ಇಡಿ ದಾಳಿಗೆ ಹೆದರಿ ತಲೆಮರೆಸಿಕೊಂಡ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್

Most read

ನವದೆಹಲಿ : ಕೇಂದ್ರ ಜಾರಿ ನಿರ್ದೇಶನಾಲಯ ( ED) ದಾಳಿಯಿಂದ ತಪ್ಪಿಸಿಕೊಳ್ಳಲು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಸತತ 24 ಗಂಟೆಯಿಂದ ತಲೆಮರೆಸಿಕೊಂಡಿದ್ದಾರೆ. ಅವರು ಕಾನೂನು ಸಲಹೆ ಪಡೆಯುವ ದೃಷ್ಟಿಯಿಂದ ದೆಹಲಿಯಲ್ಲಿದ್ದಾರೆ ಎನ್ನುವ ಮಾಹಿತಿಯಿದ್ದರೂ ಸಹ ಪಕ್ಷದ ಯಾವ ಮುಖಂಡರು ಖಚಿತಪಡಿಸಿಲ್ಲ.

ಭೂ ವ್ಯವಹಾರ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯವು ಹೇಮಂತ್‌ ಸೋರೆನ್‌ ಅವರಿಗೆ ನೋಟೀಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅವರಿಂದ ಯಾವುದೇ ಉತ್ತರ ಬಾರದೇ ಇದ್ದುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಸೋರೆನ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದರು.

ಸೋಮವಾರದಂದು ವಿಚಾರಣೆಗೆ ಬಂದ ಅಧಿಕಾರಿಗಳು ತಮ್ಮನ್ನು ಬಂಧಿಸಬಹುದು ಎನ್ನುವ ಆತಂಕದಿಂದ ಹೇಮಂತ್‌ ಸೋರೆನ್‌ ಈಗಾಗಲೇ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಅವರು ದೆಹಲಿಯಲ್ಲಿ ಬಿಎಂಡಬ್ಲು ಕಾರಿನಲ್ಲಿ ತೆರಳಿದ್ದರು. ಕಾರಿನ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದರೂ ಆತನಿಂದಲೂ ಮಾಹಿತಿ ದೊರೆತಿಲ್ಲ. ಅಲ್ಲದೇ ದೆಹಲಿಯಲ್ಲಿರುವ ಸೋರೆನ್‌ ಮನೆ ಹಾಗೂ ಖಾರ್ಜಂಡ್‌ ಕಚೇರಿ, ನಿವಾಸದಲ್ಲೂ ವಿಚಾರಣೆ ನಡೆಸಿದ್ದರೂ ಎಲ್ಲಿದ್ಧಾರೆ ಎನ್ನುವ ನಿಖರ ಮಾಹಿತಿಯೇ ಇಲ್ಲ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಸೋರೆನ್‌ ಕಚೇರಿಯಿಂದ ಪತ್ರವೊಂದನ್ನು ಇಡಿಗೆ ರವಾನಿಸಲಾಗಿದ್ದು, ಮಂಗಳವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನುವ ವಿಷಯ ತಿಳಿಸಲಾಗಿದೆ. ಜತೆಗೆ ಜಾರ್ಖಂಡ್‌ ಮುಕ್ತಿ ಮೋರ್ಚಾದ ಕೆಲ ನಾಯಕರು ಈ ಕುರಿತು ಮಾತನಾಡಿದ್ದು, ಸೋರೆನ್‌ ನಮ್ಮ ಸಂಪರ್ಕದಲ್ಲಿದ್ದಾರೆ. ರಾಜಕೀಯ ಕಾರಣದಿಂದ ಸೋರೆನ್‌ಗೆ ತೊಂದರೆ ನೀಡಲಾಗುತ್ತಿದೆ. ಸದ್ಯವೇ ಅವರು ರಾಂಚಿಗೆ ಬರಲಿದ್ಧಾರೆ ಎಂದು ತಿಳಿಸಿದ್ದಾರೆ.

More articles

Latest article