ಲತಾಮಾಲಾ
ಬೃಹತ್ ಬೆಂಗಳೂರು ಪ್ರಾಧಿಕಾರ ಮಸೂದೆ-2024 (ಗ್ರೇಟರ್ ಬೆಂಗಳೂರು ಅಥಾರಿಟಿ ಬಿಲ್ – 2024) ಕರ್ನಾಟಕದ ವಿಧಾನಸಭೆಯಲ್ಲಿ 10ನೇ ಮಾರ್ಚ್, 2025ರಂದು ಅಂಗಿಕಾರವಾಗಿದೆ. ಆಡಳಿತ ಮತ್ತು ಅಧಿಕಾರದ ವಿಕೇಂದ್ರಿಕರಣವು ಇದರ ಮುಖ್ಯ ಗುರಿಯಾಗಿದ್ದು, ಹೊಸ ದಿಶೆಯನ್ನು ನೀಡುವ ಮೂಲಕ ಬೆಂಗಳೂರನ್ನು ಸದೃಢಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಮೂಲಕ ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇನ್ನು ಮುಂದೆ ಗ್ರೇಟರ್ ಬೆಂಗಳೂರು ಅಥಾರಿಟಿ – GBA ಅಥವಾ ಬೃಹತ್ ಬೆಂಗಳೂರು ಪ್ರಾಧಿಕಾರ ಆಗಲಿದೆ. ಈ ಪ್ರಾಧಿಕಾರವು ನಗರಸಭೆಗಳ ಸಂಯೋಜನೆ ಮತ್ತು ಉಸ್ತುವಾರಿ ಹಾಗೂ ವಿವಿಧ ನಗರಾಭಿವೃದ್ಧಿ ಇಲಾಖೆ/ಸಂಸ್ಥೆಗಳ ಕಾರ್ಯಗಳನ್ನು ಸಮನ್ವಯಗೊಳಿಸುವ ಮೂಲಕ ಬೆಂಗಳೂರಿಗರಿಗೆ ಉತ್ತಮ ಆಡಳಿತವನ್ನು ನೀಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ. ಈ ಉದ್ದೇಶಕ್ಕಾಗಿ ಇಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ಪುನರ್ರಚಿಸಿ ಗರಿಷ್ಠ ಹತ್ತು ನಗರಸಭೆಗಳಾಗಿ ವಿಭಾಗಿಸಲಿದೆ. ಪ್ರತಿ ನಗರಸಭೆಯು ಕನಿಷ್ಠ 10 ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತದೆ. ಈಗಿನ BBMP ಯು ಸುಮಾರು 708 ಚದರ ಕಿ.ಮೀ ಇದ್ದು, ಮುಂದೆ ಪ್ರಾಧಿಕಾರದಡಿ ಸುಮಾರು 1400 ಚದರಕಿಮೀ ಆಗಲಿದೆ ಎಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.
ಈ ಹೊಸ ವ್ಯವಸ್ಥೆಯಲ್ಲಿ ಒಟ್ಟು ಮೂರು ಹಂತಗಳ ರಚನೆಯನ್ನು ಬೆಂಗಳೂರು ನಗರಾಡಳಿತವು ಹೊಂದಲಿದೆ. ತಳಹಂತದಲ್ಲಿ ಆಡಳಿತ ಘಟಕಗಳಾಗಿ ವಾರ್ಡ್ ಸಮಿತಿಗಳಿದ್ದು, ಆ ಕ್ಷೇತ್ರದ ಚುನಾಯಿತ ಸದಸ್ಯರು (ಕೌನ್ಸಿಲರ್) ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಂಬಂಧಿತ ನಗರಸಭೆಯಿಂದ ನಾಮಿನೇಟ್ ಆದ ಕ್ಷೇತ್ರದ ಕನಿಷ್ಟ ಹತ್ತು ಜನರು ಸದಸ್ಯರಾಗಿರುತ್ತಾರೆ. ವಾರ್ಡ್ ಸಮಿತಿಗಳನ್ನು ಸಬಲಗೊಳಿಸುವ ಮೂಲಕ ಅಲ್ಲಿನ ಜನರು ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಲಾಗುತ್ತದೆ ಎನ್ನಲಾಗಿದೆ. ಈಗಿರುವ 225 ವಾರ್ಡ್‍ಗಳನ್ನು 400ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಮಾಡಲಾಗಿದೆ.
