ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿಯ ವರ್ಗಿಕರಣ ಕುರಿತಂತೆ (ಒಳಮೀಸಲಾತಿ) ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ಆದೇಸವನ್ನು ಮರುಪರಿಶೀಲಿಸಲು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನಿರ್ಧಾರವನ್ನು ಪರಿಶೀಲಿಸುವಂತೆ 10 ಅರ್ಜಿಗಳು ಬಂದಿದ್ದವು. “ಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ, ದಾಖಲೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಪರಿಶೀಲನೆಗಾಗಿ ಯಾವುದೇ ಪ್ರಕರಣವನ್ನು ಸ್ಥಾಪಿಸಲಾಗಿಲ್ಲ. ಆದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ, ಎಸ್‌ಸಿ/ಎಸ್‌ಟಿ ಜನರು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದಾಗಿ ಸಮಾಜದಲ್ಲಿ ಮೇಲಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಂವಿಧಾನದ 14ನೇ ವಿಧಿ ಜಾತಿಯ ಉಪ-ವರ್ಗೀಕರಣವನ್ನು ಅನುಮತಿಸುತ್ತದೆ. ಮೀಸಲಾತಿ ಪಟ್ಟಿಗೆ ಸಮುದಾಯಗಳ ಸೇರ್ಪಡೆ ಅಥವಾ ತೆಗೆಯಲು ತುಷ್ಟೀಕರಣ ರಾಜಕೀಯ ಮಾಡಬಾರದು.
ಪರಿಶಿಷ್ಟ ಜಾತಿಗಳು ಏಕರೂಪದ ಗುಂಪಲ್ಲ. ಎಸ್‌ಸಿಗಳಲ್ಲಿ ಹೆಚ್ಚು ತಾರತಮ್ಯವನ್ನು ಅನುಭವಿಸಿದವರಿಗೆ 15% ಮೀಸಲಾತಿಯಲ್ಲಿ ಹೆಚ್ಚಿನ ಅವಕಾಶ ನೀಡಲು ಸರ್ಕಾರಗಳು ಅವರನ್ನು ಉಪವರ್ಗೀಕರಿಸಬಹುದು.
ಎಸ್‌ಸಿಗಳಲ್ಲಿ ಜಾತಿಗಳ ಉಪ-ವರ್ಗೀಕರಣವು ಅವರ ತಾರತಮ್ಯದ ಮಟ್ಟವನ್ನು ಆಧರಿಸಿರಬೇಕು. ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯದ ಕುರಿತು ಪ್ರಾಯೋಗಿಕ ಡೇಟಾವನ್ನು ಸಂಗ್ರಹಿಸುವ ಮೂಲಕ ರಾಜ್ಯಗಳು ಮಾಡಬಹುದು ಎಂದು ಹೇಳಿತ್ತು.