ಗಾಂಧೀಜಿಯವರ ಕಣ್ಣಲ್ಲಿ ನ್ಯಾಯ

Most read

ಭೌತವಾದವನ್ನು ಎದುರಿಸಿದ, ಆಧುನಿಕತೆಯ ವೇಗಕ್ಕೆ ಪರ್ಯಾಯವಾಗಿ ಮಾದರಿ ಬದುಕು ರೂಪಿಸಿದ, `ವಿಶ್ವಮಾನವತ್ವ’ ಉದ್ದೀಪಿಸುವ ಧಾರ್ಮಿಕತೆಯ ವ್ಯಕ್ತಿಯಾಗಿದ್ದ ಗಾಂಧೀಜಿಯವರನ್ನು ಮತ್ತೆಮತ್ತೆ ಪರಿಶೀಲಿಸುವುದು, ಬದಲಾವಣೆಗಳೊಡನೆ ಅರಗಿಸಿಕೊಳ್ಳುವುದು ಮುಖ್ಯವಾಗಿದೆ ಡಾ. ಎಚ್‌ ಎಸ್‌ ಅನುಪಮಾ, ವೈದ್ಯರು, ಸಾಹಿತಿಗಳು.

ನ್ಯಾಯದ ಬೆಂಬಲದೊಂದಿಗೆ ಸ್ವತಂತ್ರವಾಗಿ ಬಾಳಬೇಕೆನ್ನುವುದು ಮನುಷ್ಯರ ಹಂಬಲ. ಆದರೆ ಅಸಮಾನ ಸಮಾಜಗಳಲ್ಲಿ ನ್ಯಾಯವು ಉಳ್ಳವರ ತೊತ್ತಾಗಿರುತ್ತದೆ. ವಂಚಿಸಲ್ಪಟ್ಟಾಗ, ಅಥವಾ ಕಸಿಯಲ್ಪಟ್ಟಾಗ ಮಾತ್ರ ಸಾಮಾನ್ಯರ ಅನುಭವಕ್ಕೆ ಬರುತ್ತದೆ. ಹಾಗಾಗದೇ ಸಾಮಾಜಿಕ ನ್ಯಾಯ ನೆಲೆಯಾಗಬೇಕೆನ್ನುವುದು ಮಾನವಹಕ್ಕು ಹೋರಾಟಗಾರರ ಗುರಿಯಾಗಿರುತ್ತದೆ.

ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು; ಸಮಾಜದ ಅನಿಷ್ಟಗಳೂ ಕೊನೆಯಾಗಿ ಭಾರತೀಯರು `ಆತ್ಮ ಸ್ವರಾಜ್ಯ’ ಸಾಧಿಸಿಕೊಳ್ಳಬೇಕೆಂದು ಹೋರಾಡಿದವರಲ್ಲಿ ಮೋಹನದಾಸ ಕರಮಚಂದ ಗಾಂಧಿ ಪ್ರಮುಖರು. ಅವರ ಪ್ರಕಾರ ಸ್ವರಾಜ್ಯವೆಂದರೆ ದೇಶವಾಸಿಗಳೆಲ್ಲ ಸ್ವಾಯತ್ತವಾಗಿ, ಘನತೆಯಿಂದ ಬದುಕುವ ದಾರಿ. ಎಲ್ಲದರ ಒಳಿತೇ ಮನುಷ್ಯರ ಒಳಿತೂ ಆಗಿರುತ್ತದೆ ಎಂಬ ಲೋಕದೊಂದಿಗಿನ ತಾದಾತ್ಮ್ಯ. ಅದಕ್ಕಾಗಿ ನಾಗರಿಕರು ಸತ್ಯ, ಅಹಿಂಸೆ, ಅಪರಿಗ್ರಹ, ಸರಳತೆಗಳಂತಹ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು; ಜಾತಿಭೇದ, ಅಸ್ಪೃಶ್ಯತೆ, ಮದ್ಯಪಾನ, ಕೊಳ್ಳುಬಾಕತನಗಳಂತಹ `(ಅ)ನಾಗರಿಕ’ ಸಾಮಾಜಿಕ ಅನಿಷ್ಟಗಳಿಂದ ಬಿಡುಗಡೆ ಪಡೆಯಬೇಕೆನ್ನುವುದು ಅವರ ಬದುಕು, ಹೋರಾಟಗಳ ಗುರಿಯಾಗಿತ್ತು. ಸ್ವರಾಜ್ಯ ಸಾಕಾರದ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಅವರ ನ್ಯಾಯದ ಪರಿಕಲ್ಪನೆಯನ್ನು ಪರಿಶೀಲಿಸಬೇಕಿದೆ. ನಿರ್ಲಕ್ಷ್ಯ, ಅಪಪ್ರಚಾರ, ಗೇಲಿಗೊಳಗಾಗುತ್ತಿರುವ ಗಾಂಧಿ ಎಂಬ ವ್ಯಕ್ತಿಯನ್ನು, ಅವರ ತತ್ವಗಳನ್ನು ಅದಿರುವಂತೆ ಅರಿಯಲು ಇದು ಅಗತ್ಯವಾಗಿದೆ.

