ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತ್ತುಗೊಳಿಸಿ ಜಾಮೀನು ಮಂಜೂರು ಮಾಡಿದ ದೆಹಲಿಯ ಹೈಕೋರ್ಟ್ ಆದೇಶವನ್ನು ಜನರು ಪ್ರಶ್ನಿಸಬೇಕಿದೆ. ದೆಹಲಿ ಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಬೇಕಿದೆ. ಅಧಿಕಾರಸ್ಥರು ಅದೆಷ್ಟೇ ದೌರ್ಜನ್ಯ ಮಾಡಿದರೂ ಕೊನೆಗೂ ಶಿಕ್ಷೆಗೆ ಒಳಗಾಗಲೇಬೇಕು ಎನ್ನುವ ಸಂದೇಶವನ್ನು ನ್ಯಾಯಾಂಗ ತಲುಪಿಸಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು, ಆದರೆ ಪ್ರಭಾವಿಗಳು ಹಾಗೂ ಅಧಿಕಾರಸ್ಥರು ಹೆಚ್ಚು ಸಮಾನರು ಎಂಬುದು ಹಲವಾರು ಸಂದರ್ಭದಲ್ಲಿ ಸಾಬೀತಾಗಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಉನ್ನಾವೋ ಅತ್ಯಾಚಾರ ಪ್ರಕರಣದ ಕುರಿತು ದೆಹಲಿ ಉಚ್ಚ ನ್ಯಾಯಾಲಯ ಡಿಸೆಂಬರ್ 23 ರಂದು ಕೊಟ್ಟ ವಿವಾದಾತ್ಮಕ ತೀರ್ಪು ನಮ್ಮ ರಾಜಕೀಯ ಪ್ರಭಾವ, ನ್ಯಾಯ ವ್ಯವಸ್ಥೆ ಹಾಗೂ ಮಹಿಳಾ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ ಉನ್ನಾವೋದಲ್ಲಿ 2017 ಜೂನ್ 4 ರಂದು 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಕೆಲಸ ಕೇಳಿಕೊಂಡು ಕುಲದೀಪ್ ಸಿಂಗ್ ಸೆಂಗರ್ ಎನ್ನುವ ಬಿಜೆಪಿ ಪಕ್ಷದ ಶಾಸಕನ ಬಳಿ ಬರುತ್ತಾಳೆ. ಅಸಹಾಯಕಳಾದ ಬಾಲೆಯ ಮೇಲೆ ಆ ಸ್ತ್ರೀ ಪೀಡಕ ಶಾಸಕ ಅತ್ಯಾಚಾರವೆಸಗುತ್ತಾನೆ. ತದನಂತರ ಶಾಸಕನ ಜೊತೆಗಾರರೂ ಸಹ ಬಾಲೆಯನ್ನು ಅಪಹರಿಸಿ ಬಂಧನದಲ್ಲಿಟ್ಟು ಸಾಮೂಹಿಕ ಅತ್ಯಾಚಾರ ಮಾಡಿ ತಮ್ಮ ನೀಚತನ ಮೆರೆಯುತ್ತಾರೆ. ಈ ದುರುಳರ ವಿರುದ್ಧ ದೂರು ನೀಡಲು ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಪೊಲೀಸರ ಬಳಿ ಹೋದರೆ ದೂರು ದಾಖಲಿಸದೇ ಹೆದರಿಸಿ ಕಳುಹಿಸಲಾಯ್ತು. ಯಾವಾಗ ಅನ್ಯಾಯದ ವಿರುದ್ಧ ಸಂತ್ರಸ್ತೆಯ ತಂದೆ ನ್ಯಾಯಕ್ಕಾಗಿ ಆಗ್ರಹಿಸತೊಡಗಿದರೋ ಆಗ 2018 ಎಪ್ರಿಲ್ 8 ರಂದು ಶಾಸಕನ ತಮ್ಮ ಅತುಲ್ ಸೆಂಗರ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ದೂರು ಕೊಡಲು ಹೋದರೆ ಪೊಲೀಸರು ಆ ತಂದೆಯನ್ನೇ ಬಂಧಿಸಿ ಹಿಂಸಿಸಿದರು. ಇದೆಲ್ಲದರಿಂದ ನಲುಗಿಹೋದ ಸಂತ್ರಸ್ತೆ ತೀವ್ರವಾಗಿ ಹತಾಶಳಾಗಿ ಎಪ್ರೀಲ್ 8 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರ ಮನೆಯ ಮುಂದೆ ಹೋಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಳು. ಅದರ ಮರುದಿನವೇ ಪೊಲೀಸ್ ಬಂಧನದಲ್ಲಿದ್ದ ಆಕೆಯ ತಂದೆ ತೀರಿಕೊಂಡರು.

