Saturday, July 27, 2024

“ಹೇ ರಾಮ್”

Most read

ವಸಾಹತು ಆಡಳಿತದಲ್ಲಿ ದೇಶದ ಜನರಿಗೆ ಸಮಸ್ಯೆ ಇದೆ ಮತ್ತು ಅದಕ್ಕೆ ಸಮಸ್ಯೆಯಿಂದ ರೋಸಿ ಹೋಗಿರುವ ಜನಸಾಮಾನ್ಯರಲ್ಲಿಯೇ ಪರಿಹಾರವೂ ಇದೆ ಎನ್ನುವುದನ್ನು ಸಾಮಾನ್ಯ ಜನರಿಗೆ ಅರ್ಥಮಾಡಿಸಿದವನೇ ಯುವ ವಕೀಲನಾದ ಈ ಮೋಹನದಾಸ ಕರಮಚಂದ ಗಾಂಧಿ. ವಕೀಲನಿಗೂ ಇದು ಅನುಭವಕ್ಕೆ ಬಂದದ್ದು ಮೊದಲನೆಯದಾಗಿ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಮತ್ತು ಎರಡನೆಯದಾಗಿ ದಕ್ಷಿಣ ಆಫ್ರಿಕಾದಲ್ಲಿ ಆದ ಅವಮಾನಗಳಿಂದ – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ತನ್ನ ಸಾವಿನ 76 ವರ್ಷದ ನಂತರವೂ ದೇಶ ಎದುರಿಸುವ ಪ್ರಶ್ನೆಗಳಿಗೆ ಉತ್ತರ ಮತ್ತು ಪ್ರಜೆಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಹೊಣೆಯನ್ನು ಗಾಂಧಿಯ ಹೆಗಲಿಗೇರಿಸಿ ಅಧಿಕಾರ ಮಾತ್ರ ನಮ್ಮದಿರಬೇಕು ಎನ್ನುವ ನಾವು ಎಂತಹ ಬುದ್ಧಿವಂತರು ನೋಡಿ! ಅಂತೂ ದೇಶದ ಸ್ವಾತಂತ್ರ್ಯ ಚಳುವಳಿಗೆ ನಾಯಕತ್ವ ನೀಡಿದ್ದಲ್ಲದೇ, ‘ಅರೆಬೆತ್ತಲೆ ಫಕೀರ’ ಎನ್ನುವ ಬಿರುದು ಪಡೆದ ಈತ ನುಡಿದಂತೆ ನಡೆದವನು, ಹಾಗೆ ನಡೆಯಲು ತ್ರಿಕರಣ ಪೂರ್ವಕ ಶ್ರಮಿಸಿದವನು ಎನ್ನುವುದಂತೂ ಖಂಡಿತಾ.

