ಬಹುತ್ವ, ಸೋದರತೆ, ಸಮನ್ವಯತೆಗಳ ಮೂಲಕ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವುದು ಗಾಂಧೀಜಿಯವರ ಒಡಲಿನ ಆಶಯವಾಗಿತ್ತು. ದೇಶದ ಸಾಮಾಜಿಕ ಒಗ್ಗಟ್ಟಿಗಾಗಿ ಪ್ರಯತ್ನಿಸುತ್ತಲೇ ತಮ್ಮನ್ನು ದೇಶಕ್ಕೆ ಅರ್ಪಿಸಿಕೊಂಡ ಗಾಂಧಿ, ದೇಶದ ಜನರ ಹೃದಯದ ಸ್ಥಾಯೀಭಾವ. ಅವರನ್ನು ನಾವೆಲ್ಲರೂ ಗೌರವಿಸೋಣ – ಡಾ. ಇಸ್ಮಾಯಿಲ್ ಎನ್, ವಿಶ್ರಾಂತ ಪ್ರಾಂಶುಪಾಲರು.
ನನಗೆ ಮಹಾತ್ಮ ಗಾಂಧಿಯವರು ತುಂಬಾ ಇಷ್ಟ. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ, ಗಾಂಧೀಜಿಯವರ ಚಿತ್ರಗಳನ್ನು ನೋಡುವುದೆಂದರೆ, ಒಂಥರದ ಪುಳಕ. ಏಕೆಂದರೆ, ನನ್ನ ಎಳೆಯ ಪ್ರಾಯದಲ್ಲಿ ನನ್ನ ಓರಗೆಯ ಪುಟ್ಟ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ‘ಮಹಾತ್ಮ ಗಾಂಧೀಜಿಕೀ ಜೈ’ ಎಂದು ಕೂಗುತ್ತಿದ್ದ ಘೋಷ ವಾಕ್ಯ ನನ್ನಂತಹ ಹಲವಾರು ಚಿಕ್ಕ ಮಕ್ಕಳನ್ನು ಎಚ್ಚರ ಗೊಳಿಸುತ್ತಿತ್ತು. ಬಡಕಲು ದೇಹದ ಅರೆಬತ್ತಲೆ ಗಾಂಧಿ ಅಜ್ಜನ ಕೋಲು ನನ್ನನ್ನು ಬೆರಗು ಗೊಳಿಸುತ್ತಿತ್ತು. ಪ್ರಾಥಮಿಕ ಶಾಲೆಯ ನನ್ನ ಸರ್ ಗಳು ಗಾಂಧಿಯವರ ಕುರಿತಾದ ಚಿಕ್ಕ ಪುಟ್ಟ ಕತೆಗಳನ್ನು ಹೇಳುತ್ತಿದ್ದುದು ಇವತ್ತಿಗೂ ನನ್ನ ಕಿವಿಗಳಿಗೆ ಕೇಳಿಸುವಂತಿವೆ. ಹಾಗೆಯೇ ಮನೆಯಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಗಾಂಧೀಜಿಯವರ ಹೋರಾಟದ ಕತೆಗಳನ್ನು ಹೇಳುತ್ತಾ ,” ಎಂದೂ ಸುಳ್ಳು ಹೇಳಬಾರದು” ಎಂದು ಎಚ್ಚರಿಸುತ್ತಿದ್ದರು. ಗಾಂಧೀಜಿಯವರು ಕೇವಲ ಸತ್ಯವನ್ನೇ ಹೇಳುತ್ತಿದ್ದರು, ಹಾಗೆಯೇ ನಾವೆಲ್ಲರೂ ಸತ್ಯವನ್ನೇ ಹೇಳಬೇಕು.. ಈ ಮಾತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನನ್ನ ಎದೆಗೆ ಮುಟ್ಟಿತ್ತು.
