ಸೌಹಾರ್ದತೆ, ಸಾಮರಸ್ಯದ ಶೋಧದಲ್ಲಿ..

Most read

ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣವು ದೇಶದ ಯುವ ಸಮೂಹದಲ್ಲಿ ಚರಿತ್ರೆಯನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದ್ದು, ಇತಿಹಾಸದ ಪರಿವೆಯೇ ಇಲ್ಲದ ಮಿಲೆನಿಯಂ ಜನಸಂಖ್ಯೆ ಚರಿತ್ರೆಯ ಪುಟಗಳಲ್ಲಿರುವ ವ್ಯಕ್ತಿಗಳನ್ನು ಅವರ ತಾತ್ವಿಕ ಚೌಕಟ್ಟುಗಳಿಂದ ಹೊರಗೆಳೆದು, ವರ್ತಮಾನ ಭಾರತದಲ್ಲಿ ಸೃಷ್ಟಿಯಾಗಿರುವ ಜಾತಿ-ಧರ್ಮ-ಮತ ಅಥವಾ ಸಾಮುದಾಯಿಕ ಅಸ್ಮಿತೆಗಳ ನೆಲೆಯಲ್ಲಿ ನಿಲ್ಲಿಸಿ ನೋಡುತ್ತಿದೆ. ದಾಖಲಿತ ಇತಿಹಾಸಕ್ಕೂ ಕಲ್ಪಿತ ಚರಿತ್ರೆಗೂ ಅಂತರವನ್ನು ಸತತವಾಗಿ ಕಡಿಮೆ ಮಾಡುತ್ತಿರುವ ವಾಟ್ಸಾಪ್‌ ವಿಶ್ವವಿದ್ಯಾಲಯದ ಜ್ಞಾನಶಾಖೆಗಳು, ಸ್ವಾತಂತ್ರ್ಯಪೂರ್ವ ದಾರ್ಶನಿಕರನ್ನೂ ಈ ಹೊತ್ತಿನ ಅಸ್ಮಿತೆಗಳ ಆಧಾರದಲ್ಲಿ ವಿಂಗಡಿಸುವ ಮೂಲಕ ಯುವ ಸಮೂಹದ ಸಾಮಾಜಿಕ ಪ್ರಜ್ಞೆ ಹಾಗೂ ಸೂಕ್ಷ್ಮತೆಯನ್ನು ಕಲುಷಿತಗೊಳಿಸುತ್ತಿವೆ. ಈ ಬೌದ್ಧಿಕ ಪ್ರಕ್ರಿಯೆಯ ನಡುವೆಯೇ ಗಾಂಧಿ ತಾತ್ವಿಕವಾಗಿ ಪುನಃಪುನಃ ನೆನೆಗುದಿಗೆ ಬೀಳುತ್ತಿದ್ದಾರೆ. ಹಾಗಾಗಿಯೇ ಗಾಂಧಿ ನಮ್ಮ ನಡುವೆ ಉಳಿಯಬೇಕಾದರೆ ನಾವು ಮಾನವ ಸೌಹಾರ್ದತೆಯ ಮೊರೆ ಹೋಗುತ್ತೇವೆ. ದಲಿತ ಚಳುವಳಿಗಳಲ್ಲಿ, ಅಂಬೇಡ್ಕರ್‌ವಾದಿಗಳ ನಡುವೆ, ಎಡಪಂಥೀಯರಲ್ಲಿ ಮತ್ತು ಬಲಪಂಥೀಯ ಹಿಂದುತ್ವ ಸಂಕಥನಗಳಲ್ಲೂ ಸಹ ಗಾಂಧಿ ವಿರೋಧ/ದ್ವೇಷ ಎನ್ನುವುದು ಗುಪ್ತವಾಹಿನಿಯಂತೆ ಹರಿಯುತ್ತಲೇ ಇದೆ. ಹಾಗಾಗಿಯೇ ಗಾಂಧಿ ಹಂತಕನನ್ನೂ ಆರಾಧಿಸುವ ಒಂದು ಪ್ರವೃತ್ತಿ ಬಲವಾಗುತ್ತಿದೆ. ಭಾರತದ ಚರಿತ್ರೆಯಿಂದಲೇ ಗಾಂಧಿಯನ್ನು ಅಪ್ರಸ್ತುತಗೊಳಿಸುವ ಪ್ರಯತ್ನಗಳಿಗೆ ಸಾಂಸ್ಕೃತಿಕ ರಾಜಕಾರಣ ತನ್ನದೇ ಆದ ವೇದಿಕೆಯನ್ನು ಒದಗಿಸಿದೆ.

