ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಪ್ರಚಲಿತದಲ್ಲಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಉದ್ದೇಶಿಸಿ ಬೆಳಕಿಗೆ ತಂದ ʼಹೇಮಾ ಸಮಿತಿʼಯ ವರದಿಯು ಮಲೆಯಾಳಂ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಪ್ರಮುಖ ಮಹಿಳೆಯರು ‘ಹೇಮಾ ಸಮಿತಿ’ಯಂಥದ್ದೇ ಒಂದು ಸಮಿತಿ ಕನ್ನಡ ಚಿತ್ರರಂಗಕ್ಕೂ ಬೇಕು ಎಂದು ಆಗ್ರಹಿಸಿದ್ದಾರೆ. ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಣತಿ ಎ ಎಸ್ ಬರೆದ ಲೇಖನದ ಭಾವಾನುವಾದವನ್ನು ಶ್ರೀನಿವಾಸ ಕಾರ್ಕಳ ಅವರು ಮಾಡಿದ್ದಾರೆ.
“ನಮ್ಮ ಆಗಸವಾದರೋ ಅಸಂಖ್ಯ ರಹಸ್ಯಗಳ ಸಾಗರ. ಅಲ್ಲಿ ಮಿನುಗುವ ನಕ್ಷತ್ರಗಳಿವೆ. ಚಂದದ ಚಂದಿರ ಇದ್ದಾನೆ. ಆದರೆ ವೈಜ್ಞಾನಿಕ ಶೋಧಗಳು ಹೇಳುವ ಪ್ರಕಾರ ಆ ನಕ್ಷತ್ರಗಳು ಮಿನುಗುವುದೂ ಇಲ್ಲ, ಚಂದಿರನು ಚಂದ ಕೂಡಾ ಅಲ್ಲ. ನೀವು ಏನನ್ನು ನೋಡುತ್ತಿದ್ದೀರೋ ಅದನ್ನು ಯಾವತ್ತೂ ನಂಬಬೇಡಿ, ಉಪ್ಪು ಕೂಡಾ ಸಕ್ಕರೆಯಂತೆ ಕಾಣಿಸುತ್ತದೆ ಎನ್ನುತ್ತವೆ ಅಧ್ಯಯನಗಳು” – ಹೇಮಾ ಸಮಿತಿ ವರದಿ.
ಭಾರತದ ಸಿನಿಮಾ ಚರಿತ್ರೆಯಲ್ಲಿ ಈ ‘ಹೇಮಾ ಸಮಿತಿಯ ವರದಿ’ ಒಂದು ಚಾರಿತ್ರಿಕ ಮಹತ್ವದ ಸಂಗತಿ. ಮಲಯಾಳಂ ಚಿತ್ರ ರಂಗದಲ್ಲಿಯಂತೂ ಅದು ಬಿರುಗಾಳಿಯನ್ನೇ ಎಬ್ಬಿಸಿದೆ. ಅಲ್ಲಿನ ಅನೇಕ ಹೆಸರಾಂತ ನಟರು, ನಿರ್ದೇಶಕರು ಈಗ ಲೈಂಗಿಕ ಅಪರಾಧದ ಕಳಂಕ ಹೊತ್ತಿದ್ದಾರೆ.
ಬಹುಭಾಷಾ ಸ್ಟಾರ್ ಅರ್ಜುನ್ ಸರ್ಜಾ ಅವರ ಲೈಂಗಿಕ ದುರ್ನಡತೆಯ ಬಗ್ಗೆ, ಹಿಂದೊಮ್ಮೆ ‘ಮೀಟೂ’ ಅಭಿಯಾನದ ಸಮಯದಲ್ಲಿ, ಕನ್ನಡದ ನಟಿ ಶ್ರುತಿ ಹರಿಹರನ್ ಅವರು ಪ್ರಸ್ತಾವಿಸಿದ್ದರು. “ಈ ಅಪ್ರಿಯ ಸತ್ಯವನ್ನು ಬಹಿರಂಗಪಡಿಸಿದ್ದರಿಂದ ನನ್ನನ್ನು ಅನೇಕರು ನಿಂದಿಸಿದರು, ಅನೇಕ ಅವಕಾಶಗಳು ಕೈತಪ್ಪಿದವು, ನನ್ನ ಕುಟುಂಬವು ಯಾತನೆ ಅನುಭವಿಸಿತು, ನಾನು ಖಿನ್ನತೆಗೆ ಒಳಗಾದೆ, ನನ್ನ ಜೀವನದಲ್ಲಿ ಏನಾಗುತ್ತಿದೆ ಎನ್ನುವುದೇ ಅರ್ಥವಾಗದಂತಹ ಸ್ಥಿತಿ ನಿರ್ಮಾಣವಾಯಿತು” ಎಂದು ಆಕೆ ದುಃಖದಿಂದ ಹೇಳಿದ್ದರು.
