ಗೋಮಾತೆಯ ಹೆಸರಲ್ಲಿ ಹಿಂದೂ ರಾಷ್ಟ್ರದ ಗುರಿ

Most read

ಗೋಮಾತೆ ಪ್ರಚಾರ ಹಾಗೂ ಗೋಹತ್ಯೆ ವಿಚಾರ ಎಂಬುದು ಮುಸ್ಲಿಂ ದ್ವೇಷ ಸಾಧನೆಯ ಮೂಲಕ ಹಿಂದೂಗಳನ್ನು ಒಂದಾಗಿಸುವ ಮತ್ತು ಹಿಂದುತ್ವವನ್ನು ಗಟ್ಟಿಗೊಳಿಸುವ ಸಂಘಿ ಮೆದುಳುಗಳ ಮಹಾ ತಂತ್ರಗಾರಿಕೆಯಾಗಿದೆ. ಹಿಂದುತ್ವವಾದಿ ಸಿದ್ಧಾಂತದ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಗೋವು ಎನ್ನುವ ಭಾವನಾತ್ಮಕ ಸಂಗತಿ ಸಂಘಿಗಳ ಸಾಧನವಾಗಿದೆ. ವೈದಿಕಶಾಹಿಗಳು ಗೋವಿನ ಹೆಸರಲ್ಲಿ ಬೀಸಿದ ಭಾವನಾತ್ಮಕ ಭ್ರಮೆಗೆ ಅವೈದಿಕ ಸಮುದಾಯಗಳು ಒಳಗಾಗಿದ್ದು ವರ್ತಮಾನದ ದುರಂತ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಗೋವು ಎನ್ನುವ ನಾಲ್ಕು ಕಾಲಿನ ಪ್ರಾಣಿಯನ್ನು ಮುಂದಿಟ್ಟುಕೊಂಡು ಈ ಬ್ರಾಹ್ಮಣ್ಯದವರು ಆಡುವ ಧರ್ಮರಾಜಕಾರಣ ಇದೆಯಲ್ಲಾ ಅದು ಅತ್ಯದ್ಭುತ.

ಗೋವು ಮಾತೆ, ಗೋವು ದೇವತೆ, ಗೋವು ಪರಮ ಪವಿತ್ರ, ಗೋವು ಮುಕ್ಕೋಟಿ ದೇವರುಗಳ ಆಶ್ರಯ ತಾಣ ಎಂದೆಲ್ಲಾ ಅನೇಕಾನೇಕ ವಿಶೇಷಣಗಳ ಮೂಲಕ ಜನರಲ್ಲಿ ಭಯ ಭಕ್ತಿ ಹುಟ್ಟಿಸುವ, ಗೋವನ್ನು ದೈವತ್ವಕ್ಕೇರಿಸುವ ಪುರೋಹಿತಶಾಹಿ ತಂತ್ರಗಾರಿಕೆ ರಣರೋಚಕ.

ಗೋವನ್ನು ಕೊಂದರೆ ಬ್ರಹ್ಮ ದೋಷ, ತಿಂದರೆ ಗೋಶಾಪ, ಹಿಂಸಿಸಿದರೆ ಗ್ಯಾರಂಟಿ ರವರವ ನರಕ ಎಂದೆಲ್ಲಾ ಆರೋಪಿಸುತ್ತಲೇ ಗೋವಧೆ ಹಾಗೂ ಗೋಭಕ್ಷಣೆಯನ್ನು ಕಾನೂನಾತ್ಮಕವಾಗಿ ನಿರ್ಬಂಧಿಸುವ ಮಹತ್ತರ ಕಾರ್ಯವನ್ನು ಹಿಂದುತ್ವವಾದಿಗಳು ಕಳೆದ ಹತ್ತು ವರ್ಷಗಳಲ್ಲಿ ಮಾಡಿ ಗೋಮಾತೆಯ ಕೃಪೆಗೆ ಪಾತ್ರರಾಗಿದ್ದಾರೆ. ಗೋ ರಕ್ಷಣೆಯ ಹೆಸರಲ್ಲಿ ಅನೇಕ ಸ್ವ ಘೋಷಿತ ಸಂಘಿ ಸಂತಾನಗಳು ಮಾಡಬಾರದ ಕೃತ್ಯಗಳನ್ನು ಮಾಡುತ್ತಾ ಕಾನೂನು ಉಲ್ಲಂಘನೆ ಹಲ್ಲೆ ಹತ್ಯೆಗಳಲ್ಲೂ ನಿರತರಾಗಿದ್ದಾರೆ.