ಆದಾಗ್ಯೂ ಅಧಿಕಾರ ರಾಜಕಾರಣದ ಅಂಗಳದಲ್ಲಿ ಬಹುಮಟ್ಟಿಗೆ ಅಪ್ರಸ್ತುತ ಎಂದೇ ಕಾಣುವ ಗಾಂಧಿ ಒಂದು ಬೌದ್ಧಿಕ ವಲಯದಿಂದ ದೂರೀಕರಿಸಲ್ಪಟ್ಟರೆ ಮತ್ತೊಂದು ವಲಯದಲ್ಲಿ ಹೆಚ್ಚು ಚರ್ಚೆಗೊಳಪಡುತ್ತಿರುವುದು ಪ್ರಸಕ್ತ ಸನ್ನಿವೇಶದ ಸಂದಿಗ್ಧತೆಯನ್ನು ತೋರಿಸುತ್ತದೆ. ಈ ಭೂಮಿಕೆಯಲ್ಲಿ ನಿಂತು ನೋಡಿದಾಗ ಗಾಂಧಿ ಇಂದಿನ ಭಾರತಕ್ಕೆ ಮೂರು ನೆಲೆಗಳಲ್ಲಿ ಪ್ರಸ್ತುತ ಎನಿಸುತ್ತಾರೆ.

ಮೊದಲನೆಯದಾಗಿ, ಸಾಮಾಜಿಕವಾಗಿ ಭಾರತ ಇಂದು ಕವಲು ಹಾದಿಯಲ್ಲಿ ನಿಂತಿದೆ. ಅಧಿಕಾರ ರಾಜಕಾರಣಕ್ಕೆ ಇಂದು ಜಾತಿ ಅತಿ ಮುಖ್ಯವಾದ ಬಳಕೆಯ ಸರಕಾಗಿದೆ. ಮತ್ತೊಂದೆಡೆ ವರ್ಣಾಶ್ರಮ ಧರ್ಮವನ್ನು ಸಮರ್ಥಿಸಿದರೂ ಅಸ್ಪೃಶ್ಯತೆಯನ್ನು ವಿರೋಧಿಸಿದ ಗಾಂಧಿ ಅಪೇಕ್ಷಿಸಿದ ʼಸಹಿಷ್ಣುತೆಯ ಸಹಬಾಳ್ವೆʼ ದ್ವೇಷ ರಾಜಕಾರಣದ ದಾಳಿಗೆ ಸಿಲುಕಿ ನಶಿಸುತ್ತಿದೆ. ಮನುಸ್ಮೃತಿ ಪ್ರತಿಪಾದಿಸುವ ಸಹಮಾನವರನ್ನು ʼಹೊರಗಿಟ್ಟುʼ ಬದುಕುವ ಒಂದು ಸಮಾಜದತ್ತ ಭಾರತ ಮುನ್ನಡೆಯುತ್ತಿದೆ. ವರ್ಗ ಶ್ರೇಣಿಯನ್ನು ಅಡ್ಡಡ್ಡಲಾಗಿ ಸೀಳುತ್ತಲೇ ಇರುವ ಜಾತಿ ಪ್ರಜ್ಞೆ ಜನಸಮುದಾಯಗಳನ್ನು ಮತ್ತಷ್ಟು ಭದ್ರಕೋಶಗಳೊಳಗೆ ಬಂಧಿಸುತ್ತಿರುವಂತೆ ʼಹೊರಗಿಡುವವರʼ ಸಂಖ್ಯೆಯೂ ಹೆಚ್ಚಾಗುತ್ತಿದೆ, ʼಹೊರಗಿಡಲ್ಪಡುವವರʼ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಯನ್ನು ʼಮನುವಾದʼ ಎಂಬ ಕ್ಲೀಷೆಯೊಂದಿಗೆ ನೋಡುವುದರ ಬದಲು, ಭಾರತೀಯ ಸಮಾಜದಲ್ಲಿ ಬೇರೂರಿರುವ ಶ್ರೇಣಿ ಪರಿಕಲ್ಪನೆಯ ನೆಲೆಯಲ್ಲಿ ನೋಡಿದಾಗ ನಮಗೆ ಗಾಂಧಿ ಪ್ರತಿಪಾದಿಸಿದ ಎಲ್ಲರನೂ ಒಳಗೊಳ್ಳುವ ಸಹಬಾಳ್ವೆಯ ಚಿಂತನೆ ಹತ್ತಿರವಾಗುತ್ತದೆ. ಒಳಗೊಳ್ಳುವ ಸಮಾಜ (Inclusive Society)  ನಿರ್ಮಾಣದಲ್ಲಿ ಗಾಂಧಿ ಒಂದು ಬೌದ್ಧಿಕ ಶಕ್ತಿಯಾಗಿ ಪರಿಣಮಿಸುತ್ತಾರೆ. 

