ವಿಶೇಷ | ದಾವಣಗೆರೆಯ ಗಾಂಧಿ ; ಶರಣ ಮಾಗನೂರು ಬಸಪ್ಪನವರು

Most read

ಸ್ವಾತಂತ್ರ್ಯ ಹೋರಾಟಗಾರರನ್ನು, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ಸೇವೆಯನ್ನು, ದೇಶಪ್ರೇಮವನ್ನು ನಾವು ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲಿ ಸ್ಮರಿಸಬೇಕಾದದ್ದು ಮತ್ತು ಅವರ ದೇಶ ಪ್ರೇಮವನ್ನು ನಾವು ಅನುಸರಿಸಬೇಕಾದದ್ದು ಅತ್ಯಂತ ಮಹತ್ತರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ  ದಾವಣಗೆರೆಯ ಸ್ವಾತಂತ್ರ್ಯ ಹೋರಾಟಗಾರ ಮಾಗನೂರು ಬಸಪ್ಪನವರನ್ನು ಸ್ಮರಿಸಿದ್ದಾರೆ ದಾವಣಗೆರೆಯ ಡಾ. ಗಂಗಾಧರಯ್ಯ ಹಿರೇಮಠ್.

ಭಾರತೀಯರ ತ್ಯಾಗ, ಬಲಿದಾನ, ಹೋರಾಟದ ಕಥೆಯನ್ನು ಸ್ಮರಿಸುವ, ಅವರಿಗೆ ಗೌರವ ಸಲ್ಲಿಸುವ, ಅವರ ದೇಶಪ್ರೇಮದ ಹಾದಿಯಲ್ಲಿ ನಾವು ನಡೆಯುವುದು, ಪ್ರತಿಜ್ಞೆ ಮಾಡುವುದು ಇಂದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಸಾವಿರಗಟ್ಟಲೆ, ಲಕ್ಷಗಟ್ಟಲೆ ಇದ್ದರೂ, ಅಂತವರನ್ನು ನಾವು ಸ್ಮರಿಸಬೇಕಾಗಿದೆ. ರಾಷ್ಟ್ರಮಟ್ಟದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಲ್ಲಿ ಅಗ್ರಗಣ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಅವರೊಂದಿಗೆ ಸುಭಾಷ್‍ಚಂದ್ರ ಬೋಸ್, ಸರ್ದಾರ್‌ ವಲ್ಲಭಾಯಿ ಪಟೇಲ್, ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ಲಾಲಾಲಜಪತರಾಯ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲ್ ಬಹಾದ್ದೂರು ಶಾಸ್ತ್ರೀ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರು ದೇಶದ ಮುಂಚೂಣಿ ನಾಯಕರುಗಳು.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡಿ ಮಡಿದ, ಜೈಲುವಾಸ ಅನುಭವಿಸಿ, ಬ್ರಿಟೀಷರ ನಿದ್ದೆಗೆಡಿಸಿದ ಅನೇಕ ನಾಯಕರಲ್ಲಿ ಮುಂಚೂಣಿಯಲ್ಲಿ ಇದ್ದವರೆಂದರೆ ಕಿತ್ತೂರಿನ ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಮಂಗಳೂರಿನ ಕಮಲಾದೇವಿ ಚಟ್ಟೋಪಾಧ್ಯಾಯ, ಕಾರ್ನಾಡ್ ಸದಾಶಿವರಾಯರು, ತುಮಕೂರಿನ ನಿಟ್ಟೂರು ಶ್ರೀನಿವಾಸರಾಯರು, ಹುಬ್ಬಳ್ಳಿಯ ಉಮಾಬಾಯಿ, ಬೆಳಗಾವಿಯ ಗಂಗಾಧರ್ ರಾವ್ ದೇಶಪಾಂಡೆ, ಬನವಾಸಿಯ ಹರ್ಡೇಕರ್ ಮಂಜಪ್ಪ, ಬೆಳಗಾವಿಯ ಕೆ.ಜಿ. ಗೋಖಲೆ, ಕನಕಪುರದ ಎಚ್.ಎಸ್. ದೊರೆಸ್ವಾಮಿ ಮುಂತಾದವರು.

ದಾವಣಗೆರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ

ಮಹಾತ್ಮಗಾಂಧೀಜಿಯವರು ಕರ್ನಾಟಕಕ್ಕೆ 1915 ರಿಂದ 1937 ರವರೆಗೆ ಒಟ್ಟು ಹನ್ನೆರಡು ಸಲ ಭೇಟಿ ಕೊಟ್ಟಿದ್ದಾರೆ.  ದಾವಣಗೆರೆಗೆ ‘ಎರಡು’ ಸಲ ಮಾತ್ರ ಭೇಟಿ ನೀಡಿದ್ದಾರೆ.  ಅವರ ಒಂಭತ್ತನೇ ಭೇಟಿಯಲ್ಲಿ ನಾಲ್ಕು ತಿಂಗಳು ಕಾಲ ಕರ್ನಾಟಕದಲ್ಲಿದ್ದರು.  ಅವರಿಗೆ ರಕ್ತದೊತ್ತಡ ಹೆಚ್ಚಾಗಿದ್ದರಿಂದ ನಂದಿ ಬೆಟ್ಟದಲ್ಲಿ ಒಂದು ತಿಂಗಳು ವಿಶ್ರಾಂತಿ ಪಡೆದು ಬೆಂಗಳೂರಿಗೆ ಪ್ರವಾಸ ಆರಂಭಿಸಿದರು.  ಕನಕಪುರ, ಹಾಸನ, ಶಿವಮೊಗ್ಗ, ಚಿತ್ರದುರ್ಗಗಳಿಗೆ ಪ್ರವಾಸ ಮಾಡಿ ಆಗಸ್ಟ್ 1, 1927 ರಲ್ಲಿ ದಾವಣಗೆರೆಗೆ ಬಂದು ಖಾದಿ ಪ್ರಚಾರ ಆಂದೋಲನ ನಡೆಸಿ ಇಲ್ಲಿಯೇ ತಂಗಿದ್ದರು.  ಮಹಾತ್ಮಗಾಂಧೀಜಿ ರೈಲಿನಲ್ಲಿ ದಾವಣಗೆರೆಗೆ ಆಗಮಿಸಿದಾಗ ಅವರನ್ನು ನಗರದ ಪ್ರಮುಖ ವರ್ತಕರಾದ ‘ಮಾಗನೂರು ಬಸಪ್ಪ’ ಹಾಗೂ ಕಾಸಲ್ ಶ್ರೀನಿವಾಸಶೆಟ್ಟರು ಮುಂದಾಳತ್ವ ವಹಿಸಿ ಗಾಂಧೀಜಿಯವರನ್ನು ನಗರಕ್ಕೆ ಸ್ವಾಗತಿಸಿದರು.  ಖಾದಿ ಬಟ್ಟೆಯ ಮಹತ್ವ, ಅದನ್ನು ತಯಾರಿಸುವ ವಿಧಾನ, ಅಸ್ಪೃಶ್ಯರು, ಗೋಮಾಂಸ ತಿನ್ನಬಾರದು, ಹೆಂಡ ಕುಡಿಯಬಾರದು ಎಂದು ಇಲ್ಲಿಯ ಜನತೆಗೆ ತಿಳಿಸಿದರು. ಗಾಂಧೀಜಿಯವರೊಂದಿಗೆ ಅವರ ಪತ್ನಿ ಕಸ್ತೂರ್‌ ಬಾ, ಮಹಾದೇವ ದೇಸಾಯಿ, ರಾಜಾಜಿ, ಕಿರಿಯಮಗ ದೇವದಾಸ ಗಾಂಧಿ, ರಾಜಾಜಿಯ ಮಗಳು ಲಕ್ಷ್ಮಿ ಮತ್ತು ಕರ್ನಾಟಕದ ಹುಲಿ ಎಂದು ಹೆಸರು ಪಡೆದಿದ್ದ ಗಂಗಾಧರ ದೇಶಪಾಂಡೆ ಇದ್ದರು. 

