ಕಲಬುರಗಿ ಕ್ಷೇತ್ರದ ಸಂಸದ ಉಮೇಶ್ ಜಾದವ್ ತವರಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಜಿಲ್ಲೆಯಲ್ಲಿ 282 ಗ್ರಾಮಗಳಿಗೆ ನೀರಿಲ್ಲದ ಪರಿಸ್ಥಿತಿ ಎದುರಾಗುವ ಮುನ್ಸೂಚನೆಯಿದ್ದು, ನೀರಿನ ವ್ಯವಸ್ಥೆಗೆ ಅನುದಾನ ಕೊರತೆ ಇರದಿದ್ದರೂ ಅಂತರ್ಜಲ ಸಮಸ್ಯೆಯಿಂದ ಜನರು ಕುಡಿವ ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿಯಿದೆ.
ಜಿಲ್ಲೆಯಲ್ಲಿ ಈ ಬಾರಿ ಡಿಸೆಂಬರ್‌ನಿಂದಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕಳೆದ ಬಾರಿ ಮಳೆ ಕಡಿಮೆಯಾದ್ದರಿಂದ ಬಹುತೇಕ ಜಲಾಶಗಳಿಗೆ ಹೆಚ್ಚಿನ ನೀರು ಹರಿದು ಬಂದಿಲ್ಲ. ಕೆಲವು ಜಲಾಶಯಗಳು ಈಗಾಗಲೇ ಖಾಲಿಯಾಗಿ ಹಲವು ಹಳ್ಳಿಗಳಲ್ಲಿ ನೀರಿಗಾಗಿ ಅಲೆದಾಟ ಶುರುವಾಗಿದೆ.
ಕಳೆದ ವರ್ಷ ಬೇಸಿಗೆಯಲ್ಲಿ170 ಗ್ರಾಮಗಳಿಗೆ ನೀರಿನ ಸಮಸ್ಯೆ ಆಗಬಹುದು ಎಂದು ಗುರುತಿಸಲಾಗಿತ್ತು. ಆದರೆ, ಈ ಬಾರಿ ಅದು 282 ಗ್ರಾಮಗಳಿಗೆ ಏರಿದೆ.
ಉಸ್ತುವಾರಿ ಸಚಿವ ಹಾಗೂ ತವರು ಜಿಲ್ಲೆಯವರಾದ ಪ್ರಿಯಾಂಕ್ ಖರ್ಗೆ ಜಿಲ್ಲೆಯಲ್ಲೇ ಇಷ್ಟು ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಾರಿ ಜಿಲ್ಲೆಯ ಅಫಜಲಪುರ ಮತ್ತು ಆಳಂದ ತಾಲೂಕುಗಳಲ್ಲಿ ಹೆಚ್ಚು ನೀರಿನ ಬವಣೆ ಎದುರಾಗಲಿ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಡಿಸೆಂಬರ್‌ನಿಂದಲೇ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಜನವರಿ, ಫೆಬ್ರವರಿಯಲ್ಲಿ ಸರಿದೂಗಿಸಿಕೊಂಡು ಹೋಗಿದ್ದಾದರೂ ಮಾರ್ಚ್ ಅಂತ್ಯದೊಳಗೆ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.
ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಲುವಾಗಿಯೇ ಟಾಸ್ಕ್‌ಫೋರ್ಸ್ ಕಮಿಟಿಗಳು ಮಾಡಿದ್ದು, ಈ ಕಮಿಟಿಗಳು ಅನುದಾನವನ್ನು ಬಳಕೆ ಮಾಡಿಕೊಂಡು ಗ್ರಾಮಗಳಿಗೆ ನೀರಿನ ಸಮಸ್ಯೆ ನೀಗಿಸಲು ಯತ್ನಿಸುತ್ತಿವೆ. ನೀರಿನ ಸಮಸ್ಯೆ ನೀಗಿಸಲು ಸರಕಾರ ಪ್ರತಿ ತಾಲೂಕಿಗೆ 25 ಲಕ್ಷ ರೂ. ಮೀಸಲಿಟ್ಟಿದೆ. ಈಗಾಗಲೇ ಕುಡಿಯುವ ನೀರಿಗಾಗಿ 1 ಕೋಟಿ ರೂ. ಖರ್ಚು ಮಾಡಿದೆ.
ಸಧ್ಯ ಕುಡಿಯುವ ನೀರು ಹಾಗೂ ಜನಸಾಮಾನ್ಯರ ಬವಣೆಯನ್ನು ನೀಗಿಸುವ ದೃಷ್ಟಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲೆಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇತ್ತ ಬಿಜೆಪಿಯಿಂದ ಗೆದ್ದು ಸಂಸದರಾಗಿರುವ ಉಮೇಶ್ ಜಾದವ್ ಅವರು ನೀರಿನ ಬವಣೆ ಅರಿಯಲು ಕ್ಷೇತ್ರಕ್ಕೆ ಬಂದಿಲ್ಲ ಎಂದು ದೂರುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಇರುವಾಗಲೇ ಈತರದ ಪರಿಸ್ಥಿತಿ ಎದುರಾಗಿದ್ದು ಸಂಸದರು ಕ್ಷೇತ್ರಕ್ಕೆ ಭೇಟಿ ನೀಡದಿದ್ದರೆ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ.