ಕವಯಿತ್ರಿ ‘ಹಿಂಗೊಂದು ಕಥೆ’ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ ಜೀವನಶೈಲಿ, ರಾಜಕೀಯ ಹಾಗೂ ಧಾರ್ಮಿಕ ವಿಭಜನೆಗಳ ನಡುವಿನ ಸಂಘರ್ಷಗಳ ಹಾನಿಯನ್ನು ವಿವರಿಸುತ್ತಾರೆ. ಅಂತಿಮವಾಗಿ, ಪ್ರೀತಿಯ ವಿಜಯದೊಂದಿಗೆ ಭರವಸೆಯ ಕಿರಣವನ್ನು ಮೂಡಿಸುತ್ತಾರೆ – ಡಾ. ರವಿ ಎಂ ಸಿದ್ಲಿಪುರ.
ಕನ್ನಡದ ಪ್ರಮುಖ ಕವಯಿತ್ರಿ ಚ.ಸರ್ವಮಂಗಳ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿದ್ದವರು. ಕಾವ್ಯ ಮತ್ತು ಸಂಪಾದನಾ ಕ್ಷೇತ್ರಗಳಲ್ಲಿ ಪ್ರಸಿದ್ಧರು. ಇವರ ‘ಅಮ್ಮನಗುಡ್ಡ’ ಎಂಬ ಕವನ ಸಂಕಲನವು ಋಜುವಾತು ಪ್ರಕಾಶನದಿಂದ 1988ರಲ್ಲಿ ಪ್ರಕಟವಾಗಿದೆ. ಇದಕ್ಕೆ ಶಾಂತಿನಾಥ ದೇಸಾಯಿಯವರು ‘ಅಮ್ಮನ ಗುಡ್ಡ’ಕ್ಕೆ ಮುನ್ನುಡಿ, ಕೆ.ವಿ. ತಿರುಮಲೇಶ್ ಬೆನ್ನುಡಿ ಬರೆದಿದ್ದಾರೆ. ‘ಅಮ್ಮನಗುಡ್ಡ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿಗಳು ಸಂದಿವೆ. ಸರ್ವಮಂಗಳರ ಏಕೈಕ ಸಂಕಲನವಿದು, ಒಂಬತ್ತು ಭಾಷೆಗಳಿಗೆ ಅನುವಾದವಾಗಿದೆ. 2024ರಲ್ಲಿ ಮುದ್ರಣಗೊಂಡ ‘ಅಮ್ಮನಗುಡ್ಡ-ಅಂತರಾಳ’ ಇವರ ಸಮಗ್ರ ಕಾವ್ಯ ಸಂಗ್ರಹವಾಗಿದೆ.
‘ಅಮ್ಮನ ಗುಡ್ಡ’ ಸಂಕಲನದಲ್ಲಿ ಒಟ್ಟು 48 ಕವನಗಳಿವೆ. ಅವುಗಳಲ್ಲಿ ‘ಹಿಂಗೊಂದು ಕಥೆ’ ಎಂಬ ಕವಿತೆಯು ವರ್ತಮಾನದ ಸಂಗತಿಗಳಿಗೆ ಮುಖಾಮುಖಿಯಾಗುವಂತಹದ್ದು. ಈ ಶೀರ್ಷಿಕೆಯೇ ‘ಇಂತಹ ಒಂದು ಕಥೆ” ಎಂಬ ಅರ್ಥವನ್ನು ಹಾಗೂ ‘ಇಂತಹ ಘಟನೆಗಳು ಸಾಮಾನ್ಯ’ವೆಂದು ಸೂಚಿಸುತ್ತದೆ; ಆದರೆ ಕವಿತೆಯುದ್ದಕ್ಕೂ ಇದು ಸವಾಲಾಗಿದೆ ಎಂಬರ್ಥದಲ್ಲಿ ವ್ಯಕ್ತವಾಗುತ್ತದೆ.
