ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಅವಮಾನಿತರಾಗಿ ರಾಜಕೀಯ ಆಶ್ರಯ ಅರಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು ಎಂದು ಸಚಿವ ದಿನೇಶ್ ಗುಂಡುರಾವ್ ಟೀಕಿಸಿದ್ದಾರೆ.
ಜನವರಿ 25 ರಂದು ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಗೊಂಡ ವಿಚಾರವಾಗಿ ʼಎಕ್ಸ್ʼ ಮಾಡಿರುವ ಸಚಿವರು ʼನಮ್ಮ ಪಕ್ಷ ಅವರಿಗೆ ವಿಧಾನಸಭಾ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಸೋತರೂ ಸಹ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿತ್ತು. ಇದಕ್ಕಿಂತ ಹೆಚ್ಚಿನ ಗೌರವ ಕೊಡಲು ಇನ್ನೇನು ಸಾಧ್ಯ.? ಈಗ ಅವಮಾನ ಮಾಡಿದ ಪಕ್ಷಕ್ಕೇ(ಬಿಜೆಪಿ) ಮರಳಿ ಹೋಗಿದ್ದಾರೆ. ಶೆಟ್ಟರ್ ಆತ್ಮಗೌರವ ಕಳೆದುಕೊಂಡು ಬಿಜೆಪಿಗೆ ಮರಳಿ ಹೋಗುವ ದುಸ್ಥಿತಿ ಬರಬಾರದಿತ್ತುʼ ಎಂದು ವ್ಯಂಗ್ಯವಾಡಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ. ಶೆಟ್ಟರ್‌ರಂತಹ ಸಾವಿರಾರು ನಾಯಕರನ್ನು ಸೃಷ್ಟಿಸುವ ತಾಕತ್ತು ಕಾಂಗ್ರೆಸ್‌ಗಿದೆ ಎಂದು ಹೇಳಿದ್ದಾರೆ.
ʼಶೆಟ್ಟರ್ ಹಿರಿಯ ರಾಜಕಾರಣಿ. ಆದರೆ ರಾಜಕೀಯ ಸಂದ್ಯಾಕಾಲದಲ್ಲಿ ತಮ್ಮನ್ನು ಅವಮಾನಿಸಿದ ಪಕ್ಷಕ್ಕೆ ಮರಳಿ ಸೇರಿಕೊಳ್ಳುವ ಮೂಲಕ ಶೆಟ್ಟರ್ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆʼ ಎಂದಿದ್ದಾರೆ.

 
                                    
