Sunday, July 14, 2024

ಹುಂಡಿ ಹಣದ ಸುತ್ತ ಧರ್ಮದ್ವೇಷದ ಚಿತ್ತ

Most read

ಶೂದ್ರ ದೇಗುಲಗಳು ಅಭಿವೃದ್ಧಿ ಹೊಂದಿ ಎಲ್ಲಿ ಶಿಷ್ಟ ದೇವರ ಮಂದಿರಗಳಿಗೆ ಪೈಪೋಟಿ ಕೊಡುತ್ತವೋ ಎನ್ನುವ ಆತಂಕ ಅವರದ್ದಾಗಿದೆ. ಹೀಗಾಗಿ  ಹಿಂದುಳಿದ ವರ್ಗಗಳ ದೇವಸ್ಥಾನಗಳು ಯಥಾಸ್ಥಿತಿಯಲ್ಲೇ ಇರಬೇಕು ಹಾಗೂ ವೈದಿಕರ ದೇವಸ್ಥಾನಗಳು ಕೋಟ್ಯಂತರ ಹಿಂದೂಗಳ ಕಾಣಿಕೆ, ವಂತಿಗೆ ಪಡೆದು ಆರ್ಥಿಕವಾಗಿ ಬೆಳೆದು ಹಿಂದುತ್ವದ ಸ್ಥಾಪನೆಗೆ ಪೂರಕವಾಗಿರಬೇಕು ಎನ್ನುವುದೇ ಈ ಹಿಂದುತ್ವವಾದಿಗಳ ಹಿಡನ್ ಅಜೆಂಡಾ ಆಗಿದೆ -ಶಶಿಕಾಂತ ಯಡಹಳ್ಳಿ.

ಕರ್ನಾಟಕ ಸರಕಾರವು ಹಿಂದೂ ಧಾರ್ಮಿಕ ದತ್ತಿಗಳ ಕುರಿತು ತಿದ್ದುಪಡಿ ವಿಧೇಯಕವನ್ನು ಸರಕಾರ ಅಧಿವೇಶನದಲ್ಲಿ ಮಂಡಿಸಿದ್ದೇ ತಡ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಿಂದ ಭಾರೀ ವಿರೋಧ ವ್ಯಕ್ತವಾಯಿತು. ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಬಹುಮತದಿಂದ ಒಪ್ಪಿತವಾದ ಈ ವಿಧೇಯಕದ ನಿಯಮಾವಳಿಗಳ ಕುರಿತು ಫೆ.20 ರಂದು ಕರ್ನಾಟಕ ರಾಜ್ಯಪತ್ರದಲ್ಲೂ ಪ್ರಕಟಿಸಲಾಯಿತು. ಆದರೆ ತಿದ್ದುಪಡಿ ಕಾಯಿದೆಯಾಗಿ ಜಾರಿಗೆ ಬರಬೇಕೆಂದರೆ ವಿಧಾನ ಪರಿಷತ್ತಿನಲ್ಲೂ ಒಪ್ಪಿಗೆ ಪಡೆಯಬೇಕಿತ್ತು. ಆದರೆ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ  ಸಂಖ್ಯಾಬಲ ಹೆಚ್ಚಾಗಿದ್ದಿದ್ದರಿಂದ ಈ ತಿದ್ದುಪಡಿ ವಿಧೇಯಕಕ್ಕೆ ಸೋಲಾಯಿತು. 

