ಯುವ ಪ್ರತಿಭಾವಂತ ಆಟಗಾರ ಯಶಸ್ವಿ ಜೈಸ್ವಾಲ್ ಔಟಾಗದೇ 70 ಎಸೆತಗಳಲ್ಲಿ ಸಿಡಿಸಿದ 76ರನ್ ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತ ಭರ್ಜರಿ ಮೊತ್ತ ದಾಖಲಿಸುವತ್ತ ಸಾಗಿದೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನವಾದ ಇಂದು, ದಿನದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದು ಮೊದಲ ದಿನದ ಗೌರವ ಪಡೆದುಕೊಂಡಿದೆ.
ಇಂಗ್ಲೆಂಡ್ ಪೇರಿಸಿದ 246 ರನ್ ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮ ಒಳ್ಳೆಯ ಅಡಿಪಾಯ ಹಾಕಿಕೊಟ್ಟರು. ರೋಹಿತ್ ಶರ್ಮಾ ಕೆಟ್ಟ ಹೊಡೆತಕ್ಕೆ ಕೈ ಹಾಕಿ 24 ರನ್ ಗಳಿಗೆ ಜಾಕ್ ಲೀಚ್ ಅವರ ಬೌಲಿಂಗ್ ನಲ್ಲಿ ಬೆನ್ ಸ್ಟೋಕ್ಸ್ ಗೆ ಕ್ಯಾಚ್ ನೀಡಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಶುಭಮನ್ ಗಿಲ್ ಔಟಾಗದೆ 14 ರನ್ ಗಳಿಸಿ ನಾಳೆಗೆ ತಮ್ಮ ಆಟವನ್ನು ಕಾಯ್ದಿರಿಸಿಕೊಂಡಿದ್ದಾರೆ.
ಇನ್ನಿಂಗ್ಸ್ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಯಶಸ್ವಿ ಜೈಸ್ವಾಲ್ ಬ್ಯಾಟ್ ನಿಂದ ಮೂರು ಸಿಕ್ಸರ್, ಒಂಭತ್ತು ಬೌಂಡರಿಗಳು ಸಿಡಿದವು.
ಇದಕ್ಕೂ ಮುನ್ನ ಭಾರತದ ಸ್ಪಿನ್ ತ್ರಿವಳಿಗಳ ಮಾರಕ ಬೌಲಿಂಗ್ ಗೆ ನಲುಗಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (70) ಹೋರಾಟದ ನಡುವೆಯೂ ಕೇವಲ 246 ರನ್ ಗಳಿಗೆ ಆಲ್ ಔಟ್ ಆಯಿತು.
ಹೈದರಾಬಾದ್ ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಸ್ಪಿನ್ ಮೋಡಿಗೆ ಸಿಲುಕಿ ಆಲ್ ಔಟ್ ಆಯಿತು.
ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದ್ದ ಇಂಗ್ಲೆಂಡ್ ನಂತರ ಮತ್ತೆ ಕುಸಿತ ಕಂಡಿತು. ರವಿಚಂದ್ರನ್ ಅಶ್ವಿನ್ 3, ರವೀಂದ್ರ ಜಡೇಜಾ 3 ಹಾಗು ಅಕ್ಷರ್ ಪಟೇಲ್ ಮತ್ತು ಜಸ್ಪೀತ್ ಬುಮ್ರಾ 2 ವಿಕೆಟ್ ಪಡೆದುಕೊಂಡರು.
ಇಂಗ್ಲೆಂಡ್ ಪರವಾಗಿ ನಾಯಕ ಬೆನ್ ಸ್ಟೋಕ್ಸ್ 70 ರನ್ ಗಳಿಸಿದರೆ, ಜಾನಿ ಬೇರ್ ಸ್ಟೋ 37, ಡಕ್ಕೆಟ್ 35 ರನ್ ಗಳಿಸಿದರು.