ್ಯಕ್ಕೆ ಒಳಗಾದರು. ಆಗ ಈ ಜನ ಆಂದೋಲನವನ್ನು ಪ್ರಾರಂಭಿಸಿ ಪಾಕಿಸ್ತಾನ ವಿಭಜನೆಯಾಗಿ ಬಾಂಗ್ಲಾದೇಶವಾಗಿ ರೂಪು ಪಡೆಯಿತು. ಅಲ್ಲಿ ಬಂಗಾಳಿ ಆಡಳಿತ ಭಾಷೆ ಆಯ್ತು. ಸ್ವಾತಂತ್ರ್ಯಾನಂತರ ನಮ್ಮ ದೇಶವು ಭಾಷಾವಾರು ಪ್ರಾಂತ್ಯಗಳಾಗಿ ರಾಜ್ಯದ ಮಾನ್ಯತೆ ಪಡೆದ ಹಿನ್ನೆಲೆಯಲ್ಲಿ ಈ ಚಿಂತನಾ ಕ್ರಮಗಳು ಇದ್ದವು. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾದಾಗ ಉರ್ದು, ತುಳು, ಲಂಬಾಣಿ, ಕೊಡವ, ಕೊಂಕಣಿ, ಹಕ್ಕಿಪಿಕ್ಕಿ ಭಾಷೆಗಳು ಅಧೀನ ಭಾಷೆಗಳಾದವು.
ಒಂದು ಕುತೂಹಲದ ವಿಚಾರವೇನೆಂದರೆ ಭಾಷೆ ಇರಬಹುದು, ವ್ಯಕ್ತಿ ಇರಬಹುದು ಎದುರಾಳಿಯ ಕಲ್ಪನೆಯಿಂದ ಭಾಷೆಯೊಂದು ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಹೊಂದಿರುತ್ತದೆ. ಇದನ್ನು ಹರಳಿಮಠ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಇತಿಹಾಸದ ಉದಾಹರಣೆಗಳಿಂದ ವಿಶೇಷವಾಗಿ ಚರ್ಚಿಸಿರುವುದು ಕುತೂಹಲ ಹುಟ್ಟಿಸುವಂತಿದೆ. ಭಾಷೆ ಅಭಿವ್ಯಕ್ತಿಯ ಮಾಧ್ಯಮವೆಂದು ಕೊಂಡಾಗ ಈ ಲೋಕದಿಂದ ಭಿನ್ನವಾದ ಅಸ್ತಿತ್ವ ಅದಕ್ಕೆ ಇರುವುದಿಲ್ಲ. ಭಾಷೆ ಲೋಕವನ್ನು ಬದುಕನ್ನು ಒಳಗೊಂಡ ಲೇಖ ಲೋಕದ ಅನುಸಂಧಾನ. ಸಾಹಿತ್ಯದ ಹಿಂದೆ ರಾಜಕಾರಣವಿರುತ್ತದೆ. ಅದು ಭ್ರಮೆಗಳನ್ನು ಸೃಷ್ಟಿಸುತ್ತ ಅದರ ಮರೆಯಲ್ಲಿ ತಾರತಮ್ಯದ ಅಸಹನೀಯ ಸಾಮಾಜಿಕ ವಾಸ್ತವವನ್ನು ಮರೆಸುವ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವ ರಾಜಕಾರಣ. ದೃಶ್ಯ ಮಾಧ್ಯಮದ ಧಾರಾವಾಹಿಗಳು, ಎಂಬತ್ತು ತೊಂಬತ್ತರ ದಶಕದಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಗಳು ಈ ತೆರನವು.