ಪುನಃ ಗಾಂಧೀಜಿಯವರು 1934 ಮಾರ್ಚ್ 2 ರಂದು ದಾವಣಗೆರೆಗೆ ಎರಡನೇ ಬಾರಿ ಆಗಮಿಸಿ, ನಗರದಲ್ಲಿ ಹರಿಜನ ವಿದ್ಯಾರ್ಥಿ ನಿಲಯಕ್ಕೆ ಅಡಿಗಲ್ಲು ಹಾಕಿದರು. ಅದುವೇ ಇಂದಿನ ‘ಮಹಾತ್ಮಾ ಗಾಂಧಿ ಹಾಸ್ಟೆಲ್’ ನಗರದ ಎ.ವಿ.ಕೆ. ಕಾಲೇಜು ಪಕ್ಕದ ಡಾ. ತಿಪ್ಪೇಸ್ವಾಮಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿದೆ. 

ದಾವಣಗೆರೆಗೆ ಷರತ್ತಿನ ಮೇರೆಗೆ ಬಂದ ಗಾಂಧೀಜಿ

ಗಾಂಧೀಜಿಯ ಕಟ್ಟಾ ಅನುಯಾಯಿ ‘ಮೈಲಾರ ಮಹಾದೇವ’ ರನ್ನು ಕಾಣಲು ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿಗೆ ಗಾಂಧೀಜಿ ಭೇಟಿ ನೀಡಿದ್ದರು. ಈ ಮಾಹಿತಿ ತಿಳಿದ ದಾವಣಗೆರೆ ನಗರದ ಪ್ರಮುಖ ವರ್ತಕರಾದ ಮಾಗನೂರು ಬಸಪ್ಪ ಹಾಗೂ ಕಾಸಲ್ ಶ್ರೀನಿವಾಸ ಶೆಟ್ಟಿ ರಾಣೆಬೆನ್ನೂರಿಗೆ ಹೋಗಿ ಮಹಾತ್ಮ ಗಾಂಧೀಜಿಯವರಿಗೆ ಭೇಟಿ ಮಾಡಿ ದಾವಣಗೆರೆಗೆ ಬರುವಂತೆ ಆಹ್ವಾನ ನೀಡಿದರು. ಆಗ ಗಾಂಧೀಜಿಯವರು ಮಾಗನೂರು ಬಸಪ್ಪನವರಿಗೆ ಮೂರು ಪ್ರಶ್ನೆ ಕೇಳಿದ್ದರು.  1) ನೀವು ಚಳುವಳಿಯಲ್ಲಿ ಭಾಗವಹಿಸಿದ್ದೀರಾ?  2) ನೀವು ಖಾದಿ ಬಟ್ಟೆ ತೊಡುತ್ತೀರಾ?  3) ಹರಿಜನರಿಗೆ ನಿಮ್ಮ ಮನೆಯಲ್ಲಿ ಪ್ರವೇಶ ನೀಡಿದ್ದೀರಾ?  ಈ ಪ್ರಶ್ನೆಗಳಿಗೆ ಹೌದೆಂದು ಹೇಳಿದ ನಂತರ ಮತ್ತೆ ಮೂರು ಷರತ್ತುಗಳನ್ನು (ಕಂಡೀಷನ್) ಹಾಕಿದರು. 

1) ನಿಮ್ಮ ಊರಿನಲ್ಲಿ ಹರಿಜನರ ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ಆರಂಭಿಸಬೇಕು.

2) ನನ್ನನ್ನು ಹರಿಜನರ ಓಣಿಗೆ ಕರೆದುಕೊಂಡು ಹೋಗಬೇಕು.

