ಈ ಯುದ್ಧ ಅಮೆರಿಕಾದ ಪಾಲಿಗೆ ಒಂದು ಮುಜುಗರವಾಗುವ ಲಕ್ಷಣ ಕಾಣುತ್ತಿದೆ. ಯುದ್ಧ ದೀರ್ಘಕಾಲ ಮುಂದುವರಿದಷ್ಟೂ ಅಮೆರಿಕಾದ ಅವಮಾನ ಮತ್ತು ಕಷ್ಟ ಹೆಚ್ಚಲಿದೆ ಹಾಗಾಗಿ ಪರಾರಿಯಾಗುವ ದಾರಿಗಳನ್ನು ಅದು ಹುಡುಕಬೇಕಾಗುತ್ತದೆ. ಈ ಯುದ್ಧದಿಂದ ಇರಾನ್ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಯಾಕೆಂದರೆ ಯುದ್ಧ ಶುರು ಮಾಡಿದ್ದು ಇರಾನ್ ಅಲ್ಲ – ಶ್ರೀನಿವಾಸ ಕಾರ್ಕಳ, ಲೇಖಕರು.
ಇರಾನ್ ಅನ್ನು ಸೋಲಿಸುವುದು ಸಾಧ್ಯವೇ? ಇತಿಹಾಸ, ಭೌಗೋಳಿಕ ಪರಿಸ್ಥಿತಿ ಮತ್ತು ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ʼಕಷ್ಟಸಾಧ್ಯʼ ಎನ್ನುವುದೇ ಇದಕ್ಕೆ ಉತ್ತರ.
ಇರಾನ್ ಎಂದೂ ವಸಾಹತುವಾದುದಿಲ್ಲ
ಇತಿಹಾಸ ಬೆಟ್ಟು ಮಾಡಿ ತೋರಿಸುವ ಪ್ರಕಾರ, ಏಶ್ಯಾದಲ್ಲಿ ಭಾರತ, ಶ್ರೀಲಂಕಾ, ಬರ್ಮಾ ಸಹಿತ ಅನೇಕ ದೇಶಗಳು ಬ್ರಿಟನ್, ಅಮೆರಿಕಾ, ರಶ್ಯಾ ಮತ್ತಿತರ ಸಾಮ್ರಾಜ್ಯಶಾಹಿ ಶಕ್ತಿಗಳ ವಸಾಹತುಗಳಾದುದಿದೆ. ಆದರೆ ಎರಡು ರಾಷ್ಟ್ರಗಳು ಎಂದಿಗೂ ಯಾವುದೇ ದೇಶದ ವಸಾಹತುಗಳಾಗಲಿಲ್ಲ. ಅವೆಂದರೆ ಇರಾನ್ ಮತ್ತು ಅಫ್ಘಾನಿಸ್ತಾನ. ಬ್ರಿಟನ್, ರಶ್ಯಾ, ಅಮೆರಿಕಾ ಮೊನ್ನೆ ಮೊನ್ನೆಯವರೆಗೆ ಅಫ್ಘಾನಿಸ್ತಾನವನ್ನು ತಮ್ಮ ವಸಾಹತುಮಾಡಿಕೊಳ್ಳಲು ಯತ್ನಿಸಿ ರಕ್ತಪಾತ ನಡೆಸಿ, ಅಪಾರ ನಷ್ಟ ಮಾಡಿ, ನಷ್ಟ ಮಾಡಿಸಿಕೊಂಡು ಕೊನೆಗೂ ಅಲ್ಲಿಂದ ಹೊರನಡೆದ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಈ ದೃಷ್ಟಿಯಿಂದ ನೋಡಿದರೆ, ಈಗ ಮಧ್ಯಪ್ರಾಚ್ಯದಲ್ಲಿ ಯುದ್ಧಕೋರ ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ಆಕ್ರಮಣದ ಅಂತಿಮ ಪರಿಣಾಮ ಏನಾಗಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನಲ್ಲ. ಎರಡೂ ಕಡೆಯವರು ಅಪಾರ ಹಾನಿಮಾಡಿಕೊಳ್ಳಲಿದ್ದಾರೆ, ಅಂತಿಮವಾಗಿ ಇರಾನ್ ಮೇಲೆ ಒಂದು ಮಟ್ಟಿನ ನಿಯಂತ್ರಣ ಹೊಂದಿಕೊಳ್ಳುವಲ್ಲಿ ಅಮೆರಿಕಾ ಬಣ ಯಶಸ್ವಿಯಾದರೂ ಅದನ್ನು ಮಣಿಸಿ ತನ್ನ ವಸಾಹತು ಮಾಡಿಕೊಳ್ಳುವುದು ಅಸಾಧ್ಯದ ಮಾತು.
