ಬಾಬಾ ಬುಡನ್ ಗಿರಿ ಮತ್ತು ಹುಬ್ಬಳಿಯ ಈದ್ಗಾ ಮೈದಾನದಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳಲ್ಲಿ ಹಲವರು ರಾಜಕೀಯ ನೇತಾರರಾಗಿ, ಸಂಸದರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಣ ಮತ್ತು ಅಧಿಕಾರದ ಸುಪ್ಪತ್ತಿಗೆ ಅನುಭವಿಸುತ್ತಿರುವುದನ್ನು ಕಂಡ ನಂತರ ಪುಡಿ ರೌಡಿಗಳೆಲ್ಲಾ ಹಿಂದುತ್ವ ನೇತಾರರಾಗಿ ಗೋರಕ್ಷಕರಾಗಿ ಬಡ್ತಿ ಹೊಂದುತ್ತಿದ್ದಾರೆ – ಪ್ರವೀಣ್ ಎಸ್ ಶೆಟ್ಟಿ.
ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಶುರು ಮಾಡಿದ್ದು ಕೇವಲ ಸ್ವಾತಂತ್ರ್ಯ ಹೋರಾಟದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಬ್ರಿಟಿಷರ ವಿರುದ್ಧ ಜನರನ್ನು ಒಗ್ಗೂಡಿಸಲು ಮಾತ್ರ. ಈಗ ಸ್ವಾತಂತ್ರ್ಯ ಬಂದು 77 ವರ್ಷ ಆಯಿತಲ್ಲ, ಗಣೇಶೋತ್ಸವದ ಮೂಲ ಉದ್ದೇಶ ಈಡೇರಿ 77 ವರ್ಷ ಆಯಿತು. ಇನ್ನಾದರೂ ಸಾರ್ವಜನಿಕ ಗಣೇಶೋತ್ಸವವನ್ನು ನಿಲ್ಲಿಸಿ, ಕೇವಲ ಭಕ್ತರು ಮನೆಯೊಳಗೇ ಗಣೇಶ ಪ್ರತಿಮೆ ಸ್ಥಾಪನೆ ಹಾಗೂ ಪೂಜೆಯನ್ನು ಸೀಮಿತ ಗೊಳಿಸಬಹುದು ತಾನೇ? ದೇವರ ವಿಗ್ರಹಕ್ಕೆ ಮೂರರಿಂದ 11 ದಿನ ಹೊಲಸು ರಸ್ತೆಬದಿಯ ವಾಸ ಬೇಕೆ?
ಬೋಳಂತೂರು-ಇರಾದ ಮುಸ್ಲಿಂ ಬಾಂಧವರು ಅಲ್ಲಿಯ ಗಣೇಶೋತ್ಸವದಲ್ಲಿ ಹಿಂದೂ ಭಕ್ತರಿಗೆ ತಂಪು ಪಾನೀಯ ಮತ್ತು ಸಿಹಿತಿಂಡಿ ವಿತರಿಸಬಾರದು ಎಂದು ಗಣೇಶೋತ್ಸವದ ವಿಶ್ವಸ್ತ ಮಂಡಳಿ ಬೋಳಂತೂರು ಮಸೀದಿಯವರಿಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಈ ಮಸೀದಿಯವರು ಕೊಟ್ಟಿದ್ದ ತಂಪು ಪಾನೀಯ ಮತ್ತು ಸಿಹಿತಿಂಡಿ ತಿಂದ ಹಿಂದೂ ಭಕ್ತರು ಆಸ್ವಸ್ಥರಾಗಿದ್ದರು ಎಂದು ಆ ಪತ್ರದಲ್ಲಿ ಆರೋಪಿಸಲಾಗಿದೆ. ಆದರೆ ನಿಜವಾಗಿ ಕಳೆದ ವರ್ಷ ಇಂತಹಾ ಯಾವುದೇ ಕೆಟ್ಟ ಘಟನೆ ನಡೆದಿಲ್ಲ ಎಂದು ಅಲ್ಲಿಯ ಹಿಂದೂಗಳೇ ಹೇಳುತ್ತಿದ್ದಾರೆ ಹಾಗೂ ಈ ಕುರಿತು ಯಾವುದೇ ಪೊಲೀಸ್ ರಿಪೋರ್ಟ್ ದಾಖಲಾದ ಪುರಾವೆ ಇಲ್ಲ.