ಮಧ್ಯಮ ಹಂತದಲ್ಲಿ, ಮೊದಲಿಗೆ ಕನಿಷ್ಠ ಐದರಿಂದ -ಏಳು ನಗರ ಸಭೆಗಳು (ಮುನಿಸಿಪಾಲಿಟಿ ಕಾರ್ಪೊರೇಷನ್ ಗಳು) ಕಾರ್ಯನಿರ್ವಹಿಸಲಿವೆ. ಪ್ರತಿ ನಗರಸಭೆಯು ಒಬ್ಬರು ಮೇಯರ್, ಉಪಮೇಯರ್ ಮತ್ತು ಹತ್ತು ಸದಸ್ಯರನ್ನೊಳಗೊಂಡ ಕೌನ್ಸಿಲನ್ನು ಹೊಂದಿರುತ್ತದೆ. ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರದಿಂದ ಚುನಾಯಿತರಾಗಿರುತ್ತಾರೆ. ಕಾರ್ಯನಿರ್ವಾಹಕ ಅಧಿಕಾರವನ್ನು ಹೊಂದಿರುವ ಈ ಕೌನ್ಸಿಲ್‌ಗಳು ವಿವಿಧ ಸ್ಥಾಯಿ ಸಮಿತಿಗಳ ಮೂಲಕ ತಮ್ಮ ಕ್ಷೇತ್ರದ ಆಡಳಿತವನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತವೆ. ಮೇಯರ್ ಮತ್ತು ಉಪ-ಮೇಯರ್‌ಗಳ ಅವಧಿಯನ್ನು 30 ತಿಂಗಳಿಗೆ ವಿಸ್ತರಿಸಲಾಗಿದ್ದು, ಪ್ರತಿ ನಗರಸಭೆಯು 5 ವರ್ಷ ಅವಧಿಯನ್ನು ಹೊಂದಿರುತ್ತದೆ. (ಅಥವಾ ಮೊದಲೇ ರದ್ದಾಗಿದ್ದಲ್ಲಿ, ಆ ದಿನಾಂಕದವರೆಗೆ).
ಮೇಲಿನ ಹಂತದಲ್ಲಿ ಬೃಹತ್ ಬೆಂಗಳೂರು ಪ್ರಾಧಿಕಾರವಿದ್ದು (GBA ), ರಾಜ್ಯದ ಮುಖ್ಯಮಂತ್ರಿಗಳು ಇದರ ಅಧ್ಯಕ್ಷರಾಗಿದ್ದರೆ, ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಪ್ರಾಧಿಕಾರ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ನಗರಸಭೆ ಮೇಯರ್‌ಗಳು ಸದಸ್ಯತ್ವ ಪಡೆದಿರುತ್ತಾರೆ. ಪ್ರಾಧಿಕಾರವು ಎಲ್ಲಾ ನಗರಸಭೆಗಳ ಸಂಯೋಜನೆ ಮತ್ತು ಮೇಲುಸ್ತುವಾರಿ ನಡೆಸುವ ಜೊತೆಗೆ, ಒಂದಕ್ಕಿಂತ ಹೆಚ್ಚು ನಗರಸಭೆಗಳಿಗೆ ಸಂಬಂಧಿಸಿದ ಬೃಹತ್ ಯೋಜನೆಗಳನ್ನು (ದೊಡ್ಡ ರಸ್ತೆಗಳು, ಪ್ರವಾಹ ಇತ್ಯಾದಿ) ಸ್ವತಃ ನಿರ್ವಹಿಸಲಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ಪ್ರಾಧಿಕಾರವು ತನ್ನದೇ ನಿಧಿಯನ್ನು ಹೊಂದಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಗರಾಭಿವೃದ್ಧಿಗೆ ನೀಡುವ ಧನ ಸಹಾಯವನ್ನು ಪಡೆಯುತ್ತದೆ.
ಪ್ರಾಧಿಕಾರವು ಕೈಗೊಳ್ಳುವ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸುತ್ತದೆ. ಪ್ರಾಧಿಕಾರದ ಹಂತದಲ್ಲಿ ಪೂರ್ಣಾವಧಿಯ ಒಬ್ಬರು ಮುಖ್ಯ ಆಯಕ್ತರನ್ನು (ಸದಸ್ಯ ಕಾರ್ಯದರ್ಶಿಯೂ ಆಗಿರುತ್ತಾರೆ) ನೇಮಕ ಮಾಡಲಾಗುವುದು. ಇಗಿನ BBMP ಯು ಮಾಡುವ ಕಾರ್ಯಗಳ ಜೊತೆಗೆ ಬೆಂಗಳೂರು ನಗರಾಭಿವೃದ್ಧಿಯಲ್ಲಿ ತೊಡಗಿರುವ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು (ಕುಡಿಯುವ ನೀರು ಮತ್ತು ಒಳಚರಂಡಿ, ಪೊಲೀಸ್, ವಿದ್ಯುತ್, ಸಾರಿಗೆ, ಬಿಡಿಎ, ಮೆಟ್ರೊ, ಕೆರೆ ನಿರ್ವಹಣೆ, ಘನಕಸ ನಿರ್ವಹಣೆ ಇತ್ಯಾದಿ) ಒಂದು ವೇದಿಕೆಯಡಿ ಒಗ್ಗೂಡಿಸಿ ಕಾರ್ಯ ನಿರ್ವಹಿಸುವ ಮಾರ್ಗವನ್ನು ಪ್ರಾಧಿಕಾರವು ಬಳಸಲಿದೆ.
ವಿರೋಧ ಪಕ್ಷಗಳು ಹಾಗೂ ಕೆಲವು ನಾಗರಿಕ ಸಂಘಟನೆಗಳು ಈ ಮಸೂದೆಯನ್ನು ವಿರೋಧಿಸಿದ್ದಾರೆ. ಅಂಗಿಕೃತವಾಗುವ ಸಮಯದಲ್ಲಿ ಬಿಜೆಪಿ ಮತ್ತು ಜನತಾದಳದ (ಎಸ್) ಸದಸ್ಯರು ವಿಧಾನಸಭೆಯಿಂದ ಹೊರನಡೆದು ತಮ್ಮ ವಿರೋಧವನ್ನು ಪ್ರಕಟಿಸಿದ್ದು, ನಗರದ ಆಡಳಿತಕ್ಕೆ ಏಕ ಸಂಸ್ಥೆ ರಚನೆಯನ್ನು (BBMP) ಮುಂದುವರೆಸುವಂತೆ ಒತ್ತಾಯಿಸಿರುತ್ತಾರೆ.
