ನ್ಯಾಯ ಇಲ್ಲಿ ಮರೀಚಿಕೆ; ಎಲ್ಲಾ ಆರೋಪಿಗಳು ಖುಲಾಸೆ

Most read

ಮಾನ್ಯ ಸಿದ್ದರಾಮಯ್ಯನವರ ಸರಕಾರವಾದರೂ ಈ ಹಿಂಸಾವಾದಿ ಹಿಂದುತ್ವವಾದಿ ಪಡೆಗೆ ಬುದ್ಧಿ ಕಲಿಸಲು ಮೇಲ್ಮನವಿ ಸಲ್ಲಿಸುವ ವ್ಯವಸ್ಥೆ ಮಾಡಬೇಕಿದೆ. ಆಪಾದಿತರನ್ನು ಅಪರಾಧಿಗಳು ಎಂದು ಸಾಬೀತುಪಡಿಸಿ ಜೈಲಿಗೆ ಕಳುಹಿಸಬೇಕಿದೆ. ಹಾಗೆ ಮಾಡದೇ ಹೋದರೆ ಈ ಮತಾಂಧರಿಗೆ ಕಾನೂನಿನ ಕುರಿತು ಭಯವೇ ಇಲ್ಲವಾಗುತ್ತದೆ. ಅನೈತಿಕ ಪೊಲೀಸ್‌ ಗಿರಿ ಮುಂದುವರೆಸಲು ಧೈರ್ಯ ಹೆಚ್ಚಾಗುತ್ತದೆ. ಹಿಂದುತ್ವದ ಹೆಸರಲ್ಲಿ ಜನಾಂಗೀಯ ದೌರ್ಜನ್ಯ ಮಿತಿಮೀರುತ್ತದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಸರಿಸುಮಾರು 12 ವರ್ಷಗಳ ಹಿಂದೆ 2012 ಜುಲೈ 28 ರಂದು ಸಂಘಿಗಳ ಅಟ್ಟಹಾಸಕ್ಕೆ ನಾಡಿಗೆ ನಾಡೇ ಬೆಚ್ಚಿ ಬಿದ್ದಿತ್ತು. ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಕೆಲವು ಯುವಕ ಯುವತಿಯರು ಬರ್ತಡೇ ಪಾರ್ಟಿಯೊಂದರ ಸಂಭ್ರಮದಲ್ಲಿದ್ದರು. ಅಷ್ಟರಲ್ಲಿ ಒಂದಿಷ್ಟು ಜನ (ಅ)ನೈತಿಕ ಪೊಲೀಸ್ ಹಿಂದುತ್ವವಾದಿಗಳ ಗುಂಪು ಇದ್ದಕ್ಕಿದ್ದಂತೆ ದಾಳಿ ಮಾಡಿತು. ಯುವಕರ ಮೇಲೆ ಹಲ್ಲೆ ಮಾಡಲಾಯಿತು, ಯುವತಿಯರ ಎದೆಗೆ ಕೈಹಾಕಿತು, ಹುಡುಗಿಯರ ಮಾನಭಂಗಕ್ಕೆ ಪ್ರಯತ್ನಿಸಲಾಯ್ತು, ಆತಂಕಗೊಂಡ ಯುವತಿಯೊಬ್ಬಳು ಮಾನ ಕಾಪಾಡಿಕೊಳ್ಳಲು ಮೇಲಿನ ಅಂತಸ್ತಿನಿಂದ ಕೆಳಗೆ ಜಿಗಿದಳು. ಎಲ್ಲರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಲಾಯ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರ ಸಮ್ಮುಖದಲ್ಲಿಯೇ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತರು ತಮ್ಮ ದಮನ ಸಂಸ್ಕೃತಿಯನ್ನು ಮುಂದುವರೆಸಿದರು. ಕೆಲವೇ ನಿಮಿಷಗಳಲ್ಲಿ ಸಂಭ್ರಮದ ವಾತಾವರಣ ಸರ್ವನಾಶವಾಗಿ ಹೋಂಸ್ಟೇ ಸೂತಕದ ಮನೆಯಂತಾಯ್ತು. ಐವರು ವಿದ್ಯಾರ್ಥಿನಿಯರು ಹಾಗೂ 9 ವಿದ್ಯಾರ್ಥಿಗಳ ಮೇಲೆ 43 ಕ್ಕೂ ಹೆಚ್ಚು ರಣಹದ್ದುಗಳ ಗುಂಪು ಆಕ್ರಮಣಕ್ಕಿಳಿದಿತ್ತು.