ಗೋಹತ್ಯಾ ನಿಷೇಧ ಎನ್ನುವುದೇ ಆಹಾರ ಸಂಸ್ಕೃತಿಯ ವಿರೋಧಿ ಕೃತ್ಯ. ಅವರವರ ಆಹಾರ ಪದ್ಧತಿ ಅವರವರ ಇಚ್ಛೆಗೆ ಅನುಗುಣವಾಗಿರುತ್ತದೆ, ಇರಬೇಕು. ಇಂತಹುದನ್ನೇ ತಿನ್ನಬೇಕು, ಇಂತಹುದನ್ನು ತಿನ್ನಬಾರದು ಎಂದು ಒತ್ತಾಯಿಸುವುದು ಬಲವಂತದ ಹೇರಿಕೆಯಾಗುತ್ತದೆ. ಭಾರತದ ಜನಸಂಖ್ಯೆಯಲ್ಲಿ 2% ಇರುವ ಅತ್ಯಂತ ಅಲ್ಪಸಂಖ್ಯಾತ ವೈದಿಕ ವರ್ಗವೊಂದು ಬಹುಸಂಖ್ಯಾತರ ಆಹಾರ ಕ್ರಮವನ್ನು ನಿರ್ಬಂಧಿಸಿ ನಿಯಂತ್ರಿಸುತ್ತದೆ ಎನ್ನುವುದೇ ಈ ದೇಶದ ದುರಾದೃಷ್ಟ. 

ಇಷ್ಟಕ್ಕೂ ಈ ವೈದಿಕರು ಸನಾತನ ಕಾಲದಿಂದಲೂ ಗೋಭಕ್ಷಕರೇ ಆಗಿದ್ದರು ಎನ್ನುವುದಕ್ಕೆ ಇವರ ವೇದಗಳಲ್ಲೇ ಉಲ್ಲೇಖಗಳಿವೆ. ಯಜ್ಞಯಾಗಾದಿಗಳಿಗೆ ಎಳೆ ಕರುಗಳನ್ನು ವಧಿಸಿ ಪ್ರಸಾದವಾಗಿ ಋಷಿಮುನಿಗಳು ಸ್ವೀಕರಿಸುತ್ತಿದ್ದರು ಎನ್ನುವುದಕ್ಕೆ ವೈದಿಕ ಪುರಾಣಗಳೇ ಸಾಕ್ಷಿಯಾಗಿವೆ. ಆದರೆ ಈಗ ಈ ಸನಾತನಿ ಗೋಮಾಂಸ ಭಕ್ಷಕ ಸಂತಾನಗಳಿಗೆ ಗೋಹತ್ಯೆ ಎಂದರೆ ಅಪಥ್ಯ. ಗೋವಧೆ ಮಹಾಪಾಪ. ಗೋಮಾಂಸ ಭಕ್ಷಣೆ ಅಪರಾಧ.‌

ಕಳೆದ ಒಂದು ದಶಕದಿಂದ ಅಂದರೆ ಹಿಂದುತ್ವವಾದಿ ಸಂಘ ಪರಿವಾರದ ಬಿಜೆಪಿ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಈ ಗೋರಕ್ಷಕರಿಗೆ ಹಸುಗಳ ಬಗ್ಗೆ ಪ್ರೀತಿ ಮಮತೆ ಅತಿಯಾಗಿದೆ. ಅದಕ್ಕೆ ಗೋಹತ್ಯೆ ವಿರೋಧಿ ಕಾನೂನನ್ನೇ ತರಲಾಗಿದೆ. ಗೋಸಾಗಣೆ ಮಾಡುವುದೂ ಗೋರಕ್ಷಕರ ಕಣ್ಣಲ್ಲಿ ದೇಶದ್ರೋಹವಾಗುತ್ತದೆ. 

