ಎಂದೂ ಗೊಣಗದ, ಹೆದರದ, ಸುಸ್ತು ಸೋಲು ಎನ್ನದ, ಎಲ್ಲ ಭಾರವೂ ತನ್ನ ಹೆಗಲ ಮೇಲೇ ಇಟ್ಟುಕೊಂಡು ನಡೆಯುತ್ತಿರುವೆ ಎಂದು ಬೀಗದ, ನನ್ನಿಂದಲೇ ಬೆಳಗಾಯಿತು ಎಂದು ಉಬ್ಬದ, `ನಾನು’ ಹೋಗಿ `ನಾವು’ ಆದ ಮಹಿಳಾ ಶಕ್ತಿಗೆ ತೀಸ್ತಾ ಒಂದು ಮಾದರಿಯಾಗಿದ್ದಾರೆ. ಇಂಥಾ ತೀಸ್ತಾ `ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ಹದಿನಾಲ್ಕನೆಯ ವರ್ಷದ `ಮಹಿಳಾ ಚೈತನ್ಯ ದಿನ’ದ ಕಾರ್ಯಕ್ರಮಗಳನ್ನು ಉದ್ಘಾಟಿಸಲು, ಹಕ್ಕೊತ್ತಾಯ ಜಾಥಾ ಮೆರವಣಿಗೆಯಲ್ಲಿ ನಮ್ಮೊಂದಿಗೆ ಕೈಕೈ ಹಿಡಿದು ಹೆಜ್ಜೆ ಹಾಕಲು ಇದೇ ಮಾರ್ಚ್ 7, 8ರಂದು ಹಾಸನಕ್ಕೆ ಬರುತ್ತಿದ್ದಾರೆ – ಡಾ. ಎಚ್ ಎಸ್ ಅನುಪಮಾ.
ಬ್ರಹ್ಮಪುತ್ರಾ ನದಿಯನ್ನು ಸೇರುವ ಉತ್ತರ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳ ಜೀವನದಿ ತೀಸ್ತಾ. ನಿರಂತರ ಅಡೆತಡೆಗಳ ದಾಟಿ ಧುಮ್ಮಿಕ್ಕಿ ಹರಿಯುವ, ನಡುನಡುವೆ ನೆರೆದುಂಬಿ ಅಬ್ಬರಿಸುವ ಈ ನದಿಯ ಹೆಸರನ್ನು ಇಟ್ಟುಕೊಂಡ ಬರಹಗಾರ್ತಿ, ಪತ್ರಕರ್ತೆ, ಮಾನವ ಹಕ್ಕು ಹೋರಾಟಗಾರ್ತಿ, 64 ವರ್ಷದ ತೀಸ್ತಾ ಸೆಟಲ್ವಾಡ್. ಈ ನಮ್ಮಕ್ಕ ನದಿಯಂತಹುದೇ ನ್ಯಾಯಪ್ರಜ್ಞೆಯ, ನಿರ್ಭೀತಿಯ, ಚಲನಶೀಲ ವ್ಯಕ್ತಿತ್ವದ ಮಹಿಳೆ. ಯಾವ ತರಹದ ದಮನಕ್ಕೂ ಶರಣೆನ್ನದ ಛಲದ ಹೆಣ್ಣು. `ಸಂವಿಧಾನದ ಕಾಲಾಳು’ (ಫುಟ್ ಸೋಲ್ಜರ್ ಆಫ್ ಕಾನ್ಸ್ಟಿಟ್ಯೂಷನ್) ಎಂದು ಹೆಸರಾಗಿರುವವರು. ಅತ್ಯಂತ ಗೌರವಯುತವಾದ ಈ ಸ್ಥಾನ ಸುಮ್ಮನೆ ಸಿಕ್ಕಿಲ್ಲ. ದಶಕಗಳ ಸಂಘಟನೆ, ಕಾನೂನು ಹೋರಾಟ, ಜೈಲು ವಾಸ, ಕಚೇರಿಗಳಿಗೆ ಅಲೆದಾಟ, ಪ್ರಾಣಾಪಾಯಗಳ ಇತಿಹಾಸ ಅದರ ಹಿಂದಿದೆ. ನ್ಯಾಯಕ್ಕಾಗಿ ಹೋರಾಡುವುದು ಅವರ ಪರಂಪರೆಯಾಗಿದೆ.
ನ್ಯಾಯವಾದಿಗಳ ಕುಟುಂಬದ ತೀಸ್ತಾರ ಮುತ್ತಜ್ಜ ಸರ್ ಚಿಮನಲಾಲ್ ಸೆಟಲ್ವಾಡ್ ಪ್ರಖ್ಯಾತ ಬ್ಯಾರಿಸ್ಟರ್ ಆಗಿದ್ದವರು. 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿಚಾರಣೆಗೆ ನೇಮಕವಾದ ಹಂಟರ್ ಕಮಿಷನ್ನಿನಲ್ಲಿದ್ದ ಮೂವರು ಭಾರತೀಯರಲ್ಲಿ ಅವರೂ ಒಬ್ಬರು. ಜನರಲ್ ಡಯರ್ಗೆ ಕ್ರಾಸ್ ಎಕ್ಸಾಮಿನೇಷನ್ ನಡೆಸಿ ಆತನನ್ನು ಬ್ರಿಟನ್ನಿಗೆ ವಾಪಸು ಕರೆಸಿಕೊಳ್ಳುವಂತೆ ಮಾಡಿದ್ದರು. ಡಾ. ಬಿ. ಆರ್. ಅಂಬೇಡ್ಕರರೊಡನೆ ನಿಕಟ ಸಂಪರ್ಕ ಹೊಂದಿದ್ದರು. 1924ರಲ್ಲಿ ಅಂಬೇಡ್ಕರರು ಬಹಿಷ್ಕೃತ ಹಿತಕಾರಿಣೀ ಸಭಾ ಆರಂಭಿಸುವಾಗ ಕೈ ಜೋಡಿಸಿದ್ದರು. ಸಭಾದ ಮೊದಲ ಅಧ್ಯಕ್ಷರು ಅವರೇ ಆಗಿದ್ದರು. ಚಿಮನಲಾಲರ ಮಗ ಮೋತಿಲಾಲ್ ಸೆಟಲ್ವಾಡ್ (ತೀಸ್ತಾರ ಅಜ್ಜ) ಭಾರತದ ಮೊದಲ ಕಾನೂನು ಆಯೋಗದ ಅಧ್ಯಕ್ಷರಾಗಿದ್ದರು. ಭಾರತದ ಮೊದಲ ಅಟಾರ್ನಿ ಜನರಲ್ ಆಗಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದರು. ಅವರ ಮಗ ಮುಂಬಯಿಯಲ್ಲಿ ನ್ಯಾಯವಾದಿಯಾಗಿರುವ ಅತುಲ್ ಸೆಟಲ್ವಾಡ್. ಅತುಲ್ ಮತ್ತು ಸೀತಾರ ಮಗಳು ತೀಸ್ತಾ.

