Wednesday, October 16, 2024

ಜಿ ಎನ್‌ ಸಾಯಿಬಾಬಾ‌ ಸಾವು: ಪ್ರಭುತ್ವ ನಡೆಸಿದ ಘನ ಘೋರ ಕ್ರೌರ್ಯ

Most read

ನ್ಯಾಯಾಧೀಶರುಗಳು ಹೃದಯ, ಆತ್ಮ, ಆತ್ಮಸಾಕ್ಷಿ ಇರುವ ಮನುಷ್ಯರು ಆಗುವುದು ಯಾವಾಗ? ಅವರು ಆತ್ಮಸಾಕ್ಷಿಯುಳ್ಳ ಮನುಷ್ಯರಾಗುತ್ತಿದ್ದರೆ ಸರಕಾರ ದುರುದ್ದೇಶದಿಂದ ತನ್ನ ಟೀಕಾಕಾರರನ್ನು ಜೈಲಿಗೆ ಸೇರಿಸಿದಾಗ ಅವರು ಪ್ರಜೆಗಳ ನೆರವಿಗೆ ಬರುತ್ತಿರಲಿಲ್ಲವೇ? ನ್ಯಾಯಾಲಯದಲ್ಲಿ ʼನ್ಯಾಯʼ ಸಿಗುವುದೇ ಆಗಿದ್ದರೆ ಉಮರ್‌ ಖಲೀದ್‌, ಗುಲ್ಫಿಶಾ ಫಾತಿಮಾ, ಶರ್ಜಿಲ್‌ ಇಮಾಮ್‌, ಹನಿಬಾಬು ಸಹಿತ ಅನೇಕರು ಈಗಲೂ ಏಕೆ ಜೈಲಿನಲ್ಲಿದ್ದಾರೆ?- ಶ್ರೀನಿವಾಸ ಕಾರ್ಕಳ.

ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಇಂಗ್ಲಿಷ್ ಪ್ರೊಫೆಸರ್‌ ಗೋಕರ್ಣಕೊಂಡ ನಾಗಾ ಸಾಯಿಬಾಬಾ ( 57 ) ಅವರು ಹೈದರಾಬಾದ್‌ ನ ನಿಜಾಮ್‌ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನಲ್ಲಿ ಕಳೆದ ಶನಿವಾರ 11-10-2024 ರಂದು ತೀರಿಕೊಂಡಿದ್ದಾರೆ. ವಾರದ ಹಿಂದೆ ಅವರು ಗಾಲ್‌ ಬ್ಲಾಡರ್‌ ಸರ್ಜರಿಗೆ ಒಳಗಾಗಿದ್ದರು. ಸರ್ಜರಿಯ ಬಳಿಕ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಅವರನ್ನು ಶುಕ್ರವಾರ ಐಸಿಯುಗೆ ಸೇರಿಸಲಾಗಿತ್ತು.‌ ಶನಿವಾರ ರಾತ್ರಿ ೮.೩೬ ರ ಸುಮಾರಿಗೆ ಅವರು ಕೊನೆಯುಸಿರು ಎಳೆದರು ಎಂದು ಆಸ್ಪತ್ರೆ ಘೋಷಿಸಿದೆ.

ಹುಟ್ಟುತ್ತಲೇ ಗಾಲಿಕುರ್ಚಿ ಸೇರಿದ್ದ ಸಾಯಿಬಾಬಾ ಅವರನ್ನು ಮೇ 9, 2024 ರಂದು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಪೊಲೀಸರು ಮಾವೋವಾದಿ ಸಂಘಟನೆಯೊಂದಿಗಿನ ನಂಟಿನ ನೆಪದಲ್ಲಿ ಬಂಧಿಸಿದ್ದರು. 2024ರ ಮಾರ್ಚ್‌ ತನಕವೂ ಅವರನ್ನು ನಾಗಪುರ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು.

ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ

ಪ್ರೊ. ಸಾಯಿಬಾಬಾ

ಮಹಾರಾಷ್ಟ್ರ ಕೋರ್ಟು ಮಾರ್ಚ್‌3, 2017 ರಲ್ಲಿ ಪ್ರೊಫೆಸರ್‌ ಸಾಯಿಬಾಬಾ ಮತ್ತು ಇತರ ಐವರಿಗೆ ದೇಶದ ವಿರುದ್ಧ ಯುದ್ಧ ಹೂಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ  ವಿರುದ್ಧ ಅವರ ಪತ್ನಿ ವಸಂತಾ ಅವರ ನೇತೃತ್ವದಲ್ಲಿ ಒಂಬತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಲಾಯಿತು. 2022 ಅಕ್ಟೋಬರ್‌ 14 ರಂದು ಬಾಂಬೇ ಹೈಕೋರ್ಟ್‌ ನ ನಾಗಪುರ ಪೀಠವು ಅವರ ಬಿಡುಗಡೆಗೆ ಆದೇಶ ನೀಡಿತ್ತು. ಆದರೆ ಶನಿವಾರ ರಜಾದಿನವಾದರೂ ಜಸ್ಟಿಸ್‌ ಎಂ ಆರ್‌ ಶಾ ಮತ್ತು ಜಸ್ಟಿಸ್‌ ಬೇಲಾ ತ್ರಿವೇದಿ ಅವರನ್ನು ಹೊಂದಿದ್ದ ವಿಶೇಷ ಪೀಠವನ್ನು ರಚಿಸಿತು ಸುಪ್ರೀಂ ಕೋರ್ಟ್‌. ಆ ಪೀಠವು ನಿರ್ದಾಕ್ಷಿಣ್ಯವಾಗಿ ಮುಂಬೈ ಕೋರ್ಟ್‌ ನ ಆದೇಶಕ್ಕೆ ತಡೆ ನೀಡಿತು (ಅಕ್ಟೋಬರ್‌ 15, 2022). ಮಾತ್ರವಲ್ಲ, ಅವರಿಗೆ ಮೆಡಿಕಲ್‌ ಬೇಲ್‌, ಗೃಹಬಂಧನ ಎಲ್ಲವನ್ನೂ ನಿರಾಕರಿಸಿತು.

ಅಂತಿಮವಾಗಿ ಕಳೆದ ಮಾರ್ಚ್‌5, 2024 ರಂದು ಇತರ ಐವರು ಆರೋಪಿಗಳ ಸಹಿತ ಸಾಯಿಬಾಬಾ ಅವರನ್ನು ದೋಷಮುಕ್ತಗೊಳಿಸಿ ಬಿಡುಗಡೆ ಗೊಳಿಸಲಾಯಿತು. ಇಷ್ಟು ಹೊತ್ತಿಗಾಗುವಾಗ ಅವರು ತಮ್ಮ ಬದುಕಿನ ಅಮೂಲ್ಯ 3,592 ದಿನಗಳನ್ನು ಕಳೆದುಕೊಂಡಿದ್ದರು! ಪೋಲಿಯೋ ಸಮಸ್ಯೆ ಹೊರತುಪಡಿಸಿದರೆ ಬೇರೆ ಕಾಯಿಲೆಗಳಿರದ 47 ರ ಹರೆಯದ ಪ್ರೊಫೆಸರ್‌ ಜೈಲಿನಿಂದ ಹೊರಗೆ ಬರುವಾಗ ಅವರೇ ಹೇಳುವಂತೆ ಅವರ ಹೃದಯ ಕೇವಲ 55% ಕೆಲಸ ಮಾಡುತ್ತಿತ್ತು, ಗಾಲ್‌ ಬ್ಲಾಡರ್, ಲಿವರ್‌, ಪಾಂಕ್ರಿಯಾಸ್ ಹೀಗೆ ದೇಹದ ಪ್ರತಿಯೊಂದು ಅಂಗವೂ ಹಾನಿಗೀಡಾಗಿತ್ತು. ಜೈಲಿನಲ್ಲಿ ಸರಿಯಾಗಿ ಚಿಕಿತ್ಸೆ ಸಿಗದ ಕಾರಣವಾಗಿಯೇ ಒಬ್ಬ ಮಹಾನ್‌ ವಿದ್ವಾಂಸ, ಮಾನವಹಕ್ಕುಗಳ ಪರ ಹೋರಾಟಗಾರ, ಸಮಸಮಾಜದ ಕನಸುಗಾರ ಜಿ ಎನ್‌ ಸಾಯಿಬಾಬಾ ಕೇವಲ ಏಳು ತಿಂಗಳ ಸ್ವಾತಂತ್ರ್ಯ ಅನುಭವಿಸಿ ಇಹಲೋಕ ತ್ಯಜಿಸಿದರು.