ಬೆಳೆಯುತ್ತಲೇ, ನಮ್ಮ ದೇಶದ ಗುಲಾಮಗಿರಿ, ವಿದೇಶಿ ಆಡಳಿತದ ವಿರುದ್ಧ ಗಾಂಧೀಜಿಯವರ ಸಂಘಟನಾತ್ಮಕವಾದ ಚಳುವಳಿ, ಸತ್ಯಾಗ್ರಹ, ಜೈಲು ವಾಸ, ಬಿಡುಗಡೆ ಮತ್ತೆ ಸತ್ಯಾಗ್ರಹ ಮತ್ತೆ ಜೈಲು ..ಇತ್ಯಾದಿ ವಿಚಾರಗಳನ್ನು ಓದುತ್ತಿದ್ದೆ. ಯಾವುದೇ ಭೌತಿಕ ಆಯುಧಗಳಿಲ್ಲದೆ, ಕೇವಲ ಅಹಿಂಸಾತ್ಮಕ ಹೋರಾಟದ ಮೂಲಕ ಗಾಂಧೀಜಿಯವರು ಬ್ರಿಟಿಷರನ್ನು ನಮ್ಮ ದೇಶವನ್ನು ಬಿಟ್ಟು ಹೋಗುವಂತೆ ಮಾಡಿದರು, ನಾವು ಸ್ವತಂತ್ರರಾದೆವು. ಇಂತಹ ಒಂದು ಚಾರಿತ್ರಿಕ ವಿಚಾರವನ್ನು ನಾವು ಖಂಡಿತಾ ಗೌರವಿಸಬೇಕು. ಹಾಗೆಯೇ ರಾಷ್ಟ್ರೀಯ ವಿಚಾರಗಳಲ್ಲಿ ಯೋಚಿಸುತ್ತಿದ್ದ ನಾನು ಹಾಗೂ ನನ್ನಂತಹ ಹಲವಾರು ಸಮಾನ ಮನಸ್ಕ ಬಂಧುಗಳಿಗೆ ಗಾಂಧಿಯವರು ಪ್ರೇರಕವಾದುದಂತೂ ಸತ್ಯ. ಗಾಂಧೀಜಿಯವರು ಬರೆದ ಮತ್ತು ಅವರ ಬಗೆಗೆ ಬೇರೆಯವರು ಬರೆದ ಕೆಲವೊಂದು ಪುಸ್ತಕಗಳನ್ನು ಓದಿದ ನನಗೆ ,ಅವರೊಬ್ಬ ಅನುಕರಣೀಯ ಮತ್ತು ಅನುಸರಣೀಯ ವ್ಯಕ್ತಿ ಎಂಬ ನಂಬಿಕೆ ಬಂತು
” ಅನೇಕ ತಲೆಮಾರುಗಳು ಸಂದರೂ, ಈ ಭೂಮಿಯಲ್ಲಿ ಗಾಂಧಿಯಂತಹ ಮಾಂಸ ಮತ್ತು ರಕ್ತವನ್ನು ಹೊಂದಿದ್ದ ಮನುಷ್ಯ ಓಡಾಡಿದ್ದನೆಂದರೆ ನಂಬುವುದು ಕಷ್ಟ ” ಎಂದು ವಿಜ್ಞಾನಿ ಐನ್ ಸ್ಟೈನ್ ಬರೆಯುತ್ತಾರೆ. ದೇಶ ವಿದೇಶಗಳ ಜ್ಞಾನಿಗಳ, ವಿಜ್ಞಾನಿಗಳ ದೃಷ್ಟಿಯಲ್ಲಿ ಗಾಂಧೀಜಿಯೆಂದರೆ ಅದೊಂದು ಮಹಾಪರ್ವತ, ಮಹಾಸಾಗರ, ಒಂದು ಮಹಾಶಕ್ತಿ…ಇದು ಅತಿಶಯೋಕ್ತಿ ಖಂಡಿತಾ ಅಲ್ಲ.