ಅದೇ ಹೊತ್ತಿನಲ್ಲಿ, ನಟಿ ಸಂಗೀತಾ ಭಟ್ ಅವರು ತಾನು ಚಿತ್ರರಂಗದಲ್ಲಿ ಏನೇನೆಲ್ಲ ಅನುಭವಿಸಿದೆ ಎನ್ನುವುದನ್ನು ಉದ್ದನೆಯ ಒಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು. ಕಾಸ್ಟಿಂಗ್ ನಿರ್ದೇಶಕ ಕಾರಿನಲ್ಲಿ ಆಕೆಯ ಪಕ್ಕದಲ್ಲಿಯೇ ಕುಳಿತು ಹಸ್ತ ಮೈಥುನ ಮಾಡಿಕೊಂಡದ್ದು, ಇದೆಲ್ಲ ತೀರಾ ಸಾಮಾನ್ಯ ಎಂದು ಆತ ಹೇಳಿಕೊಂಡದ್ದು, ಸಿನಿಮಾ ಒಂದರ ಯಶಸ್ಸನ್ನು ಸಂಭ್ರಮಿಸಲು ಚಿತ್ರದ ನಿರ್ದೇಶಕ ಮತ್ತು ಸಹನಿರ್ದೇಶಕ ಕಂಠಮಟ್ಟ ಕುಡಿದು ಮನೆಗೆ ಬಂದಾಗ ಮನೆಯ ತಾರಸಿಯಲ್ಲಿ ತಾನು ಮತ್ತು ತನ್ನ ತಾಯಿ ಅಡಗಿ ಕೂತದ್ದು.. ಹೀಗೆ ಸುಮಾರು 12 ಘಟನೆಗಳನ್ನು ಅವರು ಅದರಲ್ಲಿ ಉಲ್ಲೇಖಿಸಿದ್ದರು. ಅಸ್ವಸ್ಥ ಸ್ಥಿತಿಯಿಂದ ಹೊರಬರಲು ಕೊನೆಗೆ ಆಕೆ ತೆರಪಿ ಕೂಡಾ ತೆಗೆದುಕೊಳ್ಳಬೇಕಾಯಿತು.
“ಮೀಟೂ ಅಭಿಯಾನದ ಸಮಯದಲ್ಲಿ ಸತ್ಯ ಹೇಳಿದ ನಮಗೆಲ್ಲ ‘ಅವರು ಸರಿ ಇಲ್ಲ’ ಎಂಬ ಹಣೆಪಟ್ಟಿ ಕಟ್ಟಿದರು, ನಮ್ಮನ್ನು ಬದಿಗೆ ಸರಿಸಿದರು, ನಮಗೆ ಅವಕಾಶವೇ ಸಿಗದಂತೆ ಮಾಡಿದರು. ಹೇಮಾ ಸಮಿತಿ ಹೇಳುವ ಪರೋಕ್ಷ ನಿಷೇಧ (ಶೇಡೋ ಬ್ಯಾನ್) ಅಂದರೆ ಇದುವೇ” ಎನ್ನುತ್ತಾರೆ ಸಂಗೀತಾ. ಸಂಗೀತಾ ಅವರು ‘ಎರಡನೆ ಸಲ’ ಮತ್ತು ‘ದಯವಿಟ್ಟು ಗಮನಿಸಿ’ ಸಿನಿಮಾಗಳಲ್ಲಿ ನಟಿಸಿದವರು.
ಕನ್ನಡ ಚಿತ್ರರಂಗಕ್ಕೂ ಒಂದು ಸಮಿತಿ?
