ಮಂಡ್ಯದ ಕೆರೆಗೋಡಿನ ಪ್ರಕರಣದ ನಂತರ ಹನುಮ ಧ್ವಜ ಎಂಬ ಹೆಸರು ಕರ್ನಾಟಕದಲ್ಲಿ ವ್ಯಾಪಕ ಬಳಕೆ ಆಗುತ್ತಿದೆ. ಹಾಗಾಗಿ ಹಿಂದೂಗಳು ಬಳಸುವ ಕೇಸರಿ ಧ್ವಜ ಮತ್ತು ಹನುಮ ಧ್ವಜದ ಇತಿಹಾಸ ಕೆದಕುವ ಒಂದು ಪ್ರಯತ್ನವನ್ನು ಚಿಂತಕ ಪ್ರವೀಣ್ ಎಸ್ ಶೆಟ್ಟಿಯವರು ಮಾಡಿದ್ದಾರೆ. ಬಹಳ ಕುತೂಹಲಕಾರಿಯಾದ ಈ ಶೋಧನೆಯ ಎರಡನೆಯ ಹಾಗೂ ಕೊನೆಯ ಭಾಗ ಇಲ್ಲಿದೆ.
ಮೂಲ ಮರಾಠಾ ಧ್ವಜವು ಸಮಗ್ರ ಹಿಂದೂ ಧರ್ಮದ ಧ್ವಜ ಎಂದು ಯಾವ ಕಾಲಘಟ್ಟದಲ್ಲಿ ಬಳಕೆಗೆ ಬಂತು?
ಅದು 1925 ರಲ್ಲಿ ಆರೆಸ್ಸೆಸ್ ಸ್ಥಾಪನೆಯಾದ ಮೇಲೆ! ಅದಕ್ಕಿಂತ ಮುಂಚೆ ಹಿಂದೂಗಳದ್ದೆ ಎಂದು ಯಾವುದೇ ಧಾರ್ಮಿಕ ಧ್ವಜ ಇರಲಿಲ್ಲ. ಆರೆಸ್ಸೆಸ್ ನವರು ಮರಾಠಾ ಧ್ವಜವನ್ನು ಸಮಸ್ತ ಹಿಂದೂ ಧರ್ಮದ ಧ್ವಜ ಎಂದು ಸ್ವೀಕರಿಸಲು ಕಾರಣವೇನು ಗೊತ್ತೇ? ಶಿವಾಜಿ ಮೊದಲಿಗೆ ಬಳಸಿದ ಈ ಭಗವಾ ಧ್ವಜವನ್ನು ಕೊನೆಯದಾಗಿ ಬಳಸಿದ್ದು 1818 ರಲ್ಲಿ ಎರಡನೇ ಬಾಜಿರಾವ್ ಪೇಶ್ವೆ. ಇಸವಿ 1818 ರ ಕೊರೆಗಾಂವ್ ಯುದ್ಧದಲ್ಲಿ ಬಾಜಿರಾವ್ ಪೇಶ್ವೆ ಸೋತು ಬ್ರಿಟಿಷರ ಸೆರೆಯಾದನು. ಈ ಪೇಶ್ವೆಗಳು ಚಿತ್ಪಾವನ ಬ್ರಾಹ್ಮಣರು. 1925 ರಲ್ಲಿ ಆರೆಸ್ಸೆಸ್ ಸ್ಥಾಪಿಸಿದವರಲ್ಲಿಯೂ ಹೆಚ್ಚಿನ ನೇತಾರರು ಮರಾಠಿ ಚಿತ್ಪಾವನ ಬ್ರಾಹ್ಮಣರು. ಹಾಗಾಗಿ ಶೂದ್ರ ಶಿವಾಜಿಯ ಮರಾಠಾ ಧ್ವಜವು ಮರಾಠಿ ಬ್ರಾಹ್ಮಣ ಆರೆಸ್ಸೆಸ್ಸಿಗರಿಗೆ ಪ್ರಿಯವಾಯಿತು. ಅದು ಈಗ ದಡ್ಡ ಓಬಿಸಿ ಪುಂಡರ ಕೈಯಲ್ಲಿ ಕೋಮು ದ್ವೇಷ ಹಬ್ಬಿಸುವ ಸಾಧನವೂ ಆಯಿತು.
