ಕಳೆದ 24 ಗಂಟೆಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮಂಡ್ಯದಲ್ಲಿ ಧಾರಾಕಾರ ಸುರಿದ ಮಳೆಗೆ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ನಿನ್ನೆ ಮಂಡ್ಯದಲ್ಲಿ ಅತಿಹೆಚ್ಚು ಮಳೆಯಾಗಿದ್ದು 129 ಮಿ.ಮೀ. ನಷ್ಟು ಮಳೆ ಸುರಿದ ದಾಖಲೆಯಾಗಿದೆ. ರಾಮನಗರದಲ್ಲಿ 113.5 ಮಿ.ಮೀ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಯಲ್ಲಿ 99.5 ಮಿ.ಮೀ., ಕೋಲಾರದಲ್ಲಿ 85.5 ಮಿ.ಮೀ, ತುಮಕೂರಿನಲ್ಲಿ 82 ಮಿ.ಮೀ ಮಳೆಯಾಗಿದೆ.
ಮೈಸೂರಿನಲ್ಲಿ 74.5 ಮಿ.ಮೀ., ದಕ್ಷಿಣ ಕನ್ನಡದಲ್ಲಿ 56 ಮಿ.ಮೀ., ಚಿಕ್ಕಮಗಳೂರಿನಲ್ಲಿ 54.5 ಮಿ.ಮೀ., ಚಾಮರಾಜನಗರದಲ್ಲಿ 52 ಮಿ.ಮೀ., ಬೆಳಗಾವಿಯಲ್ಲಿ 47.5 ಮಿ.ಮೀ, ಕೊಡಗಿನಲ್ಲಿ 45.5 ಮಿ.ಮೀ, ಚಿಕ್ಕಬಳ್ಳಾಪುರದಲ್ಲಿ 44.5 ಮಿ.ಮೀ ಮತ್ತು ಶಿವಮೊಗ್ಗದಲ್ಲಿ 24 ಮಿ.ಮೀ. ಮಳೆಯಾಗಿದೆ.
ಮಂಡ್ಯ ಜಿಲ್ಲೆಯ ತಲಗವಾಡಿ, ಹೊಸಳ್ಳಿ, ಹರಳಹಳ್ಳಿ, ನೆಲಮಾಕನಹಳ್ಳಿ, ಕ್ಯಾತಘಟ್ಟ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ನಿಪ್ಪಾಣಿ ನಗರದ ಅನೇಕ ಮನೆಗಳ ಹೆಂಚುಗಳು ಒಡೆದುಹೋಗಿವೆ. 20ಕ್ಕೂ ಹೆಚ್ಚು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಬೆಂಗಳೂರಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಬಡಾವಣೆ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಮಳೆಯ ಅಬ್ಬರಕ್ಕೆ ಬೆಂಗಳೂರು – ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ. ಹೊಸೂರು – ಬೆಂಗಳೂರು ಹೆದ್ದಾರಿಯಲ್ಲಿರುವ ಪರಪ್ಪನ ಅಗ್ರಹಾರದಲಲೂ ನಿನ್ನೆ ಭರ್ಜರಿ ಮಳೆಯಾಗಿ ರಸ್ತೆಗಳು ಜಲಾವೃತಗೊಂಡಿದ್ದವು.
ಚಾಮರಾಜಪೇಟೆಯ ಗುಡ್ಡದಹಳ್ಳಿಯಲ್ಲಿ ಭಾರೀ ಮಳೆಯಿಂದಾಗಿ ಕೆಸರು ತುಂಬಿದ ನೀರು ಮನೆಗಳಿಗೆ ನುಗ್ಗಿತು. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರು ಹರಸಾಹಸಪಟ್ಟರು. ಕೆ.ಆರ್. ಮಾರ್ಕೆಟ್, ಎಂ.ಜಿ ರೋಡ್, ಟೌನ್ ಹಾಲ್, ನೃಪತುಂಗ ರಸ್ತೆ ,ಕಬ್ಬನ್ ಪಾರ್ಕ್ ಸೇರಿ ಹಲವೆಡೆ ಭಾರಿ ಮಳೆಯಾಗಿರುವ ವರದಿಯಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಚನ್ನಪಟ್ಟಣದಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಮರಗಳು ಧರೆಗುರುಳಿದವು. ಮಳೆಯೊಂದಿಗೆ ಬೀಸಿದ ಬಿರುಗಾಳಿಯಿಂದಾಗಿ ತೆಂಗು, ಮಾವು, ಹಲಸಿನ ಮರಗಳು ನೆಲಕಚ್ಚಿದವು. ಚನ್ನಪಟ್ಟಣದ ಕೊಂಡಾಪುರ, ಹುಣಸನಹಳ್ಳಿ, ಮೊಕರಂಬೆದೊಡ್ಡಿಯಲ್ಲಿ ಅತಿಹೆಚ್ಚು ಮಳೆಯಾಗಿದ್ದು, ಹಲವೆಡೆ ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ ಸಂಭವಿಸಿದೆ.
ಮೈಸೂರಿನಲ್ಲಿ ಭಾರಿ ಬಿರುಗಾಳಿ ಮಳೆಗೆ ಹುಣಸೂರು ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿ 6 ತಿಂಗಳು ಸಣ್ಣ ಮಗು ಇರುವ ಹಿನ್ನೆಲೆ ಕುಟುಂಬ ಕಂಗಾಲಾಗಿದೆ.