ಶಿವಮೊಗ್ಗದ ನಗರದ ಒಂದು ಏರಿಯಾದಲ್ಲಿ ವಾಸಿಸುವ ಭುಜಂಗಪ್ಪ ಮತ್ತು ಇಬ್ರಹ್ಮಪ್ಪ ಎಂಬ ಗೆಳೆಯರ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ‘ಹಿಂಗೊಂದು ಕಥೆ’ಯು ನಿರೂಪಿಸುತ್ತದೆ. “ಶಿವಮೊಗ್ಗೆಯ ಪೇಟೆ ಬೀದೀಲಿ ವಾಸ/ ಭುಜಂಗಪ್ಪ ಇಬ್ರಹ್ಮಪ್ಪ ಗಳಸ್ಯ ಕಂಠಸ್ಯ” ಎಂಬುದಾಗಿ ಸರಳ ಮತ್ತು ನೇರ ನಿರೂಪಣಾ ಶೈಲಿಯಿಂದ ಆರಂಭವಾಗುತ್ತದೆ. ಇವರಿಬ್ಬರ ಕಥೆಯ ಮೂಲಕ ಕವಿತೆ ಗೆಳೆತನ, ಸಾಮುದಾಯಿಕ ಜೀವನ, ಧಾರ್ಮಿಕ ಸಹಿಷ್ಣುತೆ, ಪ್ರೀತಿಯ ವಿಜಯ ಮತ್ತು ಕೋಮು ಗಲಭೆಗಳ ಎಳೆಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ.
ಬಾಬಾ ಭುಜಂಗಪ್ಪ, ಚಾಚಾ ಇಬ್ರಹ್ಮಪ್ಪ ಬೇರೆಬೇರೆ ಧರ್ಮಕ್ಕೆ ಸೇರಿದವರಾದರೂ, ಅವರ ನಡುವೆ ಅವಿನಾಭಾವ ಸಂಬಂಧವಿದೆ. ಇಬ್ರಹ್ಮಪ್ಪನ ಮನೆಯಲ್ಲಿ ತಯಾರಿಸಿದ ವಿಶೇಷ ಅಡುಗೆ ಭುಜಂಗಪ್ಪನ ಮನೆಗೆ ಹೋಗುತ್ತದೆ, ಹಾಗೆಯೇ ಭುಜಂಗಪ್ಪನ ಮನೆಯ ಹಬ್ಬದ ಅಡುಗೆ ಇಬ್ರಹ್ಮಪ್ಪನ ಮನೆಗೆ ಬರುತ್ತದೆ. ಬೀದಿ ಮಕ್ಕಳು ಇಬ್ರಹ್ಮಪ್ಪನ ಮನೆಯ ಕಾಂಪೌಂಡಿನಲ್ಲಿ ಆಟವಾಡುತ್ತಾರೆ, ಭುಜಂಗಪ್ಪನ ಮನೆಯಂಗಳ ಊರ ಮಕ್ಕಳಿಗೆ ಆಟದ ತಾಣವಾಗಿದೆ. ಇಬ್ರಹ್ಮಪ್ಪನ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆದರೆ, ಭುಜಂಗಪ್ಪ ಪರಿವಾರ ಸಮೇತ ದರ್ಗಾಕ್ಕೆ ಹೋಗುತ್ತಾರೆ. ಈ ವಿವರಗಳು ಎರಡು ಧರ್ಮಗಳ ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದ ಹೇಗೆ ಬಾಳಬಹುದು ಎಂಬುದಕ್ಕೆ ನಿದರ್ಶನವಾಗುತ್ತವೆ.
ಈಗ ಚುನಾವಣೆಗಳು ಹತ್ತಿರದಲ್ಲಿವೆ ಎಂದರೆ ಸಾಕು, ದೇಶದ ಯಾವುದೋ ಮೂಲೆಯಲ್ಲಿ ಅನಾಹುತಗಳು ಸಹಜವೆಂಬಂತೆ ನಡೆಯುತ್ತಿವೆ. ಅವುಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗಳನ್ನು ಗೆಲ್ಲುವುದು ಅಷ್ಟೇ ಸಹಜವಾಗಿಬಿಟ್ಟಿದೆ! ಇಂತಹ ಘಟನೆಯೊಂದನ್ನು ಕವಿತೆ ಪ್ರಸ್ತಾಪಿಸಿದೆ. ವರ್ಷಕ್ಕೊಮ್ಮೆ ಆಗಮನವಾಗುವ ಗಣೇಶ ಶಿವಮೊಗ್ಗೆಯ ಪುರಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಾನೆ! ಜೊತೆಗೆ ಬೀದಿಬೀದಿಯ, ಹಿಂದೂ ಮಹಾಸಭಾ ಗಣೇಶ, ನಗೆಯ ಬದಲಿಗೆ ಹಗೆಯನ್ನು ಮಾಡಿಸುತ್ತಾನೆ. ಇದರಿಂದ ಜನರ ನಡುವೆ ಗೋಡೆಗಳು ಏಳುತ್ತವೆ, ದಾರಿಗಳು ಬದಲಾಗುತ್ತವೆ. ಆದರೂ, ಬಾಬಾ ಚಾಚ ನಡುವಿನ ಬಾಂಧವ್ಯ ಮಾತ್ರ ಬತ್ತದ ತುಂಗೆಯಂತೆ ಹರಿಯುತ್ತಿರುತ್ತದೆ. ಧರ್ಮಗಳ ಹೆಸರಲ್ಲಿ ರಾಜಕೀಯ ಮಾಡುವವರು ತುಂಗೆಯ ರಭಸದಲ್ಲಿ ಕೊಚ್ಚಿಕೊಂಡು ಹೋದಾರು, ಆದರೆ ಸಾಮರಸ್ಯದ ಸ್ಥಿರತೆ ಮತ್ತು ಸಂಬಂಧಗಳ ನಿರಂತರತೆ ತುಂಗೆಯ ‘ಜುಳುಜುಳು ನಾದ’ವಾಗಿರಬಲ್ಲದಾಗಿದೆ.
