ಯುಜಿಸಿ ಎಂಬ ಆನೆಯ ಕಾಲಿಗೆ ಸಿಕ್ಕ  ಅತಿಥಿ ಉಪನ್ಯಾಸಕರು

Most read

ಯುಜಿಸಿ  ನಿಗದಿಪಡಿಸುವ ಅರ್ಹತೆ ಪಡೆದ ಈಗಿನ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿ ಯುಜಿಸಿ ನಿಯಮಾವಳಿಗಳನ್ನು ಪಾಲಿಸಿ ನೆಟ್, ಸ್ಲೆಟ್, ಪಿಎಚ್ಡಿ ಆದವರನ್ನು ಮಾತ್ರ ಅತಿಥಿ ಉಪನ್ಯಾಸಕರನ್ನಾಗಿ ತೆಗೆದುಕೊಳ್ಳಬೇಕೆಂದು ಅಹವಾಲು ಹಾಕಿದ್ದಾರೆ. ಇದರಿಂದಾಗಿ ಈಗಿನ ದಿನಾಂಕಕ್ಕೆ ಒಂದೂವರೆ ತಿಂಗಳ ಕಾಲ ಅತಿಥಿ ಉಪನ್ಯಾಸಕರನ್ನು ನಿಯೋಜಿಸದೆ ನ್ಯಾಯಾಲಯದತ್ತ ಮುಖ ಮಾಡಿ ಸರ್ಕಾರ ಕುಳಿತಿದೆ. ವಿದ್ಯಾರ್ಥಿಗಳಿಗೆ ಪಾಠ ಇಲ್ಲ. ಸೆಮಿಸ್ಟರ್ ಮುಗಿಯುತ್ತಾ ಬಂದಿದೆ. ಅತಿಥಿ ಉಪನ್ಯಾಸಕರಿಗೆ ಕೆಲಸ ಇಲ್ಲ, ವೇತನ ಇಲ್ಲ ವೃಂದಾ ಹೆಗಡೆ, ಸಾಗರ.

ಅತಿಥಿ ಉಪನ್ಯಾಸಕರ ಬಗ್ಗೆ ಬರೆಯದೆ ಹೇಗೆ ಮುಂದೆ ಹೋಗಲಿ? ಯಾರಿವರು?