ವಿದ್ಯಾರ್ಥಿ ರಾಜಕೀಯ ಪ್ರವೇಶ

ಕವಿ ಲೇಖಕ ಪರಿಪೂರ್ಣ ಶಿಕ್ಷಕ ಸಾಯಿಬಾಬಾ ಅವರು ಹೈದರಾಬಾದ್‌ ಕೇಂದ್ರೀಯ ವಿವಿ ಕ್ಯಾಂಪಸ್‌ ನಲ್ಲಿ ಮಂಡಲ್‌ ಕಮಿಶನ್‌ ಹೋರಾಟ ಪರಾಕಾಷ್ಠೆಯಲ್ಲಿದ್ದಾಗ ವಿದ್ಯಾರ್ಥಿ ರಾಜಕೀಯ ಪ್ರವೇಶಿಸಿದವರು. ಪ್ರೋಗ್ರೆಸಿವ್‌ ಸ್ಟುಡೆಂಟ್‌ ಫ್ರಂಟ್‌ ಜತೆ ಕೈಜೋಡಿಸಿ ಮೀಸಲಾತಿ ಪರ ತೀವ್ರ ಸ್ವರೂಪದ ಚಳುವಳಿ ಮಾಡಿದವರು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ನವರದಾದ ಸಾಯಿಬಾಬಾ ಕೇಂದ್ರೀಯ ವಿವಿಯಲ್ಲಿ ಇಂಗ್ಲಿಷ್‌ ನಲ್ಲಿ ಎಂ ಎ ಮುಗಿಸಿ ಮಂದೆ ಪೋಸ್ಟ್‌ ಡಾಕ್ಟೋರಲ್‌ ಅಧ್ಯಯನ ನಡೆಸಿದರು.

ಭಾರತವು ಸತ್ಯ, ಶಾಂತಿ, ಅಹಿಂಸೆ ಬೋಧಿಸಿದ ಬುದ್ಧ, ಗಾಂಧಿಯ ನಾಡು ಎನ್ನುತ್ತೇವೆ. ಭಾರತೀಯ ಸಂಸ್ಕೃತಿಯ ಉದಾತ್ತ ಮೌಲ್ಯಗಳನ್ನು ಕೊಂಡಾಡುತ್ತಿರುತ್ತೇವೆ. ʼಭಾರತವು ಪ್ರಜಾತಂತ್ರದ ತಾಯಿ, ಪ್ರಜಾತಂತ್ರವು ನಮ್ಮ ಡಿ ಎನ್‌ ಎ ಯಲ್ಲಿಯೇ ಇದೆʼ ಎಂದು ಈಗಿನ ನಮ್ಮ ಪ್ರಧಾನಿ ಮೋದಿಯವರು ಹೋದಲ್ಲಿ ಬಂದಲ್ಲಿ ಹೇಳುತ್ತಲೇ ಇರುತ್ತಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಭಾರತ ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿದ ಹಕ್ಕುಗಳನ್ನು ರಕ್ಷಿಸಲೆಂದೇ ನಮ್ಮಲ್ಲಿ ನ್ಯಾಯಾಂಗ ಕೂಡಾ ಇದೆ. ಆದರೆ ಇವೆಲ್ಲ ಕೇವಲ ಮೇಲ್ನೋಟದ ಸೌಂದರ್ಯಗಳು. ಒಳಗೊಳಗೇ ಈ ಸಮಾಜ, ಈ ವ್ಯವಸ್ಥೆ ಎಷ್ಟೊಂದು ಬರ್ಬರ ಎಂಬುದನ್ನು ಫಾದರ್‌ ಸ್ಟಾನ್‌ ಸ್ವಾಮಿ ಮತ್ತು ಜಿ ಎನ್‌ ಸಾಯಿಬಾಬಾ ಪ್ರಕರಣಗಳು ಜಗತ್ತಿಗೆ ತೋರಿಸಿಕೊಟ್ಟವು.