ಶ್ರುತಿ, ಸಂಗೀತಾ, ಸಂಯುಕ್ತಾ ಹೊರನಾಡು, ಪೂಜಾ ಗಾಂಧಿ, ಅಪೂರ್ವ ಭಾರದ್ವಾಜ್, ಚೈತ್ರಾ ಜೆ ಆಚಾರ್, ಪ್ರೀತಿ ಸಾಗರ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಪ್ರಮುಖ ಮಹಿಳೆಯರು ‘ಹೇಮಾ ಸಮಿತಿ’ಯಂಥದ್ದೇ ಒಂದು ಸಮಿತಿ ಕನ್ನಡ ಚಿತ್ರರಂಗಕ್ಕೂ ಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರ ಅಂತಹ ಒಂದು ಸಮಿತಿ ರಚಿಸಿದರೆ, ವಿಷಯಗಳು ಅದೇ ಆಗಿರುತ್ತವೆ, ಅದರೆ ಹೆಸರುಗಳಷ್ಟೇ ಬೇರೆಯಾಗಿರುತ್ತವೆ ಎನ್ನುತ್ತಾರೆ ಶ್ರುತಿ.
ಮೀಟೂ ಅಭಿಯಾನ ಸುದ್ದಿಮಾಡತೊಡಗಿದ ವರ್ಷದ ಹಿಂದೆ ಬೆಂಗಳೂರಿನಲ್ಲಿ 2017 ರಲ್ಲಿ ರಚಿತವಾದ FIRE ಸಮಿತಿ (ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ) ಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ಸಂಯುಕ್ತಾ, ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್ ಅಹಿಂಸಾ ಮೊದಲಾದ ಪ್ರಮುಖ ವ್ಯಕ್ತಿಗಳಿದ್ದರು. ಜೂನಿಯರ್ ಕಲಾವಿದರು, ಹೇರ್ ಸ್ಟೈಲಿಸ್ಟ್ ಗಳು ಮತ್ತು ನಟನಟಿಯರು ಎದುರಿಸುವ ಸಮಸ್ಯೆಗಳನ್ನು ಪರಿಶೀಲಿಸಲು ಈ ಸಮಿತಿಯನ್ನು ರಚಿಸಲಾಗಿತ್ತು. “ಆದರೆ ಬಹಳ ಬೇಗನೇ ಈ ಸಮಿತಿ ಇಲ್ಲವಾಯಿತು. ಇದಕ್ಕೆ ಕಾರಣ ಕೋವಿಡ್ 19. ಅದಕ್ಕಿಂತಲೂ ಮುಖ್ಯವಾಗಿ ಇದಕ್ಕೆ ತಾರೆಯರ ಬೆಂಬಲ ದೊರೆಯಲಿಲ್ಲ” ಎನ್ನುತ್ತಾರೆ ಸಂಯುಕ್ತಾ.
ಪುರುಷಪ್ರಧಾನ ಸಮಸ್ಯೆಗಳು
“ನಾವೆಲ್ಲರೂ ಒಂದಲ್ಲ ಒಂದು ರೀತಿಯ ಕಿರುಕುಳ ಅನುಭವಿಸುತ್ತಿರುತ್ತೇವೆ. ಅದು ಲೈಂಗಿಕ ಕಿರುಕುಳವೇ ಆಗಿರಬೇಕಾಗಿಲ್ಲ. ಕೆಲಸ ಕಳೆದುಕೊಳ್ಳುವ ಭಯದಿಂದ ಹೆಚ್ಚಿನ ಮಹಿಳೆಯರು ಇದರ ವಿರುದ್ಧ ದನಿ ಎತ್ತುವುದಿಲ್ಲ. ದಬ್ಬಾಳಿಕೆ ನಡೆಸುವವರಿಗೆ ಯಾರ ಮೇಲೆ ದಬ್ಬಾಳಿಕೆ ನಡೆಸಬೇಕು ಎನ್ನುವುದು ಸರಿಯಾಗಿಯೇ ಗೊತ್ತಿರುತ್ತದೆ. ಇಲ್ಲಿನ ಮುಖ್ಯ ಸಮಸ್ಯೆ ಇರುವುದು ಗಂಡುತನವನ್ನು ವೈಭವೀಕರಿಸುವ ಸಿನಿಮಾ ನೆರೇಟಿವ್ ಗಳಲ್ಲಿದೆ” ಎನ್ನುವ ಸಂಯುಕ್ತಾ, “ಚಿತ್ರರಂಗದಲ್ಲಿನ ಟ್ರಾನ್ಸ್ ಜೆಂಡರ್ ಮತ್ತು ಕ್ರಾಸ್ ಡ್ರೆಸರ್ ಗಳಿಗೂ ಅಪಾರ ಬೆಂಬಲದ ಅಗತ್ಯವಿದೆ” ಎಂದೂ ಹೇಳುತ್ತಾರೆ.