ಹೀಗ್ಯಾಕೆ? ಗೋಪಾಲಕರಾದ ರೈತರ ಬದುಕನ್ನೇ ಕಿತ್ತುಕೊಂಡು, ರೈತರು ಮಾರಿದ ಬರಡು ದನಗಳನ್ನು ಕೊಂಡು ಮಾಂಸ ಮಾರಿ ಜೀವಿಸುತ್ತಿದ್ದ ಮುಸಲ್ಮಾನರ ಹೊಟ್ಟೆಯ ಮೇಲೆ ಹೊಡೆದು, ಸಿಕ್ಕಿದ ದನದ ಮಂಸವನ್ನು ಹಂಚಿ ತಿನ್ನುತ್ತಿದ್ದ ದಲಿತ ಸಮುದಾಯಗಳ ಊಟಕ್ಕೇ ಸಂಚಕಾರ ತಂದ ಈ ಗೋಹತ್ಯಾ ನಿಷೇಧವೆನ್ನುವುದು ಸಾಧಿಸಿದ್ದಾದರೂ ಏನು? ಈ ಕಾಯ್ದೆ ಜಾರಿಯಾದಲ್ಲೆಲ್ಲಾ ಗೋಹತ್ಯೆ ನಿಂತು ಹೋಗಿದೆಯಾ? ಸಾಧ್ಯವೇ ಇಲ್ಲ.

ಇಡೀ ಏಷಿಯಾ ಖಂಡದಲ್ಲಿ ಗೋಮಾಂಸ ಅಂದರೆ ಬೀಫ್ ನ್ನು ರಫ್ತು ಮಾಡುವ ದೇಶದಲ್ಲಿ ಅಗ್ರ ಸ್ಥಾನದಲ್ಲಿರುವುದೇ ನಮ್ಮ ಗೋವು ಪವಿತ್ರವೆಂದು ಹೇಳಲಾಗುವ ಭಾರತ ದೇಶ. ಒಟ್ಟು ಗೋಮಾಂಸ ರಫ್ತು ವಹಿವಾಟಿನಲ್ಲಿ ಭಾರತದ ಪಾಲು ಶೇ.85 ರಷ್ಟು. ಕೇವಲ 6.6% ರಫ್ತು ಮಾಡುವ ಹಾಂಕಾಂಗ್ ಎರಡನೇ ಸ್ಥಾನದಲ್ಲಿದೆ.‌ ಮುಸಲ್ಮಾನರು ಗೋಭಕ್ಷಕರು ಎಂದು ಸಂಘಿಗಳು ಅಪಪ್ರಚಾರ ಮಾಡುತ್ತಲೇ ಇರುತ್ತಾರಲ್ಲಾ, ಅಂತಹ ಮುಸ್ಲಿಂ ಬಾಹುಳ್ಯದ ಪಾಕಿಸ್ಥಾನ ರಫ್ತು ಮಾಡುತ್ತಿರುವ ಗೋಮಾಂಸ ಕೇವಲ 4.5%. ಏಷ್ಯಾದ ಉಳಿದೆಲ್ಲಾ ರಾಷ್ಟ್ರಗಳೂ ಸೇರಿ ಮಾಡುವ ಗೋಮಾಂಸ ರಫ್ತು ಕೇವಲ 3.9% ಮಾತ್ರ. ಚೀನಾ ದೇಶವೂ ಹೆಚ್ಚು ಗೋಮಾಂಸ ಉತ್ಪಾದನೆ ಮಾಡುತ್ತಿದ್ದರೂ ಬೇರೆ ದೇಶಕ್ಕೆ ರಫ್ತು ಮಾಡುವುದಿಲ್ಲ. ಇದು ಇತ್ತೀಚಿನ ವರದಿ. 