ಮುಂದುವರೆದು ಕವಿತೆ, ಸೇವೆಯ ಉದ್ದೇಶವನ್ನು ಎಂದೋ ಮರೆತು; ಅಧಿಕಾರದ ಕೇಂದ್ರವಾದ ರಾಜಕೀಯ ಚುನಾವಣೆಗಳು ಸೃಷ್ಟಿಸಿದ ‘ಗೋಡೆಗಳು’(ಸಾಮಾಜಿಕ ವಿಭಜನೆ) ಮತ್ತು ‘ಬಾವುಟಗಳು’ (ರಾಜಕೀಯ ಪ್ರಭಾವ) ಸಾಮಾಜಿಕವಾಗಿ ತೋಡಿದ ಕಂದಕಗಳನ್ನು ಪರಿಚಯಿಸುತ್ತದೆ. ರಾಜಕೀಯವು ಸಾಂಸ್ಕೃತಿಕ ಪ್ರತೀಕಗಳನ್ನು(ಗಣೇಶ) ಹಗೆತನದ ಸಾಧನಗಳಾಗಿ ಮಾರ್ಪಡಿಸುತ್ತದೆ (ನೆತ್ತರದೋಕುಳಿಯ ಆರತಿ). ಇದು ಸಾಮುದಾಯಿಕ ಧ್ರುವೀಕರಣದ ಪ್ರತೀಕವಾಗುವುದನ್ನು ಸಂಕೇತಿಸುತ್ತದೆ. 2020ರ ದೆಹಲಿ ಗಲಭೆ, 2022ರ ಕಾನ್ಪುರ್ ಹಿಂಸಾಚಾರ, ಮೊಗಲ್ ದೊರೆಗಳ ಸಮಾಧಿಗಳನ್ನೂ ಸಹಿಸಿಕೊಳ್ಳಲಾಗದೆ 2025ರಲ್ಲೂ ನಡೆಯುತ್ತಿರುವ ಆಕ್ರೋಶ, ಕೆಲವು ಸಂಘಟನೆಗಳು ಉಂಟುಮಾಡುತ್ತಿರುವ ಗಣೇಶ ಹಬ್ಬದ ರಾಜಕೀಯೀಕರಣಗಳ ನಡುವೆಯೂ, ಹಟ್ಟಿ-ಮೊಹಲ್ಲಾಗಳಲ್ಲಿನ ಭುಜಂಗಪ್ಪ-ಇಬ್ರಾಹ್ಮಪ್ಪನವರ ಮೊಮ್ಮಕ್ಕಳ ಪ್ರೀತಿ ಗೆಲ್ಲುತ್ತದೆ.