ಬರ್ಬರ ವ್ಯವಸ್ಥೆ

ಈ ದೇಶದಲ್ಲಿ ನಾವು ಎಂತಹಾ ಸ್ಥಿತಿಯನ್ನು ತಲಪಿದ್ದೇವೆ ಎಂದರೆ, ಸರಕಾರವನ್ನು ಟೀಕಿಸುವ ಯಾರನ್ನು ಬೇಕಾದರೂ, ಎಷ್ಟು ದೀರ್ಘ ಕಾಲ ಬೇಕಾದರೂ ಜೈಲಿನಲ್ಲಿಡಲು ಅವಕಾಶ ಮಾಡಿಕೊಡುವ ಯುಎಪಿಎ ಯಂತಹ ಭಯಾನಕ ಕಾನೂನುಗಳು ನಮ್ಮಲ್ಲಿವೆ. ಸರಕಾರ ಈ ಕಾನೂನುಗಳನ್ನು ದುರುಪಯೋಗ ಪಡಿಸಿಕೊಂಡಾಗ ಪ್ರಜೆಗಳ ನೆರವಿಗೆ ಬರದೆ ಸರಕಾರದ ತಾಳಕ್ಕೆ ಕುಣಿಯುವ ಹೇಡಿ ಮತ್ತು ಬರ್ಬರ ನ್ಯಾಯಾಂಗ ವ್ಯವಸ್ಥೆಯೂ ನಮ್ಮಲ್ಲಿದೆ. ವ್ಯಕ್ತಿ ಅಪರಾಧ ಮಾಡಿಲ್ಲ ಎಂಬುದು ಸರಕಾರಕ್ಕೂ ಗೊತ್ತಿರುತ್ತದೆ, ನ್ಯಾಯಾಂಗಕ್ಕೂ ಗೊತ್ತಿರುತ್ತದೆ. ಒಂದು ದಿನ ನಿರಪರಾಧಿ ಎಂಬುದು ಸಾಬೀತೂ ಆಗುತ್ತದೆ. ಆದರೆ ಅದಾಗಲೇ ಶಿಕ್ಷೆ ಅನುಭವಿಸಿಯೂ ಆಗಿರುತ್ತದೆ. ಇದು ಭಾರತದ ನ್ಯಾಯ ವ್ಯವಸ್ಥೆ! ʼಪ್ರಕ್ರಿಯೆಯೇ ಪನಿಶ್‌ ಮೆಂಟ್‌ʼ ಎಂದು ವಾರಾಂತ್ಯದಲ್ಲಿ ಮೋಹಕ ಭಾಷಣ ಬಿಗಿಯುವ ಜಸ್ಟಿಸ್‌ ಗಳು ಕೋರ್ಟ್‌ ನಲ್ಲಿ ಕಾರ್ಯಾಚರಿಸುವಾಗ ಅದನ್ನು ನೆನಪಿಸಿಕೊಳ್ಳುವುದಿಲ್ಲ.

ಪರಿಣಾಮವಾಗಿ ತೀರಾ ಇಳಿ ವಯಸಿನ ಫಾದರ್‌ ಸ್ಟಾನ್‌ ಸ್ವಾಮಿ ಸುಳ್ಳು ಆರೋಪದ ಮೇಲೆ ಜೈಲು ಸೇರುತ್ತಾರೆ. ಪಾನೀಯ ಸೇವಿಸಲು ಒಂದು ಕೊಳವೆ (ಸ್ಟ್ರಾ) ಪಡೆಯಲೂ ಅವರು ಕೋರ್ಟ್‌ ನಲ್ಲಿ ಹೋರಾಟ ಮಾಡಬೇಕಾಗುತ್ತದೆ. ಅಂತಿಮವಾಗಿ ಬೇಲ್‌ ಭಾಗ್ಯವೂ ಇಲ್ಲದೆ, ಪೊಲೀಸ್‌ ಕಸ್ಟಡಿಯಲ್ಲಿಯೇ ಅವರು ಸಾಯುತ್ತಾರೆ.