ಕನ್ನಡದೊಳಗಿನ ಕನ್ನಡೇತರ ಆಸ್ಮಿತೆ ಗಳನ್ನು ಲೇಖಕರು ಪರಿಚಯಿಸುತ್ತ ಅವುಗಳ ಬಹುಸ್ಥರೀಯ ಸ್ವರೂಪಗಳನ್ನು ವಿವರಿಸುತ್ತಾರೆ. ರಕ್ಷಣೆಯ ಮುಖವಾಡ ಹೊತ್ತ ವಿವಿಧ ಹಿತಾಸಕ್ತಿಗಳು ಈ ಹಿನ್ನೆಲೆ ಯಲ್ಲಿ ಇರುವುದು ಗಮನಾರ್ಹ ಸಂಗತಿಗಳು. ಉದಾಹರಣೆಗೆ ಕನ್ನಡ ಪರ ಸಂಘಟನೆಗಳು ನಿರ್ದಿಷ್ಟ ಜಾತಿ, ರಾಜಕೀಯ ಪಕ್ಷ ಮತ್ತು ಮತೀಯ ಸಂಘಟನೆಗಳ ಜೊತೆ ಕಾರ್ಯಾಚರಿಸುವುದು ಒಂದು ಕಡೆಯಾದರೆ, ಜಾಗತೀಕರಣದ ಯುಗದಲ್ಲಿ ಮಾರುಕಟ್ಟೆ ಪ್ರಣೀತ ಹಿತಾಸಕ್ತಿಗಳು ಭಾಷೆಗಳ ಸ್ವರೂಪಗಳಾಗಿ ತಮ್ಮ ಇಚ್ಛೆಗೆ ತಕ್ಕಂತೆ ಬದಲಿಸುವ ಪ್ರಯತ್ನಗಳು ಇನ್ನೊಂದು ಕಡೆ….ಒಟ್ಟಿನಲ್ಲಿ ಈ ಪಿ.ಎಚ್. ಡಿ ಪ್ರಬಂಧವು ಕರ್ನಾಟಕದಲ್ಲಿ ಕನ್ನಡ ಅಸ್ಮಿತೆಯ ನೆಲೆಗಳನ್ನು ಬಹು ಆಯಾಮದಲ್ಲಿ ನಿರೂಪಿಸುತ್ತದೆ ಎಂಬ ನೆಲೆಯಲ್ಲಿ ಮುಖ್ಯವಾಗುತ್ತದೆ.
ಶತಮಾನದ ಹಿಂದೆ ಕನ್ನಡ ಪರ ಚಿಂತನೆಗೆ ನಾಂದಿ ಹಾಡಿದವರು ಬಿ.ಎಂ. ಶ್ರೀಕಂಠಯ್ಯ. ಕನ್ನಡದ ಅಸ್ಮಿತೆಯನ್ನು ಗುರುತಿಸುವಾಗ ಸಾಹಿತ್ಯ ಮತ್ತು ಸಂಸ್ಕೃತಿಗಳ ಸಂಬಂಧದ ನೆಲೆಯಿಂದ ಗುರುತಿಸಿದ್ದಾರೆ. ಇವು ಸಾಹಿತ್ಯ ಕೃತಿಯನ್ನು ಒಂದು ಸಂಸ್ಕೃತಿಯ ಚಲನಶೀಲತೆಯ ದಾಖಲೆ ಎಂದು ಗುರುತಿಸುತ್ತದೆ. ಇನ್ನೊಂದು ಸಾಹಿತ್ಯಕ್ಕೋಸ್ಕರ ಸಾಹಿತ್ಯ ಎನ್ನುತ್ತದೆ. ಇದು ಸಾಹಿತ್ಯದ ಹಿಂದಿನ ರಾಜಕಾರಣ. ಇವು ಕೇವಲ ಭ್ರಮೆಗಳನ್ನು ಸೃಷ್ಟಿಸುತ್ತಾ ಅದರ ಮರೆಯಲ್ಲಿರುವ ತಾರತಮ್ಯದ ಅಸಹನೀಯ ಸಾಮಾಜಿಕ ವಾಸ್ತವವನ್ನು ಮರೆಸುವ ಯಥಾ ಸ್ಥಿತಿ ಮುಂದುವರಿಸಿಕೊಂಡು ಹೋಗುವ ರಾಜಕಾರಣ.
ಭಾಷಾ ಅಸ್ಮಿತೆ ಶಕ್ತಿಧಾರಣೆ ಪಡೆಯುವುದಕ್ಕೆ ಬಿ.ಎಂ.ಶ್ರೀ ಯವರು ಹಾಕಿ ಕೊಟ್ಟ ಮಾರ್ಗ ಸೂಚಿ ಗಳನ್ನು ಕೃತಿಯಲ್ಲಿ ಈ ಕೆಳಗಿನಂತೆ ದಾಖಲಿಸಲಾಗಿದೆ.