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವಾಟರ್ಗೇಟ್ ಹಗರಣವನ್ನು ಬಯಲಿಗೆಳೆದ ಇಬ್ಬರು ಪತ್ರಕರ್ತರು ಬರೆದ ಪುಸ್ತಕ `ಆಲ್ ದ ಪ್ರೆಸಿಡೆಂಟ್ಸ್ ಮೆನ್’. ವಿದ್ಯಾರ್ಥಿ ಜೀವನದಲ್ಲಿ ಈ ಪುಸ್ತಕ ಓದಿದ ತೀಸ್ತಾಗೆ ತಮ್ಮ ಕುಟುಂಬದ ಪಾರಂಪರಿಕ ವೃತ್ತಿಯಂತಾಗಿದ್ದ ವಕೀಲಿಕೆ ಬಿಟ್ಟು ಪತ್ರಕರ್ತೆಯಾಗುವ ಕನಸು ಮೊಳೆಯಿತು. ಕಾನೂನು ವಿದ್ಯಾರ್ಥಿನಿಯಾಗಿ ಎರಡು ವರ್ಷ ಪೂರೈಸಿದ್ದವರು ಅರ್ಧಕ್ಕೇ ಅದನ್ನು ಬಿಟ್ಟು ಮುಂಬೈ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪದವಿ ಪಡೆದರು. ಬಳಿಕ 1983ರಲ್ಲಿ ಪತ್ರಕರ್ತೆಯಾಗಿ ದ ಡೈಲಿ ಮತ್ತು ದ ಇಂಡಿಯನ್ ಎಕ್ಸ್ಪ್ರೆಸ್ನ ವರದಿಗಾರ್ತಿಯಾಗಿ ವೃತ್ತಿ ಜೀವನ ಆರಂಭಿಸಿದರು. `ದ ಬಿಸಿನೆಸ್ ಇಂಡಿಯಾ’ದ ಸೀನಿಯರ್ ಕರೆಸ್ಪಾಂಡೆಂಟ್ ಆದರು. ಪತ್ರಕರ್ತೆಯಾಗಿ 1984ರ ಭಿವಂಡಿ ಕೋಮುಗಲಭೆಯ ವರದಿ ಮಾಡುತ್ತಿರುವಾಗ ಕೋಮುಹಿಂಸೆಯ ನಿಜರೂಪ ದರ್ಶನವಾಯಿತು. 1992-93ರಲ್ಲಿ ಮುಂಬಯಿಯಲ್ಲಿ ನಡೆದ ಕೋಮುಗಲಭೆಗಳು ಅವರ ಚಿಂತನೆಯ ದಿಕ್ಕನ್ನೇ ಬದಲಿಸಿದವು.
ವೃತ್ತಿಜೀವನದ ವೇಳೆ ಪರಿಚಯವಾದ ಪತ್ರಕರ್ತ, ಮಾನವಹಕ್ಕು ಹೋರಾಟಗಾರ ಜಾವೇದ್ ಆನಂದ್ ತೀಸ್ತಾ ಅವರ ಬಾಳ ಸಂಗಾತಿಯಾದರು. ಹತ್ತು ವರ್ಷ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಜೋಡಿಯು ಒತ್ತಡದ ಉದ್ಯೋಗಕ್ಕೆ ರಾಜೀನಾಮೆಯಿತ್ತು ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಯೋಚಿಸಿದರು. 1993ರಲ್ಲಿ ಸಬ್ರಂಗ್ ಕಮ್ಯುನಿಕೇಶನ್ಸ್ ಆರಂಭಿಸಿದರು. ಕಮ್ಯುನಾಲಿಸಂ ಕಾಂಬ್ಯಾಟ್ ಎಂಬ ಮಾಸಿಕವನ್ನು ಪ್ರಕಟಿಸತೊಡಗಿದರು. ತೀಸ್ತಾ ಅದರ ಸಂಪಾದಕಿಯಾದರು. (2012ರವರೆಗೂ ಮುದ್ರಿತ ಪ್ರತಿ ಬರುತ್ತಿತ್ತು. ನಂತರ ಡಿಜಿಟಲೀಕರಣಗೊಂಡಿದೆ. ಈಗ ಸಬ್ರಂಗ್ ಇಂಡಿಯಾ, ಕಮ್ಯುನಾಲಿಸಂ ಕಾಂಬ್ಯಾಟ್ ವಿದ್ಯುನ್ಮಾನ ಆವೃತ್ತಿಗಳು ಬರುತ್ತಿವೆ.) 1997ರಲ್ಲಿ ಖೋಜ್ (ಶೋಧ) ಎಂಬ ಯೋಜನೆಯನ್ನು ತೀಸ್ತಾ ಕೈಗೆತ್ತಿಕೊಂಡರು. ಭಾರತದ ಶಾಲಾ ಪಠ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಅದರಲ್ಲಿ ಅಡಗಿರುವ ಅಲ್ಪಸಂಖ್ಯಾತ ಸಮುದಾಯ ವಿರೋಧಿ, ಮಹಿಳಾ ವಿರೋಧಿ ಧೋರಣೆಯ ಪಠ್ಯಗಳನ್ನು ಮರುಬರಹ ಮಾಡುವ ಯೋಜನೆ ಅದು. ಬಹುತ್ವ ಭಾರತದ ನಿಜ ಚರಿತ್ರೆಯನ್ನು ಎತ್ತಿಹಿಡಿಯಲು ಸಾಮಾಜಿಕ ಮಾಧ್ಯಮವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿರುವ ಖೋಜ್ ವೆಬ್ಸೈಟ್ನ ಕೊಂಡಿ ಇದು: www.khojedu.net .