ಹಾಗೆ ನೋಡಿದರೆ ದೇಶದಲ್ಲಿ ಬ್ರಿಟೀಷರು ಆಡಳಿತದಲ್ಲಿದ್ದಾಗ ಅಧಿಕಾರಸ್ಥರೊಂದಿಗೆ ಹೊಂದಿಕೊಂಡು ಹೋಗಿ ಆರಾಮವಾಗಿದ್ದವರು ತುಂಬ ಜನ ಇದ್ದರು. ಅವರಲ್ಲಿ ಬ್ಯಾರಿಸ್ಟರ್ ಮೋಹನದಾಸ ಕರಮಚಂದ ಗಾಂಧಿಯೂ ಒಬ್ಬನಾಗ ಬಹುದಿತ್ತು. ಆದರೆ ಸೂರ್ಯಮುಳುಗದೇ ಇರುವ ದೊಡ್ಡ ಸಾಮ್ರಾಜ್ಯಕ್ಕೇ ಸೆಡ್ಡು ಹೊಡೆದು ಅನ್ಯಾಯದ ವಿರುದ್ಧ ಹೋರಾಟದಲ್ಲಿ ರಾಜಿಯಿಲ್ಲ ಎಂದು ಕಡ್ಡಿ ಮುರಿದಂತೆ ನುಡಿದ ಈ ಮನುಷ್ಯ ನಿಜವಾಗಿಯೂ ವಿಚಿತ್ರ ಮತ್ತು ವಿಶಿಷ್ಟ. ವಸಾಹತು ಆಡಳಿತದಲ್ಲಿ ದೇಶದ ಜನರಿಗೆ ಸಮಸ್ಯೆ ಇದೆ ಮತ್ತು ಅದಕ್ಕೆ ಪರಿಹಾರವೂ ಸಮಸ್ಯೆಯಿಂದ ರೋಸಿ ಹೋಗಿರುವ ಜನಸಾಮಾನ್ಯರಲ್ಲಿಯೇ ಇದೆ ಎನ್ನುವುದನ್ನು ಸಾಮಾನ್ಯ ಜನರಿಗೆ ಅರ್ಥಮಾಡಿಸಿದವನೇ ಯುವ ವಕೀಲನಾದ ಈ ಮೋಹನದಾಸ ಕರಮಚಂದ ಗಾಂಧಿ. ವಕೀಲನಿಗೂ ಇದು ಅನುಭವಕ್ಕೆ ಬಂದದ್ದು ಮೊದಲನೆಯದಾಗಿ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಮತ್ತು ಎರಡನೆಯದಾಗಿ ದಕ್ಷಿಣ ಆಫ್ರಿಕಾದಲ್ಲಿ ಆದ ಅವಮಾನಗಳಿಂದ. ಭಾರತೀಯ ಮೂಲ ನಿವಾಸಿಗಳಾಗಿದ್ದು ದಕ್ಷಿಣ ಆಫ್ರಿಕಾದ ಅರ್ಥವ್ಯವಸ್ಥೆಗೆ ರಕ್ತ, ಬೆವರು ಸುರಿಸಿ ಜೀವ ತುಂಬಿದ  ತಮ್ಮ ಅಸ್ತಿತ್ವಕ್ಕಾಗಿ ಆತ್ಮಗೌರವವನ್ನು ಅಡವಿಟ್ಟು ಉಸಿರಾಡುತ್ತಿರುವ ದೇಹಗಳಾಗಿ ಬದುಕುತ್ತಿದ್ದ ಭಾರತೀಯ ಮೂಲದ ಜನರ ಹೀನಾಯ ಸ್ಥಿತಿಯಲ್ಲಿ ಸುಧಾರಣೆ ತರಲು ಗಾಂಧಿ ಜನರನ್ನು ಸಂಘಟಿಸಿದ ರೀತಿ, ಶಿಸ್ತು ಸಂಯಮ ಮೀರದೆ ಎದುರಾಳಿಗಳ ಮನಃ ಪರಿವರ್ತನೆ ಮಾಡಿದ ರೀತಿಯೇ ಅನನ್ಯ.

