ಅಂತರಿಕ್ಷದಲ್ಲಿ ಹಿಂದೂರಾಷ್ಟ್ರದ ಕಲ್ಪನೆ!!

Most read

ಅಂದು ನಮ್ಮ ಪ್ರಧಾನಿ ಮೋದೀಜಿಯವರ ಉಪಸ್ಥಿತಿಯಲ್ಲಿ ಆದಿತ್ಯ L1, ಚಂದ್ರಯಾನ 3, PSLV C60/SPADEX….ಬಾಹ್ಯಾಕಾಶ ನೌಕೆಗಳನ್ನು ಭಾರತದ ಖಗೋಳ ಅಧ್ಯಯನ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡ್ಡಯನ ಮಾಡಿದಾಗ ಧರ್ಮದ ಅಂಧಭಕ್ತರು ಮೋದೀಜಿಯವರು ಅಂತರಿಕ್ಷದಲ್ಲಿ ಹಿಂದೂರಾಷ್ಟ್ರ ಸ್ಥಾಪನೆ ಮಾಡುತ್ತಾರೆ ಎಂದು ಹಗಲುಗನಸು ಕಾಣುತ್ತಾ  ಹುಚ್ಚುಹುಚ್ಚು ಸ್ಟೇಟ್‌ಮೆಂಟ್ ಕೊಟ್ಟರು …. ಅದೂ ಅಮೇರಿಕಾದ NASA, ಯುರೋಪಿನ ESA, ರಷ್ಯಾದ ROSCOSMOS, ಜಪಾನಿನ JAXA, , ಚೈನಾದ CNSA, ಕೆನಡಾದ CSA, ಫ್ರಾನ್ಸ್ ನ CNES, ಇಟಲಿಯ ASI, ಜರ್ಮನಿಯ DLR ಮುಂತಾದ ಮುಂದುವರಿದ ದೇಶಗಳ ಖಗೋಳ ಸಂಸ್ಥೆಗಳು ನಮ್ಮಂತೆ ಅಥವಾ ನಮಗಿಂತಲೂ ಹೆಚ್ಚು ಪ್ರಗತಿ ಸಾಧಿಸಿರುವ ಬಾಹ್ಯಾಕಾಶದಲ್ಲಿ  ಒಂದು ಧರ್ಮಕ್ಕೆ ಸೀಮಿತವಾದ ದೇಶ ಸ್ಥಾಪನೆ !!!

ಯೋಚನೆಗಳಿಗೂ ಮಿತಿ ಬೇಡವೇ….ಇದೆಂಥ ಸ್ಟುಪಿಡಿಟಿ ಅಂದುಕೊಂಡೆ ಅಂದು ನಾನು. ಬಹುಶಃ ಮುಸಲ್ಮಾನರು ಕ್ರಿಶ್ಚಿಯನ್ನರು ಇಲ್ಲದ ತಮ್ಮದೇ ಲೋಕದಲ್ಲಿ ವಿಹರಿಸಬಹುದು ಎಂದು ನಿದ್ದೆಯಲ್ಲಿ ಸಿಪ್ಪೆ ಸುಲಿದ ಬಾಳೆಹಣ್ಣು ತಿಂದಂತೆ ಆನಂದತುಂದಿಲರಾಗಿರಬಹುದು. ಕೆಲವರಂತೂ ಹಕ್ಕಿಯಂತೆ ಹಾರುತ್ತಾ ನಿದ್ದೆಯಲ್ಲಿ ಮಂಚದಿಂದ ಕೆಳಕ್ಕೆ ಬಿದ್ದಿರಲೂ ಬಹುದು.