1992-2002. ದೇಶದ ರಾಜಕಾರಣ, ಸಾಮಾಜಿಕ ಬದುಕಿನ ನೇಯ್ಗೆಯನ್ನೇ ಅಲ್ಲೋಲಕಲ್ಲೋಲ ಮಾಡಿದ, ಬಹುತ್ವ ಭಾರತವನ್ನು ಒಡೆದ ದಶಕ. 2002ರ ಕೋಮುಗಲಭೆಯಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್, ವಡೋದರಾ ಮತ್ತಿತರ ಪಟ್ಟಣಗಳಲ್ಲಿ, ಅಧಿಕಾರ ಕೇಂದ್ರಗಳಿಂದ ದೂರವಿರುವ ಹಳ್ಳಿಹಳ್ಳಿಗಳಲ್ಲಿ ಸಾವಿರಾರು ಮುಸ್ಲಿಮರ ಮೇಲೆ ಹಿಂಸಾಚಾರ ನಡೆಯಿತು. ಸ್ವಾತಂತ್ರ್ಯೋತ್ತರ ಭಾರತವು ಕಂಡಿರದ ಕೋಮು ಆಧರಿತ ಹತ್ಯಾಕಾಂಡ ಜರುಗಿತು. ಕಟ್ಟಡದ ಒಳಗಿದ್ದ ಕುಟುಂಬದೊಡನೆ ವಡೋದರಾದ `ಬೆಸ್ಟ್ ಬೇಕರಿ’ಯು ಹಾಡುಹಗಲೇ ಬೆಂಕಿಗಾಹುತಿಯಾಯಿತು. ದೂರದ ಹಳ್ಳಿಯೊಂದರ ಬಿಲ್ಕಿಸ್ ಬಾನು ಎಂಬ ಐದು ತಿಂಗಳ ಬಸುರಿ ತನ್ನ ಮೂರು ವರ್ಷದ ಮಗಳು, ಗಂಡ ಮತ್ತಿತರ ಬಂಧುಗಳೊಡನೆ ಜೀವವುಳಿಸಿಕೊಳ್ಳಲು ಊರು ಬಿಟ್ಟು ಹೋಗುವಾಗ ಭೀಕರ ದಾಳಿಗೊಳಗಾದಳು. ಅವಳು, ಅವಳ ತಾಯಿ ಮತ್ತು ಜೊತೆಗಿದ್ದ ಸಂಬಂಧಿ ಮಹಿಳೆಯರು ಗುಂಪು ಅತ್ಯಾಚಾರಕ್ಕೊಳಗಾದರು. ಅವಳ ಮಗಳನ್ನು ಬಂಡೆಗೆ ಜಪ್ಪಿ ಕೊಲ್ಲಲಾಯಿತು. ಇನ್ನೂ ಏಳು ಜನರು ಕಲ್ಲು, ಕೋಲುಗಳಿಂದ ಹೊಡೆತ ತಿಂದು ಕೊನೆಯುಸಿರೆಳೆದರು. ಅತ್ತ ಕಾಂಗ್ರೆಸ್ ಸಂಸದರಾಗಿದ್ದ ಎಹ್ಸಾನ್ ಜಾಫ್ರಿ ಅಹಮದಾಬಾದ್ ನಗರದಲ್ಲಿ ಸಜೀವ ದಹನಕ್ಕೊಳಗಾದರು. ಒಂದೇ ಎರಡೇ, ಎಲ್ಲೆಲ್ಲಿ ನೋಡಿದರೂ ಮನುಷ್ಯರ ನೆತ್ತರು ಹಾದಿಬೀದಿ ಮೇಲೆ ಚೆಲ್ಲಾಡಿಕೊಂಡ ಭೀಭತ್ಸ ಕಾಣಿಸುತ್ತಿತ್ತು.

ಲಕ್ಷಾಂತರ ಮುಸ್ಲಿಮರು ಊರು, ಮನೆ ಬಿಟ್ಟು ಜೀವವುಳಿಸಿಕೊಳ್ಳಲು ಎಲ್ಲೆಲ್ಲಿಗೋ ಹೋದರು. ಶಸ್ತ್ರಾಸ್ತ್ರ ಹಿಡಿದು ತಿರುಗುತ್ತಿದ್ದ ಧರ್ಮದಮಲಿನ ಉಗ್ರರ ಕೈಗೆ ಸಿಲುಕಿ ಸಾವಿರಾರು ಜನ ಅನ್ಯಾಯವಾಗಿ ಜೀವ ಕಳೆದುಕೊಂಡರು. ಅನ್ನಾಹಾರ, ನೆರಳಿಲ್ಲದೆ ಕಂಡಕಂಡಲ್ಲಿ ಬಚ್ಚಿಟ್ಟುಕೊಂಡು ಅಂತೂಇಂತೂ ರಾಜ್ಯದ ಗಡಿ ದಾಟಿದವರು ಲೆಕ್ಕವಿಲ್ಲದಷ್ಟು ಜನ.