ಇಂತಹ ಮಾದರಿಗಳು ನವದೆಹಲಿಯಲ್ಲಿ ಯಶಸ್ವಿಯಾಗಿಲ್ಲದ ಉದಾಹರಣೆ ನೀಡಿ, ಮಹದೇವ ಪುರದಂತಹ ಐಟಿ ಪ್ರದೇಶಗಳು ಹೆಚ್ಚಿನ ಆದಾಯ ಪಡೆಯುವ ಕಾರಣ ಸಣ್ಣ ನಗರಸಭೆಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬ ಅಸಮಾಧಾನದ ಜೊತೆಗೆ, ಕನ್ನಡಿಗರು ಕಡಿಮೆ ಇರುವೆಡೆ ನಗರದ ಆಡಳಿತದಲ್ಲಿ ತಮ್ಮ ರಾಜಕೀಯ ಹಿಡಿತವನ್ನು ಕಳೆದುಕೊಂಡು ಮೂಲೆಗುಂಪಾಗುವ ಕಾರಣ ಕೆಂಪೆಗೌಡರ ಬೆಂಗಳೂರನ್ನು ಚೂರು ಮಾಡಬೇಡಿ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಹೊಸ ವ್ಯವಸ್ಥೆಯಡಿ ಅಧಿಕಾರವು ಜನಪ್ರತಿಧಿಗಳಿಂದ ಅಧಿಕಾರಿ ವರ್ಗಕ್ಕೆ ಹೋಗಲಿದ್ದು, ಇದು ಸಂವಿಧಾನದ 74ರ ತಿದ್ದುಪಡಿಗೆ ವಿರುದ್ಧವಾಗಿದೆ ಎನ್ನಲಾಗಿದೆ. ಚುನಾವಣೆ ನಡೆಸದ ಕಾರಣ ಜನಪ್ರತಿನಿಧಿಗಳಿಲ್ಲದೆ ನಗರದ ಆಡಳಿತ ಅಧಿಕಾರಿಗಳಡಿ ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವದ ತತ್ವಕ್ಕೆ ವಿರೋಧವಾಗಿದೆ ಎಂದಿರುವ ತಜ್ಞರು ಹೊಸ ವ್ಯವಸ್ಥೆ ಅನುಷ್ಟಾನಗೊಳ್ಳುವ ತನಕ ಕೆಲಸಗಳಲ್ಲಿ ಆಗುವ ವಿಳಂಬವನ್ನು ತಡೆಯಲು ಮೊದಲು BBMP ಚುನಾವಣೆ ನಡೆಸಿ ವಾರ್ಡ್ ಸಮಿತಿಗಳಿಗೆ ಚಾಲನೆ ನೀಡಬೇಕೆಂಬ ಸಲಹೆಯನ್ನೂ ಸಹ ಮುಂದಿಟ್ಟಿದ್ದಾರೆ.
ಜನಪ್ರತಿನಿಧಿ ಸ್ಥಳಿಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ 74ರ ತಿದ್ದುಪಡಿಗೆ ಈ ಮಸೂದೆಯು ವ್ಯತಿರಿಕ್ತವಾಗಿದ್ದು, ಇದು ಮಹಾನಗರ ಯೋಜನಾ ಸಮಿತಿಯ ಪಾತ್ರವನ್ನು (MPC) ಆಕ್ರಮಿಸಿಕೊಳ್ಳುವುದಲ್ಲದೆ, ಕಾರ್ಪೊರೇಟರ್‌ಗಳ ಅಧಿಕಾರವನ್ನು ಕುಗ್ಗಿಸಿ ಶಾಸಕ, ಸಂಸದರ ಅಧಿಕಾರವನ್ನು ಹೆಚ್ಚಿಸುವ ಕಾರಣ ಈ ಮಸೂದೆಗೆ ಅನುಮತಿಯನ್ನು ನೀಡಬಾರದೆಂದು ಕರ್ನಾಟಕದ ರಾಜ್ಯಪಾಲರಿಗೆ ನಾಗರಿಕರ ಒಕ್ಕೂಟದ ಗುಂಪೊಂದು ತಜ್ಞರ ವರದಿಯನ್ನಾಧರಿಸಿದ ಜ್ಞಾಪನ ಪತ್ರವನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ವಿಕೇಂದ್ರೀಕರಣದ ಹೆಸರಿನಲ್ಲಿ ನಗರಾಡಳಿತದ ಅಧಿಕಾರವು ಇನ್ನೂ ಹೆಚ್ಚು ಕೇಂದ್ರೀಕೃತವಾಗುವ ಅಪಾಯವಿದ್ದು, ಭೂಮಾಫಿಯಕ್ಕೆ ಅನುಕೂಲವಾಗಲಿದೆ ಎಂಬ ಆರೋಪವೂ ಸಹ ವ್ಯಕ್ತವಾಗಿದೆ.