***

ರೋಮನ್ ರೋಲಂಡ್ ಬರೆಯುವಂತೆ ಗಾಂಧೀಜಿಯವರ ಬದುಕಿನ ಅಸ್ಥಿಭಾರ ಧಾರ್ಮಿಕತೆಯದು. ಅದರ ಮೇಲೆ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ನಾಗರಿಕ ದೃಷ್ಟಿಕೋನವು ರೂಪುಗೊಂಡಿತ್ತು. ಸತ್ಯ, ಅಹಿಂಸೆ, ಉಪವಾಸ, ವ್ರತ, ಸಂತ-ಮಹಾನುಭಾವರನ್ನು ಧಾರ್ಮಿಕ ವ್ಯಕ್ತಿಗಳಿಗೆ ಆದರ ತೋರಿಸುವ ಪರಿಸರದಲ್ಲಿ ಗಾಂಧೀಜಿ ಹುಟ್ಟಿ ಬೆಳೆದರು. ನಂತರ ಓದಿದ ರಸ್ಕಿನ್, ಥೋರೋ, ಟಾಲ್‍ಸ್ಟಾಯ್, ಬೈಬಲಿನ ನ್ಯೂ ಟೆಸ್ಟಮೆಂಟ್‍ಗಳು ಧಾರ್ಮಿಕ ನ್ಯಾಯಪ್ರಜ್ಞೆಯನ್ನುದ್ದೀಪಿಸಿದವು. ತಮ್ಮ ಸಾಮಾಜಿಕ, ರಾಜಕೀಯ ಕೆಲಸಗಳಿಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ಮತ್ತೆಮತ್ತೆ ಆಳಕ್ಕಿಳಿದು ಧಾರ್ಮಿಕತೆಯ ಮೂಲದಿಂದಲೇ ಪಡೆದು ಬರುತ್ತಿದ್ದರು. ಉಳಿದ ವಿಷಯಗಳಷ್ಟೇ ಪ್ರಾರ್ಥನೆ, ಉಪವಾಸಗಳಿಗೂ ಪ್ರಾಮುಖ್ಯತೆ ಕೊಟ್ಟರು. ಅಸ್ಪೃಶ್ಯತೆ ಆಚರಣೆ, ಬಲಿ, ದೌರ್ಜನ್ಯ, ಹಿಂಸೆಗಳನ್ನು `ಅಧರ್ಮ’, `ಪಾಪ’ ಎಂದು ಪರಿಗಣಿಸಿದರು.

ಅವರದು ದೇವರ ಇರುವಿಕೆಯನ್ನು ಮನುಷ್ಯರಲ್ಲಿ ಕಾಣುವ ಅಧ್ಯಾತ್ಮಿಕತೆ. ಈ ಮನೋಭಾವವು ನ್ಯಾಯವಾಗಿ ಬಾಳಲು ಎಲ್ಲರಿಗೂ ದೈವದತ್ತ ಅವಕಾಶವಿದೆ; ಅದನ್ನು ಅನ್ಯಾಯವಾಗಿ ಕಸಿಯಲಾಗಿದೆ; ಕಸಿದವರ ಮನವೊಲಿಸಿ ವಂಚಿತರಿಗೆ ಮರಳಿ ನ್ಯಾಯ ಕೊಡಿಸುವುದು ಸಾಧ್ಯವಾದರೆ `ಸರ್ವೋದಯ’ವಾಗುತ್ತದೆ ಎಂದು ನಂಬುವಂತೆ ಮಾಡಿತು. ಸರ್ವೋದಯ ಸಾಕಾರವಾಗಲು ಸತ್ಯವೇ ದೇವರಾಗಬೇಕು; ಅಹಿಂಸೆಯ ಮಾರ್ಗ ಅನುಸರಿಸಬೇಕು; ಮನಃಶುದ್ಧಿಗಾಗಿ ಉಪವಾಸ ಮಾಡಬೇಕು ಎಂದು ಪ್ರತಿಪಾದಿಸಿದರು.