1. ಭಾಷಾ ಬಲವರ್ಧನೆಯ ಚಿಂತನೆಗಳ ಅನುಷ್ಠಾನ
2.ಇನ್ನೊಂದು ಭಾಷೆಯಿಂದ ಯಾವುದೇ ಸ್ವರೂಪದಲ್ಲಿ ಶಕ್ತಿಧಾರಣೆ ಮಾಡಿಕೊಳ್ಳಲು ಸಾಧ್ಯವಾಗುವುದು ಉದಾಹರಣೆಗೆ ಅನುವಾದಗಳ ಮೂಲಕ
3. ತಮ್ಮ ಭಾಷೆಯ ಮೇಲೆ ಇನ್ನೊಂದು ಭಾಷೆಯ ಹೊರೆ ತಗ್ಗಿಸುವುದು
4. ಭಾಷೆಯ ಸಾಮಾಜಿಕ ನೆಲೆಗಳನ್ನು ಅಂತರ್ಗತಗೊಳಿಸುವುದು.
ಕುವೆಂಪುರವರು ಕನ್ನಡದ ಅಸ್ಮಿತೆಯನ್ನು ಗುರುತಿಸಿದ ಬಗ್ಗೆ ಇನ್ನೊಂದು ಮಾದರಿಯದು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದ ಇವರು ಭಾಷೆಗಿಂತ ಬದುಕಿಗೆ ಮೊದಲ ಪ್ರಾಧಾನ್ಯತೆ ನೀಡುತ್ತಾರೆ. ಇವರು ಪ್ರತಿಪಾದಿಸಿರುವ ಸಮ ಪಾಲು ಸಮ ಬಾಳು ಎಂಬ ತತ್ವ ಸಾಮಾಜಿಕ, ಆರ್ಥಿಕ ಸಮತೆಯನ್ನು ಪ್ರತಿಪಾದಿಸುತ್ತದೆ. ಇವು ಭಾಷೆ ಮತ್ತು ಲಿಪಿಗೆ ಪೂರಕವಾಗಿರುತ್ತದೆ ಎಂದು ಗ್ರಹಿಸಲಾಗುತ್ತದೆ. ‘ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಕುವೆಂಪುರವರ ಜನಪ್ರಿಯ ಪದ್ಯ. ಈ ಹಿನ್ನೆಲೆಯಲ್ಲಿ ಹೆಚ್ಚು ಮೌಲಿಕ ವಾದದ್ದು.
ಕನ್ನಡ ಅಸ್ಮಿತೆಯ ಮುಖ್ಯ ಕೊಂಡಿಯಾಗಿ kabಡಾ. ಹರಳಿಮಠ ಗುರುತಿಸುವ ವಿದ್ವಾಂಸರಲ್ಲಿ ಇನ್ನೊಬ್ಬರು ಮುಖ್ಯರು ಶಂಬಾ ಜೋಶಿ. ಇವರ ವಿಶಿಷ್ಟತೆ ಎಂದರೆ ಕನ್ನಡ ಅಸ್ಮಿತೆಯನ್ನು ದೇಶೀ ಮಾರ್ಗದ ಹಿನ್ನೆಲೆಯಲ್ಲಿ ಗುರುತಿಸಿರುವುದು. ಸಂಸ್ಕೃತಿಯ ಮಹತ್ವದೊಳಗೆ ಗಮನಹರಿಸಿದ ಇವರ ಸಂಶೋಧನೆ ಸತ್ಯಶೋಧನೆ, ವೈಚಾರಿಕತೆ, ಜಾತ್ಯತೀತತೆಯ ಬಹುಮುಖ ನೆಲೆಗಳು ಸಂಸ್ಕೃತಿಯ ಬೆಂಕಿಯಾಗುವುದರ ಬಗ್ಗೆ ಎಚ್ಚರ ಆತಂಕ ವ್ಯಕ್ತ ಪಡಿಸುತ್ತವೆ. ಶಂಬಾ ಜೋಶಿಯವರ ಸಂಶೋಧನೆಯ ವಿವಿಧ ಆಯಾಮವನ್ನು ಗುರುತಿಸಿ ಡಾ. ರಹಮತ್ ತರೀಕೆರೆ ಅವರು ಹೇಳುವುದು ಹೀಗೆ “ಸಂಸ್ಕೃತ ವನ್ನು ಜಡವೂ ಸಾಂಪ್ರದಾಯಿಕವೂ ಆದ ದೃಷ್ಟಿಕೋನಕ್ಕಿಂತ ಭಿನ್ನವಾಗಿ ಜನಪರ ಆಶೋತ್ತರಗಳಲ್ಲಿ ಅಧ್ಯಯನ ಮಾಡುವವರನ್ನು ಸಮಾಜ ಒಂಟಿಯಾಗಿಸುತ್ತದೆ. ವರ್ಗ ರಾಜಕಾರಣವು ಶಂಭಾ ವಿಷಯದಲ್ಲಿ ಮಾಡಿರುವುದು ಇದು.’