ನಾವು ಈಗ ವರ್ತಮಾನದಲ್ಲಿ ನಿಂತು ರಮ್ಯವಾದ ಇತಿಹಾಸವನ್ನು ನೆನಪೇನೊ ಮಾಡಿಕೊಳ್ಳಬಹುದು. ಆದರೆ ಇತಿಹಾಸವೂ ಏಳು ಬೀಳುಗಳ, ಸಿಹಿ-ಕಹಿಗಳ ಸಂಗಮವೇ ಆಗಿದೆ. ಉದ್ಯಮ ಸ್ವರೂಪ ಪಡೆದಿರುವ ವರ್ತಮಾನದ ಮಾಧ್ಯಮಗಳಿಗೂ ಮತ್ತು ರಾಜಾಶ್ರಯದ ಹಂಗಿನಲ್ಲಿರುವವರ ಹೊಗಳಿಕೆಯ ಬಹು ಪರಾಕುಗಳು ಸಮಾಜದೊಳಗಿರುವ ನೋವು, ಹಸಿವು, ಲಿಂಗ ತಾರತಮ್ಯ, ಅಧಿಕಾರಕ್ಕಾಗಿ ನಡೆಯುವ ಸಂಘರ್ಷದ ಆಟಾಟೋಪವನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗುತ್ತಿಲ್ಲ.ಇದು ಸಮಾಧಾನ ಪಟ್ಟುಕೊಳ್ಳಬೇಕಾದ ಸಂಗತಿಯೋ, ತಲ್ಲಣಕ್ಕೊಳಗಾಗಬೇಕಾದ ವಿಷಯವೋ ತಿಳಿಯುತ್ತಿಲ್ಲ. ಆದರೆ ಇಲ್ಲಿ ನಾವು ಅರ್ಥಮಾಡಿ ಕೊಳ್ಳಬೇಕಾದ ಸಾಮಾನ್ಯವಾದ ವಿಷಯ ಏನೆಂದರೆ ನೋವು ನಲಿವುಗಳು, ಸಮಸ್ಯೆ, ಪರಿಹಾರಗಳು ಬೇರೆ ಬೇರೆ ಇಲ್ಲ. ಅವು ಒಂದರೊಳಗೊಂದು ಹಾಸು ಹೊಕ್ಕಾಗಿವೆ. ಇದೊಂಥರಾ ಸಯಾಮಿ ಅವಳಿದ್ದ ಹಾಗೆ. ಸಮಸ್ಯೆಯಾಗಲೀ, ಸಹಬಾಳ್ವೆಯಾಗಲೀ ಯಾವಾಗಲೂ ಸ್ಥಾಯೀ ಆಗಿರುವ, ಸ್ಥಿರವಾಗಿರುವ ಸಂಗತಿಯಲ್ಲ. ಅವನ್ನು ಉಳಿಸಿಕೊಳ್ಳುವುದಕ್ಕೆ ನಾವು ಬೆವರು ಸುರಿಸಬೇಕು. ಮಾತ್ರವಲ್ಲ ಅವುಗಳ ಈಗಿರುವ ಸ್ಥಿತಿಯನ್ನು ಬದಲಾಯಿಸ ಬೇಕಿದ್ದರೂ ನಾವು ಶ್ರಮಪಡಬೇಕು.

ಮೊಮ್ಮಗಳು ಹಾಗೂ ತಮ್ಮ ವೈದ್ಯೆಯೊಂದಿಗೆ..

