ಗಾಂಧಿ : ಶಾಂತಿಯ ತತ್ವಗಳ ಜೀವಂತ ರೂಪಕ

Most read

ಅಹಿಂಸೆ ಮತ್ತು ಸತ್ಯವು ಕೇವಲ ರಾಜಕೀಯದಲ್ಲಷ್ಟೇ ಅಲ್ಲ, ದೈನಂದಿನ ಬದುಕಿನಲ್ಲೂ ಪಾಲಿಸಬೇಕಾದ ಮೌಲ್ಯಗಳು. ಇಂದಿನ ಯುವಸಮುದಾಯಕ್ಕೆ ಈ ಸಂದೇಶಗಳು ಅತ್ಯಂತ ಅಗತ್ಯ. ಯುವ ಜನತೆಗೆ ಗಾಂಧಿ ಚಿಂತನೆಗಳನ್ನು  ಮುಖಾಮುಖಿಯಾಗಿಸುವ ಪ್ರಯತ್ನವನ್ನು ಗಾಂಧಿ ಜಯಂತಿಯ ಈ ವಿಶೇಷ ಸಂದರ್ಭದಲ್ಲಿ  ಮಾಡಿದ್ದಾರೆ ಶಿವಮೊಗ್ಗದ ಬಿ.ಸಿ.ಎ ವಿದ್ಯಾರ್ಥಿನಿ ಯಶಸ್ವಿನಿ.

ನಾಯಕತ್ವವೆಂದರೆ ಕುರ್ಚಿ ಅಥವಾ ಅಧಿಕಾರವಲ್ಲ. ಬದಲಿಗೆ, ಅದು ಸೇವಾ ಮನೋಭಾವ ಮತ್ತು ನೈತಿಕ ಶಕ್ತಿಯ ಪ್ರತೀಕ. ಈ ಮಾತು ಮಹಾತ್ಮ ಗಾಂಧೀಜಿಯವರ ಬದುಕಿಗೆ ಸಂಪೂರ್ಣ ಅನ್ವಯಿಸುತ್ತದೆ. ಬ್ರಿಟಿಷರ ಆಳ್ವಿಕೆಯನ್ನು  ಕತ್ತಿ, ಬಂದೂಕುಗಳಿಲ್ಲದೆ ಸತ್ಯ ಮತ್ತು ಅಹಿಂಸೆಯ ಬಲದಿಂದ ಸೋಲಿಸಿದ ವ್ಯಕ್ತಿ ಗಾಂಧೀಜಿ. ಅವರು ರಾಜಕೀಯಕ್ಕೆ ಮೌಲ್ಯಗಳನ್ನು ನೀಡಿದರು.

ಗಾಂಧೀಜಿ ಅವರು ಕೇವಲ ರಾಜಕೀಯ ನಾಯಕರಲ್ಲ. ಅವರು ನೈತಿಕ ಮೌಲ್ಯಗಳ ಸೇವಾ ಮನೋಭಾವದ ಸರಳ ಜೀವನದ ಶಾಂತಿಯ ತತ್ವದ ಜೀವಂತ ರೂಪಕ. ಇಂದು ಜಗತ್ತು ತಂತ್ರಜ್ಞಾನ ಮತ್ತು ಆಧುನಿಕತೆಯ ದಾರಿಯಲ್ಲಿ ವೇಗವಾಗಿ ಸಾಗುತ್ತಿದೆ. ಸಮಾಜದಲ್ಲಿ ಹಿಂಸೆ ಭ್ರಷ್ಟಾಚಾರ ಅನೈತಿಕತೆಗಳು ಹೆಚ್ಚುತ್ತಿರುವಾಗ ಯುವಕರಿಗೆ ದಾರಿ ತೋರಿಸಬಹುದಾದದ್ದು ಗಾಂಧೀಜಿಯ ನಾಯಕತ್ವ. ಅವರ ನೈತಿಕ ರಾಜಕೀಯ ಯುವಕರನ್ನು ಕೇವಲ ಉತ್ತಮ ನಾಗರೀಕರನ್ನಾಗಿಯಷ್ಟೇ ಅಲ್ಲ ಜವಾಬ್ದಾರಿಯುತ ನಾಯಕರನ್ನಾಗಿಯೂ ರೂಪಿಸುತ್ತದೆ.