ಬೆಟ್ಟಗಳ ಅಭೇದ್ಯ ಕೋಟೆ
ಭೌಗೋಳಿಕ ದೃಷ್ಟಿಯಿಂದ ನೋಡಿದರೆ, ಇರಾನ್ ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ. ಇಸ್ರೇಲ್ ಗಿಂತ 70 ಪಟ್ಟು ದೊಡ್ಡ ದೇಶ (ಬ್ರಿಟಿಷರ ಕಾಲದಲ್ಲಿ ಭಾರತದ ಗಡಿಗೆ ತಾಗಿಕೊಂಡಂತೆಯೇ ಇತ್ತು ಇರಾನ್). 9 ಕೋಟಿ ಜನಸಂಖ್ಯೆಯ ದೇಶ. ಅಲ್ಲದೆ ಸುತ್ತಲೂ ಎತ್ತರೆತ್ತರದ ಬೆಟ್ಟಗಳ ನೈಸರ್ಗಿಕ ರಕ್ಷಣೆ ಪಡೆದ ದೇಶವದು. ಕಡಲಿನ ಸವಲತ್ತೂ ಇದೆ. ಹರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣವೂ ಇರಾನ್ ನದ್ದೇ. ಈ ಜಲಸಂಧಿಯನ್ನು ಇರಾನ್ ಮುಚ್ಚಿತೆಂದರೆ ಇರಾಕ್, ಕುವೈಟ್, ಬೆಹರಿನ್, ಕತಾರ್, ಕುವೈತ್, ಯುಎಇ ಸಹಿತ ಅನೇಕ ದೇಶಗಳಿಂದ ತೈಲೋತ್ಪನ್ನಗಳ ಸಾಗಣೆಯ ಅವಕಾಶ ಇಲ್ಲವಾಗಿ, ಇಡೀ ಜಗತ್ತಿನ ತೈಲ ಸರಬರಾಜು ವ್ಯವಸ್ಥೆಯಲ್ಲಿ ಬಿಕ್ಕಟ್ಟು ಉಂಟಾಗಿ, ಆರ್ಥಿಕತೆ ಮತ್ತು ಜನಜೀವನ ಅಸ್ತವ್ಯಸ್ತವಾಗಲಿದೆ. ಕೇವಲ ಒಂದು ವಾರದ ಯುದ್ಧದಿಂದಲೇ ಜಾಗತಿಕವಾಗಿ ಇಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ಯುದ್ಧ ಕೆಲ ವಾರ ಮುಂದುವರಿದರೆ ಪರಿಸ್ಥಿತಿ ಏನಾಗಬಹುದು ಊಹಿಸಿ. ಆಗ ಜಗತ್ತಿನ ಅನೇಕ ದೇಶಗಳು ಅಮೆರಿಕಾದ ಮೇಲೆ ಕೆಂಡಕಾರಲಿವೆ. ಕಾನೂನು ಬಾಹಿರ ಯುದ್ಧಕ್ಕೆ ಹೊರಟು ಅಮೆರಿಕಾ ಜಗತ್ತಿನಲ್ಲಿ ಒಂಟಿಯಾಗಲಿದೆ.