ಎರಡನೆಯದಾಗಿ, ಸಾಂಸ್ಕೃತಿಕವಾಗಿ ಭಾರತ ಇಂದು ಪರ್ವಕಾಲವನ್ನು ತಲುಪಿದೆ. ಮತ-ಧರ್ಮ ಮತ್ತು ಸಂಸ್ಕೃತಿಯ ನಡುವಿನ ಅಂತರವನ್ನು ಪ್ರಜ್ಞಾಪೂರ್ವಕವಾಗಿಯೇ ಕಡಿಮೆ ಮಾಡುತ್ತಿರುವ ಸಾಂಸ್ಕೃತಿಕ ಸಂಕಥನಗಳು ಹಿಂದುತ್ವದ ಬಹುಸಂಖ್ಯಾವಾದ, ಜಾತಿ ಸಮಾಜದ ಕರ್ಮಠತೆ, ಅಲ್ಪಸಂಖ್ಯಾತರ ಧಾರ್ಮಿಕತೆ ಹಾಗೂ ವಿಶಾಲ ಸಮಾಜದ ಸಾಂಪ್ರದಾಯಿಕತೆಯ ಚೌಕಟ್ಟಿನಲ್ಲಿ, ಸಂಕುಚಿತವಾಗುತ್ತಿದ್ದು ಭಾರತದ ನೆಲಮೂಲ ಸಂಸ್ಕೃತಿಯಿಂದ ದೂರವಾಗುತ್ತಿವೆ.  ಗಾಂಧಿ ಮೂಲತಃ ಮಾನವ ಸಮಾಜವನ್ನು ಅಸ್ಮಿತೆಗಳ ಚೌಕಟ್ಟಿನಿಂದಾಚೆ ಇಟ್ಟು ನೋಡುತ್ತಾರೆ. ತಮ್ಮ ಬದುಕಿನ ಉತ್ತರಾರ್ಧದಲ್ಲಿ ಅಸ್ಪೃಶ್ಯತೆಯ ವಿರುದ್ಧ, ಜಾತಿಸಂಕರದ ಪರವಾಗಿ ಹೋರಾಡಿದ ಗಾಂಧಿ ಸಾಂಸ್ಕೃತಿಕವಾಗಿ ತಳಸಮಾಜವನ್ನು ತಲುಪಲು ಸಾಧ್ಯವಾಗಿದ್ದು ತಮ್ಮ “ಸೌಹಾರ್ದತೆ-ಸಾಮರಸ್ಯ-ಸಹಬಾಳ್ವೆ”ಯ  ಸಂವೇದನಾಶೀಲ ತತ್ವಗಳ ಮುಖಾಂತರ. ವರ್ತಮಾನ ಭಾರತದಲ್ಲಿ ಶಿಥಿಲವಾಗುತ್ತಿರುವುದು ಈ ಸಂವೇದನೆ-ಸದ್ಭಾವನೆಯ ನೆಲೆಗಳು. ಗಾಂಧಿ ಪ್ರತಿಪಾದಿಸಿದ ಮಾನವ ಸೌಹಾರ್ದತೆ ಇಲ್ಲಿ ಬಹಳ ಮುಖ್ಯವಾಗುತ್ತದೆ.