ಈ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾದ ನಂತರ ಸಾರ್ವಜನಿಕರ ಆಕ್ರೋಶ ತೀವ್ರವಾಯಿತು. ವಿರೋಧ ಪಕ್ಷಗಳು ಸಂತ್ರಸ್ತೆಯ ಪರವಾಗಿ ಧ್ವನಿ ಎತ್ತಿದವು. ದೇಶಾದ್ಯಂತ ತಲ್ಲಣವನ್ನು ಹುಟ್ಟುಹಾಕಿದ ನಂತರ ಒತ್ತಡಕ್ಕೊಳಗಾಗಿ ಪೊಲೀಸರು ಶಾಸಕ ಸೆಂಗರ್ ಮೇಲೆ ಎಫ್ ಐ ಆರ್ ದಾಖಲಿಸಿದರು ಹಾಗೂ ಆತನ ತಮ್ಮನನ್ನು ಬಂಧಿಸಿದರು. ಜನರ ಆಕ್ರೋಶ ಹಾಗೂ ವಿಪಕ್ಷಗಳ ವಿರೋಧ ತೀವ್ರವಾದ ನಂತರವೇ ಈ ಅತ್ಯಾಚಾರಿ ಶಾಸಕನನ್ನು ಬಿಜೆಪಿ ಪಕ್ಷದಿಂದ ಹೊರಹಾಕಿ ಇಡೀ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಿತು. ಈಗ ಶಾಸಕನ ಅಸಲಿ ಆಟ ಶುರುವಾಯಿತು. ಪ್ರಕರಣದ ಸಾಕ್ಷಿಗಳನ್ನು ನಾಶ ಮಾಡುವ ಹುನ್ನಾರ ಆರಂಭವಾಯಿತು. ಸಂತ್ರಸ್ತೆಯ ಚಿಕ್ಕಪ್ಪನನ್ನು ಯಾವುದೋ ಹಳೆಯ ಪ್ರಕರಣದ ನೆಪದಲ್ಲಿ ಬಂಧಿಸಲಾಯ್ತು. ಸಂತ್ರಸ್ತೆಯ ಕುಟುಂಬದ ಸದಸ್ಯರುಗಳಿಗೆ ಜೀವಬೆದರಿಕೆ ಹಾಕಲಾಯ್ತು. ಇದೆಲ್ಲದರಿಂದ ನೊಂದ ಸಂತ್ರಸ್ತೆ 2019 ಜುಲೈ 12 ರಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಿಗೆ ಪತ್ರ ಬರೆದಳು. ಇದರಿಂದ ಇನ್ನಷ್ಟು ಕೆರಳಿದ ಶಾಸಕ ಸೆಂಗರ್ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಲಾರಿ ನುಗ್ಗಿಸಿದ. ಈ ದುರ್ಘಟನೆಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ವಕೀಲ ತೀವ್ರವಾಗಿ ಗಾಯಗೊಂಡು ಆಕೆಯ ಕುಟುಂಬದ ಇಬ್ಬರು ಮಹಿಳೆಯರು ಅಸುನೀಗಿದರು. ಕೆಲವೇ ದಿನಗಳ ನಂತರ ಗಾಯಗೊಂಡಿದ್ದ ವಕೀಲರೂ ತೀರಿಕೊಂಡರು. ಸಂತ್ರಸ್ತೆಗೆ ರಕ್ಷಣೆ ಒದಗಿಸಲು ನ್ಯಾಯಾಲಯ ನೇಮಿಸಿದ ಪೊಲೀಸ್ ಅಧಿಕಾರಿ ಜೊತೆಯಲ್ಲಿ ಇಲ್ಲದ್ದು ಶಾಸಕನ ಪಿತೂರಿಯ ಭಾಗವೇ ಆಗಿತ್ತು.