ಆಡಳಿತ ಪಕ್ಷ ಮತ್ತು ಮಸೂದೆಯ ಪ್ರತಿಪಾದಕರಾದ ಕೆಲ ತಜ್ಞರು ಈ ಮಸೂದೆಯ ಅವಶ್ಯಕತೆಯನ್ನು ಸಮರ್ಥಿಸಿಕೊಂಡಿದ್ದಾರೆ. ತ್ವರಿತವಾಗಿ ವಿಸ್ತರಣೆಯಾಗುತ್ತಿರುವ ಬೃಹತ್ ನಗರದ ಆಡಳಿತ ನಿರ್ವಹಣೆಗೆ ಇಂತಹ ರಚನಾತ್ಮಕ ಬದಲಾವಣೆಯು ಅವಶ್ಯವಿದೆ. ಪ್ರಸ್ತುತ ಆಡಳಿತ ವ್ಯವಸ್ಥೆಯಡಿ ಕಸವಿಲೇವಾರಿ, ಚರಂಡಿ, ಕುಡಿಯುವ ನೀರಿನಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಹಾಗೂ ಪ್ರತಿ ಪ್ರದೇಶವೂ ವಿಭಿನ್ನ ಸಮಸ್ಯೆಗಳನ್ನು ಹೊಂದಿದ್ದು, ಪರಿಣಾಮಕಾರಿ ಆಡಳಿತಕ್ಕೆ ಪುನರ್ರಚನೆಯು ಅನಿವಾರ್ಯವಾಗಿದೆ. ಬೆಂಗಳೂರಿನಲ್ಲಿ ಬದುಕುತ್ತಿರುವ ಎಲ್ಲರಿಗೂ ಇಲ್ಲಿನ ಆಡಳಿತದಲ್ಲಿ ಸಮಪಾಲಿದೆ. ಇದು ಬೆಂಗಳೂರನ್ನು ಒಡೆಯುವ ಪ್ರಯತ್ನವಲ್ಲ, ಬದಲಿಗೆ ಗಟ್ಟಿಗೊಳಿಸುವ ಮಾರ್ಗವಾಗಿದೆ. ನವದೆಹಲಿ ಮತ್ತಿತರ ದೇಶ ವಿದೇಶದ ನಗರಗಳಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಅಲ್ಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ತಯಾರಿಸಲಾಗಿದೆ. ಪ್ರತಿ ನಗರಸಭೆಗಳೂ ತಮ್ಮ ಕ್ಷೇತ್ರದ ತೆರಿಗೆಯನ್ನು ಸಂಗ್ರಹಿಸಿ, ಅದೇ ಕ್ಷೇತ್ರದ ಅಭಿವೃದ್ಧಿಗೆ ಖರ್ಚು ಮಾಡುವ ಅಧಿಕಾರ ಹೊಂದಿವೆ. ಸಂವಿಧಾನದ 74ರ ತಿದ್ದುಪಡಿ ಪ್ರಕಾರ ಒಂದು ನಗರಸಭೆಯ ತೆರಿಗೆ ಹಣವನ್ನು ಬೇರೆ ನಗರಸಭೆಗೆ ವರ್ಗಾಯಿಸುವಂತಿಲ್ಲ. ಆದ್ದರಿಂದ, ಆದಾಯ ಕೊರತೆಯುಳ್ಳ ನಗರಸಭೆಗಳಿಗೆ ಸರ್ಕಾರಿ ಅನುದಾನ ನೀಡುವ ಮೂಲಕ ಆರ್ಥಿಕ ಸಮಾನತೆಯನ್ನು ಸರಿದೂಗಿಸಲಾಗುವುದು – ಎಂಬಂತಹ ಅನೇಕ ವಿಚಾರಗಳು ವ್ಯಕ್ತವಾಗಿವೆ
ವಾರ್ಡ್ ಸಮಿತಿಗಳನ್ನು ಸಬಲಗೊಳಿಸುವ ಮೂಲಕ ಹೆಚ್ಚಿನ ಜನರು ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗವಹಿಸಬಹುದಾಗಿದೆ. ಪ್ರಾಧಿಕಾರವು ಯೋಜನೆ ರೂಪಿಸುವ ಮತ್ತು ನಗರಾಭಿವೃದ್ಧಿಯ ಎಲ್ಲಾ ಇಲಾಖೆ/ಸಂಸ್ಥೆಗಳ ನಡುವೆ ಸಮನ್ವಯತೆ ತರುವ ಕಾರಣ ಜನರಿಗೆ ಉತ್ತಮ ಸೇವೆ ನೀಡಬಹುದಾಗಿದೆ. ಈಗಿರುವ ಯೋಜನಾ ಸಮಿತಿಯಲ್ಲಿ (MPC) ಸಾರಿಗೆ ಮತ್ತಿತರ ಸೇವೆಗಳು ಸೇರಿಲ್ಲವಾದ್ದರಿಂದ ಅದು ಪರಿಣಾಮಕಾರಿಯಾಗಿಲ್ಲ. ನಗರಾಭಿವೃದ್ಧಿಯು ಅನೇಕ ಇಲಾಖೆ/ಸಂಸ್ಥೆಗಳನ್ನು ಒಳಗೊಂಡಿದ್ದು, ಅವುಗಳನ್ನು ಒಗ್ಗೂಡಿಸಿ ಸಮನ್ವಯತೆ ತರುವ ಸಲುವಾಗಿ ಪ್ರಾಧಿಕಾರದ ನೇತೃತ್ವನ್ನು ಮುಖ್ಯಮಂತ್ರಿಗಳಿಗೆ ವಹಿಸಲಾಗಿದೆ. ಈ ಪುನರ್ರಚಿತ ಆಡಳಿತದಲ್ಲಿ ಹೆಚ್ಚಿನ ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗಗಳ ಭಾಗವಹಿಸುವಿಕೆ ಇದ್ದು, ವಿಕೇಂದ್ರೀಕರಣವು ಈ ಎರಡೂ ವರ್ಗಗಳನ್ನು ಒಳಗೊಂಡ ಕಾರಣ ದಕ್ಷತೆ ಹೆಚ್ಚುತ್ತದೆ ಎಂಬ ಸಮರ್ಥನೆಗಳು ಕೇಳಿಬಂದಿವೆ.