ಮೂರನೆಯದಾಗಿ, ಗಾಂಧಿ ಹೆಚ್ಚು ಪ್ರಸ್ತುತ ಎನಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಧಿಕಾರ ರಾಜಕಾರಣದ ಅಂಗಳದಲ್ಲಿ. ಭ್ರಷ್ಟಾಚಾರ, ಅಪ್ರಾಮಾಣಿಕತೆ, ಬೌದ್ಧಿಕ ಅನೈತಿಕತೆ ಮತ್ತು ಅಸಾಂವಿಧಾನಿಕತೆ ಇವೆಲ್ಲವನ್ನೂ ನೇಪಥ್ಯಕ್ಕೆ ಸರಿಸಿ ಭಾರತದ ಪ್ರಜಾಪ್ರಭುತ್ವ ಅಧಿಕಾರ ರಾಜಕಾರಣವನ್ನು ಎದುರಿಸುತ್ತಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ಎಷ್ಟು ಬಾರಿಯಾದರೂ ಬೇಲಿಜಿಗಿತದ ಸಾಹಸಕ್ಕೆ ಮುಂದಾಗುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಹೊರಗಿದ್ದ ಭ್ರಷ್ಟರು ಒಳಗೆ ಬಂದ ಕೂಡಲೇ ಪ್ರಾಮಾಣಿಕರಾಗಿ ಬಿಂಬಿಸಲ್ಪಡುವ ಒಂದು ವಿಕೃತ ಸಂಸದೀಯ ವ್ಯವಸ್ಥೆಗೆ ಸಮಕಾಲೀನ ರಾಜಕಾರಣ ಸಾಕ್ಷಿಯಾಗಿದೆ. ಈ ಅವಕಾಶವಾದಿ ಬೇಲಿಜಿಗಿತದ ರಾಜಕಾರಣದಲ್ಲಿ ಸಂವಿಧಾನ ಪ್ರತಿಪಾದಿಸುವ ಸೆಕ್ಯುಲರಿಸಂ, ಸಮಾಜವಾದ ಮುಂತಾದ ಉದಾತ್ತ ಮೌಲ್ಯಗಳೆಲ್ಲವೂ ಕ್ಲೀಷೆಗಳಾಗಿ ಪರಿಣಮಿಸಿವೆ. ಪ್ರಾಮಾಣಿಕತೆ, ಜನನಿಷ್ಠೆ, ಸಂವಿಧಾನ ಬದ್ಧತೆ ಹಾಗೂ ಸಾಮಾಜಿಕ ಕಳಕಳಿ ಮುಂತಾದ ಉದಾತ್ತ ಆಲೋಚನೆಗಳನ್ನು ಸಂಪೂರ್ಣ ತೊರೆದಿರುವ ಭಾರತದ ರಾಜಕೀಯ ವ್ಯವಸ್ಥೆ ಅಂತಿಮವಾಗಿ ಅಧಿಕಾರ ಕೇಂದ್ರವನ್ನು ಆಕ್ರಮಿಸಿಕೊಳ್ಳುವ ಒಂದು ಕ್ರೀಡಾಂಗಣವಾಗಿ ಕಾಣುತ್ತಿದೆ. ರಾಜಕೀಯ ವಿರೋಧ/ಪ್ರತಿರೋಧಕ್ಕೂ ವ್ಯಕ್ತಿಗತ ದ್ವೇಷ-ವೈಷಮ್ಯಕ್ಕೂ ಅಂತರ ಕಡಿಮೆಯಾಗುತ್ತಲೇ ಇರುವ ಪ್ರಸ್ತುತ ರಾಜಕಾರಣದಲ್ಲಿ, ತಳಮಟ್ಟದ ಸಾಮಾಜಿಕ ಭೂಮಿಕೆಗಳೆಲ್ಲವೂ ಅಪ್ರಸ್ತುತವಾಗುತ್ತಿವೆ.

