ಬೆಂಗಳೂರು: ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಈ ಸಂದರ್ಭದಲ್ಲಿ ಒಬ್ಬರು ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದಾರೆ. ಆಗ ವಿನಾಕಾರಣ ಸಿಟ್ಟಾದ ಸೋನು ನಿಗಮ್, ಹೀಗೆ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಗಿದ್ದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸೋನು ನಿಗಮ್ ಅವರ ಈ ಉದ್ದಟನದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸೋನು ನಿಗಮ್ ಅವರನ್ನು ಸ್ಯಾಂಡಲ್ ವುಡ್ ನಿಂದ ನಿಷೇಧ ಹೇರಬೇಕು. ಅವರಿಂದ ಇನ್ನು ಮುಂದೆ ಕನ್ನಡ ಸಿನಿಮಾಗಳಲ್ಲಿ ಅವಕಾಶ ನೀಡಬಾರದು ಎಂಬ ಆಗ್ರಹ ರಾಜ್ಯಾದ್ಯಂತ ಕೇಳಿ ಬರುತ್ತಿದೆ. ವಿವಾದ ಸ್ಪೋಟಗೊಳ್ಲೂತ್ತಿದ್ದಂತೆ ಸೋನು ನಿಗಮ್ ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಸಿನಿಮಾ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನು ಹಾಡುತ್ತೇನೆ ಎಂದು ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಕನ್ನಡಿಗರ ಆಕ್ರೋಶ ತಣ್ಣಗಾಗಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಹೋರಾಟಗಾರರು, ಸಿನಿಮಾ ಕಲಾವಿದರು, ಬರಹಗಾರರು ಸೋನು ನಿಗಮ್ ವಿರುದ್ಧ ಕಿಡಿ ಕಾರಿದ್ದಾರೆ.
ಅನೇಕ ಹೋರಾಟಗಾರರು ಸೋನು ನಿಗಮ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಕನ್ನಡ ಭಾಷೆಗೂ ಪೆಹಲ್ಗಾಮ್ ಘಟನೆಗೂ ಸಂಬಂಧ ಕಲ್ಪಿಸಿದ ಗಾಯಕ ಸೋನು ನಿಗಂ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವೇ ಕರ್ನಾಟಕಕ್ಕೆ ಬರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಕನ್ನಡಿಗರ ಅನ್ನ ತಿಂದು ಕೊಬ್ಬಿರುವ ಸೋನು ನಿಗಂ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾನೆ. ಇನ್ನು ಮುಂದೆ ಇಲ್ಲಿ ಹೇಗೆ ಶೋ ಮಾಡುತ್ತಾನೋ ನೋಡೋಣ. ಕನ್ನಡದ ನಿರ್ಮಾಪಕರು ಇನ್ನು ಮುಂದೆ ಈತನಿಂದ ಹಾಡು ಹಾಡಿಸಬಾರದು. ಒಂದು ವೇಳೆ ಯಾರಾದರೂ ಆ ದುಸ್ಸಾಹಸ ಮಾಡಿದರೆ ಅದರ ಫಲ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಖ್ಯಾತ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ ಅವರು ಸೋನು ನಿಗಂ ಹೇಳಿಕೆಗೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖ್ಯಾತ ಗಾಯಕ ಎಸ್ ಪಿ ಬಾಲ ಸುಬ್ರಮಣ್ಯಮ್ ಅವರು ನನಗೆ ಮುಂದಿನ ಜನ್ಮ ಎನ್ನುವುದು ಇದ್ದರೆ ಅದು ಕನ್ನಡ ನೆಲದಲ್ಲಿಯೇ ಇರಲಿ ನಾನು ಕನ್ನಡಿಗನಾಗಿಯೇ ಹುಟ್ಟಬೇಕು ಎಂದು ಹೃದಯಾಂತರಾಳದಿಂದ ಹೇಳಿದ್ದರು. ಆದರೆ ಈ ಬಾಡಿಗೆ ಗಾಯಕ ಸೋನು ನಿಗಮ್ ಗೆ ಇದೆಲ್ಲಾ ಹೇಗೆ ತಾನೇ ತಿಳಿಯಬೇಕು. ಧಿಕ್ಕಾರವಿರಲಿ ಈ ಅಪ್ರಭುದ್ದನ ಅರಿವಿಗೆ’ ಎಂದು ಕೋಪ ವ್ಯಕ್ತಪಡಿಸಿದ್ದಾರೆ.