ಹೋರಾಟದ ಅಸ್ತ್ರಗಳು ನಮ್ಮ ಮನಸ್ಸು ಮತ್ತು ಹೃದಯವನ್ನು ಮಲಿನಗೊಳಿಸದಂತೆ ಎಚ್ಚರವಹಿಸಿ, ಸೋಲು ಗೆಲುವುಗಳನ್ನು ಅಂಚಿಗೆ ತಳ್ಳಿ, ಪರಿವರ್ತನೆಯ ಪ್ರಕ್ರಿಯೆಗೆ ಪ್ರೀತಿ ಎಂಬ ಮಂತ್ರ ಮತ್ತು ಶಾಂತಿ ಎಂಬ ತಂತ್ರದ ಮೂಲಕ ನಡೆಸುವ ಸತ್ಯಾಗ್ರಹ ಗಾಂಧಿ ಜಗತ್ತಿಗೆ ಪರಿಚಯಿಸಿದ ಹೊಸ ಮಾದರಿಯ ರಾಜನೀತಿ. ಅಧಿಕಾರದೊಳಗೆ ಅಂತರ್ಗತವಾಗಿರುವ ಅಹಂಕಾರದಲ್ಲಿಯೇ ಅಸ್ಥಿರತೆಯ ಬೀಜ ಬದಲಾವಣೆಯನ್ನು ಯಾವಾಗಲೂ ಸಾಧ್ಯವಾಗಿಸುತ್ತದೆ. ಈ ಅಸ್ಥಿರತೆಯ ಕುರಿತ ಅಧಿಕಾರಸ್ಥರೊಳಗಿರುವ ಭಯದ ಕಾರಣದಿಂದ ಅವರು ಆಶ್ರಯಿಸುವ ಹಿಂಸೆ, ದರ್ಪ, ಆಮಿಷಗಳನ್ನು ಸತ್ಯ, ಅಹಿಂಸೆ ಮತ್ತು ಸಹನೆಯ ಕನ್ನಡಿ ಹಿಡಿದು ಅದೆಷ್ಟು ದುರ್ಬಲ ಎನ್ನುವುದನ್ನು ಪ್ರೀತಿ, ಶಾಂತಿ, ಸಹನೆ ತುಂಬಿದ ಮನುಷ್ಯ ಬಹಳ ಸುಲಭದಲ್ಲಿಯೇ ತಿಳಿಸಬಹುದು. ಅಧಿಕಾರದ ಭಾಷೆಯಲ್ಲಿ ಮಾತನಾಡುವವರನ್ನು ಮತ್ತೊಂದು ರೀತಿಯ ಅಧಿಕಾರದ ಭಾಷೆಯಿಂದ ಗೆಲ್ಲುವುದು ಅಗತ್ಯವೂ ಇಲ್ಲ. ಬದಲಿಗೆ ಅಧಿಕಾರ ಉಂಟುಮಾಡುವ ಭಯ ಮತ್ತು ಅಭದ್ರತೆಯಿಂದ ಆಳುವವನು ಮತ್ತು ಆಳಿಸಿಕೊಳ್ಳುವವರು ಇಬ್ಬರೂ ಪಾರಾಗುವ ಮಾರ್ಗೋಪಾಯವನ್ನು ಪ್ರತಿಯೊಬ್ಬನೂ ಹೇಗೆ ರೂಪಿಸಿಕೊಳ್ಳಬಹುದು ಎನ್ನುವ ಒಂದು ಸುಲಭ ಸೂತ್ರವನ್ನೇ ಗಾಂಧಿ ನೀಡಿದ್ದು.  ಪ್ರಾಯಶಃ ಗಾಂಧಿ ಎನ್ನುವ ಕಾಲದ ಆಂತರಿಕ ಪ್ರಜ್ಞೆ ನಮಗೆ ನೀಡಿದ ಸಂದೇಶ ಇದೇ ಇರಬಹುದೇ?

ಸಹಜವಾಗಿಯೇ ಗಾಂಧಿ ಅಂದು ನೀಡಿದ ಸಂದೇಶ ಜಾಗತೀಕರಣದ ಇಂದಿನ ಕಾಲದ ಸವಾಲುಗಳನ್ನು ಎದುರಿಸಲು ಪ್ರಸ್ತುತವೇ? ಖಂಡಿತಾ ಪ್ರಸ್ತುತ. ಬ್ರಿಟೀಷ್ ಸಾಮ್ರಾಜ್ಯ ವಸಾಹತುಗಳನ್ನಾಗಿ ಪರಿವರ್ತಿಸಿದ್ದು ಹೇಗೆ? ಬೇರೆಲ್ಲ ವಿಷಯಗಳಿಗಿಂತಲೂ ನಮ್ಮ ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ನೆಲೆಗಳಿಗೆ ಲಗ್ಗೆ ಇಡುವ ಮೂಲಕ ನಮ್ಮ ಯೋಚನೆ, ಆಲೋಚನೆಗಳನ್ನು ಪ್ರಭಾವಿಸುವ ಮೂಲಕ, ನಮ್ಮ ಮತಿಗೆ ಮಿತಿ, ಯಾ ಬೇಲಿ ಹಾಕುವ ಮೂಲಕವೇ ಹೊರತು ಬೇರೇನಲ್ಲ. ಈ ಕಾರಣದಿಂದಲೇ ನಾವು ಅವರು ಭೂಮಿಯ ಮೇಲೆ ಎಳೆದ ಕಾಲ್ಪನಿಕ ರೇಖೆಗಳನ್ನೇ ಗಡಿಗಳೆಂದು ಭಾವಿಸಿದೆವು, ಮನಸ್ಸಿಗೆ ಹಚ್ಚಿದ ತಾರತಮ್ಯದ ಮಸಿಯ ಕಾರಣ ಅಸ್ಪೃಶ್ಯತೆಯನ್ನು ಮೀರದಾದೆವು. ಅವರು ಹುಟ್ಟು ಹಾಕಿದ ಅರ್ಥ, ಅನರ್ಥಗಳ ವ್ಯರ್ಥ ಚರ್ಚೆಯನ್ನು ಮುಗಿಸದಾದೆವು. ನಮ್ಮ ಮನೆ, ಮನಸ್ಸುಗಳನ್ನು ದೋಚಿ ಅದಕ್ಕೆ ಅವರು ಸೃಷ್ಟಿಸಿದ ಇತಿಹಾಸದಲ್ಲಿ ಅವರೇ ನೀಡಿದ ಸಾಕ್ಷಿಗಳನ್ನು ವಿಚಾರಿಸದೇ ಒಪ್ಪಿಕೊಂಡೆವು. ವೈವಿಧ್ಯಮಯ ಭೌಗೋಳಿಕ ಮತ್ತು ಪಾರಂಪರಿಕ ಹಿನ್ನಲೆ ಇದ್ದಾಗ ಸಮುದಾಯದ ಸಹಬಾಳ್ವೆಯಲ್ಲಿ ಹುಟ್ಟುವ  ಜಗಳಗಳಿಗೆ ಮೂಲವಾಗಿರ ಬಹುದಾದ ಅವಿವೇಕ, ಮತ್ಸರ, ಸ್ವಾರ್ಥ ಮುಂತಾದ ಸಂಗತಿಗಳನ್ನು ಮರೆತು, ಜಾತಿ, ಧರ್ಮಗಳ ಕಾರಣ ನಮ್ಮೊಳಗೇ ಅಪನಂಬಿಕೆಯನ್ನು ಬೆಳೆಸಿ ಕೊಂಡೆವು. 

