Sunday, September 8, 2024

ರದ್ದಾದ ಕಲಾಕ್ಷೇತ್ರ ನವೀಕರಣ | ಸಮಾಲೋಚನೆಯಲ್ಲಿ ಸಚಿವರ ಅಸಮಾಧಾನ

Most read

ಮೊದಲು ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸಿ ಅಧಿಕಾರಶಾಹಿಗಳಿಂದ ಮುಕ್ತಿ‌ ದೊರಕಿಸಿಕೊಡಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವಂತಹ ಯೋಜನೆ ರೂಪಿಸಿ. ಇಂತಹ ಕೆಲಸಗಳನ್ನು ಸಚಿವರಾಗಿ ಮಾಡಿದ್ದೇ ಆದರೆ ಸಾಂಸ್ಕೃತಿಕ ಕ್ಷೇತ್ರ ಸ್ಮರಿಸಿಕೊಳ್ಳುತ್ತದೆ. ರಂಗಚರಿತ್ರೆಯಲ್ಲಿ ಹೆಸರು ದಾಖಲಾಗುತ್ತದೆ. ಅಂತಹ ಮಹತ್ತರವಾದ ಕಾರ್ಯಗಳನ್ನು ರಂಗಭೂಮಿ ಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಂದ ನಿರೀಕ್ಷಿಸುತ್ತದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಸಭೆ ಕರೆಯಲು ಕಾರಣಗಳು

1. ಕಲಾಕ್ಷೇತ್ರವನ್ನು 24 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಸಂಸ್ಕೃತಿ ಇಲಾಖೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ ಸಂಗತಿ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಚರ್ಚೆಗೆ ಒಳಗಾಗಿ ಸರಕಾರಕ್ಕೆ ಮುಜುಗರ ತಂದಿತ್ತು.

2. 24 ಕೋಟಿಯಲ್ಲಿ ಹೊಸ ರಂಗಮಂದಿರವನ್ನೇ ಕಟ್ಟಬಹುದು, ಬರೀ ನವೀಕರಣ ಅನಗತ್ಯವೆಂದು  ರಂಗಕರ್ಮಿಗಳು ಈ ಯೋಜನೆಯನ್ನು ವಿರೋಧಿಸಿದ್ದರು.

3. ಜ.31 ರಂದು ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಎಂ.ಮರುಳಸಿದ್ದಪ್ಪನವರು 24 ಕೋಟಿಯ ಅನಗತ್ಯ ನವೀಕರಣ ವಿರೋಧಿಸಿ ಮುಖ್ಯಮಂತ್ರಿಗಳ ಗಮನ ಸೆಳೆದರು.

4. ತದನಂತರ ಮುಖ್ಯಮಂತ್ರಿಗಳು ಸಚಿವರನ್ನು ಕರೆದು ತರಾಟೆಗೆ ತೆಗೆದುಕೊಂಡರಂತೆ. 

ಇಷ್ಟೆಲ್ಲಾ ವಿದ್ಯಮಾನಗಳಿಂದ ವಿಚಲಿತರಾದ ಸಚಿವ ತಂಗಡಗಿಯವರು ಡ್ಯಾಮೇಜ್ ಕಂಟ್ರೋಲಿಗಾಗಿ ಈ ಸಭೆಯನ್ನು ಕರೆದಿದ್ದರು. ಹಾಗೂ ಆ ಸಮಾಲೋಚನಾ ಸಭೆಯಲ್ಲಿ ಮೂಡಿ ಬಂದ ಅಭಿಪ್ರಾಯಗಳು ಹೀಗಿವೆ-

1. 24 ಕೋಟಿಯ ನವೀಕರಣದ ಕಾಮಗಾರಿ ರವೀಂದ್ರ ಕಲಾಕ್ಷೇತ್ರಕ್ಕೆ ಅಗತ್ಯವಿಲ್ಲ.