ಜನಸಾಮಾನ್ಯರಿಗೆ ಈ ಪರ-ವಿರೋಧಗಳೆರಡರಲ್ಲೂ ಆಸಕ್ತಿ ಇಲ್ಲ. ಅವರಿಗೆ ಹಳೆಯ ಅಥವಾ ಬರಲಿರುವ ಹೊಸ ವ್ಯವಸ್ಥೆಗಳಲ್ಲಿ ಯಾವ ನಂಬಿಕೆಯೂ ಉಳಿದಿಲ್ಲ. ಎಲ್ಲಾ ವ್ಯವಸ್ಥೆಗಳಲ್ಲಿ ಜನಹಿತಕ್ಕಿಂತ ರಾಜಕೀಯ ಆಸಕ್ತಿಯೇ ಮುಖ್ಯವಾಗಿರುತ್ತದೆ ಎನ್ನುವುದು ಅವರ ಅನುಭವದ ಮಾತುಗಳಾಗಿವೆ. ಆದರೆ, ಬೇರೆ ಮಾರ್ಗವಿಲ್ಲದೆ ಯಾವ ವ್ಯವಸ್ಥೆಗೂ ಒಗ್ಗಿಕೊಳ್ಳಬೇಕಾದ ಕಾರಣ ಈ ಹೊಸ ವ್ಯವಸ್ಥೆಯು ತಮ್ಮ ಬವಣೆಯನ್ನು ನೀಗಿಸಬಲ್ಲದೇ ಎಂಬ ಕುತೂಹಲ ಮತ್ತು ನಿರೀಕ್ಷೆಗಳನ್ನು ಹೊಂದಿದ್ದಾರೆ.
ಜನರ ತೆರಿಗೆಯಿಂದ ಸಂಬಳ ಪಡೆಯುವ ಅಧಿಕಾರಿಗಳು ಒಂದು ಸಣ್ಣ ಕೆಲಸಕ್ಕೂ ಕಚೇರಿಗೆ ಅಲೆಸಿ, ಏನೋ ಉಪಕಾರ ಮಾಡಿದಂತೆ ಕೆಲಸ ಮಾಡುವ ಮನೋಭಾವನೆ ಅವರದು. ಸರ್ಕಾರಿ ಕಚೇರಿಯ ವಾತಾವರಣ ಮತ್ತು ಅಧಿಕಾರಿಗಳ ವರ್ತನೆಗಳು ಅಲ್ಲಿಗೆ ಹೋದವರಿಗೆ ಗುಲಾಮಿತನದ ಭಾವನೆ ತರಿಸಿ, ಮನಸ್ಸನ್ನು ಕೆರಳಿಸುತ್ತದೆ. ಆದ್ದರಿಂದ ಹೆಚ್ಚಿನವರಿಗೆ ಸರ್ಕಾರಿ ಕಚೇರಿಗಳಿಗೆ ಕಾಲಿಡಲೂ ಸಹ ಮನಸ್ಸಾಗುವುದಿಲ್ಲ. ಬಡವರಂತೂ ಅಲ್ಲಿಗೆ ಹೋಗಲು ಹೆದರುತ್ತಾರೆ. ಪರಿಸ್ಥಿತಿ ಹೀಗಿರುವಾಗ, ಮಸೂದೆಯು ಹೇಳುವ ವಾರ್ಡ್ ಸಮಿತಿಯ ಸಬಲೀಕರಣ ನಿಜಕ್ಕೂ ಆಗಲಿದೆಯೇ? ಮತದಾರರೆಲ್ಲರನ್ನು ಹೊಂದಿರುವ ಕ್ಷೇತ್ರ (ಏರಿಯಾ) ಸಭೆಗಳ ಬಗ್ಗೆ ಯಾವ ಮಾತಿಲ್ಲದಿರುವುದು ಜನ ಸಹಭಾಗಿತ್ವ, ಸಬಲೀಕರಣ, ವಿಕೇಂದ್ರೀಕರಣವೆಂಬ ಇವರ ಮಾತುಗಳಲ್ಲಿ ನಂಬಿಕೆ ಬರುವುದಿಲ್ಲ. ಸುಮಾರು 25-30 ಸಾವಿರ ಜನಸಂಖ್ಯೆಯನ್ನು ಪ್ರತಿನಿಧಿಸುವ ವಾರ್ಡ್ ಸಭೆಗಳಲ್ಲಿ ಯಾರೋ ತೀರ್ಮಾನಿಸಿರುವ ಯೋಜನೆಗಳ ಪಟ್ಟಿಯನ್ನು ಓದಿ, ಸಹಿ ಪಡೆದು ಹೋಗುವ ಇವರ ಹಿಂದಿನ ಚಾಳಿಯನ್ನೆ ಸಬಲೀಕರಣ ಎಂದುಕೊಳ್ಳಬೇಕೆ?