ಸಂತ್ರಸ್ತೆಯ ರಕ್ಷಣೆಗೆ ಉತ್ತರಪ್ರದೇಶ ಸೂಕ್ತವಲ್ಲ ಎಂದು ನಿರ್ಧರಿಸಿದ ಸುಪ್ರೀಂ ಕೋರ್ಟ್ ಉನ್ನಾವೋ ಪ್ರಕರಣಕ್ಕೆ ಸಂಬಂಧಿಸಿದ ಐದೂ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿ ಆಗಸ್ಟ್ 1 ರಂದು ಆದೇಶಿಸಿತು. ದೇಶದಾದ್ಯಂತ ಭುಗಿಲೆದ್ದ ಜನರ ಆಕ್ರೋಶ ಕೊನೆಗೂ ಪ್ರತಿಫಲಕೊಟ್ಟಿತು. ವಿಚಾರಣೆ ತೀವ್ರಗೊಂಡು 2019 ರ ಡಿಸೆಂಬರ್ 20 ರಂದು ದುರುಳ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನಿಗೆ ಜೀವಿತಾವಧಿ ಜೈಲು ಶಿಕ್ಷೆಯನ್ನು ವಿಧಿಸಿತು. ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲೂ ಆತನಿಗೆ 10 ವರ್ಷ ಜೈಲು ಶಿಕ್ಷೆಯಾಯಿತು.
ಕೆಳ ನ್ಯಾಯಾಲಯದ ಆದೇಶವನ್ನೇ ಅಮಾನತ್ತುಗೊಳಿಸಿದ ದೆಹಲಿಯ ಉಚ್ಚ ನ್ಯಾಯಾಲಯ!
ಸದ್ಯಕ್ಕೆ ಅತ್ಯಾಚಾರಿ ನೀಚ ಶಾಸಕನಿಗೆ ಕೊನೆಗೂ ಶಿಕ್ಷೆಯಾಯಿತಲ್ಲಾ, ಕೊನೆಗೂ ನ್ಯಾಯ ಸಿಕ್ಕಿತಲ್ಲಾ ಎಂದು ಸಂತ್ರಸ್ತೆ ಹಾಗೂ ದೇಶದ ಜನತೆ ನಿಟ್ಟುಸಿರು ಬಿಡುತ್ತಿರುವಾಗ ಮತ್ತೆ ನ್ಯಾಯಾಂಗವೇ 2025 ಡಿಸೆಂಬರ್ 23 ರಂದು ಆಘಾತಕಾರಿ ತೀರ್ಪನ್ನು ನೀಡಿ ಜೀವಿತಾವಧಿ ಶಿಕ್ಷೆ ನೀಡಿದ ಕೆಳ ನ್ಯಾಯಾಲಯದ ಆದೇಶವನ್ನೇ ಅಮಾನತ್ತುಗೊಳಿಸಿದ ದೆಹಲಿಯ ಉಚ್ಚ ನ್ಯಾಯಾಲಯ ಅಪರಾಧಿಗೆ ಜಾಮೀನನ್ನೂ ಮಂಜೂರು ಮಾಡಿದೆ. ಇದನ್ನು ಪ್ರತಿರೋಧಿಸಿ ಏಕಾಂಗಿಯಾಗಿ ತನ್ನ ತಾಯಿಯ ಜೊತೆಗೆ ಹೋರಾಟಕ್ಕೆ ಕುಳಿತ ಸಂತ್ರಸ್ತೆಯನ್ನು ಪೊಲೀಸರು ಎಳೆದು ಹಾಕಿದ್ದು ಇನ್ನೂ ಅನಾಹುತಕಾರಿಯಾಗಿದೆ. ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯನ್ನೇ ಸಂದೇಹದಿಂದ ನೋಡುವಂತೆ ಮಾಡಿದೆ. ಸದ್ಯ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ ಆದ ಶಿಕ್ಷೆಯಲ್ಲಿ ಈ ದುರುಳ ಇನ್ನೂ ಜೈಲಿನಲ್ಲೇ ಇರುವಂತಾಗಿದೆ. ಆ ಶಿಕ್ಷೆಯನ್ನೂ ಯಾವಾಗ ಅಮಾನತ್ತು ಗೊಳಿಸಿ ಅತ್ಯಾಚಾರಿಯನ್ನು ಬಿಡುಗಡೆ ಗೊಳಿಸುತ್ತಾರೋ ಎನ್ನುವ ಆತಂಕ ಕಾಡುತ್ತಿದೆ.