ಈ ಹೊಸ ಮಸೂದೆಯಲ್ಲಿ ಸಿ ದರ್ಜೆಯ 34,000 ದೇವಸ್ಥಾನಗಳ ಆದಾಯದ ಮಿತಿಯನ್ನು 5 ಲಕ್ಷದಿಂದ 10 ಲಕ್ಷಕ್ಕೇರಿಸಿ, ಬಂದ ಆದಾಯವನ್ನೆಲ್ಲಾ ಆಯಾ ದೇವಸ್ಥಾನಗಳ ಅಭಿವೃದ್ದಿಗೆ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಅಂದರೆ ಈ ಹಿಂದಿರುವ ವಿಧೇಯಕದಲ್ಲಿ 5 ಲಕ್ಷದ ಒಳಗೆ ಆದಾಯವಿರುವ ದೇವಸ್ಥಾನಗಳು ಸರಕಾರಕ್ಕೆ ಯಾವುದೇ ಹಣ ಕೊಡಬೇಕಾಗಿರಲಿಲ್ಲ. ಹೊಸ ವಿಧೇಯಕದಲ್ಲಿ ಈ ಮಿತಿಯನ್ನು 10 ಲಕ್ಷಕ್ಕೆ ಏರಿಸಲಾಗಿದ್ದು, 10 ಲಕ್ಷದ ಒಳಗೆ ಆದಾಯವಿರುವ ಬಡ ದೇವಸ್ಥಾನಗಳು ಯಾವುದೇ ಪಾಲನ್ನೂ ಸರಕಾರಕ್ಕೆ ಸಲ್ಲಿಸಬೇಕಾಗಿಲ್ಲ. ಹೀಗಾಗಿ ಬಂದ ಆದಾಯವೆಲ್ಲಾ ಸಂಪೂರ್ಣವಾಗಿ ಆಯಾ ದೇವಸ್ಥಾನಗಳ ಅಭಿವೃದ್ದಿಗೆ ಬಳಸಬಹುದಾಗಿತ್ತು. ಆದರೆ ಪ್ರತಿಪಕ್ಷಗಳ ಅನಗತ್ಯ ವಿರೋಧದಿಂದಾಗಿ ಮುಜರಾಯಿ ಇಲಾಖೆಯ 34 ಸಾವಿರದಷ್ಟು ದೇವಸ್ಥಾನಗಳಿಗೆ ಅನ್ಯಾಯವಾಯಿತು. 5 ಲಕ್ಷದಿಂದ 10ಲಕ್ಷದ ವರೆಗಿನ ವರಮಾನ ಇರುವ ದೇವಸ್ಥಾನಗಳು ಕಡ್ಡಾಯವಾಗಿ 5% ಹಣ ಮುಜರಾಯಿ ಇಲಾಖೆಗೆ ಕೊಡುವ ಹಾಗಾಯ್ತು.

ಅದೇ ರೀತಿ ಕರ್ನಾಟಕದಲ್ಲಿ 193 ರಷ್ಟು ಬಿ ದರ್ಜೆಯ ದೇವಸ್ಥಾನಗಳಿವೆ. ಹಳೆಯ ವಿಧೇಯಕದಲ್ಲಿ 10 ಲಕ್ಷದಿಂದ 25 ಲಕ್ಷದ ಒಳಗಿನ ಆದಾಯವಿರುವ ಈ ದೇವಾಲಯಗಳು ಸರಕಾರಕ್ಕೆ 5% ಹಣ ಕೊಡಬೇಕಾಗಿತ್ತು. ಆದರೆ ಈ ಹೊಸ ತಿದ್ದುಪಡಿ ಮಸೂದೆಯಲ್ಲಿ ಈ ಮಿತಿಯನ್ನು ಒಂದು ಕೋಟಿಗೆ ಹೆಚ್ಚಿಸಲಾಗಿದೆ. ಅಂದರೆ ಮೊದಲು 25 ಲಕ್ಷ ಮೀರಿದ ಆದಾಯಕ್ಕೆ 10% ಸರಕಾರಕ್ಕೆ ಕೊಡಬೇಕಾಗಿತ್ತು, ಆದರೆ ಈಗ ಒಂದು ಕೋಟಿ ಆದಾಯದವರೆಗೂ ಕೇವಲ 5% ಕೊಟ್ಟರೆ ಸಾಕು. ಅಂದರೆ  ಬಿ ಕೆಟಗರಿಯ ದೇವಸ್ಥಾನಗಳು ಸರಕಾರಕ್ಕೆ ಕಟ್ಟಬೇಕಾಗಿದ್ದ 10% ಬದಲಾಗಿ 5% ಕಟ್ಟಬೇಕಷ್ಟೇ. ಹಾಗೂ ಉಳಿಕೆ 95% ಹಣವನ್ನು ಧಾರ್ಮಿಕ ಪರಿಷತ್ತಿನ ಮೂಲಕ ಆಯಾ ದೇವಸ್ಥಾನಗಳ ಯೋಜನೆಗಳಿಗೆ ಬಳಸಬಹುದಾಗಿತ್ತು. ಇದೂ ಸಹ ಬಿ ಕೆಟಗರಿಯ ದೇವಸ್ಥಾನಗಳಿಗೆ ಅನುಕೂಲಕರವಾಗಿತ್ತು. ಆದರೆ ಇದಕ್ಕೂ ಪ್ರತಿಪಕ್ಷಗಳು ಅಡ್ಡಗಾಲು ಹಾಕಿ ಬಿ ದರ್ಜೆಯ ದೇವಸ್ಥಾನಗಳಿಗೆ ಅನ್ಯಾಯ ಮಾಡಿದವು.