ಭಯಾನಕ ಸಂಗತಿ ಎಂದರೆ ಅವರ ಸಹಾಯಕ್ಕೆ ಯಾವ ರಕ್ಷಕರೂ ಬರಲಿಲ್ಲ. ರಕ್ಷಿಸಬೇಕಾದವರೇ ಕೊಲ್ಲಲು ಟೊಂಕಕಟ್ಟಿ ನಿಂತಿದ್ದುದು, ತಾವು ಆರಿಸಿ ಕಳುಹಿಸಿದ ಆಳುವವರೇ ತಮ್ಮ ಪ್ರಾಣಹಂತಕರಾಗಿರುವುದು ಅವರ ಅರಿವಿಗೆ ಬಂದಿತು. ಕೊಲೆಗಡುಕರ ವಿರುದ್ಧ ಪ್ರಕರಣ ದಾಖಲಿಸಲೂ ಸಾಧ್ಯವಾಗಲಿಲ್ಲ. ಭಾರತದ, ವಿಶ್ವದ ಅಂತಸ್ಸಾಕ್ಷಿಯನ್ನೇ ನಡುಗಿಸಿದ ಈ ಭೀಕರ ಕೋಮುಹಿಂಸಾಚಾರಕ್ಕೆ ಯಾರು ಹೊಣೆ? ಸ್ಥಳೀಯ ಆಡಳಿತದ, ಸರ್ಕಾರದ ಉತ್ತರದಾಯಿತ್ವ ಏನು? ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಹೇಗೆ? ಎಂಬ ಪ್ರಶ್ನೆಗಳೆದ್ದವು. ಹೋರಾಟ, ಸಂಘಟನೆ, ಪ್ರತಿಭಟನೆಗಳು ರೂಪುಗೊಂಡವು.
ಆ ಸಮಯದಲ್ಲಿ ತೀಸ್ತಾ ಸೆಟಲ್ವಾಡ್, ಜಾವೆದ್ ಆನಂದ್, ಫಾದರ್ ಸೆಡ್ರಿಕ್ ಪ್ರಕಾಶ್, ಪತ್ರಕರ್ತ ಅನಿಲ್ ಧಾರ್ಕರ್, ಚಿತ್ರರಂಗ ಮತ್ತು ರಂಗಭೂಮಿಯ ಅಲಿಕ್ ಪದಾಮ್ಸಿ, ಜಾವೆದ್ ಅಖ್ತರ್, ವಿಜಯ್ ತೆಂಡೂಲ್ಕರ್, ರಾಹುಲ್ ಬೋಸ್ ಮೊದಲಾದ ಜಾತ್ಯತೀತ ಸಮಸಮಾಜ ಕಟ್ಟಬಯಸುವ ಸಮಾನ ಮನಸ್ಕರು ಒಂದು ಸರ್ಕಾರೇತರ ಸಂಸ್ಥೆ `ಸಿಜೆಪಿ’ (ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ – ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು) ಸ್ಥಾಪಿಸಿದರು. ಎಲ್ಲ ಹಿಂಸೆ, ದೌರ್ಜನ್ಯಗಳ ಹಿಂದಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಬಲಪಂಥೀಯ ಹಿಂದೂ ಉಗ್ರ ಸೈದ್ಧಾಂತಿಕ ಸಂಘಟನೆಗಳ ವಿರುದ್ಧ ಸಿಜೆಪಿ ಕಾನೂನು ಸಮರ ಹೂಡಿತು. ಸಾವಿರಾರು ಕುಟುಂಬಗಳು ನ್ಯಾಯ ಪಡೆಯಲು, ಬದುಕು ಕಟ್ಟಿಕೊಳ್ಳಲು ಬೆಂಬಲವಾಗಿ ನಿಂತಿತು. ಕೋಮುಗಲಭೆಯಲ್ಲಿ ಸಜೀವ ದಹನಕ್ಕೊಳಗಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ಅವರೊಡನೆ ಕೈಜೋಡಿಸಿ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು 62 ಜನ ಪ್ರಭಾವಿ ರಾಜಕಾರಣಿಗಳು-ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸಬೇಕೆಂದು ಕೋರ್ಟಿನಲ್ಲಿ ದಾವೆ ಹೂಡಿತು. ಖುದ್ದು ಮುಖ್ಯಮಂತ್ರಿಯೇ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದು, `ಹಿಂದೂಗಳು ತಮ್ಮ ಸಿಟ್ಟು ತೀರಿಸಿಕೊಳ್ಳಲಿ ಬಿಡಿ’ ಎಂದು ಹೇಳಿದ ಬಗೆಗೆ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಸಾಕ್ಷ್ಯ ಹೇಳಿದರು. (ಆದರೆ ಅವರನ್ನು 30 ವರ್ಷ ಕೆಳಗಿನ ಯಾವ್ಯಾವುದೋ ಹುಸಿ/ಕ್ಷುಲ್ಲಕ ಪ್ರಕರಣಗಳ ನೆಪದಲ್ಲಿ ಜೈಲಿಗೆ ಕಳಿಸಲಾಗಿದೆ. ಮೇಲಿಂದ ಮೇಲೆ ನಗಣ್ಯ ಪ್ರಕರಣಗಳ ಬೆಂಬತ್ತಿ ಅವರ ಜೈಲು ಶಿಕ್ಷೆಯ ಅವಧಿ ದೀರ್ಘಗೊಳ್ಳುತ್ತಲೇ ಹೋಗಿದೆ.)