ಗಾಂಧೀಜಿಯ ನಾಯಕತ್ವ ಸಾಮಾನ್ಯ ರಾಜಕೀಯ ನಾಯಕರಿಂದ ಭಿನ್ನವಾಗಿತ್ತು. ಸಾಮಾನ್ಯವಾಗಿ ನಾಯಕತ್ವವೆಂದರೆ ಜನರನ್ನು ಆಳುವುದು, ಆಜ್ಞಾಪಿಸುವುದು ಅಧಿಕಾರವನ್ನು ಸಾಧಿಸುವುದು ಎಂದು ಭಾವಿಸಲಾಗುತ್ತದೆ. ಆದರೆ ಗಾಂಧೀಜಿಯವರು ಅದನ್ನು ಸಂಪೂರ್ಣವಾಗಿ ಬದಲಾಯಿಸಿದವರು. ಅವರ ದೃಷ್ಟಿಯಲ್ಲಿ ನಾಯಕತ್ವವೆಂದರೆ ಜನರ ಹೃದಯದಲ್ಲಿ ನೆಲೆಸುವುದು. ಅವರಿಗೆ ದಾರಿ ತೋರಿಸುವುದು. ಅವರ ಕಷ್ಟದಲ್ಲಿ ಪಾಲ್ಗೊಳ್ಳುವುದು. ಅವರ ನಾಯಕತ್ವವು ಜನಸೇವೆಯ ದೀಪವಾಗಿತ್ತು.  ಕೆಳವರ್ಗದವರ ಸೇವೆ, ಸ್ವಚ್ಛತೆ, ಗ್ರಾಮಾಭಿವೃದ್ಧಿ ಅವರ ಆದ್ಯತೆಯಾಗಿತ್ತು.

ಸ್ವಾರ್ಥದ ರಾಜಕೀಯ ಹೆಚ್ಚುತ್ತಿರುವಾಗ ಸೇವಾ ಮನೋಭಾವ ಮಾತ್ರ ಸಮಾಜವನ್ನು ಉಳಿಸಬಹುದು ಎಂದು ಗಾಂಧೀ ನಂಬಿದವರು.

ಅವರು “ನಾನು ನಿಮ್ಮ ನಾಯಕನಲ್ಲ ನಿಮ್ಮ ಸೇವಕ” ಎಂದು ಹೇಳುತ್ತಿದ್ದರು. ಈ ದೃಷ್ಟಿಕೋನವೇ ಅವರನ್ನೊಬ್ಬ ವಿಶ್ವನಾಯಕನನ್ನಾಗಿ ರೂಪಿಸಿತು. ಜನರ ನೋವಿಗೆ ಸ್ಪಂದಿಸುವುದು, ಅವರ ಕಷ್ಟವನ್ನು ತಮ್ಮದಾಗಿಸಿ ಕೊಳ್ಳುವುದು, ಸ್ವಾರ್ಥಕ್ಕಿಂತ ಸಾಮೂಹಿಕ ಹಿತವನ್ನು  ಬಯಸುವುದು, ಇವುಗಳೇ ಅವರ ನಾಯಕತ್ವದ ಮೌಲ್ಯಗಳು.

