ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹಿಸಿ ಮಂಡಿಸಿದ್ದ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು. ಇದರಿಂದ ಸದನದಲ್ಲಿ ಇಂದು ಭಾರಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು.
ಬಿಜೆಪಿ ಸದಸ್ಯರ ವರ್ತನೆಯಿಂದ ಕೆರಳಿದ ಸ್ಪೀಕರ್ ಅಬ್ದುಲ್ ರಾಥ ಅವರು, ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಬಿಜೆಪಿ ಶಾಸಕರನ್ನು ಹೊರಹಾಕುವಂತೆ
ಮಾರ್ಷಲ್ಗಳಿಗೆ ಸೂಚಿಸಿದರು. ಇಂದು ಬೆಳಿಗ್ಗೆ ಸದನ ಆರಂಭವಾದ ಬೆನ್ನಲ್ಲೇ ವಿಶೇಷ ಸ್ಥಾನಮಾನ ಮರುಸ್ಥಾಪನೆ ನಿರ್ಣಯದ ವಿರುದ್ಧ
ಬಿಜೆಪಿ ಸದಸ್ಯರು ಪ್ರತಿಭಟಿಸಿದರು.
ಬಿಜೆಪಿ ಶಾಸಕ, ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ವಿಶೇಷ ಸ್ಥಾನಮಾನ ಮರುಸ್ಥಾಪನೆ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡುತ್ತಿದ್ದ ವೇಳೆ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಶೇಖ್
ಖುರ್ಷಿದ್ ಸದನದ ಬಾವಿಳಿಗಿಳಿದು ಸಂವಿಧಾನದ 370ನೇ ವಿಧಿ ಮರುಸ್ಥಾಪಿಸುವ ಬ್ಯಾನರ್ ಪ್ರದರ್ಶಿಸಿದರು.
ನಂತರ ಸದನವನ್ನು 15 ನಿಮಿಷ ಮುಂದೂಡಲಾಯಿತು. ಸದನ ಪುನರಾರಂಭಿಸಿದ ಬಳಿಕವೂ ಬಿಜೆಪಿ ಪ್ರತಿಭಟನೆ ಮುಂದುವರೆಸಿತು. ತಮ್ಮ ತಮ್ಮ ಆಸನಗಳಿಗೆ ಮರಳುವಂತೆ ಸ್ಪೀಕರ್ ಮನವಿ ಮಾಡಿದರೂ ಬಿಜೆಪಿ ಸದಸ್ಯರು ಧರಣಿಯನ್ನು ಮುಂದುವರೆಸಿದರು. ಬಿಜೆಪಿ ಸದಸ್ಯರಿಗೆ ಸ್ಪೀಕರ್ ಎಚ್ಚರಿಕೆ ನೀಡಿದರು. ಭಾರಿ ಗದ್ದಲದ ನಡುವೆ ಬಿಜೆಪಿ ಸದಸ್ಯರನ್ನು ಹೊರಹಾಕುವಂತೆ ಸ್ಪೀಕರ್ ಸೂಚಿಸಿದರು. ಇದು ಬಿಜೆಪಿ ಶಾಸಕರು ಹಾಗೂ ಮಾರ್ಷಲ್ಗಳ ನಡುವೆ ಗಲಾಟೆಗೆ ಕಾರಣವಾಯಿತು.
ಸ್ಪೀಕರ್ ಸೂಚನೆಯಂತೆ ಬಿಜೆಪಿಯ ಕನಿಷ್ಠ ಮೂವರು ಸದಸ್ಯರನ್ನು ಸದನದಿಂದ ಹೊರಹಾಕಲಾಗಿದೆ. ಬಿಜೆಪಿ ಸದಸ್ಯರು ‘ಭಾರತ್ ಮಾತಾ ಕೀ ಜೈ’ ಮತ್ತು ನ್ಯಾಷನಲ್ ಕಾನ್ದ್ರರೆನ್ಸ್ ಸದಸ್ಯರು 370ನೇ ವಿಧಿ ಪರ ಘೋಷಣೆಗಳನ್ನು ಕೂಗಿದರು. ಬುಧವಾರ ಬಿಜೆಪಿ ಸದಸ್ಯರ ಪ್ರತಿಭಟನೆ, ಗದ್ದಲದ ನಡುವೆಯೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.