ಸಚಿವೆ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಪ್ರಕರಣ: ಬಿಜೆಪಿ ಶಾಸಕ ಸಿಟಿ ರವಿಗೆ ಹೈಕೋರ್ಟ್‌ ನಲ್ಲಿ ಹಿನ್ನೆಡೆ

Most read

ಬೆಂಗಳೂರು: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಮಾನಕಾರಿ ಪದ ಬಳಸಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಿಧಾನಪರಿಷತ್‌ ಸದಸ್ಯ ಸಿಟಿ ರವಿ ಹೈಕೋರ್ಟ್‌ ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಾಖಲಿಸಿರುವ ದೂರನ್ನು ರದ್ದುಗೊಳಿಸುವಂತೆ ಕೋರಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ. ಇದು ಶಾಸನಸಭೆಯ ವಿನಾಯಿತಿಗೆ ಒಳಪಡುವುದಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಸಿಟಿ ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ವಿಧಾನ ಪರಿಷತ್ನಲ್ಲಿ ಘಟನೆ ನಡೆದಿರುವುದರಿಂದ ರವಿ ಅವರಿಗೆ ಶಾಸಕಾಂಗ ವಿನಾಯಿತಿ ಇದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಆಗ ನ್ಯಾಯಮೂರ್ತಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರುದಾರರೇ ಎಂದು ಪ್ರಶ್ನಿಸಿದ್ದರು. ಇದೇ ವೇಳೆ ಹೆಬ್ಬಾಳ್ಕರ್ ಪ್ರಕರಣದಲ್ಲಿ ಕಕ್ಷಿದಾರರು ಎನ್ನುವುದನ್ನು ವಕೀಲರು ದೃಢಪಡಿಸಿದ್ದರು. ಈ ಎಲ್ಲಾ ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸಿ.ಟಿ. ರವಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದರು.

ಒಂದು ಹಂತದಲ್ಲಿ ನ್ಯಾಯಮೂರ್ತಿಗಳು ಏನನ್ನೋ ಮಾತನಾಡಲು ಸ್ವಾತಂತ್ರ್ಯ ಇದೆ ಎಂದು ಈ ಪ್ರಕರಣದಲ್ಲಿ ಆಡಿದ್ದಾರೆ ಎನ್ನಲಾದ ಮಾತುಗಳನ್ನೂ ಆಡಬಹುದೇ ಎಂದು ಪ್ರಶ್ನಿಸಿದರು. ಆಗ ರವಿ ಪರ ವಕೀಲರು ಮಾತನಾಡಿದ ವಿಷಯವನ್ನು ಕಾನೂನಿನಡಿಯಲ್ಲಿ ದೂಷಣೆ ಎಂದು ಪರಿಗಣಿಸಿದರೂ, ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಸದನ ಮಾತ್ರ ಹೊಂದಿರುತ್ತದೆ ಮತ್ತು ಯಾವುದೇ ಬಾಹ್ಯ ಸಂಸ್ಥೆ ಅಲ್ಲ ಎಂದು ವಾದಿಸಿದ ಪ್ರಸಂಗವೂ ನಡೆಯಿತು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಸಿಟಿ ರವಿ ಸಚಿವೆ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ಸಿಟಿ ರವಿ ಅಲ್ಲಗಳದಿದ್ದರು. ರವಿ ಅವರು ಅಶ್ಲೀಲವಾಗಿ ನಿಂದಿಸಿರುವುದು ಸರ್ಕಾರಿ ಟಿವಿಯಲ್ಲಿ ದಾಖಲಾಗಿರುವುದು ಇತ್ತೀಚೆಗೆ ದೃಢಪಟ್ಟಿತ್ತು. ಆದರೆ ಅದು ಸಿಟಿ ರವಿ ಅವರ ಧ್ವನಿಯೇ ಎಂಬುದನ್ನು ಖಚಿತಪಡಿಸಲು ಅವರ ಧ್ವನಿ ಮಾದರಿ ಕೋರಲಾಗಿತ್ತು. ಅದರೆ ಧವನಿ ಮಾದರಿ ನೀಡಲು ರವಿ ನಿರಾಕರಿಸಿದ್ದರು.

More articles

Latest article