ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಮಾಡದ ತಪ್ಪುಗಳನ್ನು ಎರಡನೇ ಇನ್ನಿಂಗ್ಸ್ನಲ್ಲಿ ಮಾಡಲಿಲ್ಲ. ಹೀಗಾಗಿ ಇಂದು ಭಾರತದ ಬೌಲಿಂಗ್ ದಾಳಿಯೆದುರು ದಿಟ್ಟ ಉತ್ತರ ನೀಡಿ, ಪಂದ್ಯದ ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮಧ್ಯಮ ಕ್ರಮಾಂಕದ ಆಟಗಾರ ಓಲಿ ಪೋಪ್ ಕ್ರೀಸ್ಗೆ ಕಚ್ಚಿ ನಿಂತು ಗಳಿಸಿದ 148 ರನ್ ಗಳ ನೆರವಿನಿಂದ ಇಂಗ್ಲೆಂಡ್ ಈಗ 126 ರನ್ ಗಳ ಮಹತ್ವದ ಮುನ್ನಡೆ ಗಳಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಇಂಗ್ಲೆಂಡ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತದ ವಿರುದ್ಧ ಮೇಲುಗೈ ಸಾಧಿಸಿತು. ನಿನ್ನೆ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿ ಆಡುತ್ತಿದ್ದ ಭಾರತ ಬೃಹತ್ ಮೊತ್ತ ಕಲೆ ಹಾಕಲು ಬಿಡದೇ ಕೇವಲ 16 ರನ್ ಗಳಿಗೆ ಉಳಿದ ಮೂರು ವಿಕೆಟ್ಗಳನ್ನು ಕಬಳಿಸಿತು. ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಸುಲಭವಾಗಿ ವಿಕೆಟ್ ಕಳೆದುಕೊಳ್ಳದೆ, ದಿಟ್ಟ ಹೋರಾಟ ಪ್ರದರ್ಶಿಸಿ, 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿತು.
ದಿನದ ಅಂತ್ಯಕ್ಕೆ ಈ ಸರಣಿಯ ಮೊದಲ ಶತಕ ದಾಖಲಿಸಿದ ಓಲಿ ಪೋಪ್ 208 ಎಸೆತಗಳಲ್ಲಿ ಅಜೇಯ್ 148 ರನ್ ಗಳಿಸಿ ಕ್ರೀಸ್ನಲ್ಲಿ ಇದ್ದರೆ ಮತ್ತೊಂದೆಡೆ, 16 ರನ್ ಪೇರಿಸಿರುವ ರೆಹಾನ್ ಅಹ್ಮದ್ ಬ್ಯಾಟ್ ಮಾಡುತ್ತಿದ್ದಾರೆ. ಇಂಗ್ಲೆಂಡ್ ತಂಡ ಇನ್ನೂ ನೂರಕ್ಕೂ ಹೆಚ್ಚು ರನ್ ಗಳಿಸಿದರೆ ಚೆಂಡು ತಿರುಗುತ್ತಿರುವ ಪಿಚ್ನಲ್ಲಿ ಸವಾಲಿನ ಗುರಿಯನ್ನು ನೀಡಬಹುದಾಗಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಆಟಗಾರರಾದ ಝಾಕ್ ಕ್ರಾಲಿ 31 ರನ್ ಗಳಿಸಿದರೆ, ಬೆನ್ ಡಕೆಟ್ 47 ರನ್ ಗಳಿಸಿದರು. ಇಬ್ಬರೂ ವೇಗವಾಗಿ ರನ್ ಗಳಿಸಿದ್ದು ವಿಶೇಷವಾಗಿತ್ತು. ಕ್ರಾಲಿ ವಿಕೆಟ್ ಆರ್ ಅಶ್ವಿನ್ ಗಳಿಸಿದರೆ, ಡಕೆಟ್ ಅವರನ್ನು ಜಸ್ ಪ್ರೀತ್ ಬುಮ್ರಾ ಔಟ್ ಮಾಡಿದರು, ಜೋ ರೂಟ್, ಜಾನಿ ಬೇರ್ ಸ್ಟೋ ಮತ್ತು ಬೆನ್ ಸ್ಟೋಕ್ಸ್ ಹೆಚ್ಚು ರನ್ ಗಳಿಸದೆ ಔಟಾದಾಗ ಪಂದ್ಯ ಭಾರತದ ಪರ ವಾಲಿದಂತೆ ತೋರುತ್ತಿದ್ದು. ಆದರೆ ಬೆನ್ ಪೋಕ್ಸ್ ಮತ್ತು ರೆಹನ್ ಅಹ್ಮದ್ ಅವರೊಂದಿಗೆ ಎರಡು ಉತ್ತಮ ಜೊತೆಯಾಟ ನಡೆಸಿದ ಓಲಿ ಪೋಪ್ ಭರ್ಜರಿ ಶತಕ ಗಳಿಸಿದ್ದಷ್ಟೇ ಅಲ್ಲದೆ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ನಿನ್ನೆ ಏಳು ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿ ಬೃಹತ್ ಮೊತ್ತ ದಾಖಲಿಸುವ ನಿರೀಕ್ಷೆಯಲ್ಲಿದ್ದ ಭಾರತ ತಂಡ ಇಂದು ಕೇವಲ 16 ರನ್ ಮಾತ್ರ ಸೇರಿಸಿ, 436ಕ್ಕೆ ಆಲ್ ಔಟ್ ಆಗಿ 190 ರನ್ ಗಳ ಮುನ್ನಡೆ ಗಳಿಸಿತು. ಇಂಗ್ಲೆಂಡ್ ಬೌಲರ್ಗಳು ಉತ್ತಮ ಲೈನ್ ಮತ್ತು ಲೆಂತ್ ನಲ್ಲಿ ಬೌಲ್ ಮಾಡಿ ಭಾರತದ ಬ್ಯಾಟ್ಸ್ ಮನ್ ಗಳು ಪರದಾಡುವಂತೆ ಮಾಡಿದರು.
ನಿನ್ನೆ 81 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದ ರವೀಂದ್ರ ಜಡೇಜಾ ಬ್ಯಾಟ್ ಇಂದು ಹೆಚ್ಚು ಸದ್ದು ಮಾಡಲಿಲ್ಲ. ಜೋ ರೂಟ್ ಬೌಲಿಂಗ್ ನಲ್ಲಿ ಜಡೇಜಾ ಔಟಾದರೆ, ಅವರ ಬೆನ್ನ ಹಿಂದೆಯೇ ಜಸ್ಪೀತ್ ಬೂಮ್ರಾ ರೂಟ್ ಅವರಿಗೇ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು. ನಂತರ ಅಕ್ಷರ್ ಪಟೇಲ್ ರೆಹಾನ್ ಅಹ್ಮದ್ ಅವರಿಗೆ ಬೌಲ್ಡ್ ಆಗುವುದರೊಂದಿಗೆ ಭಾರತ 436ಕ್ಕೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಅತ್ಯುತ್ತಮ ಪ್ರದರ್ಶನ ತೋರಿದ ಅನುಭವಿ ಆಟಗಾರ ಜೋ ರೂಟ್, 79 ರನ್ ನೀಡಿ 4 ವಿಕೆಟ್ ಗಳಿಸಿದರು. ರೆಹಾನ್ ಅಹ್ಮದ್ ಮತ್ತು ಟಾಮ್ ಹಾರ್ಟ್ಲೀ ತಲಾ ಎರಡು ವಿಕೆಟ್ ಹಂಚಿಕೊಂಡರೆ, ಜಾಕ್ ಲೀಚ್ ಒಂದು ವಿಕೆಟ್ ಪಡೆದರು.
190 ರನ್ ಹಿಂದೆ ಇರುವ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಭಾರತೀಯ ಸ್ಪಿನ್ನರ್ ಗಳ ಸವಾಲನ್ನು ಎದುರಿಸಬೇಕಿದೆ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 246 ಮತ್ತು 6/316
ಭಾರತ: 436