ಅಂಥವರಿಗೆ ಬುದ್ಧಿ ಹೇಳೋದು ಬಿಟ್ಟು ತಲೆಕೆಟ್ಟವರ ಇಂಥ ಹೇಳಿಕೆಗಳನ್ನು ಮಾನಗೆಟ್ಟ ನಮ್ಮ ಇಂಗ್ಲಿಷ್ ಹಿಂದಿ ಮಾಧ್ಯಮದವರು ಅಷ್ಟೇ ಅಲ್ಲ ಆಯಾಯ ರಾಜ್ಯಗಳ ಸ್ಥಳೀಯ ಮಾಧ್ಯಮದವರು ತಮ್ಮ ತಮ್ಮ ಚಾನೆಲ್ ಗಳಲ್ಲಿ ಪ್ರಸಾರ ಮಾಡಿದ್ದೇ ಮಾಡಿದ್ದು. ವಾಟ್ ಎ ಕಾಮಿಡಿ ಎಂದು ನನ್ನೊಳಗೆ ನಗುತ್ತಿದ್ದೆ ನಾನು.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 

ಕಳೆದ ವರುಷ 2024 ಜೂನ್ 5ರಂದು ಬಾಹ್ಯಾಕಾಶ ಅಧ್ಯಯನಕ್ಕಾಗಿ ಅಂತರಿಕ್ಷಕ್ಕೆ ಹಾರಿದ್ದ ಅಮೆರಿಕ ಅಧ್ಯಯನ ಸಂಸ್ಥೆ ನಾಸಾದ ಇಬ್ಬರು ಗಗನ ಯಾತ್ರಿಗಳಾದ, ಅನೇಕ ಬಾರಿ ಬಾಹ್ಯಾಕಾಶಕ್ಕೆ ಹೋಗಿ ಬಂದ ಅಪರಿಮಿತ ಅನುಭವಿ ಸುನಿತಾ ವಿಲಿಯಮ್ಸ್ ( ಭಾರತ ಮೂಲದ) ಮತ್ತು ಅಮೆರಿಕದ ಬುಚ್ ವಿಲ್ಮೋರ್  ಏರ್ ಕ್ರಾಫ್ಟ್ ನಲ್ಲಿನ ತಾಂತ್ರಿಕ ದೋಷದಿಂದ ಅಲ್ಲೇ ಉಳಿಯುವಂತಾಗಿತ್ತು. ಅವರಿಬ್ಬರನ್ನು ಹೊತ್ತೊಯ್ದ ಬಾಹ್ಯಾಕಾಶ ನೌಕೆ ಅವರನ್ನು ಅಲ್ಲೇ ಬಿಟ್ಟು ಭೂಮಿಗೆ ಮರಳಿ ಬಂದಿತ್ತು.

2003 ರಲ್ಲಿ ಅಂತರಿಕ್ಷಕ್ಕೆ ಹಾರಿದ್ದ ಕೊಲಂಬಿಯಾ ಗಗನನೌಕೆ ಫೆಬ್ರವರಿ 1, 2003 ರಂದು ಭೂಮಿಗೆ ಮರುಪ್ರವೇಶದ ಸಮಯದಲ್ಲಿ ಅಮೇರಿಕಾದ ಟೆಕ್ಸಾಸ್‌ ಮೇಲೆ ಸ್ಫೋಟಗೊಂಡಾಗ, ಸಂಭವಿಸಿದ ದುರಂತದಲ್ಲಿ ಭಾರತ ಸಂಜಾತೆ ಅಮೆರಿಕ ನಿವಾಸಿ ಕಲ್ಪನಾ ಚಾವ್ಲಾ ಮತ್ತು ಅವರೊಂದಿಗೆ ಅಮೇರಿಕ ಮತ್ತು ಇಸ್ರೇಲ್ ನ 6  ಖಗೋಳಶಾಸ್ತ್ರಜ್ಞ ಗಗನಯಾತ್ರಿಗಳನ್ನು ಕಳೆದುಕೊಂಡ ಜಗತ್ತು ನಮ್ಮದು. ಅಂದು ನಾನು ಅತ್ತುಬಿಟ್ಟಿದ್ದೆ. ಕೆಲವು ದಿನಗಳ ಕಾಲ ಅದನ್ನೇ ನೆನೆದು ಅಳುತ್ತಿದ್ದೆ. ಆ ಘಟನೆಯನ್ನು ಯೋಚಿಸುವಾಗ ಇಂದಿಗೂ ನನಗೆ ದುಃಖವಾಗುತ್ತದೆ.  ಕಲ್ಪನಾ ಚಾವ್ಲಾರ ಭಾವಚಿತ್ರ ಕಂಡ ಕೂಡಲೇ ಅಂದಿನ ಘಟನೆಯನ್ನು ಮನ ನೆನೆಯುತ್ತದೆ. ಕಲ್ಪನಾ ಚಾವ್ಲಾ ಹಿಂದು. ಅವರ ಸಾವಿನಲ್ಲಿ ನನಗೆ ಧರ್ಮ ಕಾಣಲಿಲ್ಲ. ಇಂದಿಗೂ ಕಾಣುವುದಿಲ್ಲ. ಧರ್ಮಗಳನ್ನು ಮೀರಿದ ನೋವು ಸಾವುಗಳದ್ದು.