ಪ್ರಗತಿಪರರು ಇಂಗ್ಲೀಷ್ ವಿದ್ವಾಂಸರು ಎಂದು ಸಮಾಜ ಗುರುತಿಸುವ ಯು. ಆರ್. ಅನಂತಮೂರ್ತಿಯವರ ದೃಷ್ಟಿಕೋನದ ಕನ್ನಡ ಅಸ್ಮಿತೆಯ ಕುರಿತು ಚರ್ಚಿಸುತ್ತಾ ಡಾ. ಹರಳಿಮಠ ಅವರು ತಮ್ಮ ಕಾಣ್ಕೆ ಗಳನ್ನು ಹೀಗೆ ಗುರುತಿಸುತ್ತಾರೆ.
1. ಸಿದ್ಧಾಂತಗಳಿಗೆ ಕುರುಡಾಗದೆ ಸತ್ಯಕ್ಕೆ ಸಂಬಂಧಿಸಿದರು.
2. ಏಕ ಸಂಸ್ಕೃತಿಯ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದರು
3. ವರ್ಗ ನೆಲೆ ಯ ಸೂಕ್ಷ್ಮ ವಿಶ್ಲೇಷಣೆಗೆ ಮಾರ್ಗ ತೆರೆದರು.
4. ಜಾಗತೀಕರಣ ಸೃಷ್ಟಿಸಿರುವ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗದ ಚಿಂತನೆಯ ಮಿತಿಯ ಬಗ್ಗೆ ಹೇಳುತ್ತಾ ಕನ್ನಡ ಅಸ್ಮಿತೆಗಿರುವ ತೊಡಕುಗಳ ಬಗ್ಗೆ ಗಮನ ಹರಿಸಿದರು.
5. ಚಳುವಳಿಯನ್ನು ವಿಮರ್ಶಿಸುವ ದಿಟ್ಟ ಚಿಂತನೆಗೆ ತೆರೆದುಕೊಂಡರು.
ನೀನಾಸಂ ನಾಟಕಗಳ ಮೂಲಕ ಕರ್ನಾಟಕದಲ್ಲಿ ಜನಾಂದೋಲನವನ್ನು ಹುಟ್ಟು ಹಾಕಿದ ಕೆ.ವಿ.ಸುಬ್ಬಣ ಅವರು ಕನ್ನಡ ಅಸ್ಮಿತೆಯಲ್ಲಿರುವ ಶ್ರೇಷ್ಠತೆಯ ವ್ಯಸನವನ್ನು ಪ್ರಸ್ತಾಪಿಸುತ್ತಾ ತುಳು, ಕೊರಗ, ಲಂಬಾಣಿ, ಕೊಡವ, ಬ್ಯಾರಿ ಇತ್ಯಾದಿ ಭಾಷೆಗಳ ನಡುವೆ ಕನ್ನಡ ತನ್ನ ಯಾಜಮಾನಿಕೆ ಮೆರೆಯುವುದರ ಬಗ್ಗೆ ಪ್ರಸ್ತಾಪಿಸುತ್ತಾರೆ.