ಇದೇ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ನನ್ನ ದೂರದ ಸಂಬಂಧಿಯೊಬ್ಬರು ಬೋಳಂತೂರಿನ ಹತ್ತಿರವಿರುವ ಕೆಂಜಿಲ ಎಂಬಲ್ಲಿ ದೈವೀ ಪ್ರೇರಣೆಯಂತೆ ರೂ.35 ಲಕ್ಷ ಖರ್ಚು ಮಾಡಿ ಅರಸು ಕುರಿಯಾಡಿತ್ತಾಯ ದೈವಂಗಳ ಒಂದು ಹೊಸ ಭವ್ಯ ದೈವಸ್ಥಾನ ಕಟ್ಟಿಸಿದ್ದರು. ಅದಕ್ಕೆ ಅಲ್ಲಿಯ ಮುಸ್ಲಿಮರೂ ದೇಣಿಗೆ ಕೊಟ್ಟಿದ್ದರು, ಜತೆಗೆ ಬ್ರಹ್ಮಕಲಶದ ದಿನ ಇರಾದ ಮುಸ್ಲಿಂ ಬಾಂಧವರು ಅಲ್ಲಿ ಬಂದ ಭಕ್ತರಿಗೆ ಶರ್ಬತ್ ಸಹಾ ವಿತರಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈಗ ಕೇವಲ ಐದು ತಿಂಗಳ ತರುವಾಯ ಆ ಸೌಹಾರ್ದತೆ ಕೆಡಿಸಲು ಪ್ರಯತ್ನಿಸುತ್ತಿರುವ ಕೊಳಕು-ಮಂಡಲ ಹಾವು ಯಾರು?
ಬೋಳಂತೂರಿನದೇನೂ ಏಕೈಕ ಘಟನೆ ಅಲ್ಲ, ಕಳೆದ ಕೆಲವರ್ಷಗಳಿಂದ ಕೇರಳದ ಅಯ್ಯಪ್ಪ ಸ್ವಾಮಿ ಭಕ್ತರ ವಿಷಯದಲ್ಲಿಯೂ ಇಂತಹಾ ಕುತ್ಸಿತ ಆಟವನ್ನು ಸಂಘಿಗಳು ಆಡುತ್ತಿದ್ದಾರೆ. ಅನೇಕ ವರ್ಷಗಳಿಂದ ಶಬರಿಮಲೆ-ಕೇರಳಕ್ಕೆ ಕಾಲು ನಡಿಗೆಯಿಂದ ಹೋಗುವ ವೃತಧಾರಿಗಳಿಗೆ ದಾರಿಯಲ್ಲಿ ಮುಸ್ಲಿಂ ಬಾಂಧವರು ತಂಪು ಪಾನೀಯ ಮತ್ತು ಸಾತ್ವಿಕ ತಿಂಡಿ ಕೊಡುತ್ತಿದ್ದರು. ಆದರೆ ಹಿಂದಿನ 4-5 ವರ್ಷಗಳಿಂದ ಕೋಮುವಾದಿಗಳು ಹಿಂದೂ ಬಾಂಧವರ ತಲೆ ಕೆಡಿಸಿ, ಮುಸ್ಲಿಮರು ಕೊಡುವ ತಂಪು ಪಾನೀಯ ಮತ್ತು ತಿಂಡಿಯನ್ನು ಅಯ್ಯಪ್ಪ ವ್ರತಧಾರಿಗಳು ಸ್ವೀಕರಿಸಬಾರದು ಎಂದು ದುರ್ಬೋಧನೆ ಮಾಡುತ್ತಲೇ ಇದ್ದಾರೆ. ಅಷ್ಟೇ ಅಲ್ಲ ವೃತಧಾರಿಗಳು ಅಯ್ಯಪ್ಪ ಸನ್ನಿಧಿಗೆ ಹೋಗುವ ಮುಂಚೆ ಅಲ್ಲಿಯೇ ದಾರಿಯಲ್ಲಿ ಇರುವ ಮುಸ್ಲಿಂ ಸಂತ “ವಾವರ” ಇವರ ಸಮಾಧಿಗೆ ಭೇಟಿ ಕೊಟ್ಟು ಗೌರವ ಸಲ್ಲಿಸುವ ಪದ್ಧತಿ ದಶಕಗಳಿಂದ ನಡೆದು ಬರುತ್ತಿದೆ. ಇದರ ವಿರುದ್ಧವೂ ಸಂಘಿಗಳು ಅಯ್ಯಪ್ಪ ಭಕ್ತರಿಗೆ ದುರ್ಬೋಧನೆ ಮಾಡಿ, ವ್ರತಧಾರಿಗಳು ಮೊದಲು ಮುಸ್ಲಿಂ ದರ್ಗಾಕ್ಕೆ ಭೇಟಿ ಕೊಡಲೇ ಬಾರದು ಎಂದು ಹೇಳುತ್ತಾರೆ. ಅಷ್ಟೇ ಅಲ್ಲ “ತಂಪು ಪಾನೀಯ-ಜಿಹಾದ್, ಸಿಹಿತಿಂಡಿ-ಜಿಹಾದ್” ಕುರಿತು ಜಾಗರೂಕರಾಗಿರಬೇಕು ಎಂದು ‘ದ್ವೇಷಪ್ರೇಮಿಗಳು’ ಬೋಧಿಸುತ್ತಾರೆ.
