Wednesday, May 22, 2024

ಸಾಂಸ್ಕೃತಿಕ  ನಾಯಕತ್ವ ಜಂಗಮವೋ? ಸ್ಥಾವರವೋ?

Most read

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ- ಅಭಿಪ್ರಾಯ

ಬಸವಣ್ಣನವರ ನಾಯಕತ್ವದಲ್ಲಿ ನಾವು ಯಾವ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಲಿದ್ದೇವೆ? ಸಾಂಸ್ಕೃತಿಕ ನಾಯಕ ಎಂದರೆ ಅಲ್ಲಿ ನಿರ್ವಚನೆಯಾಗುವುದು ಯಾವ ಸಂಸ್ಕೃತಿ? ಈಗ ಪರಿಭಾವಿಸಲಾಗುತ್ತಿರುವ ಮತಾಧಾರಿತ ಅಥವಾ ಧರ್ಮಕೇಂದ್ರಿತ ಸಂಕುಚಿತ ಸಂಸ್ಕೃತಿಯೋ ಅಥವಾ ಸಮನ್ವಯದ ಬಹುತ್ವ ಭಾರತ ಬಯಸುವ ನೆಲಮೂಲದ ಸಂಸ್ಕೃತಿಯೋ ? ಈ ಪ್ರಶ್ನೆ ಬಹಳ ಮುಖ್ಯವಾಗುತ್ತದೆ- ನಾ ದಿವಾಕರ, ಚಿಂತಕರು.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರಕ್ಕೆ 12ನೆ ಶತಮಾನದ ಕಾಯಕ ಯೋಗಿ-ಜಂಗಮ ಪರಿಚಾರಕ ಬಸವಣ್ಣ ಸಾಂಸ್ಕೃತಿಕ ನಾಯಕನಾಗಿ ಕಂಡುಬಂದಿದ್ದಾರೆ. ರಾಜ್ಯ ಸರ್ಕಾರ ಅಧಿಕೃತವಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಲ್ಲಿ ಹಲವು ಪ್ರಶ್ನೆಗಳು ಎದುರಾಗುತ್ತವೆ. ಎಂಟು ಶತಮಾನಗಳ ಹಿಂದೆಯೇ ತನ್ನ ವಚನಗಳ ಮೂಲಕ ಸಮ ಸಮಾಜ, ಸಮನ್ವಯದ ಬದುಕು ಹಾಗೂ ಮಾನವೀಯ ಮೌಲ್ಯಗಳ ಸುತ್ತ ಒಂದು ತಾತ್ವಿಕ ಒಳನೋಟಗಳನ್ನು ಕಟ್ಟಿಕೊಟ್ಟ ಬಸವಣ್ಣ ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತವೇ? ಈವರೆಗೆ ಸಮಕಾಲೀನ ಸಮಾಜವು ಬಸವ ತತ್ವಗಳನ್ನು ಯಾವುದೇ ಒಂದು ವಲಯದಲ್ಲಾದರೂ ಅಳವಡಿಸಿ, ಅನುಸರಿಸುವಲ್ಲಿ ಸಫಲವಾಗಿದೆಯೇ? “ಎನ್ನ ಕಾಲೇ ಕಂಬ ದೇಹವೇ ದೇಗುಲ,,, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,,” ಎಂಬ ಮಾನವ ಸಮಾಜಕ್ಕೆ ಸಾಂಸ್ಕೃತಿಕ ಮುಕ್ತಿ ನೀಡಿದ ಬಸವಣ್ಣ ಇಂದು ನಿಜಕ್ಕೂ ಜಂಗಮ ರೂಪದಲ್ಲಿ ಉಳಿದಿದ್ದಾರೆಯೇ? ನಿರ್ದಿಷ್ಟ ಜಾತಿ ಅಥವಾ ಧರ್ಮದ ಕಟ್ಟುಪಾಡುಗಳಿಗೆ ಸಿಲುಕಿ ಮಠ-ಮಂದಿರ-ದೇವಾಲಯಗಳಲ್ಲಿ ಬಂದಿಯಾಗಿರುವ ಬಸವ ತತ್ವ ಹಾಗೂ ವಚನಗಳು ಅನುಯಾಯಿಗಳನ್ನಾದರೂ ನಿರ್ದೇಶಿಸುತ್ತಿವೆಯೇ ?