ಸಂತ್ರಸ್ತ ಯುವಕರು

ಮಾರನೆಯ ದಿನ ಸುದ್ದಿ ಮಾಧ್ಯಮಗಳ ಮೂಲಕ ಹಲ್ಲೆಯ ದೃಶ್ಯಗಳು ಪ್ರಸಾರಗೊಂಡು ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಯಿತು. ಸಂಘಿಗಳ ರೌಡಿತನ ಹಾಗೂ ಪೊಲೀಸರ ಹೇಡಿತನ ಎರಡರ ವಿರುದ್ಧ ಪ್ರಗತಿಪರ ಸಂಘಟ‌ನೆಗಳು ಪ್ರತಿರೋಧ ವ್ಯಕ್ತಪಡಿಸಿದವು. ಜನರ ಆಕ್ರೋಶಕ್ಕೆ ಮಣಿದ ಸರಕಾರ ಆಗಂತುಕರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ಆದೇಶಿಸಿತು. ಆಗ ಅನಿವಾರ್ಯವಾಗಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು 42 ಜನ ಹಿಂದೂ ಜಾಗರಣ ವೇದಿಕೆಯ ದಾಳಿಕೋರರ ವಿರುದ್ಧ ಸೆಕ್ಷನ್ 323 ಹಾಗೂ 324 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಬಂಧಿಸಿದರು.  ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.

ಇಷ್ಟಕ್ಕೂ ಈ ಹಿಂದುತ್ವವಾದಿಗಳಿಗೆ ಸಂತೋಷ ಕೂಟಗಳ ಮೇಲೆ ಯಾಕೆ ಇಷ್ಟೊಂದು ಸಿಟ್ಟು? ಈ ನಾಡಿನಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದೂ ಅಪರಾಧವಾ? ಹೌದು, ಈ ಖಟ್ಟರ್ ಹಿಂದುತ್ವವಾದಿಗಳಿಗೆ ಇಂತಹುದನ್ನು ಸಹಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಅಲ್ಲಿ, ಆ ಹೋಂ ಸ್ಟೇಯಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಹಾಗೂ ಮುಸ್ಲಿಂ ಯುವಕರು ಹಿಂದೂ ಯವತಿಯರ ಜೊತೆ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂಬ ಮಾಹಿತಿಯಿಂದಾಗಿ ಸಂಘಿಗಳು ಈ ಭಯಾನಕ ಕ್ಷಿಪ್ರ ದಾಳಿಯನ್ನು ನಡೆಸಿದ್ದರು. ಸಂಭ್ರಮ ಯಾವುದೇ ಇರಲಿ, ಪಾರ್ಟಿ ಯಾರದ್ದೇ ಇರಲಿ, ಅಲ್ಲಿ ಮುಸ್ಲಿಂ ಅಂತಾ ಇದ್ದರೆ ಈ ಕೋಮುವ್ಯಾಧಿಗಳ ರಕ್ತ ಕುದಿಯುತ್ತದೆ. ಮುಸಲ್ಮಾನರ ಜೊತೆ ಹಿಂದೂ ಯುವತಿಯರೂ ಭಾಗಿಯಾಗಿದ್ದರೆ ಸಂಘಿಗಳ ತಕಧಿಮಿ ತಾರಕಕ್ಕೇರುತ್ತದೆ. ಹೋಗಲಿ ಈ ಸೋ ಕಾಲ್ಡ್ ಹಿಂದೂ ಸಂಸ್ಕೃತಿ ರಕ್ಷಕರು ಮುಸ್ಲಿಂ ಯುವಕರಿಂದ ಹಿಂದೂ ಯುವತಿಯರನ್ನು ರಕ್ಷಿಸಲು ಈ ದಾಳಿ ಮಾಡಿದ್ದಾರಾ? ಅದೂ ಇಲ್ಲ. ಈ ಕಿರಾತಕರು ಹೀನಾಯವಾಗಿ ದೌರ್ಜನ್ಯವೆಸಗಿದ್ದು ಹಿಂದೂ ಯುವತಿಯರ ಮೇಲೆ. ಆಕ್ರಮಣ ಮಾಡಿದ್ದು ಅವರ ಮಾನದ ಮೇಲೆ. ಮಹಿಳೆಯರ ಎದೆಗೆ ಕೈಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದು ಹೆಣ್ಣುಮಕ್ಕಳ ಮೇಲೆ. ಇದೇನಾ ಹಿಂದುತ್ವವಾದಿಗಳ ಸಂಸ್ಕೃತಿ? ಇದೇನಾ ಸಂಸ್ಕೃತಿ ರಕ್ಷಕರ ಸಭ್ಯತೆ?