2.  ಅತೀ ವೆಚ್ಚದ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ರಂಗಚಟುವಟಿಕೆಗಳಿಗೆ ಅನಿವಾರ್ಯವಲ್ಲ.

3. ತಿಂಗಳಿಗೆ ಎರಡೋ ಮೂರೋ ದಿನ ನಡೆಯುವ ಜಯಂತಿಗಳಂತಹ ಸರಕಾರಿ ಕಾರ್ಯಕ್ರಮಗಳಿಗಾಗಿ ಇಡೀ ಕಲಾಕ್ಷೇತ್ರವನ್ನು ಹವಾನಿಯಂತ್ರಿತ ಮಾಡುವುದು ಸೂಕ್ತವಲ್ಲ.

4. ಅಪಾರ ವೆಚ್ಚದಲ್ಲಿ ರಂಗಮಂದಿರವನ್ನು ಅತ್ಯಾಧುನೀಕರಣ ಮಾಡಿದಾಗ ಕೊಟ್ಟ ಅನುಕೂಲಕ್ಕೆ ತಕ್ಕಂತೆ ಕಲಾಕ್ಷೇತ್ರದ ದಿನಬಾಡಿಗೆಯನ್ನು ಹೆಚ್ಚಿಸಲಾಗುತ್ತದೆ. ಅದನ್ನು ಭರಿಸಿ ನಾಟಕ ಪ್ರದರ್ಶಿಸುವ ಶಕ್ತಿ ಕನ್ನಡ ರಂಗಭೂಮಿಗೆ ಇಲ್ಲ.

5. ಎಸಿ ನಿರ್ವಹಣೆ ಹಾಗೂ ಅದಕ್ಕೆ ಬೇಕಾಗುವ ಹೆಚ್ಚುವರಿ ವಿದ್ಯುತ್ ಅಥವಾ ಡೀಸಲ್ ಗಳಿಗಾಗುವ ವೆಚ್ಚವೂ ರಂಗತಂಡಗಳ ಜೇಬಿಗೆ ಭಾರವಾಗುತ್ತದೆ. ಆದ್ದರಿಂದ ಸೆಂಟ್ರಲ್ ಎಸಿ ಸಿಸ್ಟಂ ಸೂಕ್ತವಲ್ಲ.

6. ಕಲಾಕ್ಷೇತ್ರದ ಒಳಾಂಗಣದ ಎತ್ತರ 60 ಅಡಿಗೂ ಎತ್ತರವಿದೆ. ಮೇಲೆ ತಗಡಿನ ಹೊದಿಕೆ ಇದೆ. ಹೀಗಾಗಿ ಅದೆಂತಹ ಆಧುನಿಕ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವುದು ಅನುಮಾನ.

7. ಖುರ್ಚಿಗಳನ್ನು ಬದಲಾಯಿಸುವ ಬದಲು ಅಗತ್ಯ ರಿಪೇರಿ ಮಾಡಿಸಿದರೆ ಸಾಕು. ಬೇಕಾದರೆ ವಿಐಪಿ ಗಳು ಕೂಡುವ ಮುಂದಿನ ಮೂರು ಸಾಲಿನ ಖುರ್ಚಿಗಳನ್ನು ಹೊಸದಾಗಿ ಹಾಕಿಸಬಹುದು. ವಾಟರ್ ಪ್ರೂಫ್ ಖುರ್ಚಿಗಳ ಅಗತ್ಯವಿಲ್ಲ.

8. ಹಾಳಾಗಿರುವ ಬೆಳಕಿನ ಹಾಗೂ ಸೌಂಡ್ ಸಿಸ್ಟಂ ಪರಿಕರಗಳನ್ನು ರಿಪೇರಿ ಮಾಡಿಸಿ ಹಾಗೂ ಅಗತ್ಯವಿದ್ದರೆ ಬದಲಾಯಿಸಿ.

