Saturday, July 27, 2024

ದಕ್ಷಿಣದ ಹಣ ಉತ್ತರಕ್ಕೆ | ಅಭಿವೃದ್ಧಿಗೋ? ರಾಜಕೀಯಕ್ಕೊ?

Most read

ಯುಪಿಯಲ್ಲಿ ಶೇ79.73 ಹಾಗೂ ಬಿಹಾರ್‌ನಲ್ಲಿ ಶೇ.82.69 ಹಿಂದೂಗಳಿದ್ದಾರೆ. ಆದರೆ ಅವರ ಯಾವ ಸಮಸ್ಯೆಗಳ ನಿರ್ಮೂಲನೆಯೂ ಆಗಿಲ್ಲ. ಕರ್ನಾಟಕದ ಜನರಿಗೆ ಅನುದಾನದಿಂದ ಅನ್ಯಾಯವಾದರೆ ಉತ್ತರದ ಯುಪಿ ಬಿಹಾರ್‌ ಜನರಿಗೆ ಧರ್ಮ, ಜಾತಿ, ದೇವರು, ಮಂದಿರದಿಂದ ಅನ್ಯಾಯ ಆಗುತ್ತಿದೆ!  – ಆಕಾಶ್‌.ಆರ್‌.ಎಸ್, ಉಪನ್ಯಾಸಕ

ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಬಿಜೆಪಿಯನ್ನು ಪ್ರತ್ಯೇಕ ರಾಷ್ಟ್ರ ಕೂಗು ವಿಚಲಿತವಾಗುವಂತೆ ಮಾಡಿದೆ. ರಾಮಮಂದಿರ, ಕೆರೆಗೋಡು ಘಟನೆ, ಸಿ.ಟಿ.ರವಿ ಹೇಳಿಕೆ, ಇತ್ತ ಮಂಡ್ಯ ಮತ್ತು ಹಾಸನವನ್ನು ಬಿಜೆಪಿ ತನ್ನ ವಶ ಪಡೆಯುವ ಎಲ್ಲಾ ತಂತ್ರಗಾರಿಕೆ ನಡೆಸುತ್ತಿದೆಯಷ್ಟೆ. ಆದರೆ ಈಗ ಅದೆಲ್ಲವೂ  ಮರೆಯಾಗುವಂತಿದ್ದು, ಇಷ್ಟು ವರ್ಷದಲ್ಲಿನ ಮೋದಿ ಸರ್ಕಾರವು ದಕ್ಷಿಣ ರಾಜ್ಯಗಳಿಗೆ ಮಾಡಿದ ಅನುದಾನದ ಮೋಸ ಬಟಾ ಬಯಲಾಗಿ ಮುನ್ನೆಲೆಗೆ ಬರುತ್ತಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಭಾವನಾತ್ಮಕ ವಿಷಯಗಳ ಮೂಲಕ ಚುನಾವಣೆಗೆ ಧುಮ್ಮುಕ್ಕುತ್ತಿದ್ದು, ಆ ಮೂಲಕ ಇಡೀ ದೇಶದ ಗಮನವೆಲ್ಲಾ ತನ್ನತ್ತ ಸೆಳೆದುಕೊಂಡು ರಾಜಕೀಯ ನಡೆಸುತ್ತಿತ್ತು. ಆದರೆ ಈಗ ಕರ್ನಾಟಕ ಸೇರಿದಂತೆ ದಕ್ಷಿಣದ ಅನೇಕ ರಾಜ್ಯಗಳಿಗೆ ಕೇಂದ್ರ ಸರ್ಕಾರದ ವಂಚನೆ ಬಯಲಾಗಿದ್ದು, ರಾಜ್ಯದ ಜನರು ಎತ್ತಿರುವ ನೈತಿಕ ಪ್ರಶ್ನೆಗಳಿಗೆ ಬಿಜೆಪಿಯ ಹೈಕಮಾಂಡ್ ತಡವರಿಸುವಂತಾಗಿದೆ. ಇದಲ್ಲದೆ ನಾಡಿನ ಜನರ ಜತೆಗೆ ರಾಜ್ಯ ಸರ್ಕಾರವು ಕೈ ಜೋಡಿಸಿ ದೆಹಲಿ ಚಲೋ ಕರೆ ನೀಡಿ ಯಶಸ್ವಿಯಾಗಿದೆ. ಇನ್ನು ಸಂಸದ ಡಿ.ಕೆ.ಸುರೇಶ್ ನಮಗೆ ನೀಡಬೇಕಾದ ಅನುದಾನವು ಸರಿಯಾಗಿ ತಲುಪದಿದ್ದಲ್ಲಿ ಪ್ರತ್ಯೇಕ ರಾಷ್ಟ್ರಕ್ಕೆ ಮನವಿ ಮಾಡಬೇಕಾಗುತ್ತದೆ ಎಂಬ ಹೇಳಿಕೆಯೂ ಕೂಡ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. 

ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಮಹಾರಾಷ್ಟ್ರ (4.59 ಲಕ್ಷ ಕೋಟಿ), 2 ನೇ ಸ್ಥಾನದಲ್ಲಿ ಕರ್ನಾಟಕ (4.30 ಲಕ್ಷ ಕೋಟಿ) ಇದೆ. ಆದರೆ  ಕೇಂದ್ರದ ಮೋದಿ ಸರ್ಕಾರದ ಕಣ್ಣು ಮಾತ್ರ ಕರ್ನಾಟಕದ ತೆರಿಗೆ ಮೇಲೆ ಬಿದ್ದಿದ್ದು,  ಅನುದಾನ ಸರಿಯಾದ ಮಟ್ಟದಲ್ಲಿ ಕೊಡದೆ ರಾಜ್ಯವನ್ನು ಅಭಿವೃದ್ಧಿಯಿಂದ ದೂರ ಉಳಿಸುವ ಪ್ರಯತ್ನ ಮಾಡುತ್ತಿದೆ.

ಕರ್ನಾಟಕವು ಕಟ್ಟುವ 4.30 ಲಕ್ಷ ಕೋಟಿ ತೆರಿಗೆಯಲ್ಲಿ 44,485 ಕೋಟಿ ಅನುದಾನವನ್ನು ನೀಡುತ್ತಿದೆ. ಮುಂಚೆಯಿಂದಲೂ ಕೇಂದ್ರ ಸರ್ಕಾರವೂ ಶೇ4.72 ರಷ್ಟು ಅನುದಾನವನ್ನು ನೀಡುವ ಮೂಲಕ ಮೋಸ ಮಾಡುತ್ತಲೆ ಬರುತ್ತಿತ್ತು, ಆದರೆ ಈಗ ಅದನ್ನು15 ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಸುವ ಮೂಲಕ ಕರ್ನಾಟಕಕ್ಕೆ ಮತ್ತೆ ಮೋಸ ಮಾಡಿದೆ. ಇದರಿಂದಾಗಿ 62.098ಕೋಟಿ ಕೊರತೆ ಉಂಟಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರವು ಅನುದಾನದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತದೆ ಎಂಬುದು ಸ್ವಷ್ಟವಾಗಿ ಗೋಚರವಾಗುತ್ತಿದೆ. ಅನುದಾನದ ಸಿಂಹಪಾಲನ್ನು ದೆಹಲಿ ದೊರೆಗಳು ಯುಪಿ (2,18,819 ಕೋಟಿ), ಬಿಹಾರ್ (1,22,685 ಕೋಟಿ) ರಾಜಸ್ಥಾನ (73,504 ಕೋಟಿ), ಮಧ್ಯಪ್ರದೇಶ (95,752 ಕೋಟಿ) ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ 100 ರೂ. ಆದರೆ ಕರ್ನಾಟಕಕ್ಕೆ ಮರಳಿ ಬರುತ್ತಿರುವುದು 13 ರೂ. ಅದೇ ಯುಪಿ, ಬಿಹಾರ್ ಗೆ 33 ರೂ. ಬರುತ್ತಿದೆ. ಹಾಗಾದರೆ ಬಿಜೆಪಿಗೆ ಕರ್ನಾಟಕದ  ಅವಶ್ಯಕತೆವಿಲ್ಲವೇ?. ಅದರ ಅಭಿವೃದ್ಧಿಗೆ ಸಹಕಾರವಿಲ್ಲವೇ?. ಕರ್ನಾಟಕವನ್ನು ಕಡೆಗಣಿಸಿ ಉತ್ತರದ ಮೇಲೆ ಯಾಕಿಷ್ಟು ಒಲವು?