ದುರ್ಗಾ (ಹೆಸರು ಬದಲಿಸಿದೆ) ಅವರು ಕನ್ನಡ ಚಿತ್ರರಂಗದ ಬಹುಮುಖ್ಯ ನಟಿ. ತನ್ನ ಎರಡನೆ ಸಿನಿಮಾದಲ್ಲಿ ಚಿತ್ರ ನಿರ್ದೇಶಕರು ತನಗೆ ಕಿರುಕುಳ ನೀಡಿದ್ದರು ಎಂದು ಆಕೆ ಹೇಳುತ್ತಾರೆ. “ಆರಂಭದಲ್ಲಿ ಐ ಲವ್ ಯು, ವಿ ಹ್ಯಾವ್ ಅ ಫ್ಯೂಚರ್ ಟುಗೆದರ್” ಎಂಬಲ್ಲಿಂದ ಇದು ಆರಂಭವಾಯಿತು. ನಾನು ಇದನ್ನು ತಿರಸ್ಕರಿಸಿದಾಗ “ನೀನು ಒಪ್ಪಂದಕ್ಕೆ ಸಹಿ ಹಾಕಿದ್ದಿ ನೆನಪಿರಲಿ, ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ” ಎಂದು ಧಮಕಿ ಹಾಕಿದ ಆತ. ನಾನು ಸಹಿ ಹಾಕಿದ ಇನ್ನೊಂದು ಸಿನಿಮಾದ ದಿನಾಂಕಗಳೊಂದಿಗೆ ಮೆಸೇಜ್ ಕಳಿಸಲು ಶುರುಮಾಡಿದ. ತಡ ರಾತ್ರಿ ಕುಡಿದು ನಿತ್ಯವೂ ಫೋನ್ ಮಾಡುತ್ತಿದ್ದ. ಹೀಗೇ ಮೂರು ತಿಂಗಳು ಕಳೆಯಿತು. ನನ್ನ ತಾಯಿ ಇದನ್ನು ಗಮನಿಸಿದಳು. ನಾನು ಏನೋ ಸಮಸ್ಯೆಯಲ್ಲಿದ್ದೇನೆ ಎಂಬ ಅನುಮಾನ ಅವಳಲ್ಲಿ ಮೂಡಿತು. ನೀವು ಇದನ್ನೆಲ್ಲ ನಿಮ್ಮ ಹೆತ್ತವರಲ್ಲಿ ಹೇಳುವಂತಿಲ್ಲ ಗೊತ್ತಾ? ಹೇಳಿದರೆ ಅವರು ನಿಮ್ಮನ್ನು ಮನೆಯಿಂದಾಚೆ ಕಾಲಿಡಲು ಬಿಡುವುದಿಲ್ಲ. ನನ್ನ ನಟನಾ ಬದುಕಿನ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಆಸಕ್ತಿ ಇದ್ದುದರಿಂದ ನಾನು ಅಂತಹ ಪರಿಸ್ಥಿತಿ ಎದುರು ಹಾಕಿಕೊಳ್ಳಲು ಸಿದ್ಧಳಿರಲಿಲ್ಲ. ಆತ ನನ್ನ ವೈಯಕ್ತಿಕ ವಿವರಗಳನ್ನು ಕೂಡಾ ಕಲೆ ಹಾಕಿ ಕೇಡಿಯಂತೆ ವರ್ತಿಸಲಾರಂಭಿಸಿದ” ಎನ್ನುತ್ತಾರೆ ದುರ್ಗಾ.