ವಾರ್ಡಿನ ಎಲ್ಲಾ ಏರಿಯಾಗಳಿಂದ ಹೆಚ್ಚು ಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ಮುಖ್ಯವಿದೆ. ಅದಕ್ಕಾಗಿ ಸಬಲೀಕರಣದ ಪ್ರಕ್ರಿಯೆಗಳನ್ನು ಅಭಿವೃದ್ಧಿಯ ಎಲ್ಲಾ ಹಂತಗಳಲ್ಲಿ ಅಳವಡಿಸಿಕೊಳ್ಳಲು ಅವಶ್ಯಕ ನಿಯಮಗಳನ್ನು ರಚಿಸುವ ಮೂಲಕ ವಿಕೇಂದ್ರೀಕರಣವನ್ನು ತಳಮಟ್ಟದಿಂದ ತರಬೇಕೆನ್ನುವುದು ಜನರ ನಿರೀಕ್ಷೆಯಾಗಿದೆ. ವಾರ್ಡ್ ಸಮಿತಿಯ ಸದಸ್ಯರನ್ನು ಆ ಕ್ಷೇತ್ರದ ಮತದಾರರು ಆಯ್ಕೆ ಮಾಡಬೇಕೆ ಹೊರತು ನಗರ ಸಭೆಯು ನೇಮಕ ಮಾಡುವುದಲ್ಲ. ಕಾರ್ಯಾಂಗದ ಎಲ್ಲಾ ಘಟಕಗಳೂ ಸಹ ಜನರನ್ನು ನಾಗರೀಕರು ಎಂದು ಪರಿಭಾವಿಸಿ ಅವರ ಕೆಲಸಗಳಿಗೆ ಆದ್ಯತೆ ನೀಡುವಂತಹ ಬದಲಾವಣೆಯನ್ನು ಮೊದಲು ತರಬೇಕಿದೆ. ಜನರು ತಮ್ಮದೇ ಕಛೇರಿಗಳಿಗೆ ಹೋಗಲು ಸಮಯದ ನಿರ್ಬಂಧ, ಅಲ್ಲಿ ಕಾಯುವ, ಮತ್ತು ಅಲೆಯುವಂತಹ ದುರ್ಗತಿಯನ್ನು ತೆಗೆದುಹಾಕಬೇಕಿದೆ.
ಬದುಕಿನ ಮೂಲಭೂತ ಅವಶ್ಯಕತೆ ನೀರು. ಒಮ್ಮೆ ಕೆರೆಗಳ ಊರಾಗಿದ್ದ ಬೆಂಗಳೂರು ಇಂದು ಕಾಂಕ್ರಿಟ್ ಕಾಡಾಗಿ ನೀರಿನ ಮೂಲಗಳನ್ನು ಬತ್ತಿಸಿ ಅಂತರ್ಜಲವನ್ನು ಪಾತಾಳಕ್ಕೆ ತಳ್ಳಿದೆ. ನಿಯಮಗಳನ್ನು ಮುರಿದು ಕೆರೆಗಳ ಒತ್ತುವರಿ ಮತ್ತು ಕೊಳವೆಬಾವಿಗಳಿಗೆ ಅನುಮತಿ ನೀಡುವಂತಹ ವ್ಯವಸ್ಥೆಯನ್ನು ಇನ್ನಾದರೂ ಮಟ್ಟ ಹಾಕಲಾಗುವುದೇ? ನೀರಿನ ಬವಣೆಯಿಂದ ನಿರಂತರ ತತ್ತರಿಸುತ್ತಿರುವ ಬೆಂಗಳೂರಿಗರ ದಾಹವನ್ನು (ಮುಖ್ಯವಾಗಿ ಅತಿ ಬಡವರು, ಕೊಳಗೇರಿ ವಾಸಿಗಳು ಮತ್ತು ವಲಸಿಗರ) ನೀಗಿಸುವ ಮತ್ತು ನೀರು ಕೊಡಲಾಗದಿದ್ದಲ್ಲಿ ಸಂಬಂಧಿತ ಇಲಾಖೆಯನ್ನು ಹೊಣೆಗಾರಿಕೆ ಮಾಡುವಂತಹ ಸ್ಪಷ್ಟ ನಿಯಮಗಳನ್ನು ಈ ಹೊಸ ವ್ಯವಸ್ಥೆಯಲ್ಲಿ ತರಲಾಗುವುದೇ?