ನ್ಯಾಯದೆಡೆಗಿನ ಪಯಣ ಹಕ್ಕು ಆಧಾರಿತ ನಡಿಗೆಯಾಗಿರಲಿಲ್ಲ. ಅದು ನಾಗರಿಕರ ಕರ್ತವ್ಯ, ಧರ್ಮ ಎಂದವರು ಭಾವಿಸಿದ್ದರು. ನಾಗರಿಕರೆಲ್ಲರೂ ನೈತಿಕತೆಯೊಂದಿಗೆ ಬಾಳಿ, ತಮ್ಮ ಕರ್ತವ್ಯ ನಿಭಾಯಿಸಿದರೆ ಉಳಿದವರ ಹಕ್ಕುಗಳು ರಕ್ಷಿಸಲ್ಪಡುತ್ತವೆ, ಸಮಾಜದಲ್ಲಿ ನ್ಯಾಯ ನೆಲೆಯಾಗುತ್ತದೆಂದು ಧೃಢವಾಗಿ ನಂಬಿದ್ದರು. ಅವರದು ಅಧ್ಯಾತ್ಮಿಕ ಸಮಾಜವಾದ. ಅವರ ಪ್ರಕಾರ ಕೆಲವರಿಗಷ್ಟೇ ನ್ಯಾಯಯುತವಾಗಿ ಸಂಪತ್ತನ್ನು ಗಳಿಸುವ, ಬೆಳೆಸುವ ನಿಪುಣತೆಯಿರುತ್ತದೆ. ಅವರದನ್ನು ಮಾಡಬೇಕು. ಅಗತ್ಯವಿರುವಷ್ಟನ್ನೇ ಇಟ್ಟುಕೊಂಡು ಮಿಕ್ಕಿದ್ದನ್ನು ಹಂಚಬೇಕು. ಅದಕ್ಕಾಗಿ ಸಮಾಜದ ರಚನೆಯೇ ಬದಲಾಗಬೇಕು. ಸಿರಿವಂತರು `ಸಿರಿವಂತಿಕೆಯನ್ನು ತ್ಯಜಿಸುವ ಮೂಲಕ ಸುಖಿಸಬೇಕು’. ಸತ್ಯ, ಅಹಿಂಸೆ, ಸ್ವಯಂ ನಿಯಂತ್ರಣ, ಅಪರಿಗ್ರಹಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗಳಿಸಿದ ಸಿರಿಸಂಪತ್ತಿನ ಮಿಗತೆ ಸಂಪನ್ಮೂಲವನ್ನು ಸಮಾನ ಹಂಚಿಕೆಗೆ ತೆರೆದಿಡುವ ಉದಾತ್ತತೆಯನ್ನು ಸಿರಿವಂತರಲ್ಲಿ ಉದ್ದೀಪಿಸಬೇಕು; `ಎಲ್ಲರಿಗೂ ಬೇಕಿರುವಷ್ಟನ್ನು ದೇವರು ಸೃಷ್ಟಿಸಿರುತ್ತಾನೆ. ಹೆಚ್ಚು ತೆಗೆದುಕೊಂಡರೆ ಅದು ಕಳ್ಳತನ’ ಎನ್ನುವ ಧಾರ್ಮಿಕ ಪ್ರಜ್ಞೆ ಸಮಾಜದಲ್ಲಿ ನೆಲೆಯಾದರೆ ಸಾಮಾಜಿಕ ನ್ಯಾಯ ತಂತಾನೇ ನೆಲೆಯಾಗುತ್ತದೆಂದು ಪ್ರತಿಪಾದಿಸಿದರು.