ಗಾಂಧೀಜಿಯ ಬದುಕಿನ ಎರಡು ಪ್ರಮುಖ ಶಕ್ತಿಗಳು ಸತ್ಯ ಮತ್ತು ಅಹಿಂಸೆ. ಸತ್ಯವೇ ನನ್ನ ದೇವರು, ಅಹಿಂಸೆ ನನ್ನ ಧರ್ಮ ಎಂದು ಅವರು ಹೇಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಈ ಎರಡು ಮೌಲ್ಯಗಳನ್ನು ಶಸ್ತ್ರಗಳಂತೆ ಅವರು ಬಳಸಿದರು.

ಸತ್ಯ ಎಂದರೆ ಕೇವಲ ಸುಳ್ಳು ಹೇಳದಿರುವುದಲ್ಲ.  ನಿಷ್ಠೆಯಿಂದ ನಡೆದುಕೊಳ್ಳುವುದು. ಯಾವ ಕಾರಣಕ್ಕೂ ಅಪ್ರಾಮಾಣಿಕತೆಗೆ ಜಾಗ ನೀಡದಿರುವುದು. ಅಹಿಂಸೆ ಎಂದರೆ ಕೇವಲ ಹಿಂಸೆ ಮಾಡದಿರುವುದಲ್ಲ ಅದು ಪ್ರೀತಿ ಸಹಿಷ್ಣುತೆ ಧೈರ್ಯ ಮನೋಭಾವ. ಇವುಗಳನ್ನು ರಾಜಕೀಯದಲ್ಲಿ ಅವರು ಅಳವಡಿಸಿಕೊಂಡರು. ಕಣ್ಣಿಗೆ ಕಣ್ಣು ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ ಎಂಬ ಅವರ ಸಂದೇಶ ಇಂದಿಗೂ ಅತ್ಯಂತ ಪ್ರಸ್ತುತ. ಚಂಪಾರಣ್ಯ ಸತ್ಯಾಗ್ರಹ, ದಂಡಿ (ಉಪ್ಪು) ಸತ್ಯಾಗ್ರಹ ಎಲ್ಲವೂ ಸತ್ಯದ ಉದಾಹರಣೆಗಳು.

ಇಂಗ್ಲೆಂಡ್ ನಲ್ಲಿ ಕಾನೂನು ವಿದ್ಯಾಭ್ಯಾಸ ಮುಗಿಸಿ ದಕ್ಷಿಣ ಆಫ್ರಿಕದಲ್ಲಿ ವಕೀಲಿ ವೃತ್ತಿ ಆರಂಭಿಸಿದಾಗ ಅಲ್ಲಿ ಅನುಭವಿಸಿದ ಜಾತಿಯ ಹಿಂಸೆ ಅವರ ಜೀವನದ ತಿರುವನ್ನು ಬದಲಿಸಿದ ಅನುಭವವಾಯಿತು.

ಪೀಟರ್ ಮಾರ್ಟಿಸ್ ಬರ್ಗ್ ರೈಲು ನಿಲ್ದಾಣದಲ್ಲಿ ಶ್ವೇತ ವರ್ಣಿಯರಿಗೆ ಮೀಸಲಾಗಿದ್ದ ಭೋಗಿಯಿಂದ ಹೊರಹಾಕಲ್ಪಟ್ಟ ಘಟನೆ ಅವರ ಮನಸ್ಸಿಗೆ ತೀವ್ರವಾದ ನೋವನ್ನು ತಂದಿದ್ದು ಆ ದಿನದಿಂದಲೇ ಅವರು ಅನ್ಯಾಯದ ಮುಂದೆ ತಲೆಬಾಗುವುದಿಲ್ಲ ಎಂದು ನಿಶ್ಚಯಿಸಿದರು. ಈ ನಿಶ್ಚಯ ಅವರ ಸತ್ಯಾಗ್ರಹದ ದಾರಿಯಲ್ಲಿ ಕೂಡ ಇದ್ದಿತ್ತು. ಅಹಿಂಸೆಯ ಹಾದಿ ಸುಲಭವಾಗಿರಲಿಲ್ಲ. ಲಾಟಿದಾಳಿಗಳು, ಜೈಲು ಶಿಕ್ಷೆಗಳು, ದೌರ್ಜನ್ಯ ಇವೆಲ್ಲವನ್ನು ಅವರು ಎದುರಿಸಿದರು. ಅವರು ಹಿಂಸೆಗೆ ತಿರುಗಿ ಪ್ರತಿಕ್ರಿಯಿಸಲಿಲ್ಲ. ಈ ದೃಢತೆಯೇ ಅವರನ್ನು ಮಹಾನ್ ನಾಯಕರನ್ನಾಗಿ ಮಾಡಿತು.