ನಡೆಯುವ ಜನರಿಗೆ ಬೆಂಗಳೂರಿನಲ್ಲಿ ಜಾಗವೇ ಇಲ್ಲವಾಗಿದೆ. ಅನೇಕ ರಸ್ತೆಗಳಲ್ಲಿ ಫುಟ್‍ಪಾತ್‌ಗಳಿಲ್ಲ, ಇದ್ದ ಕಡೆ ಗುಂಡಿಗಳು ಬಿದ್ದಿವೆ ಅಥವಾ ಆಕ್ರಮಿಸಿಕೊಳ್ಳಲಾಗಿದೆ. ಅಂಗಡಿ, ಕಟ್ಟಡ ನಿರ್ಮಾಣದ ಸರಕುಗಳು ಹಾಗೂ ದರ್ಶಿನಿಗಳ ಟೇಬಲ್‌ಗಳು ಫುಟ್‍ಪಾತ್‌ಗಳನ್ನು ನುಂಗಿ ಹಾಕಿವೆ. ಕೆಲವರಂತೂ ಬೇಲಿ ಬಿಗಿದು ಹೂಗಿಡಗಳನ್ನು ಬೆಳೆಸಿದ್ದರೆ, ಇನ್ನು ಕೆಲವರು ಮನೆಯ ಗೇಟನ್ನು ಮುಂದಕ್ಕೆ ಚಾಚಿ ನಡಿಗೆಯ ಜಾಗವನ್ನು ಕಬಳಿಸಿದ್ದಾರೆ. ದ್ವಿಚಕ್ರ ವಾಹನ ಚಾಲಕರಿಗೆ ಅದೇ ರಸ್ತೆಯಾಗಿದೆ. ರಸ್ತೆಯ ಬದಿಗಳಲ್ಲಿ ತುಂಬಿರುವ ವಾಹನ ನಿಲುಗಡೆಯಿಂದಾಗಿ ಜನರು ಚಲಿಸುತ್ತಿರುವ ವಾಹನಗಳ ನಡುವೆಯೇ ನಡೆಯಬೇಕಾಗಿದ್ದು, ಜನರು ಸರಿ ಇರುವ ತಮ್ಮ ಕೈಕಾಲುಗಳನ್ನು ಮುರಿದುಕೊಳ್ಳುವುದು ಸಾಮಾನ್ಯವಾದರೆ, ವಿಶೇಷ ಚೇತನರ ಸ್ಥಿತಿಯನ್ನಂತು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಒಟ್ಟಾರೆ, ಜನರ ಚಲಿಸುವ ಹಕ್ಕನ್ನು ಬೆಂಗಳೂರು ಆಡಳಿತವು ಕಿತ್ತುಕೊಂಡಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಫುಟ್‍ಪಾತ್‌ಗಳಲ್ಲಿ ಅಗಾಗ್ಗೆ ನಡೆದು ಅನುಭವ ಪಡೆದರೆ, ನಿಜಸ್ಥಿತಿಯ ಅರಿವಾಗಿ ಹೊಸ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ತಂದು, ಅದನ್ನು ಅನುಷ್ಟಾನ ಮಾಡುವ ಕಾಳಜಿ ಮತ್ತು ಬದ್ಧತೆ ಕಾಣಿಸಬಹುದು.
ಬೆಂಗಳೂರಿಗರನ್ನು ಕಾಡುತ್ತಿರುವ ಮತ್ತೊಂದು ಭೂತವೆಂದರೆ ರಸ್ತೆ ಮತ್ತು ಟ್ರಾಫಿಕ್. ಧೂಳು, ಗುಂಡಿ ಹಳ್ಳಗಳಿಂದ ತುಂಬಿಕೊಂಡು, ಅಲ್ಲಲ್ಲಿ ಒಳಚರಂಡಿಯ ಕೊಳಕು ನೀರಿನ ಬುಗ್ಗೆಗಳಿಂದ ಮತ್ತು ಕಸದ ರಾಶಿಯ ಗಬ್ಬು ವಾಸನೆಯಿಂದ ಘಮಲುತ್ತಿರುವ ರಸ್ತೆಗಳಲ್ಲಿ ತುಂಬಿ ತುಳುಕಿ, ಹೊಗೆ ಉಗುಳುತ್ತಾ, ಹಾರನ್ ಬಜಾಯಿಸಿಕೊಂಡು, ಮೆಲ್ಲ ಮೆಲ್ಲಗೆ ಸಾಗುತ್ತಿರುವ ವಾಹನಗಳು ಮತ್ತು ಅದರೊಳಗಿನ ಜನರು ಸಕಾಲಕ್ಕೆ ತಮ್ಮ ಸ್ಥಳ ತಲುಪಲಾಗದೆ ತೋರುವ ಸಿಟ್ಟು ಅಸಹನೆಯಿಂದ ಜರುಗುವ ಜಗಳಗಳು, ಅಪಘಾತಗಳು, ಕೇಸು, ದಂಡ, ಟೆನ್ಷನ್,,,,,,,, ಹೀಗೆಯೇ ಸಾಗುತ್ತಿದೆ ಬೆಂಗಳೂರಿಗರ ಜೀವನ!!