ಇನ್ನು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ 205 ಶ್ರೀಮಂತ ದೇವಸ್ಥಾನಗಳಿವೆ. ಇವುಗಳ ವಾರ್ಷಿಕ ಆದಾಯ ನೂರಾರು ಕೋಟಿಯಲ್ಲಿದೆ. ಒಂದು ಕೋಟಿಗಿಂತಲೂ ಹೆಚ್ಚಿರುವ ಎ ದರ್ಜೆಯ ದೇವಸ್ಥಾನಗಳು ತಮ್ಮ ವರಮಾನದಲ್ಲಿ 10% ಹಣವನ್ನು ಮುಜರಾಯಿ ಇಲಾಖೆಗೆ ನೀಡಬೇಕೆಂದು ಹೊಸ ವಿಧೇಯಕ ಹೇಳುತ್ತದೆ. ಮೊದಲಿದ್ದ ವಿಧೇಯಕದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ದೇವಸ್ಥಾನಗಳು ಎ ದರ್ಜೆಯಲ್ಲಿದ್ದು ವಾರ್ಷಿಕ ಆದಾಯದ 10% ಕೊಡಬೇಕಿತ್ತು. ಆದರೆ ಈ ಹೊಸ ಮಸೂದೆ ಪ್ರಕಾರ ಒಂದು ಕೋಟಿ ಆದಾಯ ಮೀರಿದರೆ ಮಾತ್ರ 10% ಹಾಗೂ ಆ ಮಿತಿಯ ಒಳಗೆ ಇದ್ದರೆ ಕೇವಲ 5% ಕೊಟ್ಟರೆ ಸಾಕು‌ ಇದರಿಂದಾಗಿ 25 ಲಕ್ಷದಿಂದ 1 ಕೋಟಿಯಷ್ಟು ಆದಾಯವಿರುವ ದೇವಸ್ಥಾನಗಳು ಸರಕಾರಕ್ಕೆ ಕೊಡಬೇಕಾಗಿದ್ದ ಹಣದಲ್ಲಿ 5% ಉಳಿಕೆ ಆಯಿತು. ಇದರಿಂದಾಗಿ ಎ ದರ್ಜೆಯ ಕೆಲವಾರು ದೇವಸ್ಥಾನಗಳಿಗೂ ಸಹ ಸರಕಾರಕ್ಕೆ ಕಟ್ಟುವ ಹಣದಲ್ಲಿ ಉಳಿತಾಯವಾಯ್ತು.

ಅಂದರೆ ಧಾರ್ಮಿಕ ದತ್ತಿ 2024ರ ವಿಧೇಯಕವು  ಎಲ್ಲಾ ದರ್ಜೆಯ ದೇವಸ್ಥಾನಗಳಿಗೂ ಆರ್ಥಿಕವಾಗಿ ಲಾಭದಾಯಕವಾಗಿದ್ದು ದೇವಸ್ಥಾನಗಳ ಅಭಿವೃದ್ದಿಗೆ ಹೆಚ್ಚಿನ ಹಣ ಉಳಿತಾಯವಾಯಿತು. ದೇವಸ್ಥಾನಗಳಿಗೆ ಆರ್ಥಿಕ ಹರಿವು ಹೆಚ್ಚಾಗುವಂತೆ ಮಾಡಲಾಗಿದ್ದರೂ ಪ್ರತಿಪಕ್ಷಗಳು ವಿರೋಧಿಸಿದವು ಹಾಗೂ ಮೇಲ್ಮನೆಯಲ್ಲಿ ಈ ವಿಧೇಯಕಕ್ಕೆ ಸೋಲಾಗುವಂತೆ ಒಂದಾದವು. 

