ಗ್ಯಾರಂಟಿ ಗಲಾಟೆ ಮತ್ತು ಕಾಪಿ ಪೇಸ್ಟ್ ರಾಜಕಾರಣ!

Most read

ಬಡವರ ಅನ್ನದ ಬಗ್ಗೆಯೇ ಕೇವಲವಾಗಿ ಮಾತನಾಡಿದವರು ಈಗ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಚುನಾವಣೆಗಳಲ್ಲಿ ಅದೇ ಗ್ಯಾರಂಟಿಗಳ ಮೊರೆ ಹೋಗುತ್ತಿದ್ದಾರೆ. ಅದೇ ಯೋಜನೆಗಳನ್ನು ಕಾಪಿ ಹೊಡೆಯುತ್ತಿದ್ದಾರೆ! ಅದೇ “ಫ್ರೀ ಬೀಸ್ ಈಗ ಮೋದಿ ಗ್ಯಾರಂಟಿ ಯೋಜನೆ”!! – ರಮೇಶ್‌ ಹಿರೇಜಂಬೂರು, ಹಿರಿಯ ಪತ್ರಕರ್ತರು.

ಸಾಮಾನ್ಯವಾಗಿ ಮಕ್ಕಳು ಪರೀಕ್ಷೆ ಬರೆಯುವಾಗ ಒಬ್ಬರನ್ನು ನೋಡಿ ಇನ್ನೊಬ್ಬರು ಬರೆದರೆ ಅದನ್ನ ನಾವು ಕಾಪಿ ಅಂತೀವಿ. ಆದರೆ ಈಗ ರಾಜಕಾರಣಿಗಳು ಮಾಡ್ತಿರೋದು ಏನು!? 

ಈ ಪ್ರಶ್ನೆ ಈಗ ನಾನು ಕೇಳ್ತಿರೋದಲ್ಲ, ಕರ್ನಾಟಕದ ಜನ ಕೇಳ್ತಿರೋದು! ನರೇಂದ್ರ ಮೋದಿ ಗುಜರಾತ್ ಬಿಟ್ಟು ದೆಹಲಿಗೆ ಬಂದು ಪ್ರಧಾನಿಯಾದ ಬಳಿಕ ಮರುಕ್ಷಣವೇ ಮಾಡಿದ್ದು ಏನು? ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯನ್ನು ಫಾಲೋ ಮಾಡೋಕೆ ಶುರು ಮಾಡಿದ್ರು! ನೋಟ್ ಬ್ಯಾನ್ ಮಾಡಿದ್ರು, ಹೊಸ ನೋಟು ಮುದ್ರಣ ಮಾಡಿದ್ರು. ಅದರಿಂದ ಏನು ಲಾಭ ಆಯ್ತು? ಲಾಭಕ್ಕಿಂತ ದೇಶಕ್ಕೆ ಆದ ನಷ್ಟವೇ ಹೆಚ್ಚು. ದೇಶದ ಆರ್ಥಿಕತೆ ಬಿದ್ದು ಹೋಯ್ತು. ಆಗ ಯಾವ ಶ್ರೀಮಂತನೂ ಬ್ಯಾಂಕ್ ಮುಂದೆ ಹೋಗಿ ನಿಲ್ಲಲಿಲ್ಲ; ಅದು ಯಾವುದೇ ಪಕ್ಷದ ರಾಜಕಾರಣಿ ಇರಬಹುದು, ಉದ್ಯಮಿ ಇರಬಹುದು. ನಿಂತದ್ದು ಬರೀ ಬಡವರು ಮಾತ್ರ, ಪೆಟ್ಟು ತಿಂದದ್ದು ಬಡವರು ಮಾತ್ರ. ಯಾವ ಬಹುಕೋಟಿ ಕಳ್ಳನೂ ಇದೂವರೆಗೆ ಸಿಕ್ಕಿ ಬೀಳಲಿಲ್ಲ. ನೈರ್ಮಲ್ಯ ಯೋಜನೆ ಸ್ವಚ್ಚಭಾರತ್ ಆಯಿತು. ನರೇಗಾಗೆ ಮತ್ತೊಂದು ಹೆಸರು ಬಂತು. ವಸತಿ ಯೋಜನೆ, ಶಿಕ್ಷಣ ಯೋಜನೆ ಎಲ್ಲವೂ ಹೆಸರು ಬದಲು ಅಷ್ಟೇ. ಹಳೇ ಸಾರಾಯಿ ಹೊಸ ಬಾಟಲಿ ಅಷ್ಟೇ…

ಸಾಲದ್ದಕ್ಕೆ ಸ್ವಿಸ್ ಬ್ಯಾಂಕ್ ನಿಂದ ಹಣ ತರುವ ಭರವಸೆಯನ್ನು ನೀಡಿ ದೇಶದ ಜನರನ್ನು ವಂಚಿಸಿದ ಬಿಜೆಪಿ ನಾಯಕರು ಈಗ ಹೊಸ ಹೊಸ ಕಥೆ ಹೇಳಿ ಯಾಮಾರಿಸುತ್ತಿದ್ದಾರೆ. ಹೆಚ್ಚು ದಿನ ಬೇಡ, ಕಳೆದ ವರ್ಷ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು “ಫ್ರೀ-ಬೀಸ್” ಎಂದು ಕರೆದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದರು. ಆದರೆ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಅಥವಾ ಯಾವುದೇ ರಾಜಕೀಯ ಪಕ್ಷಗಳಾಗಿರಲಿ ಪ್ರಜೆಗಳಿಂದ ಅಧಿಕಾರಕ್ಕೆ ಬಂದ ಬಳಿಕ ಪ್ರಜೆಗಳಿಗೆ ಕೆಲವು ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ಕೊಡುವುದು ಮೂಲಭೂತ ಹಕ್ಕು ಹಾಗೂ ಕರ್ತವ್ಯ. ಆದರೆ ಅದನ್ನೇ “ಫ್ರೀ- ಬೀಸ್” ಎಂದು ಪುಂಖಾನುಪುಂಖವಾಗಿ ಭಜನೆ ಮಾಡಿದ “ಭಜನೆ ನಾಯಕರು” ಈಗ “ಮೋದಿ ಗ್ಯಾರಂಟಿ” ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ!