ಅಮೆರಿಕಕ್ಕೆ ನೂರಾರು ಸವಾಲುಗಳು

ಇರಾನ್ ಯುದ್ಧ ಶುರುಮಾಡಲಿಲ್ಲ. ಏಕಪಕ್ಷೀಯವಾಗಿ ಯುದ್ಧ ಶುರು ಮಾಡಿದ್ದು ಅಮೆರಿಕಾ ಮತ್ತು ಇಸ್ರೇಲ್. ಇರಾನ್ ಮತ್ತು ಅಮೆರಿಕಾ ನಡುವೆ 7532 ಕಿ.ಮೀ. ಅಂತರವಿದೆ. 2349 ಇಸ್ರೇಲ್ ಇರಾನ್ ನಡುವೆ 2349 ಕಿ.ಮೀ. ಗಳ ಅಂತರವಿದೆ. ಇರಾನ್ ಮೇಲೆ ಇಸ್ರೇಲ್ ಆಕ್ರಮಣ ನಡೆಸಬೇಕಿದ್ದರೆ ಕ್ಷಿಪಣಿ ಪ್ರಯೋಗಿಸಬೇಕು ಅಥವಾ ಇತರ ದೇಶಗಳ ಸೇನಾ ನೆಲೆ ಬಳಸಿಕೊಂಡು ವೈಮಾನಿಕ ಧಾಳಿ ನಡೆಸಬೇಕು. ಅಮೆರಿಕಾದ ಕತೆಯೂ ಇಷ್ಟೇ. ಬಹುದೂರದಿಂದ ಬಂದಿರುವ ಅಮೆರಿಕಾ ಸೇನೆ ಇರಾನ್ ಮೇಲೆ ಧಾಳಿ ನಡೆಸಬೇಕಿದ್ದರೆ ತನ್ನ ನೌಕಾಪಡೆಗಳನ್ನು ಬಳಸಿಕೊಳ್ಳಬೇಕು ಅಥವಾ ಅರಬ್ ರಾಷ್ಟ್ರಗಳಲ್ಲಿರುವ ತನ್ನ ಸೇನಾ ನೆಲೆಗಳನ್ನು ಬಳಸಿಕೊಳ್ಳಬೇಕು. ಇವರೆಡೂ ಕೂಡಾ ಇರಾನ್ ನ ಕ್ಷಿಪಣಿಗೆಳಿಗೆ ಸುಲಭ ತುತ್ತು. ಈಗಾಗಲೇ ಒಂದು ಪುಟ್ಟ ಕಡಲಿನ ಅಚೆ ಇರುವ ಇರಾಕ್, ಕುವೈಟ್, ಕತಾರ್, ಯುಎಇ ಮತ್ತಿತರ ಅನೇಕ ದೇಶಗಳಲ್ಲಿರುವ ಅಮೆರಿಕನ್ ಸೇನಾ ನೆಲೆಗಳನ್ನ ಇರಾನ್ ನಾಶಪಡಿಸಿದೆ. ಕತಾರ್ ನಲ್ಲಿರುವ ಒಂದು ಬಿಲಿಯ ಡಾಲರ್ ಬೆಲೆಬಾಳುವ ಅಮೆರಿಕನ್ ರಾಡಾರ್ ಅನ್ನು ಇರಾನ್ ಮೊನ್ನೆಯಷ್ಟೇ ನಾಶಪಡಿಸಿದ್ದು ಇರಾನ್ ನಿಂದ ಹೊರಡುವ ಕ್ಷಿಪಣಿಗಳನ್ನು ಪತ್ತೆ ಹಚ್ಚುವ ಅವಕಾಶವೇ ಅಮೆರಿಕಕ್ಕೆ ಇಲ್ಲವಾಗಿದೆ. ಶವಪೆಟ್ಟಿಗೆಗಳಲ್ಲಿ ಅನೇಕ ಅಮೆರಿಕನ್ ಸೈನಿಕರು ತವರೂರಿಗೆ ಈಗ ಮರಳುತ್ತಿದ್ದಾರೆ.