ನಮ್ಮನ್ನು ಕಾಯಬೇಕಾದ ಬಲಶಾಲಿ ಪ್ರಭುತ್ವವೇ ನಮಗೆದುರಾಗಿ ನಿಂತರೆ ನ್ಯಾಯ ಪಡೆಯುವುದು ಸುಲಭದ ಮಾತಲ್ಲ. ಆದರೆ ಸಂತ್ರಸ್ತರ ಜೊತೆಗೆ ಧೃಢವಾಗಿ ನಿಂತು ಸಿಜೆಪಿ ವರ್ಷಗಟ್ಟಲೆ ಕಾನೂನು ಸಮರ ಹೂಡಿತು. ಪ್ರತಿವಾದಿಯಾಗಿ ತೀಸ್ತಾ ಲೆಕ್ಕವಿರದಷ್ಟು ಪ್ರಕರಣಗಳಿಗೆ ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾಕ್ಷಿಗಳನ್ನು ನಾಶ ಮಾಡುವ, ಕಣ್ಣೆದುರೇ ಆದದ್ದನ್ನೂ ಪರಿಗಣಿಸದಿರುವ, ದಮನಿತರನ್ನೇ ಹೆದರಿಸಿ, ಆಮಿಷವೊಡ್ಡಿ ತನಿಖೆಯನ್ನು ತಿರುಗುಮುರುಗಾಗಿಸುವ ದುಷ್ಟ ಪ್ರಯತ್ನಗಳಿಗೆ ಅಂಜದೇ ತೀಸ್ತಾ ಪ್ರಕರಣಗಳನ್ನು ಮುನ್ನಡೆದರು. ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಒಂದಾದ ಮೇಲೊಂದು ದಾವೆ ಹೂಡಿ, ನೊಂದವರು ಧೈರ್ಯಗೆಡದೆ ಸಾಕ್ಷಿಯಾಗಿ ಉಳಿಯಲು ಎಲ್ಲ ರೀತಿಯ ಬೆಂಬಲ ನೀಡಿದರು. ಬಿಲ್ಕಿಸ್ ಬಾನು ಪ್ರಕರಣವನ್ನು ತೆಗೆದುಕೊಂಡರೂ ಸಾಕು, ಆಕೆ ತಾನು ಬಿಟ್ಟು ಬಂದ ಊರಿಗೆ ಹೋಗಲು ಹತ್ತು ವರ್ಷ, ನ್ಯಾಯಕ್ಕಾಗಿ 17 ವರ್ಷ ಕಾಯಬೇಕಾಯಿತು. 20 ಸಲ ಮನೆ ಬದಲಿಸಬೇಕಾಯಿತು. ಅವರೊಡನೆ ಸಿಜೆಪಿ ಸದಾ ಬೆಂಬಲವಾಗಿ ನಿಂತಿತು.
ಸುದೀರ್ಘ ಕಾನೂನು ಸಮರದ ಬಳಿಕ 2002ರ ಗುಜರಾತ್ ಮಾರಣಹೋಮದ ಅಪರಾಧಕ್ಕೆ 172 ಜನರಿಗೆ ಶಿಕ್ಷೆಯಾಯಿತು. 124 ಜನ ಮರಣದಂಡನೆಗೊಳಗಾಗಿ ಬಳಿಕ ಜೀವಾವಧಿ ಶಿಕ್ಷೆ ಪಡೆದು ಜೈಲಿಗೆ ಹೋಗುವಂತಾಯಿತು. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳು ಜೀವಾವಧಿ ಶಿಕ್ಷೆ ಪಡೆದು ಜೈಲಿಗೆ ಹೋದರು. ಬದುಕು ಕಟ್ಟಿಕೊಳ್ಳುವಷ್ಟು ಪರಿಹಾರ ಬಿಲ್ಕಿಸ್ಗೆ ದೊರೆಯಿತು.
ಇದಾವುದೂ ನಿರುಮ್ಮಳವಾಗಿ ಈ ಲೇಖನ ಬರೆದಷ್ಟು ಸುಗಮವಾಗಿ ಸಂಭವಿಸಲಿಲ್ಲ. ಎಂಟಕ್ಕಿಂತ ಹೆಚ್ಚು ಹುಸಿ ಕ್ರಿಮಿನಲ್ ಪ್ರಕರಣಗಳನ್ನು ತೀಸ್ತಾ ಅವರ ಮೇಲೆ ಹಾಕಿಸಲಾಯಿತು. ಈಗಲೂ ಬಂಧನದ ಸಾಧ್ಯತೆ ಸದಾ ಅವರಿಗಿದ್ದೇ ಇದೆ. ಅವರ ಜೊತೆ ನಿಂತ ಕೋಮುಗಲಭೆಯ ಸಂತ್ರಸ್ತರಿಗೆ ಕೋಟ್ಯಂತರ ರೂಪಾಯಿಗಳ ಆಮಿಷವೊಡ್ಡಿ ತಿರುಗಿ ಸಾಕ್ಷ್ಯ ಹೇಳುವಂತೆ ಮಾಡಲಾಗಿದೆ. ಅವರು ತಮ್ಮ ಹೆಸರಲ್ಲಿ ಹಣ ಸಂಗ್ರಹಿಸುತ್ತಿರುವರೆಂದು, ಅದನ್ನು ತಮಗಾಗಿ ಬಳಸುತ್ತಿಲ್ಲವೆಂದು ಸಂತ್ರಸ್ತ ಗುಂಪಿನ ಒಬ್ಬರಿಂದಲೇ ತೀಸ್ತಾ ಮೇಲೆ ಪ್ರಕರಣ ದಾಖಲಿಸುವಂತೆ ಮಾಡಲಾಗಿದೆ. ದಲಿತ, ಮುಸ್ಲಿಂ ಮಹಿಳೆಯರ ಹಕ್ಕುಗಳ ಸಲುವಾಗಿ ಹೋರಾಡುವ ಸ್ತ್ರೀವಾದಿ ತೀಸ್ತಾರ ಹೋರಾಟ, ಬರಹ, ಚಟುವಟಿಕೆಗಳನ್ನು ನಿರ್ಬಂಧಿಸಲು ಅವರ ಮೇಲೆ ಡಜನುಗಟ್ಟಲೆ ಹುಸಿ ಪ್ರಕರಣಗಳನ್ನು ಹಾಕಲಾಗಿದೆ. ತಮಗೆ ಸುರಕ್ಷತೆ ಬೇಕು ಎಂದು 2022ರವರೆಗೂ ಹಲವು ಬಾರಿ ಅವರು ಕೋರ್ಟಿಗೆ ಹೋಗುವಂತಾಗಿದೆ. 2022ರಲ್ಲಿ ಬಂಧನಕ್ಕೊಳಗಾಗಿ ಸಬರಮತಿ ಮಹಿಳಾ ಜೈಲಿನಲ್ಲಿ 70 ದಿನ ಕಳೆದು ಬಂದಿದ್ದಾರೆ. ಅವರ ಬೇಲ್ ವಿಚಾರಣೆಯನ್ನು ಗುಜರಾತ್ ಹೈಕೋರ್ಟು ಅತಿ ದೀರ್ಘಾವಧಿಗೆ ಮುಂದೂಡಿತು. ನಂತರವೂ ಖಾಯಂ ಬೇಲ್ ಸಿಗಲು ಒಂದು ವರ್ಷ ಹಿಡಿಯಿತು. ತಾವು ಮತ್ತು ಕುಟುಂಬದವರು ಎದುರಿಸುವ ಪ್ರಾಣಾಪಾಯಗಳನ್ನು ದಿಟ್ಟೆದೆಯಿಂದ ತೀಸ್ತಾ ಮತ್ತು ಬಳಗದವರು ಎದುರಿಸಿದರು.