ಕನ್ನಡಿಗರಿಗೆ ಈ ಮರಾಠಾ ಧ್ವಜವು ಅಪಥ್ಯವಾಗಬೇಕಿತ್ತು…
ನಿಜವಾಗಿ ಕನ್ನಡಿಗರಿಗೆ ಈ ಮರಾಠಾ ಧ್ವಜವು ಅಪಥ್ಯವಾಗಬೇಕಿತ್ತು. ಯಾಕೆಂದರೆ ಶಿವಾಜಿ ಕಾಲದಲ್ಲಿ ಮಾತ್ರವಲ್ಲ ಪೇಶ್ವೆಗಳ ಕಾಲದಲ್ಲಿಯೂ ಮರಾಠ ರಾಜರು ಮುಸ್ಲಿಂ ರಾಜರಿಗಿಂತ ಹಲವು ಪಟ್ಟು ಹೆಚ್ಚು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿದ್ದಾರೆ. ಜತೆಗೆ ಕರ್ನಾಟಕದ ಶ್ರೀಮಂತ ವರ್ತಕರನ್ನು ಮತ್ತು ಜಮೀನುದಾರರನ್ನು ಭೀಕರವಾಗಿ ಲೂಟಿ ಮಾಡಿ ವಿರೋಧಿಸಿದವರನ್ನು ನಿರ್ದಯವಾಗಿ ಕೊಂದು ಭಯಂಕರ ರಕ್ತಪಾತ ಮಾಡಿದ್ದಾರೆ ಮರಾಠರು ಮತ್ತು ಪೇಶ್ವೆಗಳು. ಹಿಂದೂ ಶೈವರಿಗೆ ಅತಿ ಪವಿತ್ರ ಎಂದು ಪರಿಗಣಿಸಲ್ಪಟ್ಟ ಶೃಂಗೇರಿ ಮಠವನ್ನೇ ಎರಡನೇ ಬಾಜಿರಾವ್ ಪೇಶ್ವೆ 1795 ರಲ್ಲಿ ಲೂಟಿ ಮಾಡಿದನು. ಆಗ ಪೇಶ್ವೆಯ ಲೂಟಿಕೋರ ಸೈನಿಕರನ್ನು ವಿರೋಧಿಸಿದ ಶೃಂಗೇರಿಯ ಗುರುಕುಲದ ಸಾವಿರಾರು ಬ್ರಾಹ್ಮಣ ವಿದ್ಯಾರ್ಥಿಗಳನ್ನೆಲ್ಲಾ ನಿರ್ದಯವಾಗಿ ಮರಾಠರು ಹತ್ಯೆ ಮಾಡಿದರಂತೆ. ಆಗಿನ ಕಾಲದಲ್ಲಿ ಪೇಶ್ವೆ ಸೈನ್ಯದೊಟ್ಟಿಗೆ ಅಡುಗೆಗಾಗಿ ಮತ್ತು ಸಹಾಯಕರಾಗಿ ಶೃಂಗೇರಿಗೆ ಬಂದಿದ್ದ ಮರಾಠಿ ಚಿತ್ಪಾವನ ಬ್ರಾಹ್ಮಣರು ಮತ್ತು ಕರಾಡೆ ಬ್ರಾಹ್ಮಣರು ಚಿಕ್ಕಮಗಳೂರಿನ ಕೊಪ್ಪ ತಾಲೂಕು ಹಾಗೂ ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಳೀಯರ ಭೂಮಿ ಕಬಳಿಸಿ ಶಾಶ್ವತವಾಗಿ ನೆಲೆನಿಂತರು. (ಅವರ ಈಗಿನ ತಲೆಮಾರಿನ ಮರಾಠಿ ಬ್ರಾಹ್ಮಣ ಕುಟುಂಬಗಳು ಈಗಲೂ ಕೊಪ್ಪ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಕೃಷಿಕರಾಗಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಈ ಮರಾಠಿಗರ ಈಗಿನ ಯುವಕರು ಮಾತ್ರ ಟೆಕ್ಕಿಗಳಾಗಿ ಬೆಂಗಳೂರು ಸೇರಿದ್ದಾರೆ).