ಸಂಘ ಪರಿವಾರದ ರಾಜಕೀಯ ಅಂಗವಾದ ಬಿಜೆಪಿ ಪಕ್ಷದ ಅಸ್ತಿತ್ವ ನಿಂತಿರುವುದೇ ಹಿಂದುತ್ವ ಹಾಗೂ ಅನ್ಯ ಧರ್ಮ ದ್ವೇಷದ ಮೇಲೆ. ಕಾಂಗ್ರೆಸ್ ಸರಕಾರವು ಹೊಸದಾಗಿ ಮಂಡಿಸಲಾದ ವಿಧೇಯಕದಲ್ಲಿ ಎರಡು ಪ್ರಮುಖ ಅಂಶಗಳು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿವೆ.

1. ಈ ಹೊಸ ವಿಧೇಯಕದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯ ನಿರ್ವಹಣೆಯ 19 ಎ ನಿಯಮಾವಳಿಯಲ್ಲಿ  “ಬಡತನದಲ್ಲಿರುವ ಅಥವಾ ಅಗತ್ಯ ಸಂದರ್ಭದಲ್ಲಿರುವ ಇತರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಸಹಾಯ ನೀಡಿಕೆ” ಎಂಬ ಅಂಶವನ್ನು ಸೇರಿಸಲಾಗಿದ್ದು ಸಂಘಿಗಳ ಕೋಪಕ್ಕೆ ಕಾರಣವಾಗಿದೆ. ದೇವಸ್ಥಾನಗಳ ಹುಂಡಿಗೆ ಸರಕಾರ ಕನ್ನ ಹಾಕಿ ಅನ್ಯ ಧರ್ಮೀಯರ ದೇವಸ್ಥಾನಗಳಿಗೆ ಹಣ ಕೊಡಲಾಗುತ್ತದೆ ಎಂದು ದೊಡ್ಡ ಧ್ವನಿಯಲ್ಲಿ ವಿರೋಧಿಸಲಾಯಿತು. ಆದರೆ ಅದೇ 19/ 2 (ii) ರಲ್ಲಿ ” ಒಂದು ಧಾರ್ಮಿಕ ಸಂಪ್ರದಾಯದ ಅಥವಾ ಅದರ ಯಾವುದೇ ಭಾಗದ ಸಂಸ್ಥೆಗೆ ನೀಡಿದ ವಂತಿಗೆಗಳು ಹಾಗೂ ಕೊಡುಗೆಗಳು ಆ ನಿರ್ಧಿಷ್ಟ ವರ್ಗ, ಸಂಪ್ರದಾಯದ ಅನುಕೂಲಕ್ಕಾಗಿ ಮಾತ್ರ ಬಳಸತಕ್ಕದ್ದು” ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಎರಡೂ ಪರಸ್ಪರ ವಿರುದ್ಧವಾದ ಸ್ಟೇಟ್ಮೆಂಟ್ ಗಳಾಗಿವೆಯಾದರೂ ಅಂತಿಮವಾಗಿ ಆಯಾ ಧಾರ್ಮಿಕ ಸಂಪ್ರದಾಯದ ಆದಾಯ ಆ ನಿರ್ಧಿಷ್ಟ ಸಂಪ್ರದಾಯದವರ ಅನುಕೂಲಕ್ಕಾಗಿ ಮಾತ್ರ ಬಳಸಲು ಈ ವಿಧೇಯಕ ಅವಕಾಶ ಕೊಡುತ್ತದೆ. ಈ ಎರಡೂ ಹೇಳಿಕೆಗಳಲ್ಲಿ ಗೊಂದಲ ಇದೆ ಎಂದು ಅನ್ನಿಸಿದ್ದರೆ ಪ್ರತಿಪಕ್ಷಗಳು ಸ್ಪಷ್ಟನೆಗಾಗಿ ಆಗ್ರಹಿಸಬೇಕಿತ್ತು. ಆದರೆ ಮೊದಲ ಹೇಳಿಕೆಯನ್ನಷ್ಟೇ ದೊಡ್ಡದಾಗಿ ಬಿಂಬಿಸಿ ಹಿಂದೂ ದೇವಸ್ಥಾನಗಳ ಆದಾಯ ಅನ್ಯ ಧರ್ಮೀಯರಿಗೆ ಕೊಡಲಾಗುತ್ತದೆ ಎಂದು ಹುಯಿಲೆಬ್ಬಿಸುವುದರ ಹಿಂದೆ ಧರ್ಮದ್ವೇಷವನ್ನು ಪ್ರಚಾರಪಡಿಸಿ ಹಿಂದೂಗಳನ್ನು ಸರಕಾರದ ಮೇಲೆ ಎತ್ತಿಕಟ್ಟುವ ಹುನ್ನಾರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