ಬ್ಯಾರಿಸ್ಟರ್ ಮೋಹನದಾಸ ಕರಮಚಂದ್ ಗಾಂಧಿ, ವಕೀಲ ವೃತ್ತಿಯಲ್ಲೇ ಮುಂದುವರಿಯುತ್ತಿದ್ದರೆ, ಉತ್ತಮ ನ್ಯಾಯವಾದಿಯಾಗಿ ಮುಂದಕ್ಕೆ ದೇಶದ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಹೆಸರುವಾಸಿಯಾಗುತ್ತಿದ್ದರೋ ಗೊತ್ತಿಲ್ಲ. ಭಾರತದ ಗುಲಾಮಗಿರಿಯನ್ನು ಕಂಡು ಬೇಸತ್ತು ದೇಶವನ್ನು ಬ್ರಿಟಿಷರಿಂದ ಮುಕ್ತಿ ಗೊಳಿಸಬೇಕೆಂಬ ದೃಢ ನಿಲುವಿನೊಂದಿಗೆ ಅಂದಿನ ಹಿರಿಯ ಹೋರಾಟಗಾರರ ಜೊತೆಗೆ ಸೇರಿ ತಾವೂ ಸ್ವಾತಂತ್ರ್ಯ ಚಳುವಳಿಗೆ ಪ್ರವೇಶಿಸುತ್ತಾರೆ. ದೇಶದ ಉದ್ದಗಲಕ್ಕೂ ಸಂಚರಿಸುತ್ತಾರೆ. ಸ್ವಾತಂತ್ರ್ಯ ಬಯಸುವ ಮನಸ್ಸುಗಳನ್ನು ಒಗ್ಗೂಡಿಸುತ್ತಾರೆ. ಹಿರಿಯರು, ಕಿರಿಯರು, ಮಹಿಳೆಯರು ಗಾಂಧೀಜಿಯವರನ್ನು ಅನುಸರಿಸುತ್ತಾರೆ. ಎರಡನೆಯ ಜಾಗತಿಕ ಯುದ್ಧ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ಗಾಂಧೀಜಿಯವರ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತದೆ. 1942 ಕ್ವಿಟ್ ಇಂಡಿಯಾ ಚಳವಳಿ, ಗಾಂಧೀಜಿಯವರಿಗೂ ಬ್ರಿಟಿಷ್ ಸರ್ಕಾರಕ್ಕೂ ನಿರ್ಣಾಯಕ ಸಂದರ್ಭವಾಗುತ್ತದೆ…ಇದು ಇತಿಹಾಸ. ಮುಂದಕ್ಕೆ ಹೆಚ್ಚುಕಾಲ ಭಾರತವನ್ನು ತನ್ನ ವಶ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನರಿತ ಪ್ರಭುತ್ವ, ಗಾಂಧೀಜಿಯವರ ನಿಜ ಶಕ್ತಿ ಗೆ ಮಣಿಯಬೇಕಾದುದು ಅನಿವಾರ್ಯವಾಗಿರಬಹುದು.ಅಂತೂ 1947 ಅಗಸ್ಟ್ ತಿಂಗಳಲ್ಲಿ ಭಾರತ ಸ್ವತಂತ್ರ ದೇಶವಾಯಿತು. ದೇಶವನ್ನು ವಿಭಜನೆ ಮಾಡಿ ನಮಗೆ ಸ್ವಾತಂತ್ರ್ಯ ಬೇಕಾಗಿರಲಿಲ್ಲ..ಇದಕ್ಕೆ ಗಾಂಧೀಜಿಯವರೇ ಕಾರಣರು ಎಂಬ ಟೀಕೆಗಳನ್ನು ಗಾಂಧೀಜಿಯವರು ಎದುರಿಸಬೇಕಾಯಿತು.
ನಿಜ, ಅವರಿಗೆ ರಾಜಕೀಯ ಸ್ವಾತಂತ್ರ್ಯ ಬೇಕಾಗಿರಲಿಲ್ಲ, ಸಾಮಾಜಿಕ ಸ್ವಾತಂತ್ರ್ಯ ಬೇಕಾಗಿತ್ತು. ಸ್ವತಂತ್ರ ಭಾರತದಲ್ಲಿ ನಮ್ಮ ಹೆಣ್ಣುಮಕ್ಕಳು ಸುಭದ್ರರಾಗಿರಬೇಕು, ಸಮಾಜದ ಕಟ್ಟಕಡೆಯ ಮನುಷ್ಯರ ಮುಖಗಳಲ್ಲಿಯೂ ನಗುವನ್ನು ಕಾಣಬೇಕು ಎಂಬುದರ ಬಗೆಗೆ ಗಾಂಧೀಜಿಯವರು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡಲು ಸಂಕಲ್ಪ ಮಾಡಿಕೊಂಡಿದ್ದರು. ಸ್ವತಂತ್ರ ಭಾರತದ ಎಲ್ಲರೂ ಪರಸ್ಪರ ಅಣ್ಣ ತಮ್ಮಂದಿರಂತೆ, ಅಕ್ಕ ತಂಗಿಯರಂತೆ ಬದುಕಬೇಕು, ಇಲ್ಲಿ ಎಲ್ಲಾ ಧರ್ಮಗಳು, ಜಾತಿಗಳು ಪ್ರೀತಿ ಸೌಹಾರ್ದತೆಯಿಂದ ಕೂಡಿ ಬಾಳಬೇಕು, ಬಹುತ್ವ ಭಾರತ, ಸಹಿಷ್ಣು ಭಾರತ ನಮ್ಮದಾಗಬೇಕು ಎಂಬುದು ಗಾಂಧೀಜಿಯವರ ದೃಢ ನಿಲುವು.
