Wednesday, May 22, 2024

ಜಗದೀಶ್ ಶೆಟ್ಟರ್ ಎಂಬ ಪುಣ್ಯಕೋಟಿ ಸೇರಬೇಕಾದ ಕಡೆಯೇ ಸೇರಿದೆ…

Most read

ಜಗದೀಶ್ ಶೆಟ್ಟರ್ ಅವರು ಮಾತ್ರ ಹಿಂದಿನಷ್ಟು ಅಧಿಕಾರಯುತವಾಗಿ ಪಕ್ಷದಲ್ಲಿ ತಮ್ಮ ಸ್ಥಾನ ಪಡೆಯಲಾರರು. ಏನೇ ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೊರಹೋಗಿ ಬಂದವರಲ್ಲವೇ? ಆ ಅಳುಕು ಜಗದೀಶ್ ಶೆಟ್ಟರ್ ಅವರಿಗೂ ಇರುತ್ತದೆ. ತನ್ನ ರಾಜಕೀಯ ಜೀವನದ ಉಳಿದ ಕಾಲವನ್ನು ತನ್ನ ಮನೆಯಲ್ಲೇ ಕಳೆದೆನೆಂಬ ಸಮಾಧಾನ ಜಗದೀಶ್ ಶೆಟ್ಟರ್ ಅವರಿಗೆ ಉಳಿಯಬಹುದು ಅಷ್ಟೆ- ದಿನೇಶ್ ಕುಮಾರ್ ಎಸ್.ಸಿ.

ಹಿಂದೆ ಬಂದರೆ ಒದೆಯಬೇಡಿ, ಮುಂದೆ ಬಂದರೆ ಹಾಯಬೇಡಿ… ಜಗದೀಶ್ ಶೆಟ್ಟರ್ ರಾಜಕೀಯವಾಗಿ ಬೆಳೆದು ಬಂದಿರುವುದೇ ಹೀಗೆ. ಬಿಜೆಪಿ ತೊರೆಯುವಾಗಲೂ ಅವರು ಮೋದಿ, ಶಾ, ಯಡಿಯೂರಪ್ಪ ಆದಿಯಾಗಿ ಯಾರ ವಿರುದ್ಧವೂ ಕಹಿನುಡಿಗಳನ್ನಾಡಿರಲಿಲ್ಲ. ತಮಗೆ ಟಿಕೆಟ್ ತಪ್ಪಿಸಲು ಸಂತೋಷ್ ಕಾರಣ ಎಂಬ ಅಸಮಾಧಾನ  ಅವರಿಗಿತ್ತು. ಆದರೂ ಅವರ ಹೆಸರು ಹೇಳಿ ಟೀಕಿಸುವ ಧೈರ್ಯವನ್ನೂ ಪ್ರದರ್ಶಿಸಿರಲಿಲ್ಲ. ಈಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುವಾಗಲೂ ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿಲ್ಲ. ಕಾಂಗ್ರೆಸ್ ನಲ್ಲಿ ನನ್ನನ್ನು ಗೌರವದಿಂದಲೇ ನಡೆಸಿಕೊಂಡರು. ಅಲ್ಲಿ ಬೇಜಾರಾಗಿ ಇಲ್ಲಿಗೆ ಬರುತ್ತಿಲ್ಲ, ಇದು ನನ್ನ ಮನೆ ಅದಕ್ಕಾಗಿ ವಾಪಾಸಾಗುತ್ತಿದ್ದೇನೆ ಎಂದರು.