ದೇಶದ ಎಲ್ಲೆಡೆ ಅನಾದಿ ಕಾಲದಿಂದ ಹಿಂದೂ ಹಬ್ಬ ಹರಿದಿನಗಳ ವಿಷಯದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಎಲ್ಲೆಲ್ಲಿ ಕಾಣಿಸುತ್ತಿದೆಯೋ ಅಲ್ಲೆಲ್ಲಾ ಸಂಘಿಗಳು ಇಂತಹದ್ದೇ ಕುತ್ಸಿತ ಆಟ ಆಡಿ ಹೊಸ ಹೊಸ ರೀತಿಯಲ್ಲಿ ಯಾರು ಹೆಚ್ಚು ಹೆಚ್ಚು ಹಿಂದೂ-ಮುಸ್ಲಿಂ ದ್ವೇಷ ಹರಡುತ್ತಾರೋ ಅವರಿಗೆ ಬಹುಮಾನ ಎಂಬ ರೀತಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ನಡುವೆ ಸ್ಪರ್ಧೆ ಏರ್ಪಡಿಸುತ್ತಿರುವಂತೆ ಕಾಣುತ್ತಿದೆ. ಅದರ ಫಲಶ್ರುತಿಯೇ ಬೋಳಂತೂರು ಘಟನೆ. ದೇಶದಲ್ಲಿ ಎಲ್ಲೆಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ ಮೊದಲಿನಿಂದಲೂ ಇದೆಯೋ ಅಲ್ಲೆಲ್ಲಾ ಇಂತಹದ್ದೇ ಕೊಳಕು ಆಟ ಆಡಿ ಸೌಹಾರ್ದತೆ ಕೆಡಿಸಲೇ ಬೇಕು ಎಂಬ ಆದೇಶ ನೇರವಾಗಿ ನಾಗಪುರದಿಂದ ಬಂದಿರುವುದಾಗಿ ಕೇಸರಿ ಕಾಲಾಳುಗಳೇ ಬಹಿರಂಗ ಪಡಿಸಿದ್ದಾರೆ. (1932-33 ರಲ್ಲಿ ಹಿಟ್ಲರ್ ತನ್ನ ನಾಜಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೂಡಿದ್ದೂ ಇಂತಹದ್ದೇ ಯಹೂದೀ ದ್ವೇಷದ ಮನೋವೈಜ್ಞಾನಿಕ ತಂತ್ರ). ಸದ್ಯದಲ್ಲೇ ಚುನಾವಣೆ ನಡೆಯಲಿರುವ ಹರಿಯಾಣ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ಮತ್ತು ಜಾರ್ಖಂಡ್ ಇಲ್ಲೆಲ್ಲಾ ಇಂತಹ ಕುತ್ಸಿತ ಆಟ ಆಡಲಾಗುತ್ತಿದೆ. (ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮತ್ತು ಮಹಾರಾಷ್ಟ್ರದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಟಿಫಿನ್ ಬಾಕ್ಸ್ ತೆರೆದು ಪರೀಕ್ಷಿಸಿ ಮಾಂಸಾಹಾರ ತಂದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರ ಹಾಕಲಾಗುತ್ತಿದೆ, ಬುಲ್ಡೋಜರ್ ಬಳಸಲಾಗುತ್ತಿದೆ, ಫೇಕ್-ಎನ್‌ಕೌಂಟರ್ ಆಗುತ್ತಿದೆ, ಗೋರಕ್ಷೆಯ ಹೆಸರಲ್ಲಿ ಮತ್ತು ಬೀಫ್ ಹೊಂದಿರುವ ನೆಪದಲ್ಲಿ ಮುದುಕರನ್ನು ಚಚ್ಚಲಾಗುತ್ತಿದೆ, ಇವೆಲ್ಲಾ ರಾಜಕೀಯ ಲಾಭಕ್ಕಾಗಿ ಆಡುವ ಪೂರ್ವ-ನಿಯೋಜಿತ ಕೋಮುದ್ವೇಷದ ತಂತ್ರ ಎಂಬ ಆರೋಪವಿದೆ).