ಬಿಜೆಪಿ ಕರ್ಮ ಭೂಮಿಗೆ ಅನುದಾನ!

ಸ್ವಾತಂತ್ರ್ಯಾನಂತರದಲ್ಲಿ ಆರ್‌ ಎಸ್‌ ಎಸ್ ಸಂಘಟನೆಯಿಂದ ರೂಪುಗೊಂಡ ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷ ನಂತರದಲ್ಲಿ ಭಾರತೀಯ ಜನತಾ ಪಕ್ಷವಾಗಿ ಮಾರ್ಪಡುತ್ತಾ ಉತ್ತರ ಭಾರತದಲ್ಲಿ ಮೆಲ್ಲಗೆ ತಮ್ಮ ಸಿದ್ಧಾಂತಗಳನ್ನು ಸಿಂಪಡಿಸಿಕೊಂಡು ಬಂದಿತು. ಅದನ್ನು ಇನ್ನಷ್ಟು ಬಲವಾಗಿ ಆ ನೆಲದಲ್ಲಿ ಬೇರು ಬೀಡುವಂತೆ ಮಾಡಿದ್ದು ಬಾಬರಿ ಮಸೀದಿಯ ಧ್ವಂಸ ಘಟನೆ. ಅದನ್ನು ಹಿಂದೂ- ಮುಸ್ಲಿಂ ಎಂಬ ಧರ್ಮಗಳ ನಡುವೆ ಒಡೆದು ಆಳುವ ನೀತಿಯನ್ನು ಅನುಸರಿಸಿ ಉತ್ತರ ಭಾಗದಲ್ಲಿ ತಮ್ಮ ಪಕ್ಷದ ಬಾವುಟವನ್ನು ಬಲವಾಗಿ ನೆಟ್ಟರು. ಅದರ ಫಲವಾಗಿಯೇ ಬಿಜೆಪಿ ಕೇಂದ್ರದಲ್ಲಿ 10 ವರ್ಷಗಳ ಕಾಲ ಸಂಘಪರಿವಾದ ವ್ಯಕ್ತಿ ಪ್ರಧಾನಿಯಾಗಿ ಕೂರುವಂತೆ ಮಾಡಿತು. ಇದರಿಂದ ಬಿಜೆಪಿಗೆ ಉತ್ತರ ಭಾರತವೇ ಕರ್ಮ ಭೂಮಿ.