ದೇಶದ ನಿರುದ್ಯೋಗ ಸಮಸ್ಯೆಯ ದ್ಯೋತಕ ಈ ಅತಿಥಿ ಉಪನ್ಯಾಸಕರು. ಎಲ್ ಪಿ ಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಆರ್ಥಿಕತೆ ಜಾರಿಯಾದಾಗಿನಿಂದಲೂ ಸರ್ಕಾರಗಳು ಸರ್ಕಾರಿ ಹುದ್ದೆಗಳನ್ನು ತಾತ್ಕಾಲಿಕ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಾ ಬಂದವು. ತಾತ್ಕಾಲಿಕ ಆಧಾರದಲ್ಲಿ ಕೆಲಸ ಮಾಡುವವರಿಗೆ ಯಾವತ್ತೂ ಉದ್ಯೋಗ ಭದ್ರತೆಯ ನೆಮ್ಮದಿ ಇರುವುದಿಲ್ಲ. ಅದು ನಿರುದ್ಯೋಗಕ್ಕೆ  ಸಮಾನ. ಎಂಭತ್ತರ ದಶಕದಲ್ಲಿ ಹೀಗೆ ಕಾಂಟ್ರಾಕ್ಟ್ ಬೇಸಿಸ್, ಸ್ಟಾಪ್ ಗ್ಯಾಪ್  ಅಂತೆಲ್ಲಾ ಸೇರಿಕೊಂಡವರು ಖಾಯಂ ಉಪನ್ಯಾಸಕರಾಗಿ ನಂತರ ಯುಜಿಸಿ ವೇತನವನ್ನೂ ಪಡೆದು ಈಗ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿದ್ದಾರೆ. ನಂತರ ಸರ್ಕಾರಗಳು ಏಕಾಏಕಿ  ತಾತ್ಕಾಲಿಕ ಹುದ್ದೆಯನ್ನು ಅರೆಕಾಲಿಕಗೊಳಿಸಿತು. ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಕರ, ಉಪನ್ಯಾಸಕರ ಹುದ್ದೆಗಳು ಕಾಲಕಾಲಕ್ಕೆ ಸೃಷ್ಟಿಯಾಗುತ್ತಲೇ ಇರುತ್ತವೆ. ಹಾಗೇ ಕರ್ನಾಟಕದಲ್ಲಂತೂ ತೊಂಭತ್ತರ ದಶಕದಿಂದೀಚೆಗೆ ಪದವಿ ಕಾಲೇಜುಗಳಿಗೆ ಬರುತ್ತಿರುವವರು ಮೊದಲ ಪೀಳಿಗೆಯ ವಿದ್ಯಾರ್ಥಿಗಳು. ಇವರಲ್ಲಿ ಹೆಚ್ಚಿನವರು ದೇವರಾಜ ಅರಸು ಅವರ ಕಾಲದ ಭೂ ಕಾಯ್ದೆಯ ಫಲಾನುಭವಿಗಳು..  ಅರಸು ಹರಸಿದ ಉಚಿತ ವಸತಿನಿಲಯಗಳೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲು ಒಂದು ಕಾರಣವಾಗಿದೆ ಎಂದರೆ ತಪ್ಪೇನಿಲ್ಲ. ಹೀಗಿರುವಾಗ  ಸಹಜವಾಗಿ ಅಧ್ಯಾಪಕರ ಅವಶ್ಯಕತೆ ಹೆಚ್ಚುತ್ತಾ ಹೋಗಿದೆ. ಉಪನ್ಯಾಸಕರಿಲ್ಲದ ವಿಶ್ವವಿದ್ಯಾಲಯಗಳು ಇರಲು ಸಾಧ್ಯವೆ?  ಎಲ್ ಪಿ ಜಿ ಗೆ ಒಳಗಾದ ದೇಶ ಎಲ್ಲೂ ಸಮರ್ಪಕವಾಗಿ  ನೇಮಕಾತಿ ಮಾಡದ ಕಾರಣ ವಿದ್ಯಾಲಯಗಳು ತಾತ್ಕಾಲಿಕ ನೇಮಕಾತಿಯ ಮೂಲಕ ಬಂದವರ ಮೇಲೆ ಅವಲಂಬಿತವಾಗಿ ಸರಿಸುಮಾರು ನಾಲ್ಕು ದಶಕಗಳ ಹಿಂದಿನಿಂದ ಕಾರ್ಯ ನಿರ್ವಹಿಸುತ್ತಿವೆ. ಈಗ ಪದವಿ ಕಾಲೇಜುಗಳಲ್ಲಿ ಖಾಯಂ ಮತ್ತು ತಾತ್ಕಾಲಿಕ ಉಪನ್ಯಾಸಕರ ಅನುಪಾತ  30:70 ಇದೆ.!!! ಆಗಾಗ ಐದೋ ಆರೋ ವರ್ಷಕ್ಕೊಮ್ಮೆ ಹತ್ತು ಸಾವಿರ ಹುದ್ದೆಗಳಿಗೆ ಕೇವಲ ಒಂದು ಸಾವಿರ ನೇಮಕಾತಿ ಮಾಡಿಕೊಳ್ಳುತ್ತದೆ. ಇದು ಎಲ್ಲಾ ವಲಯಗಳಲ್ಲೂ ಇರುವುದರಿಂದ ಎಲ್ಲೂ ಕೆಲಸ ಸಿಗದೆ ಒದ್ದಾಡುವ ಪರಿಸ್ಥಿತಿ ಹೆಚ್ಚಿನವರದಾಗಿದೆ.