9. ಮಳೆಗಾಲದಲ್ಲಿ ಕಲಾಕ್ಷೇತ್ರದ ಚಾವಣಿ ಸೋರುತ್ತದೆ. ಅದನ್ನು ರಿಪೇರಿ ಮಾಡಿಸಿ. 

10. ಸಂಸ ಬಯಲುಮಂದಿರದ ಕಾರ್ಯಕ್ರಮಗಳ ಸೌಂಡ್ ಕಲಾಕ್ಷೇತ್ರದಲ್ಲಿ ಕೇಳಿಸದಂತೆ ವ್ಯವಸ್ಥೆ ಮಾಡಿ. 

11. ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಮಾಡಿದಾಗ ವೇದಿಕೆ ಮೇಲೆ ಅತಿಥಿಗಳಿಗೆ ಹಾಕಲು ಅಲಂಕೃತ ಖುರ್ಚಿಗಳನ್ನು ಖರೀದಿಸಿ ಕೊಡಿ.

12. ಕಲಾಕ್ಷೇತ್ರದ ಬಾಡಿಗೆಯನ್ನು ಪ್ರತಿ ವರ್ಷ 5% ಹೆಚ್ಚಿಸುವ ಇಲಾಖೆಯ ನಿರ್ಧಾರವನ್ನು ಕೈಬಿಟ್ಟು  ಮೊದಲಿದ್ದಂತೆ ರಾಜ್ಯಾದ್ಯಂತ ಏಕರೂಪದ ಕಡಿಮೆ ಬಾಡಿಗೆ ವ್ಯವಸ್ಥೆಯನ್ನು ಜಾರಿಗೆ ಮಾಡಿ.

13. ಕಲಾಕ್ಷೇತ್ರದ ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಇದ್ದು ಕೂಡಲೇ ನೇಮಕಾತಿ ಮಾಡಲು ವ್ಯವಸ್ಥೆ ಮಾಡಿ.

ಇಷ್ಟು ಅಭಿಪ್ರಾಯಗಳ ಜೊತೆಗೆ ಕಲಾಕ್ಷೇತ್ರದ ಸಮಸ್ಯೆಗಳ ಹೊರತಾದ ಕೆಲವು ಸಂಗತಿಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಯ್ತು. 

ಕಲಾಕ್ಷೇತ್ರದ ಸಮಸ್ಯೆಗಳ ಹೊರತಾದ ಕೆಲವು ಸಂಗತಿಗಳು

1. ಬೆಂಗಳೂರಿನಲ್ಲಿ ಹಲವಾರು ಖಾಸಗಿ ಕಿರು‌ ರಂಗಮಂದಿರಗಳಿವೆ. ಕಲಾಸೇವೆಯಲ್ಲಿ ನಿರತವಾಗಿರುವ ಇಂತಹ ಆಪ್ತ ರಂಗಮಂದಿರಗಳಿಗೂ ಬಿಬಿಎಂಪಿ ಯು ಕಮರ್ಷಿಯಲ್ ಟ್ಯಾಕ್ಸ್ ವಿಧಿಸುತ್ತಿದೆ. ಇದರಿಂದ ರಿಯಾಯಿತಿ ಕೊಡಿಸುವ ವ್ಯವಸ್ಥೆ ಮಾಡಿ.

2. ದುಬಾರಿ ವೆಚ್ಚದಲ್ಲಿ ಕಲಾಕ್ಷೇತ್ರವನ್ನು ನವೀಕರಣ ಮಾಡುವ ಬದಲಾಗಿ ಬಡಾವಣೆಗಳಲ್ಲಿ ಸುಸಜ್ಜಿತ ಕಿರು ರಂಗಮದಿರಗಳನ್ನು ನಿರ್ಮಿಸಿ ಕೊಡಿ. 