ನೈತಿಕ ಸೋಲು
ಅಮೆರಿಕಾ ಮತ್ತು ಇಸ್ರೇಲ್ ಯಾವಾಗ ಇರಾನ್ ನ ಮಿನಾಬ್ ಹುಡುಗಿಯರ ಎಲಿಮೆಂಟರಿ ಶಾಲೆಯೊಂದರ ಮೇಲೆ ಬಾಂಬು ಹಾಕಿ 168 ಕ್ಕೂ ಅಧಿಕ ಪುಟ್ಟ ಬಾಲಕಿಯರನ್ನು ಕೊಂದರೋ ಅಂದೇ ಅವು ನೈತಿಕವಾಗಿ ಯುದ್ಧದಲ್ಲಿ ಸೋತಿವೆ. ಈ ತಪ್ಪಿನಿಂದಾಗಿ ಇಡೀ ಜಗತ್ತಿನಲ್ಲಿ ಈ ಯುದ್ಧಕೋರ ದೇಶಗಳು ನೈತಿಕ ಬೆಂಬಲವನ್ನು ಕಳೆದುಕೊಂಡಿವೆ. ಸಾಲದೆಂಬಂತೆ, ಭಾರತದ ಅತಿಥಿಯಾಗಿ ಬಂದಿದ್ದ ಇರಾನಿಯನ್ ಯುದ್ಧ ನೌಕೆ ಐರಿಸ್ ಡೇನ್ ನ್ನು ಹಿಂದೂ ಮಹಾಸಾಗರದ ಶ್ರೀಲಂಕಾ ಬಳಿಯಲ್ಲಿ ಮುಳುಗಿಸಿ ಇನ್ನೊಂದು ತಪ್ಪು ಮಾಡಿತು. ಯುದ್ಧದ ನಿಯಮಗಳ ಪ್ರಕಾರ ಶತ್ರುವಿನ ನೌಕೆಯನ್ನು ಮುಳುಗಿಸಿದರೂ ಅದರಲ್ಲಿರುವ ನಾವಿಕರನ್ನು ರಕ್ಷಿಸಬೇಕು. ಆದರೆ ʼಕ್ವಾಯಟ್ ಡೆತ್ʼ ಎಂದು ಈ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಅಮೆರಿಕಾ ನೌಕೆ ಮುಳುಗಿಸಿ ನಿರಾಯುಧರಾದ 80 ಕ್ಕೂ ಅಧಿಕ ಸೈನಿಕರನ್ನು ಬರ್ಬರವಾಗಿ ಕೊಲ್ಲುವ ಮೂಲಕ ಇನ್ನೊಂದು ಘೋರ ತಪ್ಪೆಸಗಿತು. ಆ ಮೂಲಕ ಜಲ ಯುದ್ಧರಂಗದಲ್ಲಿ ಕೆಟ್ಟ ಸಂಪ್ರದಾಯವೊಂದಕ್ಕೂ ನಾಂದಿ ಹಾಡಿತು. ʼನೀವು ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದೀರಿ, ಇದಕ್ಕೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆʼ ಎಂದು ಇರಾನ್ ಈಗಾಗಲೇ ಅಮೆರಿಕಾ ಕ್ಕೆ ಎಚ್ಚರಿಕೆ ನೀಡಿದೆ. ಈಗಾಗಲೇ ನಿತ್ಯದ ಯುದ್ಧಕ್ಕೆ ಅಮೆರಿಕಾ ಭಾರೀ ಹಣ ಖರ್ಚು ಮಾಡುತ್ತಿದ್ದು ತನ್ನದೇ ದೇಶದಲ್ಲಿ ವಿರೋಧ ಎದುರಿಸುತ್ತಿದೆ. ದೇಶದ ಜನರ ಅರೋಗ್ಯ ವಿಮೆಗೆ ಹಣವಿಲ್ಲದ ಸರಕಾರ ಇಸ್ರೇಲ್ ತಾಳಕ್ಕೆ ತಕ್ಕಂತೆ ಕುಣಿಯುತ್ತ ಅನಗತ್ಯ ಯುದ್ಧಕ್ಕೆ ಹಣ ಹೂಡಿ ಅಮೆರಿಕಾದ ಖಜಾನೆ ಬರಿದುಮಾಡುತ್ತಿದೆ ಎಂದು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಯಾವುದೇ ದೇಶವೊಂದರ ಮೇಲೆ ಯುದ್ಧ ಮಾಡಬೇಕಿದ್ದರೆ ಅಮೆರಿಕನ್ ಕಾಂಗ್ರೆಸ್ ನಿಂದ ಅನುಮತಿ ಪಡೆಯಬೇಕು.