ಹೀಗೆ ಅರೆಕಾಲಿಕ ಹುದ್ದೆಯಲ್ಲಿ  ಕನಿಷ್ಠ ವೇತನಕ್ಕೆ ದುಡಿಯುತ್ತಾ ಬದುಕಿಗಾಗಿ ಬೇರೆ ಕೆಲಸವನ್ನೂ ಅವಲಂಬಿಸಬೇಕಿರುವ ಹಲವರಿಗೆ  ಸರ್ಕಾರಗಳು ಕಾಲಕಾಲಕ್ಕೆ ಯುಜಿಸಿ ನಿಗದಿಪಡಿಸುವ ಅರ್ಹತೆಯನ್ನು ಪಡೆದುಕೊಳ್ಳಲು ಸೂಚಿಸುತ್ತದೆ.  ಖಾಯಂ ಉಪನ್ಯಾಸಕರಿಗೆ ಕೊಡುವ ಓರಿಯೆಂಟೇಶನ್ ಕೋರ್ಸ್, ರಿಫ್ರೆಶರ್ ಕೋರ್ಸ್ ನಂತಹಾ ಯಾವುದೇ ಕೋಚಿಂಗ್ ನ ಸಹಾಯ ಇವರಿಗಿಲ್ಲ.

ಸಾಂದರ್ಭಿಕ ಚಿತ್ರ

ಮಾಸಿಕ ಆರುನೂರು ರೂಪಾಯಿಯಷ್ಟು ಕನಿಷ್ಠ ವೇತನ ಕೊಟ್ಟು ಸೇವೆ ಪಡೆದ ಸರ್ಕಾರಗಳು ಪ್ರತಿ ವರ್ಷ ಉಪನ್ಯಾಸಕರು ಬೀದಿಗೆ ಇಳಿದು ಹಣ, ಶಕ್ತಿ ಕಳೆದುಕೊಂಡು ಪ್ರತಿಭಟನೆ ಮಾಡಿದ ಮೇಲೇ ವೇತನ ಹೆಚ್ಚಳ ಮಾಡುವ ರೂಢಿ ಮಾಡಿಕೊಂಡಿತ್ತು. ಇದರೊಂದಿಗೆ ಕೆಲವು ಪ್ರಾಂಶುಪಾಲರ, ವಿಭಾಗದ ಮುಖ್ಯಸ್ಥರ ಕಿರುಕುಳ ಬೇರೆ. ಅನುದಾನ ಬಿಡುಗಡೆ ಆದ ಮೇಲೆ ಪ್ರಾಂಶುಪಾಲರ, ಗುಮಾಸ್ತರುಗಳ ಬೆನ್ನು ಹತ್ತಿ ವೇತನ ಬಿಡುಗಡೆ ಮಾಡಿಸಿಕೊಳ್ಳುವ ಪರಿಸ್ಥಿತಿ ಕೆಲವು ಕಡೆ. ಪ್ರತೀ ಬಾರಿ ಮಾನವೀಯತೆಯ ದೃಷ್ಟಿಯಲ್ಲಿ ನಮ್ಮನ್ನು ಪರಿಗಣಿಸಿ ಎಂದು ಗೋಗರೆಯಬೇಕಾದ ಪರಿಸ್ಥಿತಿ- ಮಾನವೀಯತೆ ಎಂಬ ಶಬ್ದದ ಬಗ್ಗೆಯೇ ರೇಜಿಗೆ ಹುಟ್ಟಿಸುವಷ್ಟು.