ನ್ಯಾಯಕ್ಕಾಗಿ ನಡೆಸಿದ ಹೋರಾಟದ ಅನುಭವಗಳನ್ನು 2017ರಲ್ಲಿ ತೀಸ್ತಾ `ಎ ಫುಟ್ ಸೋಲ್ಜರ್ ಆಫ್ ಕಾನ್ಸ್ಟಿಟ್ಯೂಷನ್: ಎ ಮೆಮಾಯರ್’ ಎಂಬ ಹೊತ್ತಗೆಯಲ್ಲಿ ದಾಖಲಿಸಿದ್ದಾರೆ. 2002ರ ಗುಜರಾತ್ ಗಲಭೆಗಳ ವೇಳೆ `ರಕ್ಷಕರೇ ದ್ರೋಹವೆಸಗಿದಾಗ’ ಎಂಬ ಅಧ್ಯಾಯವನ್ನು ಬರೆದಿದ್ದಾರೆ. (ಈ ಹೊತ್ತಗೆಯನ್ನು ಕನ್ನಡಕ್ಕೆ ಸಂವಿಧಾನದ ಕಾಲಾಳು ಎಂಬ ಶೀರ್ಷಿಕೆಯಲ್ಲಿ ಸತ್ಯಾ ಎಸ್. ಅನುವಾದಿಸಿದ್ದಾರೆ.)

ಇಷ್ಟಾದರೂ ಅವರ ಹೋರಾಟ ಮುಗಿದಿಲ್ಲ. ಅದಿನ್ನೂ ಜಾರಿಯಲ್ಲಿದೆ. ಗರ್ಭಿಣಿ ಬಿಲ್ಕಿಸ್ ಬಾನುವನ್ನು ಅತ್ಯಾಚಾರಕ್ಕೊಳಪಡಿಸಿ, ಅವಳ ಕುಟುಂಬಸ್ಥರನ್ನು ಹತ್ಯೆ ಮಾಡಿದ್ದ ಪಾತಕಿಗಳು `ಆಜಾದಿ ಕಾ ಅಮೃತ್ ಮಹೋತ್ಸವ್’ ಆದ 2025ನೇ ಇಸವಿಯಲ್ಲಿ `ಸನ್ನಡತೆ’ಯ ಆಧಾರದಲ್ಲಿ ಬಿಡುಗಡೆಗೊಂಡರು! ಈ ಅನ್ಯಾಯದ ವಿರುದ್ಧ ಜನಾಭಿಪ್ರಾಯ ರೂಪಿಸಿ ಮತ್ತೆ ಕಾನೂನು ಹೋರಾಟದ ಮೂಲಕವೇ ಕೊಲೆಗಡುಕ ಅತ್ಯಾಚಾರಿಗಳನ್ನು ಜೈಲಿಗಟ್ಟುವಲ್ಲಿ ಸಿಜೆಪಿ ಯಶಸ್ವಿಯಾಯಿತು. ಇದು ನ್ಯಾಯಕ್ಕೆ, ಸಂವಿಧಾನಕ್ಕೆ ಸಂದ ಜಯ. ಸಂವಿಧಾನವನ್ನು ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನು ನಿಜಾರ್ಥದಲ್ಲಿ ಎತ್ತಿ ಹಿಡಿಯುವ ಪ್ರಯತ್ನವೆಂದು ಪರಿಗಣಿಸಲ್ಪಟ್ಟಿದೆ.
ಸಿಜೆಪಿ ಗುಜರಾತ್ ಹಿಂಸಾಕಾಂಡದ ಪ್ರಕರಣಗಳ ಬಗೆಗಷ್ಟೇ ಅಲ್ಲದೇ ವಿವಿಧ ನೆಲೆಯ ಹೋರಾಟಗಳಲ್ಲೂ ತೊಡಗಿಕೊಂಡಿದೆ. ನಾಗರಿಕ ದಾಖಲಾತಿ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಅವರ ನೆಲದಲ್ಲೇ ಪರದೇಶಿಗಳಾಗಿಸುವ ಎನ್ನಾರ್ಸಿ ವಿರುದ್ಧ ದನಿಯೆತ್ತಿದೆ. ವಿಶೇಷವಾಗಿ ಅಸ್ಸಾಮಿನಲ್ಲಿ ಕಾರ್ಯಪ್ರವೃತ್ತವಾಗಿದೆ. ದ್ವೇಷ ಭಾಷಣ, ಪ್ರಚೋದನಕಾರಿ ಚಟುವಟಿಕೆಗಳ ವಿರುದ್ಧ ಪ್ರಕರಣ ದಾಖಲಿಸುವುದು; ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸುವುದು; ಜೈಲು ಪಾಲಾಗಿರುವ, ಉನ್ನತ ನ್ಯಾಯಾಲಯಗಳಲ್ಲಿ ಪ್ರಕರಣಗಳಿರುವ ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸುವುದೂ ಸೇರಿದಂತೆ ನಾನಾ ಹಂತಗಳಲ್ಲಿ ಸಂತ್ರಸ್ತರೊಡನೆ ನಿಂತಿದೆ. ಕಾನೂನು ಬಾಹಿರವಾಗಿ ಬಂಧಿಸುವುದು, ಎತ್ತಂಗಡಿ, ಬುಲ್ಡೋಜರ್ ದೌರ್ಜನ್ಯವೇ ಮೊದಲಾದ ಪ್ರಭುತ್ವ ಪ್ರಾಯೋಜಿತ ಸಾಮಾಜಿಕ ಅನ್ಯಾಯಗಳು ಕೊನೆಯಾಗಬೇಕೆನ್ನುವುದು ತೀಸ್ತಾ ಮುನ್ನಡೆಸುವ ಸಿಜೆಪಿಯ ಆಶಯವಾಗಿದೆ.
