ಒಬ್ಬ ಮನುಷ್ಯನಾಗಿ ಹೇಗೆ ಬದುಕಬೇಕು, ಅಂತ ಕಲಿಸಿಕೊಟ್ಟ ಧೀಮಂತ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ. ಅವರನ್ನು ಸ್ಮರಿಸಿ ಮಂಜು ಚಿನ್ಮಯ ಬರೆದ ಬರಹ ಇಲ್ಲಿದೆ.
29 ಅಕ್ಟೋಬರ್ 2021, ಕರ್ನಾಟಕದ ಪಾಲಿಗೆ ಅತ್ಯಂತ ಕರಾಳ ದಿನ. ಅವತ್ತು ಸುದ್ದಿ ಮಾಧ್ಯಮಗಳಲ್ಲಿ, “ನಟ ಪುನೀತ್ ರಾಜಕುಮಾರ್ ಆಸ್ಪತ್ರೆಗೆ ದಾಖಲು” ಅಂತ ಒಂದು ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.
ಕೆಲವೇ ಹೊತ್ತಿನಲ್ಲಿ, ಆ ಸುದ್ದಿ ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಡಿಯುತ್ತದೆ ಅಂತ ಯಾರೂ ಊಹಿಸಿರಲಿಲ್ಲ.
ಏನಾಗಲ್ಲ… ಅಪ್ಪು ಫಿಟ್ ಅಂಡ್ ಫೈನ್, ಅಪ್ಪು ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇರುವವರು, “ಜಿಮ್” ಮಾಡುವಾಗ, “ವರ್ಕೌಟ್” ಮಾಡುವಾಗ, ಏನೋ ಸಣ್ಣ ತೊಂದರೆ ಆಗಿರಬಹುದು, ಅಂತಲೇ ಅಂದುಕೊಂಡಿದ್ದರು….
ಆದರೆ ಯಾವಾಗ ವಿಕ್ರಂ ಆಸ್ಪತ್ರೆಯಲ್ಲಿ ಚಿತ್ರರಂಗ, ವಿಪಕ್ಷ, ಸೇರಿದಂತೆ ಇಡೀ ಸರ್ಕಾರ ಸೇರತೊಡಗಿತೋ, ಬೆಂಗಳೂರು ಜಿಲ್ಲಾಡಳಿತ ಕಂಠೀರವ ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸುತ್ತಿರುವ ಸುದ್ದಿ ಪ್ರಸಾರವಾಯಿತೋ ನೋಡನೋಡುತ್ತಿದ್ದಂತೆ ಆ ಕೆಟ್ಟ ಸುದ್ದಿ ಬಂದೇಬಿಟ್ಟಿತು… ಇದೆಲ್ಲಾ ನಡೆದದ್ದು ಕೆಲವೇ ನಿಮಿಷಗಳಲ್ಲಿ…! ಇಡೀ ರಾಜ್ಯ ಕಣ್ಣೀರಲ್ಲಿ ಮುಳುಗಿ ಹೋಯಿತು. ಮನೆ ಮನೆಗೂ ಸೂತಕ ಆವರಿಸಿತು. ಕಣ್ಣೀರಾಗದವರು ಯಾರಿದ್ದರು ಅವತ್ತು..?

“ಅಭಿಮಾನಿಗಳೇ ದೇವರು” ಎಂದ ಮೇರುನಟನ ಮಗನಾಗಿ, ಬಾಲ್ಯದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ “ಅಪ್ಪು” ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅಭಿಮಾನಿಗಳು “ಅಪ್ಪು”ವನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದರು. ಈಗಲೂ ಅಪ್ಪುವಿನ ಫೋಟೋ ನೋಡಿದರೆ, “ನಮ್ಮ ಮನೆಯ ಹುಡುಗ” ಅನ್ನೋ ಭಾವನೆ. ಅತ್ಯಂತ ಆಶ್ಚರ್ಯ ಅಂದರೆ, ಪುಟ್ಟ ಪುಟ್ಟ ಮಕ್ಕಳಿಗೆ ಅಪ್ಪು ಮೇಲಿರುವ ಪ್ರೀತಿ.!!! ಪುಟಾಣಿ ಮಕ್ಕಳಿಗೆ ಅವರ ಹತ್ತಿರದ ಸಂಬಂಧಿಗಳೇ ಗೊತ್ತಿರುವುದಿಲ್ಲ, ಹಾಗಿರುವಾಗ ಎಲ್ಲೋ ಪುನೀತ್ ರಾಜಕುಮಾರ್ ಅವರ ಫೋಟೋ ಕಂಡರೆ ಸಾಕು, “ಅಪ್ಪು… ಪವರ್ ಸ್ಟಾರ್…” ಅಂತ ತೋರಿಸುತ್ತವೆ.!!! ಇದಲ್ಲವೇ ಅಭಿಮಾನ.
ಇನ್ನು ಪುನೀತ್ ರಾಜಕುಮಾರ್ ಅವರಿಗಿದ್ದ ಸಾಮಾಜಿಕ ಕಳಕಳಿ, ಚಿತ್ರರಂಗದ ಹೊರಗೆ ಅವರು ಮಾಡಿದ ಸಮಾಜ ಸೇವೆ, ” ನ ಭೂತೋ ನ ಭವಿಷ್ಯತಿ “
ಒಬ್ಬ “ಮನುಷ್ಯ”ನಾಗಿ ಹೇಗೆ ಬದುಕಬೇಕು, ಅಂತ ಕಲಿಸಿಕೊಟ್ಟ “ಭಗವಂತ” ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ. ಆದರೂ “ಅಪ್ಪು ಎಂದಿಗೂ ಅಜರಾಮರ”.
ಮಂಜು ಚಿನ್ಮಯ