ನಮ್ಮ ಉತ್ತರ ಕರ್ನಾಟಕದಲ್ಲಿ ಬಹಮನಿ ಸುಲ್ತಾನರ ಕಾಲದ ಅನೇಕ ಪ್ರಸಿದ್ಧ ಸೂಫಿ ಸಂತರ ದರ್ಗಾಗಳಿವೆ. ಅದರಲ್ಲಿ ಕಲಬುರ್ಗಿಯ ಖ್ವಾಜಾ ಬಂದೇ ನವಾಜ ದರ್ಗಾ ಬಹಳ ಪ್ರಸಿದ್ಧ. ಈ ಎಲ್ಲಾ ದರ್ಗಾಗಳಿಗೂ ಹಿಂದೂಗಳು ಮತ್ತು ಲಿಂಗಾಯತರು ಭೇಟಿ ನೀಡಿ ಹೂವು ಮತ್ತು ಚಾದರ್ ಆರ್ಪಿಸುತ್ತಾರೆ. ಇತ್ತೀಚೆಗೆ ಹಿಂದೂಗಳು ದರ್ಗಾಕ್ಕೆ ಭೇಟಿ ಕೊಡುವುದರ ವಿರುದ್ಧವೂ ಸಂಘಿಗಳಿಂದ ದುರ್ಬೋಧನೆ ನಡೆಯುತ್ತಿದೆ. ಹಿಂದೂಗಳು ಮುಸ್ಲಿಮರ ದರ್ಗಾಗಳಿಗೆ ಭೇಟಿ ಕೊಡಬಾರದು ಎಂದು ಅಗ್ರಹಿಸಲಾಗುತ್ತಿದೆ. ಕೋಮು ಸೌಹಾರ್ದತೆ ಕಂಡಲ್ಲೆಲ್ಲಾ ಸಂಘಿಗಳಿಗೆ ಯಾಕೋ ಉರಿ ಏಳುತ್ತದೆ ಪಾಪ. ಬಾಬಾ ಬುಡನ್ ಗಿರಿ ಮತ್ತು ಹುಬ್ಬಳಿಯ ಈದ್ಗಾ ಮೈದಾನದಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳಲ್ಲಿ ಹಲವರು ರಾಜಕೀಯ ನೇತಾರರಾಗಿ, ಸಂಸದರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಣ ಮತ್ತು ಅಧಿಕಾರದ ಸುಪ್ಪತ್ತಿಗೆ ಅನುಭವಿಸುತ್ತಿರುವುದನ್ನು ಕಂಡ ನಂತರ ಪುಡಿ ರೌಡಿಗಳೆಲ್ಲಾ ಹಿಂದುತ್ವ ನೇತಾರರಾಗಿ ಗೋರಕ್ಷಕರಾಗಿ ಬಡ್ತಿ ಹೊಂದುತ್ತಿದ್ದಾರೆ.
ಬೋಳಂತೂರಿನ ಜೈನ ಬಂಗರಸರ ಕಾಲದ ಹಳೆಯ ಇತಿಹಾಸ ಗೊತ್ತಿದ್ದವರಿಗೆ ಅಲ್ಲಿ 600 ವರ್ಷ ಹಿಂದಿನಿಂದ ಇದ್ದ ಜೈನ- ಹಿಂದೂ-ಮುಸ್ಲಿಂ ಸೌಹಾರ್ದತೆ ಗೊತ್ತಿದೆ. ಆದರೆ ಈಗಿನ ಸ್ಥಾಪಿತ ಹಿತಾಸಕ್ತಿಗಳು ಈ ಭವ್ಯ ಇತಿಹಾಸವನ್ನು ಮರೆಮಾಚುತ್ತಿವೆ. ಕೇವಲ ಅಬ್ಬಕ್ಕ ರಾಣಿಯ ಪರವಾಗಿ ಮಾತ್ರವಲ್ಲ ಬಂಗರಸರ ಪರವಾಗಿಯೂ ಮುಸ್ಲಿಂ ಯೋಧರು ಪೋರ್ಚುಗೀಸರೊಂದಿಗೆ ಯುದ್ಧ ಮಾಡಿ ಸಾವಿರಾರು ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ. ಅವರ ಜತೆ ಹಿಂದುಳಿದ ವರ್ಗದ ಹಿಂದೂಗಳು ಮತ್ತು ಪರಿಶಿಷ್ಟ ಜಾತಿಯ ಮುಂಡಾಳ ಯೋಧರೂ ಬಂಗರಸರ ಪರವಾಗಿ ಹೋರಾಡಿ ಪೋರ್ತುಗೀಸರನ್ನು ಹಿಮ್ಮೆಟ್ಟಿಸಿದ್ದರು. (ಮೇಲ್ಜಾತಿಯ ತುಳುವರು ಯಾರೂ ಈ ಯುದ್ಧದಲ್ಲಿ ಭಾಗವಹಿಸಲಿಲ್ಲವಂತೆ!) ಇವರೆಲ್ಲಾ ಅಂದು ಪೋರ್ಚುಗೀಸರೊಂದಿಗೆ ಯುದ್ಧ ಮಾಡಿರದಿದ್ದರೆ ಗೋವಾದ ಬದಲು ನಮ್ಮ ತುಳುನಾಡೇ ಪೋರ್ಚುಗೀಸರ ಮೊದಲ ವಸಾಹತು ಆಗುತ್ತಿತ್ತು ಮತ್ತು ಗೋವಾದಲ್ಲಿ ಧಾರ್ಮಿಕ ಉತ್ಪಾತ ಆಗುವ ಬದಲು ತುಳುನಾಡಿನಲ್ಲಿ ಆಗಿರುತ್ತಿತ್ತು. ಹಾಗೂ ಬೋಳಂತೂರು-ಇರಾ ಗ್ರಾಮದ ಆರಾಧ್ಯ ದೈವ “ಅರಸು ಕುರಿಯಾಡಿದಾರ್ ಮೂವೆರು ದೈಯೋಂಗುಲು” ಸಾನಿಧ್ಯ ಅಲ್ಲಿ ಸ್ಥಾಪನೆ ಆಗಲು ಪೋರ್ಚುಗೀಸರು ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, 500 ವರ್ಷಗಳ ಹಿಂದೆ ಗೋವಾದ ಕೊಂಕಣಿಗರು ಮತಾಂತರಕ್ಕೆ ಹೆದರಿ ತುಳುನಾಡಿಗೆ ಓಡಿ ಬರುವ ಬದಲು ತುಳುನಾಡಿನ ಹೈಗರು ಮತ್ತು ಕೊಂಕಣಿಗರೇ ಗೋವಾಕ್ಕೆ ಓಡಿ ಹೋಗಬೇಕಾದ ಸಂದರ್ಭ ಎದುರಾಗುತ್ತಿತ್ತೇನೋ! ಉಡುಪಿ ಶ್ರೀಕೃಷ್ಣ ಮಠದ ಸ್ಥಳವನ್ನು ಒಬ್ಬ ಮುಸ್ಲಿಂ ದೊರೆ ಮಧ್ವಾಚಾರ್ಯರಿಗೆ ದಾನವಾಗಿ ಕೊಟ್ಟಿದ್ದು ಎಂದು ದಿವಂಗತ ಪೇಜಾವರ ಸ್ವಾಮೀಜಿಗಳೇ ಹೇಳಿದ್ದು ಹಾಗೂ ಶ್ರೀಕೃಷ್ಣ ಮಠದಲ್ಲಿಯೇ ಪೇಜಾವರರು ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಿದ್ದು ಕೋಮುವಾದಿಗಳಿಗೆ ಇಷ್ಟು ಬೇಗ ಮರೆತು ಹೋಯಿತೆ?
ಮುಂಬೈ, ನವಿ ಮುಂಬೈ, ಠಾಣೆ ಈ ಮೂರು ಪ್ರದೇಶದ ಒಟ್ಟು ಜನಸಂಖ್ಯೆ ಮೂರು ಕೋಟಿ, ಮತ್ತು ಅಲ್ಲಿ ಸ್ಥಾಪನೆ ಆಗುವ ಸಾರ್ವಜನಿಕ ಗಣೇಶಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚು. ಒಂದೊಂದು ಗಣೇಶ ಮಂಡಳಿಯೂ ಸಾರ್ವಜನಿಕರಿಂದ (ಒತ್ತಾಯದಿಂದ) ಸಂಗ್ರಹಿಸುವ ವಂತಿಗೆಯ ಒಟ್ಟು ಮೊತ್ತ ರೂ.ಹತ್ತು ಲಕ್ಷದಿಂದ ಮೂರು ಕೋಟಿಯ ವರೆಗೂ ಆಗುತ್ತದೆ. ಹಾಗಾದರೆ 25,000 ಗಣೇಶ ಮಂಡಲಿಗಳು ಸಂಗ್ರಹಿಸುವ ಒಟ್ಟು ಮೊತ್ತ ಊಹಿಸಿ. ಹೀಗೆ ಸಂಗ್ರಹ ಆಗುವ ನೂರಾರು ಕೋಟಿ ಹಣ ಹೇಗೆ ಬಳಕೆ ಆಗುತ್ತದೆ ಎಂದು ಯಾರಿಗಾದರೂ ಸರಿಯಾಗಿ ಗೊತ್ತಿದೆಯೇ? ಇದು ಯಾವುದೇ ಆಡಿಟ್ ಗೆ ಒಳಪಡುವುದಿಲ್ಲ.