ಇದನ್ನೂ ಓದಿ-http://“ಹೇ ರಾಮ್” https://kannadaplanet.com/hey-ram/

ಕಾರ್ಪೋರೇಟ್‌ ಮಾರುಕಟ್ಟೆ ಪ್ರೇರಿತ ಆರ್ಥಿಕ ಭ್ರಷ್ಟತೆ, ಮತೀಯ ರಾಜಕೀಯ ಪ್ರೇರಿತ ದ್ವೇಷಾಸೂಯೆಗಳು, ಜಾತಿ-ಧರ್ಮಾಧಾರಿತ ರಾಜಕೀಯ ಪ್ರೇರಿತವಾದ ʼಅನ್ಯʼಗೊಳಿಸುವ ಪ್ರಕ್ರಿಯೆ ಇವೆಲ್ಲವೂ ಭಾರತೀಯ ಸಮಾಜವನ್ನು ಒಳಗಿನಿಂದಲೇ ಕೊರೆದು ಶಿಥಿಲಗೊಳಿಸುವ ಕೀಟಗಳಂತಾಗಿವೆ. ಈ ವಿಷಕೀಟಗಳಿಂದ ಹರಡುತ್ತಿರುವ ಹುಣ್ಣುಗಳು ಕೀವುಗಟ್ಟಿದ ವ್ರಣವಾಗುವ ಮುನ್ನ ಯುವ ಸಮಾಜವನ್ನು ಜಾಗೃತಗೊಳಿಸುವ ಹೊಣೆ ಜವಾಬ್ದಾರಿಯುತ ನಾಗರಿಕರ ಮೇಲಿದೆ. ಈ ಚಿಕಿತ್ಸಕ ಕಾರ್ಯದಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರಷ್ಟೇ ಪರಿಣಾಮಕಾರಿಯಾಗಿ ಮಹಾತ್ಮ ಗಾಂಧಿ ಸಹ ಬೇಕಾಗುತ್ತಾರೆ. ಚಾರಿತ್ರಿಕ ಪ್ರಮಾದಗಳಿಗಾಗಿ ಗಾಂಧಿಯನ್ನು ತಿರಸ್ಕರಿಸುವ ಬದಲು, ವರ್ತಮಾನದ ಸಂದಿಗ್ಧತೆಯನ್ನು ನೀಗಿಸಿ, ಉತ್ತಮ ಭವಿಷ್ಯದತ್ತ ಸಾಗಲು, ಗಾಂಧಿ ಪ್ರತಿಪಾದಿಸಿದ ತತ್ವಗಳನ್ನು ಅನುಸರಿಸಿ/ಅನುಕರಿಸದಿದ್ದರೂ, ಸ್ವೀಕರಿಸುವ ವಿಶಾಲ ಮನಸ್ಸು ನಮ್ಮದಾಗಿರಬೇಕು.

ರಾಜಕೀಯ ಮತದ್ವೇಷದ ಪ್ರಥಮ ಬಲಿಪಶುವಾದ ಮಹಾತ್ಮನನ್ನು ಹುತಾತ್ಮ ದಿನದಂದು ಸ್ಮರಿಸುವುದರೊಂದಿಗೇ ವರ್ತಮಾನ ಭಾರತದಲ್ಲಿ ಮಾನವ ಸಮಾಜವನ್ನು ʼಅನ್ಯರಿಲ್ಲದʼ ಸಮಾಜವನ್ನಾಗಿ ಪರಿವರ್ತಿಸಲು ಗಾಂಧಿ ಮತ್ತು ಅವರ ತತ್ವಗಳು ನಮಗೆ ಆಸರೆಯಾಗುತ್ತವೆ. ಒಳಗೊಳ್ಳುವ ಸಮಾಜಕ್ಕಾಗಿ ಹಾತೊರೆಯುವ ಪ್ರತಿಯೊಂದು ಪ್ರಜಾಸತ್ತಾತ್ಮಕ ಮನಸ್ಸಿನ ಒಳಗೂ ಗಾಂಧಿ ಮತ್ತು ಅಂಬೇಡ್ಕರ್‌ ಸಮಾನ ನೆಲೆಯಲ್ಲಿ ಗುರುತಿಸುವಂತಾದರೆ ನಾವು ಸಾರ್ವಜನಿಕವಾಗಿ ರಚಿಸುವ “ಸೌಹಾರ್ದತೆಯ ಮಾನವ ಸರಪಳಿ” ಅರ್ಥಪೂರ್ಣವಾಗುತ್ತದೆ. ಈ ಸರಪಳಿಯ ಪ್ರತಿ ಕೊಂಡಿಯಲ್ಲೂ ಗಾಂಧಿ ಇರುತ್ತಾರೆ. ಇರಬೇಕು. ಆಗ ಮಾತ್ರ ಅಂಬೇಡ್ಕರ್‌ ಪ್ರತಿಪಾದಿಸಿದ ʼಸೋದರತ್ವ ʼ ಸಾಕಾರಗೊಳ್ಳುವುದು ಸಾಧ್ಯ. ಈ ಪ್ರಾಮಾಣಿಕ ಅರಿವಿನೊಂದಿಗೇ ಹುತಾತ್ಮ ದಿನದಿಂದು ಮಹಾತ್ಮನನ್ನು ಸ್ಮರಿಸೋಣ.

ನಾ ದಿವಾಕರ

ಚಿಂತಕರು

More articles

Latest article