ರಾಮಮಂದಿರದ ಮೂಲಕ ಇಡೀ ಭರತಖಂಡದ ಪುನರುತ್ಥಾನದ ಭ್ರಮಾತ್ಮಕ ಕನಸು ಕಾಣುತ್ತಿರುವ ಅಧಿಕಾರ ರಾಜಕಾರಣದಲ್ಲಿ ಬಸವಣ್ಣನವರ ವಚನ :

“ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,

ಇದೇ ಅಂತರಂಗಶುದ್ಧಿ ,ಇದೇ ಬಹಿರಂಗಶುದ್ಧಿ”

ಎಂಬ ಹಿತನುಡಿಗಳಿಗೆ ನಮ್ಮ ವರ್ತಮಾನದ ಸಮಾಜ ಮತ್ತು ರಾಜಕಾರಣ ಕಿವಿಗೊಟ್ಟಿದೆಯೇ ? ರಾಜಕೀಯ ಅಧಿಕಾರವು ಸೃಷ್ಟಿಸಿರುವ ಭ್ರಷ್ಟಾಚಾರದ ಒಂದು ಜಗತ್ತಿನಲ್ಲಿ ಸುಳ್ಳು ಸತ್ಯಗಳ ನಡುವಿನ ವ್ಯತ್ಯಾಸವೇ ಮಸುಕಾಗಿ ಹೋಗಿದೆ. ವಿರೋಧಿಗಳನ್ನು ರಾಜಕೀಯವಾಗಿ ಇಲ್ಲವಾಗಿಸುವುದು ಸಹಜ ಪ್ರವೃತ್ತಿಯಾಗಿದ್ದರೆ, ರಾಜಕೀಯ ಭಾಷಣಗಳಲ್ಲಿ ಕಾಣಲಾಗುತ್ತಿರುವ ಆಕ್ರೋಶ-ಅಸಹನೆ, ಸಾಂಸ್ಕೃತಿಕವಾಗಿಯೂ ಸಮಾಜದಲ್ಲಿʼ ಅನ್ಯರನ್ನು ʼ ಸೃಷ್ಟಿಸುತ್ತಲೇ ಇದೆ. ʼ ಅನ್ಯರಿಗೆ ಅಸಹ್ಯ ಪಡಬೇಡ ʼ ಎಂಬ ಬಸವಣ್ಣನವರ ವಚನದ ಸಾಲುಗಳು ಸಮಕಾಲೀನ ರಾಜಕಾರಣದಲ್ಲಿ ಅಪ್ರಸ್ತುತವಾಗಿದೆ. ಏಕೆಂದರೆ ಈ ʼಅನ್ಯʼ ಇಲ್ಲದೆ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣಕ್ಕೆ ಅಸ್ತಿತ್ವವೇ ಇರುವುದಿಲ್ಲ.

12ಯ ಶತಮಾನದ ಈ ಕಾಯಕ ಯೋಗಿಯನ್ನು ಸಾಂಸ್ಕೃತಿಕ ನಾಯಕನನ್ನಾಗಿ ಸಂಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವೀಕಾರಾರ್ಹವೇ ಸರಿ. ಆದರೆ ಕೇವಲ ಅಧಿಕೃತ ಘೋಷಣೆಗೂ, ತಾತ್ವಿಕ ಅನುಸರಣೆಗೂ ನಡುವೆ ಇರುವ ಅಪಾರ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಗಳಾದರೂ ನಡೆಯುತ್ತವೆಯೇ ? ಜಾತಿ-ಮತದ ಭಿನ್ನ ಭೇದಗಳನ್ನು ಮರೆತು ಇಡೀ ಮನುಕುಲವನ್ನು ಒಂದು ಕುಟುಂಬದಂತೆ ಕಾಣಲು ನಿರ್ದೇಶಿಸುವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡ ಸರ್ಕಾರ, ಆಡಳಿತ ವ್ಯವಸ್ಥೆಯಲ್ಲಿನ ಕಳ್ಳತನ, ಭ್ರಷ್ಟಾಚಾರ, ಸುಳ್ಳು, ವಂಚನೆ, ಅಸಹನೆ, ದ್ವೇಷ ಹಾಗೂ ಅಧಿಕಾರ ಲಾಲಸೆಯನ್ನು ಕೊನೆಗೊಳಿಸುವಂತೆ ಪ್ರಮಾಣೀಕರಿಸಲು ಸಾಧ್ಯವೇ ?