ಸ್ಥಳೀಯ ರಾಜಕೀಯ ಪುಢಾರಿಗಳು, ದಾದಾಗಳು, ದಲ್ಲಾಳಿಗಳೆ ಈ ಗಣೇಶ ಮಂಡಳಿಗಳ ಪದಾಧಿಕಾರಿಗಳು. ಸಂಗ್ರಹವಾದ ಭಾರಿ ಮೊತ್ತದ ನಗದು ಹಣದಲ್ಲಿ ಪೂಜೆ, ಪೆಂಡಾಲ್, ಕುರ್ಚಿ, ಅಲಂಕಾರ, ಲೈಟಿಂಗ್, ಡಿಜೆ ಇವುಗಳಿಗೆ ಖರ್ಚಾಗಿ ಉಳಿದದ್ದು ಸಂಘಟಕರ ಜೇಬಿಗೆ! ದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವ ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಕರ್ನಾಟಕದ ಬೆಂಗಳೂರು ಹುಬ್ಬಳ್ಳಿ ಬೆಳಗಾವಿ ಕಲಬುರ್ಗಿಯಲ್ಲೂ ಇದೇ ಅವಸ್ಥೆಯಿದೆ. ಅದಕ್ಕಾಗಿಯೇ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಆಡಂಬರದ ಭಕ್ತಿಯೊಂದಿಗೆ ಅನೇಕ ಸಂಘ ಸಂಸ್ಥೆಗಳು ಮುಗಿಬೀಳುವುದು.
ಮೂಲತಃ ಸಾರ್ವಜನಿಕ ಗಣೇಶೋತ್ಸವಕ್ಕೂ ಹಿಂದುತ್ವವಾದಿಗಳಿಗೂ ಯಾವುದೇ ಸಂಬಂಧವಿಲ್ಲ. 1893 ರಲ್ಲಿ ಮೊದಲ ಗಣೇಶೋತ್ಸವ ಅಧಿಕೃತವಾಗಿ ಶುರು ಮಾಡಿದವರು ಕಾಂಗ್ರೆಸ್ಸಿಗರಾಗಿದ್ದ ಲೋಕಮಾನ್ಯ ತಿಲಕರು. ತಿಲಕರು 1920 ರಲ್ಲಿ ತೀರಿಕೊಂಡಿದ್ದರೂ 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ವರೆಗೂ 27 ವರ್ಷ ಗಣೇಶೋತ್ಸವಗಳನ್ನು ಸತತ ನಡೆಸಿಕೊಂಡು ಬಂದವರು ಕಾಂಗ್ರೆಸ್ಸಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರೇ! ಆದರೆ, ಈಗ ಈ ಉತ್ಸವದ ಮೇಲೆ ಹಿಂಬಾಗಿಲಿಂದ ಪೇಟೆಂಟ್ ಸ್ಥಾಪಿಸುತ್ತಿರುವವರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಹಿಂದುತ್ವವಾದಿಗಳ ವಾರಸುದಾರರು ಎಂಬುದು ವಿಪರ್ಯಾಸ. ಈಗ ಎಲ್ಲಾ ಗಣೇಶೋತ್ಸವದಲ್ಲೂ ಸಾವರ್ಕರರ ದೊಡ್ಡ ಫೋಟೋ ಪ್ರದರ್ಶಿಸುತ್ತಿರುವುದನ್ನು ನೋಡಿದಾಗ ಅವರೇ ಗಣೇಶೋತ್ಸವ ಶುರು ಮಾಡಿದ್ದರೋ ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಮೂಡಬಹುದು. (ನಿಜವಾಗಿ ಸಾವರ್ಕರರು ಕಟ್ಟಾ ನಾಸ್ತಿಕರಾಗಿದ್ದರು, ಅವರು ಗಣೇಶ ದೇವರನ್ನೂ ನಂಬುತ್ತಿರಲಿಲ್ಲ, ಗೋಮಾತೆಯನ್ನೂ ನಂಬುತ್ತಿರಲಿಲ್ಲ, ಬೀಫ್ ತಿನ್ನುವುದರಲ್ಲಿ ತಪ್ಪಿಲ್ಲ ಎಂದೂ ಸಾವರ್ಕರರು ಹೇಳುತ್ತಿದ್ದರಂತೆ). ತಿಲಕರು ಸಾರ್ವಜನಿಕ ಗಣೇಶೋತ್ಸವ ಶುರು ಮಾಡಿದ್ದು ಕೇವಲ ಸ್ವಾತಂತ್ರ ಹೋರಾಟದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಬ್ರಿಟಿಷರ ವಿರುದ್ಧ ಜನರನ್ನು ಒಗ್ಗೂಡಿಸಲು ಮಾತ್ರ. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಶುರುವಾದ ಸಾರ್ವಜನಿಕ ಗಣೇಶೋತ್ಸವವು ಸ್ವಾತಂತ್ರ್ಯ ಸಿಕ್ಕ ನಂತರ ನಿಲ್ಲಬೇಕು, ಹಾಗೂ ಆಸ್ತಿಕರು ಇದನ್ನು ಕೇವಲ ತಮ್ಮ ಮನೆಯೊಳಗೆ ಮಾತ್ರ ಆಚರಿಸಬೇಕು ಎಂಬುದು ತಿಲಕರ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಆಶಯವಾಗಿತ್ತು. ಆದರೆ ಅದು ಈಡೇರಲೇ ಇಲ್ಲ. ಅದರ ಬದಲಿಗೆ ಅದು ವಿಕಾರವಾಗಿ ಬೆಳೆದು ಈಗ ಒಂದು ಅತ್ಯಂತ ಲಾಭದಾಯಕ “ಧಾರ್ಮಿಕ ಉದ್ಯಮ”ವಾಗಿ ಮಾರ್ಪಟ್ಟಿದೆ.
1889 ರಲ್ಲಿಯೇ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನರನ್ನು ಒಟ್ಟುಗೂಡಿಸಲು ಸಾರ್ವಜನಿಕ ಗಣೇಶೋತ್ಸವದ ಐಡಿಯಾ ಹುಟ್ಟು ಹಾಕಿ ಅದನ್ನು ಪುಣೆಯ ಶನಿವಾರವಾಡಾದಲ್ಲಿ ತನ್ನ ಖಾಸ ಚಿತ್ಪಾವನ ಬ್ರಾಹ್ಮಣ ಗೆಳೆಯರೊಂದಿಗೆ ಕೂಡಿ ಸಣ್ಣ ಮಟ್ಟದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದರು. ಶನಿವಾರವಾಡವು ಪೇಶ್ವೆಗಳ ಅರಮನೆ ಇರುವ ಸ್ಥಳ. ಆಗ ತಿಲಕರಿಗೆ 33 ವರ್ಷ ವಯಸ್ಸು. ಆಗಲೇ ಮಹಾತ್ಮಾ ಜ್ಯೋತಿಬಾ ಫುಲೆ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸುತ್ತಾ, ಗಣೇಶೋತ್ಸವವು ಸ್ವಾತಂತ್ರ್ಯ ಹೋರಾಟದ ಅಸ್ತ್ರ ಆಗುವ ಬದಲು ಮುಂದೆ ಅದೊಂದು ವಿಕಾರ ಆರ್ಥಿಕ ಮತ್ತು ಧಾರ್ಮಿಕ ಶೋಷಣೆಯ ಸಾಧನವಾಗಿ, ಅಥವಾ ಮೌಢ್ಯ ಹರಡುವ ಸಾಧನವಾಗಿ ಮೇಲ್ಜಾತಿಯವರ ಕೈಯಲ್ಲಿಯ ಅಡಂಬೋಲ ಆಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಜ್ಯೋತಿಬಾ ಫುಲೇ 1890 ರಲ್ಲಿ ತೀರಿಕೊಂಡರು. ಒಂದು ವೇಳೆ 1893 ರಲ್ಲಿ ತಿಲಕರು ಅಧಿಕೃತವಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಮುಂಬೈ ಮತ್ತು ಪುಣೆಯಲ್ಲಿ ಶುರು ಮಾಡುವಾಗ ಫುಲೆಯವರು ಬದುಕಿದ್ದರೆ ಖಂಡಿತಾ ಆಕ್ಷೇಪ ವ್ಯಕ್ತ ಪಡಿಸದೆ ಇರುತ್ತಿರಲಿಲ್ಲ. ಯಾಕೆಂದರೆ ತಿಲಕರು ಮಹಿಳೆಯರ ಶಿಕ್ಷಣದ ಕಟ್ಟಾ ವಿರೋಧಿಯಾಗಿದ್ದದ್ದು ಮಾತ್ರವಲ್ಲ ಅವರು ಮಹಿಳೆಯರು ಮತ್ತು ದಲಿತರು ದೇವರ ಪೂಜೆಯಲ್ಲಿ ಸಾರ್ವಜನಿಕವಾಗಿ ನೇರ ಪಾಲ್ಗೊಳ್ಳುವುದನ್ನು ಕೂಡ ವಿರೋಧಿಸಿದ್ದರಂತೆ!.
ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸಲು ತಾನು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತರುತ್ತಿರುವುದು ಎಂದು ಬಾಲಗಂಗಾಧರ ತಿಲಕರು ಕಾರಣ ಹೇಳಿದ್ದರೂ ಪಕ್ಕಾ ಜಾತಿವಾದಿ ಆಗಿದ್ದ ತಿಲಕರು ತಮ್ಮ ಕುಲದೇವರಾದ ಗಣೇಶನನ್ನೇ ಯಾಕೆ ಅರಿಸಿಕೊಂಡಿದ್ದು? ಬೆಂಗಾಲಿಗಳಂತೆ ದುರ್ಗಾ ಪೂಜೆ ಯಾಕೆ ತಿಲಕರು ಅರಿಸಿಕೊಳ್ಳಲಿಲ್ಲ? ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಪ್ರಸಿದ್ಧ ಪತ್ರಕರ್ತ ರವೀಶ್ ಕುಮಾರ್ ಹೇಳುವಂತೆ ರಾಜಕೀಯ ಪಕ್ಷದ ಐಟಿ ಸೆಲ್ ನವರು ಮತ್ತು ಗೋದಿ ಮೀಡಿಯಾದವರು ತಮ್ಮ ಪಕ್ಷಪಾತಿ ಸುಳ್ಳು ಸುದ್ದಿಗಳ ಮೂಲಕ ದೇಶದ ಜನರನ್ನು ಬ್ರೇನ್ ವಾಶ್ ಮಾಡಿ ಸ್ವಂತ ಆಲೋಚನಾ ಶಕ್ತಿ ಇಲ್ಲದ “ಜೊಂಬೀ” ಗಳಾಗಿ (ನಡೆದಾಡುವ ಶವವಾಗಿ) ಪರಿವರ್ತಿಸಿದ್ದಾರೆ ಎಂಬುದು ಸತ್ಯ. ರವೀಶ್ ಹೇಳುವಂತೆ (ಟೆಕ್ ಫಾಗ್ ಮತ್ತು ಟ್ರಾಡ್ಸ್ ಮುಂತಾದ ಆಪ್ ಗಳ ಮುಖಾಂತರ) ನಮಗೇ ಅರಿವಿಲ್ಲದಂತೆ ನಮ್ಮ ನಿತ್ಯದ ಆಲೋಚನೆಯಲ್ಲಿ ಮತ್ತು ದೈನಂದಿನ ಆಚರಣೆಯಲ್ಲಿ ಧರ್ಮದ ಅಮಲು ಮತ್ತು ಕೋಮುದ್ವೇಷದ ವಿಷ ಬೆರೆಸಿ ನಮ್ಮನ್ನೆಲ್ಲಾ ಮುಸ್ಲಿಂ-ಕ್ರೈಸ್ತ ದ್ವೇಷಿ ಜೊಂಬಿಗಳಾಗಿ ಪರಿವರ್ತಿಸಿ ಕೊನೆಗೆ ಒಂದೇ ಗುಂಪಿನ ರಾಜಕಾರಣಿಗಳ ಕುರುಡು ಭಕ್ತರಾಗಿ ಪರಿವರ್ತಿಸುವಲ್ಲಿ ರಾಜಕೀಯ ರಣತಂತ್ರಗಾರರು ಯಶಸ್ವಿಯಾಗಿದ್ದಾರೆ ಎಂಬ ಕಹಿ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು! .
ಪ್ರವೀಣ್ ಎಸ್ ಶೆಟ್ಟಿ
ಸಾಮಾಜಿಕ ಚಿಂತಕರು
ಇದನ್ನೂ ಓದಿ- ಗಣೇಶೋತ್ಸವ ಮತ್ತು ಶೋಷಿತರ ಲೋಕಮಾನ್ಯರು