90% ವಿಕಲಾಂಗತೆಯನ್ನು ಹೊಂದಿದ್ದು ವೀಲ್‌ ಚೇರ್‌ ಇಲ್ಲದೆ ಒಂದು ಕ್ಷಣವೂ ಬದುಕು ಸಾಗಿಸಲಾಗದ ಸಾಯಿಬಾಬಾ ಅವರನ್ನು ಒಂಬತ್ತು ವರ್ಷ ಕಾಲ ಕೋರ್ಟ್‌ ಜೈಲಿನಲ್ಲಿಡುತ್ತದೆ. ಕೆಳ ಕೋರ್ಟ್‌ ಬಿಡುಗಡೆಗೆ ಆದೇಶ ನೀಡಿದರೆ ಮೇಲಿನ ಕೋರ್ಟ್‌ ಅದನ್ನು ತಡೆಯುತ್ತದೆ. ನಿರಪರಾಧಿ ಎಂದು ಬಿಡುಗಡೆಯಾಗುವಾಗ ಶಿಕ್ಷೆ ಅನುಭವಿಸಿಯಾಗಿರುತ್ತದೆ. ಬಿಡುಗಡೆಯ ಏಳು ತಿಂಗಳಲ್ಲಿ ಸಾಯಿಬಾಬಾ ಇಹಲೋಕ ತ್ಯಜಿಸುತ್ತಾರೆ. ಸರಕಾರ, ನ್ಯಾಯಾಲಯ ಎಲ್ಲವೂ ಕೈಜೋಡಿಸಿ ನಡೆಸಿದ ಇದು ಸ್ಟೇಟ್‌ ನಡೆಸಿದ ಕೊ*ಲೆಯಲ್ಲವೇ?

ತಾಯಿಯ ಅಂತ್ಯ ಸಂಸ್ಕಾರಕ್ಕೂ ಪೆರೋಲ್‌ ಇಲ್ಲ!

ರೇಪ್‌ ಮತ್ತು ಕೊಲೆ ನಡೆಸಿದ ಬಾಬಾ ರಾಮ್‌ ರಹೀಮ್‌ ಗೆ ನಾಲ್ಕು ವರ್ಷಗಳಲ್ಲಿ 15 ಬಾರಿ ಪೆರೋಲ್‌ ನೀಡಲಾಗುತ್ತದೆ. ಬಾಬಾನಾದರೋ ಅಪರಾಧಿ. ಆದರೆ ಸಾಯಿಬಾಬಾ ಅವರು ಆರೋಪಿ, ವಿಚಾರಣಾಧೀನ ಕೈದಿ. ಆರೋಪಿ ಸಾಯಿಬಾಬಾ ಅವರಿಗೆ ಸಾವಿನಂಚಿನಲ್ಲಿರುವ ತನ್ನ ತಾಯಿಯನ್ನು ನೋಡಲು ಪೆರೋಲ್‌ ನೀಡುವುದಿಲ್ಲ. ತಾಯಿಯ ಅಂತ್ಯಸಂಸ್ಕಾರ ಮಾಡಲು ಪೆರೋಲ್‌ ನೀಡುವುದಿಲ್ಲ!