ಈ ಸಂದರ್ಭದಲ್ಲಿ ಸಹನಟನೊಬ್ಬನ ಸಹಾಯ ಯಾಚಿಸಿದಳು ದುರ್ಗಾ. ಆತ ಸಮಸ್ಯೆಯನ್ನು ಎದುರಿಸಲು ಆಕೆಗೆ ಶಕ್ತಿ ಮತ್ತು ಮಾರ್ಗದರ್ಶನ ನೀಡಿದ. “ನಾನು ಧೈರ್ಯದಿಂದ ಮಾತನಾಡಲು ತೊಡಗಿದಾಗ ಆ ಚಿತ್ರ ನಿರ್ದೇಶಕನ ದುರಹಂಕಾರ ಹೇಗಿತ್ತು ಗೊತ್ತಾ? ನೀನು ನನ್ನ ಹೆಸರು ಹಾಳು ಮಾಡಲು ಯತ್ನಿಸಿದರೆ, ನೀನು ನನ್ನೊಂದಿಗೆ ಮಲಗಿದ್ದಿ ಎಂದು ಪ್ರತಿಯೊಬ್ಬರಲ್ಲೂ ಹೇಳುತ್ತೇನೆ, ನಾನು ಗಂಡುಸಾಗಿರುವುದರಿಂದ ಅವರೆಲ್ಲ ನನ್ನ ಮಾತು ನಂಬುತ್ತಾರೆ ಎಂದ! ನನ್ನ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದರೆ ಫಿಲಂ ಚೇಂಬರ್ ಗೆ ದೂರು ನೀಡುವುದಾಗಿಯೂ ಆತ ಬೆದರಿಕೆ ಹಾಕಿದ”.
“ಇವೆಲ್ಲ ಶುರುವಾಗುವುದು ಆಡೀಶನ್ ಸಮಯದಲ್ಲಿ ಎನ್ನುತ್ತಾರೆ ನಟಿ, ಸಹನಿರ್ದೇಶಕಿ ಪ್ರೀತಿ. ಪ್ರಸಿದ್ಧ ನಿರ್ಮಾಣ ಸಂಸ್ಥೆಯಿಂದ ನಡೆಯುತ್ತಿರುವುದಾದರೆ ಪರವಾಗಿಲ್ಲ. ಇಲ್ಲವಾದರೆ, ಬಹುವಾಗಿ ಈ ಆಡೀಶನ್ ಗಳನ್ನು ನಡೆಸುವುದು ಸಿನಿಮಾಗಳಿಗೆ ಜೂನಿಯರ್ ಕಲಾವಿದರನ್ನು ಸರಬರಾಜು ಮಾಡುವ ಕಾಸ್ಟಿಂಗ್ ಏಜಂಟ್ ಗಳು. ಅಂತಹ ಆಡೀಶನ್ ಗಳು ಕೆಲವೊಮ್ಮೆ ಯಾರದಾದರೂ ಮನೆಗಳಲ್ಲಿ ನಡೆಯುವುದೂ ಇದೆ. ಅಲ್ಲಿ ನಿಮಗೆ ಇಷ್ಟವಿಲ್ಲದಿರುವ ಕೆಲಸವನ್ನೂ ನಿಮ್ಮಿಂದ ಮಾಡಿಸುತ್ತಾರೆ” ಎನ್ನುತ್ತಾರೆ ಪ್ರೀತಿ.
“ಒಂದು ಸಲ ಒಂದು ಆಡೀಶನ್ ನಲ್ಲಿ ಡಾನ್ಸ್ ಮಾಡುವಂತೆ ನನಗೆ ಹೇಳಿದರು. ನಾಯಕ ನಟನೊಂದಿಗೆ ರೀಡಿಂಗ್ ಮಾಡುವಂತೆಯೂ ಅವರು ಹೇಳುವುದಿದೆ. ಆತನೋ 50 ರ ಹರೆಯ ದಾಟಿರುತ್ತಾನೆ” ಎಂದೂ ಪ್ರೀತಿ ಸೇರಿಸುತ್ತಾರೆ. ಅತ್ಯಂತ ಮೂಲಭೂತ ಅಗತ್ಯವಾದ ಶೌಚಾಲಯ ಕೂಡಾ ಸಮಸ್ಯೆಯಾಗುವುದಿದೆ ಎನ್ನುತ್ತಾರೆ ಅವರು.
ಪುರುಷಪ್ರಧಾನ ಮನೋಭಾವಗಳು ಸುಪ್ತ ರೀತಿಯಲ್ಲಿ ವ್ಯಕ್ತವಾಗುತ್ತಲೇ ಇರುತ್ತವೆ ಎನ್ನುತ್ತಾರೆ ಆಕೆ. “ಸೆಟ್ ನಲ್ಲಿ ಉಪಕರಣಗಳನ್ನು ನಿರ್ವಹಿಸುವ ಒಂದು ಕ್ಯಾಮರಾ ತಂಡ ಇರುತ್ತದೆ. ಅವರ ಪ್ರಕಾರ ಮಹಿಳೆಯರು ಈ ಉಪಕರಣದೊಂದಿಗೆ ಬರುವ ಆಪಲ್ ಬಾಕ್ಸ್ ಮೇಲೆ ಕೂರಬಾರದು. ಇದನ್ನು ನಾನು ಅನೇಕ ಚಿತ್ರ ನಿರ್ಮಾಣಗಳಲ್ಲಿ ಗಮನಿಸಿದ್ದೇನೆ.