ಹಿಂದೂ ಮುಸ್ಲಿಂ ಸೌಹಾರ್ದತೆಯನ್ನು ಬೆಸೆಯುವ ಪ್ರಯತ್ನದಿಂದಲೇ ಮತ್ತು ಅದೇ ಕಾರಣಕ್ಕಾಗಿಯೇ ಅವರು ಹತ್ಯೆಯಾಗ ಬೇಕಾಯಿತು. ಸ್ವತಂತ್ರ ಭಾರತ ಸ್ವತಂತ್ರಗೊಂಡ ಕೆಲವೇ ತಿಂಗಳಲ್ಲಿ ಗಾಂಧೀಜಿಯವರನ್ನು ಕಳೆದುಕೊಂಡಿತು. ಇದು ನಮ್ಮ ದೇಶದ ಪ್ರಥಮ ದುರಂತ. ದೇಶ ವಿದೇಶಗಳು ಇವರ ಸಾವಿನ ಸುದ್ದಿಯನ್ನು ಕೇಳಿ ತತ್ತರಿಸಿದವು. ಒಂದು ಕ್ಷಣ ಇಡೀ ಜಗತ್ತೇ ಮೌನಗೊಂಡಿತು. 1948 ಜನವರಿ 30 ಇಡೀ ಜಗತ್ತಿಗೆ ದುಃಖವನ್ನು ತಂದ ದುರಂತ ದಿನವಾಯಿತು. ಮೇರು ವ್ಯಕ್ತಿತ್ವದ ಗಾಂಧೀಜಿಯವರು ಇತಿಹಾಸದ ಪುಟದಲ್ಲಿ ಲೀನವಾದರು.
ಗಾಂಧೀಜಿ ಕೇವಲ ಆದರ್ಶವಾದಿಯಾಗಿರಲಿಲ್ಲ. ವಾಸ್ತವಿಕತೆ ಮತ್ತು ಆದರ್ಶ ಇವುಗಳ ಮಧ್ಯೆ ಬದುಕಿದವರು. ಅವರನ್ನು ಕೆಲವೊಮ್ಮೆ ಅವರ ಆಪ್ತರಿಗೇ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತಂತೆ. ಅವರ ತತ್ತ್ವ ಸಿದ್ಧಾಂತ ಮತ್ತು ಅವರು ಅನುಸರಿಸುತ್ತಿರುವ ಜೀವನ ಮೌಲ್ಯಗಳನ್ನು ಅನೇಕರು ತಪ್ಪಾಗಿ ತಿಳಿದು, ಅವರ ಜೊತೆ ಕೋಪಿಸಿ ಕೊಳ್ಳುತ್ತಿದ್ದರಂತೆ. ಮಿತ್ರರ ಕೋಪ ತಾಪಗಳು ಗಾಂಧೀಜಿಯವರನ್ನು ಬಹಳಷ್ಟು ಕಾಡಿದ್ದೂ ಉಂಟು. ತಮ್ಮ ಕೆಲವು ದೌರ್ಬಲ್ಯಗಳನ್ನು ಮೀರಿ ಸ್ನೇಹಿತರ ಆಕ್ಷೇಪಣೆಗಳನ್ನು ಕಡೆಗಣಿಸಿ, ತಮ್ಮದೇ ಮಾರ್ಗದಲ್ಲಿ ಮುನ್ನಡೆದು ಮತ್ತೆ ಇತರರಿಗೆ ಮಾದರಿಯಾದರು. ಅವರು ಕೇವಲ ಸಿದ್ಧಾಂತಿಯಾಗಿರದೆ ಜೀವನ ಮೌಲ್ಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ಇತರರನ್ನು ಸಂಘಟಿಸಿ ಹೋರಾಡಿದವರು. ಇವರ ಈ ಸಾಧನೆ ಅದೊಂದು ಶಾಶ್ವತವಾದ ಮೌಲ್ಯವಾಗಿ ಪರಿಣಮಿಸಿತು. ಇದನ್ನು ನಾವು ಒಪ್ಪಲೇ ಬೇಕು.