2. ಈ ವಿಧೇಯಕದ 25 ನೇ ನಿಯಮದಲ್ಲಿ ವ್ಯವಸ್ಥಾಪನಾ ಸಮಿತಿಯ ರಚನೆಯ ಕಾಲಂ. ಯಾವುದೇ ದೇವಸ್ಥಾನದ ವಾರ್ಷಿಕ ಆದಾಯ 25 ಲಕ್ಷ ಮೀರಿದರೆ ಅದರ ನಿರ್ವಹಣೆಗಾಗಿ ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕು ಹಾಗೂ ವಾರ್ಷಿಕ ಆದಾಯ 25 ಲಕ್ಷದ ಒಳಗೆ ಇದ್ದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತನ್ನು ರಚಿಸಬೇಕು ಎಂದು ಉಲ್ಲೇಖಿಸಲಾಗಿದೆ‌. ಈ ಸಮಿತಿಯಲ್ಲಿ ಯಾರ್ಯಾರು ಸದಸ್ಯರಾಗಿರಬೇಕು ಎಂಬುದನ್ನೂ ಹೇಳಲಾಗಿದೆ. ಕೊನೆಗೆ “ಸಂಯೋಜಿತ ಸಂಸ್ಥೆಯ ಸಂದರ್ಭದಲ್ಲಿ ಹಿಂದೂ ಮತ್ತು ಇತರ ಧರ್ಮಗಳೆರಡರಿಂದಲೂ ಸದಸ್ಯರನ್ನು ನೇಮಕ ಮಾಡಿಕೊಳ್ಳಬಹುದು” ಎಂದು ನಮೂದಾಗಿದೆ. ಈ ಅಂಶ ಬಿಜೆಪಿಯವರ ಕಣ್ಣು ಕೆಂಪಗಾಗಿಸಿದೆ. “ಅಯ್ಯೋ ಹಿಂದೂ ದೇವಸ್ಥಾನಗಳ ಸಮಿತಿಗೆ ಅನ್ಯ ಧರ್ಮೀಯರನ್ನು ಸದಸ್ಯರನ್ನಾಗಿಸಲಾಗುತ್ತಿದೆ” ಎಂದು ವಿಧೇಯಕದ ವಿರೋಧಕ್ಕೆ ವಿಕೃತ ಸಮರ್ಥನೆಯನ್ನು ಪ್ರತಿಪಕ್ಷಗಳವರು ಕೊಡತೊಡಗಿದರು. ಇಲ್ಲಿ ಸಂಯೋಜಿತ ಶಬ್ದದ ಅರ್ಥವೇ ಪ್ರತಿಪಕ್ಷಗಳಿಗೆ ಅರ್ಥವಾಗಿಲ್ಲ, ಆಗಿದ್ದರೂ ಧರ್ಮದ್ವೇಷ ಹುಟ್ಟಿಸುವುದಕ್ಕೆ ಈ ರೀತಿ ವಿರೋಧ ಮಾಡಲಾಗಿದೆ.