ಪ್ರಶ್ನೆಗಳು ಹಾಗೇ ಉಳಿದುಬಿಡುತ್ತವೆ. ಬಿಜೆಪಿ ನಿಮ್ಮ ಮನೆಯಾಗಿದ್ದರೆ, ಮನೆ ಬಿಟ್ಟು ಯಾಕೆ ಹೋದಿರಿ ಎಂದರೆ ಜಗದೀಶ್ ಶೆಟ್ಟರ್ ಅವರ ಬಳಿ ಉತ್ತರವಿರಲು ಸಾಧ್ಯವಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಶೆಟ್ಟರ್ ತಮ್ಮ ಮನೆಯನ್ನು ತೊರೆದಿದ್ದರು. ಈಗ ಅವರ ಸ್ವಾಭಿಮಾನ ಬಿಜೆಪಿಯಿಂದ ಮರುಸ್ಥಾಪನೆಯಾಗಿದೆಯೇ? ಹಾಗೇನೂ ಕಾಣುತ್ತಿಲ್ಲ. ಹಾಗಿದ್ದರೆ ಯಾವ ಒತ್ತಡಕ್ಕೆ ಒಳಗಾಗಿ ಶೆಟ್ಟರ್ ಬಿಜೆಪಿಗೆ ಸೇರಿದರು?

ಶೆಟ್ಟರ್‌ ಮರಳಿ ಬಿಜೆಪಿಗೆ

ಕಳೆದ ವರ್ಷ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಅವರಿಗೆ ಅದು ಅಪಮಾನದಂತೆ ತೋರಿತು. ಒಂದಷ್ಟು ಪ್ರತಿರೋಧ ತೋರಿದರೆ ಬಿಜೆಪಿ ಹೈಕಮಾಂಡ್ ಕರುಣೆ ತೋರಬಹುದು ಎಂಬುದು ಅವರ ಎಣಿಕೆಯಾಗಿತ್ತು. ಆದರೆ ದೆಹಲಿಯ ಬಾಸ್ ಗಳು ಜಪ್ಪಯ್ಯ ಅನ್ನಲಿಲ್ಲ. ಕೊನೆಗೆ ಶೆಟ್ಟರ್ ಬಂಡಾಯದ ಬಾವುಟ ಹಾರಿಸಿದರು. ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಇದೆಲ್ಲ ನಡೆಯುವುದಕ್ಕೆ ಮುನ್ನ ಬಿಜೆಪಿಯಲ್ಲಿ ಯಾರಾದರೂ ಹೀಗೆ ಬಂಡಾಯವೆದ್ದು ಹೊರಹೋಗಬಹುದು ಎಂದು ಊಹಿಸಿದರೆ ಕೊನೆಯ ಹೆಸರು ಶೆಟ್ಟರ್ ಅವರದ್ದೇ ಆಗಿತ್ತು. ಶೆಟ್ಟರ್ ಅವರ ಸೌಮ್ಯ ಸ್ವಭಾವವನ್ನು ನೋಡಿದವರು ಅವರು ಇಂಥದ್ದೊಂದು ತೀರ್ಮಾನವನ್ನು ಕೈಗೊಳ್ಳಬಹುದು ಎಂದು ಖಂಡಿತ ಭಾವಿಸಿರಲಿಲ್ಲ. ಶೆಟ್ಟರ್ ಮೊದಲ ಬಾರಿ ತಮ್ಮ ಸ್ವಭಾವಕ್ಕೆ ವಿರುದ್ಧವಾದ ರಾಜಕೀಯ ಪಟ್ಟನ್ನು ಪ್ರಯೋಗಿಸಿದ್ದರು. 