ಗಾಂಧೀಜಿಯವರು ಪ್ರಶ್ನಾತೀತರು, ಎಲ್ಲವನ್ನೂ ಅರಿತವರು, ಅವರಿಂದ ಯಾವುದೇ ತಪ್ಪುಗಳು ಘಟಿಸಿಲ್ಲ, ಸಮಾಜವನ್ನು ಹಾಗೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಹೆಂಡತಿಗೆ ಒಳ್ಳೆಯ ಗಂಡನಾಗಿ, ಮಕ್ಕಳಿಗೆ ಒಳ್ಳೆಯ ತಂದೆಯಾಗಿದ್ದರು ಎಂಬ ವಿಚಾರಗಳಲ್ಲಿ ನನ್ನ ಸಹಮತ ಇಲ್ಲ. ಗಾಂಧೀಜಿಯವರು ಕೆಲವೊಂದು ಮಿತಿಗಳನ್ನು ಹೊಂದಿದ್ದರು. ಯಾವತ್ತೂ ಎಲ್ಲಾ ವಿಚಾರಗಳಲ್ಲೂ ಸಾರ್ವಭೌಮನಾಗಿರುವುದು ಸುಲಭವಲ್ಲ. ರಾಷ್ಟ್ರೀಯ ನಾಯಕನಾಗುತ್ತಲೇ ಕೌಟುಂಬಿಕವಾಗಿ ನಿಷ್ಠುರರಾಗಿದ್ದ ಗಾಂಧಿ ಹಲವಾರು ಟೀಕೆಗಳನ್ನು ಎದುರಿಸಿದ್ದಾರೆ. ಇದು ಕೂಡಾ ವಾಸ್ತವಿಕ ಸಂಗತಿ.
ಗಾಂಧಿ ಮತ್ತು ಅಂಬೇಡ್ಕರ್ ಮಧ್ಯೆ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದುವು. ಅಂಬೇಡ್ಕರ್ ಅವರ ಕೆಲವು ಸಿದ್ಧಾಂತಗಳನ್ನು ಗಾಂಧಿ ಒಪ್ಪುತ್ತಿರಲಿಲ್ಲ, ಅವರ ಮಧ್ಯೆ ಸಾಮಾಜಿಕ ಭಿನ್ನತೆಗಳಿದ್ದುವು..ಎಂಬ ಚರ್ಚೆ ನಡೆಯುತ್ತಿತ್ತು ಮತ್ತು ಇಂದೂ ನಡೆಯತ್ತಿದೆ. ಅವರೊಳಗೆ ಪರಸ್ಪರ ಅಭಿಪ್ರಾಯ ಭೇದಗಳಿದ್ದಿರಬಹುದು, ಆದರೆ ಅವರೆಂದೂ ಪರಸ್ಪರ ವಿರೋಧಿಗಳಾಗಿರಲಿಲ್ಲ. ಗಾಂಧಿಯವರು ಸಮಾಜ ಮುಖಿಯಾಗಿ ವಿಚಾರವನ್ನು ಗ್ರಹಿಸುವ ರೀತಿ ಒಂದು ಬಗೆಯಾದರೆ, ಅಂಬೇಡ್ಕರ್ ಅವರು ಸಮಾಜಮುಖಿಯಾಗಿ ಅದೇ ವಿಚಾರವನ್ನು ಗ್ರಹಿಸುವ ರೀತಿ ಇನ್ನೊಂದು ಬಗೆಯಾಗಿತ್ತು. ಆದರೆ ಅಂತಿಮವಾಗಿ ತಲುಪಬೇಕಾದ ಗುರಿ ಒಂದೇ ಆಗಿರುತ್ತಿತ್ತು. ಉದಾಹರಣೆಗೆ ಅಸ್ಪೃಶ್ಯತೆಯ ವಿಚಾರ ಬಂದಾಗ ಗಾಂಧೀಜಿಯವರು ಅದನ್ನು ಮಹಾಪಾಪ ಎಂದು ಹೇಳಿದ್ದರೆ, ಅಂಬೇಡ್ಕರ್ ಅದನ್ನು ಮಹಾಪರಾಧ ಎನ್ನುತ್ತಿದ್ದರಂತೆ. ಪಾಪ ಮತ್ತು