ಜಾತಿ, ಜನ, ಹಣ, ಪಕ್ಷ, ಬೆಂಬಲ ಹಾಗೂ ಅಧಿಕಾರದ ಅಹಂಕಾರ ಇರುವ ಸೆಂಗರ್ ನಂತಹ ದುರುಳರು ತಮ್ಮ ಪ್ರಭಾವ ಬಳಸಿ ಪೊಲೀಸ್ ವ್ಯವಸ್ಥೆ, ಸರಕಾರಿ ವ್ಯವಸ್ಥೆ ಹಾಗೂ ನ್ಯಾಯಾಂಗವನ್ನೇ ತಮ್ಮ ಪರವಾಗಿ ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಉನ್ನಾವೋ ಪ್ರಕರಣ ಸಾಕ್ಷಿಯಾಗಿದೆ. ಶಾಸಕಾಂಗ ಕಾರ್ಯಾಂಗಗಳ ಮೇಲೆ ಜನರ ನಂಬಿಕೆ ಕಳೆದುಹೋಗಿದ್ದು ನ್ಯಾಯಾಂಗದ ಮೇಲೆ ಒಂದಿಷ್ಟು ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಯಾವಾಗ ನ್ಯಾಯಾಲಯಗಳೂ ಸಹ ಅತ್ಯಾಚಾರಿಗಳ ಪರವಾಗಿ ತೀರ್ಪುಗಳನ್ನು ನೀಡುತ್ತವೆಯೋ ಆಗ ನ್ಯಾಯಾಲಯಗಳೂ ಜನತೆಯ ನಂಬಿಕೆಗಳನ್ನು ಕಳೆದುಕೊಂಡು ಪ್ರಶ್ನಾರ್ಹವಾಗುತ್ತವೆ.
ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಏನಾಗಿತ್ತು?
ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲೂ ಸಹ ಹೀಗೇ ಆಗಿತ್ತು. 2002 ರ ಗುಜರಾತ್ ದಂಗೆಯ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಅವರನ್ನು 20ಕ್ಕೂ ಹೆಚ್ಚು ಜನ ಮೇಲ್ವರ್ಗದ ಹಿಂದೂ ಧರ್ಮೀಯ ಮತಾಂಧರು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಆಕೆಯ 3 ವರ್ಷದ ಮಗುವನ್ನೂ ಸೇರಿದಂತೆ ಆಕೆಯ ಕುಟುಂಬದ 14 ಜನರನ್ನು ಕೊಂದಿದ್ದರು. ಈ ಪ್ರಕರಣದಲ್ಲೂ ಪೊಲೀಸರು ಸಂತ್ರಸ್ತೆಯ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು, ಅತ್ಯಾಚಾರವೇ ಆಗಿಲ್ಲವೆಂದು ವೈದ್ಯರ ವರದಿ ತಂದರು. ಉನ್ನಾವೋ ಪ್ರಕರಣದಂತೆಯೇ ಸುಪ್ರೀಂ ಕೋರ್ಟ್ 2004 ರಲ್ಲಿ ವಿಚಾರಣೆಯನ್ನು ಗುಜರಾತಿನಿಂದ ಮಹಾರಾಷ್ಟ್ರದ ಮುಂಬೈ ನ್ಯಾಯಾಲಯಕ್ಕೆ ವರ್ಗಾಯಿಸಿತು. 2008 ರಲ್ಲಿ ಮುಂಬೈ ಕೋರ್ಟ್ 11 ಆರೋಪಿಗಳಿಗೆ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತು. 2017 ರಲ್ಲಿ ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿಯಿತು. 2019 ರಲ್ಲಿ ಸುಪ್ರೀಂ ಕೋರ್ಟ್ ಬಿಲ್ಕಿಸ್ ಬಾನುರವರಿಗೆ 50 ಲಕ್ಷ ಪರಿಹಾರ ಹಾಗೂ ಸರಕಾರಿ ಉದ್ಯೋಗ ಹಾಗೂ ಮನೆ ನೀಡುವಂತೆ ಆದೇಶಿಸಿತು. ತದನಂತರ 2022 ಆಗಸ್ಟ್ 15 ರಂದು ಬಿಜೆಪಿ ಆಡಳಿತದ ಗುಜರಾತ್ ಸರ್ಕಾರ ಆ 11 ಆರೋಪಿಗಳ ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆ ಮಾಡಿತು. ಬಿಡುಗಡೆಗೊಂಡ ಅತ್ಯಾಚಾರಿಗಳನ್ನು ಬಿಜೆಪಿ ನಾಯಕರು ಸಹಿ ಹಂಚಿ ಸಂಭ್ರಮಿಸಿ ಸನ್ಮಾನ ಮಾಡಿ ಬರಮಾಡಿಕೊಂಡರು. ಬಿಜೆಪಿ ಸರಕಾರದ ಈ ಕ್ರಮ ದೇಶಾದ್ಯಂತ ಆಕ್ರೋಶವನ್ನುಂಟು ಮಾಡಿತು. ಪ್ರತಿಭಟನೆಗಳು ತೀವ್ರಗೊಂಡವು. 2024 ಜನವರಿ 8 ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ ಎಲ್ಲಾ 11 ಜನ ಅಪರಾಧಿಗಳನ್ನು ಮತ್ತೆ ಜೈಲಿಗೆ ದೂಡಿತು.