ಉತ್ತರಕ್ಕೆ ಹೋಲಿಸಿದರೆ ದಕ್ಷಿಣದ ರಾಜಕೀಯ ಬಿಜೆಪಿಗೆ ಕಬ್ಬಿಣದ ಕಡಲೆ. ತನ್ನ ಪಾರುಪತ್ಯ ಸಾಧಿಸಿ ಇಡೀ ಉತ್ತರವನ್ನು ಕೇಸರಿಮಯ ಮಾಡಿ ತಾನು ಹೇಳುವಂತೆ ಜನರನ್ನು ಕುಣಿಯುವ ಸ್ಥಿತಿಗೆ ಬಿಜೆಪಿ ಹಾಗೂ ಸಂಘ ಪರಿವಾರ ತಂದು ನಿಲ್ಲಿಸಿದಂತೆ ದಕ್ಷಿಣದಲ್ಲಿ ತುಸು ಕಷ್ಟವೇ.  ಇನ್ನೂ ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಜನ ಮೋದಿ, ಶಾ, ಯೋಗಿಯಂತಹ ಕಟ್ಟರ್ ಹಿಂದೂತ್ವವಾದಿಗಳನ್ನು ನಿರ್ದಯವಾಗಿ ಜರೆದಿದ್ದಾರೆ, ಹಿಮ್ಮೆಟ್ಟಿಸಿದ್ದಾರೆ. ಇದಕ್ಕಾಗಿಯೇ ಈಗ ಕೇಂದ್ರ ಅನುದಾನ ಕಡಿತವನ್ನು ಮಾಡುವ ಮೂಲಕ ರಾಜಕೀಯದ ಹೊಸ ಆಟ ಆರಂಭ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಬಿಜೆಪಿಯ ಸಂಸದರಾಗಲಿ, ನಾಯಕರಾಗಲಿ ಅನುದಾನ ವಂಚನೆ ಬಗ್ಗೆ ಧ್ವನಿ ಎತ್ತದೆ  ಕೇಂದ್ರಕ್ಕೆ ಬಲ ತುಂಬುತ್ತಿರುವುದು ಕೂಡ ಎದ್ದು ಕಾಣುತ್ತಿದೆ. ಇನ್ನು ಉತ್ತರ ಭಾರತ ಬಿಜೆಪಿಗೆ ರಾಜಕೀಯ ಜೀವಾಳವಾಗಿದ್ದು, ಅಲ್ಲಿನ ರಾಜ್ಯಗಳಲ್ಲಿ ಅಧಿಕಾರ ಪಡೆಯುವ ಸೇಫ್ ಝೋನ್ ಪಾಲಿಟಿಕ್ಸ್ ಪ್ಲೇಸನ್ನಾಗಿ ಅವರು ಮಾಡಿಕೊಂಡಿದ್ದಾರೆ.

ದಕ್ಷಿಣದ ಹಣ ಉತ್ತರಕ್ಕೆ, ಅಭಿವೃದ್ಧಿಗೋ? ರಾಜಕೀಯಕ್ಕೊ?.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಗೆಲುವು ಬಿಜೆಪಿಗೆ ಅವಶ್ಯಕವಿದೆ. ಆ ಮೂಲಕ ಅನುದಾನದ ಹೊಸ ದಾಳವನ್ನು  ಉತ್ತರ ಪ್ರದೇಶ ಹಾಗೂ ಬಿಹಾರ್‌ ರಾಜ್ಯಗಳಿಗೆ ಉರುಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಸ್ಥಾನ ಇರುವ ರಾಜ್ಯವೆಂದರೆ ಯುಪಿ (80) ಹಾಗೂ ಬಿಹಾರ್ (40). ಹಾಗಾಗಿ ಕರ್ನಾಟಕಕ್ಕೆ ಅನುದಾನದಲ್ಲಿ ಮೋಸವಾದರೂ ಪರವಾಗಿಲ್ಲ ಚುನಾವಣೆ ನಮ್ಮ ಗುರಿ ಎಂಬ ಸ್ವಷ್ಟ ಚಿತ್ರಣವನ್ನು ಅದು ನೀಡಿದೆ. ಇಂತಹ ನೀತಿಯನ್ನು ಅನುಸರಿಸುವುದರ ಮೂಲಕ ಬಿಜೆಪಿಯು ರಾಜಕೀಯ ಹಸಿವನ್ನು ಹೊರಹಾಕುತ್ತಿದ್ದು, ಅಭಿವೃದ್ಧಿ ಪ್ರಶ್ನೆಯನ್ನು ಮರೆಮಾಚುತ್ತಿದೆ. 