ಅಹಂಕಾರವಿಲ್ಲದೆ ಐಶಾರಾಮಿಯ ಅಗತ್ಯವಿಲ್ಲದೆ ಖಾದಿ ವಸ್ತ್ರ ಧರಿಸಿ ಸಣ್ಣ ದಂಡ ಹಿಡಿದು ಹಳ್ಳಿಗಳಲ್ಲಿ ಜನರ ಜೊತೆ ಬಾಳಿದ ಸರಳತೆ ಅವರದು. ನಿಜವಾದ ನಾಯಕತ್ವವು ಐಶ್ವರ್ಯದಿಂದಲ್ಲ ಹೃದಯದ ಮಿಡಿತದಿಂದ ಬರುತ್ತದೆ ಎಂಬ ಪಾಠವನ್ನು ನೀಡುತ್ತದೆ. ಗಾಂಧೀಜಿಯವರ ಸರಳ ಜೀವನ ಶೈಲಿ ಇಂದು sustainable living ಗೆ ಮಾದರಿಯಾಗಿದೆ.

ಗಾಂಧಿಯವರ ದೃಷ್ಟಿಯಲ್ಲಿ ಯುವಕರೇ ದೇಶದ ಭವಿಷ್ಯ. ಯುವಕ, ಯುವತಿಯರು ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶ ಶಕ್ತಿಯುತವಾಗುತ್ತದೆ.

ಸ್ವಾರ್ಥ ತ್ಯಜಿಸಿ, ಸೇವಾಮನೋಭಾವದಿಂದ ಬದುಕಿ, ಶ್ರಮವನ್ನು ಗೌರವಿಸಿ ಶಿಕ್ಷಣವನ್ನು ವ್ಯಕ್ತಿತ್ವ ನಿರ್ಮಾಣಕ್ಕೆ ಉಪಯೋಗಿಸಬೇಕು. ಅಹಿಂಸೆ ಮತ್ತು ಸತ್ಯವು ಕೇವಲ ರಾಜಕೀಯದಲ್ಲಷ್ಟೇ ಅಲ್ಲ, ದೈನಂದಿನ ಬದುಕಿನಲ್ಲೂ ಪಾಲಿಸಬೇಕಾದ ಮೌಲ್ಯಗಳು. ಇಂದಿನ ಯುವಸಮುದಾಯಕ್ಕೆ  ಈ ಸಂದೇಶಗಳು ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಬದುಕಿನಲ್ಲಿ ಕೆಲವೊಮ್ಮೆ ಒಳಮಾರ್ಗಗಳನ್ನು ( ಶಾರ್ಟ್‌ಕಟ್‌ ಮಾರ್ಗಗಳನ್ನು ) ಹುಡುಕುವ ಪ್ರವೃತ್ತಿ ಕಾಣಿಸುತ್ತಿದೆ. ಗಾಂಧೀಜಿಯ ಮೌಲ್ಯಗಳು ಅದನ್ನು ತಿದ್ದುವ ಶಕ್ತಿಯನ್ನು ಹೊಂದಿದೆ.