ಯುದ್ಧ ತಂತ್ರ ಬದಲಿಸಿದ ಇರಾನ್

ಕೆಲವು ತಿಂಗಳ ಹಿಂದೆ ಹನ್ನೆರಡು ದಿನಗಳ ಕಾಲ ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ಧಾಳಿ ನಡೆಸಿದ್ದವು. ಇದರಿಂದ ಇರಾನ್ ಅನೇಕ ಪಾಠಗಳನ್ನು ಕಲಿತು ತನ್ನ ಯುದ್ಧ ತಂತ್ರಗಳನ್ನು ಬದಲಿಸಿದೆ. ತನ್ನ ಸೇನಾ ನಿರ್ದೇಶನ ಕೇಂದ್ರವನ್ನು ಅದು ವಿಕೇಂದ್ರೀಕರಿಸಿದೆ. ಇದರಿಂದ ಟೆಹರಾನ್ ನ ಸೇನಾ ಮುಖ್ಯಸ್ಥರನ್ನು ಕೊಂದು ಹಾಕಿದರೂ ವಿಕೇಂದ್ರೀಕೃತ ಕಮಾಂಡ್ ತನ್ನ ಯುದ್ಧವನ್ನು ಮುಂದುವರಿಸಲಿದೆ. ಅಲ್ಲದೆ, ತನ್ನ ಕ್ಷಿಪಣಿಗಳ ಮೇಲೆ ಧಾಳಿ ನಡೆಯಬಹುದು ಎಂದು ಗೊತ್ತಿರುವ ಇರಾನ್ ಅದನ್ನು ಭೂಮಿಯಡಿ ಹೂತಿಟ್ಟು ವೈರಿಗಳ ಕಣ್ಣಿಗೆ ಕಾಣದಂತೆ ಮಾಡಿದೆ. ಭೂಮಿಯ ಮೇಲೆ ನಕಲಿ ಯುದ್ಧ ವಿಮಾನವಿರಿಸಿ ಅಥವಾ ಯುದ್ಧ ವಿಮಾನದ ಚಿತ್ರ ಬಿಡಿಸಿಟ್ಟು ಅಮೆರಿಕನ್ ವಿಮಾನಗಳು ಅವನ್ನು ನಿಜ ವಿಮಾನವೆಂದು ತಿಳಿದು ಬಾಂಬು ವ್ಯರ್ಥಗೊಳಿಸುವಂತೆಯೂ ಮಾಡಿದೆ. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳಲ್ಲಿ ಕ್ಷಿಪಣಿ ನಿರೋಧಕ ಐರನ್ ಡೋಮ್ ವ್ಯವಸ್ಥೆಗಳಿವೆ. ಒಂದು ಇರಾನ್ ಕ್ಷಿಪಣಿ ಬರುತ್ತಿದ್ದಂತೆ ಅದನ್ನು ಹೊಡೆದುರಳಿಸಲು ಅನೇಕ ಕ್ಷಿಪಣಿಗಳನ್ನು ಹಾರಿಸಲಾಗುತ್ತದೆ. ಇರಾನ್ ಉದ್ದೇಶಪೂರ್ವಕವಾಗಿ ತನ್ನ ಹಳೇ ಸ್ಟಾಕ್ ಗಳನ್ನು ಕಳಿಸಿ ಅವರ ರಕ್ಷಣಾ ಕ್ಷಿಪಣಿಗಳೆಲ್ಲ ಖಾಲಿಯಾಗುವಂತೆ ಮಾಡುತ್ತಿದೆ.