ಸಂಯೋಜಿತ ಅಂದರೆ ಎಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಿಯರು ಸೇರಿ ಒಂದೇ ಪ್ರಾರ್ಥನಾ ಸ್ಥಳದಲ್ಲಿ ಆರಾಧನೆ ಮಾಡುತ್ತಾರೋ ಅಂತಹ ದೇವಸ್ಥಾನಗಳಿಗೆ ಸಂಯೋಜಿತ ದೇವಾಲಯಗಳು ಎನ್ನಲಾಗುತ್ತದೆ. ಉದಾಹರಣೆಗೆ- ಬಾಬಾ ಬುಡನ್ ಗಿರಿಯಲ್ಲಿ ಒಂದೇ ಗುಹೆಯಲ್ಲಿ ಎರಡೂ ಧರ್ಮಗಳ ಆರಾಧನಾಲಯಗಳಿವೆ. ಇಂತಹ ಇನ್ನೂ ಕೆಲವಾರು ಜಂಟಿ ಆರಾಧನಾ ಸ್ಥಳಗಳು ಕರ್ನಾಟಕದಲ್ಲಿವೆ. ಅಂತಹ ಸ್ಥಳಗಳ ನಿರ್ವಹಣೆಗೆ ನಿಯೋಜಿತವಾಗುವ ಸಮಿತಿಯಲ್ಲಿ ಹಿಂದೂಯೇತರ ಅನ್ಯ ಧರ್ಮೀರರನ್ನೂ ಸದಸ್ಯರನ್ನಾಗಿಸಬೇಕು ಎಂದು ಈ ವಿಧೇಯಕ ಹೇಳುತ್ತದೆಯೇ ಹೊರತು ಎಲ್ಲಾ ಹಿಂದೂ ದೇವಸ್ಥಾನಗಳ  ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಧರ್ಮಿಯರು ಇರಬೇಕೆಂದಲ್ಲ.

ಅರ್ಚಕರ ಸಂಘದಿಂದ ಬಿಜೆಪಿಗೆ ವಿರೋಧ

ಪ್ರತಿಪಕ್ಷಗಳಿಗೆ ಮಾಹಿತಿಯ ಕೊರತೆ ಇದೆಯೋ? ಅಥವಾ ಪ್ರತಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಆಳುವ ಪಕ್ಷಗಳು ಸೋತಿವೆಯೋ ಗೊತ್ತಿಲ್ಲ. ಆದರೆ ಈ ವಿಧೇಯಕವನ್ನು ಮೇಲ್ಮನೆಯಲ್ಲಿ ಸೋಲಿಸುವ ಮೂಲಕ ಬಿಜೆಪಿ ಪಕ್ಷವು ಬಿ ಮತ್ತು ಸಿ ದರ್ಜೆಯ 34 ಸಾವಿರಕ್ಕೂ ಹೆಚ್ಚಿನ ದೇವಸ್ಥಾನಗಳಿಗೆ ಅನ್ಯಾಯ ಮಾಡಿದ್ದಂತೂ ಸತ್ಯ. ಈ ವಿಧೇಯಕವನ್ನು ವಿರೋಧಿಸುವ  ಮೂಲಕ ಬಡ ದೇವಾಲಯಗಳ ಲಕ್ಷಾಂತರ ಬಡ ಅರ್ಚಕರ ಬದುಕಿಗೆ  ತೊಂದರೆಯಾಗಿದ್ದಂತೂ ದಿಟ. ಹಿಂದೂ ಧರ್ಮ ಹಾಗೂ ಹಿಂದೂಗಳ ಪರವಾಗಿರುವ ಪಕ್ಷವೆಂದು ಬಿಂಬಿಸಿಕೊಳ್ಳುವ ಬಿಜೆಪಿ ಪಕ್ಷವೇ ಸಹಸ್ರಾರು ದೇವಸ್ಥಾನಗಳು ಹಾಗೂ ಪುರೋಹಿತರ ಹಿತಾಸಕ್ತಿಯ ವಿರುದ್ಧವಾಗಿ ನಡೆದು ಕೊಂಡಿರುವುದು ಅಕ್ಷಮ್ಯ. 