ಇದೀಗ ಕಳೆದ ವರುಷ 8 ದಿನಗಳ ಬಾಹ್ಯಾಕಾಶ ಅಧ್ಯಯನಕ್ಕೆಂದು ಹೋದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 2024 ಜೂನ್ 5 ರಿಂದ  ಸರಿಸುಮಾರು 9 ತಿಂಗಳ ಕಾಲ ಅಂತರಿಕ್ಷದಲ್ಲಿ ಬಂಧಿಯಾದರು..ಅಲ್ಲಿ ಬದುಕಿ ಬರಲು ಒದ್ದಾಡಿದರು.. ಅವರು ಅಂತರಿಕ್ಷದಲ್ಲೇ ಕಳೆದುಹೋಗುವಂತ ಭೀತಿ ಉದ್ಭವವಾಗಿತ್ತು. ಕೆಲವು ಮಾಧ್ಯಮಗಳಂತೂ ಅವರನ್ನು ಸಾಯಿಸಿಯೇ ಬಿಟ್ಟವು. ಇನ್ನು ಕೆಲವು ಅಸ್ಥಿಪಂಜರದಂತಾದ ಸುನಿತಾ ವಿಲಿಯಮ್ಸ್ ಎಂದು ಸಾವಿನ ಸಮೀಪಕ್ಕೆ  ದೂಡಿ ಜನರ ಮನಸನ್ನು ಅಲ್ಲೋಲಕಲ್ಲೋಲ ಮಾಡಿದವು.

ಕಲ್ಪನಾ ಚಾವ್ಲಾ

ಖಗೋಳ ತಂತ್ರಜ್ಞಾನ ಅತ್ಯದ್ಭುತ ಪ್ರಗತಿ ಸಾಧಿಸಿದ್ದ ಈ ಜಮಾನದಲ್ಲಿ ಆ ಗಗನಯಾತ್ರಿಗಳನ್ನು ಮರಳಿ ಭೂಮಿಗೆ ತರಲಾಗದೆ ಭೂಮಿಯ ಮೇಲೆ ಇದ್ದ ಜಗತ್ತಿನ ಎಲ್ಲಾ ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಹಗಲು ರಾತ್ರಿ ಪರಿತಪಿಸಿದರು. ಇಡೀ ಜಗತ್ತು ಅವರ ಬಗ್ಗೆ ಚಿಂತಾಕ್ರಾಂತವಾಗಿತ್ತು. ಅದೆಷ್ಟು ಭಯಾನಕ ಅಲ್ಲವೇ?

