ಮುಳಬಾಗಿಲು: ರೈತರ ಹಾಗೂ ಪರಿಸರ ವಿರೋಧಿ ಡಿಎಫ್ಓ ಏಡುಕೊಂಡಲು ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಮಾರ್ಚ್ 11 ನೇ ತಾರೀಖು ಕೋಲಾರ ಡಿಸಿ ಕಚೇರಿ ಮುಂದೆ ಬೃಹತ್ ರೈತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಮಂಡಿಕಲ್ಲು ಶ್ರೀ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ನಡೆದ ಸಂತ್ರಸ್ತರ ರೈತರ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ ಎಂದು ರೈತ ಮುಖಂಡ ಎಂ. ಗೋಪಾಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲ ವಾಸುದೇವರೆಡ್ಡಿ.ಕೆ ಮಾತನಾಡಿ ಮರಗಳನ್ನು ಬೆಳೆಸಬೇಕಾದ ಅರಣ್ಯಾಧಿಕಾರಿಯೇ 1 ಲಕ್ಷ 30 ಸಾವಿರ ಮಾವಿನ ಮರಗಳನ್ನು ಕತ್ತರಿಸಿ ಹೈ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಆರೋಪಿ ಡಿಎಫ್ಓ ಏಡುಕೊಂಡಲು ರವರಿಗೆ ಕಾನೂನು ರೀತ್ಯಾ ಶಿಕ್ಷೆಯಾಗಬೇಕು ಮತ್ತು ಡಿಎಫ್ಓ ರಿಂದಲೇ ಸಂತ್ರಸ್ತ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದ ರೈತರ ಪರವಾಗಿರುವ ಹಲವು ಕಂದಾಯ ಇಲಾಖೆಯ ದಾಖಲೆಗಳಿದ್ದರೂ ಸಹ ನ್ಯಾಯಾಲಯದ ಆದೇಶಗಳನ್ನು, ಉಲ್ಲಂಘಿಸಿ ಉದ್ಧಟತನದಿಂದ ವರ್ತಿಸಿರುವ ಡಿಎಫ್ಓ ರೈತರು , ಪರಿಸರದ ಮೇಲೆ ದೌರ್ಜನ್ಯ ಎಸಗಿದ್ದಾರೆ.
ವರ್ಲ್ಡ್ ಬ್ಯಾಂಕ್ ನಿಂದ ಬರುವ ಹಣ ಲೂಟಿ ಮಾಡಲು ಸಹಜ ಅರಣ್ಯಗಳನ್ನು ನಾಶ ಮಾಡಿ ಜಿಲ್ಲೆಯಲ್ಲಿ ಗಿಡ ಬೆಳೆಸುವುದರಲ್ಲಿ ದೊಡ್ಡ ಭ್ರಷ್ಟಾಚಾರದ ಹಗರಣ ನಡೆಸಿದ್ದಾರೆ. ಪ್ರತಿನಿತ್ಯ ಹತ್ತಾರು ಲೋಡ್ ಮರಗಳನ್ನು ಕಡಿದು ಹಣ ಮಾಡುವ ದಂಧೆಯಲ್ಲಿ ನಡೆಯುತ್ತಿದ್ದು ಇದರಲ್ಲಿ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಆದ್ದರಿಂದ ಮಾರ್ಚ್ 11 ರ ಡಿಸಿ ಕಛೇರಿ ಎದುರು ನಡೆಯುವ ಬೃಹತ್ ರೈತರ ಹೋರಾಟ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಪರಿಸರ ಮತ್ತು ರೈತರ ಉಳಿವಿಗಾಗಿ ಜಿಲ್ಲೆಯ ಜನರು ಈ ಪ್ರತಿಭಟನೆಯನ್ನು ಬೆಂಬಲಿಸಬೇಕೆಂದು ಅವರು ಕೋರಿದರು. ರೈತ ಮುಖಂಡರಾದ ಕೋಲದೇವಿ ಶ್ರೀರಾಮಪ್ಪ, ಸಂಜೀವಪ್ಪ, ಗಕಗುಲಪ್ಪ, ನಯಾಜ್ ಪಾಷಾ, ಎಲೆನಾ, ಆಂಟೋನಿ ಸ್ವಾಮಿ, ರವೀಂದ್ರ ಗೌಡ, ಗಂಗಾಧರ್ ರೆಡ್ಡಿ ಮತ್ತಿತರರು ಇದ್ದರು.