3. ಕಳೆದ ಸರಕಾರದ ಅವಧಿಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಂಗಮಂದಿರ ಕಟ್ಟಲು ನಿರ್ಧರಿಸಲಾಗಿದ್ದು ಜಾಗವನ್ನೂ ಗುರುತಿಸಿ 80 ಕೋಟಿ ಹಣವನ್ನೂ ಮೀಸಲಿರಿಸಲಾಗಿದೆ. ನಾಲ್ಕು ರಂಗಮಂದಿರಗಳ ಕಾಮಗಾರಿ ಆರಂಭಿಸಿ.

4. ಅಕಾಡೆಮಿ, ಪ್ರಾಧಿಕಾರ ಮತ್ತು ರಂಗಾಯಣಗಳಿಗೆ ಕೂಡಲೇ ನೇಮಕಾತಿ ಮಾಡಿ.

5. ಆದೇಶವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಸಾಂಸ್ಕೃತಿಕ ನೀತಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಟಾನಕ್ಕೆ ತನ್ನಿ. 

( ಈ ಮೇಲಿನ ಮೂರು ಬೇಡಿಕೆಗಳಿಗೆ ಸಚಿವರು ಉತ್ತರಕೊಡಲಿಲ್ಲ. ಕಡೆಯ ಎರಡು ಬೇಡಿಕೆಗಳಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಿಕೆಯ ಉತ್ತರ ನೀಡಿದರು)

ಸಮಾಲೋಚನಾ ಸಭೆಯ ಅನಿಸಿಕೆಗಳಿಗೆ  ಸಚಿವರು ವ್ಯಕ್ತಪಡಿಸಿದ ಅಭಿಪ್ರಾಯಗಳು

1. ಕಲಾಕ್ಷೇತ್ರದ ನವೀಕರಣ ಕುರಿತು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ಹಾಗೂ ಜಾಲತಾಣಗಳ ಚರ್ಚೆಗಳನ್ನು ಓದಿ ಅತ್ಯಂತ ಬೇಸರವಾಯ್ತು. 

2. ನನ್ನ ಅಧಿಕಾರದ ಅವಧಿಯಲ್ಲಿ ಹೆಸರು ಉಳಿಯುವಂತಹ ಏನಾದರೂ ಕೆಲಸವನ್ನು ಮಾಡಬೇಕೆಂದು ಈ ಯೋಜನೆಯ ಹಿಂದಿನ ಉದ್ದೇಶವಾಗಿತ್ತು. 

3. ಈ ಸಭೆಯಲ್ಲಿ ಇರುವವರೆಲ್ಲಾ ಒಪ್ಪಿದ್ದರೆ ಕಲಾಕ್ಷೇತ್ರದ ನವೀಕರಣ ಕೆಲಸ ಮಾಡಿಸೋಣ ಎಂದುಕೊಂಡಿದ್ದೆ. ಆದರೆ ಬಹುತೇಕರು ಹವಾನಿಯಂತ್ರಣ ವ್ಯವಸ್ಥೆ ಬೇಡ, ಖುರ್ಚಿ ಬದಲಾವಣೆ ಬೇಕಾಗಿಲ್ಲ ಎಂದು ಹೇಳುತ್ತಿರುವುದರಿಂದ ನಾನು ಈ ನವೀಕರಣ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಿ ಕಲಾಕ್ಷೇತ್ರವನ್ನು ಯಥಾಸ್ಥಿತಿಯಲ್ಲಿ ಬಿಡುತ್ತೇನೆ.

4. ಮಾಡಿದರೆ ಪೂರ್ತಿಯಾಗಿ ನವೀಕರಣ ಮಾಡಿಸುವೆ. ಅದು ಬೇಡ ಇದು ಬೇಡ ಎಂದರೆ ಇಡೀ ಯೋಜನೆ ನಿಲ್ಲಿಸುವೆ.

5. ಕೆಲಸ ಮಾಡಿ ವಿರೋಧ ಕಟ್ಟಿಕೊಳ್ಳುವ ಬದಲಾಗಿ ಕೆಲಸ ಮಾಡದೇ ವಿರೋಧ ಕಟ್ಟಿಕೊಳ್ಳುವುದೇ ಒಳ್ಳೆಯದು. 

ಇದು ಸಚಿವರ ಮಾತುಗಳ ಒಟ್ಟು ಅಭಿಪ್ರಾಯದ ಸಂಕ್ಷಿಪ್ತ ರೂಪ. ಆದರೆ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದವು.

ಹಾಗೆಯೇ ಉಳಿದ ಪ್ರಶ್ನೆಗಳು..

1. ಸಾರ್ವಜನಿಕ ಕೆಲಸದಲ್ಲಿರುವ ನಿಮಗೆ ಪ್ರತಿರೋಧಗಳಿಂದ ಬೇಸರ ಯಾಕೆ? ಅಭಿಪ್ರಾಯಬೇಧಗಳೇ ಇರಬಾರದೇ? 

2. ನಿಮ್ಮ ಸಹೋದರರು ಗುತ್ತಿಗೆದಾರರಾಗಿದ್ದು ಸುಳ್ಳಲ್ಲವಲ್ಲವೇ? ನೀವು ಈ ನವೀಕರಣ ಯೋಜನೆಗೆ ಅತೀವ ಆಸಕ್ತಿ ವಹಿಸಿದ್ದೂ ಸತ್ಯ ಅಲ್ಲವೇ? ಹೀಗಿರುವಾಗ, ಕಲಾಕ್ಷೇತ್ರದ ನವೀಕರಣಕ್ಕೆ 24 ಕೋಟಿ ಎನ್ನುವುದು ಸಂದೇಹಕ್ಕೆ ಕಾರಣ ಆಗುತ್ತದಲ್ಲವೇ? 

3. ಹೊಸ ರಂಗಮಂದಿರ ನಿರ್ಮಿಸಿಕೊಟ್ಟರೆ ನಿಮ್ಮ ಮಹತ್ಕಾರ್ಯವನ್ನು  ಭವಿಷ್ಯದಲ್ಲಿ ಸ್ಮರಿಸಬಹುದು. ಆದರೆ ನವೀಕರಣ ಮಾಡಿಸುವುದರಿಂದ ಯಾರು ತಾನೆ ನೆನಪಿಸಿಕೊಳ್ಳಲು ಸಾಧ್ಯ? ಈಗಾಗಲೇ ಮೂರು ಸಲ ಕಲಾಕ್ಷೇತ್ರ ನವೀಕರಣ ಮಾಡಿಸಲಾಗಿದೆಯಾದರೂ ಯಾರು ಮಾಡಿಸಿದವರು ಎಂಬುದು ದಾಖಲಾಗುವಂತಹುದಲ್ಲ.

4. ಹೋಗಲಿ, ಇಷ್ಟು ಖರ್ಚು ಮಾಡಿ ನವೀಕರಣ ಮಾಡಿ ಬಾಡಿಗೆ ಹೆಚ್ಚಿಸಿದರೆ ರಂಗಚಟುವಟಿಕೆಗಳನ್ನು ಮಾಡುವುದಾದರೂ ಹೇಗೆ? ನೀವು ಹೆಚ್ಚಿಸದೇ ಹೋದರೂ ಮುಂದಿನ ಸರಕಾರದವರು ಬಾಡಿಗೆ ಹೆಚ್ಚಿಸಿದರೆ ಯಾರನ್ನು ಕೇಳುವುದು? 

