ಕಾನೂನಿನ ಕುಣಿಕೆಯಲ್ಲಿ ಹನಿಟ್ರ್ಯಾಪ್ ಮುನಿ

Most read

ಮುನಿರತ್ನನಿಂದ ಹನಿಟ್ರ್ಯಾಪ್ ಗೆ ಬಿದ್ದು ಮರ್ಯಾದೆಗೆ ಹೆದರಿಕೊಂಡ ಅದೆಷ್ಟೋ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಾನ ಉಳಿಸಿಕೊಳ್ಳಲಾದರೂ ಈ ದುರುಳನನ್ನು ಕಾನೂನಿನ ಕುಣಿಕೆಯಿಂದ ಕಾಪಾಡಲು ಪ್ರಯತ್ನಿಸುತ್ತಾರೆ ಎನ್ನುವ ಆತಂಕ ಇದ್ದೇ ಇದೆ. ರೌಡಿ ಎಲಿಮೆಂಟ್ ಎಂದು ಗೊತ್ತಿದ್ದರೂ ಆಸೆ ಆಮಿಷಗಳಿಗೆ ಒಳಗಾಗಿ ಮತ ಹಾಕಿ ಇಂತವನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ ಜನರು ಈಗಲಾದರೂ ಪಶ್ಚಾತ್ತಾಪ ಪಡಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ನೇರವಾಗಿ ಯುದ್ಧ ಮಾಡಿ ಗೆಲ್ಲಲಾಗದವರು ಶತ್ರು ರಾಜರ ಸಂಹಾರಕ್ಕೆ ವಿಷಕನ್ಯೆಯರನ್ನು ಬಳಕೆ ಮಾಡುತ್ತಿದ್ದರು ಎಂಬುದು ಪುರಾಣೇತಿಹಾಸಗಳಲ್ಲಿ ದಾಖಲಾಗಿದೆ. ಸುಂದರವಾದ ಯುವತಿಯರಿಗೆ ಹಾವಿನ ವಿಷವುಣ್ಣಿಸಿ, ವಿಷಕನ್ಯೆಯರನ್ನಾಗಿ ಪರಿವರ್ತಿಸಿ, ವಿರೋಧಿಗಳ ಸ್ತ್ರೀಮೋಹ ದೌರ್ಬಲ್ಯವನ್ನು ಬಳಸಿ  ಹತ್ಯಾಕಾಂಡವನ್ನು  ಜಾರಿಗೊಳಿಸುತ್ತಿದ್ದರಂತೆ.

ಈಗ ಕಾಲ ಬದಲಾಗಿದೆ. ಆದರೆ ಪುರುಷ ಪ್ರಧಾನ ವ್ಯವಸ್ಥೆ ಮಾತ್ರ ಬದಲಾಗಿಲ್ಲ. ದುರುಳರು ತಮ್ಮ ಸ್ವಾರ್ಥ ಸಾಧನೆಗೆ ಮಹಿಳೆಯರನ್ನು ದಾಳವಾಗಿ ಬಳಸಿಕೊಳ್ಳುವ ಪ್ರವೃತ್ತಿಯಲ್ಲೂ ಪರಿವರ್ತನೆಯಾಗಿಲ್ಲ. ಅದಕ್ಕೆ ರಾಜರಾಜನಗರದ ಶಾಸಕ ಮುನಿರತ್ನನ ʼಹನಿಬಲೆʼ ಪ್ರಕರಣವೇ ಪುರಾವೆಯಾಗಿದೆ.

ಈ ರೌಡಿಗಿರಿ ಹಿನ್ನೆಲೆಯ ರಾಜಕಾರಣಿ ತನ್ನ ವಿರೋಧಿಗಳನ್ನು ಮಣಿಸಲು, ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಲು, ಅಧಿಕಾರದ ಮೆಟ್ಟಿಲೇರಲು, ಹಣ ಆಸ್ತಿ ಸಂಪಾದನೆ ಮಾಡಲು ಮಹಿಳೆಯರನ್ನೇ ದಾಳವಾಗಿ ಬಳಸಿಕೊಂಡು ಯಶಸ್ವಿಯಾಗಿದ್ದು ಮಾತ್ರ ಅಕ್ಷಮ್ಯ. ಆಗ ವಿಷಕನ್ಯೆಯರನ್ನು ಕುಕೃತ್ಯಕ್ಕೆ ಬಳಸಿಕೊಂಡಿದ್ದರೆ ಈಗ ತನ್ನ ಸ್ವಾರ್ಥ ಸಾಧನೆಗೆ ಏಡ್ಸ್ ಪೀಡಿತ ಹೆಣ್ಣುಗಳನ್ನು ಉಪಯೋಗಿಸಿಕೊಂಡಿದ್ದು ದುಷ್ಟತನದ ಪರಮಾವಧಿ.