ಸ್ವತಃ ಶಿವಾಜಿಯ ನೇತೃತ್ವದಲ್ಲಿ 1665 ರಲ್ಲಿ ಮರಾಠಾ ಸೈನ್ಯವು ನಮ್ಮ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಎಂಬ ಶ್ರೀಮಂತ ಬಂದರು ನಗರವನ್ನು ಲೂಟಿ ಮಾಡಿತು ಹಾಗೂ ಅಂಕೋಲ ಕೋಟೆಯಲ್ಲಿ ಮರಾಠರನ್ನು ವಿರೋಧಿಸಿದ ಸಾವಿರಾರು ಸ್ಥಳೀಯ ‘ನಾಡವ’ ಜಾತಿಯ ಯೋಧರನ್ನು ನಿರ್ದಯವಾಗಿ ಕೊಂದು ಹಾಕಿತು. ತರುವಾಯ ಶಿವಾಜಿಯು ನಮ್ಮ ಕುಂದಾಪುರ ತಾಲೂಕಿನ ಬಸರೂರು ಎಂಬ ಸಮೃದ್ಧ ಬಂದರು ನಗರದ ಮೇಲೆ ದಾಳಿ ಮಾಡಿದನು. ಕರಿಮೆಣಸಿನ ವಿದೇಶಿ ವ್ಯಾಪಾರದಿಂದ ಬಹಳ ಧನಿಕರಾಗಿದ್ದ ಸ್ಥಳೀಯ ಹಿಂದೂ ಮತ್ತು ಜೈನ ವ್ಯಾಪಾರಿಗಳನ್ನು ಹಾಗೂ ಅಲ್ಲಿಯ ಶ್ರೀಮಂತ ಮಹಾಲಿಂಗೇಶ್ವರ ದೇವಸ್ಥಾನವನ್ನೂ ಶಿವಾಜಿಯೇ ಮಹಮ್ಮದ್ ಘಜನಿ ಮಾದರಿಯಲ್ಲಿ ಸಂಪೂರ್ಣ ಲೂಟಿ ಮಾಡಿದನು. ಆಗ ವಿರೋಧಿಸಿದ ಬಸರೂರಿನ ಬಿಲ್ಲವ, ಬೆಸ್ತ, ರಾಮ ಕ್ಷತ್ರಿಯ ಮತ್ತು ನಾಡವ ಜಾತಿಯ ಯೋಧರನ್ನು ಮರಾಠ ಸೈನ್ಯ ನಿರ್ದಯವಾಗಿ ಕೊಂದು ಹಾಕಿತು. ಆಗಲೂ ಮರಾಠಾ ಸೈನಿಕರು ಕೇಸರಿ-ಭಗವಾ ಧ್ವಜ ಹಿಡಿದುಕೊಂಡೇ ಈ ಪವಿತ್ರ ಮಹಾಲಿಂಗೇಶ್ವರ ದೇವಸ್ಥಾನವನ್ನು ಲೂಟಿ ಮಾಡಿದ್ದು! ಇಂತಹಾ ನಿರ್ದಯ ಲೂಟಿಕೋರ ಮರಾಠರ ಭಗವಾ ಧ್ವಜವು ಕನ್ನಡಿಗರಿಗೆ ಪವಿತ್ರ ಧಾರ್ಮಿಕ ಸಂಕೇತ ಹೇಗಾಗುತ್ತದೆ? ಸಮುದ್ರದ ನಡುವೆ ವ್ಯಾಪಾರಿ ಹಡಗುಗಳನ್ನು ಲೂಟಿ ಹೊಡೆಯುತ್ತಿದ್ದ ಅರಬಿ ಕಡಲ್ಗಳ್ಳರು ತಮ್ಮ ಹಡಗುಗಳ ಮೇಲೆ ಹಾರಿಸುತ್ತಿದ್ದ ತಲೆಬುರುಡೆಯ ಚಿಹ್ನೆ ಇದ್ದ ಕಪ್ಪು ಪತಾಕೆಗೂ ಮರಾಠರ ಭಗವಾ ಧ್ವಜಕ್ಕೂ ವ್ಯತ್ಯಾಸ ಏನಾದರೂ ಇದೆಯೇ?