ಆದರೆ ಬಿಜೆಪಿಯ ಈ ವಿರೋಧದ ಹಿಂದೆ ಹಿಡನ್ ಅಜೆಂಡಾ ಇರುವುದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಈ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಿದ ದಿನ ಯಾವುದೇ ಪ್ರತಿಪಕ್ಷಗಳೂ ವಿರೋಧಿಸಲಿಲ್ಲ. ಆದರೆ ಮರು ದಿನ ಈ ಮಸೂದೆ ಕುರಿತ ಚರ್ಚೆಯಲ್ಲಿ ಜೋರಾಗಿ ವಿರೋಧ ಮಾಡಲಾಯಿತು. ಎರಡೂ ಪ್ರತಿಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸುತ್ತಾ ವಿಧೇಯಕದ ಪ್ರತಿಗಳನ್ನು ಹರಿದು ಗಾಳಿಗೆ ತೂರಿದರು. ಒಂದೇ ದಿನದಲ್ಲಿ ಇಂತಹ ಬದಲಾವಣೆಗೆ ಕಾರಣ ಏನು? ಅದಕ್ಕೆ ಕಾರಣ ಕೇಶವಕೃಪಾದಿಂದ ಬಂದ ಆದೇಶ. “ಶತಾಯ ಗತಾಯ ಈ ವಿಧೇಯಕ ಜಾರಿಯಾಗದಂತೆ ನೋಡಿಕೊಳ್ಳಿ ಹಾಗೂ ಕಾಂಗ್ರೆಸ್ ನ್ನು ಹಿಂದೂ ವಿರೋಧಿ ಸರಕಾರ ಎಂದು ಬಿಂಬಿಸಿ” ಎಂದು ಸಂಘದ ರಾಜ್ಯ ನಾಯಕರು ಹೇಳಿದ್ದನ್ನೇ ಬಿಜೆಪಿಗರು ಸದನದಲ್ಲಿ ಮಾಡಿದ್ದು ಹಾಗೂ ಮೇಲ್ಮನೆಯಲ್ಲಿ ಈ ವಿಧೇಯಕ ಸೋಲಿಸಿದ್ದು. ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಜೆಡಿಎಸ್ ಕೂಡಾ ವಿವೇಚನೆ ಕಳೆದುಕೊಂಡು ಬಿಜೆಪಿಯ ಜೊತೆಯಾಯಿತು.

ಇದನ್ನೂ ಓದಿದ್ದೀರಾ? ಹುಂಡಿ ಹಣ ವಿವಾದ- ಧರ್ಮದ್ವೇಷವಷ್ಟೇ ಕಾರಣ

ಆದ್ದರಿಂದ ಬಿಜೆಪಿ ಸದಸ್ಯರುಗಳನ್ನು ಪ್ರಚೋದಿಸಿ ಈ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ವಿರೋಧಿಸಲಾಯ್ತು ಹಾಗೂ ವಿಧಾನ ಪರಿಷತ್ತಿನಲ್ಲಿರುವ ಸಂಖ್ಯಾಬಲವನ್ನು ಬಳಸಿಕೊಂಡು ಸೋಲಿಸಿ ಜೈಶ್ರೀರಾಂ ಎಂದು ಘೋಷಣೆ ಕೂಗಲಾಯ್ತು. ಸಂಘದ ಆಳ ಅಗಲ ಅರಿಯದ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯಾಯ್ತು. ಹಿಂದುತ್ವವಾದಿಗಳ ಹುನ್ನಾರಕ್ಕೆ ಬಲಿಯಾಗಿ ಹಿಂದುಳಿದ ವರ್ಗಗಳ ಸಹಸ್ರಾರು ಬಡ ದೇವಸ್ಥಾನಗಳ ಅಭಿವೃದ್ಧಿ ಕುಂಠಿತವಾಯ್ತು. 

More articles

Latest article