ಮಧ್ಯರಾತ್ರಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಪಬ್ ನಲ್ಲಿ ಪಾರ್ಟಿ ಮಾಡಿದ ಪ್ರಕರಣ ಮೇಲೆ ನಟ ದರ್ಶನ್ ಸೇರಿ 8 ಮಂದಿಗೆ ಸೋಮವಾರ ವಿಚಾರಣೆ ನಡೆಸಿದ ಬೆನ್ನಲ್ಲೇ ಇಂದು ಪಬ್ನ ಲೈಸೆನ್ಸ್ ಅಮಾನತುಗೊಳಿಸಿ ಅಬಕಾರಿ ಆಯುಕ್ತರು ಆದೇಶ ನೀಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡು ಗಳಿಕೆಯಲ್ಲಿ 100 ಕೋಟಿ ಕ್ಲಬ್ ಸೇರಿದೆ. ವಿದೇಶದಲ್ಲಿ ಕೂಡ ಹವಾ ಎಬ್ಬಿಸಿದೆ. ಈ ಖುಷಿಯಲ್ಲಿ ಚಿತ್ರತಂಡ ಜನವರಿ 3ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಸಕ್ಸಸ್ ಪಾರ್ಟಿ ಇಟ್ಟುಕೊಂಡಿತ್ತು. ಅದರಲ್ಲಿ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಾಯಕ ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಭಾಗಿಯಾಗಿದ್ದರು.
ಬಾರ್ ಅಂಡ್ ರೆಸ್ಟೋರೆಂಟ್ ಗೆ ವಿಧಿಸಿರುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಬಾಗಿಲು ಹಾಕಬೇಕು. ಆದರೆ ಚಿತ್ರತಂಡ ಮಧ್ಯರಾತ್ರಿ ಮೀರಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ದು ಪಾರ್ಟಿ ಮುಗಿಸಿಕೊಂಡು ಹೊರಬರುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಜೆಟ್ ಲಾಗ್‌ನಲ್ಲಿ ನಡೆದ ಪಾರ್ಟಿಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ರಾಕ್ಲೈನ್ ವೆಂಕಟೇಶ್ಗೆ ಪ್ರಶ್ನೆಗಳ ಸುರಿಮಳೆಗೈದು ಉತ್ತರ ದಾಖಲಿಸಿಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಈಗ 25 ದಿನಗಳ ಕಾಲ ಜೆಟ್ ಲ್ಯಾಗ್ ಪಬ್ ಲೈಸೆನ್ಸ್ ಅಮಾನತುಗೊಈಸಿರುವುದಾಗಿ ರಾಜಾಜಿನಗರ ವಿಭಾಗದ ಅಬಕಾರಿ ಇಲಾಖೆ ಮಾಹಿತಿ ತಿಳಿಸಿದೆ.