ಪೇಶ್ವೆ ಆಡಳಿತದಲ್ಲಿ ಬಂಗಾಳ ಮತ್ತು ಪೂರ್ವ ಬಿಹಾರದಲ್ಲಿ ಮರಾಠರು ಅತ್ಯಂತ ಭೀಕರವಾಗಿ ಲೂಟಿ ಮಾಡಿ ನಾಲ್ಕು ಲಕ್ಷ ಜನರನ್ನು ನಿರ್ದಯವಾಗಿ ಕೊಂದಿದ್ದಕ್ಕಾಗಿ ಬಂಗಾಳದಲ್ಲಿ ‘ಮರಾಠಾ’ ಎಂಬ ಶಬ್ದವು ‘ಡಕಾಯಿತ’ ಎನ್ನುವ ಶಬ್ದಕ್ಕೆ ಪರ್ಯಾಯ ವಾಚಕವಾಗಿ ಈಗಲೂ ಬಳಕೆಯಲ್ಲಿದೆಯಂತೆ! ಈ ಮರಾಠರು ಭಗವಾ ಧ್ವಜ ಹಿಡಿದುಕೊಂಡೇ ಬಂಗಾಳ ಬಿಹಾರದ ಹಿಂದೂಗಳನ್ನು ಲೂಟಿ ಹೊಡೆದಿದ್ದು ಹಾಗೂ ಅಲ್ಲಿಯ ಜನರನ್ನು ಭೀಕರ ಹತ್ಯೆ ಮಾಡಿದ್ದು. ಕರ್ನಾಟಕದ ವೀರ ರಾಣಿ ಬೆಳವಡಿ ಮಲ್ಲಮ್ಮನ ಜತೆಗಿನ ಯುದ್ಧದಲ್ಲಿಯೂ ಮರಾಠರು ಇದೇ ಭಗವಾ ಧ್ವಜವನ್ನೇ ಹಿಡಿದುಕೊಂಡು ಮಲ್ಲಮ್ಮನ ಸೈನ್ಯದ ವಿರುದ್ಧ ಯುದ್ಧ ಮಾಡಿದ್ದು. ಆದರೆ ಆಗ ಮರಾಠರು ಸೋತರು ಹಾಗೂ ಕನ್ನಡಿಗರು ಗೆದ್ದರು.
ಶಿವಾಜಿಯ ಕಾಲದಲ್ಲಿ ಗುಜರಾತಿನ ಬಂದರು ನಗರ ಸೂರತ್. ಇದು ವಿದೇಶಿ ವ್ಯಾಪಾರಕ್ಕೆ ಉತ್ತರ ಭಾರತದ ಹೆಬ್ಬಾಗಿಲು ಎಂದು ಪ್ರಸಿದ್ಧವಾಗಿತ್ತು. ಹಾಗಾಗಿ ಅಲ್ಲಿಯ ಜೈನ ಹಾಗೂ ವೈಶ್ಯಾ ವ್ಯಾಪಾರಿಗಳು ಅತ್ಯಂತ ಧನಿಕರಾಗಿದ್ದರು. ಆಗ ಅದು ಮುಸ್ಲಿಂ ನವಾಬನ ಆಡಳಿತದಲ್ಲಿ ಇತ್ತು. ಆದರೂ ಅಲ್ಲಿ ಶಾಂತಿ ಸೌಹಾರ್ದತೆ ನೆಲೆಸಿತ್ತು. ಆದರೆ ಶಿವಾಜಿ ಸೂರತಿನ ಧನಿಕ ಜೈನ ಮತ್ತು ಬನಿಯಾ ವ್ಯಾಪಾರಿಗಳನ್ನು ಲೂಟಿ ಹೊಡೆಯಲೆಂದೇ ಮೂರು-ಮೂರು ಬಾರಿ ಸೂರತ್ ನಗರದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ಸಾಮಾನ್ಯ ಹಿಂದೂ-ಜೈನ ನಾಗರಿಕರನ್ನು ಭೀಕರವಾಗಿ ಲೂಟಿ ಮಾಡಿ ರಕ್ತದ ಕೊಡಿ ಹರಿಸಿದ್ದು ಕೂಡಾ ಭಗವಾ ಧ್ವಜದ ಅಡಿಯಲ್ಲಿಯೇ. ಇಂತಹಾ ರಕ್ತಸಿಕ್ತ ಭಗವಾ ಧ್ವಜವು ಈಗಿನ ಪ್ರಜಾತಂತ್ರದ ಕಾಲದಲ್ಲಿ ಸಮಸ್ತ ಹಿಂದೂಗಳನ್ನು ಪ್ರತಿನಿಧಿಸುವ ಪವಿತ್ರ ಪತಾಕೆಯಾಗಲು ಯೋಗ್ಯವಾಗಿದೆಯೇ? ಈ ಧ್ವಜದ ನಡುವೆ ಓಂ ಅಕ್ಷರ ಬರೆದರೆ ಅಥವಾ ರಾಮನ-ಹನುಮನ ಚಿತ್ರ ಹಾಕಿದ ಮಾತ್ರಕ್ಕೆ ಈ ಭಗವಾ ಧ್ವಜಕ್ಕೆ ಗಾಢವಾಗಿ ಮೆತ್ತಿರುವ ಹಿಂದೂಗಳ ರಕ್ತದ ಕಲೆ ತೊಳೆದು ಹೋಗುತ್ತದೆಯೇ?.