ಇದನ್ನೂ ಓದಿ :ಲಿಂಗಾಯತ ಧರ್ಮದ ಸುತ್ತ ಪುರೋಹಿತಶಾಹಿಗಳ ಹುತ್ತ

ಬಸವಣ್ಣನವರ ನಾಯಕತ್ವದಲ್ಲಿ ನಾವು ಯಾವ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಲಿದ್ದೇವೆ? ಸಾಂಸ್ಕೃತಿಕ ನಾಯಕ ಎಂದರೆ ಅಲ್ಲಿ ನಿರ್ವಚನೆಯಾಗುವುದು ಯಾವ ಸಂಸ್ಕೃತಿ? ಈಗ ಪರಿಭಾವಿಸಲಾಗುತ್ತಿರುವ ಮತಾಧಾರಿತ ಅಥವಾ ಧರ್ಮಕೇಂದ್ರಿತ ಸಂಕುಚಿತ ಸಂಸ್ಕೃತಿಯೋ ಅಥವಾ ಸಮನ್ವಯದ ಬಹುತ್ವ ಭಾರತ ಬಯಸುವ ನೆಲಮೂಲದ ಸಂಸ್ಕೃತಿಯೋ ? ಈ ಪ್ರಶ್ನೆ ಬಹಳ ಮುಖ್ಯವಾಗುತ್ತದೆ. ಧಾರ್ಮಿಕ ಆಚರಣೆಗಳನ್ನೇ ಸಂಸ್ಕೃತಿ ಎಂದು ನಿರ್ವಚಿಸಲಾಗುತ್ತಿರುವ ಹೊತ್ತಿನಲ್ಲಿ, ತಳಮಟ್ಟದ ಸಮಾಜದಲ್ಲಿ ಪಾರಂಪರಿಕವಾಗಿ ಬೆಳೆದುಬಂದಿರುವ ಸಾಂಸ್ಕೃತಿಕ ಬೇರುಗಳು ತಮ್ಮ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿವೆ. ವೈದಿಕೀಕರಣಕ್ಕೊಳಗಾಗುತ್ತಾ ಮೂಲ ಸೆಲೆಯನ್ನು ಕಳೆದುಕೊಳ್ಳುತ್ತಿವೆ. ಈ ಸಾಂಸ್ಕೃತಿಕ ನೆಲೆಗಳನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ.

ಕಾಯಕ ಜೀವಿಗಳಿಗೆ ಸಾಂಸ್ಕೃತಿಕ ಸಮಾನತೆಯನ್ನು ನೀಡುವ ಮೂಲಕ ಜಾತಿ ಗೋಡೆಗಳನ್ನು ಭಂಜಿಸಲು ಬಯಸಿದ ಬಸವಣ್ಣ ಸಾಂಸ್ಕೃತಿಕವಾಗಿ ವರ್ತಮಾನ ಭಾರತದ ಕಾಯಕ ಜೀವಿಗಳಿಗೆ ಮಾರ್ಗದರ್ಶಕನಾಗಬೇಕಾದರೆ, ಬಸವಣ್ಣ ಸ್ಥಾವರ ಮುಕ್ತನಾಗಬೇಕು.  ಆದರೆ ದಿನದಿಂದ ದಿನಕ್ಕೆ ಬಸವಣ್ಣನವರ ವಚನಗಳು ಕೇವಲ ಘೋಷಣೆಗಳಾಗಿ ಅಂತ್ಯವಾಗುತ್ತಿವೆ. ಮಠಮಾನ್ಯಗಳು ಅಧಿಕಾರ ರಾಜಕಾರಣದ ಕೇಂದ್ರಗಳಾಗುತ್ತಿವೆ. ಮಠಾಧೀಶರು ರಾಜಕೀಯ ಅಧಿಕಾರ ಕೇಂದ್ರದಲ್ಲಿ ನಿರ್ಣಾಯಕರಾಗುತ್ತಿದ್ದಾರೆ. ಟಿಕೆಟ್‌ ಹಂಚಿಕೆಯಿಂದ ಸಚಿವ ಸಂಪುಟದವರೆಗೂ ರಾಜಕೀಯ ಸಮಾಲೋಚನೆಗಳು ಮಠಾಧಿಪತಿಗಳ ನಿಷ್ಕರ್ಷೆಗೊಳಗಾಗುತ್ತಿವೆ. ಜಾತಿ-ಉಪಜಾತಿಗೊಂದು ಮಠ ಇರುವ ಸಮಾಜದಲ್ಲಿ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೆಲೆಗಳು ರಾಜಕೀಯ ಮೇಲಾಟಗಳಿಗೆ ಒಳಗಾಗಿರುವುದರಿಂದಲೇ, ಬಹುತ್ವ ಭಾರತವನ್ನು ನಿರ್ದೇಶಿಸಬೇಕಾದ ಜನಸಾಂಸ್ಕೃತಿಕ ಚೌಕಟ್ಟುಗಳೆಲ್ಲವೂ ಛಿದ್ರವಾಗುತ್ತಿವೆ.