ಇಂದು ಜಗತ್ತಿನಲ್ಲಿ ಭ್ರಷ್ಟಾಚಾರ, ಅಸಮಾನತೆ ಹಿಂಸೆ ಭಯೋತ್ಪಾದನೆಗಳು ವಿಜೃಂಭಿಸುತ್ತಿವೆ. ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಯ ನಡುವೆ ಮೌಲ್ಯಗಳು ಕುಸಿಯುತ್ತಿರುವುದು ನೋವನ್ನುಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯ ತತ್ವಗಳು ಹೆಚ್ಚು ಪ್ರಸ್ತುತವಾಗುತ್ತಿವೆ.

ರಾಜಕೀಯದಲ್ಲಿ ಅಧಿಕಾರ ಶಕ್ತಿಯನ್ನು ಕಡಿಮೆ ಮಾಡಿ ನೈತಿಕತೆಯ ಆಧಾರದ ಮೇಲೆ ಆಡಳಿತ ನಡೆಯಬೇಕು. ಸಮಾಜದಲ್ಲಿ ಪರಸ್ಪರ ಸಹಕಾರ ಸಹಿಷ್ಣುತೆ ಸಮಾನತೆ ಬೆಳೆಸಿಕೊಳ್ಳಬೇಕು. ಗಾಂಧೀಜಿಯ ಮೌಲ್ಯಗಳು ಕೇವಲ ಭಾರತಕ್ಕಲ್ಲ. ವಿಶ್ವಕ್ಕೂ ಮಾರ್ಗದರ್ಶಕ.

ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ತಮ್ಮ ಬಾಲ್ಯದ ದಿನಗಳನ್ನು ಅಡಗಿಸದೆ ಬರೆದಿದ್ದಾರೆ. ಬಾಲ್ಯದಲ್ಲಿ ಮಾಂಸ ತಿಂದ ಅನುಭವ, ಪೋಷಕರಿಗೆ ಸುಳ್ಳು ಹೇಳಿದ ಸಂದರ್ಭ, ಕಳ್ಳತನ ಮಾಡಿದ ಸಂದರ್ಭ.. ಇವೆಲ್ಲವನ್ನು ಅವರು ಮರೆ ಮಾಚದೇ ಬರೆದಿದ್ದಾರೆ. ಆದರೆ ಅವರು ಅವುಗಳನ್ನು ಪಾಪವೆಂದು ಮುಚ್ಚಿ ಹಾಕದೆ ಜೀವನದ ಪಾಠವೆಂದು ಒಪ್ಪಿಕೊಂಡಿದ್ದಾರೆ. ಇದರಿಂದ ನಮಗೆ ತಿಳಿಯುವುದೇನೆಂದರೆ, ಮಹಾನ್ ವ್ಯಕ್ತಿಗಳು ತಪ್ಪುಗಳನ್ನು ಮಾಡದವರಲ್ಲ, ಬದಲಾಗಿ ತಮ್ಮ ತಪ್ಪುಗಳನ್ನು ಅರಿತು ದಾರಿ ತಪ್ಪದೇ ಸಾಗಿದವರು.. ಯುವಕರು ಇಲ್ಲಿ ಕಲಿಯಬೇಕಾದದ್ದು ತಪ್ಪುಗಳನ್ನು ಮರೆಮಾಡದೆ ಒಪ್ಪಿಕೊಂಡು ಅದರಿಂದ ಕಲಿಯುವ ಧೈರ್ಯವನ್ನು.