ಗೌತಮ ಬುದ್ಧನ ಕಾಲದಲ್ಲಿ ತ್ಯಾಗದ ಪ್ರತೀಕವಾಗಿ ಬಳಕೆಗೆ ಬಂದ ಕಾವಿ ಬಟ್ಟೆ ಕೊನೆಗೆ ಕ್ರೂರ ವೈದಿಕ ಅರಸ ಪುಷ್ಯಮಿತ್ರ ಶುಂಗನ ಕಾಲದಲ್ಲಿ ಆ ನೀಚ ರಾಜನ ಕೆಂಗಣ್ಣಿಗೆ ಗುರಿಯಾಗಿ ಕಾವಿ ಉಟ್ಟ ಬೌದ್ಧ ಭಿಕ್ಷುಗಳ ಮಾರಣ ಹೋಮ ನಡೆಯಲು ಕಾರಣವಾಯಿತು. ಆದರೆ ಇಂತಹಾ ಹಿಂಸಾಚಾರದಿಂದ ಬೌದ್ಧರನ್ನು ವೈದಿಕ ಧರ್ಮಕ್ಕೆ ತರಲು ಸಾಧ್ಯವಿಲ್ಲ ಎಂದು ಅರಿತ ಪುಷ್ಯಮಿತ್ರ ಶುಂಗನು- “ಅವರನ್ನು ನೀನು ಗೆಲ್ಲಲಾಗದಿದ್ದರೆ ಅವರೊಂದಿಗೇ ನೀನು ಸೇರಿ ಬಿಡು” ಎಂಬ ನೀತಿಗೆ ಅನುಗುಣವಾಗಿಯೇ ವೈದಿಕ ಪುರೋಹಿತ ವರ್ಗವೂ ಬೌದ್ಧರಂತೆ ಕಾವಿ ಬಟ್ಟೆ ಧರಿಸಿಯೇ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬೌದ್ಧ ಧರ್ಮದ ಒಳಹೊಕ್ಕು ಬುದ್ಧ ಧಮ್ಮವನ್ನು ಒಳಗಿಂದೊಳಗೆ ಕೊರೆಯಬೇಕು ಎಂದು ಶುಂಗನು ಆದೇಶಿಸಿದನಂತೆ. ಅದಕ್ಕಾಗಿಯೇ ಬುದ್ಧನನ್ನು ವಿಷ್ಣುವಿನ ಕಾಲ್ಪನಿಕ ಅವತಾರ ಮಾಡಿ, ಜತೆಗೆ ಬೌದ್ಧ ಸ್ತೂಪವನ್ನು ಶಿವಲಿಂಗವಾಗಿ ಪರಿವರ್ತಿಸಿ ಬುದ್ಧ ದಮ್ಮವನ್ನು ಒಳಗಿಂದ ಕೊರೆಯಲು ಅನುವು ಮಾಡಿ ಕೊಟ್ಟಿದ್ದು ಪುಷ್ಯಮಿತ್ರ. ಆಗಿನಿಂದ ವೈದಿಕರೂ ಕಾವಿಯ ಶರಣು ಹೋಗಿ ಬುದ್ಧ ಧಮ್ಮ ಮಾತ್ರವಲ್ಲ ಹಿಂದೂ ಧರ್ಮವನ್ನೂ ಒಳಗಿಂದ ಕೊರೆಯುತ್ತಿದ್ದಾರೆ. ಆದಿ ಶಂಕರರೂ ಕಾವಿ ಉಟ್ಟುಕೊಂಡೇ ಹಿಮಾಲಯದ ತಪ್ಪಲಿನ ಬದ್ರಿನಾಥ ಕೇದಾರನಾಥ ಹರಿದ್ವಾರದಲ್ಲಿಯ ಬೌದ್ಧ ವಿಹಾರಗಳನ್ನೆಲ್ಲಾ ವಶಪಡಿಸಿಕೊಂಡು ವೈದಿಕ ದೇವಾಲಯಗಳಾಗಿ ಪರಿವರ್ತಿಸಿದ್ದು. ಆಂಧ್ರದ ನಾಗಾರ್ಜುನ ಕೊಂಡದಲ್ಲಿಯೂ ಆದಿ ಶಂಕರರು ಕಾವಿ ಉಟ್ಟುಕೊಂಡೇ ದಕ್ಷಿಣದ ಅತಿ ದೊಡ್ಡ ಬೌದ್ಧ ಕೇಂದ್ರವನ್ನು ನಾಶ ಮಾಡಿದ್ದು. ಮುಸ್ಲಿಮರು ಆಕ್ರಮಿಸಿದ ಹಿಂದೂ ಮಂದಿರಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಬೌದ್ಧ ವಿಹಾರ ಮತ್ತು ಜೈನ ಮಂದಿರಗಳನ್ನು ಕಾವಿ ಉಟ್ಟ ವೈದಿಕರು ಆಕ್ರಮಿಸಿದ್ದಾರೆ. ಅಯೋಧ್ಯೆಯೂ ಸಾಕೇತ್-ಶ್ರಾವಸ್ತಿ ಎಂಬ ಹೆಸರಲ್ಲಿ ಅಶೋಕನ ಕಾಲದಲ್ಲಿ ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು. ಭಾರತದ 2,600 ವರ್ಷದ ಧಾರ್ಮಿಕ ಇತಿಹಾಸದ ಪೋಸ್ಟ್ ಮಾರ್ಟಮ್ ಮಾಡಿದರೆ ಕಾವಿ ಬಟ್ಟೆ ಮತ್ತು ಭಗವಾ ಧ್ವಜ ಅರ್ಥ ಕಳೆದುಕೊಳ್ಳುತ್ತದೆ.
ಕೇಸರಿ ಬಾವುಟಗಳು ಕಾಲ್ಪನಿಕವೇ?
ಪುರಾಣದ ಪ್ರಕಾರ ಅಸುರ ರಾಜ ರಾವಣನ ಧ್ವಜ ಕೆಂಪು ಬಣ್ಣದಿದ್ದು ಅದರ ನಡುವೆ ವೀಣೆಯ ಲಾಂಛನವಿತ್ತಂತೆ. ಭೀಮನ ಮಗ ರಾಕ್ಷಸ ಘಟೋತ್ಕಚನ ಬಾವುಟದಲ್ಲಿ ರಣಹದ್ದಿನ ಲಾಂಛನ ಇದ್ದ ಬಿಳಿ ಧ್ವಜ ಇತ್ತಂತೆ. ವಿಚಿತ್ರವೆಂದರೆ ಈಗಿನ ಸಿನೆಮಾ ನಾಟಕ ಯಕ್ಷಗಾನದಲ್ಲಿ ರಾಕ್ಷಸನನ್ನು ಕೊಲ್ಲಲು ಬರುವ ದೇವರ ಅವತಾರವೂ ಈಗಿನ ಕಾಲದ ಶಿವಾಜಿಯ ಭಗವಾ ಧ್ವಜ ಹಿಡಿದಿರುತ್ತದೆ. ಕೋಟ್ಯಂತರ ವರ್ಷಗಳ ಹಿಂದೆ ಡೈನೋಸಾರ್ ಗಳು ಇದ್ದಿದ್ದಕ್ಕೆ ಪುರಾವೆ ದೊರೆತಿವೆ, ಆದರೆ ಡೈನೋಸಾರ್ ಗಿಂತ ದೊಡ್ಡದಿದ್ದ ಹಾಗೂ ಕೇವಲ 3500 ವರ್ಷಗಳ ಹಿಂದೆ ಇದ್ದ ರಾಕ್ಷಸ-ಅಸುರ-ದಾನವ ಎಂಬ ಜೀವಿಗಳ ಅಸ್ತಿತ್ವದ ಕುರಿತು ಯಾವುದೇ ಪುರಾವೆ ವಿಜ್ಞಾನಿಗಳಿಗೆ ದೊರೆತಿಲ್ಲ. ಹಾಗಾಗಿ ರಾಕ್ಷಸ ಎಂಬ ಎರಡು ಕಾಲಿನ ದೈತ್ಯ ಜೀವಿ ಕೇವಲ ಕಾಲ್ಪನಿಕ ಎನ್ನಬಹುದು. ರಾಕ್ಷಸರು ಕಾಲ್ಪನಿಕ ಅಂದ ಮೇಲೆ ಆ ರಾಕ್ಷಸರನ್ನು ಕೊಲ್ಲಲು ಆರ್ಭಟಿಸುತ್ತಾ ಬರುವ ದೇವರ ಅವತಾರ ಕೂಡಾ ಕಾಲ್ಪನಿಕವೇ. ಹಾಗಾಗಿ ಕಾಲ್ಪನಿಕ ರಾಕ್ಷಸ ಮತ್ತು ಕಾಲ್ಪನಿಕ ದೇವರ ಅವತಾರಗಳು ಹಿಡಿದ ಕೇಸರಿ ಬಾವುಟಗಳು ಕೂಡಾ ಕಾಲ್ಪನಿಕ ತಾನೇ?
