ಬಜೆಟ್‌ನ ಪ್ರಮುಖ ಹೈಲೈಟ್ ಎಂದರೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಇನ್ಮುಂದೆ ʻಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿʼ ಎಂದು ಮರುನಾಮಕರಣ ಮಾಡಲಾಗುವುದು. ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ರದ್ದುಗೊಳಿಸಿ ಜಾರಿಗೆ ತಂದಿರುವ ಹೊಸ ಯೋಜನೆಯನ್ನು (VB-G-RAM-G) ರಾಜ್ಯ ಸರ್ಕಾರವು ತೀವ್ರವಾಗಿ ವಿರೋಧಿಸಿದೆ. ಇದು ಗ್ರಾಮ ಸ್ವರಾಜ್ ಪರಿಕಲ್ಪನೆಗೆ ವಿರುದ್ಧವಾಗಿದ್ದು, ಗ್ರಾಮೀಣ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಅಗತ್ಯವಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ.
ಜಲ ಜೀವನ್ ಮಿಷನ್ ಮತ್ತು ರಸ್ತೆ ಅಭಿವೃದ್ಧಿ
- ಜಲ ಜೀವನ್ ಮಿಷನ್: ಕೇಂದ್ರದಿಂದ ಅನುದಾನ ವಿಳಂಬವಾಗುತ್ತಿದ್ದರೂ, ರಾಜ್ಯ ಸರ್ಕಾರವು ತನ್ನ ಪಾಲಿನ 27,098 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಾಗಿ 10,433 ಕೋಟಿ ರೂ. ಕಾಯ್ದಿರಿಸಲಾಗಿದೆ.
- ರಸ್ತೆಗಳ ಅಭಿವೃದ್ಧಿ: ಕಲ್ಯಾಣ ಕರ್ನಾಟಕದ ರಸ್ತೆಗಳಿಗಾಗಿ ʻಕಲ್ಯಾಣ ಪಥʼ ಹಾಗೂ ADB ನೆರವಿನೊಂದಿಗೆ ರಾಜ್ಯಾದ್ಯಂತ ರಸ್ತೆ ಸಂಪರ್ಕ ಸುಧಾರಿಸಲು ʻಪ್ರಗತಿ ಪಥʼ (₹5,190 ಕೋಟಿ) ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
‘ಅನಂತ’ ಸೌರ ಯೋಜನೆ ಮತ್ತು ಆರ್ಥಿಕ ಬಲವರ್ಧನೆ
ಗ್ರಾಮ ಪಂಚಾಯಿತಿಗಳನ್ನು ವಿದ್ಯುತ್ ಬಿಲ್ಲುಗಳ ಪಾವತಿಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು ʻಅನಂತʼ ಯೋಜನೆಯನ್ನು ಘೋಷಿಸಲಾಗಿದೆ. ಇದರ ಅಡಿಯಲ್ಲಿ ಎಲ್ಲಾ ಪಂಚಾಯಿತಿಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ Solar Micro Grid ಗಳನ್ನು ಸ್ಥಾಪಿಸಿ 4,000 MW ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಪಂಚಾಯಿತಿಗಳ ಆಸ್ತಿಗಳ ನಗದೀಕರಣಕ್ಕಾಗಿ ‘Local Economy Accelerator Program’ (LEAP) ಆರಂಭಿಸಲಾಗುವುದು. ಪ್ರಾಯೋಗಿಕವಾಗಿ ಪ್ರತಿ ವಿಭಾಗದ 5 ಪಂಚಾಯಿತಿಗಳಲ್ಲಿ ಆದಾಯೋತ್ಪನ್ನ ಘಟಕಗಳನ್ನು ಸ್ಥಾಪಿಸಲಾಗುವುದು.
ಶುದ್ಧ ಕುಡಿಯುವ ನೀರು ಮತ್ತು ನಿರ್ವಹಣೆ
ರಾಜ್ಯದ 1,000 ಮೇಲ್ಮಟ್ಟದ ಜಲಾಗಾರಗಳ (OHT) ಸ್ವಚ್ಛತೆ ಮತ್ತು ಪುನಃಶ್ಚೇತನಕ್ಕಾಗಿ 30 ಕೋಟಿ ರೂ. ವೆಚ್ಚ ಮಾಡಲಾಗುವುದು. ಅಲ್ಲದೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ 23 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು 125 ಕೋಟಿ ರೂ. ಮೊತ್ತದ ಯೋಜನೆ ಜಾರಿಗೆ ಬರಲಿದೆ.