ಈ ಜನಸಾಂಸ್ಕೃತಿಕ ನೆಲೆಗಳಲ್ಲಿ ಪ್ರಧಾನವಾಗಿರುವ ಶ್ರಮಸಂಸ್ಕೃತಿಯ ಮೂಲ ಸೆಲೆಯನ್ನು ಕಾಪಾಡುವ ದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ. ಬಸವಣ್ಣನವರ ವಚನ :

“ ಇವನಾರವ, ಇವನಾರವ, ಇವನಾರವ ” ನೆಂದೆನಿಸದಿರಯ್ಯಾ.

“ಇವ ನಮ್ಮವ, ಇವ ನಮ್ಮವ, ಇವ ನಮ್ಮವ ” ನೆಂದೆನಿಸಯ್ಯಾ.

ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ ʼ

ಭಾರತದ ಸಂವಿಧಾನದ ಆಶಯಗೀತೆಯಂತೆ ಸರ್ವ ಸಮಾನತೆಯ ಭಾವವನ್ನು ಹೊರಸೂಸುತ್ತದೆ. ಆದರೆ ತಳಮಟ್ಟದ ಕಾಯಕ ಜೀವಿಗಳಲ್ಲೂ ಜಾತಿಭೇದ, ಮತಭೇದಗಳ ಬೀಜಗಳನ್ನು ಬಿತ್ತುವ ಮೂಲಕ ಸಮಾಜವನ್ನು ವಿಘಟನೆಯತ್ತ ಕರೆದೊಯ್ಯಲಾಗುತ್ತಿದೆ. ಈ ವಿಘಟನೆಗೆ ಕಾರಣವಾಗುತ್ತಿರುವ ಜಾತಿ ಶ್ರೇಷ್ಠತೆ, ಕೋಮುವಾದ, ಮತೀಯವಾದ ಮತ್ತು ಮತಾಂಧತೆಯ ವಿಷಬೀಜಗಳು ಅತ್ಯುನ್ನತ ಸ್ತರದಿಂದ ತಳಮಟ್ಟದವರೆಗೂ ದುಡಿಯುವ ವರ್ಗಗಳ ನಡುವೆ ಕಟ್ಟಿರುವ ಗೋಡೆಗಳು ಭಾರತದ ಬಹುತ್ವ ಸಂಸ್ಕೃತಿಯನ್ನೇ ಅಪಾಯಕ್ಕೆ ದೂಡಿರುವುದು ವರ್ತಮಾನದ ದುರಂತ ವಾಸ್ತವ.