3) ಇಬ್ಬರು ಹರಿಜನ ಸಹಾಯಕರನ್ನು ನನಗೆ ಕೊಡಬೇಕು. 

ಈ ಷರತ್ತುಗಳಿಗೆ ಬದ್ಧವಾಗಿ ನನಗೆ ಪತ್ರ ಬರೆದರೆ ನಾನು ದಾವಣಗೆರೆಗೆ ಬರುತ್ತೇನೆ ಎಂದು ಗಾಂಧೀಜಿ ಷರತ್ತು ವಿಧಿಸಿದ್ದರಂತೆ.  ಈ ಷರತ್ತುಗಳಿಗೆ ಒಪ್ಪಿಕೊಂಡ ಮಾಗನೂರು ಬಸಪ್ಪನವರೊಂದಿಗೆ ಗಾಂಧೀ ದಾವಣಗೆರೆಗೆ ಆಗಮಿಸಿ ಭಾಷಣ ಮಾಡಿದ್ದರು.  ಹರಿಜನ ಹಾಸ್ಟೆಲ್ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು.  ಗಾಂಧೀಜಿ ಅವರ ಜೀವಿತಾವಧಿಯಲ್ಲಿ ದಾವಣಗೆರೆ ಸೇರಿದಂತೆ ದೇಶದ ಎರಡು ಕಡೆ ಮಾತ್ರ ಅಡಿಗಲ್ಲು ಹಾಕಿರುವುದು ಒಂದು ವಿಶೇಷ.

ದಾವಣಗೆರೆ ಹರಿಜನ ಕಾಲೋನಿಗೆ ಗಾಂಧೀಜಿ ಭೇಟಿ

ಮಾಗನೂರು ಬಸಪ್ಪನವರು

ವರ್ತಕ ಮಾಗನೂರು ಬಸಪ್ಪನವರು, ಆಗ ಪುರಸಭೆಯ ಅಧ್ಯಕ್ಷರಾಗಿದ್ದ ಚನ್ನಗಿರಿ ರಂಗಪ್ಪನವರು ಸ್ವತಃ ತೆರೆದ ಜೀಪಿನಲ್ಲಿ ಗಾಂಧೀಜಿ ಅವರನ್ನು ಹರಿಜನರ ಓಣಿಗೆ ಕರೆತರುತ್ತಾರೆ.  ಹರಿಜನ ಕಾಲೋನಿಯಲ್ಲಿ ಗಾಂಧೀಜಿ ಓಡಾಡಿ ಜನರ ಯೋಗಕ್ಷೇಮ ವಿಚಾರಿಸಿದ್ದರು.  ಈ ಸವಿ ನೆನಪಿಗಾಗಿ ‘ಗಾಂಧೀನಗರ’ ಎಂಬ ಹೆಸರು ಬಂದಿದೆ.  ದಾವಣಗೆರೆಗೆ ಗಾಂಧೀಜಿ ಆಗಮಿಸಿದ ಸವಿ ನೆನಪುಗಳು ಬಹಳಷ್ಟು ಇದ್ದು, ಅವುಗಳನ್ನು ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ತಿಳಿಯಬೇಕಾಗಿದೆ.