ಆಪಲ್ ಬಾಕ್ಸ್ ಅಂದರೆ, ಸಲಕರಣೆಗಳನ್ನು ಇರಿಸಲು ಬಳಸುವ ಮರದ ಪೆಟ್ಟಿಗೆ. ಇದನ್ನು ಕೆಲವೊಮ್ಮೆ ಡಿಒಪಿ (ಸಿನಿಮಾಟೋಗ್ರಾಫರ್) ಮತ್ತು ನಿರ್ದೇಶಕರು ಕೂರಲು ಬಳಸುತ್ತಾರೆ. ಪ್ರೀತಿ ಒಮ್ಮೆ ಅದರ ಮೇಲೆ ಕೂತಾಗ ನಿಂದನೆ ಎದುರಿಸ ಬೇಕಾಯಿತು. ಹುಡುಗಿಯರು ಮುಟ್ಟುಸ್ರಾವ ಅನುಭವಿಸಬಹುದು, ಇದರಿಂದ ಪೆಟ್ಟಿಗೆಯಲ್ಲಿ ಕಲೆಯಾಗುತ್ತದೆ ಮತ್ತು ಅಪವಿತ್ರವಾಗುತ್ತದೆ ಎಂಬುದು ಅವರ ಧೋರಣೆ.
ಮಹಿಳಾ ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಮನ್ ಜತೆಯಲ್ಲಿ ಆಕೆ ಕೆಲಸ ಮಾಡಿದಾಗ ಸೆಟ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿದ್ದರು. ಆಗ ಅವರಿಗೆ ಅಂತಹ ನಿರ್ಬಂಧ ಎದುರಾಗಲಿಲ್ಲ. ಹೆಚ್ಚು ಹೆಚ್ಚು ಮಹಿಳೆಯರು ಸೆಟ್ ನಲ್ಲಿ ಕೆಲಸಮಾಡ ತೊಡಗಿದರೆ ಇಂತಹ ಮೂಢನಂಬಿಕೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಅವರು.
‘ನಾನು ಅದು ಮತ್ತು ಸರೋಜಾ’ ಸಿನಿಮಾ ಖ್ಯಾತಿಯ ಅಪೂರ್ವಾ ಭಾರದ್ವಾಜ್, ತಾವು ಪುರುಷರಾಗಿರುವ ಏಕೈಕ ಕಾರಣಕ್ಕೆ ತಾವು ಸುಪೀರಿಯರ್ ಎಂದು ಭಾವಿಸುವ ನಟರು ಮತ್ತು ತಂತ್ರಜ್ಞರನ್ನು ಕಂಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಚಿತ್ರದ ನಾಯಕಿಗೆ ಮಾಹಿತಿ ಕೊಡುತ್ತಿರುವುದಿಲ್ಲ. ಆದರೆ ಚಿತ್ರದ ನಾಯಕ ನಟನಿಗೆ ಪ್ರತಿಯೊಂದು ಮಾಹಿತಿ ಹೋಗುತ್ತಿರುತ್ತದೆ.