5. ಮಾಡಿಸಿದರೆ ಸಂಪೂರ್ಣ ನವೀಕರಣ ಮಾಡಿಸುವೆ ಇಲ್ಲವಾದರೆ ಇಡೀ ಯೋಜನೆಯನ್ನೇ ಕೈಬಿಡುವೆ ಎಂದು ಹೇಳುತ್ತಿದ್ದೀರಿ. ಈ ಮಾತಿನ ಹಿಂದಿನ ಮರ್ಮ ಏನು? ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯವಿರುವ ಲೈಟ್ ಮತ್ತು ಸೌಂಡ್ ವ್ಯವಸ್ಥೆ ಮಾಡಿ ಕೊಡುವುದು ಸಂಸ್ಕೃತಿ ಇಲಾಖೆಯ ಕರ್ತವ್ಯ ಅಲ್ಲವೇ? ಇಡೀ ಕಲಾಕ್ಷೇತ್ರದ ಸಮರ್ಪಕ ನಿರ್ವಹಣೆಯ ಜವಾಬ್ದಾರಿ ನಿಮ್ಮದೇ ಇಲಾಖೆಯದ್ದಲ್ಲವೇ? ಹಾಗಾದರೆ ನಿಮ್ಮ ಹೊಣೆಗಾರಿಕೆಯಿಂದ ಹೇಗೆ ಜಾರಿಕೊಳ್ಳುತ್ತೀರಿ. “ಸಂಸ್ಕೃತಿ ಇಲಾಖೆ ಇರುವುದು ಲಾಭಕ್ಕಾಗಿ ಅಲ್ಲಾ ಸೇವೆಗಾಗಿ” ಅಂತಾ ಹೇಳುವ ನೀವು ಮೊದಲು ಕಲಾಕ್ಷೇತ್ರದ ಅಗತ್ಯಗಳಿಗೆ ಸ್ಪಂದಿಸಲೇಬೇಕಲ್ಲವೇ? ಸಮಸ್ಯೆಗಳನ್ನು ಪರಿಹರಿಸಲೇ ಬೇಕಲ್ಲವೇ? ಅದು ಸಚಿವರಾಗಿ ನಿಮ್ಮ ಕರ್ತವ್ಯ ಆಗಿದೆಯಲ್ಲವೇ? 

6. ಹೋಗಲಿ, 24 ಕೋಟಿಯ ನವೀಕರಣ ಯೋಜನೆಯ ಅಂದಾಜು ಖರ್ಚು ವೆಚ್ಚಗಳ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವೇ? 

7. ನವೀಕರಣದ ನೆಪದಲ್ಲಿ ಮತ್ತೆ ಒಂದೆರಡು ವರ್ಷ ಕಲಾಕ್ಷೇತ್ರ ಹಾಗೂ ಸಂಸ ಬಯಲು ರಂಗಮಂದಿರವನ್ನು ಮುಚ್ಚಿದರೆ ರಂಗಚಟುವಟಿಕೆಗಳು ಕುಂಠಿತವಾಗುವುದಿಲ್ಲವೆ? ಅದಕ್ಕೆ ಇಲಾಖೆಯ ಪರ್ಯಾಯ ವ್ಯವಸ್ಥೆಗಳೇನಿವೆ? 

8. ಎಂಟು ತಿಂಗಳಾದರೂ ಅಕಾಡೆಮಿ, ಪ್ರಾಧಿಕಾರ, ರಂಗಾಯಣಗಳಿಗೆ ನೇಮಕಾತಿ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿರುವ ಇಲಾಖೆ ಸಚಿವರಾದ ನಿಮಗೆ ಕಲಾಕ್ಷೇತ್ರದ ನವೀಕರಣದ ಮಾಡಲು ಯಾಕೆ ಇಂತಹ ಅತೀವ ಆಸಕ್ತಿ?

