ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬದ್ಧತೆಗೆ ಸಾಕ್ಷಿ ಎಂದು ವಸತಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಬಡ ಕುಟುಂಬಗಳಿಗೆ ತಲುಪುತ್ತಿರುವ ಬಗ್ಗೆ ಅಂಕಿ -ಅಂಶ ಸಮೇತ ವಿವರಿಸಿ ಮುಂದೆಯೂ ಅನುಷ್ಠಾನ ಖಾತರಿ ನೀಡಲಾಗಿದ್ದು, ಯೋಜನೆಗಳು ಮುಂದುವರಿಯುವುದಿಲ್ಲ ಎಂದು ಸುಳ್ಳು ಹಬ್ಬಿಸುತ್ತಿರುವ ಪ್ರತಿಪಕ್ಷ ಬಿಜೆಪಿಯವರಿಗೆ ಉತ್ತರ ನೀಡಲಾಗಿದೆ.
ಕೈಗಾರಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿ ಗೆ ಒತ್ತು ನೀಡಿರುವುದು, ಕರ್ನಾಟಕದ ಅಭಿವೃದ್ಧಿ ಮಾದರಿ ಯನ್ನು ವಿಶ್ವವೇ ಕೊಂಡಾಡುತ್ತಿರುವ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ನೀಡಲಾಗಿರುವ ಕೊಡುಗೆ ಬಗ್ಗೆಯೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ.
ವಸತಿ ಇಲಾಖೆಯಲ್ಲಿ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 1.18,359 ಮನೆಗಳ ವಿತರಣೆಗೆ ಕ್ರಮ ಕೈಗೊಂಡು, ಫಲಾನುಭವಿಗಳ ಪಾಲಿನ ವಂತಿಗೆ ತಲಾ ನಾಲ್ಕು ಲಕ್ಷ ರೂ. ಸರ್ಕಾರವೇ ಭರಿಸುವ ತೀರ್ಮಾನ ಕೈಗೊಂಡು ಮೊದಲ ಹಂತದಲ್ಲಿ 36,789 ಮನೆ ಹಂಚಿಕೆ ಮಾಡಿ ಸದ್ಯದಲ್ಲೇ ಎರಡನೇ ಹಂತದಲ್ಲಿ 39, 843 ಮನೆ ವಿತರಣೆಗೆ ಸಿದ್ಧತೆ ಮಾಡಿರುವುದು, 1,66,867 ಬಡ ಕುಟುಂಬ ಗಳಿಗೆ ಸ್ಲಂ ಬೋರ್ಡ್ ನಿಂದ ಹಕ್ಕುಪತ್ರ ವಿತರಿಸಿರುವುದು ಸರ್ಕಾರದ ಸಾಧನೆ ಆಗಿದೆ. ಒಟ್ಟಾರೆ ರಾಜ್ಯಪಾಲರ ಭಾಷಣ ವು ನಮ್ಮ ಸರ್ಕಾರದ ಸಾಧನೆಯ ಶ್ವೇತಪತ್ರ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.