ಕಾಂಗ್ರೆಸ್ ಪಕ್ಷದ ಸ್ಥಾಪನೆಯ ಮೂಲಕ ಅವರೇ ತಮಗೊಂದು ವಿರೋಧಿ ನೆಲೆಯನ್ನೂ ಹುಟ್ಟುಹಾಕಿದರಾದರೂ ಎಲ್ಲವೂ ಅವರ ನಿರೀಕ್ಷೆಯಂತಾಗಲಿಲ್ಲ. ಆಧುನಿಕ ಶಿಕ್ಷಣ ಪಡೆದ ನಮ್ಮವರು ಯೋಚಿಸಲಾರಂಭಿಸಿದರು, ಪ್ರಶ್ನಿಸಲಾರಂಭಿಸಿದರು. ನಮ್ಮದೇ ಮನೆಯಲ್ಲಿ ನಾವೇ ಪರಕೀಯರಾಗುವ ಸನ್ನಿವೇಷಕ್ಕೆ ಪ್ರತಿರೋಧ ಸಹಜವಾಗಿಯೇ ಹುಟ್ಟಿಕೊಂಡಿತು. ಇಂತಹ ಸಂಕಟದ ಸಂಕ್ರಮಣದಲ್ಲಿ ಸಾಮ್ರಾಜ್ಯಶಾಹಿಯನ್ನು  ಎದುರಿಸಲು ನಮ್ಮದೇ ಪರಂಪರೆಯ ದರ್ಶನ, ಜ್ಞಾನ, ಚರಿತ್ರೆಗಳನ್ನು ಆಧರಿಸಿದ ವಿಶೇಷ ಆಯುಧದಿಂದ ಮಾತ್ರ  ಸಾಧ್ಯ ಎನ್ನುವ ಸರಳ ಸತ್ಯವನ್ನು ಅರಿತುಕೊಂಡರು. ಬ್ರಿಟೀಷ್ ಆಡಳಿತದ ದರ್ಪ, ಹಿಂಸೆ, ಒಡೆದಾಳುವ ಕುಟಿಲ ನೀತಿಗಳನ್ನು ಸತ್ಯ, ಅಹಿಂಸೆ, ಶಿಸ್ತು, ತ್ಯಾಗ ಮತ್ತು ಸರಳತೆಯ ಆಧಾರದಲ್ಲಿ  ಹೊಸ ಚಿಂತನಾ ವಿನ್ಯಾಸವೊಂದನ್ನು ಕಟ್ಟಿ ಆ ಮೂಲಕ ರಾಷ್ಟ್ರೀಯ ಚಳುವಳಿಗೆ ಶಕ್ತಿ ತುಂಬಿಸಲಾಯಿತು. ಧರ್ಮವೆಂದರೆ ಅದೊಂದು ಒಣ ವಿಚಾರವಲ್ಲ ಜೀವಪರವಾದ, ದಿನನಿತ್ಯದ ಆಚಾರವೆಂದು ಹೇಳುತ್ತಾ ನಾಯಕನಾದ ಗಾಂಧಿ ಹಾಗೆಯೇ ಬದುಕಲು ಆರಂಭಿಸಿ ಒಬ್ಬ ನಿಜ ಅರ್ಥದಲ್ಲಿ ‘ಹಿಂದೂ’ ಆಗಲು ಹೊರಟರು. 