ಪೂನಾ ಒಪ್ಪಂದ

ತಮ್ಮ ಪ್ರತಿಪಾದನೆಗಳನ್ನು ತಾವೂ ಅನುಸರಿಸಿದರು. ಸತ್ಯವನ್ನು ವ್ರತವಾಗಿ ಪಾಲಿಸಿದರು. ವೈಯಕ್ತಿಕ ಶಿಸ್ತಿನ ಅತಿ ಸರಳ ಬದುಕು ರೂಢಿಸಿಕೊಂಡರು. ಕೌಟುಂಬಿಕ ಬದುಕು, ಖಾಸಗಿ ಆಸ್ತಿ ನಿರಾಕರಿಸಿದರು. ಅದರಂತೆ ಬದುಕಬಹುದೇ ಎಂದು ಪ್ರಾಯೋಗಿಕವಾಗಿ ಪರಿಶೀಲಿಸಲು ಆಶ್ರಮಗಳನ್ನು ರೂಪಿಸಿದರು. ತಮ್ಮ ಅಗತ್ಯ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುವ, ಸಾಧ್ಯವಾದಷ್ಟೂ ಸ್ವಯಂಪೂರ್ಣವಾಗಿ ಬದುಕಲು ಸಾಧ್ಯಮಾಡುವ `ಬ್ರೆಡ್ ಲೇಬರ್’ ಅನ್ನು ಪ್ರತಿಪಾದಿಸಿದರು.

ಧಾರ್ಮಿಕತೆಯ ಆಧಾರದ ನ್ಯಾಯಪ್ರಜ್ಞೆಯೇ ಜಾತಿ ಮತ್ತು ಉದ್ಯೋಗದ ಆಧಾರದಲ್ಲಿ ಮನುಷ್ಯರನ್ನು ಕೀಳಾಗಿ ಕಾಣುವ, ಮುಟ್ಟಿಸಿಕೊಳ್ಳದೆ `ಅಸ್ಪೃಶ್ಯ’ರನ್ನಾಗಿಸಿರುವ ಬಗೆಗೆ ವಿರೋಧ ಹುಟ್ಟಿಸಿತ್ತು. ಮನುಷ್ಯರನ್ನು ಮುಟ್ಟಿದರೆ ದೋಷವೆಂದು ಹೇಳುವುದು ಧರ್ಮ ಹೇಗಾದೀತೆಂದು ತಾಯಿಯ ಬಳಿ, ಪತ್ನಿ ಕಸ್ತೂರಬಾ ಮತ್ತು ಸಂಬಂಧಿಗಳೊಡನೆ ವಾದಿಸುತ್ತಿದ್ದರು. “ಅಸ್ಪೃಶ್ಯತೆಯನ್ನು ಒಪ್ಪಿರುವ ಧರ್ಮಶಾಸ್ತ್ರಗಳು ಧರ್ಮಶಾಸ್ತ್ರಗಳೇ ಅಲ್ಲ, ಅ-ಧರ್ಮಶಾಸ್ತ್ರಗಳು’; “ಅಸ್ಪೃಶ್ಯರನ್ನು ಗುಲಾಮರಾಗಿಸಿರುವುದರಿಂದಲೇ ಭಾರತೀಯರು ಬ್ರಿಟಿಷರಿಗೆ ಗುಲಾಮರಾಗಿರಲು ಅರ್ಹರಾಗಿದ್ದಾರೆ. ದೇಶದ ಐದನೇ ಒಂದು ಭಾಗ ಜನರನ್ನು ಗುಲಾಮರಾಗಿಸಿದವರು ಸ್ವರಾಜ್ಯಕ್ಕೆ ಅರ್ಹರಲ್ಲ, ಜಲಿಯನ್‍ವಾಲಾಬಾಗಿಗಿಂತಲೂ ಹೀನ ಹತ್ಯಾಕಾಂಡದ ಆರೋಪ ಹೊರಿಸಲು ಸವರ್ಣೀಯರು ಅರ್ಹರು’ ಎಂದು ಪತ್ರಿಕೆಯಲ್ಲಿ ಬರೆದರು. “ಅಸ್ಪೃಶ್ಯತೆ ಬರಿಯ ಸಾಮಾಜಿಕ ಸಮಸ್ಯೆ ಅಲ್ಲ. ಅದನ್ನು ಯಾವ ರಾಜಕೀಯ ಪಕ್ಷವೂ ಮರೆತು ಮುಂದೆ ಹೋಗಲು ಸಾಧ್ಯವಿಲ್ಲ’ ಎಂದು `ಅಸ್ಪೃಶ್ಯತೆ ನಿವಾರಣೆಯನ್ನು ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯಕ್ರಮವಾಗಿಸಲು ಪ್ರಯತ್ನಿಸಿದರು. ತಮ್ಮ ಆಶ್ರಮದಲ್ಲಿರುವ, ಬರುವ ಎಲ್ಲರ ಬಳಿಯೂ ಸರದಿ ಮೇಲೆ ಶೌಚಾಲಯ ತೊಳೆಸಿದರು. `ಶ್ರಮದಾನ’ವನ್ನೊಪ್ಪುವ ಮನಸ್ಥಿತಿ ರೂಪಿಸಲು ಪ್ರಾರ್ಥನೆ, ಉಪವಾಸಗಳನ್ನು ರೂಢಿಸಿದರು. `ಅಸ್ಪೃಶ್ಯರೆಂದು ಸಮಾಜ ದೂರವಿಟ್ಟವರನ್ನು `ಹರಿಜನ’ರೆಂದು ಕರೆದರು. `ಹರಿಜನ ಸೇವಕ ಸಂಘ’ ಆರಂಭಿಸಿದರು. `ಹರಿಜನ’ ಪತ್ರಿಕೆ ಹಲವು ಭಾಷೆಗಳಲ್ಲಿ ಆರಂಭವಾಯಿತು.