ಸಿನಿಮಾದಲ್ಲಿ ಅಭಿನಯಿಸುತ್ತಿರುವ (ಇವರು ಖ್ಯಾತ ಫೈನಾನ್ಸಿಯರ್ ಕೂಡಾ) ಸೀನಿಯರ್ ಒಬ್ಬರು “ನೀನು ಗೋವಾದಲ್ಲಿ ಇದ್ದಾಗ ಎಲ್ಲಿ ಉಳಿದುಕೊಳ್ಳುತ್ತಿ? ತಾಜ್ ನಲ್ಲಿ ಯಾವತ್ತಾದರೂ ಸ್ಟೇ ಮಾಡಿದ್ದಿಯಾ? ಶೆರಟನ್? ಈ ಸಲ ನನ್ನೊಂದಿಗೆ ಬರ್ತಿಯಾ? ಬೇಕಿದ್ದರೆ ನಾನು ನಿನ್ನನ್ನು ಅಲ್ಲಿಗೆ ಕರೆದೊಯ್ಯುವೆ’ ಎಂದೆಲ್ಲ ಹೇಳುತ್ತಾ ತನ್ನ ಸಣ್ಣ ಬುದ್ಧಿ ಪ್ರದರ್ಶಿಸಿದರು. ನೀವು ಒಂದು ವೇಳೆ ಅಂಥವರನ್ನು ಭೇಟಿಯಾದರೆ ಅವರು ಕೇಳುವ ಪ್ರಶ್ನೆ ಇದುವೇ. ನಾನೋ ಭಾಗ್ಯಶಾಲಿ, ಅಂತಹ ಬಹಳ ಮಂದಿ ನನಗೆ ಸಿಕ್ಕಿಲ್ಲ. ಆದರೆ ಅಂತಹ ಮಂದಿ ಇರುವುದಂತೂ ನನಗೆ ಗೊತ್ತಿದೆ’ ಎನ್ನುತ್ತಾರೆ ಅಪೂರ್ವಾ. ಪುರುಷರು ದುಡಿದಷ್ಟೇ ದುಡಿದರೂ ಮಹಿಳೆಯರಿಗೆ ಪುರುಷರಿಗೆ ಕೊಡುವುದಕ್ಕಿಂತ ಕಡಿಮೆ ಸಂಭಾವನೆ ಕೊಡುತ್ತಾರೆ ಎಂದೂ ಸೇರಿಸುತ್ತಾರೆ ಅವರು.
‘ಸಪ್ತ ಸಾಗರದಾಚೆ ಎಲ್ಲೋ’, ‘ಟೋಬಿ’ ಇತ್ಯಾದಿ ಸಿನಿಮಾಗಳಿಂದ ಹೆಸರು ಮಾಡಿರುವ ಚೈತ್ರಾ ಅವರು, “ಒಬ್ಬರು ಜೂನಿಯರ್ ಕಲಾವಿದೆ ಒಮ್ಮೆ ನನ್ನಲ್ಲಿ ಒಂದು ವಿಷಯ ಹೇಳಿಕೊಂಡರು. ಒಂದು ಆಡೀಶನ್ ಸಮಯದಲ್ಲಿ ಒಬ್ಬ ಸಿನಿಮಾಟೋಗ್ರಾಫರ್, ನಿರ್ದೇಶಕ, ಮತ್ತು ನಿರ್ಮಾಪಕರ ಜತೆಯಲ್ಲಿ ಪ್ರವಾಸ ಹೋಗಲು ಆಕೆಗೆ ಹೇಳಲಾಯಿತು. ಅವರ ಮುಂದಿನ ಸಿನಿಮಾದಲ್ಲಿ ಹೀರೋಯಿನ್ ಆಗಬೇಕಾದರೆ ಅದನ್ನೆಲ್ಲ ಮಾಡಬೇಕು ಎಂದು ಆಕೆಗೆ ಹೇಳಲಾಯಿತು. ಸಿನಿಮಾ ಜಗತ್ತು ನಿಜಕ್ಕೂ ಮಹಿಳೆಯರಿಗೆ ತುಂಬಾ ವಿಷಾದದ ಜಾಗ” ಎನ್ನುತ್ತಾರೆ.
“ಈ ಮಟ್ಟವನ್ನು ತಲಪಬೇಕಿದ್ದರೆ ನೀನು ಎಷ್ಟು ಮಂದಿ ಪುರುಷರನ್ನು ಖುಷಿಪಡಿಸಬೇಕಾಯಿತು?” ಎಂದು ಅಪೂರ್ವಾ ಅವರನ್ನು ಒಬ್ಬಳು ಜ್ಯೂನಿಯರ್ ಕಲಾವಿದೆ ಒಮ್ಮೆ ಕೇಳಿದ್ದಳು. “ಕೇಳಿ ನಾನು ಬೆಚ್ಚಿಬಿದ್ದೆ. ಹೀಗೆಲ್ಲ ಮಾಡುವುದು ತೀರಾ ಸಹಜ ಎಂದು ಅನೇಕ ಮಹಿಳೆಯರು ಅಂದುಕೊಂಡಿರುವುದು ವಿಷಾದದ ಸಂಗತಿ” ಎನ್ನುತ್ತಾರೆ ಅಪೂರ್ವಾ.