ನಮ್ಮವರಿಂದ, ನಮ್ಮ ಮನೆಯಿಂದ, ನಮ್ಮ ಸಮಾಜದಿಂದ, ಅದೂ ಈ ಭೂಮಿಯಿಂದ ಪರಿತ್ಯಕ್ತರಾಗಿ ಬದುಕಲು ಒಂದು ಕ್ಷಣವೂ ಸಾಧ್ಯವಾಗದ ನಾವು ಮುಕ್ಕಾಲು ವರುಷ ಕಾಲ ಅಂದರೆ 9 ತಿಂಗಳ ಕಾಲ ಅಂತರಿಕ್ಷದಲ್ಲಿ ಸಿಲುಕಿ ಒದ್ದಾಡಿದ ಅವರ ಬಗ್ಗೆ ಒಂದೇ ಒಂದು ಕ್ಷಣ ಯೋಚಿಸೋಣ..

ಈ ಸಂದರ್ಭ ನನಗೆ ಅಂತರಿಕ್ಷದಲ್ಲಿ ಹಿಂದೂರಾಷ್ಟ್ರದ ಮೂರ್ಖರ ಕಲ್ಪನೆ ಮನಸ್ಸಿಗೆ ಬಂತು. ಖಗೋಳಶಾಸ್ತ್ರಜ್ಞರು ಖಗೋಳ ಅಧ್ಯಯನ ಮಾಡಲಿ. ಅದು ಮನುಕುಲದ ಒಳಿತಿಗಾಗಿ. ಹಣ ಇದ್ದವರು ಅಂತರಿಕ್ಷಯಾತ್ರೆ ಮಾಡಿ ಬರಲಿ. ಅದು ಅವರ ಜಾಲಿಗಾಗಿ. ಮರಳಿ ಬರಬೇಕು ಇದೇ ಭೂಮಿಗೆ ತಾನೇ? ನಮಗೆ ಎಲ್ಲಾ ಸೌಲಭ್ಯ, ಅನುಕೂಲ, ವ್ಯವಸ್ಥೆ ಕೊಟ್ಟ ಈ ಭೂಮಿಗಿಂತ ಅಂತರಿಕ್ಷ ಯಾಕೆ ಬೇಕು? ಬಾಯಿಬಡುಕರು ಯೋಚಿಸಬೇಕಲ್ಲವೇ?

ಅಂತರಿಕ್ಷದಲ್ಲಿ ಉಳಿದುಹೋದ ತಮ್ಮ ಸಂಗಾತಿಗಳನ್ನು ಮರಳಿ ಭುವಿಗೆ ತರಲು ವಿಜ್ಞಾನಿಗಳು ಪ್ರತಿದಿನವೂ ನಡೆಸಿದ ಸಂಶೋಧನೆ, ಪ್ರಯೋಗಗಳು, ಅವಿರತ ಅಧ್ಯಯನಗಳು, ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ಅವುಗಳು ನಮ್ಮ ಊಹೆ, ಕಲ್ಪನೆಗೆ ಅತೀತ. ಕೊನೆಗೂ ಅವರು ಯಶಸ್ವಿಯಾದರು ಅನ್ನುವುದೇ ಹೆಮ್ಮೆ.

ಇದೀಗ 9 ತಿಂಗಳ ಸುಧೀರ್ಘ ಕಾಲ ಅಂತರಿಕ್ಷದಲ್ಲಿ ಉಳಿದು ಜೀವ ಕೈಯಲ್ಲಿ ಹಿಡಿದಿಡಿದು ಜೀವಂತವಾಗಿ ಕೊನೆಗೂ ಸುರಕ್ಷಿತರಾಗಿ ಧರೆಗೆ ಮರಳಿದ್ದಾರೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ತಮ್ಮನ್ನು ಕರೆತರಲು ಬಂದ ನಾಲ್ವರ ಜೊತೆಗೆ. ಧರ್ಮದ ಮೌಢ್ಯದ ಆಚೆ ವಾಸ್ತವ ಬೇರೆಯೇ ಇದೆ. ಭ್ರಮಾಲೋಕದಿಂದ ಮೊದಲು ಹೊರಬನ್ನಿ ಸ್ನೇಹಿತರೇ..