ಈ ಕವಿತೆಯಲ್ಲಿ ದೃಶ್ಯ ಮಾಧ್ಯಮಗಳ ಪ್ರಸ್ತಾಪ ಇದ್ದಿದ್ದರೆ ಖಂಡಿತ, ಇವರಿಬ್ಬರ ಪ್ರೀತಿಯನ್ನು ‘ಲವ್ ಜಿಹಾದ್’ ಎಂದು ನ್ಯೂಸ್ ಬಿತ್ತರಿಸುತ್ತಿದ್ದವು. ಸದ್ಯ ಕವಯಿತ್ರಿ ದೃಶ್ಯ ಮಾಧ್ಯಮಗಳ ತಂಟೆಗೆ ಹೋಗದೆ, ಕೋಮು ಗಲಭೆಗಳ ನಡುವೆಯೂ ಪ್ರೀತಿ ಮತ್ತು ವಿಶ್ವಾಸವು ಹೇಗೆ ಉಳಿಯುತ್ತದೆ ಎಂಬುದನ್ನು ತೋರಿಸಿದ್ದಾರೆ. ಫಕೀರಜ್ಜನ ‘ನೆಂಟಸ್ತಿಕೆ… ನೂರಾರು ವರ್ಷ ಕೂಡಿಕ್ಕೊಳ್ಳೋ ಸರಗಂಟು’ ಎಂಬ ಮಾತು ಸಾಮರಸ್ಯವನ್ನು ಕಾಪಿಟ್ಟುಕೊಳ್ಳಬೇಕೆಂಬ ಸಲಹೆ ನೀಡುತ್ತಿದೆ. ಹೀಗೆ ಕವಿತೆ ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷವನ್ನು ಖಂಡಿಸುತ್ತದೆ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಇಂದಿನ ಮಾಧ್ಯಮಗಳಿಗೆ ಕೋಮುಗಲಭೆಗಳು ದೊಡ್ಡಸುದ್ದಿ. ಅದೆ ಸಾಮರಸ್ಯದ ವಿಷಯಗಳಿಂದ ಯಾವ ಟಿಆರ್‍ಪಿಗಳು ಸಿಗುವುದಿಲ್ಲ, ಆದ್ದರಿಂದ ಇವು ಸುದ್ದಿಯೇ ಆಗುವುದಿಲ್ಲ! ಕವಿತೆಯಲ್ಲಿ “ಅಯ್ಯೋ ಬಿಡಿ, ಇದೇನು ದೊಡ್ಡ ಸುದ್ದಿಯೇ?” ಎಂಬ ಪುನರಾವರ್ತಿತ ಪ್ರಶ್ನೆಯನ್ನು ಪದೇ ಪದೇ ಎತ್ತಲಾಗಿದೆ. ಇದು ಸೌಹಾರ್ದತೆಯು ಒಂದು ಸಾಮಾನ್ಯ ವಿಷಯವೆಂದೂ; ಅದೇ ಸಮಯದಲ್ಲಿ, ಕೋಮು ಗಲಭೆಗಳು ಮತ್ತು ದ್ವೇಷದ ನಡುವೆ ಇಂತಹ ಬಾಂಧವ್ಯ ಉಳಿಯುವುದು ಎಷ್ಟು ಮುಖ್ಯ ಎಂಬುದನ್ನೂ ಒತ್ತಿಹೇಳುತ್ತದೆ. ‘ಸಣ್ಣ ಸುದ್ದಿ’ಯೆಂದು ಕಾಣುವ ಪ್ರತಿ ಘಟನೆಯೂ ಜೀವನದ ಗಾಢ ಸತ್ಯಗಳನ್ನು ಹೊಂದಿದೆ ಎಂಬ ಸಂದೇಶವನ್ನು ನೀಡುತ್ತದೆ.
ಕವಯಿತ್ರಿ ‘ಹಿಂಗೊಂದು ಕಥೆ’ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ ಜೀವನಶೈಲಿ, ರಾಜಕೀಯ ಹಾಗೂ ಧಾರ್ಮಿಕ ವಿಭಜನೆಗಳ ನಡುವಿನ ಸಂಘರ್ಷಗಳ ಹಾನಿಯನ್ನು ವಿವರಿಸುತ್ತಾರೆ. ಅಂತಿಮವಾಗಿ, ಪ್ರೀತಿಯ ವಿಜಯದೊಂದಿಗೆ ಭರವಸೆಯ ಕಿರಣವನ್ನು ಮೂಡಿಸುತ್ತಾರೆ. ಹೀಗೆ ಕವಿತೆಯು ಕೇವಲ ಒಂದು ಪ್ರದೇಶದ ಕಥೆಯಾಗಿ ಉಳಿಯದೇ, ದೇಶದ ಕಥೆಯೂ ಆಗುತ್ತದೆ.
ಡಾ. ರವಿ ಎಂ ಸಿದ್ಲಿಪುರ
ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಬಸವಣ್ಣನವರ ಒಂದು ವಚನ : ಆದರ್ಶ ಮತ್ತು ವಾಸ್ತವ