ನಾಯಕನೆಂದರೆ ಕುರ್ಚಿಯಲ್ಲಿ ಕುಳಿತು ಆಳುವುದು ಅಲ್ಲ. ಹೃದಯಗಳಲ್ಲಿ ನೆಲೆಸಿ ದಾರಿ ತೋರಿಸುವ ಶಕ್ತಿ. ಈ ಮಾತು ಗಾಂಧೀಜಿಯ ಬದುಕಿಗೆ ಸಂಪೂರ್ಣ ಅನ್ವಯಿಸುತ್ತದೆ. ಸತ್ಯ ಮತ್ತು ಅಹಿಂಸೆಯ ಶಸ್ತ್ರಗಳನ್ನು ಹಿಡಿದುಕೊಂಡು ಸಾಮ್ರಾಜ್ಯ ವಾದವನ್ನು ಸೋಲಿಸಿದ ಮಹಾನ್ ವ್ಯಕ್ತಿ ಅವರು. ಗಾಂಧೀಜಿ ಎಂದರೆ ಕೇವಲ ರಾಜಕೀಯ ನಾಯಕನಲ್ಲ. ನೈತಿಕ ಮೌಲ್ಯಗಳ, ಸೇವಾಮನೋಭಾವದ, ಸರಳ ಜೀವನದ, ಶಾಂತಿಯ ತತ್ವದ ಜೀವಂತ ರೂಪಕ.

ಇಂದು ಜಾಗತೀಕರಣದ ಗಾಳಿ ಬೀಸುತ್ತಿರುವಾಗ, ವಿಜ್ಞಾನ ತಂತ್ರಜ್ಞಾನ ಪ್ರಗತಿಯಲ್ಲಿ ಸಾಗುತ್ತಿರುವಾಗ, ಸಮಾಜದಲ್ಲಿ ಹಿಂಸೆ, ಭ್ರಷ್ಟಾಚಾರ ಅನೈತಿಕತೆಗಳು ಹೆಚ್ಚುತ್ತಿರುವಾಗ ಯುವಕರಿಗೆ ದಾರಿ ತೋರಿಸುವುದು ಗಾಂಧೀಜಿಯ ನಾಯಕತ್ವ. ಅವರ ನೈತಿಕ ರಾಜಕೀಯವು ಯುವಕರನ್ನು ಕೇವಲ ಉತ್ತಮ ನಾಗರೀಕರನ್ನಷ್ಟೇ ಅಲ್ಲ, ಜವಾಬ್ದಾರಿಯುತ ನಾಯಕರನ್ನಾಗಿ ರೂಪಿಸುತ್ತದೆ.

ಗಾಂಧೀಜಿಯ ನಾಯಕತ್ವ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗಿಲ್ಲ. ಅದು ಇಂದಿಗೂ ಜೀವಂತ. ಸತ್ಯ, ಅಹಿಂಸೆ, ಸೇವಾ ಮನೋಭಾವ, ನೈತಿಕ ರಾಜಕೀಯ ಇವುಗಳು ಭಾರತದ ಭವಿಷ್ಯ ನಿರ್ಮಿಸಲು ಆಧಾರವಾಗಬೇಕು. ಯುವಕ ಯುವತಿಯರು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಭವಿಷ್ಯದ ಭಾರತ ಭ್ರಷ್ಟಾಚಾರ ಹಿಂಸೆ ಅಸಮಾನತೆಗಳಿಂದ ಮುಕ್ತವಾಗಿ ಶಾಂತಿ, ನ್ಯಾಯ, ಸಮಾನತೆಗಳಿಂದ ಕಂಗೊಳಿಸುವ ರಾಷ್ಟ್ರವಾಗುತ್ತದೆ.  ಹೀಗಾಗಿ ಯುವಸಮುದಾಯದ ಕೈಯಲ್ಲಿ ಭವಿಷ್ಯದ ಭಾರತ ಇದೆ, ಆ ಕೈಗಳಿಗೆ ದಾರಿ ತೋರಿಸುವ ಬೆಳಕು ಗಾಂಧೀಜಿಯ ಮೌಲ್ಯಗಳಲ್ಲಿವೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು.

ಯಶಸ್ವಿನಿ, ಪ್ರಥಮ ಬಿ.ಸಿ.ಎ,

ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ

ಇದನ್ನೂ ಓದಿ- ಕರಾವಳಿಯ ಮಾರ್ನೆಮಿ: ಮಾತೃಪ್ರಧಾನ ದ್ಯೋತಕ

More articles

Latest article