ಬಹುತ್ವ ಭಾರತ ಅಂದರೆ…

ನಿಮಗೆ ಆಸೆ ಹುಟ್ಟಿಸಿದವರು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವವರು. ಅಂತರಿಕ್ಷಕ್ಕಲ್ಲ ಪಾತಾಳಕ್ಕೂ ಹೋಗಿ ಬಂದಾರು.  ಆದರೆ ಈ ಭೂಮಿ ಮೇಲೆ ಇರುವ ಬಹುತೇಕರು ಒಂದು ಹೊತ್ತಿನ ಕೂಳಿಗೂ ಕಷ್ಟಪಡುವವರೇ. ಅಂತರಿಕ್ಷಕ್ಕೇನು ಬಸ್ಸು ಕಾರು ಆಟೋರಿಕ್ಷಾದಲ್ಲಿ ಹೋಗಲು ಸಾಧ್ಯವೇ? ‘ನಾವೆಲ್ಲ ಒಂದು, ನಾವೆಲ್ಲಾ ಬಂಧು’ ಎನ್ನುವವರು ನಿಮ್ಮನ್ನೆಲ್ಲ ಅವರ ಸ್ವಂತ ಖರ್ಚಿನಲ್ಲಿ ಅಂತರಿಕ್ಷಕ್ಕೆ ಕೊಂಡೊಯ್ಯುವರೇ …..?

ತಲೆಕೆಟ್ಟವರ ಹೇಳಿಕೆಗಳಿಂದ ಹಗಲುಕನಸು ಕಾಣುವುದನ್ನು ಬಿಟ್ಟು ವಾಸ್ತವವನ್ನು ಅರಿತು ಸರ್ವಧರ್ಮದ ಜನರು ಬದುಕುವ ಈ ಸಮಾಜದಲ್ಲಿ ಸ್ವರ್ಗಸುಂದರ ಭೂಲೋಕದ ಈ ತೋಟದಲ್ಲಿ ಚೆಂದದಲ್ಲಿ ಬಾಳಿ ಬದುಕುವುದೇ ನಮಗೆ ಒಳಿತಲ್ಲವೇ?

ಈ ಸುಂದರ ಭೂಮಿ ನಮಗೆ ನೆಲೆ ಕೊಟ್ಟಿದೆ. ಹಿಂದೂ ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಎಂದು ಯಾಕೆ ಒಬ್ಬರನ್ನೊಬ್ಬರು ದ್ವೇಷ ಮಾಡುತ್ತೀರಿ? ಶಾಂತಿಯ ಲೋಕವಾದ ಈ ಭೂಮಿಯನ್ನು ಯಾಕೆ ದ್ವೇಷದ ಬೆಂಕಿಯಲ್ಲಿ ಹೊತ್ತಿ ಉರಿಸುತ್ತೀರಿ? ಎಷ್ಟು ಸುಡುತ್ತೀರಿ? ನಾನು ಹಿಂದೂ ಮುಸಲ್ಮಾನರಿಗೆ ಮಾತ್ರ ಹೇಳುತ್ತೇನೆ ಎಂದು ಅಂದುಕೊಳ್ಳಬೇಡಿ. ಅತ್ತ ರಷ್ಯಾದಲ್ಲಿ ಅಧಿಕಾರ ಮದದಿಂದ, ಇತ್ತ ಇಸ್ರೇಲ್ ನಲ್ಲಿ ಧರ್ಮಾಂಧತೆಯಿಂದ  ಕ್ರಿಶ್ಚಿಯನ್ನರೂ ಸುಡುತ್ತಿದ್ದಾರೆ.