ಯಾವ ದೇಶದಲ್ಲಿ ಗೋಹತ್ಯೆ ನಿಷೇಧವಾಗಿದೆಯೋ? ಯಾವ ದೇಶ ಗೋವನ್ನು ಪವಿತ್ರವೆಂದು ಪೂಜಿಸುತ್ತಿದೆಯೋ? ಯಾವ ದೇಶದಲ್ಲಿ ಗೋಮಾಂಸ ಭಕ್ಷಣೆ ಅಪರಾಧವಾಗಿದೆಯೋ ಅಂತಹ ದೇಶ ಲಕ್ಷಾಂತರ ಗೋಮಾತೆಯರನ್ನು ಕೊಂದು ವಿದೇಶಗಳಿಗೆ ಮಾಂಸವನ್ನು ಮಾರಿಕೊಳ್ಳುತ್ತಿದೆ ಎಂದರೆ ನಂಬಲಾಗದ ಸತ್ಯ. ಹಾಗೂ ಹೀಗೆ ಗೋವನ್ನು ಕೊಂದು ಮಾರಿಕೊಳ್ಳುವವರು ಮುಸ್ಲಿಂ ಸಮುದಾಯದವರೂ ಅಲ್ಲಾ, ದಲಿತ ಸಮುದಾಯದವರಂತೂ ಮೊದಲೇ ಅಲ್ಲ. ಗೋಮಾಂಸೋತ್ಪಾದನೆಯನ್ನು ಕಾರ್ಪೋರೇಟ್ ಮಾದರಿ ವ್ಯವಹಾರ ಮಾಡಿಕೊಂಡು ಲಾಭ ಗಳಿಸುತ್ತಿರುವವರು ಮತ್ತದೇ ಮೇಲ್ವರ್ಗದ ಸೋ ಕಾಲ್ಡ್ ಹಿಂದೂಗಳು. ಇನ್ನೂ ಅಚ್ಚರಿ ಏನೆಂದರೆ ಅಹಿಂಸೋ ಪರಮೋಚ್ಚ ಧರ್ಮ ಎನ್ನುವ ಜೈನ ಕುಲ ಸಂಜಾತರೂ ಈ ಗೋಮಾಂಸ ಉತ್ಪಾದಕರು ಮತ್ತು ಮಾರಾಟಗಾರರು!

ಕುವೆಂಪು ಮಾತುಗಳು

ಈ ಹಿಂದೂ ಹಿಂದೂ ಎನ್ನುವ ಹಿಂದುತ್ವವಾದಿಗಳ ಹುನ್ನಾರದ ಬಗ್ಗೆ  ಕುವೆಂಪುರವರು ಹೇಳಿದ ಈ ಮಾತುಗಳು ವರ್ತಮಾನದ ಅರಿವನ್ನು ಜಾಗೃತ ಗೊಳಿಸುವಂತಿವೆ. “ಹಾಗೆ ನೋಡಿದರೆ ನಾನು ಹಿಂದೂ ಅಂತಾ ಹೇಳಿಕೊಳ್ಳುವುದೇ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ ಗಾಯತ್ರಿ ಗೋವು ಇವು ಪವಿತ್ರ ಅಂತಾ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡಾ ಪವಿತ್ರ ಅಲ್ಲವೇ? ಗಾಯತ್ರಿ ಒಂದು ಪ್ರಾರ್ಥನೆಯಾದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇ. ಇನ್ನು ಗೋವು ಕಡಿಯಬಾರದು ಅನ್ನೋದಾದರೆ ಅದೊಂದೇ ಪ್ರಾಣೀನಾ?  ಬೇರೆ ಪ್ರಾಣಿಗಳೇನು ಪಾಪ ಮಾಡಿದ್ದಾವೆ? ಅವೂ ಅಷ್ಟೇ ಮುಖ್ಯ. ಪೂಜೆ ಪುನಸ್ಕಾರ ವಿಧಿ ಇಂತವುಗಳನ್ನು ಮಾಡೋರು ಹಿಂದುಗಳಾದರೆ, ಇವ್ಯಾವುವನ್ನೂ ನಾನು ಮಾಡೋದಿಲ್ಲ. ನೀವು ಹೇಳುವ ಹಿಂದೂಗಳ ಯಾವ ಲಕ್ಷಣಗಳೂ ನನ್ನಲ್ಲಿಲ್ಲ” 

ಕುವೆಂಪು ಪ್ರಜ್ಞೆ ಎಂದರೆ ಇದು. ಹಿಂದೂ ಎಂಬ ಹುಸಿ ಭ್ರಮೆಯಲ್ಲಿರುವ ಪ್ರತಿಯೊಬ್ಬರಿಗೂ ಕುವೆಂಪುರವರ ಪ್ರಜ್ಞೆ ಮಾದರಿಯಾಗಬೇಕಿದೆ. ವೈದಿಕ ಆಚರಣೆಗಳಾಚೆ ಮನುಮತವನ್ನು ಹುಡುಕಬೇಕಿದೆ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ರಂಗಕರ್ಮಿ

More articles

Latest article