ಈ ನಡುವೆ 2009 ರಲ್ಲಿ ಎಂಫಿಲ್ ಅನ್ನು ಯುಜಿಸಿ ಅರ್ಹತೆಯೆಂದು ಪರಿಗಣಿಸಿ ಖಾಯಂ ಹುದ್ದೆಗೆ ನೇಮಕ ಮಾಡಿಕೊಂಡ ಮರು ವರ್ಷ ಯಾವುದೋ ಅಕ್ರಮ ವಿದ್ಯಾಲಯಗಳು ಅಕ್ರಮವಾಗಿ ಕೊಟ್ಟ ಪ್ರಮಾಣಪತ್ರದ ಕಾರಣಕ್ಕೆ ಎಲ್ಲಾ ಎಂಫಿಲ್ ಡಿಗ್ರಿಗಳನ್ನು ಅಮಾನ್ಯ ಮಾಡಿತು!! 2009 ಜೂನ್ ಒಳಗಿನ ಎಂಫಿಲ್ ಪದವಿಯನ್ನು ಮಾನ್ಯ ಎಂದು ಒಪ್ಪಿ ಅದಕ್ಕೆ ಅಂಕ ನಿಗದಿ ಮಾಡಿದ ಸರ್ಕಾರ ವೇತನದಲ್ಲಿ ಮಾತ್ರ  ಯುಜಿಸಿ ಅರ್ಹತೆಯವರಿಗೆ ಕೊಡುವ ಹೆಚ್ಚಳವನ್ನು ಕೊಡುವುದಿಲ್ಲ.!!

ಹಾಗೂ ಹೀಗೂ ಸಾಗುತ್ತಿದ್ದ ಅರೆಕಾಲಿಕದಿಂದ ಅತಿಥಿಯೆಂದು ನಾಮಬದಲಾವಣೆಗೊಂಡ ಉಪನ್ಯಾಸಕರ ಪ್ರತಿಭಟನೆಯ ಕಾರಣಕ್ಕೆ  ಮಾಸಿಕ ಹನ್ನೊಂದೂವರೆ ಮತ್ತು ಹದಿಮೂರೂವರೆ ಸಾವಿರ ಪಡೆಯುತ್ತಿದ್ದವರಿಗೆ 2022 ರಲ್ಲಿ ಬಿಜೆಪಿ ಸರ್ಕಾರ ಕೆಲಸದ ಅವಧಿಯನ್ನು ಎಂಟು ಗಂಟೆಯಿಂದ ಹದಿನೈದಕ್ಕೆ ಏರಿಸಿ ವೇತನವನ್ನು ರು.26,000/- ಮತ್ತು   30,000/-  ಮಾಡಿತು.  ಅಹಿಂಸಾ ಪ್ರತಿಭಟನೆ ನಡೆಸುತ್ತಿದ್ದ ಉಪನ್ಯಾಸಕರು ಸೇವಾಭದ್ರತೆಯ ಬೇಡಿಕೆ ಇಟ್ಟು ಸ್ವಲ್ಪ ಒತ್ತಾಯ ಮಾಡಿದ ಕೂಡಲೇ ನಿರ್ಗಮಿಸಿದ  ಉನ್ನತ ಶಿಕ್ಷಣ ಮಂತ್ರಿಗಳ ಹಿಂದೆಯೇ ಮಿಲಿಟರಿ ನುಗ್ಗಿ ಎಲ್ಲರನ್ನೂ ಚದುರಿಸಿತು!! ಕೃತಾರ್ಥರಾದ ಅತಿಥಿ ಉಪನ್ಯಾಸಕ ಬಳಗ ಮಂತ್ರಿಗಳಿಗೆ ಧಾರವಾಡದಲ್ಲಿ ಸನ್ಮಾನ ಏರ್ಪಡಿಸಿತು. ಮಂತ್ರಿಗಳು ಹೇಳಿದ್ದೇನೆಂದರೆ ನಮ್ಮ ಸರ್ಕಾರ ನಿಮ್ಮ ವೇತನವನ್ನು ದುಪ್ಪಟ್ಟು ಹೆಚ್ಚಿಸಿರುವುದರಿಂದ ಕೋಟಿಗಟ್ಟಲೆ ಆರ್ಥಿಕ ಹೊರೆಯನ್ನು ಹೊತ್ತಿದೆ ಎಂದು. ಆದರೆ ಕೆಲಸದ ಅವಧಿ ದುಪ್ಪಟ್ಟಾಗಿರುವುದನ್ನು ಅದರಿಂದಾಗಿ ಅರ್ಧದಷ್ಟು ಜನ ಈ ಅರೆ ಕೆಲಸವೂ ಇಲ್ಲದೆ ಸಂಪೂರ್ಣ ನಿರುದ್ಯೋಗಿಗಳಾದ್ದನ್ನು ಅತಿಥಿಗಳು ಮನಸ್ಸಿನಲ್ಲೇ ಇಟ್ಟುಕೊಂಡರೇ ಹೊರತು ಸನ್ಮಾನ್ಯರಲ್ಲಿ ಹೇಳಲಿಲ್ಲ.