ನ್ಯಾಯಾಧೀಶರುಗಳು ಹೃದಯ, ಆತ್ಮ, ಆತ್ಮಸಾಕ್ಷಿ ಇರುವ ಮನುಷ್ಯರು ಆಗುವುದು ಯಾವಾಗ? ಅವರು ಆತ್ಮಸಾಕ್ಷಿಯುಳ್ಳ ಮನುಷ್ಯರಾಗುತ್ತಿದ್ದರೆ ಸರಕಾರ ದುರುದ್ದೇಶದಿಂದ ತನ್ನ ಟೀಕಾಕಾರರನ್ನು ಜೈಲಿಗೆ ಸೇರಿಸಿದಾಗ ಅವರು ಪ್ರಜೆಗಳ ನೆರವಿಗೆ ಬರುತ್ತಿರಲಿಲ್ಲವೇ? ನ್ಯಾಯಾಲಯದಲ್ಲಿ ʼನ್ಯಾಯʼ ಸಿಗುವುದೇ ಆಗಿದ್ದರೆ ಉಮರ್‌ ಖಲೀದ್‌, ಗುಲ್ಫಿಶಾ ಫಾತಿಮಾ, ಶರ್ಜಿಲ್‌ ಇಮಾಮ್‌, ಹನಿಬಾಬು ಸಹಿತ ಅನೇಕರು ಈಗಲೂ ಏಕೆ ಜೈಲಿನಲ್ಲಿದ್ದಾರೆ?

ಪತ್ನಿ ವಸಂತಾ ಜತೆ ಪ್ರೊ. ಸಾಯಿಬಾಬಾ

“ದಲಿತರಿರಲಿ, ಆದಿವಾಸಿಗಳಿರಲಿ, ಹಿಂದುಳಿದವರಿರಲಿ, ಆ ಬಡ ತಾಯಿಯಂದಿರಿಗೆ ತಮಗೆ ಆಸ್ತಿಯಾಗಲೀ ಇತರ ಸವಲತ್ತುಗಳಾಗಲೀ ಸಿಗುವುದಿಲ್ಲ ಎಂಬುದು ಗೊತ್ತಿರುತ್ತದೆ. ಆದ್ದರಿಂದ ಅವರಿಗಿರುವ ಒಂದೇ ಒಂದು ಬಯಕೆ ಎಂದರೆ ತಮ್ಮ ಮಕ್ಕಳು ಓದಬೇಕು ಎಂಬುದು. ಹುಟ್ಟುತ್ತಲೇ ಅಂಗವಿಕಲನಾಗಿದ್ದ ನನ್ನನ್ನು ನನ್ನ ತಾಯಿ ಗೋಕರ್ಣಕೊಂಡ ಸೂರ್ಯವತಿ ತನ್ನ ತೋಳುಗಳಲ್ಲಿ ಎತ್ತಿಕೊಂಡು ಶಾಲೆಗೆ ಒಯ್ದು ಓದಿಸಿದಳು. ನಾನು ಓದಬೇಕು ಎಂಬುದು ಆಕೆಯ ಕನಸಾಗಿತ್ತು. ಇಂತಹ ತಾಯಿ ಸಾಯುವಾಗ ನನಗೆ ಅವರ ಬಳಿ ಇರುವ ಅವಕಾಶವೂ ಸಿಗಲಿಲ್ಲ. ಅವರ ಅಂತಿಮ ಸಂಸ್ಕಾರ ನಂತರ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವ ಬಿಡಿ ಅದನ್ನು ವೀಡಿಯೋ ಕಾಲ್‌ ಮೂಲಕ ನೋಡುವ ಅವಕಾಶವೂ ಸಿಗಲಿಲ್ಲ. ದೇಶದ ಯಾವ ಅಪರಾಧಿಗೆ ಇಂತಹ ಅವಕಾಶವನ್ನು ನಿರಾಕರಿಸಿದ ಉದಾಹರಣೆ ಇದೆ? ಸ್ಟೇಟ್‌ ತನ್ನ ಪ್ರಜೆಗಳನ್ನು ಕಾಪಾಡುವ ಕೆಲಸ ಮಾಡಬೇಕು ಹೊರತು ಶಿಕ್ಷಿಸುವ ಕೆಲಸವನ್ನಲ್ಲ” ಎನ್ನುತ್ತಾರೆ ಸಾಯಿಬಾಬಾ.