ಅವರ ಸುಧಾರಣಾ ಪ್ರಯತ್ನಗಳನ್ನು ಸಮಾಜ ಒಂದೇಟಿಗೆ ಸ್ವೀಕರಿಸಿತೆಂದೇನಲ್ಲ. `ಅಸ್ಪೃಶ್ಯತೆ ನಿವಾರಣೆಯೆನ್ನುತ್ತ ಗಾಂಧಿ ಹಿಂದೂಧರ್ಮದ ಮೂಲ ರಚನೆ ಹಾಳುಮಾಡುತ್ತಿದ್ದಾರೆ; `ಅಸ್ಪೃಶ್ಯತೆಯ ಪ್ರಶ್ನೆಯನ್ನು ಸ್ವಾತಂತ್ರ್ಯ ಹೋರಾಟದ ಜೊತೆಗೇ ಸೇರಿಸಿ ಚಳವಳಿಯ ತೀವ್ರತೆ ಕಡಿಮೆಯಾಗುತ್ತಿದೆಯೆನ್ನುವುದು ಹಲವರ ಟೀಕೆಯಾಗಿತ್ತು. ತನ್ನ ಸಮಕಾಲೀನರಲ್ಲಿ ಗಾಂಧಿ ಎದುರಿಸಿದ ದೊಡ್ಡ ಸೈದ್ಧಾಂತಿಕ ವಿರೋಧ ಡಾ. ಬಿ. ಆರ್. ಅಂಬೇಡ್ಕರ್ ಅವರದ್ದು. ಆತ್ಮಗೌರವಕ್ಕಾಗಿ ಚಳವಳಿ, ಹೋರಾಟ, ಕಾನೂನಾತ್ಮಕ ಸಂಘರ್ಷಗಳನ್ನು ಮುನ್ನಡೆಸುತ್ತಿದ್ದ ಅಂಬೇಡ್ಕರರ ಪ್ರಯತ್ನಗಳ ಫಲವಾಗಿ ನಿಮ್ನವರ್ಗದವರಿಗೆ ಪ್ರತ್ಯೇಕ ಮತದಾನದ ಅವಕಾಶ ದೊರೆಯಿತು. ಆದರೆ ಪ್ರತ್ಯೇಕ ಮತದಾನವು ಸ್ಪೃಶ್ಯ-`ಅಸ್ಪೃಶ್ಯರ ಮಧ್ಯೆ ಮತ್ತಷ್ಟು ಬಿರುಕುಂಟು ಮಾಡುತ್ತದೆಂದು ಗಾಂಧಿ ವಿರೋಧಿಸಿದರು. ಆಮರಣಾಂತ ಉಪವಾಸ ಕುಳಿತರು. ಅಂಬೇಡ್ಕರರ ನೇತೃತ್ವದ ನಿಮ್ನವರ್ಗಗಳು ಹಾಗೂ ಕಾಂಗ್ರೆಸ್-ಸವರ್ಣೀಯ ಹಿಂದೂಗಳ ನಡುವೆ ಚರ್ಚೆ, ತಿಕ್ಕಾಟ ನಡೆದು ಪೂನಾ ಒಪ್ಪಂದ ಏರ್ಪಟ್ಟಿತು. ಪ್ರತ್ಯೇಕ ಮತದಾನದ ಬದಲು ಮೀಸಲು ಸ್ಥಾನಗಳು ದೊರೆತವು.