ಜನರು ಪ್ರಶ್ನಿಸಬೇಕಿದೆ…

ಗುಜರಾತಿನಲ್ಲಿ ಬಿಲ್ಕಿಸ್ ಬಾನು ಹಾಗೂ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯ ದಿಟ್ಟ ಹೋರಾಟಗಳು ಪ್ರಶಂಸನೀಯ. ಪೊಲೀಸ್ ವ್ಯವಸ್ಥೆ ಹಾಗೂ ಬಲಿಷ್ಠ ಸರಕಾರವನ್ನೇ ಎದುರು ಹಾಕಿಕೊಂಡು, ನ್ಯಾಯಾಂಗದ ವ್ಯತಿರಿಕ್ತ ಆದೇಶವನ್ನೂ ಪ್ರಶ್ನಿಸಿ, ಅನೇಕಾನೇಕ ಹಿಂಸೆಗಳನ್ನು ಸಹಿಸಿಕೊಂಡು ಅತ್ಯಾಚಾರಿಗಳಿಗೆ ಶಿಕ್ಷೆಯಾಗುವವರೆಗೂ ಹೋರಾಡಿದ ಈ ಮಹಿಳೆಯರು ನೊಂದ ಹೆಣ್ಣುಗಳಿಗೆ ಮಾದರಿಯಾಗಿದ್ದಾರೆ. ಅದೇ ರೀತಿ ಅತ್ಯಾಚಾರಿಗಳ ಪರವಾಗಿ ನಿಂತ ಬಿಜೆಪಿ ಸರಕಾರ ಹಾಗೂ ಬಿಜೆಪಿ ಬೆಂಬಲಿತ ದುರುಳ ದುಷ್ಟರಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಕ್ರೋಶ ಮತ್ತು ಜನಾಂದೋಲನಗಳು ಪೊಲೀಸರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲಬಲ್ಲವು, ರಾಜಕೀಯದ ಪ್ರಭಾವವನ್ನೂ ಛಿದ್ರಗೊಳಿಸಬಲ್ಲವು ಹಾಗೂ ನ್ಯಾಯಾಂಗದ ಮೇಲೆಯೂ ಸಹ ಪ್ರಭಾವ ಬೀರಬಲ್ಲವು ಎನ್ನುವುದಕ್ಕೆ ಈ ಎರಡೂ ಪ್ರಕರಣಗಳು ಪುರಾವೆಗಳಾಗಿವೆ. ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತ್ತುಗೊಳಿಸಿ ಜಾಮೀನು ಮಂಜೂರು ಮಾಡಿದ ದೆಹಲಿಯ ಹೈಕೋರ್ಟ್ ಆದೇಶವನ್ನು ಜನರು ಪ್ರಶ್ನಿಸಬೇಕಿದೆ. ದೆಹಲಿ ಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಬೇಕಿದೆ. ಅಧಿಕಾರಸ್ಥರು ಅದೆಷ್ಟೇ ದೌರ್ಜನ್ಯ ಮಾಡಿದರೂ ಕೊನೆಗೂ ಶಿಕ್ಷೆಗೆ ಒಳಗಾಗಲೇಬೇಕು ಎನ್ನುವ ಸಂದೇಶವನ್ನು ನ್ಯಾಯಾಂಗ ತಲುಪಿಸಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ- ಸಂಘಕ್ಕೆ ಸಂವಿಧಾನ ಲೆಕ್ಕಕ್ಕಿಲ್ಲ


