14 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಬೇಲಿಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದಡಿಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಬೆಂಗಳೂರು ನ್ಯಾಯಾಲಯ ದೋಷಿ ಎಂದು ಗುರುತಿಸಿದ ನಂತರ ಸಿಬಿಐ ಅವರನ್ನು ಬಂಧಿಸಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸುಮಾರು 200 ಕೋಟಿ ರೂ. ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣದ ಅಡಿಯಲ್ಲಿ ಸೈಲ್ ಅವರನ್ನು ದೋಷಿ ಎಂದು ಗುರುತಿಸಿದ್ದಾರೆ. ಸೈಲ್ ಅವರನ್ನು ನ್ಯಾಯಾಲಯದ ಆವರಣದಲ್ಲೇ ಬಂಧಿಸಲಾಗಿದೆ. ಶಿಕ್ಷೆಯನ್ನು ಪ್ರಕಟಿಸುವ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ 8.30ರ ವೇಳೆಗೆ ಕಾರವಾರ ಶಾಸಕರೂ ಆಗಿರುವ ಸೈಲ್ ಅವರನ್ನು ಆರೋಗ್ಯ ತಪಾಸಣೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ನಂತರ ಅವರನ್ನು ಪರಪ್ಪನ ಅಗ್ರಹಾರ ಬಂಧೀಖಾನೆಗೆ ಕರೆದೊಯ್ಯಲಾಗಿದೆ.
2010 ಜೂನ್ ನಲ್ಲಿ ಬೇಲಿಕೇರಿ ಬಂದರಿನಿಂದ ಬೃಹತ್ ಪ್ರಮಾಣದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿರುವುದನ್ನು ಪತ್ತೆ ಹಚ್ಚಿತ್ತು. ನಂತರ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ಗೆ ವಹಿಸಿತ್ತು. ಸೈಲ್ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ರಫ್ತು ಮಾಡಿತ್ತು. ಈ ಕಂಪನಿ ಯಾವುದೇ ನೈಜ ದಾಖಲೆಗಳಿಲ್ಲದಿದ್ದರೂ ಬಂದರಿನ ಅಧಿಕಾರಿ ಮಹೇಶ್ ಬಿಲಿಯಾ ಅವರ ಸಹಕಾರದಿಂದ ಕಬ್ಬಿಣದ ಅದಿರನ್ನು ಕಳವು ಮಾಡಿ ಚೀನಾ ದೇಶಕ್ಕೆ ರಫ್ತು ಮಾಡಿರುವುದನ್ನು ಸಿಬಿಐ ಪತ್ತೆ ಹಚ್ಚಿತ್ತು. ಸೈಲ್ ವಿರುದ್ಧ ವಂಚನೆ, ಅಕ್ರಮ ಪ್ರವೇಶ ಮತ್ತು ಭ್ರಷ್ಟಾಚಾರದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.