“state and union territories of india ranked according to poverty  2022, NITI Ayoga, sustainable development goals dashboard and RBI hand book of statistics on india economy tendulkar method on mixed reference period 2023’’  ವರದಿ ಪ್ರಕಾರ ಯುಪಿ (ಶೇ.11.01), ಬಿಹಾರ್ (ಶೇ.26.59), ಮಧ್ಯಪ್ರದೇಶದಲ್ಲಿ (ಶೇ.15.01) ಇದ್ದರೆ, ಕರ್ನಾಟಕದಲ್ಲಿ (ಶೇ5.67), ಕೇರಳ (ಶೇ.0.48), ತಮಿಳುನಾಡು (ಶೇ.1.43)ರಷ್ಟು ಬಡತನ ಇದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ “ central bureau of health intelligence” ವರದಿ ಪ್ರಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮೀಸಲಿಟ್ಟ ಹಾಸಿಗೆಗಳಲ್ಲಿ ಯುಪಿ (31,742), ಬಿಹಾರ್‌ (7,789) ಇದ್ದರೆ, ಕರ್ನಾಟಕ (1,42,250), ಕೇರಳ (39,551 ), ತಮಿಳುನಾಡು(52,751) ಹಾಸಿಗೆ ಇವೆ. ಇವೆಲ್ಲವನ್ನೂ ಗಮನಿಸಿದರೆ ಯುಪಿ ಮತ್ತು ಬಿಹಾರದಲ್ಲಿ ಬಡತನವಾಗಲಿ, ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ಕೊರತೆಯಾಗಲಿ ನೀಗಿಲ್ಲ. ಅಂದರೆ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಯುಪಿ, ಬಿಹಾರ್‌ದಂತಹ ರಾಜ್ಯಗಳ ಚುನಾವಣೆಯ ಪರಕರಗಳಾಗಿ ಗೋಚರಿಸುತ್ತಿದೆಯೇ ಹೊರತು ಅಭಿವೃದ್ಧಿಗಲ್ಲವೆಂದು ಸ್ವಷ್ಟವಾಗಿ ತಿಳಿಯುತ್ತಿದೆ.  ಇವರು ಸದಾ ಹಿಂದೂತ್ವ, ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎನ್ನುವವರು. ಯುಪಿಯಲ್ಲಿ ಶೇ.79.73 ಹಾಗೂ ಬಿಹಾರ್‌ನಲ್ಲಿ ಶೇ.82.69 ಹಿಂದೂಗಳಿದ್ದಾರೆ. ಆದರೆ ಅವರ ಯಾವ ಸಮಸ್ಯೆಗಳ ನಿರ್ಮೂಲನೆಯೂ ಆಗಿಲ್ಲ. ಕರ್ನಾಟಕದ ಜನರಿಗೆ ಅನುದಾನದಿಂದ ಅನ್ಯಾಯವಾದರೆ ಉತ್ತರದ ಯುಪಿ ಬಿಹಾರ್‌ ಜನರಿಗೆ ಧರ್ಮ, ಜಾತಿ, ದೇವರು, ಮಂದಿರದಿಂದ ಅನ್ಯಾಯ ಆಗುತ್ತಿದೆ! 

ಯುಪಿ, ಬಿಹಾರ್‌ ಜನರು ಇಂತಹ ವ್ಯವಸ್ಥೆಯಿಂದ ಆಚೆಗೆ ಬರಬೇಕು, ಕರ್ನಾಟಕಕ್ಕೆ  ಬರಬೇಕಾದ ಅನುದಾನ ಬಂದೇ ತೀರಬೇಕು.

ಆಕಾಶ್‌.ಆರ್‌.ಎಸ್.

ಉಪನ್ಯಾಸಕ

More articles

Latest article