ನಿಜ, ಗ್ಯಾರಂಟಿ ಯೋಜನೆ ಯಾವುದೇ ಪಕ್ಷ ಕೊಡಬಹುದು, ಅದು ಜನೋಪಯೋಗಿ ಯೋಜನೆ. ಆದರೆ ಬಡವರ ಅನ್ನದ ಬಗ್ಗೆಯೇ ಕೇವಲವಾಗಿ ಮಾತನಾಡಿದವರು ಈಗ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಚುನಾವಣೆಗಳಲ್ಲಿ ಅದೇ ಗ್ಯಾರಂಟಿಗಳ ಮೊರೆ ಹೋಗುತ್ತಿದ್ದಾರೆ. ಅದೇ ಯೋಜನೆಗಳನ್ನು ಕಾಪಿ ಹೊಡೆಯುತ್ತಿದ್ದಾರೆ! ಅದೇ “ಫ್ರೀ ಬೀಸ್ ಈಗ ಮೋದಿ ಗ್ಯಾರಂಟಿ ಯೋಜನೆ”!! ಅಬ್ಬಾ ಎಂತಹ ನಾಯಕರು ಅಲ್ವಾ? ಒಂದು ರಾಜಕೀಯ ಪಕ್ಷದ ಯೋಜನೆ ಅಥವಾ ಪ್ಲಾನ್ ಯಶಸ್ಸು ಕಂಡ ಕೂಡಲೇ ಅದನ್ನೇ “ಕಾಪಿ ಹೊಡೆದು ನನ್ನ ಯೋಜನೆ ಎನ್ನುವ ಕೃತಿ ಚೌರ್ಯ”…

ಗಾಂಧಿ- ಅಂಬೇಡ್ಕರ್ ಬಳಕೆ

ಇಷ್ಟಾದರೂ ಎಲ್ಲವೂ ನಮ್ಮದೇ ಎನ್ನುವ ಅಹಂಕಾರಿ ಮಾತುಗಳನ್ನು ಜನರ ಮುಂದೆ ಆಡುತ್ತಿರುವ ಈ ನಾಯಕರು ಇತ್ತೀಚೆಗೆ ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರಿಗೆ ಬೇಕಾದ ರೀತಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ… ಆದರೆ ಅದೇ ನಾಯಕರ ಬಗ್ಗೆ ಈ ಹಿಂದೆ ತುಟಿ ಬಿಡದವರು ಈಗ ಗಾಂಧಿ, ಅಂಬೇಡ್ಕರ್ ಅವರನ್ನೂ ತಮ್ಮ ರಾಜಕೀಯ ‌ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ಜನರಿಗೆ ತಿಳಿಯದೆ ಇರುವ ವಿಚಾರವೇನಲ್ಲ ಬಿಡಿ.

ಶ್ರೀಮದ್ರಾಮಾಯಣ ಬರೆದ ವಾಲ್ಮೀಕಿಯನ್ನೇ ಬದಿಗಿರಿಸಿ ಅವರು ಸೃಷ್ಟಿಸಿದ ಶ್ರೀರಾಮನನ್ನು ದೇವರು ಮಾಡಿ ಕೂರಿಸಿ, ಅದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡವರಿಗೆ ಗಾಂಧಿ, ಅಂಬೇಡ್ಕರ್ ಬಗ್ಗೆ ಕಟ್ಟು ಕಥೆ ಸೃಷ್ಟಿಸುವುದು ಹೊಸದೇನಲ್ಲ!

ಕೊನೆ ಮಾತು:

ಜನರನ್ನು ಹೇಳಿದಂತೆ ಕೇಳುತ್ತಾರೆ ಎಂದು ಭಾವಿಸಿರುವ ಭಜನೆ ನಾಯಕರಿಗೆ ಜನರೇ ಭಜನೆ ಮಾಡುವ ಕಾಲ ಸನ್ನಿಹಿತವಾಗಬೇಕು. ಆಗ ಮಾತ್ರ ಇವರು ಗಲಾಟೆ ಬಿಟ್ಟು ಭಜನೆ ಮಾಡುತ್ತ ಕೂರಬಹುದು ಏನಂತೀರಿ?

ರಮೇಶ್‌ ಹಿರೇಜಂಬೂರು

ಹೋರಾಟಗಾರರು, ಸಾಹಿತಿ, ಹಿರಿಯ ಪತ್ರಕರ್ತರು.

ಇದನ್ನೂ ಓದಿ- ನೆಹರೂ ಅವರನ್ನು ದ್ವೇಷಿಸುವುದು ಎಂದರೆ ಭಾರತವನ್ನು ದ್ವೇಷಿಸುವುದು

More articles

Latest article