ಇದನ್ನೂ ಓದಿ :http://ಸಾಂಸ್ಕೃತಿಕ ನಾಯಕ ಬಸವಣ್ಣ – ಘೋಷಣೆಯ ಹಿಂದಿನ ವಿವಿಧ ಮುಖಗಳು…https://kannadaplanet.com/cultural-leader-basavanna-the-different-faces-behind-the-slogan/

ಮೂಲತಃ ಬಸವಣ್ಣನವರನ್ನು ಭಾರತದ ಸಾಂಪ್ರದಾಯಿಕ ಸಮಾಜದ ರಾಯಭಾರಿಯಾಗಿ ನಾವು ನೋಡಬೇಕಿದೆ. ವಚನಗಳಲ್ಲಿ ಬೋಧಿಸುವ ಮಾನವೀಯ ಸಾಂಸ್ಕೃತಿಕ ಮೌಲ್ಯಗಳನ್ನು ಯುವ ಸಮುದಾಯಗಳಲ್ಲಿ ಬಿತ್ತುವ ಕೆಲಸ ಆಗಬೇಕಿದೆ. ತನ್ಮೂಲಕ ಸುಶಿಕ್ಷಿತ ಸಮಾಜವನ್ನೂ ಆವರಿಸುತ್ತಿರುವ ಮತಾಂಧತೆಯ ಮೌಢ್ಯ ಮತ್ತು ಜಾತಿಪಾರಮ್ಯದ ಅಮಾನುಷತೆಯಿಂದ ಮುಕ್ತವಾಗುವುದು ನಮ್ಮ ಆದ್ಯತೆಯೂ ಆಗಬೇಕಿದೆ. ʼಅನ್ಯʼರ ಸೃಷ್ಟಿ ಹಾಗೂ ʼಅನ್ಯʼ ದ್ವೇಷದ ರಾಜಕೀಯ ಸಿದ್ಧಾಂತಗಳು, ಭಿನ್ನಭೇದಗಳನ್ನು ಹೆಚ್ಚಿಸುವ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕ ನೀತಿಗಳು, ಶ್ರೇಣೀಕೃತ ಜಾತಿ ಸಮಾಜದ ಮೂಲ ಸ್ಥಾಯಿಯನ್ನು ಕಾಪಾಡಲು ಮುಂಚೂಣಿಯಲ್ಲಿರುವ ಸಾಂಸ್ಕೃತಿಕ ಭೂಮಿಕೆಗಳು, ಪಿತೃಪ್ರಧಾನತೆಯನ್ನು ಪೋಷಿಸುತ್ತಿರುವ ಸಾಂಪ್ರದಾಯಿಕ ಸಮಾಜದ ಚಿಂತನೆಗಳು ಇವೆಲ್ಲವೂ ಇಂದು ಸಂವಿಧಾನದ ಮೂಲ ಆಶಯಗಳನ್ನೂ ಮಣ್ಣುಗೂಡಿಸುತ್ತಿವೆ.  ಈ ಭಂಜಕ ಕ್ರಿಯೆಗಳ ನಡುವೆಯೇ ಅಂಬೇಡ್ಕರ್‌-ಬುದ್ಧ-ಬಸವಣ್ಣ ಮುಂತಾದ ದಾರ್ಶನಿಕರನ್ನು ನಾವು ಸಾಂಸ್ಕೃತಿಕ ನಾಯಕರಾಗಿ ಸ್ಥಾಪಿಸುತ್ತಿದ್ದೇವೆ. ಇವರೆಲ್ಲರೂ ಮೂಲತಃ ಸ್ಥಾವರ ಭಂಜಕರು, ಜಂಗಮ ತತ್ವದ ಪರಿಚಾರಕರು ಎನ್ನುವುದನ್ನು ಗಮನದಲ್ಲಿಡಬೇಕಿದೆ. ಈ ಎಚ್ಚರಿಕೆಯಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ಬಸವ ತತ್ವಗಳನ್ನು, ವಚನಗಳನ್ನು ಬೌದ್ಧಿಕ ಪ್ರಚಾರಕ್ಕೆ ಸೀಮಿತಗೊಳಿಸದೆ ತಳಮಟ್ಟದ ಸಮಾಜದವರೆಗೆ ತಲುಪಿಸುವ ಮೂಲಕ, ಬಸವಣ್ಣನವರು ಎಣಿಸಿದಂತೆ ಸಮಸ್ತ ಜನಕೋಟಿಯಲ್ಲೂ “ ಇವ ನಮ್ಮವ ಇವ ನಮ್ಮವ ” ಎಂಬ ಭಾವನೆಯನ್ನು ಉದ್ದೀಪನಗೊಳಿಸಬೇಕಿದೆ.

ನಾ ದಿವಾಕರ

ಚಿಂತಕರು

ಇದನ್ನೂ ಓದಿ-ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ

More articles

Latest article