ಶ್ರೇಣಿಕೃತ ವ್ಯವಸ್ಥೆಯ ಆಯಕಟ್ಟಿನಲ್ಲಿದ್ದು ಬದಲಾವಣೆಯ ಭಾರವನ್ನು ಯಾರದೋ ಹೆಗಲಿಗೆ ವರ್ಗಾಯಿಸಿ, ತಾವು ಸದಾ ಸುಲಭದಲ್ಲಿ ಬದುಕುವಂತಹ ಜಾಣರಿಗೆ ಗಾಂಧಿಯ ರಂಗ ಪ್ರವೇಶ ಮಗ್ಗುಲ ಮುಳ್ಳಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಮುಂದೆ ಯಾವತ್ತಾದರೂ ಬ್ರಿಟೀಷರು ಹೊರ ನಡೆದರೆ ತಾವೇ ವಾರಸುದಾರರಾಗಬಹುದಾಗಿದ್ದ ದೇಶಕ್ಕೆ ಪ್ರಜಾಪ್ರಭುತ್ವ, ಸಂವಿಧಾನದ ಹೆಸರಲ್ಲಿ ಕಾಂಜಿ, ಪೀಂಜಿಗಳಿಗೆಲ್ಲ ಸಮಾನ ಹಕ್ಕುಗಳನ್ನು ನೀಡಿ ಅವರೆಲ್ಲ ತಮ್ಮ ಸರಿಸಮ ವ್ಯವಹರಿಸಬಹುದಾದ ಯೋಚನೆಯೇ ಕೆಲ ವರ್ಗದ ಜನರಿಗೆ ತಲ್ಲಣ ಉಂಟುಮಾಡಿತು. ಈ ಕಾರಣದಿಂದಾಗಿಯೇ ಗಾಂಧೀಯನ್ನು ಅಳಿಸಿಬಿಡುವ ಸಂಕಲ್ಪ ಮಾಡಲಾದದ್ದು ಎಂದು ಹೇಳಲಾಗುತ್ತಿದೆ. ದೇಶ ವಿಭಜನೆಯಾದ ಮೇಲೆ ಪಾಕಿಸ್ತಾನಕ್ಕೆ ಸಲ್ಲಬೇಕಿದ್ದ 55 ಕೋಟಿ ಹಣ ನೀಡಬೇಕೆಂದು ಒತ್ತಾಯ, ಹಿಂದೂ-ಮುಸ್ಲಿಂ ಐಕ್ಯತೆಯ ಹೋರಾಟದಲ್ಲಿ ಅವರು ಪಕ್ಷಪಾತಿಯಾಗಿದ್ದರು.. ಇತ್ಯಾದಿಯೆಲ್ಲ ಸಾರ್ವಜನಿಕ ಸಂತರ್ಪಣೆಯಲ್ಲಿ  ಸುಳ್ಳಿನ ಬಾಣಲೆಯಲ್ಲಿ ಕರಿದ ಕಲ್ಪನೆಯ ಕಜ್ಜಾಯಗಳು. ಯಾಕೆಂದರೆ ನಮಗೆ ತಿಳಿದಿರುವಂತೆ ತಮ್ಮ ಐದನೇ ಪ್ರಯತ್ನದಲ್ಲಿ ಗಾಂಧಿಯನ್ನು ಹತ್ಯೆ ಮಾಡಲು ಕೊಲೆಗಡುಕರು ಯಶಸ್ವಿಯಾದರು. ಬೆಳಕಿಗೆ ಬಾರದೇ ಇರುವ ಹತ್ಯಾ ಪ್ರಯತ್ನಗಳು ಇನ್ನೆಷ್ಟು ನಡೆದಿವೆಯೋ?

