ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭಾರತ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಒಂದು ವೇಳೆ ನಿಲ್ಲಿಸದಿದ್ದರೆ ಬಾರಿ ಸುಂಕ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಮುಂದುವರಸಿರುವ ರಷ್ಯಾದಿಂದ ತೈಲ ಖರೀದಿಸದಂತೆ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ರಷ್ಯಾದೊಂದಿಗೆ ತೈಲ ಖರೀದಿ ನಿಲ್ಲಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತವು ತನ್ನ ಅಗತ್ಯದ ಮೂರನೇ ಒಂದು ಭಾಗದಷ್ಟು ತೈಲವನ್ನು ರಷ್ಯಾದಿಂದಲೇ ಖರೀದಿಸುತ್ತಿದೆ. ಭಾರತವು ತೈಲ ಖರೀದಿ ನಿಲ್ಲಿಸಿದರೆ ರಷ್ಯಾಗೆ ಹಣಕಾಸಿನ ಮುಗ್ಗಟ್ಟು ಉಂಟಾಗಲಿದೆ. ಆ ಮೂಲಕ ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸಬಹುದು ಎನ್ನುವುದು ಟ್ರಂಪ್ ಲೆಕ್ಕಾಚಾರವಾಗಿದೆ.
ಟ್ರಂಪ್ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರವೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಆದರೆ, ಭಾರತದ ವಿದೇಶಾಂಗ ಸಚಿವಾಲಯ ಮೋದಿ ಈ ರಿತಿಯ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ಜತೆಗೆ ಭಾರತದ ತೈಲ ಖರೀದಿಯು ಗ್ರಾಹಕರ ಹಿತಾಸಕ್ತಿಯನ್ನು ಆಧರಿಸಿದೆ ಎಂದು ತಿಳಿಸಿತ್ತು.
ಈ ರೀತಿ ಭಾರತ ಹೇಳುವುದಾದರೆ ಭಾರಿ ಪ್ರಮಾಣದ ಸುಂಕ ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ. ಭಾರತ ಭಾರಿ ಸುಂಕವನ್ನು ಬಯಸುವುದಿಲ್ಲ ಎಂದು ನನ್ನ ಭಾವನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.