ಚೀನಾದ ನೇರ ನೆರವು
ಈ ಯುದ್ಧದಲ್ಲಿ ಇರಾನ್ ಒಂಟಿಯಾಗಿಲ್ಲ. ಜಗತ್ತಿನ ಎರಡು ಮಹಾ ಸೇನಾಶಕ್ತಿಗಳಾದ ರಶ್ಯಾ ಮತ್ತು ಚೀನಾ ಅದರೊಂದಿಗಿದೆ. ವಿಶೇಷವಾಗಿ ಚೀನಾ ಇರಾನ್ ಗೆ ಅಪಾರ ಯುದ್ಧ ಸಾಮಗ್ರಿಗಳನ್ನು ಒದಗಿಸಿದೆ ಮಾತ್ರವಲ್ಲ, ಅವರ ಸೈನಿಕರು ಇರಾನ್ ನೆಲದಲ್ಲಿದ್ದಾರೆ ಎಂದೂ ವರದಿಯಾಗಿದೆ. ತನ್ನ ಹೊಸ ಯುದ್ಧ ಶಸ್ತ್ರಗಳನ್ನು ಚೀನಾ ಇಲ್ಲಿ ಪ್ರತ್ಯಕ್ಷವಾಗಿ ಪ್ರಯೋಗಿಸಿ ಅವುಗಳ ಸಾಮರ್ಥ್ಯ ಪರೀಕ್ಷಿಸುತ್ತಿದೆ ಎನ್ನಲಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಯುದ್ಧದಲ್ಲಿ ಚೀನಾ ಬಹಳ ಮುಂದಿದ್ದು, ಅಮೆರಿಕಾದ ರಾಡಾರ್ ಅನ್ನು ನಿಷ್ಕ್ರಿಯಗೊಳಿಸುವುದು, ಅಮೆರಿಕನ್ ವಿಮಾನಗಳಿಗೆ ರೇಡಿಯೋ ಸಿಗ್ನಲ್ ಹೋಗದಂತೆ ಮಾಡುವುದು, ಅಲ್ಲದೆ ಅಮೆರಿಕಾದ ಇಂಟರ್ ನೆಟ್ ಸೌಲಭ್ಯದ ಬದಲಾಗಿ ತನ್ನ ಇಂಟರ್ ನೆಟ್ ಸೌಲಭ್ಯ ಒದಗಿಸುವುದು ಇತ್ಯಾದಿ ಮಾಡುವ ಮೂಲಕ ಇರಾನ್ ಗೆ ಚೀನಾ ನೆರವು ನೀಡುತ್ತದೆ. ಇದೇ ಕಾರಣದಿಂದ ಹರ್ಮುಜ್ ಜಲಸಂಧಿ ಬಂದ್ ಮಾಡಿದ್ದಾಗಲೂ ಸ್ನೇಹಿತ ದೇಶಗಳಾದ ರಶ್ಯಾ ಮತ್ತು ಚೀನಾಗೆ ಇರಾನ್ ರಿಯಾಯಿತಿ ನೀಡಿದೆ. ʼಯುದ್ಧದಲ್ಲಿ ನಮಗೆ ರಶ್ಯಾ ಮತ್ತು ಚೀನಾ ನೆರವಾಗುತ್ತಿವೆʼ ಎಂದು ಇರಾನ್ ವಿದೇಶಾಂಗ ಮಂತ್ರಿ ಪರೋಕ್ಷವಾಗಿ ಘೋಷಿಸಿದ್ದಾರೆ ಕೂಡಾ.
ಇರಾಕ್ ಅಥವಾ ಲಿಬಿಯಾ ಅಲ್ಲ ಇರಾನ್

ಅಮೆರಿಕಾ ಇದುವರೆಗೆ ಅನೇಕ ದೇಶಗಳಲ್ಲಿ ಸರಕಾರ ಬದಲಾಯಿಸಿದೆ. ಆ ಬಳಿಕ ಅಲ್ಲಿ ಅರಾಜಕತೆ ನಿರ್ಮಾಣವಾದುದು ಬೇರೆ ವಿಚಾರ. ಆದರೆ ಇರಾನ್ ವಿಷಯದಲ್ಲಿ ಅಮೆರಿಕಾ ಎಡವಿದೆ ಎನ್ನಲೇ ಬೇಕು. ಇರಾನ್ ಸರಕಾರವನ್ನು ಉರುಳಿಸಬೇಕಾದರೆ ಇರಾಕ್ ನಲ್ಲಿ ಮಾಡಿದಂತೆ ನೆಲದ ಮೂಲಕ ಆಕ್ರಮಣ ಮಾಡಬೇಕು. ಹಾಗೆ ಒಂದು ವೇಳೆ ಮಾಡಿದರೆ ಅಮೆರಿಕಾದ ಅನೇಕ ಸೈನಿಕರು ಸಾಯಲಿದ್ದಾರೆ. ಆಗ ಟ್ರಂಪ್ ಸರಕಾರ ತನ್ನ ದೇಶದಲ್ಲಿ ಜನರ ಆಕ್ರೋಶ ಎದರಿಸಬೇಕಾಗುತ್ತದೆ. ಇರಾನ್ ನ ಒಳಗಿನ ಮಾಫಿಯಾಗಳಿಗೆ ಶಸ್ತ್ರ ನೀಡಿ ಸರಕಾರ ಉರುಳಿಸುವ ಇರಾದೆಯೂ ಅಮೆರಿಕಕ್ಕೆ ಇದೆ. ವಿಶೇಷವಾಗಿ ಕುರ್ದ್ ಗಳನ್ನು ಇರಾನ್ ಸರಕಾರದ ವಿರುದ್ಧ ಎತ್ತಿಕಟ್ಟಲು ಅದು ಯತ್ನಿಸುತ್ತದೆ. ಆದರೆ ಹಿಂದಿನ ಅನೇಕ ಸಂದರ್ಭಗಳಲ್ಲಿ ಅಮೆರಿಕಾ ಕುರ್ದ್ ಮಿಲೀಶಿಯಾಗಳನ್ನು ಬಳಸಿ ಎಸೆದ ನೆನಪು ಅದಕ್ಕೆ ಚೆನ್ನಾಗಿಯೇ ಇದೆ. ಹಾಗಾಗಿ ಇದೂ ಅಮೆರಿಕಾಕ್ಕೆ ಕಷ್ಟ. ಖಾಮಿನೈ ಮತ್ತು ಇತರ 40 ಅಧಿಕಾರಿಗಳನ್ನು ಕೊಂದಾಕ್ಷಣ ಜನರು ಬೀದಿಗಿಳಿಯುತ್ತಾರೆ ಸರಕಾರವನ್ನು ಕಿತ್ತೊಗೆಯುತ್ತಾರೆ ಎಂದು ಅಮೆರಿಕಾ ಭಾವಿಸಿತ್ತು. ಆದರೆ ಅದು ಆಗಿಲ್ಲ. ಅಮೆರಿಕಾದ ಬುದ್ಧಿ ಗೊತ್ತಿರುವ ಅಲ್ಲಿನ ಜನ, ತನ್ನ ಕೆಟ್ಟ ಸರಕಾರವಾದರೂ ಸರಿ ಅಮೆರಿಕಾದ ಗುಲಾಮಗಿರಿ ಬೇಡ ಎಂದಿದ್ದಾರೆ. ಅಲ್ಲದೆ ಇರಾಕ್ ನ ಸದ್ದಾಂ ಮತ್ತು ಲಿಬಿಯಾದ ಗಡ್ಡಾಫಿಗೆ ಭಿನ್ನವಾಗಿ ಖಾಮಿನೈ ಜಗತ್ತಿನ ಶಿಯಾ ಸಮುದಾಯದ ಮಹಾನ್ ಧರ್ಮಗುರು. ಖಾಮಿನೈಯನ್ನು ಕೊಂದಾಕ್ಷಣ ಜಗತ್ತಿನಾದ್ಯಂತ ಶಿಯಾ ಸಮುದಾಯ ಕೆರಳಿದ್ದು ಮಾತ್ರವಲ್ಲ ಶಿಯಾ ಮತ್ತು ಸುನ್ನಿ ಸಮುದಾಯಗಳೂ ಅಮೆರಿಕಾದ ವಿರುದ್ಧ ಕೆಂಡಕಾರುವಂತಾಯಿತು.
ಹೀಗೆ ಯಾವ ರೀತಿಯಲ್ಲಿ ನೋಡಿದರೂ ಈ ಯುದ್ಧ ಅಮೆರಿಕಾದ ಪಾಲಿಗೆ ಒಂದು ಮುಜುಗರವಾಗುವ ಲಕ್ಷಣ ಕಾಣುತ್ತಿದೆ. ಯುದ್ಧ ದೀರ್ಘಕಾಲ ಮುಂದುವರಿದಷ್ಟೂ ಅಮೆರಿಕಾದ ಅವಮಾನ ಮತ್ತು ಕಷ್ಟ ಹೆಚ್ಚಲಿದೆ ಹಾಗಾಗಿ ಪರಾರಿಯಾಗುವ ದಾರಿಗಳನ್ನು ಅದು ಹುಡುಕಬೇಕಾಗುತ್ತದೆ. ಈ ಯುದ್ಧದಿಂದ ಇರಾನ್ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಯಾಕೆಂದರೆ ಯುದ್ಧ ಶುರು ಮಾಡಿದ್ದು ಇರಾನ್ ಅಲ್ಲ.
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ- ನಮ್ಮ ‘ಜೇಮ್ಸ್ ಬಾಂಡ್’ ಗುಪ್ತಚರರೂ, ಅಲಿಪ್ತ ನೀತಿಯೂ!