ಬೆಳ್ಳಿಯ ತಗಡಿನ ಧ್ವಜ ಏರಿಸುವ ಪದ್ಧತಿ
ಸಾಮ್ರಾಟ ಅಶೋಕನು ತನ್ನ ರಾಜ್ಯದಲ್ಲಿ 84 ಸಾವಿರ ಬೌದ್ಧ ವಿಹಾರಗಳನ್ನು ಕಟ್ಟಿಸಿ ಅವುಗಳ ಎದುರು ಕಲ್ಲಿನ ಅಥವಾ ಲೋಹದ ದೀಪ ಸ್ತಂಭ ಸ್ಥಾಪಿಸಿ ಅವುಗಳ ತುದಿಯಲ್ಲಿ ಬೆಳ್ಳಿಯ ತಗಡಿನ ಧ್ವಜವನ್ನು ಆರೋಹಣ ಮಾಡಿಸಲು ಪ್ರಾರಂಭಿಸಿದ್ದನು. ಅದನ್ನೇ ಅನುಕರಿಸಿ ವೈದಿಕರು ಮತ್ತು ಜೈನರೂ ತಮ್ಮ ತಮ್ಮ ಪವಿತ್ರ ಮಂದಿರಗಳ ಎದುರು ಧ್ವಜ ಸ್ತಂಭ ಸ್ಥಾಪಿಸಿ ಜಾತ್ರೆಯ ಸಮಯದಲ್ಲಿ ಬೆಳ್ಳಿಯ ತಗಡಿನ ಧ್ವಜ ಏರಿಸುವ ಪದ್ಧತಿ ಇಂದಿನ ವರೆಗೂ ನಡೆದು ಬಂದಿದೆ. ಪುಣ್ಯಕ್ಕೆ ಆ ವೈದಿಕ ದೇವಸ್ಥಾನಗಳ ಧ್ವಜ ಸ್ತಂಭದ ಮೇಲ್ಗಡೆ ಕೇಸರಿ ಬಟ್ಟೆಯ ಧ್ವಜ ಹಾರಿಸುವ ಪದ್ಧತಿ ಇನ್ನೂ ಸುರುವಾಗಿಲ್ಲ ಸದ್ಯ!
ರೈತರ ಹಸಿರು ಧ್ವಜ ಪ್ರಕೃತಿಯ ಫಲವತ್ತತೆ ಮತ್ತು ಕೃಷಿಕರ ಶ್ರಮದ ಸಂಕೇತವಾದರೆ ನೀಲಿ ಧ್ವಜವು ಕಾರ್ಮಿಕರ ಮತ್ತು ಕಷ್ಟಜೀವಿಗಳ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದೆ. ಜತೆಗೆ ನೀಲಿ ಧ್ವಜವು ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಟದ ಸಂಕೇತವೂ ಆಗಿದೆ.