ನಗರದ ಪ್ರಮುಖ ವರ್ತಕರಾದ ಶ್ರೀ ಮಾಗನೂರು ಬಸಪ್ಪ, ಕಾಸಲ್ ಶ್ರೀನಿವಾಸ ಶೆಟ್ಟಿ, ಡಿ.ಆರ್. ಮೌನೇಶ್ವರಪ್ಪ, ಕೆ.ಎಸ್. ಸಿದ್ದಪ್ಪ, ಕುಂದುವಾಡ, ಶಿವಳ್ಳಿ ಸಿದ್ದಪ್ಪ, ಕೆ.ಎಂ. ಪೂರ್ವಾಚಾರಿ, ಮಾಯಕೊಂಡ, ಕೆ.ಎಚ್. ಮಹಾದೇವಪ್ಪ ಕುಂಬಳೂರು, ಕೆ.ಎಂ. ಅಣಜಿಮಠ ವೀರಬಸಯ್ಯ ಪುರಾಣಿಕ್ ಮಾಯಕೊಂಡ, ಎಚ್.ವಿ. ರಂಗನಾಥ್ ಜೊಯ್ಸಿ, ದಾವಣಗೆರೆ, ಎಸ್.ಬಸಪ್ಪ ತೂಲಹಳ್ಳಿ, ಜಿ. ಮರುಳಪ್ಪ ತೂಲಹಳ್ಳಿ, ಎಂ. ಮರುಳಗೌಡ ಉಜ್ಜಿನಿ, ಮತ್ತಿಹಳ್ಳಿ ದ್ಯಾಮಪ್ಪ ಚಿಗಟೇರಿ, ಬಿ. ಕೊಟ್ರಬಸಪ್ಪ, ದಾವಣಗೆರೆ, ಪಿ.ಎಲ್. ಬೋಜನಾಯ್ಕ್ ತವಡೂರು ತಾಂಡಾ, ಅಲಬೂರು ನಂಜಪ್ಪ ಕೊಟ್ಟೂರು, ಬಣಕಾರ ಸಿದ್ಧಲಿಂಗಪ್ಪ ಕೊಟ್ಟೂರು, ಶೆಟ್ಟಿ ಚೂಡಪ್ಪ, ಹರಪನಹಳ್ಳಿ, ಮುಂತಾದವರು ಮಹಾತ್ಮ ಗಾಂಧೀಜಿಯವರ ಕರೆಯ ಮೇರೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ, ಸತ್ಯಾಗ್ರಹದಲ್ಲಿ ಭಾಗವಹಿಸಿ, ಬ್ರಿಟೀಷರ ಕಣ್ಣಿಗೆ ಗುರಿಯಾಗಿ ಅನೇಕ ಬಾರಿ ಜೈಲುವಾಸ, ಹೊಡೆತ ತಿಂದು ದೇಶದ ಸ್ವಾತಂತ್ರ್ಯಕ್ಕೆ ದುಡಿದ ಮಹನೀಯರಲ್ಲಿ ಮುಂಚೂಣಿ ನಾಯಕರಾಗಿದ್ದವರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯದಾತ

ಮಹಾತ್ಮ ಗಾಂಧೀಜಿ ದಾವಣಗೆರೆಗೆ ಷರತ್ತಿನ ಮೇರೆಗೆ ಆಗಮಿಸಿ, ಇಲ್ಲಿಯ ಜನತೆಯನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಲು ಪ್ರೇರೇಪಿಸಿದರು. ಅವರ ಪ್ರೇರಣೆಯಂತೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಕುಟುಂಬದ ಪರಿಸ್ಥಿತಿಯನ್ನು ಲೆಕ್ಕಿಸದೆ ದಾವಣಗೆರೆಯ ಜನತೆ ಗಾಂಧೀಜಿಯವರ ಕರೆಯ ಮೇರೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.  ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದರು. ಜೈಲುವಾಸ ಅನುಭವಿಸಿದರು.  ಇದು ಒಂದೆರಡು ದಿನದ ಸಂದರ್ಭಗಳಲ್ಲ, ತಿಂಗಳುಗಟ್ಟಲೆ, ವರ್ಷಗಟ್ಟಲೆ ನಡೆದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸೆರೆಮನೆವಾಸ ಒಂದೆಡೆಯಾದರೆ, ಇನ್ನೊಂದು ಕಡೆ ಅವರ ಕುಟುಂಬಗಳ ಧಾರುಣ ಸ್ಥಿತಿ.  ಇಂತಹ ಪರಿಸ್ಥಿತಿಯಲ್ಲಿ ಮಾಗನೂರು ಬಸಪ್ಪನವರು ಸ್ವಾತಂತ್ರ್ಯ ಹೋರಾಟಗಾರರ ಎಲ್ಲಾ ಕುಟುಂಬಗಳಿಗೆ ಅನ್ನದಾತರು.  ಆಶ್ರಯದಾತರಾದರು.  ಕುಟುಂಬಗಳು ಕಷ್ಟದಲ್ಲಿದ್ದಾಗ ಅವರಿಗೆ ನೈತಿಕ ಸ್ಥೈರ್ಯ, ಆರ್ಥಿಕ ಸಹಾಯ-ಸಹಕಾರ ನೀಡಿದವರು.  ಮಾಗನೂರು ಬಸಪ್ಪನವರು, ‘ಮೈಲಾರ ಮಹಾದೇವ’ ನಂತವರಿಗೂ ಆಶ್ರಯ ನೀಡಿದ್ದ ಪುಣ್ಯ ಪುರುಷರು,  ದೇಶ ಪ್ರೇಮಿಗಳು.