ಮುನಿರತ್ನನ ಕರಾಳ ಕೃತ್ಯಗಳ ಯಶಸ್ಸಿನ ಹಿಂದಿರುವ ತಂತ್ರಗಾರಿಕೆಯೇ ಬ್ಲಾಕ್‌ಮೇಲ್‌ ಮತ್ತು ಹನಿಟ್ರ್ಯಾಪಿಂಗ್. ಮಹಿಳೆಯರಿಗೆ ಆಸೆ ಆಮಿಷ ತೋರಿಸಿಯೋ, ಒತ್ತಾಯ ಒತ್ತಡ ಹೇರಿಯೋ ತನ್ನ ಬಲೆಗೆ ಬೀಳಿಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿ, ಅವರ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಮಹಿಳೆಯರನ್ನು ಬ್ಲಾಕ್‌ಮೇಲ್‌ ಮಾಡುವುದರ ಮೂಲಕ ತನ್ನ ಹನಿಟ್ರ್ಯಾಪ್ ಯೋಜನೆಗೆ ಬಲಿಪಶುವಾಗಿ ಬಳಸಿಕೊಳ್ಳುತ್ತಿದ್ದ ಎಂದು ಸಂತ್ರಸ್ತ ಮಹಿಳೆಯರೇ ಮಾಧ್ಯಮದ ಮುಂದೆ ಹೇಳುತ್ತಿದ್ದಾರೆ. ಜೊತೆಗೆ ಏಡ್ಸ್ ಪೀಡಿತ ಹೆಣ್ಣುಗಳನ್ನೂ ಸಹ ಹನಿಟ್ರ್ಯಾಪ್ ಮಾಡಲು ಉಪಯೋಗಿಸಿ ಕೊಂಡಿದ್ದನ್ನು ಆ ಸಂತ್ರಸ್ತ ಮಹಿಳೆಯರೇ ಈಗ ಬಾಯಿ ಬಿಡುತ್ತಿದ್ದಾರೆ. ಡ್ರಗ್ಸ್ ಕೊಟ್ಟು ಮತ್ತಿನಲ್ಲಿದ್ದ ತನ್ನದೇ ಪಕ್ಷದ ಕಾರ್ಯಕರ್ತೆಯ ಮೇಲೆ ತನ್ನ ಸಹಚರರಿಂದ ಅತ್ಯಾಚಾರ ಮಾಡಿಸಿದ ವಿಡಿಯೋ ಇಟ್ಟುಕೊಂಡು ಆ ಮಹಿಳೆಯನ್ನು ಬ್ಲಾಕ್‌ಮೇಲ್‌ ಮಾಡುತ್ತಾ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ಬಳಸಿಕೊಂಡಿದ್ದನ್ನು ಆ ಮಹಿಳೆ ಬಹಿರಂಗಪಡಿಸಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದು ಮುನಿರತ್ನನ ಮರುಬಂಧನಕ್ಕೂ ಕಾರಣವಾಗಿದೆ.

ಮುನಿರತ್ನ

ಜಾತಿ ನಿಂದನೆ ಹಾಗೂ ಕೊಲೆಬೆದರಿಕೆ ಮಾಡಲಾಗಿದೆ ಎನ್ನುವ ಆಡಿಯೋ ಒಂದು ಬಿಡುಗಡೆಯಾದ ನಂತರ ಬಂಧನಕ್ಕೆ ಒಳಗಾದ ಈ ಬ್ಲಾಕ್‌ಮೇಲ್‌ ಸ್ಪೆಶಲಿಸ್ಟ್ ಮುನಿರತ್ನನ ಮೇಲೆ ಅತ್ಯಾಚಾರದ ಪ್ರಕರಣಗಳೂ ದಾಖಲಾಗಿವೆ. ಈಗ ಕಾನೂನಿನ ಟ್ರ್ಯಾಪ್ ನಲ್ಲಿ ಈ ಸ್ತ್ರೀ ಪೀಡಕ ಸಿಕ್ಕಿಕೊಂಡಿದ್ದಾನೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಮಹಿಳಾಲೋಕ ಸ್ತಬ್ದವಾಗಿದೆ. ಮಹಿಳಾ ಆಯೋಗ ಮೌನವಾಗಿದೆ.

ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದಂತೆ. ದುರುಳರು ಮಾಡುವ ದೌರ್ಜನ್ಯಗಳಿಗೂ ದಿ ಎಂಡ್ ಎನ್ನುವುದು ಇರಬೇಕಾಗುತ್ತದೆ. ಆದರೆ ಇಲ್ಲಿ ಏಡ್ಸ್ ಪೀಡಿತರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮೂಲಕ ತನ್ನ ವಿರೋಧಿಗಳನ್ನು, ಅಧಿಕಾರಿಗಳನ್ನು ಬ್ಲಾಕ್‌ಮೇಲ್‌ ಮಾಡಿದ್ದು ಅಪರಾಧ ಲೋಕದ ಹೊಸ ಮಾದರಿಯಾಗಿದೆ. ಜನಪ್ರತಿನಿಧಿಯಾಗಿ ಈ ರೀತಿಯ ಹೀನಾತಿಹೀನ ಕೆಲಸವನ್ನು ಮಾಡಿದ್ದು ಅಸಹ್ಯದ ಪರಮಾವಧಿಯಾಗಿದೆ. ಇದೆಲ್ಲವನ್ನು   ಮಹಿಳಾ ಸಂಘಟನೆಗಳು, ಹೆಣ್ಣುಮಕ್ಕಳ ಪರವಾದ ಹೋರಾಟಗಾರರು ಉಗ್ರವಾಗಿ ಖಂಡಿಸಬೇಕಿದೆ, ತೀವ್ರ ವಿಚಾರಣೆ ಹಾಗೂ ಶಿಕ್ಷೆಗೆ ಸರಕಾರದ ಮೇಲೆ ಒತ್ತಡ ತರಬೇಕಿದೆ, ಶಾಸಕ ಸ್ಥಾನದಿಂದ ವಜಾ ಮಾಡಲು ರಾಜ್ಯಪಾಲರನ್ನು ಆಗ್ರಹಿಸಬೇಕಿದೆ. ಸಂತ್ರಸ್ತ ಮಹಿಳೆಯರ ಪರವಾಗಿ ನಿಲ್ಲಬೇಕಿದೆ.

ಪೊಲೀಸ್ ಅಧಿಕಾರಿಗಳನ್ನ, ಐಎಎಸ್ ಅಧಿಕಾರಿಯನ್ನು, ರಾಜಕಾರಣಿಗಳನ್ನು ಅಷ್ಟೇ ಯಾಕೆ ಮಾಜಿ ಮುಖ್ಯಮಂತ್ರಿಯನ್ನು ಸಹ ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಬ್ಲಾಕ್‌ಮೇಲ್‌ ಮಾಡಿದ ಆರೋಪಗಳು ಮುನಿರತ್ನ ವಿರುದ್ಧ ಕೇಳಿಬರುತ್ತಿವೆ. ಈ ರೌಡಿ ಶಾಸಕ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಬೇನಾಮಿ ಮಾರ್ಗದಲ್ಲಿ ಗಳಿಸಿದ ಅನುಮಾನ ಗಟ್ಟಿಯಾಗಿದೆ. ರೌಡಿಗಳನ್ನು ಬಳಸಿ ಸಮಾಜ ವಿರೋಧಿ ಕೃತ್ಯಗಳನ್ನು ನಡೆಸಿದ್ದಾರೆಂದು ಆರ್.ಆರ್.ನಗರದ ಜನರು ಮಾತಾಡುತ್ತಿದ್ದಾರೆ. ಮುನಿರತ್ನ ಹಾಗೂ ಆತನ ಸಹಚರರ ಬಲೆಗೆ ಬಿದ್ದು ಹೊರಗೆ ಬರಲಾಗದೇ ವಿಲವಿಲ ಒದ್ದಾಡಿದ ಮಹಿಳೆಯರು ಒಬ್ಬೊಬ್ಬರಾಗಿ ಬಾಯಿ ಬಿಡುತ್ತಿದ್ದಾರೆ. ಆದರೆ ಅಧಿಕಾರದ ಮದವೇರಿದ ಈ ಮದ್ದಾನೆಯನ್ನು ಖೆಡ್ಡಾಕ್ಕೆ ಕೆಡವಿ ಖಾಯಂ ಆಗಿ ಬಂಧಿಸಿಡಲು ನಮ್ಮ ದುರ್ಬಲ ಕಾನೂನು ವ್ಯವಸ್ಥೆಗೆ ಸಾಧ್ಯವಿದೆಯಾ? ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಮುನಿರತ್ನನಿಂದ ಹನಿಟ್ರ್ಯಾಪ್ ಗೆ ಬಿದ್ದು ಮರ್ಯಾದೆಗೆ ಹೆದರಿಕೊಂಡ ಅದೆಷ್ಟೋ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಾನ ಉಳಿಸಿಕೊಳ್ಳಲಾದರೂ ಈ ದುರುಳನನ್ನು ಕಾನೂನಿನ ಕುಣಿಕೆಯಿಂದ ಕಾಪಾಡಲು ಪ್ರಯತ್ನಿಸುತ್ತಾರೆ ಎನ್ನುವ ಆತಂಕ ಇದ್ದೇ ಇದೆ. ರೌಡಿ ಎಲಿಮೆಂಟ್ ಎಂದು ಗೊತ್ತಿದ್ದರೂ ಆಸೆ ಆಮಿಷಗಳಿಗೆ ಒಳಗಾಗಿ ಮತ ಹಾಕಿ ಇಂತವನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ ಜನರು ಈಗಲಾದರೂ ಪಶ್ಚಾತ್ತಾಪ ಪಡಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ಪತ್ರಕರ್ತರು.

ಇದನ್ನೂ ಓದಿ- ದಲಿತರು ಮತ ಗಳಿಕೆಗೆ ಮಾತ್ರ ಸೀಮಿತವೇ?

More articles

Latest article