ಅಪರಾಧ ಎರಡೂ ತಪ್ಪೇ. ಆದ್ದರಿಂದ ಅಸ್ಪೃಶ್ಯತೆ ತಪ್ಪೇ. ಸಮಸ್ಯೆಗಳು ಎದುರಾದಾಗ ಗಾಂಧೀಜಿಯವರು ರಾತ್ರಿಯಿಡೀ ದೇವ ಭಜನೆಯನ್ನು ಮಾಡುತ್ತಿದ್ದರಂತೆ. ಆದರೆ ಅಂಬೇಡ್ಕರ್ ರಾತ್ರಿಯಿಡೀ ನಿದ್ದೆಬಿಟ್ಟು ವೈಚಾರಿಕ ಚಿಂತನೆಗಳ ಪುಸ್ತಕಗಳನ್ನು ಓದುತ್ತಿದ್ದರಂತೆ. ಕೊನೆಗೆ ಇಬ್ಬರೂ ಗುರಿ ಸಾಧನೆಗಾಗಿ ಒಂದೇ ದಾರಿಯಲ್ಲಿ ಮುನ್ನಡೆಯುತ್ತಿದ್ದರು. ದೇಶ ಕಂಡ ಇಬ್ಬರು ಮಹನೀಯರು ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ಜನರಿಗೆ ಮಾದರಿಯಾಗಿದ್ದರು.
ಗಾಂಧೀಜಿಯವರು ರಾಷ್ಟ್ರಪಿತರು.ಜಗತ್ತು ಕಂಡ ಮಹಾ ಹೋರಾಟಗಾರರು.ಇವರನ್ನು ಜಗತ್ತು ಗೌರವಿಸುತ್ತದೆ; ಸತ್ಯ, ಸತ್ಯಾಗ್ರಹ, ಅಹಿಂಸೆ, ಜನಪ್ರೀತಿ, ನ್ಯಾಯಪರತೆ ಇವೆಲ್ಲ ಜನಮಾನಸದ ಹೃದಯಗಳನ್ನು ತಟ್ಟುವ, ಆ ಮೂಲಕ ಗಾಂಧಿ ಮೌಲ್ಯಗಳನ್ನು ಸ್ವೀಕರಿಸುವ ವಿಚಾರಗಳು. ನೀತಿ, ಅನೀತಿ, ನೈತಿಕತೆ, ಅನೈತಿಕತೆ..ಇವುಗಳ ಬಗೆಗೆ ಚರ್ಚೆಗಳು ಬಂದಾಗ ಗಾಂಧೀಜಿಯವರ ಚಿಂತನೆ ಗಳಲ್ಲಿ ಉತ್ತರಗಳನ್ನು ಹುಡುಕಬಹುದು. ಕೆಲವೊಂದು ಸಂದರ್ಭಗಳಲ್ಲಿ ನಾವು ಕೆಲವೊಂದನ್ನು ಕಳೆದುಕೊಂಡಿರುತ್ತೇವೆ. ಗಾಂಧೀಜಿ ಹೇಳುತ್ತಿದ್ದರು “ಕಳಕೊಂಡ ವಸ್ತುಗಳನ್ನು, ವಿಚಾರಗಳನ್ನು ಅಲ್ಲೇ ಹುಡುಕಬೇಕು,ಆಗ ಮಾತ್ರ ಪರಿಹಾರ ಸಿಗುತ್ತದೆ”. ಅವರು ಆಧ್ಯಾತ್ಮಿಕ ಚಿಂತಕರು, ಆದರೆ ಮೂಢಾತ್ಮರಲ್ಲ. ಎಲ್ಲವನ್ನೂ ಶೋಧಿಸಿಯೇ ಸ್ವೀಕರಿಸುತ್ತಿದ್ದರು. ಹಿಂದಣ ದಾರಿಯನ್ನು ನೆನಪಿಸುತ್ತಾ ಮುಂದಣ ಹೆಜ್ಜೆಗಳನ್ನು ಇಡಬೇಕು ಎಂಬುದು ಅವರ ಸ್ಪಷ್ಟ ನಿಲುವು. ಆದ್ದರಿಂದ ಗಾಂಧೀಜಿಯವರು ನಮ್ಮ ಮನಸಿನೊಳಗೆ ಬಹಳ ಬೇಗ ಪ್ರವೇಶಿಸುತ್ತಾರೆ. ಇದು ಅವರ ಹೆಗ್ಗಳಿಕೆ.