ದಾವಣಗೆರೆಯ ಗಾಂಧೀಜಿ ಮಾಗನೂರು ಬಸಪ್ಪ

ಮಹಾತ್ಮ ಗಾಂಧಿಯವರ ಪ್ರಭಾವ, ಪ್ರೇರಣೆಯಿಂದ ದೇಶದಲ್ಲಿ ಅನೇಕ ಗಾಂಧಿಗಳು ಕಂಡು ಬಂದರು.  ಒಂದೊಂದು ಭಾಗಕ್ಕೆ ಒಬ್ಬೊಬ್ಬರು ಗಾಂಧಿಗಳಾದರು.  ಹರ್ಡೆಕರ್ ಮಂಜಪ್ಪ, ಗಂಗಾಧರ ದೇಶಪಾಂಡೆ, ಕೊಲೂರು ಮಲ್ಲಪ್ಪ, ರಾಜ್ಯದ ಒಂದೊಂದು ಭಾಗಕ್ಕೆ ಗಾಂಧಿ ಎಂದು ಕರೆಯಿಸಿಕೊಂಡಂತೆ, ದಾವಣಗೆರೆಯಲ್ಲಿ ಮಾಗನೂರು ಬಸಪ್ಪನವರನ್ನು ಜನತೆ ‘ಗಾಂಧಿ’ ಎಂದು ಕರೆದರು.  ಜನತೆಯ ಸೇವೆಯಲ್ಲಿ ನಗರದಲ್ಲಿ ಮುಂಚೂಣಿಯಲ್ಲಿದ್ದ ಇವರು ದಾವಣಗೆರೆಯನ್ನು ಶಿಕ್ಷಣ ನಗರಿಯನ್ನಾಗಿ ಹಾಗೂ ವರ್ತಕರ ನಗರಿಯನ್ನಾಗಿ ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.

ಇಂತಹ ಪುಣ್ಯ ಪುರುಷರ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ಸೇವೆಯನ್ನು ದೇಶಪ್ರೇಮವನ್ನು ನಾವು ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲಿ ಸ್ಮರಿಸಬೇಕಾದದ್ದು ಮತ್ತು ಅವರ ದೇಶ ಪ್ರೇಮವನ್ನು ನಾವು ಅನುಸರಿಸಬೇಕಾದದ್ದು ಅತ್ಯಂತ ಮಹತ್ತರ ಸಂಗತಿಯಾಗಿದೆ. ಸ್ವಾತಂತ್ರ್ಯ ಯೋಧರ ವೀರಗಾಥೆಯೇ ಸ್ವಾತಂತ್ರ್ಯ ಮಹೋತ್ಸವವಾಗಿದೆ.

ಡಾ. ಗಂಗಾಧರಯ್ಯ ಹಿರೇಮಠ್, ದಾವಣಗೆರೆ

ವಿಶ್ರಾಂತ ಪ್ರಾಧ್ಯಾಪಕರು

More articles

Latest article