ಮಹಿಳಾ ಯೂನಿಯನ್
“ಮಹಿಳೆಯರು ತಮ್ಮ ಕಳವಳವನ್ನು ಹೇಳಿಕೊಳ್ಳಲು ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ಸೂಕ್ತ ವೇದಿಕೆ ಇಲ್ಲ. ಅಂತಹ ಒಂದು ವೇದಿಕೆ ಇದ್ದರೆ ಲೈಂಗಿಕ ದಾಳಿಕೋರರಲ್ಲಿ ಅದು ಒಂದಿಷ್ಟು ಭಯ ಹುಟ್ಟುಹಾಕೀತು” ಎನ್ನುತ್ತಾರೆ ಪೂಜಾ. ಪೂಜಾ ಅವರು ‘ಮುಂಗಾರು ಮಳೆ’, ‘ದಂಡುಪಾಳ್ಯ’ ಮೊದಲಾದ ಹಿಟ್ ಸಿನಿಮಾಗಳನ್ನು ಕೊಟ್ಟವರು.
“ಇಂತಹ ವಿಷಯಗಳನ್ನು ಚರ್ಚಿಸಲು ಮಹಿಳೆಯರು ಗುಂಪುಗಳನ್ನು ರಚಿಸಿಕೊಂಡಿರುವುದು ನನ್ನ ಕಣ್ಣಿಗೆ ಬಿದ್ದೂ ಇಲ್ಲ. ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರು ಧೈರ್ಯದಿಂದ ಹೋಗಿ ಮುಕ್ತವಾಗಿ ತಮ್ಮ ನೋವು ಹೇಳಿಕೊಳ್ಳಲು ಸೂಕ್ತವೆನಿಸುವ ವೇದಿಕೆಯೊಂದನ್ನು ಸ್ಥಾಪಿಸಲು ಕಾಲ ಪಕ್ವವಾಗಿದೆ. WCC ಯೊಂದಿಗೆ ಕೇರಳದ ಮಹಿಳೆಯರು ಇಂತಹ ವಿಷಯಗಳನ್ನು ಚರ್ಚಿಸುವತ್ತ ದುಡಿಯುತ್ತಿದ್ದಾರೆ” ಎನ್ನುತ್ತಾರೆ ಸಂಗೀತಾ.
“ಹೇ, ಈ ವ್ಯಕ್ತಿಯೊಂದಿಗಿನ ನನ್ನ ಅನುಭವ ಹೀಗಿತ್ತು” ಎಂದು ಯಾರಾದರೂ ಬಂದು ಧೈರ್ಯದಿಂದ ಹೇಳುವುದಕ್ಕೆ ಅನುಕೂಲವಾಗುವಂತೆ ಕನಿಷ್ಠ ಒಂದು ಅನೌಪಚಾರಿಕ ಗುಂಪಾದರೂ ನಮ್ಮಲ್ಲಿ ಇರಬೇಕು” ಎಂಬ ಅಭಿಪ್ರಾಯವನ್ನು ಪ್ರೀತಿ ಕೂಡಾ ಒಪ್ಪುತ್ತಾರೆ. ಹಾಗೆ ಆದಾಗ ಆ ನಿರ್ದಿಷ್ಟ ವ್ಯಕ್ತಿಯೊಂದಿಗೆ ಇನ್ನೊಬ್ಬ ಹೆಣ್ಣುಮಗಳು ಕೆಲಸ ಮಾಡ ಹೊರಡುವಾಗ ಆತನ ಬಗ್ಗೆ ಆಕೆಗೆ ಮೊದಲೇ ಗೊತ್ತಿರುತ್ತದೆ. ಮಹಿಳೆಯರು ಮಹಿಳೆಯರನ್ನೇ ಅವಲಂಬಿಸಬಹುದಾದಂತಹ ಒಂದು ವೇದಿಕೆ ಖಂಡಿತಾ ಅಗತ್ಯವಿದೆ ಎನ್ನುತ್ತಾರೆ ಅವರು.
ಮೂಲ ಲೇಖನ- ಡೆಕ್ಕನ್ ಹೆರಾಲ್ಡ್ , ಪ್ರಣತಿ ಎ ಎಸ್
ಕನ್ನಡ ಭಾವಾನುವಾದ– ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ- ಅವನನ್ನು ಕಂಡಾಗಲೆಲ್ಲ ಬೆವರು ತನಗೆ ತಾನೇ ಬರುತ್ತಿತ್ತು…