ಲಂಪಟ ಅಧಿಕಾರಿಗಳು-ಭೂಕಳ್ಳರು ಸೇರಿ ಮಾಡಿದ ಒತ್ತುವರಿಯಿಂದ ನೆಲೆ ಕಳೆದುಕೊಳ್ಳಬೇಕಾದ ಜನಸಾಮಾನ್ಯರು, ಅರ್ಥವಾಗದ ‘ಬಿ, ಇ’ ಖಾತಾ ಸಂಕಟಗಳು, ಸೂಕ್ತ ವಸತಿ ಮತ್ತು ಶೌಚಾಲಯಗಳಿಲ್ಲದೆ ಸೋರುವ ಜೋಪಡಿಗಳಲ್ಲಿ ಬದುಕುತ್ತಿರುವ ಸಾವಿರಾರು ಕುಟುಂಬಗಳು, ದುಬಾರಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ಕೆರೆಗಳ್ಳರಿಂದ ಆಗಿರುವ ಅನಾಹುತ, ಹೆಚ್ಚುತ್ತಿರುವ ವಾಯು ಮತ್ತು ಜಲಮಾಲಿನ್ಯ, ಅಂತರ್ಜಲದ ದುರ್ಬಳಕೆ, ಕಡಿಮೆಯಾದ ಹಸಿರು ಹೊದಿಕೆ, ತಾಪಮಾನ ಹೆಚ್ಚಳ – ಹೀಗೆ ಸಮಸ್ಯೆಗಳು ಒಂದೇ ಎರಡೇ? ಹಿಂದೊಮ್ಮೆ ಉದ್ಯಾನ ನಗರಿ, ನಿವೃತ್ತಿದಾರರ ಸ್ವರ್ಗ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಇಂದು ಲಕ್ಷಾಂತರ ಜನರಿಗೆ ಬದುಕು ಕೊಟ್ಟಿದ್ದರೂ, ಜೀವಿಸಲು ಅಸಹನೀಯವಾದ ನಗರವಾಗಿದೆ.
ದೂರದೃಷ್ಟಿ ರಹಿತ ಯೋಜನೆಗಳು, ಸಮಗ್ರ ನಗರಾಭಿವೃದ್ಧಿ ಯೋಜನೆ ಇಲ್ಲದಿರುವಿಕೆ (ಸುಮಾರು 32 ವರ್ಷಗಳಿಂದ ಯೋಜನಾ ಸಮಿತಿ – MPC ಕಾರ್ಯನಿರ್ವಹಿಸುತ್ತಿಲ್ಲ!?) ಹಾಗೂ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಬೆಂಗಳೂರು ಗೊತ್ತುಗುರಿಯಿಲ್ಲದೆ ಅಸ್ತವ್ಯಸ್ತವಾಗಿ ಬೆಳೆಯುತ್ತಿದೆ. ಅಧಿಕಾರಿಗಳಿಗೆ ಇದೆಲ್ಲಾ ಗೊತ್ತಿಲ್ಲವೆಂದಲ್ಲ, ಗೊತ್ತಿದ್ದು ದುರಾಸೆ ಮತ್ತು ಬೇಜಾವಾಬ್ದಾರಿಯಿಂದ ಆಗಿರುವ ಅನಾಹುತಗಳಿವು. ಕಷ್ಟ ಕೋಟಲೆಗಳಿಲ್ಲದೆ ಸಕಾಲದಲ್ಲಿ ದೊರೆಯುವ ಅವಶ್ಯಕ ಸೇವೆಗಳು ಮತ್ತು ಆರೋಗ್ಯಕರ ಪರಿಸರವು ಜನರಿಗೆ ಮುಖ್ಯವಾಗಿದ್ದು, ಅದುವೇ ಸರ್ಕಾರ ಮತ್ತು ಅದರ ಕಾರ್ಯಾಂಗದ ಪ್ರಥಮ ಗುರಿಯಾಗಬೇಕು ಎಂಬುದು ಬೆಂಗಳೂರಿಗರ ನಿರೀಕ್ಷೆಯಾಗಿದೆ. ಬೃಹತ್ ಬೆಂಗಳೂರು ಪ್ರಾಧಿಕಾರವು ಜನರ ಈ ನಿರೀಕ್ಷೆಗಳನ್ನು ತಲುಪುತ್ತದೆಯೇ?? ಕಾದು ನೋಡಬೇಕಿದೆ.
ಈ ಮಸೂದೆಯು ರಾಜ್ಯಪಾಲರ ಅನುಮತಿ ಪಡೆದು, ಕಾಯ್ದೆಯಾಗಿ, ನಿಯಮಗಳು ರಚನೆಯಾಗಿ, ನಗರಸಭೆ ಮತ್ತು ವಾರ್ಡುಗಳು ಮರು ವಿಂಗಡಣೆಯಾಗಿ, ಚುನಾವಣೆ ಮುಗಿದು ಹೊಸ ವ್ಯವಸ್ಥೆಯು ಕಾರ್ಯರೂಪಕ್ಕೆ ಬರಲು ವರ್ಷಗಳೇ ಹಿಡಿಯಬಹುದು. ಅಲ್ಲಿಯವರೆಗೆ, ಎಂದಿನಂತೆಯೇ ಬೆಂಗಳೂರಿಗರು ಈ ಮಸೂದೆಯ ಕುರಿತಾದ ವಾದವಿವಾದಗಳಿಗೆ ಮೂಕ ಸಾಕ್ಷಿಯಾಗಿ, ಸುಂದರ ನಗರಿಯ ಕನಸು ಕಾಣುತ್ತಾ, ತಮ್ಮ ಅಸಹನೀಯ ಬದುಕನ್ನು ಮುಂದುವರೆಸುವುದು ಅನಿವಾರ್ಯವಾಗಿದೆ.
ಲತಾಮಾಲಾ
ಲೇಖಕರು
ಇದನ್ನೂ ಓದಿ- ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಮರಳಿಸಿದ ರಾಜ್ಯಪಾಲರು