9. ಕಲಾಕ್ಷೇತ್ರದ ನಿರ್ವಹಣೆಗೆ ಬೇಕಾದಷ್ಟು ಸಿಬ್ಬಂದಿ ಇಲ್ಲ, ಇರುವ ಸಿಬ್ಬಂದಿಗಳಿಗೆ ಆರು ತಿಂಗಳಾದರೂ ಸಂಬಳ ಕೊಟ್ಟಿಲ್ಲ. ಕಲಾಸಂಸ್ಥೆಗಳಿಗೆ ಅನುದಾನ ಮಂಜೂರಾಗಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜನೆ ಕೊಡುತ್ತಿಲ್ಲ. ಇವೆಲ್ಲವೂ ಸಂಸ್ಕೃತಿ ಸಚಿವಾಲಯದ ಮುಂಚೂಣಿ ಆದ್ಯತೆಗಳಲ್ಲವೇ? ಕಲಾಕ್ಷೇತ್ರ ನವೀಕರಣಕ್ಕಿಂತಲೂ ಇವೆಲ್ಲಾ ಮೊದಲು ಮಾಡಬೇಕಾದ ಕೆಲಸಗಳಲ್ಲವೇ?. 

10. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಮಲ್ಲಿಗೆ ಅಲಂಕಾರ ಬೇಕೆ? ಮೊದಲು ರಂಗಭೂಮಿಯ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ನೀವು ಮತ್ತು ನಿಮ್ಮ ಸಚಿವಾಲಯದ ಅಧಿಕಾರಿಗಳು ಮಾಡಿ ತೋರಿಸಿ. ಎಲ್ಲಾ ಬೇಸಿಕ್ ಅಗತ್ಯಗಳು ಪೂರೈಸಿದ ಮೇಲೆ ರಂಗಮಂದಿರಕ್ಕೆ ಹವಾನಿಯಂತ್ರಣ ವ್ಯವಸ್ಥೆ ಮಾಡಿ ವಾಟರ್ ಪ್ರೂಫ್ ಕುರ್ಚಿ ಅಳವಡಿಸುವಿರಂತೆ. 

ತುಂಬಾ ಅಗತ್ಯವಾದವುಗಳನ್ನು ನಿರ್ಲಕ್ಷಿಸಿ ಅನಗತ್ಯ ಆಡಂಬರದ ಯೋಜನೆಗಳನ್ನು ರೂಪಿಸಿದಾಗಲೇ ಅದರ ಹಿಂದಿನ ಉದ್ದೇಶದ ಮೇಲೆ ಸಂದೇಹ ಹೆಚ್ಚಾಗುತ್ತದೆ. ಸಂದೇಹ ವ್ಯಕ್ತಪಡಿಸಿ ಪತ್ರಿಕೆಗಳಲ್ಲಿ ಬರೆದರೆ ನಿಮಗೆ ಬೇಸರವಾಗುತ್ತದೆ. ಹಾಗಾಗಬಾರದು ಎಂದರೆ ಮೊದಲು ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸಿ ಅಧಿಕಾರಶಾಹಿಗಳಿಂದ ಮುಕ್ತಿ‌ ದೊರಕಿಸಿಕೊಡಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವಂತಹ ಯೋಜನೆ ರೂಪಿಸಿ. ಇಂತಹ ಕೆಲಸಗಳನ್ನು ಸಚಿವರಾಗಿ ಮಾಡಿದ್ದೇ ಆದರೆ ಸಾಂಸ್ಕೃತಿಕ ಕ್ಷೇತ್ರ ಸ್ಮರಿಸಿಕೊಳ್ಳುತ್ತದೆ. ರಂಗಚರಿತ್ರೆಯಲ್ಲಿ ಹೆಸರು ದಾಖಲಾಗುತ್ತದೆ. ಅಂತಹ ಮಹತ್ತರವಾದ ಕಾರ್ಯಗಳನ್ನು ರಂಗಭೂಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಂದ ನಿರೀಕ್ಷಿಸುತ್ತದೆ.

ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಇದನ್ನೂ ಓದಿ-http://ರವೀಂದ್ರ ಕಲಾಕ್ಷೇತ್ರದ ಆಧುನೀಕರಣದ ಹಿಂದಿರುವ ಹಕೀಕತ್ತು…https://kannadaplanet.com/the-truth-behind-the-modernization-of-rabindra-kalakshetra/

More articles

Latest article