“ಸಾಯಿಬಾಬಾ ಬಡ ಕುಟುಂಬದವರು. ಮಕ್ಕಳಿಗೆ ಟ್ಯೂಶನ್‌ ನೀಡಿ ಸಂಪಾದಿಸಿದ ಹಣದಲ್ಲಿ ಪುಸ್ತಕ ಖರೀದಿಸಿ ಓದು ನಡೆಸಿದವರು. ಸ್ವಂತ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿದವರು. ಕೇವಲ ಒಂದು ವಿಚಾರಧಾರೆಯ ಕಾರಣಕ್ಕಾಗಿ ಅವರನ್ನು ಹೀಗೆ ಶಿಕ್ಷಿಸಬಹುದೇ?” ಎಂದು ಅಳುತ್ತಾ ಕೇಳುತ್ತಾರೆ ಅವರ ಸಂಗಾತಿ ವಸಂತಾ.

ಕಟ ಕಟೆಯಲ್ಲಿ ನಿಂತದ್ದು ಯಾರು?

ಸಾಮಾನ್ಯವಾಗಿ ನಟೋರಿಯಸ್‌ ಗ್ಯಾಂಗ್‌ಸ್ಟರ್‌ ಗಳನ್ನು, ಕುಖ್ಯಾತ ಅಂಡಾ ಸೆಲ್‌ ನಲ್ಲಿ ಕೆಲ ತಿಂಗಳು ಇಟ್ಟು ಆನಂತರ  ಹೊರ ತರಲಾಗುತ್ತದೆ. ಆದರೆ, ಸಾಯಿಬಾಬಾ ಅವರನ್ನು ನಾಗಪುರದ ಜೈಲಿನ ಅಂಡಾ ಸೆಲ್‌ ನಲ್ಲಿ ಏಳು ವರ್ಷ ಇರಿಸಿ ಕಿರುಕುಳ ನೀಡಲಾಗಿತ್ತು. ಮುರಿದ ಗಾಲಿಕುರ್ಚಿಯಲ್ಲಿ ಅವರನ್ನು ಪೊಲೀಸ್‌ ಠಾಣೆಯಲ್ಲಿ ಎಳೆದಾಡಲಾಗಿತ್ತು (ಇದರಿಂದ ಅವರ ನರಗಳಿಗೆ ಹಾನಿಯಾಗಿತ್ತು).

ಅಂತಿಮವಾಗಿ ಕಟ ಕಟೆಯಲ್ಲಿ ನಿಂತದ್ದು ಸ್ಟಾನ್‌ ಸ್ವಾಮಿಯೂ ಅಲ್ಲ, ಸಾಯಿಬಾಬಾ ಅವರೂ ಅಲ್ಲ. ಕಟ ಕಟೆಯಲ್ಲಿ ನಿಂತದ್ದು ಈ ದೇಶದ ನ್ಯಾಯಾಂಗ; ಈ ದೇಶದ ನ್ಯಾಯಾಧೀಶರುಗಳು. ಹೃದಯ ಇಲ್ಲದ ನ್ಯಾಯಾಧೀಶರುಗಳ ಕಾರಣವಾಗಿಯೇ ಸ್ಟಾನ್‌ ಸ್ವಾಮಿ ಅಸು ನೀಗಿದರು, ಸಾಯಿಬಾಬಾ ಅವರೂ ಅಸು ನೀಗಿದರು. ತೀರಾ ಇಳಿ ವಯಸಿನ ಸ್ವಾಮಿ, ವಿಕಲಾಂಗ ಸಾಯಿಬಾಬಾ ಅಕಾಲದಲ್ಲಿ ಮತ್ತು ವೇದನೆಯೊಂದಿಗೆ ಸಾಯಲು ಕಾರಣರಾದ ನ್ಯಾಯಾಧೀಶರುಗಳಿಗೆ ಈಗಲಾದರೂ ಪಶ್ಚಾತ್ತಾಪವಾದೀತೇ? ಅವರ ಅಂತಸ್ಸಾಕ್ಷಿಯನ್ನು ಈ ʼಪ್ರಭುತ್ವ ನಡೆಸಿದ ಕೊಲೆಗಳುʼ ಕಲಕಿಯಾವೇ?

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನು ಓದಿದ್ದೀರಾ? ಕ್ರಾಂತಿಕಾರಿ ಸಾಯಿಬಾಬಾ ಅಮರ್ ರಹೆ..

More articles

Latest article