ವ್ಯಕ್ತಿಗತ ಬದಲಾವಣೆಯಲ್ಲಿ ಹೆಚ್ಚು ನಂಬಿಕೆ ಇಟ್ಟ ಗಾಂಧೀಜಿ `ಅಸ್ಪೃಶ್ಯತೆ ತೊಡೆದು ಹಾಕಲು ಸವರ್ಣೀಯ ಹಿಂದೂಗಳ ಆತ್ಮಶುದ್ಧಿ ಮುಖ್ಯವೆಂದು ಭಾವಿಸಿದರು. ಆದರೆ `ಅಸ್ಪೃಶ್ಯತೆ, ಜಾತಿಪದ್ಧತಿ, ಅಸಮಾನತೆಯಿಂದ ಕೊಳೆಯುತ್ತಿದ್ದ ಹಿಂದೂ ಧರ್ಮದಲ್ಲಿ ಹಳೆಯದನ್ನು ನಾಶಮಾಡದೇ ಹೊಸದನ್ನು ಕಟ್ಟುವುದು ಸಾಧ್ಯವಿಲ್ಲವೆಂದು ಸ್ವಾಭಿಮಾನ, ಸಮಾನತೆಯ ಭೀಮರಾಜ್ಯಕ್ಕಾಗಿ ಅಂಬೇಡ್ಕರ್ ಶ್ರಮಿಸಿದರು. `ಹರಿಜನ’ ಪದವನ್ನು ನಿರಾಕರಿಸಿ ನಿಮ್ನ ವರ್ಗದವರೆಂದು ಕರೆದರು.

ಗಾಂಧೀಜಿ ಧರ್ಮ ಕುರಿತು ಆಳವಾದ ನಂಬಿಕೆಯಿರುವ ರಾಜಕಾರಣಿಯಾಗಿದ್ದರು. ಎಂದೇ ಧರ್ಮ ನಿರಪೇಕ್ಷವಾಗಿರಬಯಸುವ ಸಮಸಮಾಜ ಕನಸುವವರಿಗೆ ಪ್ರಶ್ನಾರ್ಹರಾದರು. `ನಾನು ಸನಾತನ ಹಿಂದೂ’ ಎನ್ನುತ್ತಿದ್ದ ಗಾಂಧೀಜಿಯವರ ಧಾರ್ಮಿಕತೆಯು ಎಲ್ಲ ಧರ್ಮದವರನ್ನೂ ಒಳಗೊಳ್ಳುವಷ್ಟು ವಿಶಾಲವಾಗಿದ್ದುದರಿಂದ ಮೂಲಭೂತವಾದಿ ಸನಾತನಿ ಹಿಂದೂ ಹಂತಕನಿಂದ ಹತ್ಯೆಗೊಳಗಾಗುವಂತಾಯಿತು. ಈ ತಾತ್ವಿಕ ಭೇದಗಳು ಅಂದೂ ಇಂದೂ ಗಾಂಧೀಜಿಯವರ ಬದುಕು, ಪ್ರತಿಪಾದನೆಗಳನ್ನು ನಗಣ್ಯಗೊಳಿಸಿದಂತೆಯೇ ಜೀವಂತವಾಗಿಯೂ ಇಟ್ಟಿರುವುದು ವಿಪರ್ಯಾಸಕರವಾಗಿದೆ ಎನ್ನಬಹುದು. 