ಅದಾದ ನಂತರ ಬಂದ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಮತ್ತೆ ವೇತನ ಪರಿಷ್ಕರಣೆ ಆಯಿತು. ಅದು ಯುಜಿಸಿ ಅರ್ಹರಿಗೆ ನಲ್ವತ್ತು ಮತ್ತು ಉಳಿದವರಿಗೆ ಮೂವ್ವತ್ತಾರು ಸಾವಿರ. ತಿಂಗಳಿಗೆ ಒಂದು ರಜೆ. ಆದರೆ ಆ ರಜೆಯನ್ನು ಅದೊಂದೇ ತಿಂಗಳಿಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಆ ತಿಂಗಳು ರಜೆ ಬೇಡ ಅಂದರೆ ಒಂದು ರಜೆ ವ್ಯರ್ಥ ಆಗುತ್ತದೆ ಅಷ್ಟೇ. ಇನ್ನೊಂದು ತಿಂಗಳಲ್ಲಿ  ಕಾರಣಾಂತರಗಳಿಂದ ಉದಾಹರಣೆಗೆ ಮೈ ಹುಷಾರಿಲ್ಲದೆ ಎರಡು ದಿನ ರಜೆ ಹಾಕಿದರೆ ಒಂದು ದಿನದ ವೇತನ ಕಡಿತ ಆಗುತ್ತದೆ. ಮತ್ತು ಕೆಲವು ಕಾಲೇಜುಗಳಲ್ಲಿ ಮಾತ್ರ  ವೃತ್ತಿ ತೆರಿಗೆಯನ್ನೂ ಕಟ್ಟಿಸಲಾಗಿದೆ. ದಶಕಗಳ ಕಾಲ ಹೋರಾಡಿದ ಮೇಲೆ ಹೆರಿಗೆ ರಜೆ (ವೇತನ ರಹಿತ)ಮಂಜೂರು ಆಗಿದೆ.

ಈಗ ಪ್ರಸ್ತುತ ಹೊಸ ಸಮಸ್ಯೆ ತಲೆದೋರಿದೆ. ಯುಜಿಸಿ  ನಿಗದಿಪಡಿಸುವ ಅರ್ಹತೆ ಪಡೆದ ಈಗಿನ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿ ಯುಜಿಸಿ ನಿಯಮಾವಳಿಗಳನ್ನು ಪಾಲಿಸಿ ನೆಟ್, ಸ್ಲೆಟ್, ಪಿಎಚ್ಡಿ ಆದವರನ್ನು ಮಾತ್ರ ಅತಿಥಿ ಉಪನ್ಯಾಸಕರನ್ನಾಗಿ ತೆಗೆದುಕೊಳ್ಳಬೇಕೆಂದು ಅಹವಾಲು ಹಾಕಿದ್ದಾರೆ. ನ್ಯಾಯಾಲಯ ಸಹಜವಾಗಿ ತನ್ನ  ಪ್ರಕ್ರಿಯೆ ನಡೆಸುತ್ತಿದೆ. ಇದರಿಂದಾಗಿ ಈಗಿನ ದಿನಾಂಕಕ್ಕೆ ಒಂದೂವರೆ ತಿಂಗಳ ಕಾಲ ಅತಿಥಿ ಉಪನ್ಯಾಸಕರನ್ನು ನಿಯೋಜಿಸದೆ ನ್ಯಾಯಾಲಯದತ್ತ ಮುಖ ಮಾಡಿ ಸರ್ಕಾರ ಕುಳಿತಿದೆ. ವಿದ್ಯಾರ್ಥಿಗಳಿಗೆ ಪಾಠ ಇಲ್ಲ. ಸೆಮಿಸ್ಟರ್ ಮುಗಿಯುತ್ತಾ ಬಂದಿದೆ. ಅತಿಥಿ ಉಪನ್ಯಾಸಕರಿಗೆ ಕೆಲಸ ಇಲ್ಲ, ವೇತನ ಇಲ್ಲ. ಬದಲು ಆತಂಕ ಏರುಗತಿಯಲ್ಲಿ ಇದೆ.