ಕಾಂಗ್ರೆಸ್ ಪಕ್ಷ  ತನ್ನ ಮಡಿವಂತಿಕೆಯನ್ನು ಬಿಟ್ಟು ಅಪ್ಪಟ ಸಂಘ ಪರಿವಾರದ ಹಿನ್ನೆಲೆಯ ಜಗದೀಶ್ ಶೆಟ್ಟರ್ ಅವರನ್ನು ಕೈಚಾಚಿ ಸ್ವಾಗತಿಸಿಕೊಂಡಿತು.  ಅದೇ ದಿನಗಳಲ್ಲಿ ಮತ್ತೋರ್ವ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್ ತೆಕ್ಕೆಗೆ ಸರಿದುಹೋದರು. ಈ ಎರಡು ಸೇರ್ಪಡೆಯ ಹಿನ್ನೆಲೆಯಲ್ಲಿ ಇದ್ದಿದ್ದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಲಕ್ಷ್ಮಣ ಸವದಿ ಗೆದ್ದು ಶಾಸಕರಾದರು. ಆದರೆ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಬಿಟ್ಟಿದ್ದು ದುಬಾರಿಯಾಯಿತು. ಭಾರತೀಯ ಜನತಾ ಪಕ್ಷದ ನಾಯಕರು ಹಠಕ್ಕೆ ಬಿದ್ದವರಂತೆ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಟೆಂಟು ಹೂಡಿದರು. ಜಗದೀಶ್ ಶೆಟ್ಟರ್ ಸೋಲಿಸಲು ಏನೇನೆಲ್ಲ ಕಾರ್ಯತಂತ್ರ ಹೂಡಬೇಕಿತ್ತೋ ಎಲ್ಲವನ್ನೂ ಮಾಡಿದರು. ಏನು ನಡೆಯುತ್ತಿದೆ ಎಂಬುದು ಶೆಟ್ಟರ್ ಅವರಿಗೆ ಗೊತ್ತಾಗುವ ಮುನ್ನವೇ ಕಾಲ ಮಿಂಚಿಹೋಗಿತ್ತು. ಏನ್ರೀ ಇದು, ಮೊದಲ ಬಾರಿ ನನ್ನ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚಿಕೆಯಾಗುತ್ತಿದೆ ಎಂದು ಗೊಣಗಿದರು ಶೆಟ್ಟರ್. ಪಕ್ಷ ಬಿಟ್ಟು ಮೋಸ ಮಾಡಿದರು ಎಂದು ಶೆಟ್ಟರ್ ವಿರುದ್ಧ ದೊಡ್ಡ ಮಟ್ಟದ ಕ್ಯಾಂಪೇನ್ ನಡೆದುಹೋಯಿತು. ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯಿತು. ಶೆಟ್ಟರ್ ಸೋತರು, ಅವರ ಹಳೆಯ ಶಿಷ್ಯ ಮಹೇಶ್ ಟೆಂಗಿನಕಾಯಿ ಗೆದ್ದು ಬೀಗಿದರು. ಅಸಲಿಗೆ ಗೆದ್ದಿದ್ದು ಟೆಂಗಿನಕಾಯಿಯಲ್ಲ, ಬಿಜೆಪಿಯವರ ಸೇಡು. ಬಿಜೆಪಿಯಲ್ಲಿ ಹೈಕಮಾಂಡೇ ಸರ್ವಶ್ರೇಷ್ಠ. ಅದರ ವಿರುದ್ಧ ತೊಡೆತಟ್ಟಿದರೆ ಏನು ಮಾಡುತ್ತೇವೆ ಎಂಬುದನ್ನು ಅವರು ತೋರಿಸಬೇಕಿತ್ತು, ತೋರಿಸಿದರು.

ಶೆಟ್ಟರ್‌ ಕಾಂಗ್ರೆಸ್‌ ಸೇರಿದಾಗ

ಸೋತ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷ ಕೈ ಬಿಡಲಿಲ್ಲ. ವಿಧಾನಪರಿಷತ್ ಸದಸ್ಯತ್ವ ನೀಡಿ ಗೌರವಿಸಿತು. ಆದರೆ ಸಂಘಪರಿವಾರದ ಹಿನ್ನೆಲೆಯಿಂದ ಬಂದ ಶೆಟ್ಟರ್ ಗೆ ಕಾಂಗ್ರೆಸ್ ಯಾವತ್ತಿಗೂ ತನ್ನ ಮನೆ ಎನ್ನಿಸಲು ಸಾಧ್ಯವೇ ಇರಲಿಲ್ಲ. ಅದಕ್ಕಿಂತ ಮಿಗಿಲಾಗಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಧೈರ್ಯವೂ ಅವರಿಗೆ ಉಳಿದಿರಲಿಲ್ಲ. ಕಾಂಗ್ರೆಸ್ ಅವರಿಗೆ ಹಂಗಿನ ಅರಮನೆಯಾಯಿತು. ತನ್ನ ಮನೆಗೆ ವಾಪಾಸು ಹೋಗುವ ಹಂಬಲ ಶುರುವಾಯಿತು. ಈಗ ಹೋಗಿದ್ದಾರೆ.

ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಏನು ಗಳಿಸಲಿದ್ದಾರೆ ಎಂಬುದನ್ನು ಕಾಲವೇ ಹೇಳುತ್ತದೆ. ಬಹುಶಃ ಅವರು ಲೋಕಸಭಾ ಚುನಾವಣೆಯಿಂದ ಸ್ಪರ್ಧಿಸಬಹುದು. ಆದರೆ ಬಿಜೆಪಿ ಹೀಗೆ ಘರ್ ವಾಪಸಿ ಕಾರ್ಯಾಚರಣೆ ಯಾಕೆ ಮಾಡಿತು ಎಂಬುದು ಚರ್ಚೆಗೆ ಒಳಗಾಗಬೇಕಾದ ವಿಷಯ. ಕಳೆದ ಚುನಾವಣೆಯಲ್ಲಿ 34 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಶೆಟ್ಟರ್ ಅವರನ್ನು ಸೋಲಿಸಲಾಗಿತ್ತು. ಹೀಗಾಗಿ ಶೆಟ್ಟರ್ ಬಿಜೆಪಿಗೆ ಅನಿವಾರ್ಯವೇನೂ ಆಗಿರಲಿಲ್ಲ. ಆದರೆ ಸೇರಿಸಿಕೊಂಡರೆ ಕಳೆದುಕೊಳ್ಳುವುದೂ ಏನೂ ಇರಲಿಲ್ಲ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯಿಂದ ಹೊರಹೋದವರು, ಬಿಜೆಪಿಗೆ ಬರಲು ಕಾದಿರುವವರನ್ನು ಸೇರಿಸಿಕೊಂಡರೆ ಅದು ಧನಾತ್ಮಕವಾದ ಸಂದೇಶ ಹೋಗುತ್ತದೆ ಎಂಬುದು ಬಿಜೆಪಿಯವರ ಭಾವನೆ ಇದ್ದಿರಬಹುದು.

ಆದರೆ ಜಗದೀಶ್ ಶೆಟ್ಟರ್ ಅವರು ಮಾತ್ರ ಹಿಂದಿನಷ್ಟು ಅಧಿಕಾರಯುತವಾಗಿ ಪಕ್ಷದಲ್ಲಿ ತಮ್ಮ ಸ್ಥಾನ ಪಡೆಯಲಾರರು. ಏನೇ ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೊರಹೋಗಿ ಬಂದವರಲ್ಲವೇ? ಆ ಅಳುಕು ಜಗದೀಶ್ ಶೆಟ್ಟರ್ ಅವರಿಗೂ ಇರುತ್ತದೆ. ತನ್ನ ರಾಜಕೀಯ ಜೀವನದ ಉಳಿದ ಕಾಲವನ್ನು ತನ್ನ ಮನೆಯಲ್ಲೇ ಕಳೆದೆನೆಂಬ ಸಮಾಧಾನ ಜಗದೀಶ್ ಶೆಟ್ಟರ್ ಅವರಿಗೆ ಉಳಿಯಬಹುದು ಅಷ್ಟೆ.

ಶೆಟ್ಟರ್ ಹಾಗೆಯೇ, ಪುಣ್ಯಕೋಟಿಯಂತೆ. ಅವರು ಆಕ್ರಮಣಕಾರಿ ರಾಜಕೀಯಪಟುವಿನಂತೆ ಕಾಣಿಸಿದ್ದೇ ಇಲ್ಲ. ಬಿಜೆಪಿಯ ಆರಂಭದ ದಿನಗಳಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಬಿ.ಶಿವಪ್ಪ ಅವರಿಗೆ ಒಲಿಯಬೇಕಿದ್ದ ವಿರೋಧ ಪಕ್ಷದ ನಾಯಕನ ಸ್ಥಾನ ಜಗದೀಶ್ ಶೆಟ್ಟರ್ ಅವರಿಗೆ ಒಲಿದು ರಾಜಕೀಯದ ಗ್ರಾಫ್ ದಿಢೀರನೆ ಮೇಲೆ ಏರಿತು. ಚುನಾವಣೆಯಲ್ಲಿ ಸೋತಿದ್ದ ಬಿ.ಎಸ್.ಯಡಿಯೂರಪ್ಪ ತನ್ನ ಅನುಪಸ್ಥಿತಿಯಲ್ಲಿ ಬಿ.ಬಿ.ಶಿವಪ್ಪ ಪ್ರಭಾವಿ ಲಿಂಗಾಯಿತ ಮುಖಂಡರಾಗಿ ಬೆಳೆಯುತ್ತಾರೆ ಎಂಬ ಭೀತಿಗೆ ಸಿಲುಕಿ, ಜಗದೀಶ್ ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವಲ್ಲಿ ಸಫಲರಾಗಿದ್ದರು.

ಶೆಟ್ಟರ್ ಮುಖ್ಯಮಂತ್ರಿಯಾಗಿದ್ದೂ ಅಚ್ಚರಿಯ ಬೆಳವಣಿಗೆಯಲ್ಲೇ. ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಸೇರಿದ್ದ ಬಿ.ಎಸ್.ಯಡಿಯೂರಪ್ಪ, ತಮ್ಮ ಸ್ಥಾನದಲ್ಲಿ ತಮ್ಮ ನಂಬಿಕಸ್ಥ, ಬೇಕಾದಾಗ ಸ್ಥಾನ ಬಿಟ್ಟುಕೊಡಬಲ್ಲ ಅನುಯಾಯಿಯನ್ನಾಗಿ ಡಿ.ವಿ.ಸದಾನಂದಗೌಡರನ್ನು ಗುರುತಿಸಿ ಮುಖ್ಯಮಂತ್ರಿ ಮಾಡಿದರು. ಆದರೆ ಸದಾನಂದಗೌಡರು ದಿನಗಳೆದಂತೆ ಯಡಿಯೂರಪ್ಪನವರ ಮಾತು ಕೇಳದಂತಾದರು. ಆಗ ಸಿಟ್ಟಿಗೆದ್ದ ಯಡಿಯೂರಪ್ಪ ಸದಾನಂದಗೌಡರನ್ನು ಇಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಶೆಟ್ಟರ್ ಈ ಬಾರಿಯೂ ಅದೃಷ್ಟದ ಆಟದಲ್ಲಿ ಮುಖ್ಯಮಂತ್ರಿಯಾಗಿದ್ದರು.  ಮುಂದೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಅಲಿಖಿತ ಸಂಪ್ರದಾಯವನ್ನು ಮುರಿದು ಮಾಜಿ ಮುಖ್ಯಮಂತ್ರಿಯೊಬ್ಬರು ಕೇವಲ ಮಂತ್ರಿಯಾಗಿ ಕೆಲಸ ಮಾಡಿದ ಉದಾಹರಣೆಯೊಂದನ್ನು ಜಗದೀಶ್ ಶೆಟ್ಟರ್ ಸೃಷ್ಟಿಸಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಹುಬ್ಬಳ್ಳಿ-ಧಾರವಾಡದ ರಾಜಕಾರಣ ಹಿಂದೆ ಇದ್ದ ಹಳಿಗೆ ಹೊರಳಿಕೊಂಡಿದೆ.

ದಿನೇಶ್ ಕುಮಾರ್ ಎಸ್.ಸಿ.

More articles

Latest article