Saturday, July 27, 2024

ತುಮಕೂರು ಹಾಸ್ಟೆಲ್​ಗಳಲ್ಲಿ‌ ಅಕ್ಕಿ ಕೊರತೆ ಎಂಬ ವದಂತಿ ನಂಬಬೇಡಿ: ಸಚಿವ ತಂಗಡಗಿ ಸ್ಪಷ್ಟನೆ

Most read

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ 111 ಹಾಸ್ಟೆಲ್​​ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಮಾಸಿಕ ಬೇಡಿಕೆಗಳಿಗೆ ಅನುಗುಣವಾಗಿ ಅಕ್ಕಿ ಮತ್ತು ಗೋಧಿ ಹಂಚಿಕೆಯಾಗಿರುತ್ತದೆ.‌ ಜಿಲ್ಲೆಯ ಹಾಸ್ಟೆಲ್​​ನಲ್ಲಿ‌ ಅಕ್ಕಿ ಕೊರತೆ ಇಲ್ಲ. ಅಕ್ಕಿ ಇಲ್ಲ ಎಂಬ ವದಂತಿ ಬೆನ್ನಲ್ಲೇ ತುಮಕೂರಿನ ಹಿಂದುಳಿದ ವರ್ಗದ ಜಿಲ್ಲಾ ಕಲ್ಯಾಣ ಅಧಿಕಾರಿಯಿಂದ ಕೂಡ ಮಾಹಿತಿ ಪಡೆದಿದ್ದೇನೆ. ಅಕ್ಕಿ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸಚಿವರು ತಿಳಿಸಿದ್ದಾರೆ.

ಇನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಧಾನ‌ ಕಾರ್ಯದರ್ಶಿ ಅವರೊಂದಿಗೂ ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರು ಕೂಡ ಅಕ್ಕಿ‌ ಮತ್ತು ಗೋಧಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ನಿಲಯಗಳಿಗೆ ಪ್ರಥಮ ಆದ್ಯತೆಯಲ್ಲಿ‌ ಆಹಾರ ಸರಬರಾಜು ಪೂರೈಕೆ ಮಾಡುವಂತೆ‌ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಈ ಕುರಿತು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.‌

ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್​ಗಳಲ್ಲಿ ಅಕ್ಕಿ ಕೊರತೆಯಾದ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಿಂದ ಹಾಸ್ಟೆಲ್​ಗಳು ಅಕ್ಕಿ ಪಡೆದಿವೆ ಎಂದು ವರದಿಯಾಗಿತ್ತು. ಕಳೆದ ಎರಡು ಮೂರು ತಿಂಗಳ ಹಿಂದೆ ಹಾಸ್ಟೆಲ್​ಗಳಿಗೆ ಅಕ್ಕಿ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಅಕ್ಕಿ ಸಾಲ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ವರದಿಯಾದ ಬೆನ್ನಲ್ಲೇ ಹಿಂದುಳಿದ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಎಚ್ಚೆತ್ತುಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

More articles

Latest article