ನಮ್ಮ ರಾಷ್ಟ್ರೀಯ ಧ್ವಜದಲ್ಲಿರುವ ಮೂರು ಬಣ್ಣದ ಅರ್ಥ- ಮೇಲಿನ ಕೇಸರಿ ಬಣ್ಣ ಧೈರ್ಯ ಮತ್ತು ಶಕ್ತಿಯ ಸಂಕೇತ, ನಡುವಿನ ಬಿಳಿ ಬಣ್ಣ ಶಾಂತಿ ಮತ್ತು ಸತ್ಯದ ಪ್ರತೀಕ, ಕೆಳಗಿನ ಹಸಿರು ಬಣ್ಣ ಪ್ರಕೃತಿಯ ಫಲವಂತಿಕೆ ಮತ್ತು ಪವಿತ್ರತೆಯ ಸೂಚಕ. ನಡುವಿನ ನೀಲಿ ಬಣ್ಣದ 24 ಪಟ್ಟಿಗಳಿರುವ ಅಶೋಕ ಚಕ್ರವು ನಮ್ಮ ಸಮಾಜದ ನಿರಂತರ ಸಂಚಲನೆ ಮತ್ತು ಅಭಿವೃದ್ಧಿಯ ದ್ಯೋತಕ.
ಇದು ನಮ್ಮ ದೇಶದ ದುರಾದೃಷ್ಟ..
ನಾವು ಚಿಕ್ಕವರಿದ್ದಾಗ ಊರಿನ ದೇವಸ್ಥಾನ- ದೈವಸ್ಥಾನದ ಜಾತ್ರೆ ಬಂದಾಗ ರಸ್ತೆಯ ಇಕ್ಕೆಲೆಗಳಲ್ಲಿ ಕಟ್ಟುತ್ತಿದ್ದ ನಾಲ್ಕೈದು ಬಣ್ಣದ ವಿವಿಧ ಆಕಾರದ ಕಾಗದದ ಬಂಟಿಂಗ್ಸ್ ಗಳನ್ನು ನೋಡುವಾಗ ಖುಷಿಯಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಕೇವಲ ಕೇಸರಿ ಬಣ್ಣದ ತ್ರಿಕೋನ ಆಕಾರದ ಪಾಲಿಯೆಸ್ಟರ್ ಬಾವುಟಗಳನ್ನು ಮಾತ್ರ ರಸ್ತೆಯಲ್ಲಿ ಕಟ್ಟಿ ಏಕತಾನತೆ ಹುಟ್ಟಿಸುತ್ತಾರೆ. ಪ್ರಕೃತಿಯ ಮೂಲ ಬಣ್ಣಗಳಾದ ಹಸಿರು ಮತ್ತು ಹಳದಿ ಇಲ್ಲದಿದ್ದರೆ ಬಂಟಿಂಗ್ಸ್ ಗಳಿಗೆ ಆಕರ್ಷಣೆಯಿಲ್ಲ. ಕ್ರೈಸ್ತ ಬ್ರಿಟಿಷರು ಭಾರತಕ್ಕೆ ತಂದಿರುವ ಬಣ್ಣ ಬಣ್ಣದ ಕಾಗದದ ಬಂಟಿಂಗ್ಸ್ ಕಟ್ಟುವ ಪದ್ಧತಿಯೂ ಈಗ ಧಾರ್ಮಿಕ ರಂಗು ಪಡೆದು ಕೇವಲ ಕೇಸರಿ ರಂಗಿನ ತ್ರಿಕೋನ ಬಂಟಿಂಗ್ಸ್ ಗಳಾಗಿ ಸೌಂದರ್ಯ ಕಳೆದು ಕೊಂಡಿವೆ. ಧರ್ಮದ ಅಮಲು ಏರಿಸಿಕೊಂಡಿರುವ ಈಗಿನ ಪಡ್ಡೆ ಯುವಕರಿಗೆ ಇವನ್ನೆಲ್ಲಾ ವಿಶ್ಲೇಷಿಸಿ ಸರಿ-ತಪ್ಪುಗಳ ವಿವೇಚನೆ ಮಾಡುವಷ್ಟು ಧಾರ್ಮಿಕ ಜ್ಞಾನವೂ ಇಲ್ಲ ಮತ್ತು ಸ್ವಂತ ತರ್ಕ ಶಕ್ತಿಯೂ ಇಲ್ಲ. ಇದು ನಮ್ಮ ದೇಶದ ದುರಾದೃಷ್ಟ.
(ಮುಗಿಯಿತು)
ಚಿಂತಕರು, ನಿವೃತ್ತ ಬ್ಯಾಂಕ್ ಅಧಿಕಾರಿ
ಭಾಗ ಒಂದು ಓದಿದ್ದೀರಾ? ಭಗವಾ ಧ್ವಜ ಸಮಸ್ತ ಹಿಂದೂಗಳ ಧ್ವಜವೇ?