ಇದನ್ನೂ ಓದಿ- ಗಾಂಧೀಜಿಯವರ ಕಣ್ಣಲ್ಲಿ ನ್ಯಾಯ
ದೇಶದ ನಾಗರೀಕತೆ ಮತ್ತು ಸಂಸ್ಕೃತಿಯ ಬಗೆಗೆ ಚರ್ಚೆ ಬಂದಾಗ ಸಂಸ್ಕೃತಿಯನ್ನುಳಿಸುತ್ತಲೇ ನಾಗರೀಕತೆಯನ್ನು ಪೋಷಿಸಬೇಕು. ಸಂಸ್ಕೃತಿಯೆಂದರೆ ಗ್ರಾಮ ಬದುಕು, ನಾಗರೀಕತೆಯೆಂದರೆ ನಗರವಾಸ ಎಂಬ ತಪ್ಪು ಕಲ್ಪನೆಗಳನ್ನು ಗಾಂಧೀಜಿಯವರು ಒಪ್ಪುತ್ತಿರಲಿಲ್ಲ. ಗ್ರಾಮ ಬದುಕನ್ನು ಬಹಳವಾಗಿ ಗೌರವಿಸುತ್ತಿದ್ದ ಅವರು ನಗರವನ್ನು ದ್ವೇಷಿಸುತ್ತಿರಲಿಲ್ಲ. ಕೃಷಿ ಮತ್ತು ಕೃಷಿಕರು ಅವರಿಗೆ ತುಂಬಾ ಇಷ್ಟ. ಆದರೆ ಕಾರ್ಖಾನೆ, ಉದ್ದಿಮೆಗಳನ್ನು ಆದರಿಸುತ್ತಿದ್ದರು. ದೇಶ ಮತ್ತು ದೇಶವಾಸಿಗಳನ್ನು ಅವರು ಅಪಾರವಾಗಿ ಪ್ರೀತಿಸುತ್ತಿದ್ದರು. ಭಾಷೆ, ದೇಶ, ಸಂಸ್ಕೃತಿ, ಸಾಹಿತ್ಯ ಮುಂತಾದ ಕ್ಷೇತ್ರಗಳು ಅವರಿಗೆ ತುಂಬಾ ಖುಷಿಕೊಟ್ಟ ವಿಚಾರಗಳು. ವಿಜ್ಞಾನ ಅವರಿಗೆ ಬೇಕಿತ್ತು. ಶುದ್ಧ ರಾಜಕೀಯ ಅವರ ಮುಖ್ಯ ಉದ್ದೇಶವಾಗಿತ್ತು. ಹಿಂದೂ ಧರ್ಮದ ಅನುಯಾಯಿಯಾಗಿದ್ದು ಮನುಷ್ಯ ಪ್ರೀತಿಯ ಆರಾಧಕರಾಗಿದ್ದರು. ಬಹುತ್ವ, ಸೋದರತೆ, ಸಮನ್ವಯತೆಗಳ ಮೂಲಕ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವುದು ಗಾಂಧೀಜಿಯವರ ಒಡಲಿನ ಆಶಯವಾಗಿತ್ತು. ದೇಶದ ಸಾಮಾಜಿಕ ಒಗ್ಗಟ್ಟಿಗಾಗಿ ಪ್ರಯತ್ನಿಸುತ್ತಲೇ ತಮ್ಮನ್ನು ದೇಶಕ್ಕೆ ಅರ್ಪಿಸಿಕೊಂಡ ಗಾಂಧಿ, ದೇಶದ ಜನರ ಹೃದಯದ ಸ್ಥಾಯೀಭಾವ. ಅವರನ್ನು ನಾವೆಲ್ಲರೂ ಗೌರವಿಸೋಣ.
ಡಾ. ಇಸ್ಮಾಯಿಲ್ ಎನ್
ವಿಶ್ರಾಂತ ಪ್ರಾಂಶುಪಾಲರಾಗಿರುವ ಇವರು ಪ್ರಸ್ತುತ ಮಂಗಳೂರಿನ ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿದ್ದಾರೆ.
ಇದನ್ನೂ ಓದಿ- ರಾಜಕೀಯ ನೈತಿಕತೆಯ ಅವನತಿಯೂ ಗಾಂಧಿ ಪ್ರಸ್ತುತತೆಯೂ