ಮನುಜರೇನು ಈ ಭೂಮಿಯ ಮೇಲೆ ಪ್ರಕೃತಿಯಂತೆ ಅಮರರೇ? ದೀರ್ಘಾಯುಷಿಗಳೇ? ಯಾವಾಗ ಸಾವು ಬರುತ್ತದೆ ಎಂದು ಕೂಡಾ ಅರಿಯದ ಬದುಕು ಮಾನವರದ್ದು ಅಲ್ಲವೇ? ಮತ್ಯಾಕೆ ಬೇರೆಯವರ ಬದುಕಿಗೆ ಬೆಂಕಿ ಹಾಕಿ ನಿಮ್ಮ ಬದುಕನ್ನು ಅದೇ ಬೆಂಕಿಯಲ್ಲಿ ಸುಡುತ್ತೀರಿ? ಧರ್ಮದ ಆಚೆ ಧರ್ಮವನ್ನು ಮೀರಿ ಒಂದು ಬದುಕಿದೆ …. ಅದು ಅಂತರಿಕ್ಷದಲ್ಲಿ ಅಲ್ಲ ಈ ಭೂಲೋಕದಲ್ಲಿ.

ಔರಂಗಜೇಬನ ಸಮಾಧಿ

ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂದು ದ್ವೇಷ ಬೇಡ. ನಾವು ನಾಗರಿಕ ಸಮಾಜದ ಮನುಷ್ಯರು. ಶಿಲಾಯುಗದ ಆದಿಮಾನವರಲ್ಲ. ಅನ್ಯ ಧರ್ಮದವರನ್ನು ದ್ವೇಷ ಮಾಡುವ, ತಮ್ಮ ತಮ್ಮ ಧರ್ಮದೊಳಗಿರುವ ಕೆಳಜಾತಿಯವರನ್ನು, ದಲಿತರನ್ನು ದ್ವೇಷಿಸುವ ಮನಸ್ಥಿತಿಯನ್ನು ಮೊತ್ತಮೊದಲು ಬದಲಾಯಿಸಿಕೊಳ್ಳಬೇಕು. ಕೇವಲ ಹಿಂದೂಗಳಲ್ಲಿ ಮಾತ್ರವಲ್ಲ ಕ್ರಿಶ್ಚಿಯನ್ ಮುಸಲ್ಮಾನರಲ್ಲೂ ಧರ್ಮಗಳೊಳಗೆ ಹತ್ತು ಹಲವು ಜಾತಿಗಳಿವೆ. 

ಇಂದು ಕೇವಲ ನೀವು ಬದಲಾದರೆ ಸಾಲದು. ಧರ್ಮ ದ್ವೇಷ ಕಾರುವ, ಜಾತಿ ವಿಷ ಕಕ್ಕುವ ನಿಮ್ಮವರನ್ನೂ ಬದಲಾಯಿಸಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿಮ್ಮ ಹಾಗೆ ಒಂದು ಬದುಕಿದೆ. ಅದನ್ನು ಎಂದೂ ನೆನಪಿಡಬೇಕು.

ಮಣಿಪುರವಾಯಿತು, ಈಗ ಮಹಾರಾಷ್ಟ್ರದ ನಾಗ್ಪುರಕ್ಕೆ ಬೆಂಕಿ ಬಿದ್ದಿದೆ. 425 ವರುಷಗಳ ಹಿಂದೆ ಸತ್ತು ಮಣ್ಣಿನಲ್ಲಿ ಮಣ್ಣಾಗಿ ಹೋದ ಮೊಘಲ್ ಸುಲ್ತಾನ ಔರಂಗಜೇಬನ ಸಮಾಧಿಗಾಗಿ ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ನಮ್ಮ ದೇಶ ಎತ್ತ ಸಾಗುತ್ತಿದೆ???

ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ

ಹವ್ಯಾಸಿ ಬರಹಗಾರ್ತಿ

ಇದನ್ನೂ ಓದಿ- ಅಲಹಾಬಾದ್‌ HC ತೀರ್ಪು ಎತ್ತಿರುವ ಪ್ರಶ್ನೆಗಳು

More articles

Latest article