ಕೆರೆ ಗೆ ಹಾರ, ಗೋವಿನ ಹಾಡು ಈ ಎರಡು ಪಠ್ಯಗಳ ಮೂಲಕ ತೆರೆದುಕೊಳ್ಳುವ ಕನ್ನಡ ತನ ಅಂತ: ಕರಣ, ಕೇಡು, ಪಾಪ, ಹಿಂಸೆಯ ಬಗೆಗಿನ ಚಿಂತನೆ, ಭೋಗ, ಸಂಯಮಗಳ ಸಾಮುದಾಯಿಕ ನೆಲೆಯ ಅರಿವಿನ ಮಾದರಿಗಳಾಗಿವೆ. ಗೋವಿನ ಹಾಡು ಆಹಾರ ಸಂಸ್ಕೃತಿಯ ವಿರೋಧದ ಒಂದು ಅಭಿವ್ಯಕ್ತಿಯಾದರೆ ಕೆರೆಗೆ ಹಾರ ಮಹಿಳೆ ಮತ್ತು ಮೂಢ ನಂಬಿಕೆಗಳ ನಡುವಿನ ಸಾಮುದಾಯಿಕ ಚಿಂತನಾ ಕ್ರಮವನ್ನು ಪ್ರಸ್ತಾಪಿಸುತ್ತದೆ. ಸುಬ್ಬಣ್ಣ ಅವರು ಪ್ರಸ್ತಾಪಿಸುವ ಕನ್ನಡ ಅಸ್ಮಿತೆ ಪ್ರಭುತ್ವ ಭೀತಿಯ ಎದುರು ದೈನ್ಯಕ್ಕೊಳಗಾದ ಸಹಭಾಷೆ ಗಳೊಂದಿಗಿನ ತೊಡಕು ಸಮನ್ವಯತೆ ಗಳನ್ನು ತೆರೆದಿಡುತ್ತದೆ.
ಒಟ್ಟಾರೆಯಾಗಿ ಕನ್ನಡ ಅಸ್ಮಿತೆಯ ಸಂಶೋಧನೆಗಳ ಫಲಿತವನ್ನು ಹರಳಿಮಠ ಅವರು ಗುರುತಿಸುವುದು ಹೀಗೆ. ಇವರ ಪ್ರಕಾರ-
1. ಮಗುವೊಂದು ಏಕಕಾಲಕ್ಕೆ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿದೆ
2. ಇಂಗ್ಲಿಷ್ ಯಜಮಾನಿಕೆ ನಡೆಸಬಹುದು. ಆದರೆ ಜನರ ಅರಿವಿನ ಭಾಗವಾಗುವುದರಲ್ಲಿ ಇದು ಸೋಲುತ್ತದೆ
3. ಶಿಕ್ಷಣ ಮಾಧ್ಯಮಕ್ಕೂ ಸಾಂಸ್ಕೃತಿಕ ಪರಂಪರೆಯ ಮುಂದುವರಿಕೆಗೂ ಸಂಬಂಧವಿಲ್ಲ.
4. ಮಾರುಕಟ್ಟೆ ಶಕ್ತಿಗಳಿಗೆ ಭಾಷೆ ಇಲ್ಲ ಲಾಭವಷ್ಟೇ ಆದ್ಯತೆ ಯಾಗಿರುತ್ತದೆ.
ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವಾಗ ಬರಗೂರು ರಾಮಚಂದ್ರಪ್ಪ ಅವರ ಚಿಂತನೆಗಳನ್ನು ಪ್ರಸ್ತಾಪಿಸಲೇ ಬೇಕು. ಅವರ ಫಲಿತಗಳನ್ನು ಹರಳಿಮಠ ಗುರುತಿಸಿರುವುದು ಹೀಗೆ. ಶ್ರಮದ ನೆಲೆಯಿಂದ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಚಿಂತಕರಾದ ಬರಗೂರರು ಕನ್ನಡದ ಕಾಳಜಿ ಮತ್ತು ಕೆಳ ವರ್ಗಗಳಿಗೆ ಇಂಗ್ಲೀಷ್ ಲಾಭ ದೊರಕಿಸುವ ನಡುವಿನ ಬಿಕ್ಕಟ್ಟುಗಳನ್ನು ಹೇಳುತ್ತಾರೆ. ಬುದ್ಧಿಗಿಂತ ಬೆವರಿನ ಕಡೆ ಹೆಚ್ಚು ಒತ್ತು ನೀಡಬೇಕೆನ್ನುವ ಇವರು ಭಾಷಾ ಚಳುವಳಿಯು ಜನ ಚಳುವಳಿಯಾಗಬೇಕೆಂಬ ಆಶಯ ವ್ಯಕ್ತಪಡಿಸುತ್ತಾರೆ. ಮಾತ್ರವಲ್ಲ ಕನ್ನಡಕ್ಕೆ ಮತೀಯ ಸೋಂಕು ತಗಲಿಸುವ ಹುನ್ನಾರವನ್ನು ಕಟುವಾಗಿ ವಿರೋಧಿಸುತ್ತಾರೆ.
ದಲಿತ ನೆಲೆಯಲ್ಲಿ ಹಾಗೂ ಭಾಷಾ ಅಲ್ಪಸಂಖ್ಯಾತರ ನೆಲೆಯಲ್ಲೂ ಕನ್ನಡ ಅಸ್ಮಿತೆಯನ್ನು ಅವಲೋಕನ ಮಾಡುವ ಮೂಲಕ ಕನ್ನಡದ ಅಸ್ಮಿತೆಯ ಶತಮಾನದ ಚಿಂತನೆಗಳನ್ನು ಕ್ರೋಢಿಕರಿಸಿರುವ ಡಾ.ಹರಳಿಮಠ ರ ಈ ಪ್ರೌಢ ಪ್ರಬಂಧವು ಸಂಗ್ರಹ ಯೋಗ್ಯವಾಗಿದೆ. ಕನ್ನಡದ ಇತಿಹಾಸವನ್ನು ಅಸ್ಮಿತೆಯ ನೆಲೆಯಲ್ಲಿ ಕಟ್ಟಿ ಕೊಡುವ ಸಂಶೋಧನೆಗಳಿಗೆ ಮುಖ್ಯ ಆಕರವಾಗಿಯೂ ಒದಗಿ ಬರುತ್ತದೆ.
“ಕನ್ನಡತನ – ಕನ್ನಡ ಅಸ್ಮಿತೆಯ ಶತಮಾನದ ಚಿಂತನೆಗಳು “ ಕನ್ನಡ ನಾಡಿನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತೆರೆದಿಡುವುದರ ಜೊತೆಗೆ ಜನರ ನಾಡಿಮಿಡಿತವನ್ನು ಸಾಂಸ್ಕೃತಿಕ ಚಾರಿತ್ರಿಕ ಸ್ಪಂದನವನ್ನು ಕನ್ನಡ ಅಸ್ಮಿತೆಯ ಸಂದರ್ಭದಲ್ಲಿ ಪರಿಚಯಿಸುತ್ತದೆ. ಜೊತೆಗೆ ಕನ್ನಡತನವನ್ನು ನಿತ್ಯದ ಬದುಕಿಗೆ ಮುಖಾಮುಖಿಯಾಗಿಸುತ್ತಾ ವರ್ತಮಾನದ ಸಂಘರ್ಷಗಳನ್ನು ಸ್ಥೂಲವಾಗಿ ಪರಿಚಯಿಸುವ ಮೂಲಕ ಇದೊಂದು ಸಂಗ್ರಹ ಯೋಗ್ಯ ಕೃತಿ ಎಂದು ಧಾರಾಳವಾಗಿ ಹೇಳಬಹುದಾಗಿದೆ.
ದೇವಿಕಾ ನಾಗೇಶ್
ಲೇಖಕಿ, ಕಾರ್ಯಕರ್ತೆ.
ಇದನ್ನೂ ಓದಿ- ಪುಸ್ತಕ ವಿಮರ್ಶೆ | ಎದೆಯ ಕದ ತೆರೆವ ʼಚೋದ್ಯʼ