ಹೈ ಕೋರ್ಟ್, ಬೆಂಗಳೂರು

ಇಂದು ನ್ಯಾಯಾಧೀಶರು ಯಾಕೆ ನೆಟ್, ಸ್ಲೆಟ್ ಅಥವಾ ಪಿಎಚ್ಡಿ ಮಾಡಿಕೊಳ್ಳಲಿಲ್ಲ? ಎಂದು ಕೇಳಿದಾಗ ವಾಸ್ತವ ಚಿತ್ರಣ ಕೊಡುವ ಪ್ರಯತ್ನ ನಡೆಸಿದರು ವಕೀಲರು. ಆದರೆ ಆ ಕಾಲದಲ್ಲಿ ಯುಜಿಸಿ ಬಯಸಿದ 55% ಅಂಕ ಗಳಿಸಿ ಅರೆಕಾಲಿಕ, ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದವರಿಗೆ ಯಾವುದೇ ರೀತಿಯ ಸವಲತ್ತು ಕೊಡದೆ ತಮ್ಮ ಬದುಕು ಸಾಗಿಸಲು ಉಳಿದ ಸಮಯದಲ್ಲಿ ಬೇರೆ ಏನೋ ಕೆಲಸ ಮಾಡಬೇಕಾದ ಅನಿವಾರ್ಯತೆಯಿರುವುದರಿಂದ ಅಧ್ಯಯನಕ್ಕೂ ಸಮಯವಿರದೆ ಬಳಲಿದವರನ್ನು ಈಗ ಏಕಾಏಕಿ ತುಳಿಯುವ ಕೆಲಸವಾಗುತ್ತಿದೆ. ಪ್ರತಿ ವರ್ಷವೂ ಕೌನ್ಸೆಲಿಂಗ್ ಆಗುವುದರಿಂದ, ನಂತರದ ಅಭ್ಯರ್ಥಿಗಳು ಅಂದರೆ ಸೆಮಿಸ್ಟರ್ ವ್ಯವಸ್ಥೆಯ ಅಭ್ಯರ್ಥಿಗಳು ಹೆಚ್ಚಿನ ಅಂಕ ಪಡೆಯುವುದರಿಂದ (ಅಂಕದ ಮಾನದಂಡ ಬಹಳಷ್ಟು ವೈವಿಧ್ಯಮಯವಾಗಿದೆ.) ಹಿರಿಯ ಉಪನ್ಯಾಸಕರು ಸ್ಪರ್ಧಿಸಲು ಸಾಧ್ಯವಿಲ್ಲ.