***

ವರ್ತಮಾನದ ನಮ್ಮ ನಾಗರಿಕತೆಯ ಕೇಂದ್ರದಲ್ಲಿ ಕೇವಲ ಮನುಷ್ಯ ಸಮಾಜವಿದೆ. ಭೌತಿಕ ಬಯಕೆಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸುವ ಹಕ್ಕು ತಮಗಿದೆಯೆಂದು ಮನುಷ್ಯರು ಭಾವಿಸಿದ್ದಾರೆ. ನಮ್ಮ ಸಂಪೂರ್ಣ ಭಾವಲೋಕ ಬಯಕೆಗಳಿಂದಲೇ ತುಂಬಿದೆ. ಅದಕ್ಕೆ ತಡೆಯೊಡ್ಡಲು ದೇವರ ಹೆಸರಿನಲ್ಲಿ ಒಳಿತಿನ ಕಲ್ಪನೆಯನ್ನು ಹರಡಲೆತ್ನಿಸುವ ಧಾರ್ಮಿಕ ಸಂಸ್ಥೆಗಳು ಯಾರಿಗೂ ಬೇಡವಾಗಿವೆ. ಧರ್ಮ ಸೋತಲ್ಲಿ ಮಾರುಕಟ್ಟೆ ತಲೆಯೆತ್ತಿದೆ. ಲೌಕಿಕ ಆಸೆ ಆಮಿಷಗಳಿಗೆ ತಡೆಯೊಡ್ಡಬಲ್ಲ ಯಾವ ಶಕ್ತಿಯೂ ಕಾಣದಾಗಿದೆ. ಹೀಗಿರುವಾಗ ಭೌತವಾದವನ್ನು ಎದುರಿಸಿದ, ಆಧುನಿಕತೆಯ ವೇಗಕ್ಕೆ ಪರ್ಯಾಯವಾಗಿ ಮಾದರಿ ಬದುಕು ರೂಪಿಸಿದ, `ವಿಶ್ವಮಾನವತ್ವ’ ಉದ್ದೀಪಿಸುವ ಧಾರ್ಮಿಕತೆಯ ವ್ಯಕ್ತಿಯಾಗಿದ್ದ ಗಾಂಧೀಜಿಯವರನ್ನು ಮತ್ತೆಮತ್ತೆ ಪರಿಶೀಲಿಸುವುದು, ಬದಲಾವಣೆಗಳೊಡನೆ ಅರಗಿಸಿಕೊಳ್ಳುವುದು ಮುಖ್ಯವಾಗಿದೆ.

ಜಾತಿ-ವರ್ಗ-ಲಿಂಗತ್ವ ಅನ್ಯಾಯವನ್ನು, ಶೋಷಣೆಯ ನೈತಿಕ ಪ್ರಶ್ನೆಗಳನ್ನು ಗಾಂಧಿ-ಕುಮಾರಪ್ಪ ಎತ್ತಿದರು. ಮಾರ್ಕ್ಸ್-ಏಂಗೆಲ್ಸ್ ತಾತ್ವೀಕರಿಸಿದರು. ಫುಲೆ-ಅಂಬೇಡ್ಕರರು ಪ್ರಶ್ನಿಸಿದರು. ಅಮಾನವೀಯ ಶೋಷಣೆಗೊಳಗಾಗುವ ಹೆಣ್ಣುಗಳು ನ್ಯಾಯವಲ್ಲವೆಂದು ದನಿಯೆತ್ತಿದರು. ನಮ್ಮ ಆತ್ಮವಿಮರ್ಶಾ ಪ್ರಜ್ಞೆಯು ಎಲ್ಲ ತಾತ್ವಿಕ ಗಡಿಗಳನ್ನು ಮೀರಿ, ಅದರೊಳ‌ ಹೊಕ್ಕು ಸತ್ವ ಪಡೆದು ಬರುವುದು ಸಾಮಾಜಿಕ ನ್ಯಾಯ ನೆಲೆಗೊಳ್ಳಲು ಅಗತ್ಯವಾಗಿದೆ.

ಡಾ. ಎಚ್. ಎಸ್. ಅನುಪಮಾ

ಇವರು ಉತ್ತರ ಕನ್ನಡದ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯರಾಗಿದ್ದಾರೆ. ವೃತ್ತಿಯ ಜತೆಗೇ ಸಾಹಿತ್ಯ, ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

ಇದನ್ನೂ ಓದಿ- ಗಾಂಧಿ ಜಯಂತಿ | ಜಗತ್ತಿನ ಮನ ಗೆದ್ದ ಮಹಾತ್ಮ

More articles

Latest article