ಗಾಂಧೀಜಿಯವರು ತಾವೇ ದಾಖಲಿಸಿದಂತೆ ಮತ್ತು ಅವರ ಜೀವನ ಚರಿತ್ರೆಯನ್ನು ಬರೆದ ಅನೇಕರ ಪ್ರಕಾರ, ಧರ್ಮದ ಅನುಸರಣೆ ಕೇವಲ ವಿಚಾರವಾಗಿ ಉಳಿಯದೇ ನಿತ್ಯ ಜೀವನದಲ್ಲಿ ಪ್ರತಿಯೊಬ್ಬರ ಚಾರಿತ್ರ್ಯ ಮತ್ತು ಚಿಂತನೆ ಆಗಬೇಕು ಎನ್ನುವ ಬಾಪೂ ಅವರ ರಾಜಿ ರಹಿತ ನಿಲುವುಗಳೇ ಅವರ ಸಾವಿಗೆ ಮುನ್ನುಡಿ ಬರೆಯಿತೇನೋ ಅನಿಸುತ್ತದೆ. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಭಾರತೀಯರನ್ನು ‘ಭಾರತೀಯತೆ’ಯ ಅಡಿಯಲ್ಲಿ ಅಲ್ಲಿನ ಶೋಷಿತ ವರ್ಗವನ್ನು ಒಂದುಗೂಡಿಸಿ ಅವರಿಗೆ ನ್ಯಾಯ ದೊರಕಿಸಿ ಕೊಟ್ಟದ್ದು, ತಮ್ಮ ಮಕ್ಕಳಿಗೆ ಜನಿವಾರ ಧಾರಣೆ ಅಗತ್ಯವಿಲ್ಲ, ಧಾರ್ಮಿಕರಾಗಿರುವುದಕ್ಕೆ ಮನುಷ್ಯತ್ವ ಸಾಕು  ಎಂದು ಖಡಾಖಂಡಿತ ನಿಲುವು ತಾಳಿದ್ದೇ ಗಾಂಧೀಜಿಯನ್ನು ಅಳಿಸಲು ಮುಖ್ಯ ಕಾರಣವೆಂದು ಅವರ ಮರಿಮೊಮ್ಮಗ ಶ್ರೀ ತುಷಾರ್ ಗಾಂಧಿ ಕೂಡಾ ತಮ್ಮ ಅಭಿಪ್ರಾಯವನ್ನು ತಮ್ಮ ಪುಸ್ತಕವೊಂದರಲ್ಲಿ ಹೇಳಿಕೊಂಡಿದ್ದಾರೆ. ಸಮಾಜದಲ್ಲಿ ನ್ಯಾಯಯುತವಾಗಿರುವಂತೆ ತೋರಿಸಿಕೊಂಡರೆ ಸಾಕು ನಿಜವಾಗಿ ಹಾಗಿರಬೇಕಾಗಿಲ್ಲ. ನುಡಿದಂತೆ ನಡೆದರೆ ಅಪಾಯಕ್ಕೆ ಆಹ್ವಾನ ಎನ್ನುವುದು ಗಾಂಧೀ ಹತ್ಯೆಯ ಮೂಲಕ ನೀಡಲು ಹೊರಟ ಸಂದೇಶವೇ?

ಡಾ.ಉದಯಕುಮಾರ್‌ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

More articles

Latest article