ಮೇಲಾಗಿ ಇದೇ ಯುಜಿಸಿ ನಿಯಮ ಜಾರಿಗೆ ಬಂದಾಗ ಆಗಲೇ ಬರಿಯ ಸ್ನಾತಕೋತ್ತರ ಪದವಿಯ ಅಂಕದ (ಬರಿಯ ಪಾಸ್ ಅಂಕ ಪಡೆದವರೂ ಇದ್ದರು) ಮೇಲೆ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಖಾಯಂ ಉಪನ್ಯಾಸಕರಿಗೆ ಯಾವುದೇ ಈ ಬಗೆಯ ಷರತ್ತು ಹಾಕದೇ ಅವರನ್ನು ಮುಂದುವರೆಸಲಾಗಿತ್ತು. ವೇತನ ಹೆಚ್ಚಳವನ್ನು ಅನುಭವಿಸಿ, ನಂತರ ಪಿಂಚಣಿಯನ್ನೂ ಕೈತುಂಬಾ ತೆಗೆದುಕೊಳ್ಳುತ್ತಿರುವವರು ಇರುವಾಗ ಬಡ ಅತಿಥಿ ಉಪನ್ಯಾಸಕರಿಗೇಕೆ ಪದೇಪದೇ ಬರೆಯೆಳೆಯುವುದು? ಯುಜಿಸಿ ನಿಯಮವಾಗಲಿ, ಸರ್ಕಾರದ ಯಾವುದೇ ಇತರ ನಿಯಮಗಳಾಗಲಿ ಯಾವತ್ತೂ ಪೂರ್ವಾನ್ವಯ (retrospective)ವಾಗಿ ಇರುವುದಿಲ್ಲ. ಆದರೆ ಅತಿಥಿ ಉಪನ್ಯಾಸಕರ ವಿಷಯದಲ್ಲಿ ಮಾತ್ರ ಪ್ರತೀ ಬಾರಿ ನಿಯಮಗಳು ಪೂರ್ವಾನ್ವಯವಾಗುವುದೇಕೆ?

ಈ ಬಿಕ್ಕಟ್ಟು ಪದೇಪದೇ ಬೇರೆ ಬೇರೆ ರೂಪದಲ್ಲಿ ಕಾಡುತ್ತಿರುವುದರ ಹಿಂದಿರುವ ಕಾರಣವೇ ನಿರುದ್ಯೋಗ ಸಮಸ್ಯೆ. ವಿದ್ಯೆ ಗಳಿಸಿದ ಮೇಲೂ ಯಾವುದೇ ಉದ್ಯೋಗ ಸಿಗದ ಕಾರಣ ಹತಾಶರಾದ ಯುವಜನಾಂಗ ಹಲವು ದಾರಿ ಹಿಡಿಯುತ್ತಿದೆ. ಈ ವಿದ್ಯಮಾನವನ್ನು ವಿಸ್ತಾರವಾಗಿ ಗ್ರಹಿಸದ ರಾಜಕಾರಣಿಗಳು, ನ್ಯಾಯಾಧೀಶರು ಸಮಸ್ಯೆಯನ್ನು ಜಟಿಲಗೊಳಿಸುತ್ತಾ ಸಾಗುತ್ತಾರೆ.Highcourt,

16-9-2025 ರಂದು ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳು ಪ್ರಸ್ತುತ ಸಮಸ್ಯೆ ಗೆ ರೂಪಕವಾಗಿ ಹೇಳಿದ್ದು ಹೀಗೆ-ಏನು ಮಾಡಲು ಬರುತ್ತದೆ? ಆನೆ ನಡೆಯುವಾಗ ಅದರ ಕಾಲಿಗೆ ಸಿಕ್ಕ ಇರುವೆಗಳು ಸಾಯುತ್ತವೆ!!!

ಯುಜಿಸಿ ಎಂಬ ಆನೆ ಅತಿಥಿ ಉಪನ್ಯಾಸಕರೆಂಬ ಇರುವೆಗಳನ್ನು ಸಾಯಿಸುತ್ತಾ ನಡೆಯುತ್ತದೆ.!!!!ನ್ಯಾಯಾಲಯಗಳೇ ಆನೆಗಳನ್ನು ಇರುವೆಗಳ ಮೇಲೆ ನಡೆಸುತ್ತವೆ!!!

ವೃಂದಾ ಹೆಗಡೆ, ಸಾಗರ

ಇದನ್ನೂ ಓದಿ- http://ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-5 | ಗದ್ದೆ ತೋಟದ ನಡುವೆ ಒಂದು ಮುಳಿಹುಲ್ಲ ಗುಡಿಸಲು https://kannadaplanet.com/adond-dodda-katha-autobiography-series-part-5/

More articles

Latest article