ಪ್ರಸ್ತುತ ತೀಸ್ತಾ ಅವರು ಜಾವೇದ್ ಆನಂದ್ ಅವರ `ಸಬ್ರಂಗ್ ಕಮ್ಯುನಿಕೇಷನ್ಸ್’ ಮಾಧ್ಯಮ ಸಂಸ್ಥೆಯ ವಕ್ತಾರೆಯಾಗಿದ್ದಾರೆ. ಸಿಜೆಪಿಯ ಮುಖ್ಯಸ್ಥೆಯಾಗಿದ್ದಾರೆ. `ವಿಮೆನ್ ಇನ್ ದ ಮೀಡಿಯಾ ಕಮಿಟಿ’ಯ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಪತ್ರಕರ್ತೆಯರನ್ನು ಒಂದೆಡೆ ತಂದು ಅವರಲ್ಲಿ ಲಿಂಗನ್ಯಾಯ, ಬರವಣಿಗೆಯಲ್ಲಿ ಲಿಂಗಸೂಕ್ಷ್ಮತೆ, ಮಹಿಳಾ ಸಂಬಂಧಿ ವಿಷಯಗಳ ಸೂಕ್ತ ವರದಿಗಾರಿಕೆ, ಔದ್ಯೋಗಿಕ ವಲಯದಲ್ಲಿ ಲಿಂಗ ತಾರತಮ್ಯಗಳ ಬಗೆಗೆ ಜಾಗೃತಿ ಮೂಡಿಸುವುದು `..ಕಮಿಟಿ’ಯ ಗುರಿಯಾಗಿದೆ. ಅವರು `ಜರ್ನಲಿಸ್ಟ್ಸ್ ಅಗೇನ್ಸ್ಟ್ ಕಮ್ಯುನಾಲಿಸಂ’ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. `ಪೀಪಲ್ಸ್ ಯೂನಿಯನ್ ಫಾರ್ ಹ್ಯೂಮನ್ ರೈಟ್ಸ್’ನ ಜನರಲ್ ಸೆಕ್ರೆಟರಿ.

ಸಾಂಸ್ಥಿಕ ವ್ಯವಸ್ಥೆ, ಆಡಳಿತದಿಂದ ಅವರ ಹೋರಾಟದ ಬದುಕಿಗೆ ವಿರೋಧ, ಅಡೆತಡೆ ಎದುರಾದ ಹಾಗೆಯೇ ಅವರ ದಿಟ್ಟ ನಡೆಯನ್ನು ಗುರುತಿಸಿ ಸಾಕಷ್ಟು ಮನ್ನಣೆಗಳೂ ಸಂದಿವೆ. ಅನೇಕ ಪ್ರತಿಷ್ಠಿತ ಪತ್ರಿಕೋದ್ಯಮ, ಮಾನವಹಕ್ಕು ಪ್ರಶಸ್ತಿಗಳು ಸಂದಿವೆ. 1993ರಲ್ಲಿ ಪಿಯುಸಿಎಲ್ ನೀಡುವ ಜರ್ನಲಿಸಂ ಹ್ಯೂಮನ್ ರೈಟ್ಸ್ ಅವಾರ್ಡ್ ದೊರೆತಿದೆ. ಹರ್ಷ್ ಮಂದೇರ್ ಜೊತೆಗೆ ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ (2002) ಪಡೆದಿದ್ದಾರೆ. 2003ರಲ್ಲಿ ನ್ಯೂರೆಂಬರ್ಗ್ ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಅವಾರ್ಡ್ ದೊರೆತಿದೆ. ಪಾರ್ಲಿಮೆಂಟೇರಿಯನ್ಸ್ ಫಾರ್ ಗ್ಲೋಬಲ್ ಆಕ್ಷನ್ ಅಂತಾರಾಷ್ಟ್ರೀಯ ಸಂಘಟನೆಯು ಹೆಲೆನ್ ಕ್ಲಾರ್ಕ್ ಅವರೊಡನೆ ಡಿಫೆಂಡರ್ ಆಫ್ ಡೆಮಾಕ್ರೆಸಿ ಪ್ರಶಸ್ತಿ (2004) ನೀಡಿದೆ. 2006ರಲ್ಲಿ ನಾನಿ ಪಾಲ್ಖೀವಾಲಾ ಪ್ರಶಸ್ತಿ, ಮಾತೋಶ್ರೀ ಭೀಮಾಬಾಯಿ ಅಂಬೇಡ್ಕರ್ ಪ್ರಶಸ್ತಿ, 2007ರಲ್ಲಿ ಪದ್ಮಶ್ರೀ, ಪಾಕ್ಸ್ ಕ್ರಿಸ್ಟಿ ಇಂಟರ್ ನ್ಯಾಷನಲ್ ಪೀಸ್ ಅವಾರ್ಡ್ಗಳು ಸಂದಿವೆ. 2020ರಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯವು ಗೌರವ ಡಾಕ್ಟೊರೇಟ್ ಪದವಿ ನೀಡಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ಹೋರಾಟಗಾರರು, ದಮನಿತರು, ಸಮಸಮಾಜ ಬಯಸುವ ಸಂಗಾತಿಗಳು ತೀಸ್ತಾರನ್ನು ನಮ್ಮ ಎದೆಯೊಳಗೆ, ಕಣ್ಣಗೊಂಬೆಯೊಳಗಿಟ್ಟುಕೊಂಡು ಬಾಳುತ್ತಿದ್ದೇವೆ.