ಸಂತ್ರಸ್ತೆಯರು

ಹಿಂದುತ್ವ ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆಯ ಅನಧಿಕೃತ ಗುತ್ತಿಗೆದಾರರಾದ ಈ ಕಾರ್ಯಕರ್ತರಿಗೆ ಶಿಕ್ಷೆಯಾಗುವುದು ಖಂಡಿತ ಎಂದೇ ನಂಬಲಾಗಿತ್ತು. ದಾಳಿಗೆ ಒಳಗಾದವರು  ನ್ಯಾಯಾಧೀಶರ ಮುಂದೆ ಅವತ್ತಿನ ದುರ್ಘಟನೆ ಕುರಿತು ಎಳೆಎಳೆಯಾಗಿ ವಿವರಗಳನ್ನು ಬಿಚ್ಚಿಟ್ಟಿದ್ದರು. ದಾಳಿಗೊಳಗಾದವರನ್ನು ರಕ್ಷಿಸುವ ಬದಲಾಗಿ ಕೋಣೆಯಲ್ಲಿ ಕೂಡಿಹಾಕಿದ ಪೊಲೀಸರು ದಾಳಿಕೋರರನ್ನು ಹೋಗಲು ಬಿಟ್ಟಿದ್ದರು ಎಂದೂ ಸಂತ್ರಸ್ತರು ಹೇಳಿಕೆ ಕೊಟ್ಟಿದ್ದರು. “ಆರೋಪಿಗಳು ನಮ್ಮ ಸ್ನೇಹಿತೆಯರ ಬಟ್ಟೆಯನ್ನು ಬಿಚ್ಚಿ ಮಾನಭಂಗಕ್ಕೆ ಯತ್ನಿಸಿದರು. ಈ ಸಂದರ್ಭದಲ್ಲಿ ಸ್ನೇಹಿತೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೂ ದರೋಡೆ ಮಾಡಿದರು ” ಎಂದು ಸಂತ್ರಸ್ತರು ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದರು.

ಇಬ್ಬರು ಆಪಾದಿತರು ಯುವತಿಯ ಕತ್ತಿನ ಚೈನನ್ನು ಕಿತ್ತುಕೊಂಡಿದ್ದಾಗಿ ಸ್ವ ಇಚ್ಚಾ ಹೇಳಿಕೆಯನ್ನೂ ಕೊಟ್ಟಿದ್ದು ಆ ಚೈನನ್ನೂ ವಶಪಡಿಸಿಕೊಂಡು ಹಾಜರು ಪಡಿಸಲಾಗಿತ್ತು. 96 ದಾಖಲೆಗಳು ಪೊಲೀಸರಿಂದ ಸಲ್ಲಿಕೆಯಾಗಿತ್ತು. ಇಷ್ಟೆಲ್ಲಾ ಪೂರಕ ಸಾಕ್ಷಿಗಳಿದ್ದವು. ಕೋರ್ಟಲ್ಲಿ ಹನ್ನೆರಡು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಯಿತು. 42 ಆರೋಪಿಗಳಲ್ಲಿ 3 ಜನರು ತೀರಿಕೊಂಡಾಗಿತ್ತು. ಇನ್ನೇನು ಆರೋಪಿಗಳು ಶಿಕ್ಷೆ ಆಗುವುದು ಗ್ಯಾರಂಟಿ ಎಂದೇ ನಂಬಲಾಗಿತ್ತು.

ಆದರೆ.. 2024, ಆಗಸ್ಟ್ 6 ರಂದು ಬಂದ ಕೋರ್ಟ್ ತೀರ್ಪು ಈ ಎಲ್ಲಾ ನಂಬಿಕೆಗಳನ್ನು ಬುಡಮೇಲು ಮಾಡಿತ್ತು. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಎಲ್ಲಾ 39 ಆರೋಪಿಗಳನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿತು.

ಕೆಲವು ಆಪಾದಿತರು

ಯಾಕೆ ಹೀಗಾಯ್ತು? ಹಿಂದುತ್ವದ ಹೆಸರಲ್ಲಿ ಇಷ್ಟೆಲ್ಲಾ ದೌರ್ಜನ್ಯ ಮಾಡಿದ ಆರೋಪಿಗಳನ್ನು ಯಾವ ಕಾಣದ ಶಕ್ತಿಗಳು ಕಾಪಾಡಿದವು?  ಮಾಧ್ಯಮಗಳಲ್ಲಿ ಪ್ರಸಾರವಾದ ಹಲ್ಲೆಯ ವಿಡಿಯೋ ತುಣುಕುಗಳಿದ್ದರೂ, ಹಲ್ಲೆ ಲೂಟಿ ಮಾಡಿದ್ದನ್ನು ಕೆಲವು ಆರೋಪಿಗಳು ಒಪ್ಪಿಕೊಂಡಿದ್ದರೂ ಅದು ಹೇಗೆ ಎಲ್ಲಾ ಆರೋಪಿಗಳು ಖುಲಾಸೆಯಾದರು? ಮೊದಲಿನಿಂದಲೂ ಈ ಪ್ರಕರಣವನ್ನು ಬುಡಮೇಲು ಮಾಡಲು ಹಿಂದುತ್ವವಾದಿ ಶಕ್ತಿಗಳು ತೆರೆಯ ಹಿಂದೆ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದವು. ಪೊಲೀಸರ ವಿಚಾರಣೆ ಹಾಗೂ ದೋಷಾರೋಪ ಪಟ್ಟಿಯನ್ನೇ ಸಡಿಲಗೊಳಿಸಲಾಗಿತ್ತು. 2012 ರಲ್ಲಿ ನಡೆದ ಪ್ರಕರಣದ ವಿಚಾರಣೆ ಕೋರ್ಟಲ್ಲಿ ನಡೆಯದಂತೆ ವಿಳಂಬ ಮಾಡಲಾಯ್ತು. ಎಂಟು ವರ್ಷಗಳ ನಂತರ 2020 ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತಾದರೂ 13 ಪ್ರಮುಖ ಸಾಕ್ಷಿಗಳಲ್ಲಿ 11 ಸಾಕ್ಷಿಗಳಿಂದ ಪ್ರತಿಕೂಲ ಹೇಳಿಕೆ ನೀಡಿಸಿ ವಿಚಾರಣೆಯ ದಿಕ್ಕನ್ನೇ ಬದಲಾಯಿಸಲಾಯಿತು.

ಪೊಲೀಸರು ವಿಚಾರಣೆ ಸಮಯದಲ್ಲಿ ಕಡ್ಡಾಯವಾಗಿ ಮಾಡಬೇಕಿದ್ದ ಗುರುತು ಪತ್ತೆ ಪರೇಡ್ ಮಾಡದೇ ಇರುವುದೇ ದೊಡ್ಡ ಲೋಪವಾಗಿತ್ತು. ಪ್ರಾಸಿಕ್ಯೂಷನ್ ಹೇಳಿಕೆಗೂ ಹಾಗೂ ಪೊಲೀಸರ ಮಹಜರನಲ್ಲಿದ್ದ ಅಂಶಗಳಿಗೂ ಹೊಂದಾಣಿಕೆ ಇರಲಿಲ್ಲ. ಹೀಗೆ ಪೊಲೀಸರು ಮಾಡಿದ ಲೋಪದೋಷಗಳಿಂದಾಗಿ ನ್ಯಾಯಾಲಯವು ಹಲ್ಲೆ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಬಿಡುಗಡೆ ಮಾಡಬೇಕಾಯ್ತು. ಇದಕ್ಕೆ ಸಂಘಿ ಮನಸ್ಥಿತಿಯ ಪೊಲೀಸರು, ಹಿಂದುತ್ವವಾದಿ ಬೆಂಬಲಿಗ ವಕೀಲರುಗಳು ಹಾಗೂ ಕೋಮು ಸಂಘಟನೆಗಳ ಕರಾಮತ್ತೇ ಕಾರಣ ಎನ್ನುವ ಅನುಮಾನ ಕಾಡದಿರದು. ಹಲ್ಲೆಗೊಳಗಾದ ಯುವಕರು, ಅವಮಾನಕ್ಕೆ ಒಳಗಾದ ಯುವತಿಯರಿಗೆ ಕೊನೆಗೂ ನ್ಯಾಯ ಸಿಗಲಿಲ್ಲ. ವ್ಯವಸ್ಥೆಯ ಎಲ್ಲಾ ಅಂಗಗಳಲ್ಲೂ ಸಂಘ ಪರಿವಾರದ ನಿಯಂತ್ರಣ ಯಾವ ರೀತಿ ಇದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ಹಾಗಾಗಬಾರದು ಎಂದರೆ ಈ ನಾಡಿನ ಪ್ರಗತಿಪರರು, ಹೋರಾಟಗಾರರು, ಸಾಹಿತಿ ಕಲಾವಿದರುಗಳು ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಬೇಕಾಗಿದೆ. ಮೇಲ್ಮನವಿಯ ಮೂಲಕ ನ್ಯಾಯಯುತವಾದ ವಿಚಾರಣೆಗೆ ಸರಕಾರ ಮುಂದಾಗಬೇಕೆಂದು ಒತ್ತಾಯಿಸಬೇಕಿದೆ. ನ್ಯಾಯಕ್ಕೆ ಜಯ ಸಿಗಲೇಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ರಂಗಕರ್ಮಿ

ಇದನ್ನೂ ಓದಿ- ಮುಸ್ಲೀಮರು, ಜನಿವಾರ, ಓಂ, ದೇವಸ್ಥಾನ ಮತ್ತು ಹಿಂದುತ್ವ ರಕ್ಷಣೆಯ ಹೋಂ ಸ್ಟೇ ದಾಳಿ..!

More articles

Latest article