ಏಕೆಂದರೆ ಎಂದೂ ಗೊಣಗದ, ಹೆದರದ, ಸುಸ್ತು ಸೋಲು ಎನ್ನದ, ಎಲ್ಲ ಭಾರವೂ ತನ್ನ ಹೆಗಲ ಮೇಲೇ ಇಟ್ಟುಕೊಂಡು ನಡೆಯುತ್ತಿರುವೆ ಎಂದು ಬೀಗದ, ನನ್ನಿಂದಲೇ ಬೆಳಗಾಯಿತು ಎಂದು ಉಬ್ಬದ, `ನಾನು’ ಹೋಗಿ `ನಾವು’ ಆದ ಮಹಿಳಾ ಶಕ್ತಿಗೆ ತೀಸ್ತಾ ಒಂದು ಮಾದರಿಯಾಗಿದ್ದಾರೆ. ಒಬ್ಬ ಮಗ ಮತ್ತು ಮಗಳು ಇರುವ ಕೌಟುಂಬಿಕ ಮಹಿಳೆ ತೀಸ್ತಾ ಮನೆಯ ಜವಾಬ್ದಾರಿಗಳ ಜೊತೆಜೊತೆಗೇ ಭಾರತದ ಪ್ರತಿ ಪ್ರಜೆಯೂ ಸುರಕ್ಷಿತವಾಗಿ, ನೆಮ್ಮದಿಯಿಂದ ಬದುಕಬೇಕೆಂಬ ತಾಯ್ತನದ ಹೋರಾಟ ನಡೆಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ.
***
ಗುಜರಾತ್ ಯಾತಕ್ಕೆ ಪ್ರಖ್ಯಾತ? ನೀವು ಊಹಿಸಿದ್ದು ಸರಿ. ನಮ್ಮಯ ಗಾಂಧಿಯನ್ನು ರೂಪಿಸಿದ ನಾಡು ಗುಜರಾತ್. ನರ್ಮದಾ ಬಚಾವ್ ಆಂದೋಲನದ ಮೇಧಾ ಪಾಟ್ಕರ್ ಮೂಲ ಗುಜರಾತ್. ಜಿಗ್ನೇಶ್ ಮೇವಾನಿಯ ಕರ್ಮಭೂಮಿ ಗುಜರಾತ್. ಪೊಲೀಸ್ ಅಧಿಕಾರಿ ಸಂಜೀವ ಭಟ್ ಅವರ ಸತ್ಯದ ಹೆಜ್ಜೆಗುರುತು ಗುಜರಾತ್. `ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ದ ಝಕಿಯಾ ಸೋಮನ್ರ ನೆಲ ಗುಜರಾತ್. ನ್ಯಾಯಕ್ಕಾಗಿ ಹೋರಾಡುವ ತೀಸ್ತಾ ಸೆಟಲ್ವಾಡರ ನೆಲೆ ಗುಜರಾತ್.
ಹೌದು. ಯಾವುದೇ ನಾಡನ್ನು ಹೇಗೆ ಗುರುತಿಸಬೇಕೋ ಹಾಗೆಯೇ ಗುರುತಿಸಬೇಕು. ವಸಾಹತುಶಾಹಿಗಳಿಂದ, ಅಸ್ಪೃಶ್ಯತೆಯಿಂದ, ಭ್ರಷ್ಟ ಆಳ್ವಿಕರ ಕಪಿಮುಷ್ಟಿಯಿಂದ ಈ ನೆಲವನ್ನು ಬಿಡಿಸಿ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ದೇಶವಾದ ಭಾರತವನ್ನು ಕಟ್ಟಲು ದುಡಿದವರಲ್ಲಿ ಗುಜರಾತಿನವರಿದ್ದಾರೆ. ಸಂವಿಧಾನವನ್ನು ಕಾಯುವವರು ಗುಜರಾತಿನಲ್ಲಿದ್ದಾರೆ. ಏನು ಬೇಕಾದರೂ ಜಯಿಸಬಹುದೆಂದು ದುಷ್ಟರು ಅಬ್ಬರಿಸದಂತೆ ಸಂವಿಧಾನವನ್ನು ಬದುಕುತ್ತ ನೆಲಯೋಧೆಯಂತೆ ಬೆಂಗಾವಲಾಗಿ ನಿಂತ ತೀಸ್ತಾ ಸೆಟಲ್ವಾಡ್ ಗುಜರಾತಿನವರಾಗಿದ್ದಾರೆ.
ನಮ್ಮ ತೀಸ್ತಾ. ನಮ್ಮ ಅಕ್ಕ, ನಮ್ಮ ಹೆಮ್ಮೆ. ಅವರು `ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ಹದಿನಾಲ್ಕನೆಯ ವರ್ಷದ `ಮಹಿಳಾ ಚೈತನ್ಯ ದಿನ’ದ ಕಾರ್ಯಕ್ರಮಗಳನ್ನು ಉದ್ಘಾಟಿಸಲು, ಹಕ್ಕೊತ್ತಾಯ ಜಾಥಾ ಮೆರವಣಿಗೆಯಲ್ಲಿ ನಮ್ಮೊಂದಿಗೆ ಕೈಕೈ ಹಿಡಿದು ಹೆಜ್ಜೆ ಹಾಕಲು ಇದೇ ಮಾರ್ಚ್ 7, 8ರಂದು ಹಾಸನಕ್ಕೆ ಬರುತ್ತಿದ್ದಾರೆ.
ನೀವೂ ಬರುವಿರಿ ಅಲ್ಲವೇ?
ಡಾ. ಎಚ್. ಎಸ್. ಅನುಪಮಾ
ವೈದ್ಯೆ, ಸಾಹಿತಿ, ಹೋರಾಟಗಾರ್ತಿ.
ಇದನ್ನೂ ಓದಿ- ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ


